ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಸುರಿದ ವರ್ಷಧಾರೆ ಸುರಿದಿದೆ. ರಸ್ತೆ, ಉದ್ಯಾನ ಸೇರಿದಂತೆ ಎಲ್ಲೆಡೆ ತಂಪನೆ ವಾತಾವರಣ ಸೃಷ್ಟಿಸಿದೆ. ಕೆಲವು ಕಡೆಗಳಲ್ಲಿ ಬೆಳೆಗಳಿಗೆ ಹಾನಿಯಾಗಿದೆ.
ಬೆಂಗಳೂರು, ಬೆಳಗಾವಿ, ಹಾವೇರಿ, ಹಾಸನ, ಧಾರವಾಡ, ಗಂಗಾವತಿ, ವಿಜಯಪುರ, ಹೊಸಪೇಟೆ ಸೇರಿದಂತೆ ಹಲವು ಕಡೆ ಏಕಾಏಕಿ ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿಯಿತು.
ಪ್ರತಿ ವರ್ಷ ಯುಗಾದಿ ಹಬ್ಬದ ಸಂದರ್ಭದಲ್ಲಿ ಮಳೆ ಬರುವುದು ವಾಡಿಕೆ. ಅದೇ ರೀತಿ ಈ ಬಾರಿ ಹಬ್ಬಕ್ಕೆ ಮೂರು ದಿನ ಮೊದಲೆ ಮಳೆ ಆರಂಭವಾಗಿದ್ದು, ಹಾಸನ ಕಸಬಾದಲ್ಲಿ 20 ಮಿ.ಮೀ.ನಷ್ಟು ಅಧಿಕ ಮಳೆಯಾಗಿದೆ. ಮುಂದಿನ 48 ಗಂಟೆಯಲ್ಲಿ ಜಿಲ್ಲೆಯ ಕೆಲ ಭಾಗದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಆಲೂರು, ಸಕಲೇಶಪುರ, ಬೇಲೂರು ತಾಲೂಕಿನ ಕಾಫಿ ತೋಟಗಳಿಗೆ ಮಳೆಯ ಸಿಂಚನದಿಂದ ತಂಪಾಗಿದೆ. ಬೇಸಿಗೆಯ ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಜನತೆ ಮಳೆ, ಆಲಿಕಲ್ಲಿನಿಂದ ನಿಟ್ಟುಸಿರು ಬಿಟ್ಟಿದ್ದಾರೆ. ವರ್ಷಧಾರೆಯಿಂದ ತಾಪಮಾನದಲ್ಲಿ ಇಳಿಕೆ ಕಂಡಿದೆ.
ಆಲಿಕಲ್ಲು ಮಳೆ ಅಬ್ಬರಕ್ಕೆ ಕೆಲವು ಜಿಲ್ಲೆಯ ಹಲವೆಡೆ ಕಬ್ಬು, ಬಾಳೆ, ತೆಂಗು, ಮಾವಿನ ನೆನೆ ಮತ್ತು ಮುಸುಕಿನ ಜೋಳ ಬೆಳೆ ನಾಶವಾಗಿದೆ. ಗುಡಿಸಲು ಮತ್ತು ತಗಡಿನ ಚಾವಣಿಗಳು ಗಾಳಿಗೆ ಹಾರಿಹೋಗಿವೆ. ವಿದ್ಯುತ್ತ ಕಂಬಗಳ ಮೇಲೆ ಮರಗಳು ಬಿದ್ದ ಪರಿಣಾಮ ಕಲೆ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ರಾಣಿಪೇಟೆಯಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿತ್ತು. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆ, ಬಿರುಗಾಳಿ , ಗುಡುಗು, ಸಿಡಿಲಿ ಹಾಗೂ ಆಲಿಕಲ್ಲು ಅಬ್ಬರಕ್ಕೆ ಸೇವಂತಿಗೆ ಹೂವಿನ ಬೆಳೆ ಸಂಪೂರ್ಣವಾಗಿ ಹಾನಿಯಾಗಿದೆ.
ಬೆಳಗಾವಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಭಾರಿ ಗಾಳಿ ಮಳೆಗೆ ಮನೆ ಗೋಡೆ ಕುಸಿದು ಮಹಿಳೆ ಮೃತಪಟ್ಟ ದುರ್ಘಟನೆ ನಡೆದಿದೆ.
ವಂಟಮೂರಿ ಗ್ರಾಮದ ಫರ್ವಿನ್ ಬೇಪಾರಿ (34) ಮೃತಪಟ್ಟ ಮಹಿಳೆ. ಅವರ ಪತಿ ಶರೀಫ್ ಬೇಪಾರಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೋಳಿ ಮಾರಾಟ ಮಾಡಲು ತೆರಳುತ್ತಿದ್ದಾಗ ಮಳೆ ಆರಂಭವಾಗಿದ್ದು, ದಂಪತಿ ಪಾಳು ಮನೆಯಲ್ಲಿ ಆಶ್ರಯ ಪಡೆದಿದ್ದರು.





