ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಣ್ಣುಮಕ್ಕಳು ಚದುರಂಗ ಆಟದಲ್ಲಿ ಉನ್ನತ ಸಾಧನೆ ಸಾಧಿಸುವುದು ಸಣ್ಣ ವಿಷಯವಲ್ಲ. ಅದರಲ್ಲಿ ನಮ್ಮ ಭಾರತದ ಹೆಮ್ಮೆಯ ಪುತ್ರಿ ಕೊನೆರು ಹಂಪಿ, ಎರಡನೇ ಬಾರಿಗೆ ವರ್ಲ್ಡ್ ರಾಪಿಡ್ ಚೆಸ್ ಚಾಂಪಿಯನ್ ಆಗಿರುವುದರ ಹಿನ್ನೆಲೆಯ ಬಗ್ಗೆ ವಿವರವಾಗಿ ತಿಳಿಯೋಣವೇ…….?
ವಿಶ್ವವನ್ನೇ ಗೆದ್ದ ಆಕೆಯ ಕಣ್ಣಿನಲ್ಲಿ ಸಾರ್ಥಕತೆ ಇತ್ತು. ಇಡೀ ಜಗತ್ತೇ ತನ್ನತ್ತ ತಿರುಗಿ ನೋಡಿ ಭೇಷ್ ಎಂದು ಬಹುಪರಾಕ್ ಹಾಕುತ್ತಿದ್ದಾಗ ಆಕೆಯ ಮನಸ್ಸಿನಲ್ಲಿ ಧನ್ಯತಾ ಮನೋಭಾವ ಮೂಡಿತ್ತು. ಬಾಲ್ಯದಿಂದಲೂ ಬೆಟ್ಟದಷ್ಟು ಕನಸು ಹೊತ್ತು ಸಾಧನೆಯ ಶಿಖರಕ್ಕೆ ತಂದು ನಿಲ್ಲಿಸಿದ ತನ್ನ ಹೆತ್ತವರಿಗೆ ಅಂತರಾಳದಲ್ಲೇ ಕೃತಜ್ಞತೆ ಸಲ್ಲಿಸುತ್ತಿದ್ದಳು.
ಚದುರಂಗದಾಟದಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಆಕೆ ಆ ಗೆಲುವನ್ನು ತನ್ನ ಕುಟುಂಬಕ್ಕೆ ಅರ್ಪಿಸುವಾಗ ಅಲ್ಲೇ ನೆರೆದಿದ್ದ ಅದೆಷ್ಟೋ ಮಂದಿಗೆ, ಟಿವಿ ಪರದೆ ಮೇಲೆ ನೋಡುತ್ತಿದ್ದ ಲಕ್ಷಾಂತರ ಜನರ ಮನ ಮಿಡಿದಿತ್ತು. ಅಂತಹ ಒಂದು ಅಮೃತಘಳಿಗೆಗೆ ಸಾಕ್ಷಿಯಾಗಿದ್ದು ಬೇರೆ ಯಾರೂ ಅಲ್ಲ, ನಮ್ಮ ಭಾರತದ ಹೆಮ್ಮೆಯ ಪುತ್ರಿ ಕೊನೆರು ಹಂಪಿ!
ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವ ರಾಪಿಡ್ ಚೆಸ್ ಚಾಂಪಿಯನ್ ಶಿಪ್ ನ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತದ ಗ್ರ್ಯಾಂಡ್ ಮಾಸ್ಟರ್ ಕೊನೆರು ಹಂಪಿ ತನ್ನ ಗೆಲುವನ್ನು ತನ್ನ ಕುಟುಂಬಕ್ಕೆ ಅರ್ಪಿಸುತ್ತಿದ್ದೇನೆ ಎಂದಾಗ ಆಕೆಗೆ ಕುಟುಂಬದ ಮೇಲೆ ಅದೆಷ್ಟು ಹೆಮ್ಮೆ ಇರಬೇಕು. ವಿಶ್ವ ಚಾಂಪಿಯನ್ ಆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಕೊನೆರು ಹಂಪಿ, “ಕುಟುಂಬದ ಬೆಂಬಲದಿಂದಾಗಿ ಇದು ಸಾಧ್ಯವಾಯಿತು ಎಂದು ಭಾವಿಸುತ್ತೇನೆ. ನನ್ನ ಪತಿ ಮತ್ತು ನನ್ನ ಪೋಷಕರು ನನಗೆ ಬಹಳ ಬೆಂಬಲ ನೀಡಿದ್ದಾರೆ. ನಾನು ಪ್ರಯಾಣಿಸುವಾಗ ನನ್ನ ಹೆತ್ತವರು ನನ್ನ ಮಗಳನ್ನು ನೋಡಿಕೊಳ್ಳುತ್ತಿದ್ದರು,” ಎಂದು ಹೇಳಿದ ಆ ಮಾತಿನಲ್ಲಿ 37 ವರ್ಷದ ಆಕೆಯ ಸಾಧನೆಯ ಹಿಂದಿನ ಶಕ್ತಿ ಎಂಥದ್ದು ಎಂಬುದನ್ನು ಸಾರಿ ಸಾರಿ ಹೇಳಿದಂತಿತ್ತು.

ತಂದೆಗೇ ಚೆಕ್ ಮೇಟ್ ಇಟ್ಟಿದ್ದ ಹಂಪಿ
ಆಂಧ್ರ ಪ್ರದೇಶದ ವಿಜಯವಾಡ ಮೂಲದ ಕೊನೆರು ಹಂಪಿ ದಿಢೀರ್ ಎಂದು ಚಾಂಪಿಯನ್ ಆಗಿದ್ದಲ್ಲ. ಅದಕ್ಕೆ ನೋಡಿ ದೊಡ್ಡವರು ಹೇಳುವಂತೆ `ಕೈ ಕೆಸರಾದರೆ ಬಾಯಿ ಮೊಸರು.’ ಅಂದರೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತೆ. ಇಲ್ಲಿ ಕೊನೆರು ಹಂಪಿಯ ಸಾಧನೆಯ ಹಿರಿಮೆ, ಗರಿಮೆ ಎಲ್ಲ ತಂದೆ ಅಶೋಕ್ ಕೊನೆರು ಅವರಿಗೇ ಸಲ್ಲಿಸಲೇಬೇಕು. ಮಗಳಿಗಾಗಿ ಇದ್ದ ಕೆಲಸವನ್ನೂ ಬಿಟ್ಟು ತನ್ನ ಇಡೀ ಜೀವನವನ್ನೇ ಮುಡುಪಾಗಿಟ್ಟ ತ್ಯಾಗಮಯಿಗೆ ಸೆಲ್ಯೂಟ್ ಹೊಡೆಯಲೇಬೇಕು.
ತಂದೆ ಕೊನೆರು ಅಶೋಕ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. ಬಿಡುವಿದ್ದಾಗ ಮನೆಯಲ್ಲಿ ಚೆಸ್ ಆಡುತ್ತಿದ್ದರು. ಸ್ಥಳೀಯ ಮಟ್ಟದಲ್ಲೇ ಹಲವು ಟೂರ್ನಮೆಂಟ್ ಗಳನ್ನು ಗೆದ್ದು ಚೆಸ್ ಪಂಟರ್ ಎನಿಸಿಕೊಂಡಿದ್ದರು. ಮನೆಯಲ್ಲೇ ಸ್ನೇಹಿತರ ಜೊತೆ ತಂದೆ ಚದುರಂಗದಾಟ ಆಡುತ್ತಿದ್ದಾಗ ತೊಡೆ ಮೇಲೆ ಕುಳಿತುಕೊಳ್ಳುತ್ತಿದ್ದ 34 ವರ್ಷದ ಮಗಳು ಕೊನೆರು ಹಂಪಿ, ಪಾನ್ ಗಳ ಮೂವ್ ಮೆಂಟ್ ನೋಡಿಕೊಳ್ಳುತ್ತಿದ್ದಳು. ಆ ವೇಳೆ ತನ್ನ ಮಗಳು ಕುತೂಹಲದಿಂದ ಕೇಳುತ್ತಿದ್ದ ಅದೆಷ್ಟೋ ಪ್ರಶ್ನೆಗಳಿಗೆ ಕೊನೆರು ಅಶೋಕ್ ಶಾಂತಚಿತ್ತದಿಂದಲೇ ಉತ್ತರ ಕೊಡುತ್ತಿದ್ದರು.
ಪ್ರಾಚೀನ ಕಾಲದ ನಿಜವಾದ ಯುದ್ಧಗಳಲ್ಲಿ ರಾಜ, ರಾಣಿ, ಸೈನಿಕರು, ಆನೆಗಳು, ಒಂಟೆಗಳು, ಕುದುರೆಗಳ ಪಾತ್ರ ಹೇಗಿರುತ್ತಿತ್ತು ಎಂಬುದನ್ನು ಮಗಳಿಗೆ ವಿವರಿಸುತ್ತಿದ್ದರು. ಮಗಳ ಆಸಕ್ತಿ, ಉತ್ಸಾಹ ಕಂಡು ಮತ್ತಷ್ಟು ಬೆರಗಾಗುತ್ತಿದ್ದ ಕೊನೆರು ಅಶೋಕ್, ಪುತ್ರಿಗೆ ಚದುರಂಗದಾಟದ ಪ್ರತಿ ಸ್ಟೆಪ್, ಚೆಕ್ ಮೇಟ್ ಗಳ ತಂತ್ರಗಳನ್ನು ಹೇಳಿ ಹುರಿದುಂಬಿಸುತ್ತಿದ್ದರು.
ಮಗಳಿಗೆ 5 ವರ್ಷ ಆಗುತ್ತಿದ್ದಂತೆ ಚೆಸ್ ಕುರಿತ ಅಸಾಧಾರಣ ಕೌಶಲ್ಯ ಉತ್ಸಾಹವನ್ನು ಗಮನಿಸಿದ ಕೊನೆರು ಅಶೋಕ್, ಪುತ್ರಿಯ ಜೊತೆಗೇ ಚೆಸ್ ಆಡಲು ಶುರು ಮಾಡಿದರು. ಕೆಲವೇ ದಿನಗಳಲ್ಲಿ ಮಗಳ ಕಲಿಕೆಯ ವೇಗ ನೋಡಿದ ಅಶೋಕ್ ರಿಗೆ ಅರೆಕ್ಷಣ ನಂಬಲಾಗಲೇ ಇಲ್ಲ. ನನ್ನ ಮಗಳು ಇಷ್ಟು ಚುರುಕಾಗಿ ಇದ್ದಾಳಾ ಎಂದು ಒಮ್ಮೆ ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದರು. ಆ ವೇಳೆ ಕೊನೆರು ಹಂಪಿಯ ಗುರಿ ತನ್ನ ಅಪ್ಪನಿಗೆ ಚೆಕ್ ಮೇಟ್ ಇಡೋದೊಂದೇ ಆಗಿತ್ತು. ಅದರಲ್ಲಿ ಆಕೆ ಹಲವು ಬಾರಿ ಸೆಕ್ಸಸ್ ಕೂಡ ಆಗಿದ್ದಳು!

ಮಗಳಿಗಾಗಿ ತ್ಯಾಗ ಮಾಡಿದ ತಂದೆ
ಹೀಗೆ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಗಳ ಅಗಾಧ ಪ್ರತಿಭೆಯನ್ನು ಗುರುತಿಸಿದ ಅಶೋಕ್, ತನ್ನ ಪ್ರೊಫೆಸರ್ ಹುದ್ದೆಗೆ ರಾಜೀನಾಮೆ ಕೊಟ್ಟು ಮಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ಟೊಂಕಕಟ್ಟಿ ನಿಂತರು. ಹಂಪಿಗಾಗಿ ಫುಲ್ ಟೈಂ ಚೆಸ್ ಟ್ರೇನರ್ ಹಾಗೂ ಮೆಂಟರ್ ಆದರು. ಮಗಳ ಆಸಕ್ತಿ ಮತ್ತು ತಂದೆಯ ಮಾರ್ಗದರ್ಶನದ ಫಲವಾಗಿ ಅದರ ಮುಂದಿನ ವರ್ಷವೇ ಅರ್ಥಾತ್ 6 ಮತ್ತು 7ನೇ ವಯಸ್ಸಿನಲ್ಲೇ ಕೊನೆರು ಹಂಪಿ, ಜಿಲ್ಲೆ ಮತ್ತು ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಗಳನ್ನು ಗೆದ್ದಳು. ಅದಾದ ಬಳಿಕ 1995ರಲ್ಲಿ 8 ವರ್ಷದೊಳಗಿನವರ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಗೆಲುವು ಸಾಧಿಸಿದಳು. ನಂತರ 12, 14 ಮತ್ತು 16 ವರ್ಷದೊಳಗಿನ ರಾಷ್ಟ್ರಮಟ್ಟದ ಚಾಂಪಿಯನ್ ಶಿಪ್ ಗಳು ಕೊನೆರು ಹಂಪಿಗೆ ಕೇಕ್ ಲಾಕ್ ಆದ.
12ನೇ ವಯಸ್ಸಿಗೆ ಇಂಟರ್ ನ್ಯಾಷನ್ ಮಾಸ್ಟರ್ ಟೈಟಲ್ ಗಿಟ್ಟಿಸಿಕೊಂಡರೆ, 2002ರಲ್ಲಿ 15ನೇ ವಯಸ್ಸಿಗೆ ಗ್ರಾಂಡ್ ಮಾಸ್ಟರ್ ಕಿರೀಟ ತೊಟ್ಟರು. ಆ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ಹಿರಿಮೆಗೆ ಪಾತ್ರರಾದರು. 2000 ಮತ್ತು 2002ರಲ್ಲಿ ಬ್ರಿಟಿಷ್ ಮಹಿಳಾ ಚಾಂಪಿಯನ್ ಶಿಪ್, 2003ರಲ್ಲಿ 10ನೇ ಏಷ್ಯನ್ ಮಹಿಳಾ ವೈಯಕ್ತಿಕ ಚಾಂಪಿಯನ್ ಶಿಪ್ ಮತ್ತು ಭಾರತೀಯ ಮಹಿಳಾ ಚಾಂಪಿಯನ್ ಶಿಪ್, 2005ರಲ್ಲಿ ನಾರ್ತ್ ಯುವರ್ಸ್ ಕಪ್ ನ್ನು ಗೆದ್ದರು. ಬಳಿಕ 2011ರ ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ರನ್ನರ್ ಅಪ್ ಆಗುವುದರೊಂದಿಗೆ ಮೊದಲ ಬಾರಿಗೆ ಪೋಡಿಯಂ ಏರಿದ ಕೊನೆರು ಹಂಪಿ, ಬಳಿಕ 2012ರಲ್ಲಿ ಮಾಸ್ಕೋದಲ್ಲಿ ನಡೆದ ರಾಪಿಡ್ ಚೆಸ್ ಟೂರ್ನಿಯಲ್ಲಿ ಕಂಚಿನ ಪದಕ ಪಡೆದು ತೃಪ್ತಿಪಟ್ಟುಕೊಂಡಿದ್ದರು.
ಮಗು ಜನಿಸಿದ ಬಳಿಕ ಚಾಂಪಿಯನ್
ಇದರ ಮಧ್ಯೆ 2014ರಲ್ಲಿ ದಾಸರಿ ಅನ್ವೇಶ್ ರನ್ನು ವಿವಾಹವಾದರು. ನಂತರ ಹಲವು ಟೂರ್ನಿಗಳನ್ನು ಗೆದ್ದು ಎರಡು ವರ್ಷ ಹೆರಿಗೆಗೋಸ್ಕರ ವಿರಾಮ ಕೊಟ್ಟು ವಾಪಸ್ಸಾದ ಕೊನೆರು ಹಂಪಿ, 2019ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದರು. 2022ರ ಆವೃತ್ತಿಯ ಬ್ಲಿಟ್ ವಿಭಾಗದ ಸ್ಪರ್ಧೆಯಲ್ಲಿ ಮತ್ತೆ ರನ್ನರ್ ಅಪ್ ಸ್ಥಾನಕ್ಕೆ ಸಮಾಧಾನ ಕಂಡುಕೊಂಡಿದ್ದರು. ಜೊತೆಗೆ 2020ರ ಒಲಿಂಪಿಯಾಡ್ ಗೆದ್ದ ಮಹಿಳಾ ತಂಡದ ಸದಸ್ಯೆಯೂ ಆಗಿದ್ದರು. ಇದೀಗ ಇಂಡೋನೇಷ್ಯಾದ ಐರಿನ್ ಸುಕಂದರ್ ಅವರನ್ನು ಮಣಿಸುವ ಮೂಲಕ ವಿಶ್ವ ರಾಪಿಡ್ ಚೆಸ್ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಈ ಮೊದಲು ಅವರು 2019ರಲ್ಲಿ ಜಾರ್ಜಿಯಾದಲ್ಲಿ ನಡೆದ ವಿಶ್ವ ರಾಪಿಡ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಈಗ ಎರಡು ಬಾರಿ ಪ್ರಶಸ್ತಿ ಗೆದ್ದ ಎರಡನೇ ಆಟಗಾರ್ತಿ ಎನ್ನುವ ಖ್ಯಾತಿಗೆ ಭಾಜನರಾಗಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಚೀನಾದ ಜು ಲೆನ್ ಜುನ್ ಬಳಿಕ ಎರಡನೇ ಆಟಗಾರ್ತಿ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ. ಸದಾ ಸ್ಛೂರ್ತಿಯ ಸೆಲೆಯಂತಿರುವ ತಂದೆ ಕೊನೆರು ಅಶೋಕ್, ತಾಯಿ ಕೊನೆರು ಲತಾ ಹಾಗೂ ಪತಿ ದಾಸರಿ ಅನ್ವೇಶ್ ಮತ್ತು ಅಹಾನಾಳ ಪ್ರೀತಿಯಿಂದ ಸಾಧನೆಯ ಶಿಖರವೇರಿರುವ ಕೊನೆರು ಹಂಪಿ ಸದ್ಯಕ್ಕೀಗ ಒಎನ್ ಜಿಸಿಯಲ್ಲಿ ಉದ್ಯೋಗದಲ್ಲಿದ್ದಾರೆ.
ಕೋಟ್ಯಂತರ ಜನರಿಗೆ ಸ್ಛೂರ್ತಿ : ಮೊದಲೇ ಇಡೀ ದೇಶೀ ಕೊನೆರು ಹಂಪಿ ಭಾರತದ ಹೆಮ್ಮೆಯ ಪುತ್ರಿ ಎಂದು ಕೊಂಡಾಡುತ್ತಿದೆ. ಸಾಮಾಜಿಕ ಜಾಲತಾಣ, ಅಂತರ್ಜಾಲ ಹಾಗೂ ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಕೊನೆರು ಹಂಪಿಯ ಸಾಧನೆಯದ್ದೇ ಮಾತಾಗಿದೆ. ಈ ಮಧ್ಯೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಕೊನೆರು ಹಂಪಿಯ ಗೆಲುವಿಗೆ ಶುಭ ಕೋರಿ ಕೊಂಡಾಡಿದ್ದಾರೆ.
“ಈ ಗೆಲುವು ಐತಿಹಾಸಿಕ! ಅವರ ಬದ್ಧತೆ, ಪ್ರತಿಭೆ ಕೋಟ್ಯಂತರ ಭಾರತೀಯರಿಗೆ ಮಾದರಿ, ಚೆಸ್ ನಲ್ಲಿ ಇದೀಗ ಭಾರತದ್ದೇ ವಿಶ್ವ ವಿಜಯ. ವಿಶ್ವ ಚಾಂಪಿಯನ್ ಗುಕೇಶ್ ನಮ್ಮಲ್ಲಿದ್ದಾರೆ. ಈಗ ರಾಪಿಡ್ ಇವೆಂಟ್ ನಲ್ಲಿ 2ನೇ ವಿಶ್ವ ಚಾಂಪಿಯನ್ ಶಿಪ್ ಗೆದ್ದಿದ್ದೇವೆ. ಭಾರತೀಯ ಚೆಸ್ ಪ್ರತಿಭೆಗಳಿಗೆ ಇದು ಪ್ರೇರಣೆಯಾಗಲಿದೆ!” ಎಂದು ನರೇಂದ್ರ ಮೋದಿ ಬಣ್ಣಿಸಿದ್ದಾರೆ.
37 ವರ್ಷದ ಕೊನೆರು ಹಂಪಿ ಬಾಲ್ಯದಿಂದಲೂ ಚೆಸ್ ಚಾಂಪಿಯನ್ ಆಗಿದ್ದಾರೆ. ಈವರೆಗೆ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ 750ಕ್ಕೂ ಹೆಚ್ಚು ಆಟಗಳನ್ನಾಡಿದ್ದಾರೆ. ಅವೆಲ್ಲದರಲ್ಲಿ ಗೆಲುವು ಸಾಧಿಸಿದ್ದೇ ಹೆಚ್ಚು. ಇದರ ಜೊತೆಗೆ ನೂರಾರು ಪ್ರಶಸ್ತಿಗಳು ಅರಸಿ ಬಂದಿವೆ. ಅವುಗಳಲ್ಲಿ 2003ರಲ್ಲಿ ಅರ್ಜುನ್ ಪ್ರಶಸ್ತಿ, 2007ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 2008ರಲ್ಲಿ ಸಿಕ್ಕ ರಾಜಲಕ್ಷ್ಮಿ ಪ್ರಶಸ್ತಿಗಳು ಪ್ರಮುಖವಾದವು.
ಎರಡನೇ ಬಾರಿಗೆ ವಿಶ್ವ ಚೆಸ್ ಚಾಂಪಿಯನ್ ಆಗಿರುವ ಭಾರತದ ನಂಬರ್ ಒನ್ ಚೆಸ್ ಗ್ರಾಂಡ್ ಮಾಸ್ಟರ್ ಕೊನೆರು ಹಂಪಿಯ ಯಶೋಗಾಥೆಗೆ ಅವರ ಕುಟುಂಬದ ಸಹಕಾರ, ಪ್ರೋತ್ಸಾಹ ಮತ್ತು ತಂದೆಯ ಸ್ಛೂರ್ತಿಯೇ ಕಾರಣ ಎಂದರೆ ಅತಿಶಯೋಕ್ತಿ ಅಲ್ಲ. ಅದೆಲ್ಲದರ ಜೊತೆಗೆ ಸಾಧಿಸಲೇಬೇಕು ಎಂಬ ಛಲ, ಗುರಿಯೂ ಇರಬೇಕು. ಅದೆಲ್ಲದರ ಫಲವಾಗಿ ಇಂದು ಕೊನೆರು ಹಂಪಿ ಭಾರತದ ಹೆಮ್ಮೆಯ ಪುತ್ರಿಯಾಗಿ ಹೊರಹೊಮ್ಮಿದ್ದಾರೆ.
– ಸುನೀತಾ ಬಿ.ಎಂ.
ಪ್ರಧಾನ ಮಂತ್ರಿಯ ಹಾರೈಕೆ
“ಈ ಗೆಲುವು ಐತಿಹಾಸಿಕ. ಅವರ ಬದ್ಧತೆ, ಪ್ರತಿಭೆ ಕೋಟ್ಯಂತರ ಭಾರತೀಯರಿಗೆ ಮಾದರಿ. ಚೆಸ್ ನಲ್ಲಿ ಇದು ಭಾರತೀಯರಿಗೆ ಮಾದರಿ, ಚೆಸ್ ನಲ್ಲಿ ಇದು ಭಾರತದ ಸಮಯ. ವಿಶ್ವ ಚಾಂಪಿಯನ್ ಶಿಪ್ ಗೆದ್ದಿದ್ದೇವೆ. ಭಾರತೀಯ ಚೆಸ್ ಪ್ರತಿಭೆಗಳಿಗೆ ಇದು ಪ್ರೇರಣೆಯಾಗಲಿದೆ.”
– ನರೇಂದ್ರ ಮೋದಿ





