– ರಾಘವೇಂದ್ರ ಅಡಿಗ ಎಚ್ಚೆನ್.
ಉದಯ ಟೀವಿಯಲ್ಲಿ ಪ್ರಸಾರವಾಗುತ್ತಿರುವ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಸಿನಿಮಾ ಶೀರ್ಷಿಕೆ ಹೊಂದಿದ್ದ ‘ಸೂರ್ಯವಂಶ’ ಧಾರಾವಾಹಿಈಗ ಮುಕ್ಟಾಯದ ಹಂತ ತಲುಪಿದೆ. ನಟ ಅನಿರುದ್ದ ಜತ್ಕರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಈ ಧಾರಾವಾಹಿ ತಿಂಗಳ 21ರಂದು ಕೊನೆಯಾಗುತ್ತಿದೆ. ಈ ಕುರಿತಂತೆ ಅನಿರುದ್ದ ತಮ್ಮ ಸಾಮಾಜಿಕ ಆಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

“ಎಲ್ಲರಿಗೂ ನಮಸ್ಕಾರ, ‘ಸೂರ್ಯವಂಶ’ ಧಾರಾವಾಹಿಯನ್ನು ನಾವು ಮುಕ್ತಾಯಗೊಳಿಸುತ್ತಿದ್ದೇವೆ. ಈ ತಿಂಗಳ 21ರಂದು ಕೊನೆಯ ಭಾಗ ಪ್ರಸಾರವಾಗಲಿದೆ. ಕಥೆಗೆ ಸಂಪೂರ್ಣ ಅಂತ್ಯ ದೊರಕದಿರಬಹುದು. ಆದರೆ, ಸುಮಾರು ಎರಡು ವರ್ಷಗಳ ಕಾಲ ಯಶಸ್ವಿಯಾಗಿ ನಡೆಯುತ್ತಾ ಸುಮಾರು 650 ಕಂತುಗಳನ್ನು ಪೂರ್ಣಗೊಳಿಸಿದ ನಂತರ, ಹೊಸ ಧಾರಾವಾಹಿಗೆ ಅವಕಾಶ ನೀಡುವ ಉದ್ದೇಶದಿಂದ ಚಾನೆಲ್ ಈ ನಿರ್ಧಾರವನ್ನು ತೆಗೆದುಕೊಂಡಿದೆ”

“ಈ ಅದ್ಭುತ ತಂಡದ ಜೊತೆ ಹಾಗೂ ನನ್ನನ್ನು ತಮ್ಮ ಕುಟುಂಬದ ಸದಸ್ಯನಂತೆ ನೋಡಿಕೊಂಡ ಚಾನೆಲ್‌ನ ಎಲ್ಲರ ಜೊತೆ ಕೆಲಸ ಮಾಡುವುದು ನನಗೆ ತುಂಬಾ ಸಂತೋಷ ಮತ್ತು ಗೌರವದ ವಿಷಯವಾಗಿತ್ತು. ಈ ಧಾರಾವಾಹಿಯನ್ನು ಪ್ರೀತಿಯಿಂದ ನೋಡುತ್ತಾ ನಿರಂತರವಾಗಿ ಬೆಂಬಲ ನೀಡಿದ ನನ್ನ ಎಲ್ಲ ಅಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ತುಂಬಾ ಬೇಗನೇ ಹೊಸ ಪ್ರಾಜೆಕ್ಟ್ ಮತ್ತು ಹೊಸ ಪಾತ್ರದೊಂದಿಗೆ ನಿಮ್ಮನ್ನು ಮತ್ತೆ ಭೇಟಿ ಮಾಡುತ್ತೇನೆ” ಎಂದು ತಮ್ಮ ಸಾಮಾಜಿಕ ತಾಣದಲ್ಲಿ ನಟ ಅನಿರುದ್ದ ಬರೆದುಕೊಂಡಿದ್ದಾರೆ,

ಎಸ್ ನಾರಾಯಣ್ ಹಾಗೂ ಅನಿರುದ್ದ ಜತ್ಕರ್ ಕಾಂಬಿನೇಶನ್‌ನಲ್ಲಿ ಬಂದಿದ್ದ ಈ ಧಾರಾವಾಹಿ ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಪ್ರಸಾರವಾಗುವ ಮೂಲಕ ಕಿರುತೆರೆ ವೀಕ್ಷಕರ ಮನೆಮಾತಾಗಿತ್ತು. ಸುಮಾರು 650 ಎಪಿಸೋಡ್‌ಗಳನ್ನ ಪೂರೈಸಿತ್ತು. ಈ ಧಾರಾವಾಹಿ ಎಸ್ ನಾರಾಯಣ್ ಅವರ ರಚನೆ, ನಿರ್ದೇಶನದಲ್ಲಿ ತಯಾರಾಗಿತ್ತು. ‘ಜೊತೆ ಜೊತೆಯಲಿ’ ಧಾರಾವಾಹಿಯ ಆರ್ಯವರ್ಧನ್ ಪಾತ್ರದಲ್ಲಿ ಹೆಸರಾಗಿದ್ದ ನಟ ಅನಿರುದ್ದ ‘ಸೂರ್ಯವಂಶದ’ ಧಾರಾವಾಹಿಯ ಪಾತ್ರದಲ್ಲಿ ಸಹ ಮೆಚ್ಚುಗೆ ಗಳಿಸಿದ್ದರು.
ಇನ್ನು ಎಸ್. ನಾರಾಯಣ್ ಈಗ ಇನ್ನೊಂದು ಖಾಸಗಿ ವಾಹಿನಿ ಝೀ ಕನ್ನಡಕ್ಕಾಗಿ “ಕೃಷ್ಣ ರುಕ್ಕು” ಹೆಸರಿನ ಧಾರಾವಾಇ ನಿರ್ದೇಶನದಲ್ಲಿ ತೊಡಗಿದ್ದಾರೆ. ಅದೂ ಕುಡ ಸಾಕಷ್ಟು ದೊಡ್ದ ತಾರಾಬಳಗ ಹೊಂದಿರುವ ಧಾರಾವಾಹಿಯಾಗಿ ಮೂಡಿ ಬರುತ್ತಿದೆ ಎನ್ನುವುದು ಇಲ್ಲಿ ಗಮನಾರ್ಹ.





