ತಲಸೆರಿ ಬಿರಿಯಾನಿ
ಮೂಲ ಸಾಮಗ್ರಿ : ಸಣ್ಣ ತುಂಡುಗಳಾಗಿಸಿದ 250 ಗ್ರಾಂ ಚಿಕನ್, ಸಣ್ಣಗೆ ಹೆಚ್ಚಿದ 2-3 ಈರುಳ್ಳಿ, 8-10 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, 5-6 ಹಸಿ ಮೆಣಸು, ತುಸು ಕೊ.ಸೊಪ್ಪು, ಪುದೀನಾ, ಕರಿಬೇವು, ರುಚಿಗೆ ತಕ್ಕಷ್ಟು ಹುಳಿ ಟೊಮೇಟೊ ಪೇಸ್ಟ್. ಉಪ್ಪು, ಖಾರ, ಮೊಸರು, ನಿಂಬೆರಸ, ಲವಂಗದ ಎಲೆ (ಪಲಾವ್ ಎಲೆ), ಅರಿಶಿನ, ಧನಿಯಾಪುಡಿ, ಅರ್ಧ ಸೌಟು ರೀಫೈಂಡ್ ಎಣ್ಣೆ, ತುಸು ತುಪ್ಪ, 2 ಕಪ್ ಬಾಸುಮತಿ ಅಕ್ಕಿ, ತುಸು ಏಲಕ್ಕಿ, ಲವಂಗ, ಮೊಗ್ಗು, ಚಕ್ಕೆ.
ಮಸಾಲ ಸಾಮಗ್ರಿ : ಅರ್ಧ ಚಮಚ ಬಿರಿಯಾನಿ ಡ್ರೈ ಮಸಾಲ, ತುಸು ಮೆಣಸು, ಸೋಂಪು, ಜೀರಿಗೆ, ಸ್ಟಾರ್ ಅನೀಸ್.
ಲೇಯರಿಂಗ್ ಗಾಗಿ ಸಾಮಗ್ರಿ : ಉದ್ದುದ್ದಕ್ಕೆ ಹೆಚ್ಚಿ ತುಪ್ಪದಲ್ಲಿ ಬಾಡಿಸಿಕೊಂಡ 1 ಬಟ್ಟಲು ಈರುಳ್ಳಿ, 4-5 ಎಸಳು ಕರಿಬೇವು, ಅರ್ಧ ಸೌಟು ತುಪ್ಪ, ತುಸು ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ ಚೂರು, ಬಿರಿಯಾನಿ ಮಸಾಲ ಪೌಡರ್.
ವಿಧಾನ : ಮೊದಲು ಎಲ್ಲಾ ಮಸಾಲೆ ಸಾಮಗ್ರಿಗಳನ್ನು ಡ್ರೈ ರೋಸ್ಟ್ ಮಾಡಿ, ತರಿತರಿಯಾಗಿ ಪುಡಿ ಮಾಡಿಡಿ.
ದೊಡ್ಡ ಕುಕ್ಕರ್ ನಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಇದಕ್ಕೆ ಪಲಾವ್ ಎಲೆ ಹಾಕಿ ಚಟಪಟಾಯಿಸಿ. ಚೆನ್ನಾಗಿ ಜಜ್ಜಿದ ಶುಂಠಿ-ಬೆಳ್ಳುಳ್ಳಿ ಹಾಕಿ ಕೆದಕಬೇಕು. ನಂತರ ಹೆಚ್ಚಿದ ಹಸಿ ಮೆಣಸು, ಆಮೇಲೆ ಈರುಳ್ಳಿ ಹಾಕಿ ಬಾಡಿಸಿ. ಈರುಳ್ಳಿ ಹೊಂಬಣ್ಣಕ್ಕೆ ತಿರುಗಿದ ನಂತರ ಟೊಮೇಟೊ ಹಾಕಿ ಬಾಡಿಸಬೇಕು. ನಂತರ ಅರಿಶಿನ, ಬಿರಿಯಾನಿ ಮಸಾಲೆ, ಉಪ್ಪು, ಖಾರ, ಉಳಿದೆಲ್ಲ ಮಸಾಲೆ ಹಾಕಿ ಕೈಯಾಡಿಸಿ. ಮಂದ ಉರಿ ಮಾಡಿಕೊಂಡು ಚಿಕನ್ ಪೀಸ್ ಹಾಕಿ 5 ನಿಮಿಷ ಬಾಡಿಸಿ. ನಂತರ ಮೊಸರು ಬೆರೆಸಿ ಎಲ್ಲವೂ ಚೆನ್ನಾಗಿ ಮಿಶ್ರಗೊಳ್ಳುವಂತೆ ಮಾಡಿ. ಆಮೇಲೆ ಹೆಚ್ಚಿದ ಕೊ.ಸೊಪ್ಪು ಇತ್ಯಾದಿಗಳನ್ನು ಹಾಕಿ ಕೆದಕಿ ಕೆಳಗಿಳಿಸಿ.
ಇದೀಗ ರೈಸ್ ಲೇಯರ್ ರೆಡಿ ಆಗಬೇಕು. ಅದೇ ಕುಕ್ಕರ್ ನಲ್ಲಿ ತುಸು ತುಪ್ಪ ಬಿಸಿ ಮಾಡಿ. ಇದಕ್ಕೆ ಇಡಿಯಾದ ಚಕ್ಕೆ, ಲವಂಗ, ಪಲಾವ್ ಎಲೆ ಇತ್ಯಾದಿ ಹಾಕಿ ಚಟಾಪಟಾಯಿಸಿ. ನಂತರ ತುಸು ಬಿರಿಯಾನಿ ಡ್ರೈ ಮಸಾಲ, ಉಪ್ಪು, ಖಾರ ಎಲ್ಲಾ ಸೇರಿಸಿ. ಆಮೇಲೆ ಇದಕ್ಕೆ ಚಿಕನ್ ಮಿಶ್ರಣ ಸೇರಿಸಿ. ಎಲ್ಲವನ್ನೂ 2-3 ನಿಮಿಷ ಹದನಾಗಿ ಬಾಡಿಸಿ. ಪುದೀನಾ, ಕರಿಬೇವು ಇತ್ಯಾದಿ ಹಾಕಿ. ಅಗತ್ಯವಿದ್ದಷ್ಟು (ಮಿಶ್ರಣ ಉದುರುದುರಾಗಿ ಬರುವಂತೆ) ನೀರು ಬೆರೆಸಿ, 2 ಸೀಟಿ ಬರುವಂತೆ ಕೂಗಿಸಿ.
ಇದೀಗ ಫೈನ್ ಲೇಯರಿಂಗ್ ಗೆ ರೆಡಿ ಮಾಡಬೇಕು. ಮೊದಲು ಬೇರೆಯೇ ದೊಡ್ಡ ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ. ಇದರಲ್ಲಿ ಬೆಂದ ಮಿಶ್ರಣವನ್ನು ಒಂದು ಪದರವಾಗಿ ಹರಡಿರಿ. ಇದರ ಮೇಲೆ ಒಂದು ಪದರ ಈರುಳ್ಳಿ ಫ್ರೈ ಬರಲಿ. ಇದರ ಮೇಲೆ ತುಸು ಹೆಚ್ಚಿದ ಕೊ.ಸೊಪ್ಪು, ಕರಿಬೇವು, ಚಿಟಕಿ ಬಿರಿಯಾನಿ ಮಸಾಲೆ ಉದುರಿಸಿ. ಈ ರೀತಿ ಒಂದರ ನಂತರ ಒಂದು ಪದರ ಬರುವಂತೆ ಎಲ್ಲವನ್ನೂ ಪೇರಿಸುತ್ತಾ ಹೋಗಿ. ಎಲ್ಲಕ್ಕೂ ಮೇಲೆ ಮತ್ತೆ ತುಪ್ಪು ಹಾಕಿ, ಮುಚ್ಚಳ ಮುಚ್ಚಿರಿಸಿ 8-10 ನಿಮಿಷ ಹಾಗೇ ಒಲೆಯ ಮೇಲಿಡಿ, ವೆಯ್ಟ್ ಹಾಕುವುದು ಬೇಡ. ಬಡಿಸುವ ಮುನ್ನ ಇದರ ಮೇಲೆ ತುಪ್ಪದಲ್ಲಿ ಹುರಿದ ಡ್ರೈಫ್ರೂಟ್ಸ್, ಮತ್ತಷ್ಟು ಈರುಳ್ಳಿ ಫ್ರೈ ಉದುರಿಸಿ. ಈರುಳ್ಳಿ ಟೊಮೇಟೊ ರಾಯ್ತಾ ಜೊತೆ ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಚೆಟ್ಟಿನಾಡು ಚಿಕನ್ ಕರೀ
ಸಾಮಗ್ರಿ : 500 ಗ್ರಾಂ ಚಿಕನ್ ಪೀಸ್, ಅರ್ಧ ಕಪ್ ಟೊಮೇಟೊ ಪೇಸ್ಟ್, ಒಂದಿಷ್ಟು ಧನಿಯಾ, ಜೀರಿಗೆ, ಸೋಂಪು, ಕಾಳುಮೆಣಸು, ಚಕ್ಕೆ, ಲವಂಗ, ಸ್ಟಾರ್ ಅನೀಸ್, ಏಲಕ್ಕಿ, ಇಡಿಯಾದ ಕಾಶ್ಮೀರಿ ಒಣ ಮೆಣಸಿನಕಾಯಿ, ಅರ್ಧ ಗಿಟುಕು ತೆಂಗಿನ ತುರಿ, ಹೆಚ್ಚಿದ 4-5 ಈರುಳ್ಳಿ, 5-6 ಎಸಳು ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಅರಿಶಿನ, ಹುಳಿ ಮೊಸರು, 1 ತುಂಡು ಶುಂಠಿ, 2-3 ಲವಂಗದೆಲೆ, 2-3 ಎಸಳು ಕರಿಬೇವು, ತುಸು ಕೊ.ಸೊಪ್ಪು.
ವಿಧಾನ : ಮಸಾಲೆಗಾಗಿ ಮೊದಲು ಹೀಗೆ ರೆಡಿ ಮಾಡಿ. ಧನಿಯಾ, ಜೀರಿಗೆ, ಒಣ ಮೆಣಸಿನಕಾಯಿ, ಸೋಂಪು, ಕಾಳು ಮೆಣಸು, ಚಕ್ಕೆ, ಲವಂಗ, ಏಲಕ್ಕಿ, ಸ್ಟಾರ್ ಅನೀಸ್ ಎಲ್ಲಾ ಸೇರಿಸಿ ಹುರಿದುಕೊಂಡು, ತೆಂಗಿನ ತುರಿ ಜೊತೆ ನೀಟಾಗಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮೇಲಿನ ಮಸಾಲೆ ಜೊತೆ ಶುಂಠಿ-ಬೆಳ್ಳುಳ್ಳಿ ಸೇರಿಸಿ ಮತ್ತೆ ಪೇಸ್ಟ್ ಮಾಡಿಡಿ. ಈ ಮಸಾಲಾ ಪೇಸ್ಟ್ ಗೆ ಉಪ್ಪು, ಖಾರ, ಅರಿಶಿನ, ಮೊಸರು, ನಿಂಬೆರಸ ಬೆರೆಸಿಕೊಂಡು, ಅದಕ್ಕೆ ಚಿಕನ್ ಪೀಸ್ ಹಾಕಿ ಮ್ಯಾರಿನೇಟ್ ಗೊಳಿಸಿ. 1-2 ತಾಸು ಇದನ್ನು ಫ್ರಿಜ್ ನಲ್ಲಿರಿಸಿ ಸೆಟ್ ಮಾಡಿ.
ಈರುಳ್ಳಿಗಳನ್ನು ಬೇರೆಯಾಗಿ ಹಸಿ ಪೇಸ್ಟ್ ಮಾಡಿ. ಒಂದು ಚಿಕ್ಕ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಇದಕ್ಕೆ ಪಲಾವ್ ಎಲೆ ಹಾಕಿ ಚಟಪಟಾಯಿಸಿ. ನಂತರ ಈರುಳ್ಳಿ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ಆಮೇಲೆ ಟೊಮೇಟೊ ಪೇಸ್ಟ್ ಬೆರೆಸಿ, ಚೆನ್ನಾಗಿ ಕೆದಕುತ್ತಾ ನೀಟಾಗಿ ಮಸಾಲೆ ರೆಡಿ ಮಾಡಿ.
ನಂತರ ಮ್ಯಾರಿನೇಟ್ ಗೊಳಿಸಲಾದ ಚಿಕನ್ ನ್ನು ಅದರ ಮಸಾಲೆ ಸಮೇತ, ಎಣ್ಣೆ ಬಿಸಿ ಮಾಡಿದ ಕುಕ್ಕರ್ ಗೆ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಇದಕ್ಕೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ. ಅಗತ್ಯವಿದ್ದಷ್ಟು ನೀರು ಬೆರೆಸಿ (ಗ್ರೇವಿ ತುಂಬಾ ತೆಳು ಆಗಬಾರದು) 1 ಸೀಟಿ ಕೂಗುವಂತೆ ಬೇಯಿಸಿ. ಕುಕ್ಕರ್ ತಣಿದಾಗ, ಇದಕ್ಕೆ ತುಂಡರಿಸಿದ ಒಣ ಮೆಣಸಿನಕಾಯಿ, ಕರಿಬೇವಿನ ಒಗ್ಗರಣೆ ಕೊಡಿ. ಒಂದಿಷ್ಟು ಕೊ.ಸೊಪ್ಪು ಉದುರಿಸಿ ಬಿಸಿ ಬಿಸಿಯಾಗಿ ಅನ್ನದ ಜೊತೆ ತುಪ್ಪ ಹಾಕಿ ಸವಿಯಲು ಕೊಡಿ.

ಉಡುಪಿ ಸಾಂಬಾರು
ಸಾಮಗ್ರಿ : 1 ಕಪ್ ತೊಗರಿ ಬೇಳೆ, ತುಂಡರಿಸಿದ 4-5 ತಾಜಾ ನುಗ್ಗೇಕಾಯಿ, ಒಂದಿಷ್ಟು ಹೋಳು ಮಾಡಿದ ಆಲೂ, ಕ್ಯಾರೆಟ್, ಬೀನ್ಸ್, ಸೋರೆಕಾಯಿ (ಒಟ್ಟಾರೆ 2 ಕಪ್), ರುಚಿಗೆ ತಕ್ಕಷ್ಟು ಉಪ್ಪು, ಹುಣಿಸೇ ಕಿವುಚಿದ ರಸ, ಹುಳಿ ಟೊಮೇಟೊಗಳ ಪೇಸ್ಟ್, ಸಾಂಬಾರ್ ಪುಡಿ, ತುಸು ಬೆಲ್ಲ, ಶುಂಠಿ, ಒಗ್ಗರಣೆಗೆ ಬೇಕಾದ ಸಾಮಗ್ರಿ, ಕರಿಬೇವು, ಎಣ್ಣೆ, ಅರಿಶಿನ, ತುಸು ತುಪ್ಪ.
ವಿಧಾನ : ಉಡುಪಿ ಸಾಂಬಾರ್ ಪುಡಿಗಾಗಿ ಮೊದಲು 1-1 ದೊಡ್ಡ ಚಮಚ ಕಡಲೆಬೇಳೆ, ಉದ್ದಿನಬೇಳೆ, ತುಸು ಜೀರಿಗೆ, ಸೋಂಪು, ಮೆಂತ್ಯ, ಧನಿಯಾ, ಇಂಗು, ಒಣ ಮೆಣಸಿನಕಾಯಿ, ಇತ್ಯಾದಿ ಎಲ್ಲಾ ಸಾಮಗ್ರಿಗಳನ್ನೂ ತುಸು ತುಪ್ಪದಲ್ಲಿ ಹುರಿದು, ಅರ್ಧ ಗಿಟುಕು ತೆಂಗಿನ ತುರಿ ಜೊತೆ ನೀಟಾಗಿ ರುಬ್ಬಿಕೊಳ್ಳಿ.
ಹಿಂದಿನ ರಾತ್ರಿ ನೆನೆಸಿದ ತೊಗರಿ ಬೇಳೆಯನ್ನು ಮಾರನೇ ದಿನ ಎಲ್ಲಾ ತರಕಾರಿ ಹೋಳು, ತುಸು ನೀರು, ಎಣ್ಣೆ, ಅರಿಶಿನ ಬೆರೆಸಿ ಕುಕ್ಕರ್ ನಲ್ಲಿ ಹದನಾಗಿ ಬೇಯಿಸಿಕೊಳ್ಳಿ. ಇದನ್ನು ದಪ್ಪ ತಳದ ಪಾತ್ರೆಗೆ ರವಾನಿಸಿ, ಹುಣಿಸೆ ಕಿವುಚಿದ ರಸ, ಬೆಲ್ಲ, ಉಪ್ಪು ಹಾಕಿ ಮಂದ ಉರಿಯಲ್ಲಿ ಕುದಿಸಬೇಕು. ನಂತರ ಇದಕ್ಕೆ ರುಬ್ಬಿದ ಮಿಶ್ರಣ, ಟೊಮೇಟೊ ಪೇಸ್ಟ್ ಸೇರಿಸಿ ಕುದಿಸಬೇಕು. ಕೊನೆಯಲ್ಲಿ ಇದಕ್ಕೆ ಚಿಕ್ಕ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಟ್ಟು ಅದನ್ನು ಸಾಂಬಾರಿಗೆ ಬೆರೆಸಿರಿ. ಬಿಸಿ ಬಿಸಿಯಾದ ಇದನ್ನು ಅನ್ನದ ಜೊತೆ ಸವಿಯಲು ಕೊಡಿ.

ಹಲಸಿನಕಾಯಿ ಪಲ್ಯ
ಸಾಮಗ್ರಿ : 500 ಗ್ರಾಂ ಶುಚಿಗೊಳಿಸಿ ಹೆಚ್ಚಿಕೊಂಡ ಹಲಸಿನಕಾಯಿ, 1 ಗಿಟುಕು ತೆಂಗಿನ ತುರಿ, ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಮೆಂತ್ಯ, 2-3 ಒಣ ಮೆಣಸಿನಕಾಯಿ, ಉದ್ದಕ್ಕೆ ಹೆಚ್ಚಿಕೊಂಡ 7-8 ಹಸಿ ಮೆಣಸು ರುಚಿಗೆ ತಕ್ಕಷ್ಟು ಉಪ್ಪು, ಖಾರ, ವಾಂಗೀಭಾತ್ ಪುಡಿ (ರೆಡಿಮೇಡ್ ಲಭ್ಯ), ತುಸು ಬೆಲ್ಲ, ಹುಣಿಸೆ ಕಿವುಚಿದ ರಸ, ತುಪ್ಪದಲ್ಲಿ ಹುರಿದ ಒಂದಿಷ್ಟು ಗೋಡಂಬಿ, 4-5 ಎಸಳು ಕರಿಬೇವು, ಇಂಗು, ಅರಿಶಿನ.
ವಿಧಾನ : ಹಲಸಿನ ಹೋಳನ್ನು ಕುಕ್ಕರ್ ನಲ್ಲಿ ಹುಣಿಸೆ ರಸ, ಅರಿಶಿನ, ಚಿಟಕಿ ಉಪ್ಪು ಹಾಕಿ, 1 ಸೀಟಿ ಬರುವಂತೆ ಕೂಗಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಇಂಗು ಹಾಕಿದ ನಂತರ ಕರಿಬೇವು ಸೇರಿಸಿ. ನಂತರ ತುಂಡರಿಸಿದ ಹಸಿ/ಒಣ ಮೆಣಸು ಹಾಕಿ ಬಾಡಿಸಿ. ನಂತರ ಬೆಂದ ಹಲಸಿನ ಹೋಳು (ಹುಣಿಸೆ ನೀರು ಉಳಿದಿದ್ದರೆ ಅದನ್ನೂ ಸೇರಿಸಿ) ಹಾಕಿ ಕೈಯಾಡಿಸಿ. ಇದಕ್ಕೆ ತೆಂಗಿನ ತುರಿ, ತುಸು ವಾಂಗೀಭಾತ್ ಪುಡಿ, ಬೆಲ್ಲ ಎಲ್ಲಾ ಸೇರಿಸಿ ಕೆದಕಬೇಕು. ಕೊನೆಯಲ್ಲಿ ಗೋಡಂಬಿ ಸೇರಿಸಿ ಕೆಳಗಿಳಿಸಿ. ಬಿಸಿ ಬಿಸಿ ಕೆಂಪಕ್ಕಿ ಅನ್ನಕ್ಕೆ ಧಾರಾಳ ತುಪ್ಪ ಹಾಕಿ, ಬಿಸಿ ಬಿಸಿ ಟೊಮೇಟೊ ತಿಳಿಸಾರು, ಕರಿದ ಹಲಸಿನ ಹಪ್ಪಳದ ಜೊತೆ ಈ ಪಲ್ಯ ನೆಂಚಿಕೊಳ್ಳಲು ಬಡಿಸಿರಿ.

ಸ್ವಾದಿಷ್ಟ ಕೇಸರಿಭಾತ್
ಸಾಮಗ್ರಿ : 1 ಕಪ್ ಸಣ್ಣ ರವೆ, ಅದರಲ್ಲಿ ಮುಕ್ಕಾಲು ಭಾಗ ಸಕ್ಕರೆ, ಅರ್ಧ ಕಪ್ ತುಪ್ಪ, ಹಾಲಲ್ಲಿ ನೆನೆಸಿದ ಕೇಸರಿ, ಅರ್ಧ ಕಪ್ ಸಣ್ಣಗೆ ಹೆಚ್ಚಿದ ಅನಾನಸ್, ತುಸು ಏಲಕ್ಕಿ ಪುಡಿ, 4-5 ಲವಂಗ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು, 1 ಕಪ್ ಹಾಲು.
ವಿಧಾನ : ಮೊದಲು ತುಪ್ಪದಲ್ಲಿ ಡ್ರೈ ಫ್ರೂಟ್ಸ್ ಹುರಿದು ಬೇರೆಯಾಗಿಡಿ. ನಂತರ ಇನ್ನಷ್ಟು ತುಪ್ಪ ಹಾಕಿಕೊಂಡು ಲವಂಗ, ರವೆ ಹಾಕಿ ಘಮ್ಮೆನ್ನುವಂತೆ ಮಂದ ಉರಿಯಲ್ಲಿ ಹುರಿದು ಪಕ್ಕಕ್ಕಿಡಿ. ಮತ್ತೆ ತುಪ್ಪ ಬಿಸಿ ಮಾಡಿ ಅನಾನಸ್ ಹೋಳು ಹಾಕಿ ಹದನಾಗಿ ಬಾಡಿಸಿ. ಇದಕ್ಕೆ ಸಕ್ಕರೆ ಹಾಕಿ ಕೈಯಾಡಿಸುತ್ತಾ, ಹಾಲು ಬೆರೆಸಿ 1-2 ಕುದಿ ಬರಿಸಿ. ಅದಕ್ಕೆ ಕೇಸರಿ ಸೇರಿಸಿ. ನಂತರ ಉಪ್ಪಿಟ್ಟಿಗೆ ಮಾಡುವಂತೆ ಎಡಗೈಯಿಂದ ರವೆ ಸೇರಿಸುತ್ತಾ ನಿಧಾನವಾಗಿ ಕೆದಕಬೇಕು. ನಡುನಡುವೆ ತುಪ್ಪ ಬೆರೆಸುತ್ತಾ ಕೈಯಾಡಿಸಿ ಕೊನೆಯಲ್ಲಿ ಡ್ರೈ ಫ್ರೂಟ್ಸ್ ಸೇರಿಸಿ, ಎಲ್ಲವೂ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ. ಬಿಸಿ ಇರುವಾಗಲೇ ಇದರ ಮೇಲೆ ತುಪ್ಪ ಹಾಕಿ ಸವಿಯಲು ಕೊಡಿ.

ಬೇಳೆ ಹೋಳಿಗೆ
ಸಾಮಗ್ರಿ : 1-1 ಕಪ್ ತೊಗರಿ ಬೇಳೆ, ಕಡಲೆಬೇಳೆ, 2 ಕಪ್ ಪುಡಿ ಮಾಡಿದ ಬೆಲ್ಲ, 1 ಕಪ್ ಮೈದಾ, 4-5 ಚಮಚ ಚಿರೋಟಿ ರವೆ, ತುಸು ಏಲಕ್ಕಿ ಪುಡಿ, ಚಿಟಕಿ ಪಚ್ಚ ಕರ್ಪೂರ, ಗೋಡಂಬಿ ಚೂರು, ಅರ್ಧ ಸೌಟು ತುಪ್ಪ.
ವಿಧಾನ : ಮೊದಲು ಬೇಳೆಗಳನ್ನು ಬೇಯಿಸಿ. ಕೆಳಗಿಳಿಸಿ ಆರಿದ ನಂತರ, ಬೆಲ್ಲ ಸೇರಿಸಿ ನೀಟಾಗಿ ರುಬ್ಬಿಕೊಳ್ಳಿ. ಇದು ಆದಷ್ಟೂ ಗಟ್ಟಿ ಇರಬೇಕು. ಇದಕ್ಕೆ ತುಪ್ಪದಲ್ಲಿ ಹುರಿದ ಗೋಂಡಬಿ ಚೂರು, ಏಲಕ್ಕಿ, ಚಿಟಕಿ ಪಚ್ಚ ಕರ್ಪೂರ ಸೇರಿಸಿದರೆ ಹೂರಣ ರೆಡಿ. ಮೈದಾ ಹಿಟ್ಟಿಗೆ ರವೆ, ಚಿಟಕಿ ಅರಿಶಿನ, ತುಸು ನೀರು ಬೆರೆಸಿ ಪೂರಿ ಮಿಶ್ರಣಕ್ಕೆ ಕಣಕ ಕಲಸಿಡಿ. ಇದನ್ನು 1 ಗಂಟೆ ಕಾಲ ನೆನೆಯಲು ಬಿಟ್ಟು, ತುಪ್ಪ ಬೆರೆಸಿ, ಚೆನ್ನಾಗಿ ನಾದಿಕೊಳ್ಳಿ. ನಂತರ ಸಣ್ಣ ಸಣ್ಣ ಉಂಡೆ ಮಾಡಿ ತುಪ್ಪ ಸವರಿ ಲಟ್ಟಿಸಿ, ಅದರ ಮಧ್ಯೆ ನಿಂಬೆ ಗಾತ್ರ ಹೂರಣ ಇರಿಸಿ, ಪೂರ್ತಿ ಕವರ್ ಮಾಡಿ ಮತ್ತೆ ಲಟ್ಟಿಸಿ. ಇದನ್ನು ತವಾ ಮೇಲೆ ಹಾಕಿ ತುಪ್ಪ ಬಿಡುತ್ತಾ ಎರಡೂ ಬದಿ ಬೇಯಿಸಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿ, ಬಿಸಿ ಇರುವಾಗಲೇ ತುಪ್ಪದ ಜೊತೆ ಅಥವಾ ಹಾಲಿನೊಂದಿಗೆ ಸವಿಯಲು ಕೊಡಿ.





