ಯುಗಾದಿ ಸೃಷ್ಟಿಯ ಸಂಕೇತ. ಸೃಷ್ಟಿ ಹೊಸತನ್ನು ಪ್ರತಿನಿಧಿಸುತ್ತದೆ. ಒಟ್ಟಿನಲ್ಲಿ ಸಿಹಿ ಕಹಿ, ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಬೇಕೆಂಬ ದಿವ್ಯ ಸಂದೇಶವನ್ನು ಸಾರುವ ಈ ಯುಗಾದಿ ಹಬ್ಬದ ಆಚರಣೆಯ ಬಗ್ಗೆ ವಿವರಗಳನ್ನು ತಿಳಿಯೋಣವೇ…..?
ಯುಗಾದಿ ಹಬ್ಬ ಮತ್ತೆ ಬಂದಿದೆ! ಹಿಂದಿನ ಕ್ರೋಧಿನಾಮ ಸಂವತ್ಸರ ಕಳೆದು ಶ್ರೀವಿಶ್ವವಸು ನಾಮ ಸಂವತ್ಸರಕ್ಕೆ ಕಾಲಿಟ್ಟಿದೆ. ಈ ಹಬ್ಬ ಹಳೆಯದಕ್ಕೆ ಹೊಸತನ್ನು ಸೇರಿಸುವ ಕೊಂಡಿ. ಫಾಲ್ಗುಣ ಬಹುಳ ಅಮವಾಸ್ಯೆಯ ದಿನ ಹಳೆಯ ವರ್ಷಕ್ಕೆ ವಿದಾಯ ಹೇಳಿ. ಮಾರನೆಯ ದಿನ ಚೈತ್ರ ಮಾಸದ ಶುಕ್ಲ ಪ್ರತಿಪದೆಯೆಂದು ಬರುವ ಈ ಯುಗಾದಿ ಹಬ್ಬವನ್ನು ವರ್ಷದ ಮೊದಲ ಹಬ್ಬವಾಗಿ ಆಚರಿಸುತ್ತೇವೆ. ಹಿಂದಿನ ವರ್ಷದ ಕಹಿ ಘಟನೆಗಳನ್ನು ಮರೆತು ಸಿಹಿ ಸಂತಸದ ಕ್ಷಣಗಳನ್ನು ನೆನೆಯುತ್ತಾ ಭವಿಷ್ಯದ ಸುಖಕ್ಕಾಗಿ ಯುಗಾದಿಯನ್ನು ಆಚರಿಸುತ್ತೇವೆ.

ಎರಡು ಬಾರಿ ಆಚರಣೆ
ಸೂರ್ಯ ಚಂದ್ರರ ಹಿನ್ನೆಲೆಯಲ್ಲಿ ಯುಗಾದಿ ಎರಡು ಬಾರಿ ಆಚರಣೆಯಲ್ಲಿ ಇದೆ. ನಮ್ಮಲ್ಲಿ ಸೌರಮಾನ ಚಾಂದ್ರಮಾನದ ಎರಡು ಹಬ್ಬಗಳು ಪ್ರದೇಶಾನುಸಾರವಾಗಿ ರೂಢಿಯಲ್ಲಿದೆ. ಈ ಚಾಂದ್ರಮಾನ ಯುಗಾದಿಯನ್ನು ಪ್ರಥಮಾ ತಿಥಿಯಲ್ಲಿಯೇ ಸಾಂಪ್ರದಾಯಿಕವಾಗಿ ಆಚರಿಸಬೇಕು. ಸೌರಮಾನ ಯುಗಾದಿಯನ್ನು ಮೇಷ ಸಂಕ್ರಣದಲ್ಲಿ ಆಚರಿಸಬೇಕು. ಆಚರಣೆಯಲ್ಲಿ ಕೆಲವು ವಿಶೇಷಗಳಿವೆ.

ಪುರಾಣದ ಹಿನ್ನೆಲೆ
ಪುರಾಣದ ಹಿನ್ನೆಲೆ ಪ್ರಕಾರ ಬ್ರಹ್ಮನು ಪರಿಪೂರ್ಣವಾದ ಸೃಷ್ಟಿ ಕಾರ್ಯವನ್ನು ಮುಗಿಸಿದ್ದು ಯುಗಾದಿಯ ದಿನ. ಕೃತ ಯುಗದ ಪ್ರಾರಂಭವಾದ ದಿನ. ಶಕರು, ಹೂಣರನ್ನು ಸೋಲಿಸಿ ವಿಜಯವನ್ನು ಪಡೆದ ದಿನ. ಈ ದಿನದಿಂದಲೇ ಶಾಲಿವಾಹನ ಶಕೆ ಪ್ರಾರಂಭವಾಯಿತು. ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದನು. ಶ್ರೀರಾಮಚಂದ್ರನು ಚೈತ್ರ ಶುದ್ಧ ಪಾಡ್ಯಮಿಯಂದೇ ವಿಜಯೋತ್ಸವ ಆಚರಿಸಿದ ದಿನ. `ಯುಗಾದಿ’ ಶುಭದಿನದಂದು ಶ್ರೀರಾಮಚಂದ್ರ ಪಟ್ಟಾಭಿಷಿಕ್ತನಾಗುತ್ತಾನೆ. ಭಗವಂತ ಶ್ರೀಕೃಷ್ಣನು ನೃಪಕೇತುವಿಗೆ ದರ್ಶನ ನೀಡಿದ್ದು ಈ ವಿಕ್ರಮನಾಮ ಸಂವತ್ಸರದ ಚೈತ್ರ ಮಾಸದ ಮೊದಲ ದಿನ. ಗಂಗೆ ಶಿವನ ಜಟೆಯಲ್ಲಿ ಬಂಧಿತಳಾಗಿದ್ದು ಚೈತ್ರ ಮಾಸದ ರುಧಿರೋದ್ಗಾರಿ ಸಂವತ್ಸರದ ಯುಗಾದಿಯಂದು. ಈ ಯುಗಾದಿ ಹಬ್ಬ ಜೈನರಿಗೂ ಪವಿತ್ರವಾದದ್ದು. ಹದಿನಾಲ್ಕನೆಯ ತೀರ್ಥಂಕರನಾದ ಮಲ್ಲಿನಾಥನು ಜನಿಸಿದ್ದು, ಯುಗಾದಿಯ ದಿನದಂದು ಎಂದು ಜೈನ ಪುರಾಣ ತಿಳಿಸುತ್ತದೆ.
ಯುಗಾದಿ ಎಂದರೆ ಯುಗದ ಆದಿ. `ಸೃಷ್ಟಿಯ ಪ್ರಥಮ ಕ್ಷಣ.’ ಮೊದಲ ದಿನ ಹೌದು. ಆ ಮೊದಲ ದಿನ ಪ್ರತಿ ವರ್ಷ ಬರುತ್ತದೆ ಎಂಬುದು ವಿಶೇಷ. ಆ ಪ್ರಥಮ ಕ್ಷಣ ನಮ್ಮ ಜೀವನದುದ್ದಕ್ಕೂ ಜೊತೆಯಾಗಿರುತ್ತದೆ ಎಂಬುದು ಸ್ವಾರಸ್ಯಕರ. ಮಾಹೆಗಳಲ್ಲಿ ಚೈತ್ರ ಇದ್ದಂತೆ, ಋತುಗಳಲ್ಲಿ ವಸಂತ ಋತು ಇದ್ದಂತೆ, ಹಾಗಾಗಿ ಎಲ್ಲ ಚೈತ್ರ ಶುದ್ಧ ಪ್ರಥಮ ದಿನ ಇರುವುದರಿಂದ ಈ ದಿನಕ್ಕೆ ಹೆಚ್ಚು ಮಹತ್ವ ಬಂದಿದೆ.

ಯುಗಾದಿ ಸ್ವಾಗತಕ್ಕೆ ಸಜ್ಜು
ಯುಗಾದಿ ಹಬ್ಬ ಎಲ್ಲಾ ಹಬ್ಬದ ಹಾಗಲ್ಲ. ಅದು ಪ್ರಕೃತಿಯೊಂದಿಗೆ ನೇರ ಸಂಬಂಧ ಹೊಂದಿರುವಂಥದ್ದು. ಯುಗಾದಿ ಬಂದಿತೆಂದು ನಿಸರ್ಗವೇ ನಮಗೆ ಹೇಳುತ್ತದೆ. ಯುಗಾದಿಯನ್ನು ಸಂತೋಷ ಸಂಭ್ರಮದಿಂದ ಸ್ವಾಗತಿಸಲು ಇಡೀ ಪ್ರಕೃತಿ ಸಜ್ಜಾಗಿರುತ್ತದೆ. ಎಲ್ಲೆಡೆ ಕಂಗೊಳಿಸುತ್ತಿರುವ ಮಾವ ಬೇವಿನ ಚಿಗುರು ಹೊಸ ಚೈತನ್ಯವನ್ನು ಪ್ರತಿಬಿಂಬಿಸುವ ಹೊತ್ತಿನಲ್ಲಿಯೇ, ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಿಕೊಂಡ ಮರಗಿಡಗಳು ಕಣ್ಣಿಗೆ ಸೊಬಗನ್ನು, ಮನಕ್ಕೆ ಉಲ್ಲಾಸವನ್ನು ನೀಡುತ್ತದೆ. ಮಾವು, ಬೇವು ಚಿಗುರಿ, ಆ ಚಿಗುರಿಗೆ ಮನಸೋತ ಕೋಗಿಲೆ ಹಾಡಲು ವಸಂತ ನಲಿಯಬೇಕು. ಇದು ಪ್ರಕೃತಿಯ ಸಹಜ ಧರ್ಮ.

ದೇವರ ದಿವ್ಯ ಸಂದೇಶ
ವರ್ಷದಲ್ಲಿನ ಮೂರೂವರೆ ಮುಹೂರ್ತಗಳಲ್ಲಿ ಯುಗಾದಿ ಹಬ್ಬ ಪ್ರಮುಖವಾಗಿರುವುದು. ಈ ದಿನಗಳಂದು ಮುಹೂರ್ತ ನೋಡು ಅವಶ್ಯಕತೆ ಇಲ್ಲ. ಈ ದಿನಗಳಲ್ಲಿ ಪ್ರತಿ ಘಳಿಗೆಯೂ ಶುಭ ಮುಹೂರ್ತವೇ ಆಗಿರುತ್ತದೆ.
ಪ್ರತಿಯೊಂದು ಹಬ್ಬ ನಮ್ಮ ಬದುಕಿಗೆ ದಿವ್ಯ ಸಂದೇಶವನ್ನೇ ನೀಡುತ್ತದೆ. ಯುಗಾದಿ ಹಬ್ಬದಂದು ದೇವರಿಗೆ ಅರ್ಪಿಸುವ ಬೇವುಬೆಲ್ಲ, ದೈವೀಗುಣ ಮೈಗೂಡಿಸಿಕೊಳ್ಳುತ್ತಾ (ಬೆಲ್ಲ), ಪ್ರಕೃತಿಗಾಗಿ ಹಂಬಲಿಸುತ್ತ (ಬೇವು) ತಾಳ್ಮೆಗೆಡದೆ ಮುನ್ನಡಿಯುವವರಿಗೆ ತನ್ನ ಕೃಪಾ ಪ್ರಸಾದದ ಸವಿ ಕಟ್ಟಿಟ್ಟಿದ್ದು ಎಂಬ ದೇವರ ದಿವ್ಯ ಸಂದೇಶವನ್ನೇ ಬಿಂಬಿಸುತ್ತದೆ.

ಪ್ರಾದೇಶಿಕ ವಿಭಿನ್ನತೆ
ಯುಗಾದಿ ಹಬ್ಬವನ್ನು ಬೇವುಬೆಲ್ಲದ ಹಬ್ಬ ಎಂದು ಕರೆಯುತ್ತಾರೆ. ಹಬ್ಬದ ಮೂಲ ಉದ್ದೇಶ ಒಂದೇ ಆಗಿದ್ದರೂ ಹಬ್ಬಗಳ ಆಚರಣೆಗಳಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಕೆಲವು ವ್ಯತ್ಯಾಸಗಳಿವೆ. ಮಹಾರಾಷ್ಟ್ರದಲ್ಲಿ `ಗುಡಿಪಾಡ್ಯ’ ಎನ್ನುತ್ತಾರೆ. ಪಂಜಾಬಿನಲ್ಲಿ ‘ಬೈಸಾಕಿ,’ ಅಸ್ಸಾಂನಲ್ಲಿ `ಬಿಹು,’ ಕೇರಳದಲ್ಲಿ `ವಿಶು’ ಅಸ್ಸಾಂನಲ್ಲಿ `ಗೊರುಬಹು,’ ಕಾಶ್ಮೀರದಲ್ಲಿ `ನೌರೋಝ,’ ರಾಜಸ್ಥಾನದಲ್ಲಿ `ತಪನ’, ಸಿಂಧಿಗಳು `ಚೇತಿಚಾಂದ್,’ ಮಣಿಪುರಿ `ಸಾಜಿಬುನೊಂಗಮಾ,’ ತಮಿಳುನಾಡು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ `ಸೌರಮಾನ ಯುಗಾದಿ (ಪುತ್ತಾಂಡು ವಿಳಾ),’ ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ `ಯುಗಾದಿ’ ಎಂದು ಆಚರಣೆ ಮಾಡುತ್ತಾರೆ.
ಒಟ್ಟಿನಲ್ಲಿ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ಬಯಸುವುದೇ ಹಬ್ಬದ ಉದ್ದೇಶವಾಗಿದೆ. ಈ ಹಬ್ಬ ಭಕ್ತಿ, ಜ್ಞಾನ, ಕರ್ಮಗಳ ತ್ರಿವೇಣಿ ಸಂಗಮ.
ಹಬ್ಬದ ಸಂಭ್ರಮ
ಯುಗಾದಿ ಹಬ್ಬವನ್ನು ಸಂತೋಷ ಸಂಭ್ರಮದಿಂದ ಆಚರಿಸುತ್ತಾರೆ. ಬ್ರಾಹಿ ಮುಹೂರ್ತದಲ್ಲಿ ಎದ್ದು ಮನೆ ಮುಂದೆ ಗೋವಿನ ಸಗಣಿಯಿಂದ ಸಾರಿಸಿ, ರಂಗವಲ್ಲಿ ಬಿಡುತ್ತಾರೆ. ಬಣ್ಣ ಬಣ್ಣದ ಚೆಲುವಿನ ಚಿತ್ತಾರಗಳಿಂದ ರಂಗೋಲಿಗಳನ್ನು ಬಿಡಿಸುವುದೇ ಒಂದು ವೈಶಿಷ್ಟ್ಯ. ಮನೆಯ ಮುಂಭಾಗಕ್ಕೆ ಅಷ್ಟದಳ ಪದ್ಮ, ಸ್ವಸ್ತಿಕ, ಕಮಲ, ರಂಗೋಲಿಯನ್ನು ಬಿಡಿಸುತ್ತಾರೆ. ಮನೆಯನ್ನು ಮಾವು ಬೇವುಗಳಿಂದ ಸಿಂಗರಿಸುತ್ತಾರೆ. ಗೋಶಾಲೆ, ತುಳಸಿ ಕಟ್ಟೆ, ದೇವರ ಮನೆಗಳನ್ನು ತಳಿರು ತೋರಣಗಳಿಂದ ಅಲಂಕರಿಸುತ್ತಾರೆ. ಮನೆಯ ಗೋವು, ಎತ್ತುಗಳಿಗೆ ಸ್ನಾನ ಮಾಡಿಸಿ, ಬಣ್ಣದ ಅಲಂಕಾರ ಮಾಡಿ ಹೂವಿನಿಂದ ಅಲಂಕರಿಸುತ್ತಾರೆ. ಅಭ್ಯಂಗ ಸ್ನಾನ ಒಳ್ಳೆಯದು ಕುಟುಂಬದ ಸದಸ್ಯರೆಲ್ಲರೂ ಬೇವು, ಎಣ್ಣೆ, ಅರಿಶಿನ ಬೆರೆಸಿ ಕಾಯಿಸಿ ಮೈಗೆ ಹಚ್ಚಿಕೊಂಡು ಸ್ನಾನ ಮಾಡಬೇಕೆಂಬ ಸಂಪ್ರದಾಯವಿದೆ. ವೈಶಿಷ್ಟ್ಯಕರ ಬಿಸಿಲಿಗೆ ಧಗೆ ಹೆಚ್ಚಾಗುತ್ತದೆ. ಈ ಧಗೆಯನ್ನು ತಡೆಗಟ್ಟಲು ಮೈಯಲ್ಲಿ ಶಕ್ತಿ ಬೇಕು. ಅದಕ್ಕಾಗಿ ದೇಹದಲ್ಲಿ ಎಣ್ಣೆ ಅಂಶವನ್ನು ಹೆಚ್ಚಿಸಿಕೊಳ್ಳಬೇಕು. ಈ ಕಾರಣದಿಂದಲೇ ಈ ಹಬ್ಬದಲ್ಲಿ ಬೇವು ಮಿಶ್ರಿತ ಎಣ್ಣೆ ಹಚ್ಚಿಕೊಂಡು ಬಿಸಿಲಿಗೆ ಮೈಯೊಡ್ಡಿ, ನಂತರ ಅಭ್ಯಂಜನ ಸ್ನಾನ ಮಾಡುತ್ತಾರೆ. ಆರೋಗ್ಯ ದೃಷ್ಟಿಯಿಂದ ಇದು ತುಂಬಾ ಒಳ್ಳೆಯದು. ನಂತರ ಎಲ್ಲರೂ ಹೊಸ ಬಟ್ಟೆ ಧರಿಸಿ, ದೇವರಿಗೆ ದೀಪ ಬೆಳಗಿಸಿ, ಗುರು ಹಿರಿಯರಿಗೆ ಕಾಲು ಮುಟ್ಟಿ ನಮಸ್ಕರಿಸುತ್ತಾರೆ. ದೇವರ ಹತ್ತಿರ ಸರ್ವಸಂಪತ್ತನ್ನು ಇಟ್ಟು ಸಂಕಲ್ಪ ವಿಧಿಯೊಂದಿಗೆ ದೇವರಿಗೆ ಅಭಿಷೇಕ ಸಲ್ಲಿಸಿ, ಧೂಪ ದೀಪ, ನೈವೇದ್ಯ ಅರ್ಪಿಸುತ್ತಾರೆ. ಜೊತೆಗೆ ನಿಂಬಕ ದಳಗಳನ್ನು ನಿವೇದಿಸುತ್ತಾರೆ. ಹಾಗೆ ಹೊಸ ವರ್ಷದ ಪಂಚಾಂಗವನ್ನು ಪೂಜಿಸುತ್ತಾರೆ. ಈ ರೀತಿ ಮಾಡುವುದರಿಂದ ಎಲ್ಲ ಪಾಪಗಳು ನಾಶವಾಗುತ್ತವೆ. ಸಂಕಟಗಳು ಬರುವುದಿಲ್ಲ, ಆಯುಷ್ಯ ವೃದ್ಧಿಯಾಗುತ್ತದೆ ಮತ್ತು ದವಸ ಧಾನ್ಯಗಳ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
ಬೇವು ಬೆಲ್ಲ ಸ್ವೀಕಾರ
ಯುಗಾದಿ ಹಬ್ಬದ ವೈಶಿಷ್ಟ್ಯ ಬೇವು ಬೆಲ್ಲದ ಸೇವನೆ. ಇವೆರಡನ್ನು ಸೇರಿಸಿ ದೇವರಿಗೆ ನೈವೇದ್ಯ ಮಾಡುತ್ತಾರೆ. ಬೇವು ಕಹಿಗೆ ಸಂಕೇತವಾದರೆ, ಬೆಲ್ಲ ಸಿಹಿಗೆ ಸಂಕೇತ. ಬೇವಿನ ಹೂ ಎಲೆಗಳಿಗಿಂತ ಶ್ರೇಷ್ಠವಾದುದು. ದೇವತಾ ಪ್ರಾರ್ಥನೆ ಮಾಡಿ, ಬೇವು ಬೆಲ್ಲ ಪ್ರಸಾದ ರೂಪವಾಗಿ ಸ್ವೀಕರಿಸುತ್ತಾರೆ. ಇದನ್ನು ಸ್ವೀಕರಿಸುವಾಗ ಈ ಶ್ಲೋಕ ಹೇಳುತ್ತಾರೆ.
“ಶತಾಯುವರ್ಜ್ರ ದೇಹಾಯ ಸರ್ವ ಸಂಪತ್ಕರಾಯಕ, ಸರ್ವಾರಿಷ್ಟ ವಿನಾಶ ನಿಂಬಕ ದಳ ಭಕ್ಷಣ.’ ಬೇವಿನ ದಳದ ಭಕ್ಷಣೆಯಿಂದ ದೇಹ ವಜ್ರಕಾಯವಾಗುತ್ತದೆ. ಸಕಲ ಅರಿಷ್ಟಗಳೂ ನಿವಾರಣೆಯಾಗಿ ಸರ್ವ ಸಂಪತ್ತೂ ನಮ್ಮದಾಗುತ್ತದೆ ಎಂದು ಇದರ ಅರ್ಥ. ಬೇವು ಬೆಲ್ಲವನ್ನು ಪ್ರಸಾದ ರೂಪದಲ್ಲಿ ಎಲ್ಲರಿಗೂ ಕೊಟ್ಟು ಶುಭಾಶಯಗಳನ್ನು ಹೇಳುತ್ತಾರೆ.
ಬೇವಿನೊಂದಿಗೆ ಬೆಲ್ಲ ಏಕೆ?
ಬೇವಿನೊಂದಿಗೆ ಬೆಲ್ಲವೇ ಏಕೆ? ಇದಕ್ಕೂ ಆಯುರ್ವೇದದ ಕಾರಣಗಳಿವೆ. ಬೇವು ಕಹಿಯ ಸಂಕೇತವಾದರೆ, ಬೆಲ್ಲ ಸಿಹಿಯ ಸಂಕೇತ. ಪ್ರತಿಯೊಬ್ಬರ ಜೀವನದಲ್ಲಿಯೂ ಕೇವಲ ಸಿಹಿಯೊಂದೇ ಅಂದರೆ ಸುಖವೇ ಬರುವುದು ಸಾಧ್ಯವಿಲ್ಲ. ಆಗಾಗ್ಗೆ ಕಹಿ ಅಂದರೆ ಕಷ್ಟಗಳು ಬರುತ್ತಿರುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಕಷ್ಟ ಸುಖ ಇದ್ದೇ ಇರುತ್ತದೆ. ಆದ್ದರಿಂದ ಬೇವು ಬೆಲ್ಲವನ್ನು ಸವಿಯುವುದರ ಮೂಲಕ ಕಷ್ಟ ಸುಖವನ್ನು ಸಮನಾಗಿ ಕಾಣಬೇಕೆನ್ನುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕು. ಕಷ್ಟ ಸುಖ ಒಂದೇ ನಾಣ್ಯದ ಎರಡು ಮುಖ ಇದ್ದ ಹಾಗೆ. ಜೀವನ ಬರೀ ಸಿಹಿಯೂ ಅಲ್ಲ ಅಥವಾ ಕಹಿಯೂ ಅಲ್ಲ. ಎರಡರ ಸಮ ಮಿಶ್ರಣವೇ ನಮ್ಮ ಬದುಕು. ಸುಖ ಬಂದಾಗ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ ಜೀವನದಲ್ಲಿ ಧೈರ್ಯ, ತಾಳ್ಮೆ ಇರಬೇಕು. ಈಸಬೇಕು ಇದ್ದು ಜೈಸಬೇಕು ಎಂದು ದಾಸರು ಹೇಳಿಲ್ಲವೇ?
ಇನ್ನು ಆರೋಗ್ಯ ದೃಷ್ಟಿಯಿಂದ ನೋಡಿದರೆ ಬೆಲ್ಲವನ್ನೇ ಏಕೆ ಬಳಸಬೇಕು ಎಂದರೆ, ಸಕ್ಕರೆಗಿಂತ ಬೆಲ್ಲವೇ ಶ್ರೇಷ್ಠ. ಬೆಲ್ಲ ಆಯಾಸ ನಿವಾರಕ ಮತ್ತು ಕ್ರಿಮಿ ನಾಶಕ ಹಾಗೂ ಉಷ್ಣಕಾರಕ, ಜೀರ್ಣಕಾರಕ. ಅಲ್ಲದೆ ಇದರಲ್ಲಿ ಪೌಷ್ಟಿಕಾಂಶ ಕೂಡ ಜಾಸ್ತಿ ಇರುತ್ತದೆ. ಸಕ್ಕರೆಗೆ ಈ ಗುಣವಿಲ್ಲ ಹಾಗಾಗಿ ಸಂಕ್ರಾಂತಿಯಂದು ಎಳ್ಳಿನ ಸಂಗಡ ಬೆಲ್ಲವನ್ನೇ ಮಿಶ್ರಣ ಮಾಡುವ ಪದ್ಧತಿ ಇದೆ.
ಇವನ್ನು ಬೇವು ಆಯುರ್ವೇದದ ಪ್ರಕಾರ ರೋಗ ನಿವಾರಕ, ಕ್ರಿಮಿನಾಶಕ, ಆರೋಗ್ಯದಾಯಕ ಔಷಧೀಯ ಗುಣಗಳು ಇವೆ. ಬೇವು ನಾಲಿಗೆಗೆ ಕಹಿಯಾದರೂ ಉದರಕ್ಕೆ ಸಿಹಿ. ರೋಗ ನಿವಾರಕ ಗುಣಗಳಿಂದ ಕೂಡಿರುವ ಕಾರಣ ಪೂಜಾರ್ಹ ವೃಕ್ಷವೆಂಬ ಕೀರ್ತಿಗೆ ಪಾತ್ರವಾಗಿದೆ.
ಯುಗಾದಿಯ ಮತ್ತೊಂದು ವಿಶೇಷವೆಂದರೆ ಹೋಳಿಗೆ ಒಬ್ಬಟ್ಟು, ಪಾಯಸ, ಮಾವಿನಕಾಯಿ ಚಿತ್ರಾನ್ನ, ಮಾವಿನ ಹಣ್ಣಿನ ಸೀಕರಣೆ ಇವೆಲ್ಲ ವಿಶೇಷ ಅಡುಗೆ. ಆರೋಗ್ಯ ದೃಷ್ಟಿಯಿಂದ ಇವೆಲ್ಲ ಉತ್ತಮವಾದದ್ದು. `ಉಂಡದ್ದೇ ಯುಗಾದಿ, ಮಿಂದದ್ದೆ ದೀಪಾವಳಿ’ ನುಡಿಗಟ್ಟನ್ನು ಕೇಳದವರಿಲ್ಲ. ದೀವಪಾಳಿಯಂದು ಅಭ್ಯಂಜನಕ್ಕೆ ಮಹತ್ವ! ಯುಗಾದಿಯಂದು ಭೋಜನಕ್ಕೆ ಆದ್ಯತೆ. ಹಾಗಾಗಿ ನಮ್ಮ ಹಿರಿಯರು ನಮ್ಮ ದೇಹದ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಪ್ರಕೃತಿಯ ವಿದ್ಯಮಾನಕ್ಕನುಗುಣವಾಗಿ ಈ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ.
ಪಂಚಾಂಗ ಶ್ರವಣ
ಯುಗಾದಿ ಹಬ್ಬದ ದಿನ ಪಂಚಾಂಗ ಶ್ರವಣ ಮಾಡುವುದರಿಂದ ಅನೇಕ ಫಲಗಳಿವೆ ಎಂದು ಹೀಗೆ ಹೇಳಲಾಗಿದೆ. ತಿಥಿಯ ಶ್ರವಣದಿಂದ ಲಕ್ಷ್ಮಿ ಲಭಿಸುತ್ತಾಳೆ. ವಾರದ ಶ್ರವಣದಿಂದ ಆಯುಸ್ಸು ವೃದ್ಧಿಯಾಗುತ್ತದೆ. ನಕ್ಷತ್ರ ಶ್ರವಣದಿಂದ ಪಾಪ ನಾಶವಾಗುತ್ತದೆ. ಯೋಗ ಶ್ರವಣದಿಂದ ರೋಗ ನಿವಾರಣೆಯಾಗುತ್ತದೆ. ಕರಣ ಶ್ರವಣದಿಂದ ಇಚ್ಛಿಸಿದ ಕಾರ್ಯ ಸಿದ್ಧಿಯಾಗುತ್ತದೆ. ಇವು ಪಂಚಾಂಗ ಶ್ರವಣದ ಉತ್ತಮ ಫಲಗಳಾಗಿವೆ. ಇದರ ನಿತ್ಯ ಶ್ರವಣದಿಂದ ಗಂಗಾ ಸ್ನಾನದ ಫಲ ಲಭಿಸುತ್ತದೆ.
ಚಂದ್ರ ದರ್ಶನದ ಫಲ`ಉಗಾದಿ ಉಂಡು ಚಂದ್ರನನ್ನು ನೋಡಬೇಕು,’ ಎಂಬ ಮಾತು ಬಳಕೆಯಲ್ಲಿದೆ. ನವಗ್ರಹಗಳಲ್ಲಿ ಒಂದಾದ ಚಂದ್ರನು ಶುದ್ಧತೆ, ಬುದ್ಧಿವಂತಿಕೆ ಮತ್ತು ನಡವಳಿಕೆಯ ಸಂಕೇತವಾಗಿ ಬಿಂಬಿಸಲಾಗುತ್ತದೆ. ಈ ದಿನ ಚಂದ್ರ ದರ್ಶನ ಮಾಡುವುದರಿಂದ ಇಡೀ ವರ್ಷವೆಲ್ಲಾ ಸುಖ ಸಂತೋಷದಿಂದ ಬಾಳಬಹುದೆಂಬ ನಂಬಿಕೆಯಿಂದ ಹಿಂದಿನಿಂದಲೂ ಯುಗಾದಿಯಂದು ನವತಾರೆಗಳ ಅಧಿಪತಿ ಚಂದ್ರನನ್ನು ನೋಡುವುದು ವಾಡಿಕೆಯಾಗಿದೆ.
ಮಳೆ ಬೆಳೆಯ ದ್ಯೋತಕ
ಯುಗಾದಿ ದಿನದಂದು ಕಾಣುವ ಚಂದ್ರನನ್ನು ಆಧರಿಸಿ ಹಿಂದೆ ವರ್ಷದ ಮಳೆ ಬೆಳೆ, ರೋಗ ರುಜಿನಗಳು, ಏಳುಬೀಳುಗಳ ಬಗ್ಗೆ ಚಿಂತನೆ ಮಾಡುತ್ತಿದ್ದರು. ಯುಗಾದಿಯಂದು ಚಂದ್ರನು ಅತ್ಯಂತ ಚಿಕ್ಕದಾಗಿ ಒಂದು ಪುಟ್ಟಗೆರೆಯ ರೀತಿಯಲ್ಲಿ ಕಾಣಸಿಗುವುದರಿಂದ ಚಂದ್ರನ ಆಕಾರವನ್ನು ಆಧರಿಸಿ ವರ್ಷದ ಭವಿಷ್ಯವನ್ನು ನಿರ್ಧರಿಸುತ್ತಿದ್ದರು. ಅದಕ್ಕೆಂದೇ ಹೊಸ ವರ್ಷದ ಪಂಚಾಂಗವನ್ನು ಪಠಿಸಿ, ಆನಂತರ ಚಂದ್ರ ದರ್ಶನವನ್ನು ಮಾಡುತ್ತಿದ್ದರು. ಹೀಗೆ ಚಂದ್ರ ದರ್ಶನ ಮಾಡಿ ನಮಿಸಿದರೆ ವರ್ಷವೆಲ್ಲ ಸಂತೋಷದಿಂದ ಇರಬಹುದು ಎಂಬ ನಂಬಿಕೆ ಇದೆ.
ಯುಗಾದಿ ಸೃಷ್ಟಿಯ ಸಂಕೇತ
ವರಕವಿ ಡಾ. ದ.ರಾ. ಬೇಂದ್ರೆಯವರ ಯುಗಾದಿ ಮಹತ್ವವನ್ನು ಸಾರುವ ಕವನದಲ್ಲಿ ಹೇಳಿದಂತೆ `ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷ ಹೊಸತು ಹೊಸತು ತರುತಿದೆ!’ ಎಂದು ನೆನಪಾಗುವಂತೆ, ನಾವು ಕಳೆದ ಸಮಯ ಮಾತ್ರ ಮತ್ತೆ ಮರಳಿ ಬರುವುದಿಲ್ಲ. ಆದ್ದರಿಂದ ದೊರೆತ ಸಮಯವನ್ನು ಸತ್ಕಾರ್ಯಕ್ಕೆ ಉಪಯೋಗಿಸಿ, ಜೀವನದಲ್ಲಿ ಸಾರ್ಥಕತೆ ಹೊಂದಬೇಕು. ಅಂತೂ ಯುಗಾದಿ ಸೃಷ್ಟಿಯ ಸಂಕೇತ. ಸೃಷ್ಟಿ ಹೊಸತವನ್ನು ಪ್ರತಿನಿಧಿಸುತ್ತದೆ. ಒಟ್ಟಿನಲ್ಲಿ ಸಿಹಿ ಕಹಿ, ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಬೇಕೆಂಬ ದಿವ್ಯ ಸಂದೇಶವನ್ನು ಸಾರುವ ಈ ಯುಗಾದಿ ಎಲ್ಲರಿಗೂ ಸನ್ಮಂಗಳನ್ನು ಉಂಟು ಮಾಡಲಿ ಎಂದು ಗೃಹಶೋಭಾ ಹಾರೈಸುತ್ತಾಳೆ.
– ರಾಜೇಶ್ವರಿ ವಿಶ್ವನಾಥ್.





