ರಾಮನವಮಿ ಸಂದರ್ಭದಲ್ಲಿ ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ‘ಸೂರ್ಯ ತಿಲಕ’ ಆಚರಣೆ ಈ ಬಾರಿ ಮತ್ತಷ್ಟು ವೈಭವದಿಂದ ನೆರವೇರಿತು.

ಬಾಲ ರಾಮನ ಮೂರ್ತಿಯ ಹಣೆ ಮೇಲೆ ನೇರವಾಗಿ ಸೂರ್ಯ ಕಿರಣಗಳು ತಿಲಕದ ರೂಪದಲ್ಲಿ ಹೊಳೆಯುವ ಕ್ಷಣ ಭಕ್ತರ ಮನಸ್ಸಿನಲ್ಲಿ ದಿವ್ಯ ಅನುಭವ ಮೂಡಿಸಿತು.

ಶ್ರೀರಾಮನ ಹಣೆಯ ಮೇಲಿನ ಸೂರ್ಯ ತಿಲಕವು ಸುಮಾರು 4 ನಿಮಿಷಗಳ ಕಾಲ ಇತ್ತು ಹಾಗೂ ಅದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಅದ್ಭುತ ದೃಶ್ಯದ ಹಿಂದೆ ಸುಧಾರಿತ ವೈಜ್ಞಾನಿಕ ತಂತ್ರಜ್ಞಾನವೂ ಅಡಗಿದೆ. ದೇವಸ್ಥಾನದ ಮೇಲ್ಭಾಗದಲ್ಲಿ ಅಳವಡಿಸಿರುವ ವಿಶೇಷ ಲೆನ್ಸ್‌ಗಳು ಮತ್ತು ಕನ್ನಡಿ ವ್ಯವಸ್ಥೆಗಳ ಮೂಲಕ ಸೂರ್ಯನ ಕಿರಣಗಳನ್ನು ನಿಖರವಾಗಿ ಗರ್ಭಗುಡಿಯೊಳಗೆ ಬರುವಂತೆ ತಂತ್ರ ರೂಪಿಸಲಾಗಿದೆ.

ಈ ವ್ಯವಸ್ಥೆ ಸೂರ್ಯನ ಸ್ಥಿತಿಗತಿಗಳನ್ನು ಲೆಕ್ಕಹಾಕಿ, ಸರಿಯಾದ ಸಮಯದಲ್ಲಿ ಕಿರಣಗಳು ರಾಮನ ಮೂರ್ತಿಯ ಹಣೆಯ ಮೇಲೆ ಬೀಳುವಂತೆ ಮಾಡುತ್ತದೆ. ಈ ಬಾರಿ ಸುಮಾರು 3 ರಿಂದ 4 ನಿಮಿಷಗಳವರೆಗೆ ಈ ದಿವ್ಯ ತಿಲಕ ಸ್ಪಷ್ಟವಾಗಿ ಕಾಣಿಸಿತು.ಈ ಸಂದರ್ಭ ಇಡೀ ಅಯೋಧ್ಯೆ ನಗರವೇ ಹಬ್ಬದ ವಾತಾವರಣದಲ್ಲಿ ಮಿಂದೆದ್ದಿತು. ಎಲ್ಲೆಲ್ಲೂ ರಾಮನಾಮ ಸ್ಮರಣೆ ಮುಗಿಲು ಮುಟ್ಟಿದವು.

ರಾಮನವಮಿ ಪ್ರಯುಕ್ತ ದೇವಸ್ಥಾನವನ್ನು ಆಕರ್ಷಕವಾಗಿ ಅಲಂಕರಿಸಲಾಗಿದ್ದು, ದೇಶದ ವಿವಿಧ ರಾಜ್ಯಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಭಕ್ತರು ಆಗಮಿಸಿ ಸೂರ್ಯ ತಿಲಕದ ಅಪರೂಪದ ಕ್ಷಣವನ್ನು ಕಣ್ತುಂಬಿಕೊಂಡರು.

ಭಕ್ತರ ಹೆಚ್ಚಿದ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು, ಸ್ವಯಂಸೇವಕರು ಹಾಗೂ ದೇವಸ್ಥಾನ ಸಿಬ್ಬಂದಿ ದರ್ಶನ ವ್ಯವಸ್ಥೆಯನ್ನು ಸುಗಮಗೊಳಿಸಿದ್ದರು.

ಜನಸಂದಣಿ ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳನ್ನು ಜಾರಿಗೆ ತಂದು, ಕೆಲವು ಪ್ರದೇಶಗಳಲ್ಲಿ ನೇರ ಪ್ರಸಾರಕ್ಕಾಗಿ ಎಲ್‌ಇಡಿ ಪರದೆಗಳನ್ನೂ ಅಳವಡಿಸಲಾಗಿತ್ತು.

ಸೂರ್ಯ ತಿಲಕ ಕಾರ್ಯಕ್ರಮವು ರಾಮನ ಸೂರ್ಯವಂಶೀಯ ಪರಂಪರೆಯನ್ನು ಸ್ಮರಿಸುವ ಮಹತ್ವದ ಆಚರಣೆಯಾಗಿದೆ. ಭಕ್ತರ ನಂಬಿಕೆ ಪ್ರಕಾರ, ಈ ಕ್ಷಣವನ್ನು ಕಣ್ತುಂಬಿಕೊಳ್ಳುವುದು ಶುಭಕರ ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆ ಸಾವಿರಾರು ಭಕ್ತರು ಈ ದಿವ್ಯ ಕ್ಷಣಕ್ಕಾಗಿ ಗಂಟೆಗಳ ಕಾಲ ಕಾಯುತ್ತಿದ್ದರು.  ಸೂರ್ಯ ತಿಲಕ ಆಚರಣೆಯು ಎಲ್ಲಾ ಆಚರಣೆಗಳ ಮಧ್ಯೆ ಪ್ರಮುಖ ಆಕರ್ಷಣೆಯಾಗಿದ್ದು, ಇದು ಅಯೋಧ್ಯೆ ರಾಮಮಂದಿರದ ಮಹತ್ವ ಹೆಚ್ಚಿಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ