ಕಥೆ – ಉಷಾ ಭಾರದ್ವಾಜ್
ಒಡಹುಟ್ಟಿದವರಾದ ಮೌನಾ ಮೀಣಾರಲ್ಲಿ ಅಜಗಜಾಂತರ ವ್ಯತ್ಯಾಸವಿತ್ತು. ಸರಳತೆಯ ಸಾಕಾರಮೂರ್ತಿ ಮೌನಾ ಸದಾ ಕಷ್ಟದಲ್ಲೇ ಕಾಲ ಕಳೆದಳು. ಇವಳ ತದ್ವಿರುದ್ಧ ಸ್ವಭಾವದ ವೀಣಾ ಅಹಂಕಾರದಲ್ಲಿ ಮೆರೆದಳು. ಆಕಸ್ಮಿಕವಾಗಿ ಅಕ್ಕ ಮೌನಾಳಿಗಿಂತ ತಂಗಿ ವೀಣಾಳ ಮದುವೆಯೇ ಮೊದಲು ನಡೆಯಿತು. ಮುಂದೆ ಮೌನಾಳ ಭವಿಷ್ಯವೇನು…….?
ಗಂಗಮ್ಮ ಬಸಪ್ಪ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು. ದೊಡ್ಡವಳು ಮೌನಾ, ಹೆಸರಿಗೆ ತಕ್ಕಂತೆ ಮೌನಗೌರಿಯೇ. ಇವಳು ಹುಟ್ಟಿದ ಘಳಿಗೆ ತುಂಬ ಬಡತನದಲ್ಲಿದ್ದ ಗಂಗಮ್ಮ ಬಸಪ್ಪನವರ ಅದೃಷ್ಟ ಖುಲಾಯಿಸಿ, ಸ್ವಲ್ಪ ಹೊಲ, ತೋಟ, ಒಂದು ಹಸು ಕೊಂಡರು. ಮೌನಾ ಅದಕ್ಕೆ ಗೌರಿ ಎಂದು ಹೆಸರಿಟ್ಟು ಯಾವಾಗಲೂ ಅದರೊಟ್ಟಿಗೆ ಆಟವಾಡುತ್ತಾ, ನಗುನಗುತ್ತಾ ಇರತೊಡಗಿದಳು. ಮೌನಾ ನೋಡಲು ಕಪ್ಪು, ಆದರೂ ಮನೆಯವರ ಕಣ್ಮಣಿಯಾಗಿ ಬೆಳೆದಳು.
ಇವಳು ಹುಟ್ಟಿದ ಎರಡು ವರ್ಷಕ್ಕೆ ಹುಟ್ಟಿದವಳೇ ವೀಣಾ. ವೀಣಾ ನಕ್ಕರೆ, ಮಾತನಾಡಿದರೆ ವೀಣೆ ನುಡಿಸಿದಂತಹ ಸ್ವರ ಅವಳದ್ದು. ಇವಳು ಹುಟ್ಟುವವರೆಗೂ ಮೌನಾ ಮನೆ ಮಂದಿಯ ಮುದ್ದಿನ ಕೂಸಾಗಿದ್ದಳು. ಕ್ರಮೇಣ ವೀಣಾಳ ಆಗಮನದಿಂದ ಎಲ್ಲರ ಗಮನ ಅವಳ ಮೇಲೆ ಹೆಚ್ಚಾಗತೊಡಗಿತು. ಹಾಲು ಬಿಳುಪಿನ ವೀಣಾ ನೋಡಲು ಸುಂದರವಾಗಿದ್ದಳು. ಎಲ್ಲದರಲ್ಲೂ ಚುರುಕು, ತಾನು ಏನು ಕೇಳಿದರೂ ಇಲ್ಲವೆನ್ನದ ತಾಯ್ತಂದೆಯರು. ಅವಳು ನಕ್ಕಾಗ ಕೆನ್ನೆಯಲ್ಲಿ ಬೀಳುವ ಗುಳಿಯಿಂದಾಗಿ ಇನ್ನೂ ಮುದ್ದಾಗಿ ಕಾಣುತ್ತಿದ್ದಳು. ವೀಣಾ ಚಿಕ್ಕವಳಾದ್ದರಿಂದ ಅಪ್ಪ ಅಮ್ಮ ಅವಳ ಮೇಲೆ ಹೆಚ್ಚಿನ ಕಾಳಜಿ ತೋರುತ್ತಿದ್ದರು.
ಚಿಕ್ಕಂದಿನಿಂದಲೂ ಈ ತಾರತಮ್ಯಕ್ಕೆ ಹೊಂದಿಕೊಂಡ ಮೌನಾ, ಮನೆ ಚಾಕರಿಯಲ್ಲಿ ಎತ್ತಿದ ಕೈ. ಮನೆಗೆ ಎಷ್ಟೇ ಜನ ಬರಲಿ ಬೇಸರಿಸದೇ ಎಲ್ಲರ ಚಾಕರಿ ಮಾಡುವ ಅಸಹಾಯಕಳು. ಯಾವಾಗಲೂ ಪೆದ್ದಿ ಎಂಬ ಬಿರುದು ಹೊತ್ತು ಹೈಸ್ಕೂಲ್ ಕೂಡ ದಾಟಲಾಗಲಿಲ್ಲ. ಆದರೆ ತಂಗಿ ವೀಣಾ ಓದಿನಲ್ಲೂ ಸೈ. ಆಟ ಪಾಠ, ಭಾಷಣ, ಚರ್ಚಾಸ್ಪರ್ಧೆ, ನಾಟಕ, ಹಾಡು, ಹಸೆ ಎಲ್ಲದರಲ್ಲೂ ಎತ್ತಿದ ಕೈ.
ಮೌನಾ ತನಗೆ ಬೇಸರ, ದುಃಖವಾದಾಗೆಲ್ಲಾ ಅದನ್ನು ಮರೆಯಲು ಗೌರಿಯ ಬಳಿ ತೆರಳಿ ಅವಳ ಮೈದಡವುತ್ತಾ, ಮುದ್ದು ಮಾಡುತ್ತಾ ಸಮಾಧಾನವಾಗುತ್ತಿದ್ದಳು. ಮೌನಾ ಬಂದರೆ ಗೌರಿ `ಅಂಬಾ….ಅಂಬಾ….’ ಎಂದು ಕೂಗುತ್ತಾ ತನ್ನ ಪ್ರೀತಿಯನ್ನು ತೋರಿಸುತ್ತಿತ್ತು.
ಮೌನಾ ಮತ್ತು ವೀಣಾರ ನಡುವೆ ಎರಡು ವರ್ಷ ಅಂತರವಿದ್ದರೂ, ಮೌನಾ ಸ್ವಲ್ಪ ಕುಳ್ಳಿ, ವೀಣಾ ಎತ್ತರದ ಹುಡುಗಿ. ನೋಡ ನೋಡುತ್ತಲೇ ಇಬ್ಬರ ಬಾಲ್ಯ ಕಳೆದು ಯೌವನಾವಸ್ಥೆಗೆ ಕಾಲಿಟ್ಟರು. ಹೆತ್ತವರಿಗೆ ಚಿಂತೆ ಶುರುವಾಯಿತು. ಬಂದವರೆಲ್ಲಾ ವೀಣಾಳ ಮಾತಿಗೆ, ಚುರುಕುತನಕ್ಕೆ, ಸೊಬಗಿಗೆ ಮಾರುಹೋಗಿ, ಅವಳೊಂದಿಗೆ ಮದುವೆ ಮಾಡಿಕೊಡುವಂತೆ ದುಂಬಾಲು ಬೀಳುತ್ತಿದ್ದರು.
ಇದು ಹೆತ್ತವರಿಗೆ ನುಂಗಲಾರದ ತುತ್ತಾಗತೊಡಗಿತು. ಮೌನ ಮೌನವಾಗಿ ದುಃಖವನ್ನು ನುಂಗಿ, ಗೌರಿಯಿದ್ದೆಡೆಗೆ ಹೋಗಿ ಕುಳಿತುಬಿಡುತ್ತಿದ್ದಳು. ಹೀಗೇ ಮೂರು ವರ್ಷ ಕಳೆಯಿತು. ಇತ್ತೀಚೆಗೆ ವೀಣಾ ಮೌನಾಳನ್ನು ಕಂಡರೆ ಸಿಡಿಮಿಡಿ ಎನ್ನತೊಡಗಿದಳು. ಬಂದಂಥ ಒಳ್ಳೊಳ್ಳೆ ಸಂಬಂಧಗಳು ಕೈತಪ್ಪ ತೊಡಗಿದಾಗ ಮೌನಾ, ಮೌನ ಮುರಿದು ಮೊದಲು ತಂಗಿಯ ಮದುವೆ ನಡೆಯಲಿ. ಇದರ ಬಗ್ಗೆ ತನ್ನದೇನೂ ಅಭ್ಯಂತರ ಇಲ್ಲ. ನನ್ನ ಹಣೆಯಲ್ಲಿ ಮದುವೆಯ ಯೋಗವಿದ್ದರೆ ಆಗೇ ಆಗುತ್ತದೆ. ನನ್ನಿಂದಾಗಿ ವೀಣಾಳನ್ನು ಕಾಯಿಸುವುದು ಯಾವ ನ್ಯಾಯ? ನನಗಾಗಿ ಗಂಡು ಹುಟ್ಟಿದ್ದರೆ ಇಂದಲ್ಲಾ ನಾಳೆ ನನ್ನ ಮದುವೆ ಆಗುವುದೆಂದು ದೃಢ ವಿಶ್ವಾಸದಲ್ಲಿ ಹೇಳಿ ತಾಯಿ ತಂದೆಯರನ್ನು ಒಪ್ಪಿಸಿದಳು.
ತಂದೆ ತನಗಾಗಿ ಚಿಂತಿಸಿ ದಿನೇ ದಿನೇ ಕೃಶರಾಗುತ್ತಿರುವುದನ್ನು ಮೌನಾ ನೋಡದಾದಳು. ತಂಗಿಯ ಮದುವೆಯ ನೆಪದಿಂದಲಾದರೂ ಸ್ವಲ್ಪ ನೆಮ್ಮದಿ, ಚೇತರಿಕೆ ಕಂಡುಬಂದರೆ ಸಾಕೆನ್ನುವ ಮನಸ್ಥಿತಿಗೆ ಬಂದಿದ್ದಳು. ವೀಣಾಳಿಗೆ ಒಂದು ಒಳ್ಳೆಯ ಸಂಪ್ರದಾಯಸ್ಥ, ಶ್ರೀಮಂತ ಕುಟುಂಬವೇ ಸಂಬಂಧ ಕೇಳಿಕೊಂಡು ಬಂದಿತು. ಶ್ರೀಮಂತರು ಎಂದ ಮೇಲೆ ಅವರಿಗೆ ತಕ್ಕಂತೆ ಲಗ್ನ ಮಾಡಿಕೊಡಬೇಕೆಂದು, ಇವರು ಹೊಲ ತೋಟ ಮಾರಿ ಮದುವೆ ಮಾಡಿಕೊಟ್ಟರು.
ತಾನು ಶ್ರೀಮಂತರ ಮನೆಯಲ್ಲಿ ಸುಖವಾಗಿರಬಹುದೆಂದು ವೀಣಾ ಕನಸು ಕಾಣತೊಡಗಿದಳು. ಅತ್ತೆ ಮನೆ ಸೇರಿದ ಮೂರೇ ತಿಂಗಳಿಗೆ ಮನೆಯವರ ವಿಚಿತ್ರ ಸಂಪ್ರದಾಯ, ಮಡಿಮೈಲಿಗೆ, ಮನೆಯಿಂದ ಹೊರಗಡೆ ಹೊರಟರೆ ಅತ್ತೆ, ಮಾವ ಇಲ್ಲವೇ ಗಂಡ ಹೀಗೆ ಯಾರಾದರೂ ಜೊತೆಯಲ್ಲಿ ಇದ್ದೇ ಇರಬೇಕೆಂಬ ನಿಯಮಗಳೆಲ್ಲಾ ಅವಳಿಗೆ ಸಹಿಸಲಸಾಧ್ಯ ಎನಿಸತೊಡಗಿತು. ಗಂಡ ಒಬ್ಬನೇ ಮಗನಾಗಿದ್ದರಿಂದ ಅಮ್ಮನ ಮಾತನ್ನು ಮೀರದವನಾಗಿದ್ದ. ಆ ವ್ರತ ಈ ವ್ರತ ಎಂದು ಮನೆಯವರು ಹೇಳುತ್ತಾ ಗಂಡ ಹೆಂಡತಿ ಒಂದಾಗಲು ಬಿಡುತ್ತಿರಲಿಲ್ಲ.
ತವರುಮನೆಯಲ್ಲಿ ಈ ರೀತಿಯ ಯಾವ ಕಟ್ಟುಪಾಡುಗಳೂ ಇಲ್ಲದೆ ಸುಖವಾಗಿ ಬೆಳೆದಿದ್ದ ವೀಣಾಳಿಗೆ ಇದು ನುಂಗಲಾರದ ತುತ್ತಾಗಿ, ಹೆತ್ತವರೊಂದಿಗೆ ಹೇಳಿಕೊಳ್ಳಲೂ ಸಾಧ್ಯವಾಗದೇ ದಿನದಿನಕ್ಕೆ ಕೃಶಳಾಗಿ ಕೊರಗತೊಡಗಿದಳು.
ಹೀಗೆ ಕೆಲವು ತಿಂಗಳು ಕಳೆಯುವುದರೊಳಗೆ ಪಕ್ಕದೂರಿನ ವಿಶ್ವಾಸ್‌ಎಂಬ ಬಡ ಯುವಕ ಮೌನಾಳನ್ನು ವರಿಸುವುದಾಗಿ ಸಂಬಂಧ ಕೇಳಿಕೊಂಡು ಬಂದ. ತಾಯಿ ತಂದೆಯಿಲ್ಲದ ಅವನಿಗೆ ಸ್ನೇಹಿತರೇ ಬಂಧು ಬಾಂಧವರಾಗಿದ್ದರು. ಸ್ವಂತಕ್ಕೆಂದು ಒಂದು ಮನೆ ಇತ್ತು ಅಷ್ಟೆ. ದಿನಸಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಊರಿನ ಮಂದಿಗೆ ಪ್ರೀತಿಪಾತ್ರನಾಗಿದ್ದ. ದೇವಸ್ಥಾನದಲ್ಲಿ ಸರಳವಾಗಿ ಮದುವೆ ಮಾಡಿಕೊಟ್ಟರೆ ಸಾಕೆಂದು ಹೇಳಿದ.
ಗಂಗಮ್ಮ ಬಸಪ್ಪರಿಗೆ ಇದು ಗಂಟಲಲ್ಲಿ ಸಿಕ್ಕ ಬಿಸಿ ತುಪ್ಪವಾಗತೊಡಗಿತು. ಅಪರೂಪಕ್ಕೆ ಮಗಳನ್ನು ವರಿಸುವುದಕ್ಕಾಗಿ ಒಬ್ಬ ಹುಡುಗ ಮುಂದೆ ಬಂದಿರುವಾಗ ಒಪ್ಪದೇ ಇರಲಾಗಲಿಲ್ಲ. ಆದರೆ ಅವರಿಗಿದ್ದ ಚಿಂತೆ ಎಂದರೆ, ಇಲ್ಲಿಯೂ ಯಾವುದೇ ಸುಖ ಕಾಣದವಳು, ಅಲ್ಲಿಯೂ ಹೀಗೆ ಇರಬೇಕಾಗುವುದಲ್ಲ ಎಂಬ ಸಂಕಟ.
ಶ್ರೀಮಂತರೆಂದು ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟ ಮಗಳು ವೀಣಾ ಕಷ್ಟಪಡುತ್ತಿರುವುದು ತಿಳಿದಿದ್ದರೂ ಏನೂ ಮಾಡಲಾಗದೆ ಅಸಹಾಯಕರಾಗಿದ್ದರು. ಈಗ ಹಿರೀ ಮಗಳಿಗೆ ಏನೆಂದು ಹೇಳಿ ಒಪ್ಪಿಸುವುದು, ಕೇಳಲು ಬಾಯಿಯೇ ಬರುತ್ತಿಲ್ಲ. ಮದುವೆ ಮಾಡದೆ ಇರಲೂ ಆಗುವುದಿಲ್ಲ. ಹಾಗೆಂದು ತಾವು ಇನ್ನೆಷ್ಟು ದಿನವಿರುವೆವೋ… ಹೀಗೆ ಅವಳ ತಾಯಿ ತಂದೆಗೆ ನಾನಾ ಯೋಚನೆಗಳು ಕಾಡಲಾರಂಭಿಸಿದವು.
ಇವರ ತಳಮಳವನ್ನು ಅರಿತ ವಿಶ್ವಾಸ್, ಅವರಿಗೆ ಧೈರ್ಯ ತುಂಬುತ್ತಾ, ಮೊದಲಿಗೆ ನಿಮ್ಮ ಮಗಳೊಂದಿಗೆ ಮಾತನಾಡಲು ಅವಕಾಶ ಕೊಡಿ, ಅವರೊಪ್ಪಿದರೆ ನಿಮ್ಮ ಅಭ್ಯಂತರವೇನೂ ಇಲ್ಲ ಎಂದುಕೊಂಡಿದ್ದೇನೆಂದು ವಿನಯದಿಂದ ಕೇಳಿಕೊಂಡ. ಸರಿ, ಒಪ್ಪುವ ಬಿಡುವ ನಿರ್ಧಾರ ಮಗಳಿಗೇ ಬಿಟ್ಟು, “ನಿನ್ನ ಯಾವುದೇ ನಿರ್ಧಾರಕ್ಕೂ ನಮ್ಮ ಸಮ್ಮತಿ ಇದೆ,” ಎಂದರು.
“ಗೌರಿ ಒಪ್ಪಿದರೆ ಮಾತ್ರ ನಿಮ್ಮನ್ನು ವರಿಸುವೆ,” ಎಂದು ಮೌನಾ ವಿಶ್ವಾಸ್ ಬಳಿ ಹೇಳಿದಳು. ಗೌರಿಯ ಬಗೆಗಿನ ಪ್ರೀತಿ ಅವನಿಗೆ ಅರಿವಾಯಿತು. ಹಾಗೆಯೇ ನನ್ನ ಇನ್ನೊಂದು ಕೋರಿಕೆ ಇದೆ.
“ನಾನೊಬ್ಬಳೇ ನಿಮ್ಮ ಮನೆಯ ಗೃಹಪ್ರವೇಶ ಮಾಡುವುದಿಲ್ಲ. ಅಮ್ಮ ಅಪ್ಪನೊಂದಿಗೆ ಗೌರಿಯನ್ನೂ ಕರೆದುಕೊಂಡು ಬರಲು ಒಪ್ಪಿಗೆ ಇತ್ತರೆ ಮಾತ್ರವೇ ಮದುವೆ ಆಗುವುದು,” ಎಂದು ಹೇಳಿದಳು.
“ಸದ್ಯ ನನ್ನನ್ನು ಮದುವೆಯಾಗಲು ಒಪ್ಪಿದಿರಲ್ಲ…. ನಿಮ್ಮ ಎಲ್ಲಾ ಕರಾರಿಗೂ ನನ್ನ ಒಪ್ಪಿಗೆ ಇದೆ,” ಎಂದು ವಿಶ್ವಾಸ್ ಭರವಸೆ ನೀಡಿದ.
ದೇವಸ್ಥಾನದಲ್ಲಿ ಇವರಿಬ್ಬರ ಮದುವೆ ಸರಳವಾಗಿ ನೆರವೇರಿತು. ಇಷ್ಟಾದರೂ ವೀಣಾಳನ್ನು ಅವಳ ಅತ್ತೆ ಮನೆಯಲ್ಲಿ ಕಳುಹಿಸಿ ಕೊಡಲೇ ಇಲ್ಲ. ಮನೆಯನ್ನೆಲ್ಲಾ ಒಪ್ಪಗೊಳಿಸಿದ ನಂತರ ಅಮ್ಮ ಅಪ್ಪನನ್ನು ಕರೆಸಿಕೊಳ್ಳೋಣ ಎಂದು ವಿಶ್ವಾಸ್ ಮೌನಾಳಿಗೆ ಹೇಳಿ ಕರೆದೊಯ್ದ. ಒಂದು ವಾರ ಕಳೆದರೂ ಮೌನಾ ಹೇಗಿದ್ದಾಳೆ, ಏನೆಂದು ಯಾರಿಂದಲೂ ತಿಳಿಯದಾಯಿತು. ಅಷ್ಟೆಲ್ಲಾ ವಿಚಾರಿಸಿ, ಹುಡುಗನ ಗುಣ ನಡತೆ, ಸ್ವಭಾವದ ಬಗ್ಗೆ ವಿಚಾರಿಸಿ ಮದುವೆ ಮಾಡಿದ್ದೂ ವ್ಯರ್ಥವಾಯಿತೇ ಎಂದು ತಾಯಿ ತಂದೆ ಕೊರಗತೊಡಗಿದರು.
ಒಂದು ದಿನ ಮುಂಜಾನೆ ಮನೆ ಮುಂದೆ ಕಾರೊಂದು ಬಂದು ನಿಂತಿತು. ಕಾರಿನ ಡ್ರೈವರ್ ಗಂಗಮ್ಮ ಬಸಪ್ಪರ ಬಳಿ ಬಂದು, “ಈಗಲೇ ಕಾರು ಹತ್ತಿ, ನಮ್ಮೂರಿನ ಸಾಹಕಾರರು ನಿಮ್ಮನ್ನು ಕೂಡಲೇ ಕರೆತರುವಂತೆ ಹೇಳಿದ್ದಾರೆ. ನಿಮ್ಮ ಅಳಿಯ ಮಗಳ ಬಗ್ಗೆ ದೂರೊಂದು ಬಂದಿದೆ. ನೀವೂ ಸ್ಥಳದಲ್ಲಿ ಹಾಜರಿರಬೇಕಂತೆ,” ಎಂದ.
`ಇದೆಲ್ಲಿಯ ಗ್ರಹಚಾರ ನಮ್ಮ ಮಕ್ಕಳನ್ನು ಕಾಡುತ್ತಿದೆಯಪ್ಪ ದೇವರೇ,’ ಎಂದುಕೊಳ್ಳುತ್ತಾ ಪಕ್ಕದ ಮನೆಯವರಿಗೆ ಗೌರಿಯ ಕಡೆ ಸ್ವಲ್ಪ ಗಮನ ಕೊಡುವಂತೆ ಹೇಳಿಸಿ ಕಾರಿನಲ್ಲಿ ಹೊರಟರು.
ಇವರು ಹೊರಟ ಸ್ವಲ್ಪ ಸಮಯಕ್ಕೆ ಗೌರಿಯೂ ತಡೆಯಲಾಗದೆ ಕಟ್ಟಿದ್ದ ಗೂಟದ ಸಮೇತ ಕಿತ್ತುಕೊಂಡು ಕಾರನ್ನು ಹಿಂಬಾಲಿಸತೊಡಗಿದಳು. ಕಾರು ಸೀದಾ ಒಂದು ಭವ್ಯ ಬಂಗಲೆಯ ಮುಂದೆ ನಿಂತಿತು. ಡ್ರೈವರ್ ಕೆಳಗೆ ಇಳಿದವನೇ, ಹಿಂಬಾಗಿಲು ತೆಗೆದು ತಲೆ ತಗ್ಗಿಸಿ ನಿಂತ. ಕಾರಿನ ಶಬ್ದ ಕೇಳಿ ಬಂಗಲೆಯೊಳಗಿಂದ ಮೌನಾ ಒಂದೇ ಓಟದಲ್ಲಿ ಓಡಿಬಂದು ತಾಯಿ ತಂದೆಗೆ ನಮಸ್ಕರಿಸಿದಳು. ಓಡುತ್ತಾ ಬಂದ ಗೌರಿಯೂ ಕಾರಿನ ಬಳಿ ಬಂದು ಅಲುಗಾಡದೆ ನಿಂತುಬಿಟ್ಟಳು.
ಮನೆಯೊಳಗೆ ಬಂದ ಗಂಗಮ್ಮ ಬಸಪ್ಪ ದಂಪತಿ ಶಾಕಿನಿಂದ ಹೊರಬರದೆ ದಿಗ್ಭ್ರಾಂತರಾಗಿ ಕುಳಿತಿದ್ದರು. ಗೌರಿ ಖುಷಿಯಿಂದ ಮನೆಯ ಸುತ್ತಲಿನ ತೋಟದಲ್ಲಿ ಸುತ್ತು ಹಾಕುತ್ತಿತ್ತು.
ಮೌನಾ ತಾಯಿ ತಂದೆಗೆ ತಿಂಡಿ ಕೊಟ್ಟು, ವಿಷಯ ತಿಳಿಸತೊಡಗಿದಳು. ಅಂದು ಮದುವೆ ಮಾಡಿಕೊಂಡು ಈ ಊರಿಗೆ ಕರೆದುಕೊಂಡು ಬಂದಾಗ ವಿಶ್ವಾಸ್ ಸಾಹುಕಾರನಿರಬಹುದೆಂಬ ಸಣ್ಣ ಸುಳಿವೂ ನನಗಿರಲಿಲ್ಲ. ಆದರೆ ಈ ಬಂಗಲೆಯ ಮುಂದೆ ನಿಂತಾಗ ನನಗೂ ನಿಮ್ಮಷ್ಟೇ ಆಶ್ಚರ್ಯವಾಗಿತ್ತು.
ವೈಶಾಖಾ ಎಂದು ಕೂಗಿದಳು. ವೀಣಾಳ ವಯಸ್ಸಿನಳೇ ಒಬ್ಬ ಹುಡುಗಿ ಅತ್ತಿಗೆ ಎನ್ನುತ್ತಾ ಬಂದಳು. ಅವಳನ್ನು ಅಮ್ಮ ಅಪ್ಪನಿಗೆ ಪರಿಚಯಿಸುತ್ತಾ, “ಇವಳೂ, ನಮ್ಮ ವೀಣಾ ಒಂದು ಕಾಲೇಜಿನಲ್ಲಿ ಓದಿದ್ದರಂತೆ,” ಎಂದವಳನ್ನು ತಡೆದ ವೈಶಾಖಾ, “ಅತ್ತಿಗೆ ಮುಂದಿನದನ್ನು ನಾನೇ ಹೇಳುತ್ತೇನೆ,” ಎಂದು ತಡೆದಳು.
“ವೀಣಾ, ನಾನೂ ಒಂದೇ ಕಾಲೇಜು. ಆದರೆ ವೀಣಾಳಿಗೆ ತಾನು ಬುದ್ಧಿವಂತಳೆಂಬ ಗರ್ವ ಬಹಳವೇ ಇತ್ತು. ತನ್ನ ಅಕ್ಕನ ಬಗ್ಗೆ ಯಾವಾಗಲೂ ಹಂಗಿಸುತ್ತಲೇ ಮಾತನಾಡುತ್ತಿದ್ದಳು. ನೀವು ಸಹ ತೋಟ ಗದ್ದೆ ಇದ್ದರೆ ನಮ್ಮೊಂದಿಗೆ ಬಂದಿರಲು ಒಪ್ಪುದಿಲ್ಲವೆಂದು ಅದ್ಧೂರಿ ಮದುವೆ ನೆಪದಲ್ಲಿ ಎಲ್ಲವನ್ನೂ ಮಾರುವಂತೆ ಮಾಡಿದೆ. ಹಾಗೆಯೇ ವೀಣಾಳಿಗೆ ಬುದ್ಧಿ ಕಲಿಸಲೆಂದೇ ಅವಳನ್ನು ನನ್ನ ಚಿಕ್ಕಣ್ಣನಿಗೆ ತಂದುಕೊಂಡು, ಆಚಾರ, ನೇಮ ನಿಷ್ಠೆ ಎಂದು ಹೆಚ್ಚಾಗಿ ಗೋಳಾಡಿಸಿ, ಅವಳಿಗೆ ತನ್ನ ತಪ್ಪಿನ ಆರಿವಾಗುವಂತೆ ಮಾಡಿದ್ದೇವೆ. ಈಗ ನಿಮ್ಮ ಮಗಳು ಕಾದ ಕಬ್ಬಿಣವನ್ನು ಬಡಿದಾಗ ಹದವಾಗುವಂತೆ ಸರಿಹೋಗಿದ್ದಾಳೆ.
“ಮೌನಾ ತುಂಬಾ ಸರಳತೆಗೆ ಬೆಲೆ ಕೊಡುತ್ತಿದ್ದರು. ಹಾಗಾಗಿ ಅವರಿಷ್ಟದಂತೆ ನಮ್ಮಣ್ಣ ಸರಳವಾಗಿ ವಿವಾಹ ಮಾಡಿಕೊಂಡರು. ಈ ಕಾರಣದಿಂದಾಗಿಯೇ ನಾನು ನನ್ನಿಬ್ಬರು ಅಣ್ಣಂದಿರ ಮದುವೆಗೆ ಹಾಜರಾಗದೆ ಪ್ಲಾನ್‌ಮಾಡಿದೆ. ನನ್ನ ಅಣ್ಣಂದಿರ ಜೊತೆ ನಮ್ಮ ಅಮ್ಮ ಅಪ್ಪನೂ ಸಾಥ್ ಕೊಟ್ಟರು.
“ನಾಡಿದ್ದು ಇಬ್ಬರ ಮದುವೆಯ ರಿಸೆಪ್ಷನ್ ಬೆಂಗಳೂರಿನಲ್ಲಿ ಇಟ್ಟುಕೊಂಡಿದ್ದೇವೆ. ಅದುವರೆವಿಗೂ ಈ ವಿಷಯ ವೀಣಾಗೆ ತಿಳಿಯುವುದು ಬೇಡ. ಸಡನ್ ಆಗಿ ಅವಳ ಮುಂದೆ ಹೋಗಿ ಆಶ್ಚರ್ಯ ಪಡಿಸೋಣ. ಇನ್ನು ಮೇಲೆ ನಾವೆಲ್ಲ ಇಲ್ಲೇ ಒಟ್ಟಿಗೆ ಈ ಮನೆಯಲ್ಲಿ ಹಾಯಾಗಿ ಇರಬಹುದು. ಮಕ್ಕಳು ಕಣ್ಮುಂದೆ ಇದ್ದರೆ ನಿಮಗೂ ಸಮಾಧಾನ ಅಲ್ವಾ….” ಎಂದಳು.
ಎರಡು ದಿನ ಬಿಟ್ಟು ಎಲ್ಲರೂ ಬೆಂಗಳೂರಿನಲ್ಲಿದ್ದ ವೀಣಾಳ ಮನೆಗೆ ಬಂದಿಳಿದರು. ಎಲ್ಲರನ್ನೂ ನೋಡಿ ವೀಣಾಳಿಗೆ ಆಶ್ಚರ್ಯ. ತಾಯಿ, ತಂದೆ, ಅಕ್ಕನನ್ನು ನೋಡಿ ಸಂತೋಷದಿಂದ ಸಂಭ್ರಮಿಸಿದಳು. ಓಡಿ ಬಂದವಳೆ ಅಕ್ಕನ ಬಳಿ ಕ್ಷಮೆ ಕೇಳಿದಳು. ವೈಶಾಖಾಳನ್ನು ಅವರ ಜೊತೆ ನೋಡಿ ಆಶ್ಚರ್ಯವಾಯಿತವಳಿಗೆ. ನಿಧಾನವಾಗಿ ನಡೆದದ್ದೆಲ್ಲಾ ತಿಳಿದಾಗ, ತನ್ನ ತಪ್ಪಿನ ಅರಿವಾಗಿ ನಾಚಿಕೆಯಿಂದ ಮುದುಡಿ ಎಲ್ಲರ ಬಳಿ ಕ್ಷಮೆ ಕೇಳಿದಳು.
ಮೌನಾ, ವೀಣಾ ಒಂದೇ ಮನೆಗೆ ಸೇರಿದ್ದು ಹೆತ್ತವರಿಗೂ ಖುಷಿಯಾಯಿತು. ತಮ್ಮ ಕಷ್ಟ ಕಳೆಯಿತೆಂದು ಸಮಾಧಾನದ ನಿಟ್ಟುಸಿರುಬಿಟ್ಟರು.





