ಭಾರತೀಯರಾದ ನಾವು ಈ ಕೆಲವು ದೇಶಗಳ ಪ್ರವಾಸಕ್ಕಾಗಿ ವೀಸಾಗಾಗಿ ಕಾಯಬೇಕಿಲ್ಲ. ಅವು ಯಾವುವು…..?
ಈ ಬೇಸಿಗೆಯ ರಜಾ ದಿನಗಳಲ್ಲಿ ಮಕ್ಕಳಿಗಾಗಿ ಪೋಷಕರು ವಿದೇಶ ಪ್ರಯಾಣ ಹೊರಡುವುದು ಈಗೆಲ್ಲ ಬಲು ಮಾಮೂಲಿ. ಅಲ್ಲಿನ ವಿಭಿನ್ನ ಸಂಸ್ಕೃತಿ, ಭಾಷೆ, ಆ ದೇಶದ ಪ್ರಕೃತಿ ಸೌಂದರ್ಯ ಇತ್ಯಾದಿಗಳ ಸೆಳೆತ ಎಲ್ಲರಲ್ಲೂ ಇದ್ದದ್ದೇ. ಆದರೆ ವಿದೇಶಕ್ಕೆ ಹೋಗುವುದರ ಕುರಿತಾದ ಜಂಜಾಟಗಳನ್ನು ನೆನೆದು, ಇದನ್ನು ಕನಸಾಗಿ ಮರೆತುಬಿಡುತ್ತೇವೆ. ಅದರಲ್ಲೂ ಮುಖ್ಯವಾಗಿ ಅತಿ ದುಬಾರಿ ಟಿಕೆಟ್ ದರ, ವೀಸಾ ದೊರೆಯದ ಕಾಟಗಳಿಂದ ವಿದೇಶ ಪ್ರವಾಸದ ಆಸೆ ತೊರೆಯುತ್ತೇವೆ. ಆದರೆ ಗಾಬರಿಗೊಳ್ಳಬೇಡಿ, ಎಷ್ಟೋ ದೇಶಗಳಿಗೆ ಭಾರತೀಯರಾದ ನಾವು ವೀಸಾ ಇಲ್ಲದೆಯೇ ಪ್ರವಾಸ ಹೊರಡಬಹುದು. ವೀಸಾ ಪರ್ಮೀಶನ್ ಗಾಗಿ ಕಾಯಬೇಕಿಲ್ಲ. ಈ ರೀತಿ ಭಾರತೀಯರಾದ ನಾವು ಸುಮಾರು 62 ದೇಶಗಳಿಗೆ ವೀಸಾ ಫ್ರೀ ಆಗಿ ಪ್ರವಾಸ ಹೊರಡಬಹುದು. ಇದರಲ್ಲಿ ನಮ್ಮ ನೆರೆ ರಾಷ್ಟ್ರಗಳಾದ ಶ್ರೀಲಂಕಾ, ನೇಪಾಳ, ಭೂತಾನ್ ಪ್ರಮುಖ.
ಇತರ ದೇಶಗಳ ಬಗ್ಗೆ ತಿಳಿಯುವ ಮೊದಲು ವೀಸಾ ಸಹಿತ ಹಾಗೂ ವೀಸಾ ರಹಿತ ಪ್ರಯಾಣದ ಬಗ್ಗೆ ತಿಳಿಯೋಣ.
ಯಾವುದೇ ದೇಶಕ್ಕೆ ಪ್ರವಾಸಿಗರಾಗಿ ನಾವು ಹೋಗಲು 1 ವಾರ, 1 ತಿಂಗಳು ಅಥವಾ 6 ತಿಂಗಳು ಅಲ್ಲಿ ಇರಬೇಕಾದರೆ, ವೀಸಾ ಅತ್ಯಗತ್ಯ. ನಮ್ಮ ದೇಶ ನೀಡುವ ಅನುಮತಿ ಪಾಸ್ ಪೋರ್ಟ್ ಆದರೆ, ಆಯಾ ದೇಶ ನೀಡುವ ಅನುಮತಿಯೇ ವೀಸಾ. ಇದನ್ನು ಪಡೆದರು ಆಯಾ ದೇಶಗಳಿಗೆ ಕಾನೂನುಬದ್ಧವಾಗಿ, ಸುರಕ್ಷಿತ ಪ್ರಯಾಣ ಕೈಗೊಳ್ಳಬಹುದು. ಈ ವೀಸಾವನ್ನು ಸಾಮಾನ್ಯವಾಗಿ ಪ್ರಯಾಣಿಕರ ಪಾರ್ಸ್ಪೋರ್ಟ್ ನಲ್ಲೇ ಅಂಟಿಸಲಾಗುತ್ತದೆ, ಸ್ಟಾಂಪ್ ಗೊಳಿಸಲಾಗುತ್ತದೆ.
ಹಾಗಾದರೆ ವೀಸಾ ಫ್ರೀ ದೇಶದ ಪ್ರವಾಸಕ್ಕಾಗಿ ನಿಮ್ಮ ಬಳಿ ಕೇವಲ ಪಾರ್ಸ್ ಪೋರ್ಟ್ ಇದ್ದರೆ ಸಾಕು, ವೀಸಾ ಕೇಳಿ ಪಡೆಯಬೇಕಾದ್ದಿಲ್ಲ. ಇದನ್ನು ಸರಿಯಾಗಿ ತಿಳಿಯಬೇಕು. ಹಾಗಾದರೆ ವೀಸಾಫ್ರೀ ದೇಶಗಳ ಪ್ರವಾಸಕ್ಕೆ ರೆಡಿಯಾ? :
ಮಕಾ ಹಾಂಕಾಂಗ್ ತರಹವೇ ಮಕಾ ಸಹ ಚೀನಾದ ಆಡಳಿತವುಳ್ಳ ಪ್ರದೇಶ, ಇದು ತನ್ನ ಪ್ರಾಕೃತಿಕ ಸೌಂದರ್ಯಕ್ಕಾಗಿ ಹೆಚ್ಚು ಖ್ಯಾತಿಪಡೆದಿದೆ. ಇದು ತಟೀಯ ದ್ವೀಪಗಳ ಒಂದು ಗುಂಪನ್ನುಳ್ಳ ದೇಶ. `ಲಾಸ್ ವೇಗಸ್ ಆಫ್ ಈಸ್ಟ್’ ಎಂದೇ ಪ್ರಸಿದ್ಧವಾಗಿದೆ. ಭಾರತೀಯ ಪಾಸ್ ಪೋರ್ಟ್ ವುಳ್ಳವರಿಗೆ ಇದು ಶುಲ್ಕರಹಿತ ವೀಸಾ ಒದಗಿಸುತ್ತದೆ. ಪ್ರತಿ ವರ್ಷ ವಿಶ್ವವಿಡೀ ಪ್ರವಾಸಿಗರು ಇಲ್ಲಿಗೆ ಬರುತ್ತಿರುತ್ತಾರೆ.
ಇಲ್ಲಿನ ಪ್ರಮುಖ ಆಕರ್ಷಣೆಗಳು ಅಂದ್ರೆ ಮಕಾ ಪರ್ಯಾಯ ದ್ವೀಪ, ತೈಪಾಗಾಂವ್, ಕ್ಯಾಸಿನೋವಾ, ಚೀನಿ ಮಂದಿರಗಳು ಇತ್ಯಾದಿ. ಸರಿಸುಮಾರು 28 ಮಿಲಿಯನ್ ಪ್ರವಾಸಿಗರು ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುತ್ತಾರೆ.
ನೆನಪಿರಲಿ : ಇಲ್ಲಿನ ಪ್ರವಾಸಿ ತಾಣಗಳಲ್ಲಿ ಕಳ್ಳರಿದ್ದಾರೆ, ಎಚ್ಚರಿಕೆ! ದಟ್ಟ ಜನಸಂದಣಿ ಇರುವಂಥ ಜಾಗಗಳಾದ ಶಾಪಿಂಗ್ ಸೆಂಟರ್, ಮಾಲ್, ಏರ್ಪೋರ್ಟ್, ಕ್ಯಾಸಿನೋವಾ ಮುಂತಾದೆಡೆ ಪ್ರವಾಸಿಗರು ಸದಾ ಅಲರ್ಟ್ ಆಗಿರಬೇಕು. ಅಪರಿಚಿತರಿಂದ ಎಂದೂ ಆಹಾರ, ಪಾನೀಯ, ಸಿಗರೇಟ್ ಇತ್ಯಾದಿ ಸ್ವೀಕರಿಸಬೇಡಿ. ಅದರಲ್ಲಿ ನಶೆ ಪದಾರ್ಥ ತುಂಬಿಸಿ ನಿಮ್ಮನ್ನು ಅವರು ದೋಚುತ್ತಾರೆ. ಇಂಥ ಪದಾರ್ಥಗಳನ್ನು ನೀವೇ ಖರೀದಿಸಿ ಬಳಸಿಕೊಳ್ಳಿ.
ಹವಾಮಾನದ ವಿಷಯ ಗಮನಿಸಿದರೆ, ಮಕಾನಲ್ಲಿ ಆಗಾಗ ಚಂಡಮಾರುತ, ಪ್ರವಾಹ ಮಾಮೂಲು. ಇದರಿಂದ ನಿಮ್ಮ ಟ್ರಾನ್ಸ್ ಪೋರ್ಟ್, ಇನ್ನಿತರ ಸೇವೆಗಳು ಬಾಧಿತ ಆಗಬಲ್ಲವು, ಆದ್ದರಿಂದ ಹೊರಡುವ ಮುಂಚೆ ಅಲ್ಲಿನ ಹವಾಮಾನ ಸ್ಥಿತಿಯ ಬಗ್ಗೆ ಸೂಕ್ಷ್ಮ ತಿಳಿದುಕೊಳ್ಳಿ. ಇಲ್ಲಿ ಡೆಂಗ್ಯೂ, ಮಲೇರಿಯಾ ಹಾಗೂ ಜಪಾನೀ ಇನ್ ಸೆಫಿವೈಟಿಸ್ ರೋಗ ಕಾಡುವುದೂ ಸಹಜ. ಯಾವುದೇ ಆಪತ್ತು ಬಂದಾಗ ಎದುರಿಸಲು, ನಿಮ್ಮ ಟ್ರಾವೆಲ್ ಇನ್ ಶ್ಯೂರೆನ್ಸ್ ಗರಿಷ್ಠ ವಸ್ತುಗಳನ್ನು ಕವರ್ ಮಾಡುತ್ತದೆ ತಾನೇ ಎಂದು ಮೊದಲೇ ಖಾತ್ರಿಪಡಿಸಿಕೊಳ್ಳಿ. ನೀವು ಸದಾ ಲೈಸೆನ್ಸ್ಡ್ ಟ್ಯಾಕ್ಸಿ ಬಳಸುವುದೇ ಕ್ಷೇಮ.

ಅಗತ್ಯ ಡಾಕ್ಯುಮೆಂಟ್ಸ್ : ಕನ್ ಫರ್ಮ್ ರಿಟರ್ನ್ ಟಿಕೆಟ್ ಹಾಗೂ ಅಲ್ಲಿ ತಂಗಲು ನಿಮ್ಮ ಕಾನೂನುಬದ್ಧ ಪಾಸ್ ಪೋರ್ಟ್. ಇಂಡೋನೇಷ್ಯಾ ಫ್ರೀವೀಸಾ ನೀಡುವ ಅತ್ಯುತ್ತಮ ಅಂತಾರಾಷ್ಟ್ರೀಯ ಡೆಸ್ಟಿನೇಶನ್ ಗಳಲ್ಲಿ ಇಂಡೋನೇಷ್ಯಾ ಸಹ ಒಂದು. ಇದು ವಿಶ್ವದ ಅತಿ ದೊಡ್ಡ ದ್ವೀಪದೇಶ. ಪ್ರಾಕೃತಿಕ ರಮಣೀಯ ದೃಶ್ಯಗಳಿಂದ ತುಂಬಿ ತುಳುಕುತ್ತಿರುವ ಈ ನಾಡು, ಭಾರತೀಯರಿಗೆ ಅಚ್ಚುಮೆಚ್ಚಿನ ಹನಿಮೂನ್ ಡೆಸ್ಟಿನೇಶನ್.
ಸದಾ ಮೇಘಾವೃತ ಆಗಿರುವ, ಬಹುವರ್ಣದ ಆಕಾಶ ತುಂಬಿರುವ ಇಂಡೋನೇಷ್ಯಾದಲ್ಲಿ, ಜ್ವಾಲಾಮುಖಿ ಮೌಂಟ್ ಬ್ರೋನೋ ಇರಲಿ ಅಥವಾ ಬಾಲಿ ಪ್ರದೇಶದ ಕಲೆ ಇರಲಿ ಯಾ ಇದರ ರಾಜಧಾನಿಯಾದ ಉಬುದಾ, ಟೋಬಾ ಝರಿ, ದ್ವೀಪಗಳ ಶೃಂಖಲೆಯಿಂದ ಸಮೃದ್ಧವಾಗಿದೆ. ಇದಕ್ಕೆ ಮಾರುಹೋಗದ ಪ್ರವಾಸಿಗರೇ ಇಲ್ಲ.
ನೆನಪಿರಲಿ : ಇಂಡೋನೇಷ್ಯಾದಲ್ಲಿ ಧೂಮಪಾನ ವಿರೋಧಿ ಕಾನೂನು ಬಲು ಕಟ್ಟುನಿಟ್ಟಾಗಿದೆ. ನಿಮ್ಮ ಲಗೇಜ್ ಕಡೆ ಸಂಪೂರ್ಣ ಗಮನವಿರಲಿ. ಟ್ಯಾಕ್ಸಿ ಡ್ರೈವರ್ ಗಳ ಜಾಲಕ್ಕೆ ಸಿಲುಕದಿರಿ. ಈ ಡ್ರೈವರ್ ಗಳು ಬೇಕೆಂದೇ ಬಳಿ ನಿಲ್ಲಿಸಿ ಹಣ ಡ್ರಾ ಮಾಡಿ ಎಂದು ಪೀಡಿಸುತ್ತಾರೆ. ನೀವು ಬೇಕಾದ ಸ್ಥಳ ಬಂದಾಗ ಲಗೇಜ್ ಇಳಿಸುವ ಮೊದಲೇ, ಡ್ರೈವರ್ ಗಾಡಿ ಸ್ಟಾರ್ಟ್ ಮಾಡಿ ಬೆಚ್ಚಿ ಬೀಳಿಸುತ್ತಾನೆ. ಇಲ್ಲಿನ ಕ್ವಿಪ್ ಝೀನ್ ಬಗ್ಗೆ ಮಾಹಿತಿ ಇರಲಿ. ಈ ದೇಶದಲ್ಲಿ ನೈಸರ್ಗಿಕ ವಿಪತ್ತುಗಳು ಬಲು ಸಹಜ. ಹಿಂದೆಲ್ಲ ಈ ದೇಶ ಜ್ವಾಲಾಮುಖಿ ವಿಸ್ಛೋಟ, ಭೂಕಂಪ, ಸುನಾಮಿ, ಹಿಮಪಾತ ಇತ್ಯಾದಿಗಳಿಗೆ ಬಹಳ ಸಲ ತುತ್ತಾಗಿದೆ. ಭವಿಷ್ಯದಲ್ಲೂ ಹೀಗೆ ಆಗುವುದನ್ನು ತಳ್ಳಿ ಹಾಕಲಾಗದು.
ಅಗತ್ಯ ಡಾಕ್ಯುಮೆಂಟ್ಸ್ : ಕಾನೂನುಬದ್ಧ ಒಂದು ಭಾರತೀಯ ಪಾಸ್ ಪೋರ್ಟ್. ಜಾರ್ಡನ್ ನೀವು ಚರಿತ್ರೆ ಪ್ರೀತಿಸುವವರಾದರೆ ಜಾರ್ಡನ್ ನಿಮಗೆ ಅತ್ಯುತ್ತಮ ತಾಣ ಎನಿಸುತ್ತದೆ. ಇದೂ ಸಹ ಭಾರತೀಯರಿಗೆ ವೀಸಾಫ್ರೀ ದೇಶಗಳ ಪಟ್ಟಿಗೆ ಸೇರುತ್ತದೆ. ಇದೊಂದು ಅರಬ್ಬಿ ದೇಶ. ಇಲ್ಲಿನ ಭವ್ಯ ಪ್ರಾಚೀನ ವಾಸ್ತುಕಲೆ, ಡೆಸರ್ಟ್ ಅಡ್ವೆಂಚರ್ಸ್, ಸ್ಕೂಬಾ ಡೈವಿಂಗ್, ಟೇಸ್ಟಿ ಜಾರ್ಡೇನಿಯನ್ ಫುಡ್ (ವೆಜ್ ಕೇಳಬೇಡಿ), ಯಾತ್ರಾಸ್ಥಳಗಳು, ಕೆಂಪು ಸಮುದ್ರ, ಮೃತ ಸಮುದ್ರ ಇತ್ಯಾದಿ ಉತ್ತಮ ಪ್ರೇಕ್ಷಣೀಯ ಸ್ಥಳಗಳಾಗಿವೆ. ಪ್ರತಿ ವರ್ಷ ಇಲ್ಲಿ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ.
ನೆನಪಿರಲಿ : ಯಾತ್ರಾ ಸ್ಥಳಗಳಿಗೆ ಹೋದಾಗ ಡೀಸೆಂಟ್ ಡೆಲ್ ರಿಸೆಸ್ ಮಾತ್ರ ಇರಲಿ. ಶುದ್ಧ ಸಸ್ಯಾಹಾರಿಗಳಿಗೆ ಇಲ್ಲಿ ಕಸಿವಿಸಿ ತಪ್ಪಿದ್ದಲ್ಲ.
ಅಗತ್ಯ ಡಾಕ್ಯುಮೆಂಟ್ಸ್ : ಕಾನೂನುಬದ್ಧ ಒಂದು ಭಾರತೀಯ ಪಾಸ್ ಪೋರ್ಟ್, ಹೋಟೆಲ್ ಬುಕ್ಕಿಂಗ್ ಹಾಗೂ ತಾವು ವ್ಯಕ್ತಿಗೆ ಡಾಲರ್.
ಮಲೇಶಿಯಾ
ಇದಂತೂ ವಾಸ್ತವದಲ್ಲಿ ಮಿನಿ ಏಷ್ಯಾ ಖಂಡವಾಗಿದೆ. ಇಲ್ಲಿ ವೈವಿಧ್ಯಮಯ ಸಂಸ್ಕೃತಿಗಳ ಸಂಗಮವನ್ನು ಕಾಣಬಹುದು. ಇದು 2 ಭಾಗಗಳ ಮಿಲನವಾಗಿದೆ. ಒಂದೆಡೆ ಇದು ಪರ್ಯಾಯ ದ್ವೀಪವಾಗಿದ್ದು ಸದಾ ಚಟುವಟಿಕೆ ತುಂಬಿದ ನಗರಗಳು, ಆಧುನಿಕ ಲೈಫ್ ಸ್ಟೈಲ್, ಭಾರಿ ಭವ್ಯ ಕಟ್ಟಡಗಳು, ಟೀ ಎಸ್ಟೇಟುಗಳಿವೆ. ಇನ್ನೊಂದು ಕಡೆ ಅತಿ ದಟ್ಟ ಕಾಡು, ಎಲ್ಲೆಲ್ಲೂ ಹಸಿರು ತುಂಬಿದ ಗಿರಿಕಾನನಗಳು. ಕೌಲಾಲಂಪುರ್, ಜಾರ್ಜ್ ಟೌನ್, ಪೇರೆಂಟಿಯನ್ ದ್ವೀಪ ಸಮೂಹ, ಕ್ಯಾಮರೂನ್ ಹೈಲೆಂಡ್ಸ್ ಇತ್ಯಾದಿ ಆಕರ್ಷಕ ತಾಣಗಳಿವೆ. ಇಲ್ಲಿಗೆ ಹೋಗಲಿಕ್ಕೆ ವೀಸಾ ಬೇಕಿಲ್ಲ.
ನೆನಪಿರಲಿ : ಇಲ್ಲಿ ಸದಾ ಹೆಚ್ಚು ಬಿಸಿಲು, ಸೆಖೆ ಇರುತ್ತದೆ, ಹ್ಯುಮಿಡಿಟಿ ಬಲು ಮಾಮೂಲು. ಇದಕ್ಕೆ ಪೂರಕ ಸಡಿಲ ಡ್ರೆಸ್ ತೆಗೆದುಕೊಳ್ಳಿ. ಅತಿಯಾದ ಕಳ್ಳರಿದ್ದಾರೆ ಎಚ್ಚರಿಕೆ! ಸಾರ್ವಜನಿಕ ಸ್ಥಳಗಳಲ್ಲಿ ಡ್ರೆಸ್ ಡೀಸೆಂಟ್ ಆಗಿರಲಿ.
ಅಗತ್ಯ ಡಾಕ್ಯುಮೆಂಟ್ಸ್ : ಕನಿಷ್ಠ 6 ತಿಂಗಳ ವ್ಯಾಲಿಡಿಟಿ ಇರುವ ಭಾರತೀಯ ಪಾಸ್ ಪೋರ್ಟ್, ಪ್ರವಾಸಕ್ಕೆ ತಕ್ಕ ಡ್ರೆಸ್, ಟೂರಿಂಗ್ ಡಾಕ್ಯುಮೆಂಟ್ಸ್, ಇ-ಟಿಕೆಟ್ ನಂಬರ್ ಸಹಿತ ರಿಟರ್ನ್ ಫ್ಲೈಟ್ ಟಿಕೆಟ್, ಹೋಟೆಲ್ ಬುಕಿಂಗ್.
ಫಿಝಿ
ಪೆಸಿಫಿಕ್ ಮಹಾಸಾಗರದ ಬಳಿ ಇರುವ ಈ ದ್ವೀಪದೇಶ ತನ್ನ ಬೀಚ್ ಗಳ ಸೊಗಸಿನಿಂದ ಹೆಸರಾಗಿದೆ. ಫಿಝಿ ವಿಶ್ವವಿಡೀ ವಿಖ್ಯಾತವಾಗಿದ್ದು, ಇದರ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತು ಜನ ಇಲ್ಲಿಗೆ ಬರುತ್ತಾರೆ. ಇದನ್ನು ಮಿನಿ ಇಂಡಿಯಾ ಎಂದೂ ಕರೆಯುತ್ತಾರೆ. 1920ರ ದಶಕದಲ್ಲಿ ಅನೇಕ ಮಂದಿ ಭಾರತೀಯರು ತಾವಾಗಿ ಇಷ್ಟಪಟ್ಟು ಇಲ್ಲಿ ವಲಸೆ ಬಂದರು. ಅಲ್ಲೇ ನೆಲೆ ನಿಂತು, ಆ ದೇಶದ ಜನಸಂಖ್ಯೆಯಲ್ಲಿ ಬೆರೆತುಹೋಗಿದ್ದಾರೆ. ಇಲ್ಲಿ ಅನೇಕ ಹಿಂದೂ ದೇವಾಲಯಗಳಿವೆ. ಇಲ್ಲಿನ ಪ್ರವಾಸಿ ತಾಣಗಳು ಅದ್ಭುತ! ಆನ್ ಅರೈವಲ್ ಇಲ್ಲಿ ವೀಸಾ ಲಭ್ಯ.
ನೆನಪಿರಲಿ : ಕಳ್ಳರು, ಆಕ್ರಮಣಕಾರರ ಕಾಟ ತಪ್ಪದು. ಪ್ರವಾಸಿಗರು ಇವರ ಉಪಟಳ ಸಹಿಸದೆ ಅಲ್ಲಿನ ಠಾಣೆಗೆ ದೂರುತ್ತಲೇ ಇರುತ್ತಾರೆ. ಮುಖ್ಯವಾಗಿ ರಾತ್ರಿ ಹೊತ್ತು ಕಳ್ಳಕಾಕರ ಕಾಟ ಹೆಚ್ಚು. ಅಲ್ಲಿನ ಕ್ರೆಡಿಟ್ ಕಾರ್ಡ್ ಗೆ ಏಮಾರದಿರಿ. ಕಾರ್ಡ್ ಸ್ಕ್ರೀನಿಂಗ್ ಆಗಲೇಬೇಕು. ಇಲ್ಲಿ ಚಂಡಮಾರುತ ಮಾಮೂಲಿ.
ಅಗತ್ಯ ಡಾಕ್ಯುಮೆಂಟ್ಸ್ : ಕನಿಷ್ಠ 6 ತಿಂಗಳ ವ್ಯಾಲಿಡಿಟಿಯುಳ್ಳ ಒಂದು ಭಾರತೀಯ ಪಾಸ್ ಪೋರ್ಟ್, ಗರಿಷ್ಠ 2 ಖಾಲಿ ಪುಟಗಳುಳ್ಳ ಮೂಲ ಪಾಸ್ ಪೋರ್ಟ್, ಕನ್ ಫರ್ಮ್ ರಿಟರ್ನ್ ಟಿಕೆಟ್ಹೋಟೆಲ್ ಬುಕಿಂಗ್.
ಗಮನಿಸಿ : ಯಾವುದೇ ದೇಶಕ್ಕೆ ಪ್ರವಾಸ ಹೊರಡುವ ಮೊದಲು, ಅದರ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ. ಹೀಗೆ ಮಾಡುವುದರಿಂದ ನೀವು ಅಲ್ಲಿಗೆ ಹೋದ ನಂತರ ಎಷ್ಟೋ ತೊಂದರೆಗಳಿಂದ ಬಚಾವಾಗಬಹುದು.
– ಜಿ. ಪಂಕಜಾ





