ಚಾಮರಾಜಪೇಟೆಯಿಂದ ಬಿಎಚ್ಇಎಲ್-ಕಿಮ್ಕೊ ಜಂಕ್ಷನ್ವರಗೆ ಹೊಸ ಮೇಲ್ಸೇತುವೆ ನಿರ್ಮಿಸಲು ರಾಜ್ಯ ಸರ್ಕಾರ ಸಜ್ಜಾಗಿದ್ದು, ಮೈಸೂರು ರಸ್ತೆಯಲ್ಲಿ ಬಿಗಡಾಯಿಸುತ್ತಿರುವ ಸಂಚಾರ ದಟ್ಟಣೆ ತಗ್ಗಲಿದೆ. ಈ ಮೇಲ್ಸೇತುವೆ ನಿರ್ಮಾಣದ ನಂತರ ಟೌನ್ಹಾಲ್ನಿಂದ ಬಿಎಚ್ಇಎಲ್ಗೆ ನೇರ ಸಂಪರ್ಕ ದೊರೆಯಲಿದೆ.
ಬೆಂಗಳೂರಿನ ಹೃದಯ ಭಾಗದಲ್ಲಿರುವ ಚಾಮರಾಜಪೇಟೆ ಹಾಗೂ ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ನಿತ್ಯವೂ ಹೆಚ್ಚುತ್ತಿದೆ. ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಮುಂದಾಗಿರುವ ರಾಜ್ಯ ಸರ್ಕಾರ 810 ಕೋಟಿ ರೂ. ಯೋಜನೆ ರೂಪಿಸಿದೆ.
ಈಗಿರುವ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯ ಮುಂದುವರಿದ ಭಾಗವಾಗಿ 4 ಕಿ.ಮೀ.ನಷ್ಟು ದೂರದವರಗೆ ಈ ಕಾರಿಡಾರ್ ತಲೆ ಎತ್ತಲಿದೆ. ಸದ್ಯ ಚಾಮರಾಜಪೇಟೆ ಸಿರ್ಸಿ ಜಂಕ್ಷನ್ಗೆ ಕೊನೆಗೊಳ್ಳುವ ಮೇಲ್ಸೇತುವೆಯನ್ನು ಬಿಎಚ್ಇಎಲ್ ಕಿಮ್ಕೊ ಜಂಕ್ಷನ್ವರೆಗೆ ವಿಸ್ತರಿಸಲು ಯೋಜನೆ ರೂಪಿಸಿ ಡಿಪಿಆರ್ ಸಿದ್ಧಪಡಿಸಿದ್ದು, ಆಡಳಿತಾತ್ವಕ ಅನುಮೋದನೆಯ ಪ್ರಸ್ತಾವನೆ ಪರಿಶೀಲನಾ ಹಂತದಲ್ಲಿದೆ.
ಮೈಸೂರು-ಬೆಂಗಳೂರು ನಡುವೆ ಎಕ್ಸ್ಪ್ರೆಸ್ ವೇ ನಿರ್ಮಾಣದ ನಂತರ ವಾಹನಗಳು ಮೈಸೂರಿನಿಂದ ಕೆಂಗೇರಿಗೆ 90 ನಿಮಿಷದಲ್ಲಿ ತಲುಪತ್ತವೆ. ಆದರೆ ಮೈಸೂರು ರಸ್ತೆಯಲ್ಲಿ ನಿರಂತರ ಸಂಚಾರ ದಟ್ಟಣೆಯಿಂದಾಗಿ ಕೆಂಗೇರಿಯಿಂದ 19 ಕಿ.ಮೀ. ದೂರದಲ್ಲಿರುವ ಮೆಜೆಸ್ಟಿಕ್ ತಲುಪಲು 50-55 ನಿಮಿಷ ತೆಗೆದುಕೊಳ್ಳುತ್ತವೆ. ಇದು ವಾಹನ ಸವಾರರು, ಪ್ರಯಾಣಿಕರನ್ನು ಹೈರಾಣಾಗಿಸಿದೆ. ದೈನಂದಿನ ಪ್ರಯಾಣ ಹೈರಾಣಾಗಿಸಿದೆ. ನಾಯಂಡಹಳ್ಳಿ, ಕೆಂಗೇರಿ ಮತ್ತು ಕುಂಬಳಗೋಡು ವಾಹನ ದಟ್ಟಣೆ ಸಾಮಾನ್ಯವಾಗಿದೆ. ಸರ್ವೀಸ್ ರಸ್ತೆಗಳ ಕಳಪೆ ಸ್ಥಿತಿ, ಸಂಚಾರವನ್ನು ಮತ್ತಷ್ಟು ಕಷ್ಟಕರವಾಗಿಸಿವೆ.
ಚಾಮರಾಜಪೇಟೆ ಮತ್ತು ಮೈಸೂರು ರಸ್ತೆ ಪ್ರದೇಶಗಳಲ್ಲಿ ದಿನನಿತ್ಯ ಎದುರಿಸುತ್ತಿರುವ ತೀವ್ರ ಸಂಚಾರ ದಟ್ಟಣೆ ಸಮಸ್ಯೆ ಪರಿಹರಿಸಲು ಕಳೆದ ಎರಡು ವರ್ಷಗಳಿಂದ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲಾಗಿದೆ. ಪ್ರಸ್ತುತ 810 ಕೋಟಿ ರೂ. (ಭೂಸ್ವಾಧೀನ) ಸೇರಿದಂತೆ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಡಿಪಿಆರ್ ಸಿದ್ದಪಡಿಸಿ ಆಡಳಿತಾತ್ಮಕ ಅನುಮೋದನೆಯ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನ ಪರಿಷತ್ನಲ್ಲಿ ತಿಳಿಸಿದ್ದರು.
ಮೈಸೂರು ರಸ್ತೆಯಲ್ಲಿ ಮೇಲ್ಸೇತುವೆ ಹೊರತುಪಡಿಸಿ ಇತರೆಡೆ ವಾಹನ ದಟ್ಟಣೆ ಹೆಚ್ಚಿರುತ್ತದೆ. ಅದರಲ್ಲೂ ಸ್ಯಾಟಲೈಟ್ ಬಸ್ನಿಲ್ದಾಣ, ಕಸ್ತೂರ ಬಾ ನಗರ, ಗಾಳಿ ಆಂಜನೇಯ ದೇವಸ್ಥಾನ ಸಮೀಪ ಬೆಳಗಿನ ಹಾಗೂ ಸಂಜೆ ಅವಧಿಯಲ್ಲಿ ವಾಹನ ಚಲನೆ ತೀರ ನಿಧಾನವಾಗಲಿದ್ದು, ಸವಾರರು ಪರದಾಡಬೇಕಾಗುತ್ತದೆ.
ಪ್ರಯಾಣಿಕರಿಗೆ ಅನುಕೂಲ: ಪ್ರಸ್ತುತ ಟೌನ್ಹಾಲ್ನಿಂದ ಸಿರ್ಸಿ ವೃತ್ತದವರಗೆಊ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಇದೆ. ಈ ಹೊಸ ಮೇಲ್ಸೇತುವೆ ನಿರ್ಮಾಣವಾದರೆ, ನೇರವಾಗಿ ಬಿಎಚ್ಇಎಲ್ ಕಿಮ್ಕೊ ವೃತ್ತದವರೆಗೆ ಮೇಲ್ಸೇತುವೆ ಸಿಗಲಿದೆ. ಇದರಿಂದ ಮೈಸೂರಿಗೆ ತೆರಳುವವರು ಮಾತ್ರವಲ್ಲ, ಕೆಂಗೇರಿ ಸೇರಿದಂತೆ ಇತರೆ ಉಪ ನಗರಗಳಿಗೆ ಸಂಚರಿಸುವವರಿಗೆ ಚಾಮರಾಜಪೇಟೆ, ಸ್ಯಾಟಲೈಟ್ ಬಸ್ ನಿಲ್ದಾಣ, ಸಿರ್ಸಿ ಸರ್ಕಲ್, ಗಾಳಿ ಆಂಜನೇಯ ದೇವಸ್ಥಾನ, ಬ್ಯಾಟರಾಯನಪುರ, ಶ್ರೀನಗರ, ಬಾಪೂಜಿ ನಗರ, ಗಿರಿನಗರ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ.





