ಪ್ರೀತಿ ಪ್ರೇಮದಲ್ಲಿ ಮುಳುಗಿದವರಿಗೆ ಕಣ್ಣು ಕಾಣೋಲ್ಲ ಎಂಬುದು ಸಹಜ, ಹಾಗೆಂದು ಈ ಆನ್ ಲೈನ್ ನಲ್ಲಿ ಲವ್ ಆದಾಗ ಮುಂದೆ ಮೋಸವಾಗದಂತೆ ಎಚ್ಚರಿಕೆ ಇರಲಿ….!
ಇಂದಿನ ಆಧುನಿಕ ಪ್ರಪಂಚ ನೋಡುತ್ತಿದ್ದರೆ ಎಲ್ಲೆಲ್ಲೂ ಪ್ರೀತಿ, ಪ್ರೇಮ, ಪ್ರಣಯಗಳು ತುಂಬಿ ಚೆಲ್ಲಾಡುತ್ತಿವೆ! ಅಂದಿನ ಕಾಲದ ರಾಧಾಕೃಷ್ಣರ ಪ್ರೇಮ, ರೋಮಿಯೊ ಜೂಲಿಯೆಟ್ ಲವ್, ಲೈಲಾ ಮಜ್ನುರ ಒಲವು…. ಇಂದಿಗೂ ಹಚ್ಚಹಸಿರು. ಈ ಘಟಾನುಘಟಿಗಳು ತಮ್ಮ ಪವಿತ್ರ ಪ್ರೇಮದಿಂದ ಆ ಕಾಲದಿಂದ ಈ ಕಾಲಕ್ಕೂ ಆದರ್ಶ ಪ್ರೇಮಿಗಳಾಗಿ ಉಳಿದಿದ್ದಾರೆ. ಪ್ರೀತಿ ಪ್ರೇಮದ ಶಬ್ದ ಕೇಳುತ್ತಲೇ ನಮ್ಮ ಮನಸ್ಸು ಗರಿಗೆದರಿ ಆಕಾಶದಲ್ಲಿ ಹಾರಾಡುತ್ತಾ, `ಹಾರಲೇ ನಾ… ಹಾಡಲೇ….’ ಎಂದು ಸಪ್ತ ಸಾಗರಗಳಾಚೆ ತೇಲಿ ಹೋಗುತ್ತದೆ. ಆದರೆ ಇಂದಿನ ಲೇಟೆಸ್ಟ್ ಆನ್ ಲವ್ ಇದೆಯಲ್ಲ…. ವ್ಯಕ್ತಿಯ ಮುಖಾಮುಖಿ ಪರಿಚಯ ಆಗದೆ, ಮಿಂಚಂಚೆ ಮೂಲಕ ಒಂದಿಷ್ಟು ಫೋಟೋ ದರ್ಶನಗಳು, ವಿಡಿಯೋ ಚಾಟ್ ಗಳ ಮೂಲಕ ಇಡೀ ಭೂಮಂಡಲದಲ್ಲಿ ಯಾರು ಯಾರನ್ನು ಬೇಕಾದರೂ ಅಂತರ್ಜಾಲ ಎಂಬ ಮಾಯಾ ಕನ್ನಡಿ ಮೂಲಕ ಸಂಪರ್ಕಿಸಿ, ಪ್ರೇಮಲೋಕದಲ್ಲಿ ಮಿಂದೇಳುತ್ತಾರೆ.
ದುರಂತವೆಂದರೆ ಈ ಮಾದರಿಯ ಆನ್ ಲೈನ್ ಲವ್ ಕೇವಲ ಮೋಸ, ವಂಚನೆ, ದ್ರೋಹ, ದ್ವೇಷ, ಬ್ಲ್ಯಾಕ್ ಮೇಲ್ ವರೆಗೂ ಹೋಗಿ ಎಷ್ಟೋ ಸಲ ಆತ್ಮಹತ್ಯೆಯಂಥ ದುರಂತಕ್ಕೆ ದಾರಿ ಆಗುತ್ತಿದೆ. ಇಷ್ಟೆಲ್ಲ ಆಗಿರುವುದು ಗೊತ್ತಿದ್ದರೂ ಇಂದಿನ ಯುವಜನತೆ ಈ ಆನ್ ಲೈನ್ ಲವ್ ಗೆ ಹಿಮಗಿರಿಯಷ್ಟು ಉನ್ನತ ಪ್ರಾಶಸ್ತ್ಯ ನೀಡುತ್ತಾರೆ. ಇಂದು ಈ ವರ್ಚಯೆಲ್ ಪ್ರೇಮ ಎಲ್ಲಾ ಗಡಿಗಳನ್ನೂ ದಾಟಿ ಹುಡುಗ ಹುಡುಗಿಯರನ್ನು ಎಲ್ಲಿಗೋ ಕೊಂಡೊಯ್ಯುತ್ತಿದೆ.
ಇಂದಿನ ಯುವಜನತೆ ಅಂತೂ ಸೋಶಿಯಲ್ ಪ್ಲಾಟ್ ಫಾರ್ಮ್ ನಿಂದ ದೂರ ಉಳಿದಿರುಲು ಸಾಧ್ಯವೇ ಇಲ್ಲ. ಇಂಥ ವೇದಿಕೆಯಿಂದಲೇ ಇಂದಿನ ಬಹುತೇಕ ಯುವಜನತೆ ಈ ಹುಚ್ಚುಖೋಡಿ ಆನ್ ಲೈನ್ ಲವ್ ಗೆ ಸಿಲುಕುತ್ತಿದ್ದಾರೆ.
`ಪ್ರೇಮಕ್ಕೆ ಕಣ್ಣಿಲ್ಲ’ ಎಂಬುದು ದುಶ್ಯಂತ ಶಕುಂತಲೆಯ ಕಾಲದಿಂದಲೂ ಕೇಳಿ ಬರುತ್ತಿರುವ ಮಾತು. ಅದು ನಿತ್ಯನೂತನವಾಗಿ ಇಂದಿನ ಇಂಟರ್ ನೆಟ್ ವರೆಗೂ ಹರಿದು ಬಂದಿದೆ. ಇಂದಿನ ಆಧುನಿಕ ಕಲಿಗಾಲಕ್ಕೆ ತಕ್ಕಂತೆ ಇದನ್ನು ಹೀಗೆ ಬದಲಿಸಬಹುದೇ? `ಪ್ರೇಮಕ್ಕೆ ಕಣ್ಣಿಲ್ಲ…. ವಿವೇಕಕ್ಕೆ ವಾಸ್ತವತೆಯ ಅರಿವಿರಲಿ!’
ಪ್ರೇಮಿಸುವುದು ತಪ್ಪಲ್ಲ, ಮಾನವರಾಗಿ ಹುಟ್ಟಿದ ಮೇಲೆ ಪ್ರೇಮಿಸುವುದು, ಪ್ರೇಮಿಸಲ್ಪಡುವುದು ಎಲ್ಲಾ ಮಾಮೂಲೇ. ಪ್ರತಿ ವ್ಯಕ್ತಿಯ ಜೀವನದಲ್ಲೂ ಒಂದಲ್ಲ ಒಂದು ಸಲ ಯಾರೇ ಆಗಲಿ, ಈ ಪ್ರೇಮದ ಸುಳಿಗೆ ಸಿಲಕದೇ ಹೋಗಲಾರರು, ಅದು ಎಷ್ಟೋ ಸಲ ಮೂಕಪ್ರೇಮ ಆಗಿರಬಹುದು. ಇಂದು ಎಲ್ಲೆಲ್ಲೂ ಡಿಜಿಟಲ್, ಸೋಶಿಯಲ್ ಸೈಟ್ಸ್ ತಾಂಡವವಾಡುತ್ತಿವೆ.
ವರ್ಚಯೆಲ್ ವರ್ಲ್ಡ್ ಅಂದ್ರೆ ಕಣ್ಣಿಗೆ ಕಾಣುತ್ತಾ, ಅನುಭವಕ್ಕೆ ಬರುತ್ತಿದ್ದರೂ ಕೈಗೆಟುಕದಂಥದ್ದು ಎಂದೇ ಆಗುತ್ತದೆ. ಇಂಥ ಪ್ರೀತಿ ಪ್ರೇಮ ಕಣ್ಣಿಗೆ ಕಾಣಿಸುತ್ತಾ, ಕಿವಿಗೆ ಕೇಳಿಸುತ್ತಾ, ಅನುಭವಕ್ಕೆ ವೇದ್ಯ ಎನಿಸಿದರೂ ಕೈಗೆಟುಕುವಂಥದ್ದಲ್ಲ ಎಂಬುದೇ ವಾಸ್ತವತೆ. ಎಂದೋ ಅದು ಕೈಗೆ ಸಿಗಬಹುದು ಎಂಬ ಆಶಾಭಾವನೆಯಲ್ಲೇ ಜನ ಈ ಆನ್ ಲೈನ್ ಲವ್ ಗೆ ಮರುಳಾಗುತ್ತಾರೆ. ಹಾಗಾದರೆ ಇದರಿಂದ ಮೋಸ ಹೋಗದಿರಲು ಏನೇನು ಕ್ರಮ ಕೈಗೊಳ್ಳಬೇಕು? :
ನೀವು ಯಾವಾಗ ಸೋಶಿಯಲ್ ಮೀಡಿಯಾದಿಂದ ಒಬ್ಬ ಯುವಕನ ಜೊತೆ ಮಾತುಕಥೆ, ಸ್ನೇಹಕ್ಕಿಳಿದರೂ, ಮೊಟ್ಟ ಮೊದಲಿಗೆ ನೀವು ನಿಮ್ಮ ಪೂರ್ಣ ಪರಿಚಯ, ಫೋನ್ ನಂಬರ್ ಇತ್ಯಾದಿ ಎಲ್ಲಾ ಕೊಟ್ಟು ಬಿಡಬೇಡಿ. ಕ್ರಮೇಣ ನಿಮ್ಮ ಸ್ನೇಹ ಮುಂದುವರಿಯಬೇಕೇ ಹೊರತು, ಗಂಟೆಗಟ್ಟಲೇ ಹರಟೆಗೆ ಇಳಿಯಬೇಡಿ.
ನಿಮ್ಮ ಪೂರ್ವಾಪರ, ನಿಮ್ಮ ಮನೆಯಲ್ಲಿ ಯಾರು ಯಾರು ಇದ್ದಾರೆ, ವಿಳಾಸ… ಇತ್ಯಾದಿ ಯಾವ ವಿವರಗಳನ್ನೂ ಮೊದಲೇ ನೀಡಬೇಡಿ. ಸ್ನೇಹ ಮುಂದುವರಿದಂತೆ ಆತನ ಗುಣಸ್ವಭಾವ ಗ್ರಹಿಸಲು ಯತ್ನಿಸಿ, ನಿಮ್ಮಿಂದ ಏನು ಬಯಸುತ್ತಿದ್ದಾನೆ ತಿಳಿಯಿರಿ.
ಮೊಬೈಲ್ ನಂಬರ್ ಸಿಕ್ಕಿದ್ದೇ ತಡ, ಪ್ರತಿದಿನ ಗುಡ್ ಮಾರ್ನಿಂಗ್, ಗುಡ್ ನೈಟ್, ಎದ್ದರೆ ಕೂತರೆ ಮೆಸೇಜುಗಳು ಇತ್ಯಾದಿ ಕೊಡುತ್ತಾ ಇರಬೇಡಿ, ಎಲ್ಲಕ್ಕೂ ಒಂದು ಇತಿಮಿತಿಯಲ್ಲಿರಲಿ. ಮೊದಲ 3-4 ದಿನಗಳ ಪರಿಚಯದಲ್ಲೇ ನಿಮ್ಮ ಪರ್ಸನ್ ಮೊಬೈಲ್ ನಂಬರ್ ಕೊಟ್ಟುಬಿಡಬೇಡಿ. ನಿಮ್ಮ ನಂಬರ್ ಪಡೆದು ಮುಂದೆ ಅವನು ನಿಮ್ಮನ್ನು ತೊಂದರೆಗೆ ಒಳಪಡಿಸಬಹುದು.
ಸೋಶಿಯಲ್ ಮೀಡಿಯಾದಲ್ಲಿ ವಿಷಯ ಹಂಚಿಕೊಳ್ಳುವಾಗ ಅತಿ ಭಾವುಕತೆ ಬೇಡ. ಅವನು ನಿಮ್ಮ ಫೋಟೋ ಕೇಳಿದರೆ, ತಕ್ಷಣ ಕೊಡಬೇಡಿ. ನಿಮ್ಮ ಫೋಟೋ ತಾನು ಸೇವ್ ಮಾಡಿಕೊಂಡು, ಅದನ್ನು ಅನಗತ್ಯವಾಗಿ ಬಳಸಿಕೊಂಡರೆ, ಮುಂದೆ ಆ ಕಾರಣದಿಂದ ಬ್ಲ್ಯಾಕ್ ಮೇಲ್ ಮಾಡಿದರೆ ನೀವೇನೂ ಮಾಡಲಾಗದು.
ನೀವು ಈ ಆನ್ ಲೈನ್ ಲವ್ ನಿಂದ ಅವನ ವಿಶ್ವಾಸ ಗಳಿಸಿದ್ದೇ ಆದರೂ, 4-5 ಸಲ ಯೋಚಿಸಿ `ಇವ ನಮ್ಮವ’ ಎಂದು ಖಾತ್ರಿಪಡಿಸಿಕೊಂಡೇ ನಿಮ್ಮ ನಂಬರ್ ಕೊಡಿ. ನಂಬರ್ ಸಿಕ್ಕಿದ್ದೇ ಸಾಕು ಎಂದು ಘಂಟೆಗಟ್ಟಲೇ ಹರಟೆಗೆ ಕೂರಬೇಡಿ ನೀವು ಇಂಥ ವಿಷಯದಲ್ಲಿ ಹೆಚ್ಚು ಆಸಕ್ತಿ ತೋರಿದರೆ, ಅವನನ್ನು ನೀವು ಟೈಂ ಪಾಸ್ ಗೆ ಬಳಸಿಕೊಳ್ಳುತ್ತಿದ್ದೀರಿ ಎಂದೂ ಭಾವಿಸಬಹುದು.
ಅವನು ನೀವು ಇರುವ ಊರಿನವನೇ ಆಗಿದ್ದು, ನಿಮ್ಮನ್ನು ಭೇಟಿ ಆಗಲೇಬೇಕೆಂದು ಮತ್ತೆ ಮತ್ತೆ ಹಪಹಪಿಸಿದರೆ, ಅವನ ಬಗ್ಗೆ ಸಂಪೂರ್ಣ ವಿಶ್ವಾಸ ಬೆಳೆದ ನಂತರವೇ ಭೇಟಿಗೆ ಅನುಮತಿ ನೀಡಿ. ಅದು ಸಾರ್ವಜನಿಕ ಕೆಫೆ, ಮಾಲ್ ಮುಂತಾದ ಕಡೆ ಇರಲಿ, ತೀರಾ ಜನರಿರದ ಖಾಸಗಿ ಜಾಗ ಬೇಡ.
ಇಷ್ಟು ಹೊತ್ತಿಗೆ ನೀವು ಅವನ ಪೂರ್ವಾಪರ, ಅವನ ಮನೆಯವರು, ಅವನ ಸ್ವಭಾವ, ಇತ್ಯಾದಿಗಳ ಎಲ್ಲ ವಿವರ ತಿಳಿದುಕೊಂಡಿರಬೇಕು. ಆತನ ಹಿನ್ನೆಲೆ ಗೌರವಯುತ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಕೇವಲ ಪ್ರೀತಿಪ್ರೇಮದ ಹುಚ್ಚು ಹೊಳೆಗಾಗಿ ನಿಮ್ಮ ಸಂಗ ಬಯಸುತ್ತಿಲ್ಲ ತಾನೇ ಎಂದು ಒಂದಲ್ಲ 100 ಸಲ ಯೋಚಿಸಿ.
ಇಷ್ಟೆಲ್ಲ ಆದಮೇಲೆ ಅಗತ್ಯವಾಗಿ ಅವನ ಮನೆಗೆ ಭೇಟಿ ನೀಡಿ, ಅವನ ತಾಯಿ ತಂದೆಯರನ್ನು ಕಂಡು ಆತ್ಮೀಯವಾಗಿ ಮಾತನಾಡಿಸಿ. ಯಾವುದೋ ನೆಪದಲ್ಲಿ ಅವನನ್ನು ಮನೆಗೆ ಕರೆದು, ನಿಮ್ಮ ತಾಯಿ ತಂದೆಗೂ ಅವನನ್ನು ಪರಿಚಯಿಸಿ, ಅವನ ಬಗ್ಗೆ ಇವರ ಅಭಿಪ್ರಾಯವೇನೆಂದು ಸೂಕ್ಷ್ಮವಾಗಿ ತಿಳಿದುಕೊಳ್ಳಿ.
ಹೀಗೆ ಎಲ್ಲವೂ ಸುಲಲಿತವಾಗಿದೆ ಎನಿಸಿದ ನಂತರವೇ ಮದುವೆ, ಮುಂದಿನ ಜೀವನದ ಕುರಿತಾಗಿ ಮುಕ್ತವಾಗಿ ಅವನೊಂದಿಗೆ ಪ್ಲಾನಿಂಗ್ ಮಾಡಿ. ಒಮ್ಮೊಮ್ಮೆ ಯಾವ ಸೂಚನೆ ನೀಡದೆಯೂ ನಿಮ್ಮ ಗೆಳತಿ ಜೊತೆ ದಿಢೀರ್ ಎಂದು ಅವನ ಮನೆಗೆ ಭೇಟಿ ನೀಡಿ, ಅವನ ಪ್ರತಿಕ್ರಿಯೆ ಬಗ್ಗೆ ತಿಳಿದುಕೊಳ್ಳಿ. ಅವನ ಮನೆಯವರು ನಿಮ್ಮೊಂದಿಗೆ ಆತ್ಮೀಯವಾಗಿ ವ್ಯವಹರಿಸುತ್ತಿದ್ದಾರೆ ಎಂದು ಖಾತ್ರಿಪಡಿಸಿಕೊಂಡೇ ಮುಂದೆ ಮದುವೆ ತಯಾರಿಗೆ ಸಜ್ಜಾಗಿ.
ಡೇಟ್ ಗೆ ಹೋಗೋಣ, ಹಾಗೂ ಹೀಗೂ ಫ್ರೀಯಾಗಿ ಎಂಜಾಯ್ ಮಾಡೋಣ ಎಂಬ ಅವನ ಗ್ಲಾಮರಸ್ ಐಡಿಯಾಗಳಿಗೆ ಅಪ್ಪಿತಪ್ಪಿಯೂ ಒಪ್ಪಿಕೊಳ್ಳಬೇಡಿ. ಎಲ್ಲಿಯಾದರೂ 1 ದಿನದ ಪ್ರವಾಸ ಓ.ಕೆ, ಆದರೆ ಅದು ಸೌಹಾರ್ದತೆ, ಸಾಮಾಜಿಕ ಬದ್ಧತೆಗಳ ಗಡಿ ಮೀರದಿರಲಿ. ಈ ಎಲ್ಲಾ ವಿಷಯಗಳಲ್ಲೂ ಅವನು 100% ಪಾಸ್ ಎನಿಸಿದಾಗ ಮಾತ್ರ ನೀವು ಉತ್ತಮ ಸಂಗಾತಿ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಅರ್ಥ. ಇದರಲ್ಲಿ ಎಲ್ಲೇ ಆಗಲಿ, ಅವನು ಹದ್ದುಮೀರಿ ನಿಮ್ಮ ಮೈಕೈ ಮುಟ್ಟಲು ಹಾತೊರೆಯುತ್ತಾ, ಅತಿಯಾದ ಸಲುಗೆಯಲ್ಲಿ ನಿಮ್ಮನ್ನು ಸಂಗಸುಖಕ್ಕೆ ಒತ್ತಾಯಿಸಿದಾಗ, ಆತನ ಮನಸ್ಥಿತಿ ಏನೆಂದು ಸ್ಪಷ್ಟ ಗುರುತಿಸಿ, ನಿಮ್ಮ ಜಾಗರೂಕತೆಯಲ್ಲಿ ನೀವು ಎಚ್ಚೆತ್ತುಕೊಳ್ಳಿ. ಏನೇ ಸಲುಗೆ ಇದ್ದರೂ, ಮಿಲನ ಮದುವೆಯ ನಂತರವೇ ಎಂಬುದನ್ನು ಸ್ಪಷ್ಟಪಡಿಸಿ.
ಈ ರೀತಿ ಯೋಚಿಸಿ, ಘಳಿಗೆ ಘಳಿಗೆಗೂ ನೀವು ಎಚ್ಚರಿಕೆಯಿಂದ ನಡೆದುಕೊಂಡಾಗ ಮಾತ್ರ, ನಿಮ್ಮ ಭವಿಷ್ಯ ಬಂಗಾರವಾಗಲಿದೆ. `ಬಾಳೆಲೆ ಬೇಲಿ ಮೇಲೆ ಬಿದ್ದರೂ, ಬೇಲಿಯ ಕಂಬಿ ಬಾಳಲೆಯನ್ನು ಗೀರಿದರೂ, ಬಾಳೆಲೆಗೆ ಮಾತ್ರ ಹಾನಿ!’ ಎಂಬುದು ನೆನಪಿರಲಿ, ಹೆಣ್ಣು ಎಂದಿದ್ದರೂ ಬಾಳೆಲೆ!
– ಕೆ. ವೈದೇಹಿ





