ತ್ಯಾವರೆಕೊಪ್ಪದಲ್ಲಿರುವ ಶಿವಮೊಗ್ಗ ಮೃಗಾಲಯ ಮತ್ತು ಸಫಾರಿಯಲ್ಲಿ ನೀರಾನೆ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಪಶು ವೈದ್ಯಾಧಿಕಾರಿ ಡಾ. ಸಮೀಕ್ಷಾ ರೆಡ್ಡಿ (27) ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಬೆಂಗಳೂರಿನ ಬನ್ನೇರುಘಟ್ಟ ಮೂಲದ ಡಾ. ಸಮೀಕ್ಷಾ ಅವರು ಬೆಂಗಳೂರಿನ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪದವಿ ಪಡೆದು ಮಂಗಳೂರಿನಲ್ಲಿ ವನ್ಯಜೀವಿಗಳ ಸಂರಕ್ಷಣಾ ತಂಡದೊಂದಿಗೆ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದರು. ಶಿವಮೊಗ್ಗ ಮೃಗಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಪಶುವೈದ್ಯಾಧಿಕಾರಿಯಾಗಿ ಫೆಬ್ರವರಿ ಮೊದಲನೇ ವಾರದಲ್ಲಿ ಕರ್ತವ್ಯಕ್ಕೆ ಸೇರಿಕೊಂಡಿದ್ದರು.
ಡಾ. ಸಮೀಕ್ಷಾ ಗುರುವಾರ ರಾತ್ರಿ 10.30ರ ಸುಮಾರಿಗೆ ಸನ್ ಕಾನ್ಯೂರ್ ಪಕ್ಷಿಯ ಚಿಕಿತ್ಸೆಗಾಗಿ ಮೃಗಾಲಯದ ಆಸ್ಪತ್ರೆಗೆ ತೆರಳಿದ್ದರು. ಬಳಿಕ 11.45ರ ಸುಮಾರಿಗೆ ಗರ್ಭಿಣಿ ನೀರಾನೆಯಾದ ಹಂಸಿನಿ (12 – 14 ವರ್ಷ) ದೇಹದ ಉಷ್ಣತೆಯನ್ನು ಥರ್ಮಲ್ ಕ್ಯಾಮೆರಾ ಮೂಲಕ ಪರೀಕ್ಷಿಸಲು ಅದರ ಆವರಣದ ಒಳಗೆ ಹೋದಾಗ, ನೀರಾನೆ ಹಠಾತ್ತಾಗಿ ಅವರ ಮೇಲೆ ದಾಳಿ ಮಾಡಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ 6.30ರ ಸುಮಾರಿಗೆ ಮೃತಪಟ್ಟಿದ್ದಾರೆ.
ಡಾ. ಸಮೀಕ್ಷಾ ಮೇಲೆ ದಾಳಿ ಮಾಡಿರುವ ನೀರಾನೆ ಹಂಸಿನಿಯನ್ನು 2022 – 23 ರಲ್ಲಿ ಮೈಸೂರು ಮೃಗಾಲಯದಿಂದ ಶಿವಮೊಗ್ಗಕ್ಕೆ ಕರೆತರಲಾಗಿತ್ತು. ಬೆಳಗ್ಗೆ ಹೊತ್ತಿನಲ್ಲಿಇದರ ಆವರಣದಲ್ಲಿ ಜನ ಓಡಾಡುತ್ತಿದ್ದರು. ಚಿಕಿತ್ಸೆಗೆಂದು ಸಮೀಕ್ಷಾ ಸಹ ಹಲವು ಸಲ ಹೋಗಿದ್ದರು. ಆದರೆ, ಗುರುವಾರ ರಾತ್ರಿ ಭದ್ರತಾ ಪಡೆ ಇಲ್ಲದೆ, ನೀರಾನೆ ಕೀಪರ್ ಇಲ್ಲದೇ ಆವರಣಕ್ಕೆ ತೆರಳಿದ್ದೇ ಜೀವಕ್ಕೆ ಎರವಾಗಿದೆ. ಈ ಬಗ್ಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತಿಯಾದ ಪ್ರಾಣಿ ಪ್ರೇಮ: ಡಾ.ಸಮೀಕ್ಷಾ ಅವರು ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಶಿವಮೊಗ್ಗ ಮೃಗಾಲಯಕ್ಕೆ ನೇಮಕಗೊಂಡಿದ್ದರು. ಈ ಅವಧಿಯಲ್ಲಿಯೇ ಎಲ್ಲ ಪ್ರಾಣಿಗಳೊಂದಿಗೆ ತುಂಬ ಸ್ನೇಹದಿಂದಿದ್ದರು. ಈ ಹಿಂದೆ ಭದ್ರಾ ಎಂಬ ಚಿರತೆಗೆ ಎಂಆರ್‌ಐ ಸ್ಕ್ಯಾನ್ ಮಾಡಿಸಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಅದು ಸ್ವತಂತ್ರವಾಗಿ ಬದುಕಲು ಕಾರಣರಾಗಿದ್ದಾರೆ.
ಸಾಮಾನ್ಯವಾಗಿ ನೀರಾನೆಯ ಗರ್ಭಾವಧಿ 8 ತಿಂಗಳಿದ್ದು, ಹಂಸಿನಿ ಈಗಾಗಲೇ 8 ತಿಂಗಳು ಪೂರೈಸಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಚಟುವಟಿಕೆಯಿಂದ ಇರಲಿಲ್ಲ. ಹೀಗಾಗಿ, ಪರೀಕ್ಷೆಗೆಂದು ಡಾ.ಸಮೀಕ್ಷಾ ತೆರಳಿದ್ದರು. ಆಗ ಘಟನೆ ನಡೆದಿದೆ ಎಂದು ಶಿವಮೊಗ್ಗ ಮೃಗಾಲಯದ ಕಾರ್ಯನಿರ್ವಹಕ ನಿರ್ದೇಶಕ ವಿ.ಎಂ. ಅಮರಕ್ಷರ ತಿಳಿಸಿದ್ದಾರೆ.
ಏಳು ದಿನಗಳಲ್ಲಿ ವರದಿ ನೀಡಿ: ಶಿವಮೊಗ್ಗ ಮೃಗಾಲಯದಲ್ಲಿ ನೀರಾನೆ ದಾಳಿಯಿಂದ ಡಾ. ಸಮೀಕ್ಷಾ ಮೃತಪಟ್ಟಿದ್ದು, ಈ ಪ್ರಕರಣ ಕುರಿತಂತೆ ಸಿಸಿಎಫ್ ದರ್ಜೆಯ ಅಧಿಕಾರಿಯಿಂದ ತನಿಖೆ ಮಾಡಿಸಿ ಏಳು ದಿನಗಳ ಒಳಗೆ ವರದಿ ಸಲ್ಲಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ. ಬೆಂಗಳೂರಿನ ತಮ್ಮ ಅಧಿಕೃತ ನಿವಾಸದಲ್ಲಿ ಶುಕ್ರವಾರ ನಡೆದ ಹಿರಿಯ ಅಧಿಕಾರಿಗಳೊಂದಿಗಿನ ತುರ್ತು ಸಭೆಯಲ್ಲಿಅವರು ಮಾತನಾಡಿ, ಯಾವುದೇ ಸಿಬ್ಬಂದಿ ಅಥವಾ ಪಶುವೈದ್ಯರು ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವಾಗ ಕಡ್ಡಾಯವಾಗಿ ಪ್ರಮಾಣಿತ ಮಾನದಂಡ (ಎಸ್‌ಒಪಿ) ಪಾಲಿಸುವಂತೆ ಸ್ಪಷ್ಟ ಸೂಚನೆ ನೀಡಲು ತಿಳಿಸಿದ್ದಾರೆ.
ಈ ಸಾವು ಅತ್ಯಂತ ನೋವು ತಂದಿದೆ. ಈ ದುಃಖದ ಸಮಯದಲ್ಲಿ ಸರಕಾರ ಅವರ ಕುಟುಂಬದೊಂದಿಗೆ ನಿಲ್ಲುತ್ತದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. 30 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.





