ಕಥೆ –  ಶುಭಾ ಶ್ರೀನಾಥ್

ತಮ್ಮ ವಯೋಸಹಜ ಬದಲಾವಣೆಗಳಿಂದ ಗಾಬರಿಗೊಂಡಿದ್ದ ಪ್ರಭಾ, ಏನೇನೋ ಚಿಂತೆಗಳಿಗೆ ಒಳಗಾಗಿ ಬಸವಳಿದರು. ಅವರಿಗೆ ಸಮಾಧಾನ ಮಾಡಿದ ಪತಿ, ವೈದ್ಯರ ಬಳಿ ಕರೆದುಕೊಂಡು ಹೋದಾಗ, ಆಮೇಲೆ ನಡೆದದ್ದು ಏನು……?

ತಿಂಡಿ, ಅಡುಗೆ ಮುಗಿಸಿ ಯಜಮಾನರಿಗೆ ಮತ್ತು ಅಳಿಯಂದಿರಿಗೆ ಡಬ್ಬಿ ತುಂಬಿಸಿ ಕೊಟ್ಟು ಇಬ್ಬರನ್ನೂ ಎಂಟು ಗಂಟೆಯ ಹೊತ್ತಿಗೆ ಕಳುಹಿಸುವಷ್ಟರಲ್ಲಿ ಪ್ರಭಾರಿಗೆ ಸಾಕಾಗಿ ಹೋಯಿತು. ಏನೋ ಸುಸ್ತು, ತಲೆಸುತ್ತು, ನಿತ್ರಾಣ ಕೆಲಸ ಮಾಡಲು ಆಸಕ್ತಿಯಿಲ್ಲ, ಊಟ ತಿಂಡಿ ಸೇರುತ್ತಿಲ್ಲ. ಆದರೆ ಸುಸ್ತು ಅಂತ ಕುಳಿತುಕೊಳ್ಳುವ ಹಾಗಿಲ್ಲ. ಮೊನ್ನೆ ಹೋದ ವಾರ ಮಗಳು ಹೆರಿಗೆಗೆಂದು ಬಂದಿದ್ದಾಳೆ. ಅವಳಿಗೆ ಗರ್ಭಕೋಶದಲ್ಲಿ ತೊಂದರೆಯಂತೆ, ಹಾಗಾಗಿ ವೈದ್ಯರು ಪೂರ್ತಿ ಬೆಡ್‌ ರೆಸ್ಟ್ ಹೇಳಿದ್ದಾರೆ. ಅವಳು ಕುಳಿತಿರುವ ಜಾಗಕ್ಕೆ ಊಟ, ತಿಂಡಿ ಎಲ್ಲಾ ತೆಗೆದುಕೊಂಡು ಹೋಗಿ ಕೊಡಬೇಕು. ಪ್ರಭಾರಿಗೆ ಕೂಡ ಮಗಳು ಮದುವೆಯಾದ ಒಂದೂವರೆ ವರ್ಷದಲ್ಲಿಯೇ ಹೆರಿಗೆಗೆಂದು ಬಂದಿರುವುದು ಖುಷಿಯ ವಿಚಾರವೇ, ಅಜ್ಜಿ ಆಗುವ ಸಂಭ್ರಮ ಇದೆ. ಅದರಲ್ಲೂ ಒಬ್ಬಳೇ ಮಗಳು ಅಂದರೆ ಕೇಳಬೇಕೇ? ಬಿ.ಇ. ಮುಗಿದ ತಕ್ಷಣ ಒಳ್ಳೆಯ ವರ ಸಿಕ್ಕಿದ್ದರಿಂದ ಚೆನ್ನಾಗಿ ಮದುವೆ ಮಾಡಿ ಕೊಡಲಾಯಿತು. ಮಗಳು ಅಳಿಯ ಚೆನ್ನಾಗಿ ಅನ್ಯೋನ್ಯವಾಗಿದ್ದರು.

ಬಹಳ ಬೇಗ ಮಗಳು ಶುಭ ಸುದ್ದಿಯನ್ನು ಕೊಟ್ಟಾಗ ಪ್ರಭಾರಿಗೆ ಮತ್ತು ಯಜಮಾನರಿಗೆ ಸಂತೋಷವಾಯಿತು. ಮಗಳು ಮತ್ತು ಅಳಿಯ ಇಬ್ಬರೇ ಇದ್ದಿದ್ದು, ಹಾಗಾಗಿ ಈಗ ಬೆಡ್‌ ರೆಸ್ಟ್ ಹೇಳಿದ್ದರು. “ನಾನು ಅಲ್ಲಿಗೆ ಬಂದರೆ ನಿಮ್ಮಪ್ಪನಿಗೆ ಊಟ, ತಿಂಡಿಗೆ ಕಷ್ಟವಾಗುತ್ತದೆ, ನೀನೇ ಇಲ್ಲಿಗೆ ಬಾ,” ಎಂದು ಕರೆದರು.

“ಅಮ್ಮಾ, ನಾನು ಅಲ್ಲಿಗೆ ಬಂದರೆ, ಇವರಿಗೂ ಊಟ, ತಿಂಡಿಗೆ ಕಷ್ಟವಾಗುತ್ತದೆ,” ಮಗಳು ಕೊರಳು ಕೊಂಕಿಸಿ ಹೇಳಿದಳು. ಇದು ಒಬ್ಬರನ್ನೊಬ್ಬರು ಬಿಟ್ಟಿರಲು ಆಗದೇ ಇರುವುದಕ್ಕೆ ಹೇಳುತ್ತಿರುವುದು ಅಂತ ಪ್ರಭಾರಿಗೆ ಗೊತ್ತಿಲ್ಲವೇ? ಅವರೂ ಈ ವಯಸ್ಸು ದಾಟಿ ಬಂದಿದ್ದಾರೆ ಅಲ್ವಾ…..? ಅದರಿಂದ, “ಇಬ್ಬರೂ ಬನ್ನಿ, ಇಲ್ಲಿಯೇ ಇರಿ. ನಿಮ್ಮ ಯಜಮಾನರಿಗೆ ನಮ್ಮ ಮನೆಯಿಂದ ಆಫೀಸ್‌ಹತ್ತಿರ ಅಲ್ಲವೇನೆ….?” ಎಂದರು.

“ಆದರೂ ಅಮ್ಮಾ ಬೇಡ, ಇವರಿಗೆ ಸಂಕೋಚವಾಗುತ್ತದೆ. ಹೋಟೆಲ್ ನಲ್ಲೇ ಊಟ ತಿಂಡಿ, ಮಾಡುತ್ತಾರೆ ಬಿಡು.”

“ಆದರೂ ಇಲ್ಲ, ಏನೂ ಇಲ್ಲ. ಇಬ್ಬರೂ ಇಲ್ಲಿಗೇ ಬನ್ನಿ. ನಮ್ಮ ಮನೆ ಇರುವಾಗ ಅಳಿಯಂದಿರು ಹೋಟೆಲ್ ‌ನಲ್ಲಿ ಏಕೆ ಊಟ ತಿಂಡಿ ತಿನ್ನಬೇಕು?” ಯಜಮಾನರು ಉಪಚಾರ ಮಾಡಿ ಇಬ್ಬರನ್ನೂ ಕರೆದರು.

ಮಾವ, ಅಳಿಯ ಇಬ್ಬರೂ ಫ್ರೆಂಡ್ಸ್ ತರ ರಜಾ ದಿನಗಳಲ್ಲಿ ಹರಟೆ ಹೊಡೆಯುತ್ತಾ, ಕೇರಂ, ಚೆಸ್‌, ಕಾರ್ಡ್ಸ್ ಆಡುತ್ತಾ, ಟಿವಿ ನೋಡುತ್ತಾ ಇರುತ್ತಾರೆ. ಇವರಿಗೂ ಅಳಿಯಂದಿರು ಬಂದಿರುವುದು ಸಂಭ್ರಮವೇ ಸರಿ. ಹೀಗೆ ಎಲ್ಲವೂ ಸಂತೋಷದಿಂದ ನಡೆಯುತ್ತಿತ್ತು.

ಕೆಲವು ದಿನಗಳಿಂದ ಪ್ರಭಾರಿಗೆ ಏಕೋ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿದೆ. ಕಾರಣ ಏನು? ಯೋಚನೆ ಮಾಡತೊಡಗಿದರು. ಹೌದು ನಾನು ಮುಟ್ಟಾಗಿ ಎರಡು ತಿಂಗಳಾಯಿತು. ಅಯ್ಯೋ ರಾಮ, ನಾನು ಮುಟ್ಟಾಗಿಲ್ಲ ಎನ್ನುವುದು ಮರೆತೇ ಹೋಗಿದ್ದೀನಿ. ಅದಕ್ಕೆ ಈ ಸುಸ್ತು, ತಲೆಸುತ್ತು ಎಲ್ಲವೂ ಬರುತ್ತಾ ಇದೆಯೇ? ನನ್ನ ವಯಸ್ಸು 45, ಮಗಳು ಹುಟ್ಟಿದ ಮೇಲೆ ಫ್ಯಾಮಿಲಿ ಪ್ಲಾನಿಂಗ್ ಅಂತ ಏನು ಮಾಡಿಕೊಳ್ಳಲಿಲ್ಲ. ಇನ್ನೊಂದು ಗಂಡು ಮಗು ಬೇಕೆನ್ನುವ ಆಸೆ ಮನೆಯಲ್ಲಿ ಎಲ್ಲರಿಗೂ ಇತ್ತು, ಆದರೆ ಏಕೋ ಮತ್ತೆ ಮಕ್ಕಳಾಗಿರಲಿಲ್ಲ. ಇಷ್ಟು ವರ್ಷಗಳಲ್ಲಿ ಒಂದು ಬಾರಿಯೂ ಹೀಗೆ ಮುಟ್ಟು ತಪ್ಪಿದ್ದಿಲ್ಲ. ಪ್ರತಿ ಬಾರಿಯೂ ಇನ್ನೂ  ಒಂದು ವಾರ ಮೊದಲೇ ಹೊರಗಡೆ ಕುಳಿತುಬಿಡುತ್ತಿದ್ದರು. ಆದರೆ ಈಗ ಏಕೆ ಹೀಗಾಯಿತು ಅನಿಸಿತು. ಏನಾದರೂ ಅಯ್ಯೋ ಮಗಳು ಬಾಣಂತನಕ್ಕೆ ಬಂದಾಗ ನನಗೆ ಹೀಗೆ ಆದರೆ ಎಷ್ಟು ಅವಮರ್ಯಾದೆ, ನಾಚಿಕೆ ಅನಿಸಿತು.

ಸಾಯಂಕಾಲ ಯಜಮಾನರು ಆಫೀಸಿನಿಂದ ಬಂದಾಗ, ಮಗಳು ಅಳಿಯ ರೂಮಿನಲ್ಲಿ ಇರುವುದನ್ನು ನೋಡಿಕೊಂಡು ಕಾಫಿ, ತಿಂಡಿ ಕೊಡುತ್ತಾ ವಿಷಯವನ್ನು ಗುಟ್ಟಾಗಿ ಹೇಳಿದರು.

“ಹೌದೇನೇ…? ಇಷ್ಟು ಖುಷಿಯಾದ ವಿಚಾರವನ್ನು ಹೀಗೆ ಹೇಳುವುದೇ? ನಮ್ಮಮ್ಮ, ಅಪ್ಪ ಎಲ್ಲರೂ ವಂಶೋದ್ಧಾರಕ ಬೇಕು ಅನ್ನುತ್ತಿದ್ದರು. ಈಗ ಅದಕ್ಕೆ ಸಮಯ ಬಂದಿದೆ ನೋಡು,” ಕೆನ್ನೆ ಹಿಂಡಿ ಯಜಮಾನರು ಕೇಳಿದರು.

“ನಿಮಗೆ ಎಲ್ಲ ಹಾಸ್ಯ, ಹ್ಞೂಂ, ಇಪ್ಪತ್ತು ವರ್ಷದ ಹಿಂದೆ ಆಗಿದ್ದರೆ ಇದಕ್ಕೆ ಬೆಲೆ ಇರುತ್ತಿತ್ತು. ಈಗ ಈ ವಯಸ್ಸಿನಲ್ಲಿ ಎಂತಹುದು,” ತಲೆ ತಗ್ಗಿಸಿ ನಾಚಿಕೆಯಿಂದ ಹೇಳಿದರು.

ಚಕ್ಕುಲಿ ತಿಂದು ಮುಗಿಸಿದ್ದ ಪ್ಲೇಟ್‌ ಮೇಲೆ ತಾಳ ಹಾಕುತ್ತಾ, “ವಯಸ್ಸಾದರೇನಾಯ್ತಮ್ಮ…. ಮನಸಾರೆ ಪ್ರೀತಿಸಮ್ಮ…. ಹುಡುಗನಿಗೆ ನಾ ಅಪ್ಪ…. ಹುಡುಗನಿಗೆ ನೀ ಅಮ್ಮ….. ಇಂಥ ಚಾನ್ಸ್ ಯಾರಿಗೂ ಸಿಕ್ಕದು,” ಎಂದು ರಾಗವಾಗಿ ಯಜಮಾನರು ಹಾಡಿದರು.

“ಸುಮ್ಮನಿರ್ರಿ….. ಒಳಗೆ ರೂಮಿನಲ್ಲಿ ಅಳಿಯಂದಿರು ಇದ್ದಾರೆ. ಏನೆಂದುಕೊಳ್ಳುತ್ತಾರೆ.”

“ಏನೆಂದುಕೊಳ್ತಾರೆ…..? ನಮ್ಮ ಮಾವ ಎಷ್ಟು ರಸಿಕರು, ಅತ್ತೆಯ ಮೇಲೆ ಈಗಲೂ ಎಷ್ಟೊಂದು ಪ್ರೀತಿ ಇದೆ ಅಂದುಕೊಳ್ಳುತ್ತಾರೆ.”

`ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವ ಹಾಗೆ ಇವರಿಗೆ ಎಲ್ಲವೂ ಹಾಸ್ಯ, ನನಗೆ ತಾನೇ ಕಷ್ಟ ಈ ವಯಸ್ಸಿನಲ್ಲಿ ಮಗಳ ಜೊತೆ ಬಾಣಂತ ಮಾಡಿಕೊಳ್ಳುವುದು ಎಷ್ಟೊಂದು ಅವಮಾನ ಎನಿಸಿತು. ಹಾಗೇನಾದರೂ ಇದ್ದರೆ ಏನು ಮಾಡುದು? ದೇವರೇ ಬೇಡಪ್ಪಾ,’ ಅಂತ ದೇವರ ದೀಪ ಹಚ್ಚಿ ಬೇಡಿಕೊಂಡರು.

apnaapna-najaria-story1

`ಇಪ್ಪತ್ತು ವರ್ಷದ ಹಿಂದೆ ಬೇಕು ಅಂತ ಕೇಳುತ್ತಿದ್ದುದು ಈಗ ಬೇಡ ಅನ್ನುವಂತೆ ಆಗಿದೆ. ದೇವರು ಏಕೆ ಹೀಗೆ ಪರೀಕ್ಷೆ ಮಾಡುತ್ತಾನೆ? ಎಲ್ಲಾ ಕಷ್ಟ ಹೆಣ್ಣುಮಕ್ಕಳಿಗೆ! ಹೊರುವುದು, ಹೆರುವುದು ಈ ವಯಸ್ಸಿನಲ್ಲಿ ಸಾಧ್ಯವೇ? ಅಷ್ಟು ಶಕ್ತಿಯಿದೆಯೇ? ನಾನು ಬಯಕೆ ಅಂತ ಮಲಗಿದರೆ ಮಗಳನ್ನು ನೋಡಿಕೊಳ್ಳುವವರು ಯಾರು? ಬೀಗರು ಏನೆಂದುಕೊಳ್ಳುತ್ತಾರೆ? ಮುಖ್ಯವಾಗಿ ಅಳಿಯಂದಿರ ಎದಿರು ಹೋಗುವುದಕ್ಕೆ ಎಷ್ಟು ನಾಚಿಕೆಯಾಗುತ್ತದೆ,’ ಎನ್ನುತ್ತಾ ತಲೆ ಮೇಲೆ ಕೈ ಹೊತ್ತು ಕುಳಿತರು.

“ಯೋಚನೆ ಮಾಡಬೇಡ ಡಿಯರ್‌, ನಾಳೆ ಆಸ್ಪತ್ರೆಗೆ ಹೋಗೋಣ ರೆಡಿಯಾಗಿರು. ಏನಾಗಿದೆ ಅಂತ ತಿಳಿಯುತ್ತದೆ,” ಎಂದರು.

ಮಾರನೇ ದಿನ ಯಾಂತ್ರಿಕವಾಗಿ ಆತಂಕದಲ್ಲಿಯೇ ಬೆಳಗ್ಗೆ ಬೇಗನೆ ತಿಂಡಿ, ಅಡುಗೆ ಎಲ್ಲಾ ಕೆಲಸ ಮುಗಿಸಿದರು. ಅಳಿಯಂದಿರು ತಿಂಡಿ ತಿಂದು, ಲಂಚ್‌ ಬಾಕ್ಸ್ ತೆಗೆದುಕೊಂಡು ಆಫೀಸಿಗೆ ಹೋದರು.

“ನಾನು, ನಿಮ್ಮಪ್ಪ ಹೊರಗೆ ಹೋಗಿ ಬರ್ತೀವಿ, ಸ್ವಲ್ಪ ಕೆಲಸವಿದೆ. ಅಡುಗೆ ಮಾಡಿದ್ದೇನೆ, ಊಟ ಮಾಡು,” ಎಂದು ಹೇಳಿ ಇಬ್ಬರೂ ಹೊರಟರು.

“ಆಯ್ತಮ್ಮಾ….. ನಾನಿಲ್ಲೇ ಇರ್ತೀನಿ. ನೀನೇನು ಯೋಚನೆ ಮಾಡಬೇಡ. ಆರಾಮವಾಗಿ ಹೋದ ಕೆಲಸ ಮುಗಿಸಿಕೊಂಡು ನಿಧಾನವಾಗಿ ಬನ್ನಿ ಪರವಾಗಿಲ್ಲ,” ಎಂದಳು ಮಗಳು.

ದಾರಿಯಲ್ಲಿ ಯಜಮಾನರು ಕಾರು ನಿಲ್ಲಿಸಿ ಮಲ್ಲಿಗೆ ಹೂ ಕೊಡಿಸಿದರು. ಯಾವಾಗಲೂ ಎಲ್ಲಿಗಾದರೂ ಹೋಗುವಾಗ, `ರೀ, ಹೂ ತೆಗೆದುಕೊಳ್ಳಬೇಕು,’ ಎಂದರೆ ಇಲ್ಲಿ ಟ್ರಾಫಿಕ್‌ ಕಾರು ನಿಲ್ಲಿಸಲು ಆಗುವುದಿಲ್ಲ ಅನ್ನುತ್ತಿದ್ದರು. ಇಂದು ತಾವಾಗಿಯೇ ಕಾರು ನಿಲ್ಲಿಸಿ ಹೂ ಕೊಡಿಸಿದರು. ಹಾಗೆಯೇ ಹಣ್ಣು, ಸ್ವೀಟ್‌ ಎಲ್ಲಾ ಕೊಡಿಸಿದರು. ಈಗೇಕೆ ಸ್ವೀಟ್ಸ್ ಅಂದಾಗ, “ಮತ್ತೆ ಸ್ವೀಟ್ಸ್ ಬೇಡವೇ?” ಎಂದು ಮರುಪ್ರಶ್ನಿಸಿ ಬಾಯಿ ಮುಚ್ಚಿಸಿದರು.

ಅಂತೂ ಇಬ್ಬರೂ ವೈದ್ಯರ ಬಳಿ ಹೋಗಿ ಸಮಸ್ಯೆ ತಿಳಿಸಿ ಮೂತ್ರ ಪರೀಕ್ಷೆ ಮಾಡಿಸಿದಾಗ, ಪ್ರಭಾರ ಅನುಮಾನಕ್ಕೆ ಹುರುಳಿಲ್ಲ ಅಂತ ತಿಳಿಯಿತು.

“ಎಷ್ಟು ವರ್ಷ ನಿಮಗೆ?”

“ಮೇಡಂ ನಲವತ್ತೈದು?”

“ಎಷ್ಟು ಜನ ಮಕ್ಕಳು?” ಡಾಕ್ಟರ್‌ ಕೇಳಿದರು.

“ಒಬ್ಬಳೇ ಮಗಳು ಮೇಡಂ.”

“ಮಗಳಿಗೆ ಎಷ್ಟು ವರ್ಷ?”

“ಇಪ್ಪತ್ತು ಮೂರು ವರ್ಷ, ಆಗಲೇ ಮದುವೆಯಾಗಿದೆ ಮೇಡಂ.”

“ಮತ್ತೆ ಫ್ಯಾಮಿಲಿ ಪ್ಲಾನಿಂಗ್‌ ಮಾಡಿಸಿಕೊಂಡಿರಲಿಲ್ಲವೇ?”

“ಮೇಡಂ ಒಬ್ಬಳೇ ಮಗಳು. ಹಾಗಾಗಿ ಇನ್ನೊಂದು ಆಗಲಿ ಅಂತ ಫ್ಯಾಮಿಲಿ ಪ್ಲಾನಿಂಗ್‌ ಮಾಡಿಸಿಕೊಂಡಿರಲಿಲ್ಲ,” ಅಳುಕುತ್ತಾ ಹೇಳಿದರು.

“ನೋಡಿ ಬಹುಶಃ ನಿಮ್ಮ ವಯಸ್ಸು 45 ಆಗಿರುವುದರಿಂದ ಇದು ಮೆನೋಪಾಸ್‌ ಇರಬಹುದು. ಅದಕ್ಕೆ ಎರಡು ತಿಂಗಳಿಂದ ಮುಟ್ಟಾಗಿಲ್ಲ. ಇನ್ನು ಮುಂದೆ ಹೀಗೆಯೇ 2-3 ತಿಂಗಳಿಗೆ ಆಗಬಹುದು. ಇಲ್ಲದಿದ್ದರೆ ನಿಂತು ಹೋಗಿ ಬಿಡಬಹುದು, ಗಾಬರಿ ಪಡುವ ಪ್ರಮೇಯ ಏನೂ ಇಲ್ಲ,” ಎಂದರು.

“ಆದರೆ ಮೇಡಂ, ನನಗೆ ಯಾಕೆ ತಲೆಸುತ್ತು, ಊಟ ಸೇರುವುದಿಲ್ಲ, ನಿಶ್ಶಕ್ತಿ ಆಗುತ್ತಿದೆ…..”

“ನೀವು ತುಂಬಾ ಅನೀಮಿಕ್‌ ಇದೀರಿ. ಈ ವಯಸ್ಸಿನಲ್ಲಿ ಹಾಗೆಯೇ ಆಗುತ್ತದೆ. ನೀವು ಎಷ್ಟನೇ ವಯಸ್ಸಿನಲ್ಲಿ ಪುಷ್ಪವತಿ ಆಗಿದ್ದು….?”

“ಮೇಡಂ, ನಾನು 14ನೇ ವಯಸ್ಸಿಗೆ ಪುಷ್ಪವತಿ ಆಗಿದ್ದೆ. ಆಗಿನಿಂದ ಈಗಿನವರೆಗೂ ತಪ್ಪದೇ ಮುಟ್ಟಾಗುತ್ತಿದ್ದೇನೆ.”

“ಮತ್ತೆ ಆಗಿನಿಂದ ಈಗಿನವರೆಗೆ ನಿಮ್ಮ ಅಂಡಾಶಯ ಪ್ರತಿ ತಿಂಗಳು ಕಾರ್ಯ ನಿರ್ವಹಿಸುತ್ತಾ ಇದೆ. ಅದಕ್ಕೂ ಈಗ ರೆಸ್ಟ್ ಬೇಕು ಅಲ್ಲವೇ? ಹಾಗಾಗಿ ಮುಟ್ಟು ನಿಲ್ಲುತ್ತಿದೆ. ಹಣ್ಣು ಹಾಲು ಚೆನ್ನಾಗಿ ತೆಗೆದುಕೊಳ್ಳಿ. ಅನಾವಶ್ಯಕವಾಗಿ ಬೇಡದ ಯೋಚನೆ ತಾಪತ್ರಯಗಳು ಬೇಡ, ವಾಕಿಂಗ್‌ ಮಾಡಿ, ಸಂಗೀತ ಕೇಳಿ, ಪುಸ್ತಕ ಓದಿ ಹೀಗೆ ಏನೇ ಆದರೂ ಒಂದರ್ಧ ಗಂಟೆ ಮನಸ್ಸನ್ನು ಪ್ರಶಾಂತವಾಗಿ ಇಡಿ. ಎಲ್ಲವೂ ಸರಿ ಹೋಗುತ್ತದೆ,” ಎಂದು ಹೇಳಿ ವಿಟಮಿನ್‌ ಮಾತ್ರೆಗಳನ್ನು ಬರೆದು ಕೊಟ್ಟರು.

ಹೊರಗೆ ಬಂದಾಗ ಯಜಮಾನರು, “ಎಂತಹ ಚಾನ್ಸ್ ಮಿಸ್‌ ಆಯ್ತಲ್ಲಾ….?” ಎಂದು ಕಣ್ಣು ಹೊಡೆದರು.

“ಸುಮ್ಮನೆ ಇರ್ರಿ… ಸಧ್ಯ, ನನಗೆ ಎರಡು ದಿನಗಳಿಂದ ಟೆನ್ಶನ್‌ ಗೆ ಒಳಗೊಳಗೇ ಸಾಕಾಗಿ ಬಿಟ್ಟಿತ್ತು. ಈಗ ರಿಲೀಫ್‌ ಆಯಿತು.” “ನನಗೆ ಗೊತ್ತಿತ್ತು ಕಣೆ, ಹೀಗೆಯೇ ಇರಬೇಕು ಅಂತ. ಆದರೂ ನಿನ್ನನ್ನು ತಮಾಷೆ ಮಾಡೋಣ ಅಂತ. ಈಗ ನಿನ್ನನ್ನು ನಾನು ಚೆನ್ನಾಗಿ ನೋಡಿಕೊಳ್ಳಬೇಕು. ಮಗಳ ಬಾಣಂತನ ಮಾಡಬೇಕು, ಎಷ್ಟೊಂದು ಜವಾಬ್ದಾರಿ ಇದೆ. ನೀನು ಚೆನ್ನಾಗಿರಬೇಕು. ಇನ್ನು ಮೇಲೆ ಏನೇನೋ ಯೋಚನೆ ಮಾಡಬೇಡ. ಬಾ ಹೋಟೆಲ್ ‌ಗೆ ಹೋಗಿ ಮಸಾಲೆ ದೋಸೆ ತಿಂದು ಹೋಗೋಣ.” ಎಂದರು.

“ಅಯ್ಯೋ ಮನೆಯಲ್ಲಿ ಆಶಾ ಒಬ್ಬಳೇ ಇದ್ದಾಳೆ. ಬೇಗ ಹೋಗೋಣ ಕಣ್ರೀ….”

“ಅಳೆಲ್ಲಿ ಒಬ್ಬಳೇ ಇದ್ದಾಳೆ. ಅಳಿಯಂದಿರು ನಾವು ಈ ಕಡೆ ಬರುತ್ತಿದ್ದ ಹಾಗೆ, ಆಫೀಸಿಗೆ ರಜೆ ಹಾಕಿ ಆ ಕಡೆ ಮನೆಗೆ ಹೋದರು. ಅವರಿಗೂ ಸ್ವಲ್ಪ ಪ್ರೈವೆಸಿ ಇರಲಿ ಅಲ್ವಾ….?” ಎಂದು ಕಣ್ಣು ಹೊಡೆದು ನಕ್ಕರು.

ಪ್ರಭಾ ಕೂಡ ನಗುತ್ತಾ “ಓ… ಅದಕ್ಕೆ ಮಗಳು, ಅಮ್ಮಾ, ನೀವು ಆರಾಮವಾಗಿ ಬನ್ನಿ, ಟೆನ್ಶನ್‌ ಬೇಡ ಅಂತ ಹೇಳಿದ್ಲಾ… ಕಿಲಾಡಿ” ಎನ್ನುತ್ತಾ  ಹೋಟೆಲ್ ‌ಒಳಗೆ ನಡೆದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ