ಚಾಮೀನ್ ಸಾಮಗ್ರಿ : 150 ಗ್ರಾಂ ನೂಡಲ್ಸ್ ತರಹದ ಚಾಮೀನ್ (ರೆಡಿಮೇಡ್ ಲಭ್ಯ), 1-1 ಹಸಿರು, ಹಳದಿ, ಕೆಂಪು ಕ್ಯಾಪ್ಸಿಕಂ, 4-6 ತುಂಡು ಹೆಚ್ಚಿದ ಬ್ರೋಕ್ಲಿ, 1-1 ಕಪ್ ಸಣ್ಣಗೆ ಹೆಚ್ಚಿದ ಹೂಕೋಸು, ಎಲೆಕೋಸು, 1-2 ಈರುಳ್ಳಿ, 3-4 ಹಸಿ ಮೆಣಸು, 7-8 ಎಸಳು ಬೆಳ್ಳುಳ್ಳಿ, 1-2 ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಸೋಯಾ ಸಾಸ್, ಚಿಲೀ ಸಾಸ್, ಆಲಿಲ್ ಆಯಿಲ್.
ವಿಧಾನ : ಒಂದು ದೊಡ್ಡ ಸ್ಟೀಲ್ ಪಾತ್ರೆಗೆ ಚಾಮೀನ್ ಹಾಕಿ, ಅದು ಮುಗುಳುವಷ್ಟು ನೀರು, 2 ಚಮಚ ಎಣ್ಣೆ ಹಾಕಿ ಹದನಾಗಿ ಬೇಯಿಸಿ. ಇದನ್ನು ಸೋಸಿ ಒಂದು ಸ್ಟೀಲ್ ಜರಡಿಗೆ ಹಾಕಿಡಿ. ಒಂದು ಬಾಣಲೆಗೆ 4 ಚಮಚ ಆಲಿವ್ ಆಯಿಲ್ ಬಿಸಿ ಮಾಡಿ. ಇದಕ್ಕೆ ಹೆಚ್ಚಿದ ಒಂದೊಂದೇ ತರಕಾರಿ ಹಾಕಿ ಎಲ್ಲವನ್ನೂ ಮಧ್ಯಮ ಉರಿಯಲ್ಲಿ ಬಾಡಿಸಿ. ಇದನ್ನು ಒಂದು ಬೇಸನ್ನಿಗೆ ಹಾಕಿರಿಸಿ, ಅದೇ ಬಾಣಲೆಯಲ್ಲಿ ಮತ್ತೆ 2 ಚಮಚ ಎಣ್ಣೆ ಬಿಸಿ ಮಾಡಿ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಹಸಿ ಮೆಣಸು ಕೊನೆಗೆ ಟೊಮೇಟೊ ಹಾಕಿ ಬಾಡಿಸಿ. ನಂತರ ಇದಕ್ಕೆ ಉಪ್ಪು, ಮೆಣಸು, 2 ಬಗೆ ಸಾಸ್ ಹಾಕಿ ಕೈಯಾಡಿಸಿ. ನಂತರ ಇದಕ್ಕೆ ಮೊದಲೇ ಬಾಡಿಸಿದ ತರಕಾರಿ, ಕೊನೆಯಲ್ಲಿ ಚಾಮೀನ್ ಸೇರಿಸಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಬಿಸಿ ಬಿಸಿಯಾಗಿ ಇದನ್ನು ಟೊಮೇಟೊ ಸಾಸ್ ಜೊತೆ ಸವಿಯಿರಿ.

ಟೇಸ್ಟಿ ಆಲೂ ಟಿಕ್ಕಿ
ಸಾಮಗ್ರಿ : ಸಿಪ್ಪೆ ಸುಲಿದ 4 ಬೆಂದ ಆಲೂ, ಸಣ್ಣಗೆ ಹೆಚ್ಚಿದ 2 ಈರುಳ್ಳಿ, 4-5 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, 5-6 ಹಸಿ ಮೆಣಸು, ತುರಿದ 4-5 ಕ್ಯಾರೆಟ್, 100 ಗ್ರಾಂ ತುರಿದ ಪನೀರ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅಮ್ಚೂರ್ ಪುಡಿ, ಕರಿಯಲು ಎಣ್ಣೆ.
ವಿಧಾನ : ಒಂದು ಬೇಸನ್ನಿಗೆ ಮಸೆದ ಆಲೂ ಹಾಕಿ, ಅದಕ್ಕೆ ಮೇಲಿನ ಇತರ ಎಲ್ಲಾ ಸಾಮಗ್ರಿ ಸೇರಿಸಿ, ಪಕೋಡ ಮಿಶ್ರಣದ ಹದಕ್ಕೆ ನೀಟಾಗಿ ಕಲಸಿಡಿ. ಇದರಿಂದ ಸಣ್ಣ ಗೋಲಿ ಗಾತ್ರದ ಉಂಡೆ ಹಿಡಿದು, ಚಿತ್ರದಲ್ಲಿರುವಂತೆ ಗೋಳಿ ಬಜೆ ಆಕಾರ ಕೊಡಿ. ತುಸು ಮೈದಾ ಡಸ್ಟಿಂಗ್ ಮಾಡಿಕೊಳ್ಳುತ್ತಾ, ಎಲ್ಲಾ ಉಂಡೆಗಳನ್ನೂ ಹೀಗೆ ರೆಡಿ ಮಾಡಿಕೊಂಡು, ಕಾದ ಎಣ್ಣೆಯಲ್ಲಿ ಕರಿಯಿರಿ.

ಅವಕಾಡೋ ಚಟ್ನಿ ವಿತ್ ನಾಚೋಸ್
ಸಾಮಗ್ರಿ : 2-3 ಅವಕಾಡೋ, ಹೆಚ್ಚಿದ 1-2 ಈರುಳ್ಳಿ, 3-4 ಹಸಿ ಮೆಣಸು, ತುಸು ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ, ಚಿಲೀ ಫ್ಲೇಕ್ಸ್.
ವಿಧಾನ : ಅವಕಾಡೋ (ಬೆಣ್ಣೆ ಹಣ್ಣು) ಗಳನ್ನು ಹೆಚ್ಚಿ, ಬೀಜ ಬೇರ್ಪಡಿಸಿ, ಅದರ ತಿರುಳನ್ನು ಹೆರೆದು ತೆಗೆಯಿರಿ. ಇದಕ್ಕೆ ಮೇಲಿನ ಎಲ್ಲಾ ಸಾಮಗ್ರಿ ಹಾಕಿ ಮಿಕ್ಸಿಯಲ್ಲಿ ಚಟ್ನಿ ತಿರುವಿಕೊಳ್ಳಿ. ಇದಕ್ಕೆ ಒಗ್ಗರಣೆ ಕೊಟ್ಟ ನಂತರ, ಇದನ್ನು ರೆಡಿಮೇಡ್ ನಾಚೋಸ್ (ಚಿತ್ರದಲ್ಲಿರುವಂತೆ ಅಥವಾ ಅದೇ ತರಹದ ಚಿಪ್ಸ್) ಜೊತೆ ಸವಿಯಲು ಕೊಡಿ.

ಕ್ರಿಸ್ಪೀ ಪಕೋಡ
ಸಾಮಗ್ರಿ : 1 ಕಪ್ ಕಡಲೆಹಿಟ್ಟು, ಅರ್ಧ ಕಪ್ ಅಕ್ಕಿಹಿಟ್ಟು, ಸಣ್ಣಗೆ ಹೆಚ್ಚಿದ 2-3 ಈರುಳ್ಳಿ, 2-3 ಬ್ರೋಕ್ಲಿ ತುಂಡು, 3 ಬಗೆಯ ಕ್ಯಾಪ್ಸಿಕಂ ತುಂಡು, 2 ಕಪ್ ಪಾಲಕ್ ಸೊಪ್ಪು, ತುಸು ಕೊ.ಸೊಪ್ಪು, ಪುದೀನಾ, ಕರಿಬೇವು, 7-8 ಹಸಿ ಮೆಣಸು, 7-8 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, 4 ಚಮಚ ರವೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹುಳಿ ಮೊಸರು, ಹುರಿದು ತರಿ ಮಾಡಿದ ಜೀರಿಗೆ, ಧನಿಯಾ, ಚಿಲೀ ಫ್ಲೇಕ್ಸ್, ಕರಿಯಲು ಎಣ್ಣೆ.
ವಿಧಾನ : ಒಂದು ಬೇಸನ್ನಿಗೆ ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಹಾಕಿ ಬೆರೆಸಿಕೊಳ್ಳಿ. ಅಗತ್ಯವಿದ್ದಷ್ಟು ನೀರು ಚಿಮುಕಿಸುತ್ತಾ ಇದನ್ನು ಚೆನ್ನಾಗಿ ಬೆರೆಸಿ ಮಿಶ್ರಣ ಕಲಸಿಡಿ. ಇದಕ್ಕೆ ತುಸು ಕಾದ ಎಣ್ಣೆ ಸೇರಿಸಿ ಮತ್ತೊಮ್ಮೆ ಕಲಸಿದರೆ, ಪಕೋಡ ಚೆನ್ನಾಗಿ ಗರಿಗರಿ ಬರುತ್ತದೆ. ಈ ಮಿಶ್ರಣದಿಂದ ಚಿತ್ರದಲ್ಲಿರುವಂತೆ ಸಣ್ಣದಾಗಿ ಪಕೋಡ ಹಿಡಿದು, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ನಂತರ ಚಿತ್ರದಲ್ಲಿರುವಂತೆ ಅಲಂಕರಿಸಿ, ಸಾಸ್, ಬಿಸಿ ಕಾಫಿ/ಟೀ ಜೊತೆ ಸವಿಯಲು ಕೊಡಿ.

ವೆಜ್ ಸ್ಯಾಂಡ್ ವಿಚ್
ಸಾಮಗ್ರಿ : 5-6 ಬ್ರೆಡ್ ಸ್ಲೈಸ್, ಅರ್ಧರ್ಧ ಭಾಗ 3 ಬಗೆಯ ಕ್ಯಾಪ್ಸಿಕಂ, ಉದ್ದಕ್ಕೆ ಹೆಚ್ಚಿದ 2-3 ಈರುಳ್ಳಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಮೆಯೋನೀಸ್.
ವಿಧಾನ : ಮೊದಲು ಬ್ರೆಡ್ ಸ್ಲೈಸ್ ಗಳ ಅಂಚು ಕತ್ತರಿಸಿ, ತ್ರಿಕೋನಾಕಾರವಾಗಿ ಕಟ್ ಮಾಡಿ. ಇದರ 1-1 ಬದಿಗೆ ನೀಟಾಗಿ ಮೆಯೋನೀಸ್ ಸವರಿಡಿ. ಇದರ ಮೇಲೆ ನೀಟಾಗಿ 3 ಬಗೆಯ ಕ್ಯಾಪ್ಸಿಕಂ, ಈರುಳ್ಳಿ, ಕೊ.ಸೊಪ್ಪು ಹರಡಿ, ಉಪ್ಪು, ಮೆಣಸು ಉದುರಿಸಿ. ಹೀಗೆ ಚಿತ್ರದಲ್ಲಿರುವಂತೆ ಎಲ್ಲಾ ಸ್ಯಾಂಡ್ ವಿಚ್ ರೆಡಿ ಮಾಡಿ, ಬಿಸಿ ಕಾಫಿ ಟೀ ಜೊತೆ ಸವಿಯಲು ಕೊಡಿ. ವೈವಿಧ್ಯತೆಗಾಗಿ ತಲಾ ಮೇಲೆ ಬೆಣ್ಣೆ ಹರಡಿ, ಬ್ರೆಡ್ ನ ಮೆಯೋನೀಸ್ ಸರದ ಎರಡೂ ಭಾಗಗಳನ್ನೂ ತಿರುವಿ ಹಾಕುತ್ತಾ, ಹೊಂಬಣ್ಣ ಬರಿಸಿ ನಂತರ ಸಾಸ್ ಜೊತೆ ಸವಿಯಲು ಕೊಡಿ.

ವೆಜ್ ಟಿಕ್ಕಾ
ಮೂಲ ಸಾಮಗ್ರಿ : ದೊಡ್ಡ ಗಾತ್ರದ 5-6 ಅಣಬೆ, 1-1 ಸಣ್ಣ ಗಾತ್ರದ ಝುಕೀನಿ, 3 ಬಗೆಯ ಕ್ಯಾಪ್ಸಿಕಂ, 2 ಈರುಳ್ಳಿ, 1 ಇಡಿಯಾದ ಸ್ವೀಟ್ ಕಾರ್ನ್ (ತುಂಡುಗಳಾಗಿಸಿ).
ಮ್ಯಾರಿನೇಶನ್ ಸಾಮಗ್ರಿ : 7-8 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, 5-6 ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್ ಮಸಾಲ, ಟಿಕ್ಕಾ ಮಸಾಲ, ತುಸು ಹುರಿದ ಕಡಲೆಹಿಟ್ಟು, ತುಸು ಹೆಚ್ಚಿದ ಕೊ.ಸೊಪ್ಪು, ಹುಳಿ ಮೊಸರು.
ವಿಧಾನ : ಹುರಿದ ಕಡಲೆಹಿಟ್ಟಿಗೆ ಇತರ ಎಲ್ಲಾ ಮ್ಯಾರಿನೇಶನ್ ಸಾಮಗ್ರಿ ಸೇರಿಸಿ, ಹುಳಿ ಮೊಸರಿಗೆ ಬೆರಸಿ ಪೇಸ್ಟ್ ತರಹ ಮಾಡಿಕೊಳ್ಳಿ. ನಂತರ ಇದಕ್ಕೆ ಬಿಲ್ಲೆಗಳಾಗಿಸಿದ ಎಲ್ಲಾ ತರಕಾರಿ ಹಾಕಿ 1 ಗಂಟೆ ಕಾಲ ನೆನೆಯಲು ಬಿಡಿ. ನಂತರ ಚಿತ್ರದಲ್ಲಿರುವಂತೆ, ಸ್ಟೀಲ್ ಕಡ್ಡಿಗಳಿಗೆ ಇದನ್ನು ನೀಟಾಗಿ ಜೋಡಿಸಿಕೊಳ್ಳಿ. ನಂತರ ಇದನ್ನು ಓವನ್ ಸೇಫ್ ಬೇಕಿಂಗ್ ಟ್ರೇನಲ್ಲಿರಿಸಿ. ಮೊದಲೇ ಬಿಸಿಯಾದ ಓವನ್ನಿನಲ್ಲಿ ಇದನ್ನು 300 ಡಿಗ್ರಿ ಶಾಖದಲ್ಲಿ ಹದನಾಗಿ ಬೇಕ್ ಮಾಡಿ. ನಂತರ ಊಟಕ್ಕೆ ಮುಂಚೆ ಸ್ಟಾರ್ಟರ್ ಆಗಿ ಬಿಸಿ ಬಿಸಿಯಾಗಿ ಸಾಸ್ ಜೊತೆ ಸವಿಯಲು ಕೊಡಿ. ಸಂಜೆಯ ಕಾಫಿ/ಟೀಗೂ ಹೊಂದುತ್ತದೆ.

ಗ್ರಿಲ್ಡ್ ಪ್ಯಾರೋಗೀಸ್
ಸಾಮಗ್ರಿ : 450 ಗ್ರಾಂ ಪ್ಯಾರೋಗೀಸ್ (ಬ್ರೋಕ್ಲಿ ತರಹ), 3-4 ಈರುಳ್ಳಿ, 7-8 ಎಸಳು ಬೆಳ್ಳುಳ್ಳಿ, ತುಂಡರಿಸಿದ 3 ಬಗೆಯ ಕ್ಯಾಪ್ಸಿಕಂ, 1 ತುಂಡು ಶುಂಠಿ, 7-8 ಹಸಿ ಮೆಣಸು, 250 ಗ್ರಾಂ ಮೋಜರೆಲಾ ಚೀಸ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಹುಳಿ ಟೊಮೇಟೊ ಪೇಸ್ಟ್.
ವಿಧಾನ : ತುಂಡರಿಸಿದ ಪ್ಯಾರೋಗೀಸ್ ನ್ನು 15 ನಿಮಿಷ ಬೆಚ್ಚಗಿನ ನೀರಲ್ಲಿ ನೆನೆಸಿಡಿ. ನಂತರ ಇದನ್ನು 2 ಚಮಚ ಆಲಿವ್ ಆಯಿಲ್ ಬೆರೆತ ಕುದಿ ನೀರಿಗೆ ಬೆರೆಸಿ ಹದನಾಗಿ ಬೇಯಿಸಿ. 1 ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು ಸೇರಿಸಿ ಮಿಕ್ಸಿಯಲ್ಲಿ ಪೇಸ್ಟ್ ಮಾಡಿಕೊಳ್ಳಿ. ನಂತರ ಉಳಿದೆಲ್ಲಾ ತರಕಾರಿಗಳನ್ನು ದೊಡ್ಡ ಹೋಳಾಗಿಸಿ. ಒಂದು ಚಿಕ್ಕ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಜೀರಿಗೆಯ ಒಗ್ಗರಣೆ ಕೊಡಿ. ನಂತರ ಇದಕ್ಕೆ ರುಬ್ಬಿದ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ನಂತರ ಟೊಮೇಟೊ ಪೇಸ್ಟ್ ಹಾಕಿ ಕೆದಕಬೇಕು. ನಂತರ ತರಕಾರಿ ಹೋಳು, ಪ್ಯಾರೋಗೀಸ್ ಹಾಕಿ ಬಾಡಿಸಬೇಕು. ಕೊನೆಯಲ್ಲಿ ಉಪ್ಪು, ಖಾರ ಸೇರಿಸಿ ಕೈಯಾಡಿಸಿ. ನಂತರ ಇದನ್ನು ಕೆಳಗಿಳಿಸಿ, ಜಿಡ್ಡು ಸವರಿದ ಓವನ್ ಸೇಫ್ ಬಟ್ಟಲಿಗೆ ಇದನ್ನು ರವಾನಿಸಿ, ಇದರ ಮೇಲೆ ಮೋಜರೆಲಾ ಚೀಸ್ ತುರಿದು ಹಾಕಿ, ಮೊದಲೇ ಬಿಸಿ ಮಾಡಿದ ಓವನ್ ನಲ್ಲಿ 300 ಡಿಗ್ರಿ ಶಾಖದಲ್ಲಿ 5-6 ನಿಮಿಷ ಇರಿಸಿ, ಹದನಾಗಿ ಗ್ರಿಲ್ ಮಾಡಿ. ಬಿಸಿ ಬಿಸಿಯಾಗಿ ಇದನ್ನು ಊಟಕ್ಕೆ ಮುಂಚೆ ಸ್ಟಾರ್ಟರ್ ಆಗಿ ಸವಿಯಿರಿ. ಸಂಜೆಯ ಕಾಫಿ/ಟೀಗೂ ಹೊಂದುತ್ತದೆ.

ಪಾಲಕ್ ಸಬ್ಬಕ್ಕಿ ಟಿಕ್ಕಿ
ಸಾಮಗ್ರಿ : 1-1 ಕಪ್ ಹೆಚ್ಚಿದ ಪಾಲಕ್ ಸೊಪ್ಪು, ಸಬ್ಬಕ್ಕಿ, ಅರ್ಧರ್ಧ ಕಪ್ ಕಡಲೆಬೀಜ, ತುರಿದ ಪನೀರ್, ಬೇಯಿಸಿ ಮಸೆದ 2 ಆಲೂ, ಹೆಚ್ಚಿದ 2 ಹಸಿ ಮೆಣಸು, ಅರ್ಧ ಚಮಚ ತುರಿದ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಕರಿಯಲು ಎಣ್ಣೆ.
ವಿಧಾನ : 1-2 ಗಂಟೆ ಕಾಲ ಸಬ್ಬಕ್ಕಿ ನೆನೆಹಾಕಿ, ನಂತರ ಇದಕ್ಕೆ ಮೇಲಿನ ಎಲ್ಲಾ ಸಾಮಗ್ರಿ ಬೆರೆಸಿಕೊಂಡು ಪಕೋಡ ಮಿಶ್ರಣದಂತೆ ಕಲಸಿಡಿ. ಇದರಿಂದ ಸಣ್ಣ ಉಂಡೆ ಮಾಡಿ, ವಡೆ ತರಹ ತಟ್ಟಿಕೊಂಡು, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಬಿಸಿ ಇರುವಾಗಲೇ ಇದನ್ನು ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಸ್ಟೀಮ್ಡ್ ಆಲೂ ಕೋಫ್ತಾ
ಸಾಮಗ್ರಿ : 1 ಕಪ್ ಕಡಲೆಹಿಟ್ಟು, ಬೇಯಿಸಿ ಮಸೆದ 3 ಆಲೂ, ಅರ್ಧ ಕಪ್ ತುರಿದ ಪನೀರ್, ಸಣ್ಣಗೆ ಹೆಚ್ಚಿದ 2-2 ಚಮಚ ಹಸಿರು, ಹಳದಿ, ಕೆಂಪು ಕ್ಯಾಪ್ಸಿಕಂ, 2 ಹಸಿ ಮೆಣಸು, 1 ಈರುಳ್ಳಿ, ತುಸು ಕೊ.ಸೊಪ್ಪು, ಕರಿಬೇವು, ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ.
ವಿಧಾನ : ಚೆನ್ನಾಗಿ ಮಸೆದ ಆಲೂಗೆ ಹೆಚ್ಚಿದ ಮೇಲಿನ ಎಲ್ಲಾ ಸಾಮಗ್ರಿ ಹಾಕಿ, ನೀರು ಚಿಮುಕಿಸಿ, ಮಿಶ್ರಣ ಕಲಸಿಡಿ. ಇದರಿಂದ ಸಣ್ಣ ಉಂಡೆಗಳಾಗಿಸಿ. ಕಡಲೆಹಿಟ್ಟಿಗೆ ಉಪ್ಪು, ಖಾರ ಹಾಕಿ, ತುಸು ನೀರು ಬೆರೆಸಿ ಇಡ್ಲಿ ಹಿಟ್ಟಿನಂತೆ ಗಟ್ಟಿಯಾಗಿ ಕಲಸಿಡಿ. ಇದರಲ್ಲಿ ಆಲೂ ಉಂಡೆ ಅದ್ದಿ, ಇಡ್ಲಿ ಕುಕ್ಕರ್ ನಲ್ಲಿ ಹಬೆಯಲ್ಲಿ ಬೇಯಿಸಿ. ನಂತರ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಸ್ಟೀಮ್ಡ್ ಆಲೂ ಉಂಡೆ ಹಾಕಿ ಹದನಾಗಿ ಬಾಡಿಸಿ, ಬಿಸಿಯಾಗಿ ಸವಿಯಲು ಕೊಡಿ.





