ಕಥೆ – ಸದ್ಯೋಜಾತ
ಹಳ್ಳಿಯ ಪರಿಸರದಲ್ಲಿ ತನ್ನ ಜಾಣ್ಮೆಯಿಂದ ಹಂತ ಹಂತವಾಗಿ ಮೇಲೇರಿ, ಸಂಸಾರದಲ್ಲಿ ತೊಡಗಿದ ನಂತರ ತಾನು ಬಯಸಿದಂತೆ ಡಾಕ್ಟರ್ ಆಗಲೇಬೇಕೆಂಬ ಛಲದಿಂದ ಪ್ರದ್ಯೋತ, ನಿವೃತ್ತಿ ನಂತರ ವೈದ್ಯನಾಗಲು ಬಯಸಿದ. ಅದರಲ್ಲಿ ಅವನು ಯಶಸ್ವಿಯಾದನೇ…..?
ಪ್ರದ್ಯೋತ ಸಣ್ಣವನಿದ್ದಾಗ ಓದಿನಲ್ಲಿ ಬಹಳ ಚುರುಕು. ಅವನನ್ನು ಅವನ ನೆಚ್ಚಿನ ಮೇಷ್ಟ್ರು ಗೊರರ್ ಸೂಜಿಗಲ್ಲು ಎನ್ನುತ್ತಿದ್ದರು. ಅವರು ಹೇಳಿದ್ದನ್ನು ಶಿರಸಾವಹಿಸಿ ಪಾಲಿಸುತ್ತಿದ್ದ. ಕನ್ನಡವೆಂದರೆ ಪಂಚಪ್ರಾಣ. ಇನ್ನು ವಿಜ್ಞಾನದ ಮೇಷ್ಟ್ರು ಶಿವಲಿಂಗಪ್ಪ ಹೇಳುತ್ತಿದ್ದುದೇ ಬೇರೆ, “ಇವನು ವಿಜ್ಞಾನವನ್ನು ಬಿಟ್ಟು ಬೇರೆ ವಿಷಯಗಳನ್ನು ಓದುತ್ತಾನೋ ಇಲ್ಲವೋ,” ಎಂದು ಸಂಶಯ ವ್ಯಕ್ತಪಡಿಸುತ್ತಿದ್ದರು. ಅದಕ್ಕೆಂದೇ ಒಮ್ಮೆ ಹೆಡ್ ಮೇಸ್ಟ್ರಿಗೆ ಹೇಳಿ, ಅವನ ಇತರೆ ವಿಷಯಗಳಲ್ಲಿ ತೆಗೆದ ಮಾರ್ಕ್ಸ್ ತರಿಸಿ ನೋಡಿದರು. ಪ್ರದ್ಯೋತ ಮಾತ್ರ ಎಲ್ಲಾ ವಿಷಯಗಳಲ್ಲಿಯೂ ಉತ್ತಮ ಅಂಕಗಳನ್ನೇ ಪಡೆದುಕೊಳ್ಳುತ್ತಿದ್ದ. ಹಳ್ಳಿಯ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದರೂ ಓದಿನಲ್ಲಿ ಸದಾ ಮುಂದು ಮತ್ತು ಎಲ್ಲಾ ಮೇಷ್ಟ್ರುಗಳ ಅಚ್ಚುಮೆಚ್ಚಿನ ಶಿಷ್ಯನಾಗಿದ್ದ.
ಅವನ ಶಾಲೆಯಲ್ಲಿ ಎಲ್ಲಾ ಮೇಷ್ಟ್ರುಗಳು ಗೈಡ್ ರೆಫರ್ ಮಾಡಬೇಡಿ, ಮೇಷ್ಟ್ರು ಹೇಳಿಕೊಟ್ಟಿದ್ದನ್ನು ಗಮನವಿಟ್ಟು ಓದಿಕೊಳ್ಳಿ. ವಿಷಯ ಅರ್ಥವಾಗದಿದ್ದಲ್ಲಿ ಪುನಃ ಕೇಳಿ ಸಂದೇಹಗಳನ್ನು ಬಗೆಹರಿಸಿಕೊಳ್ಳಿ ಎಂದು ಯಾವಾಗಲೂ ಹೇಳುತ್ತಿದ್ದರು. ಪ್ರದ್ಯೋತ ಒಂಬತ್ತನೆ ತರಗತಿಯಲ್ಲಿ ಕನ್ನಡ ವಾರ್ಷಿಕ ಪರೀಕ್ಷೆಯಲ್ಲಿ ನೂರಕ್ಕೆ ತೊಂಬತ್ತೆಂಟು ಅಂಕ ಗಳಿಸಿದ್ದ. ಇದು ಎಲ್ಲಾ ಹುಡುಗರ ಕಣ್ಣು ಕುಕ್ಕಿತು. ಪ್ರದ್ಯೋತನ ಕ್ಲಾಸ್ ಮೇಟ್ ಪಾರ್ವತಿ ಗೊರರ್ ಮೇಷ್ಟ್ರು ಹತ್ತಿರ ರಗಳೆ ತೆಗೆದಳು.
“ಸಾರ್, ಈ ಪ್ರದ್ಯೋತ ಕನ್ನಡ ಗೈಡ್ ಬಳಸಿ ಉತ್ತರ ಬರೆಯುತ್ತಾನೆ. ನೀವೆಲ್ಲರೂ ಗೈಡ್ ಬಳಸಬಾರದು ಎಂದು ಹೇಳ್ತೀರೀ…. ಇದು ನ್ಯಾಯಾ? ಅವನು ಮಾತ್ರ ನೂರಕ್ಕೆ ತೊಂಬತ್ತೆಂಟು ಮಾರ್ಕ್ಸ್ ಪಡೆಯುತ್ತಾನೆ. ನಾವೆಲ್ಲಾ ಕಡಿಮೆ ಪಡೆಯುತ್ತೇವೆ,” ಎಂದು ಪ್ರದ್ಯೋತನ ವಿರುದ್ಧ ಯುದ್ಧ ಸಾರಿದಳು.
ಮೇಷ್ಟ್ರು ಪ್ರದ್ಯೋತನನ್ನು ಕರೆದು, “ನೀನು ಗೈಡ್ ಬಳಸುತ್ತಿದ್ದೀಯಾ….?” ಎಂದು ಕೇಳಿದರು.
ಅದಕ್ಕವನು, “ಸಾರ್, ನಾನು ಗೈಡ್ ಬಳಸುತ್ತಿಲ್ಲ. ನನ್ನ ಅಕ್ಕ ಕನ್ನಡದಲ್ಲಿ ಬಹಳ ಜಾಣೆ. ಆಕೆ ನನಗೆ ಮನೆಯಲ್ಲಿ ಕನ್ನಡ ಪಾಠ ಮತ್ತೆ ಹೇಳಿಕೊಡುತ್ತಾಳೆ. ಮೇಲಾಗಿ ನೋಟ್ಸ್ ಕೂಡ ಸಿದ್ಧ ಮಾಡಿಕೊಡುತ್ತಾಳೆ. ಅದರಿಂದ ಓದಿ ನಾನು ಉತ್ತರ ಬರೆಯುತ್ತೇನೆ,” ಎಂದು ನಿಜವನ್ನು ತೆರೆದಿಟ್ಟ. ಪ್ರದ್ಯೋತನ ಅಕ್ಕ ಮನೆಯಲ್ಲಿ ಇವನ ಕನ್ನಡ ಪುಸ್ತಕ ಓದಿ ನೋಟ್ಸ್ ಮಾಡಿಕೊಂಡು ಪ್ರತಿನಿತ್ಯ ಪಾಠ ಹೇಳಿಕೊಡುತ್ತಿದ್ದಳು.
“ನಿಮಗೆ ನಂಬಿಕೆ ಬರದಿದ್ದಲ್ಲಿ ಒಮ್ಮೆ ನಾನು ನಮ್ಮ ಅಕ್ಕನ ನೋಟ್ಸ್ ತಂದು ತೋರಿಸುತ್ತೇನೆ,” ಎಂದು ಅಕ್ಕ ಬರೆದ ನೋಟ್ಸ್ ಗಳನ್ನು ಶಾಲೆಗೆ ತಂದು ತೋರಿಸಿದ.
ನೋಟ್ಸ್ ನೋಡಿದ ಗೊರರ್ ಮೇಷ್ಟ್ರು ಸಮಾಧಾನಗೊಂಡರು. ಪಾರ್ವತಿಯನ್ನು ಕರೆದು, “ನೀನು ಪ್ರದ್ಯೋತನ ಅಕ್ಕನ ಬಳಿ ಪಾಠಕ್ಕೆ ಹೋಗು. ನಿನಗೂ ಉತ್ತಮ ಅಂಕಗಳು ದೊರೆಯುತ್ತವೆ,” ಎಂದರು.
ಎಸ್.ಎಸ್.ಎಲ್.ಸಿಯಲ್ಲಿ ಪಾರ್ವತಿ ದಿನ ಪ್ರದ್ಯೋತನ ಮನೆಗೆ ಬಂದು ಅವನ ಅಕ್ಕನ ಬಳಿ ಪಾಠ ಹೇಳಿಸಿಕೊಂಡಳು. ಆದರೂ ಕ್ಲಾಸಿನಲ್ಲಿ ಕನ್ನಡದಲ್ಲಿ ಅವಳಿಗೆ ಎರಡನೇ ಸ್ಥಾನವೇ ಗಟ್ಟಿಯಾಗಿರುತ್ತಿತ್ತು. ಅಷ್ಟಾದರೂ ಸಾಧಿಸಿದೆನಲ್ಲ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದಳು. ಒಂಬತ್ತನೇ ತರಗತಿಯಲ್ಲಿ ಪ್ರದ್ಯೋತನನ್ನು ವೈರಿಯಂತೆ ನೋಡುತ್ತಿದ್ದಳು, ನಂತರ ಎಸ್.ಎಸ್.ಎಲ್.ಸಿಯಲ್ಲಿ ಸ್ನೇಹಿತನಂತೆ ನೋಡಲಾರಂಭಿಸಿದಳು. ಕಾರಣ ಕ್ಲಾಸಿನಲ್ಲಿ ಎರಡನೇ ಸ್ಥಾನ ಗಟ್ಟಿಯಾದ್ದರಿಂದ.
ಇಬ್ಬರೂ ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾದರು. ಪ್ರದ್ಯೋತ ಮುಂದೆ ಪಿಯುಸಿ ಓದಲು ಹೋದ. ಹಳ್ಳಿಯಲ್ಲೇ ಇದ್ದ ಪಾರ್ವತಿಗೆ ಅವರಪ್ಪ ಮುಂದಿನ ವರ್ಷದಲ್ಲಿ ಮದುವೆಗೆ ತಯಾರಿ ಮಾಡ ತೊಡಗಿದರು.
ರಜೆಗೆಂದು ಊರಿಗೆ ಬಂದಿದ್ದ ಪ್ರದ್ಯೋತ ಪಾರ್ವತಿಯನ್ನು ಭೇಟಿಯಾಗಿ, “ನೀನು ಇನ್ನೂ ಚಿಕ್ಕವಳು, ಮದುವೆಯನ್ನು ಮುಂದೂಡು,” ಎಂದು ಹೇಳಿದ. ಆದರೆ ಮನೆಯ ಹಿರಿಯರ ಒತ್ತಡ ಮತ್ತು ಮುಂದೆ ಓದಲು ಪರ ಊರಿಗೆ ಹೋಗಲಾಗದ ಸ್ಥಿತಿಗೆ ಅವಳು ಅಸಹಾಯಕಳಾಗಿದ್ದಳು.
“ನೀನೆಂತಹ ಚಿಕ್ಕವಳು….? ಮೈನೆರೆದು ಒಂದೂರೆ ವರ್ಷಗಳೇ ಕಳೆದಿವೆ. ನಾವೆಲ್ಲ ಮೈನೆರೆಯುವುದಕ್ಕಿಂತ ಮೊದಲೇ ಮದುವೆಯಾಗಿ, ಮೈನೆರೆತ ಮೇಲೆ ಗಂಡನ ಮನೆಗೆ ಸಂಸಾರ ಮಾಡಲು ಬಂದರು. ಅವನು ನಿನ್ನ ಕ್ಲಾಸ್ ಮೇಟ್ ಹುಡುಗ. ಅವನಿಗೇನು ತಿಳಿಯುತ್ತೆ? ನಾವು ಹೇಳಿದಂತೆ ನೀನು ಕೇಳು, ಮದುವೆಯಾಗಿ ಸಂಸಾರ ಮಾಡು,” ಎಂದರು ಪಾರ್ವತಿಯ ಅಮ್ಮ ಖಾರವಾಗಿ.
ಅವಳನ್ನು ಮದುವೆಯಾಗುವ ಹುಡುಗ ಬೇರೆ ಊರಿನಲ್ಲಿ ಹೈಸ್ಕೂಲ್ ಮೇಷ್ಟ್ರಾಗಿ ಸರ್ವೀಸಿನಲ್ಲಿದ್ದ. ಒಳ್ಳೆಯ ಹುಡುಗ, ಮೇಲಾಗಿ ನೌಕರಿಯಲ್ಲಿದ್ದಾನೆ. ಇಂತಹ ಸಂಬಂಧ ಮುಂದೆ ದೊರೆಯುತ್ತದೋ ಇಲ್ಲವೋ ಎಂದು ಸಾಧಕ ಬಾಧಕಗಳನ್ನು ಅಳೆದು ತೂಗಿ ನೋಡಿ, ಮದುವೆಯ ಓಲಗ ಊದಿಸಿಯೇ ಬಿಟ್ಟರು. ಮುಂದೆ ಪಾರ್ವತಿ ಗಂಡನ ಮನೆಯಲ್ಲಿ ಒಳ್ಳೆಯ ಸದ್ಗೃಹಿಣಿಯಾಗಿ ಜೀವನ ಮಾಡುತ್ತಾ ಹುಟ್ಟಿದ ಮನೆಗೂ, ಮೆಟ್ಟಿದ ಮನೆಗೂ ಒಳ್ಳೆಯ ಹೆಸರು ತಂದಳು.
ಎರಡನೇ ಪಿಯುಸಿಯಲ್ಲಿ ಒಳ್ಳೆಯ ಅಂಕ ಪಡೆದ ಪ್ರದ್ಯೋತ ಮುಂದೆ ಡಾಕ್ಟರ್ ಓದಬೇಕೆಂದು ಪ್ರಯತ್ನಿಸಿದ. ಆದರೂ ಎಂ.ಬಿ.ಬಿ.ಎಸ್ ಸೀಟು ಅವನಿಗೆ ನಿಲುಕದ ನಕ್ಷತ್ರ. ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಸೀಟು ದೊರೆಯಲಿಲ್ಲ. ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಆಗಿನ ಕಾಲಕ್ಕೆ ಹತ್ತು ಸಾವಿರ ಡೊನೇಷನ್ ಕೇಳಿದರು.
ಪ್ರದ್ಯೋತನ ಅಪ್ಪನಿಗೆ ಚರ್ಮ ಸುಲಿದರೂ ಹತ್ತು ಸಾವಿರ ಹಣ ಹುಟ್ಟಲಾರದ ಕಾಲ ಅದಾಗಿತ್ತು. ಅವನು ಡಾಕ್ಟರ್ ಆಗುವ ತನ್ನ ಕನಸಿಗೆ ಎಳ್ಳು ನೀರು ಬಿಟ್ಟು ಬಿ.ಎಸ್ಸಿ ಮುಗಿಸಿದವನೆ ಎಫ್ ಡಿಎ ಪರೀಕ್ಷೆ ಬರೆದ ಮತ್ತು ಉತ್ತಮ ಅಂಕ ಪಡೆದು ಸೆಲೆಕ್ಟ್ ಕೂಡಾ ಆದ. ನೌಕರಿಯ ಆರ್ಡರ್ ಗಾಗಿ ಕಾದ. ಆರ್ಡರ್ ಬರುವುದು ತಡವೆಂದು ತಿಳಿದು ಮುಂದೆ ಓದಲು ಮುಂದಾದ.
ಸಾಹಿತ್ಯ ಅವನನ್ನು ಆಕರ್ಷಿಸಿತು. ಎಂ.ಎಗೆ ಸೇರಿ ಇಂಗ್ಲಿಷ್ ಮೇಜರ್ ಮಾಡಿ ಮುಗಿಸಿದ. ಅಷ್ಟರಲ್ಲಿ ಅವನಿಗೆ ಎಫ್.ಡಿ.ಎ ಆಗಿ ನೌಕರಿಯ ಆರ್ಡರ್ ಬಂತು. ಬದುಕಿನ ಗತಿ ಬದಲಾಯಿತು. ಎಂ.ಎ ಇಂಗ್ಲಿಷ್ ಮಾಡಿದ್ದರೂ ಉಪನ್ಯಾಸಕರ ಹುದ್ದೆಗೆ ಕಾಯದೆ ಎಫ್ ಡಿಎ ಕೆಲಸಕ್ಕೆ ಸೇರಲು ನಿರ್ಧರಿಸಿದ. ಕೆಲಸ ಮಾಡುತ್ತಾ ಪಿಎಚ್‌ಡಿಯನ್ನಾಗಲಿ ಇಲ್ಲವೇ ಕೆಪಿಎಸ್‌ಸಿ ಪರೀಕ್ಷೆ ಬರೆದು ಪಡೆದುಕೊಂಡರಾಯಿತೆಂದು ಕೆಲಸಕ್ಕೆ ಸೇರಿದ.

ಆದರೂ ಅವನ ಮನಸ್ಸಿನಲ್ಲಿ ಡಾಕ್ಟರ್ ಕನಸು ಕಾಡುತ್ತಲೇ ಇತ್ತು. ಅದರ ಕೊರಗು ಒಂದೆಡೆಯಾದರೆ, ಮನೆ, ಅಪ್ಪ ಅಮ್ಮ ಮತ್ತು ಇತರೆ ಜವಾಬ್ದಾರಿಗಳು ಬದುಕಿನ ಕಟು ಸತ್ಯದೆಡೆಗೆ ಎಳೆಯುತ್ತಿದ್ದವು. ಅವನು ಜವಾಬ್ದಾರಿಯಿಂದ ವಿಮುಖನಾಗಲಿಲ್ಲ. ಮದುವೆಯಾಗಿ, ತನ್ನ ತಾಯಿ ತಂದೆಯರನ್ನು ಸಾಕಿ ಸಲಹಲು, ಸಂಸಾರ ಸಾಗರದಲ್ಲಿ ಈಜಲು ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಂಡ.
ಅಮ್ಮ ಅಪ್ಪ ಸಂಬಂಧದಲ್ಲಿ ಹುಡುಗಿಯನ್ನು ನೋಡಿ ಮದುವೆ ಮಾಡಿದರು. ಮದುವೆಯ ನಂತರ ಮಡದಿ, ಮನೆ ಮಕ್ಕಳು ಎಂದು ಅವನು ಅನೇಕ ಸಂಘರ್ಷಗಳನ್ನು ಎದುರಿಸಬೇಕಾಯಿತು. ಮುಖ್ಯವಾಗಿ ತನ್ನ ತಾಯಿ ತಂದೆಯರನ್ನು ಹಳ್ಳಿಯಲ್ಲಿ ಬಿಟ್ಟು ತಾನು ಮತ್ತು ತನ್ನ ಹೆಂಡತಿ, ಮಕ್ಕಳ ಜೊತೆ ಪಟ್ಟಣ ಸೇರಿದ. ಕುಂಡದಲ್ಲಿ ಬೆಳೆಯುವ ಹೂವಿನ ಗಿಡದಂತೆ, ಬದುಕು ಬಾಡಿಗೆ ಮನೆಯಲ್ಲಿ ಅರಳಲು ಪ್ರಾರಂಭಿಸಿತು. ಗಿಡಕ್ಕೆ ನೀರು, ಗೊಬ್ಬರ ಸ್ವಲ್ಪ ಕಡಿಮೆ ಇಲ್ಲ, ಸ್ವಲ್ಪ ಹೆಚ್ಚಿಲ್ಲ. ಎಲ್ಲ ರೇಷನ್ ಕಾರ್ಡಿನ ರೇಷನ್ ನಂತೆ. ಬಾಡಿಗೆ ಮನೆ ರೈಲ್ವೆ ಕಂಪಾರ್ಟ್ ಮೆಂಟ್ ನಂತಹದು. ಅದರಲ್ಲಿ ನಾಲ್ಕು ಜೀವಗಳು. ಗಂಡ ಹೆಂಡತಿ ಮತ್ತು ಮುದ್ದಾದ ಮಗ ಮತ್ತು ಮಗಳು. ಇವರೇ ನಾಲ್ಕು ಜನ ಅವನ ಜಗತ್ತು ಎಂದು ದುಡಿಯಲಾರಂಭಿಸಿದ.
ಆಫೀಸ್ ನಲ್ಲಿ ಬಾಸ್ ಮೆಚ್ಚುವಂತೆ ಕೆಲಸ ಮಾಡುತ್ತಾ, ತನ್ನ ಟ್ರಾನ್ಸ್ ಫರ್ ಗಳನ್ನು ಮುಂದೂಡುತ್ತಾ, ವೃತ್ತಿಯಲ್ಲಿ ಮೇಲೇರುತ್ತಾ ಹೋದ. ನಿಷ್ಠೆಯಿಂದ ದುಡಿಯುತ್ತಾ ಹೆಂಡತಿ ಮಕ್ಕಳ ಜೊತೆಗೆ ತಾಯಿ ತಂದೆಯ ಬೇಕು ಬೇಡಗಳನ್ನು ಪೂರೈಸುತ್ತಾ ಸಂಸಾರದ ಗಾಡಿ ಎಳೆದ. ಕಾಲ ಒಂದೇ ರೀತಿ ಇರಲು ಸಾಧ್ಯವೇ? ಇಲ್ಲೂ ಒಂದು ಚಂಡಮಾರುತ ಬೀಸಿತು. ಇಳಿವಯಸ್ಸಿನ ಅಮ್ಮ ಅಪ್ಪನಿಗೆ ವಯೋಸಹಜ ಕಾಯಿಲೆ ಅಮರಿಕೊಂಡಿತು. ಇಬ್ಬರಿಗೂ ಆಸ್ತಮ ಅಂಟಿಕೊಂಡಿತು. ಅವರನ್ನು ಪಟ್ಟಣಕ್ಕೆ ಕರೆತರಲು ಪ್ರಯತ್ನಿಸಿದ. ಪ್ರದ್ಯೋತನಿದ್ದ ನಗರ ಆಸ್ತಮ ಮತ್ತು ಅಲರ್ಜಿಗೆ ಹೇಳಿ ಮಾಡಿಸಿದಂತಿತ್ತು. ಡಾಕ್ಟರ್ ಸಲಹೆ ಮೇರೆಗೆ ಅವನ ತಾಯಿ ತಂದೆ ಪುನಃ ಹಳ್ಳಿ ಮನೆಗೆ ಸೇರಿಸಬೇಕಾಯಿತು.
ಹಳ್ಳಿಯಲ್ಲಿ ಎಡೆಬಿಡದೆ ಸತತವಾಗಿ ನಡೆಸಿದ ಔಷಧೋಪಚಾರದಿಂದ ಮತ್ತೆ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತು. ಹಳ್ಳಿಯಲ್ಲಿ ಪ್ರದ್ಯೋತ ತನ್ನ ಅಪ್ಪ ಅಮ್ಮರನ್ನು ನೋಡಿಕೊಳ್ಳಲು ಕೆಲಸದವರನ್ನು ನೇಮಿಸಿದ. ಮಗನ ಸೇವೆಯಿಂದ ಅವನಪ್ಪ ಪ್ರಸನ್ನರಾದರು.
“ಪ್ರದ್ಯೋತ, ನಾನು ನಿನ್ನನ್ನು ಡಾಕ್ಟರ್ ಓದಿಸಬೇಕಿತ್ತು. ಅಂದಿನ ದಿನಗಳಲ್ಲಿ ನನ್ನ ಆರ್ಥಿಕ ಪರಿಸ್ಥಿತಿ ಅದಕ್ಕೆ ಪೂರಕವಾಗಿರಲಿಲ್ಲ. ಈಗ ನೀನಾದರೂ ನಿನ್ನ ಮಗನನ್ನು ಮೆಡಿಸಿನ್ ಓದಿಸು. ಬೇಕಾದರೆ ಹಳ್ಳಿಯ ನಮ್ಮ ಜಮೀನು ಮಾರಿ ಬಿಡು. ಅವನ ಫೀಜ್ ಮತ್ತು ಪುಸ್ತಕಕ್ಕೆ ಬೇಕಾಗುತ್ತೆ. ಮೆಡಿಸಿನ್ ಓದು ಬಹಳ ಖರ್ಚಿನದಲ್ಲವೇ….?” ತಮ್ಮ ಅಸಹಾಯಕತೆಯ ವ್ಯಥೆಯನ್ನು ಹೊರ ಹಾಕಿದರು ತಂದೆ.
ಮಗನನ್ನು ಮೆಡಿಸಿನ್ ಓದಿಸಲಾಗಲಿಲ್ವಲ್ಲಾ ಎಂದು ಅವರ ಮನಸ್ಸನ್ನು ಕಾಡಿದ್ದುದು ಈಗ ಪ್ರದ್ಯೋತನಿಗೆ ತಿಳಿಯಿತು. ತಂದೆ ಮಗ ಇಬ್ಬರ ಕಣ್ಣೂ ಹನಿಗೂಡಿದವು. ಸಾಧ್ಯವಾಗಲಿಲ್ಲವಲ್ಲ ಎಂದು ಒಬ್ಬರಿಗೆ, ಇನ್ನೂ ಹೆಚ್ಚು ಪ್ರಯತ್ನ ಪಡಲಿಲ್ವಲ್ಲಾ ಎಂದು ಮತ್ತೊಬ್ಬರಿಗೆ ಎಂದು. ತಕ್ಷಣ ಭಾವುಕತೆಯಿಂದ ಹೊರಬಂದು, “ಅಪ್ಪ ನನ್ನ ಮಗನನ್ನು ಮೆಡಿಸಿನ್ ಗೆ ಓದಿಸುತ್ತೇನೆ. ನೀವೇನೂ ಚಿಂತೆ ಮಾಡಬೇಡಿ. ಕಳೆದದ್ದನ್ನೆಲ್ಲಾ ಯೋಚಿಸಿ ಫಲವೇನು? ನೀವು ನೆಮ್ಮದಿಯಿಂದಿರಿ,” ಅಪ್ಪನನ್ನು ಸಮಾಧಾನಿಸಿದ ಪ್ರದ್ಯೋತ.
ಪ್ರದ್ಯೋತನ ಮಗ ರಜತ್ ಪಿಯುಸಿಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದ. ಈಗ ಮೆಡಿಕಲ್ ಎಂಟ್ರೆನ್ಸ್ ಪರೀಕ್ಷೆಯಾದ ನೀಟ್ ಗೆ ತಯಾರಿ ನಡೆಸಿದ. ಪಿಯುಸಿ ಉದ್ದಕ್ಕೂ ನೀಟ್ ಬಗ್ಗೆ ಒತ್ತು ಕೊಟ್ಟು ಅಭ್ಯಾಸ ಮಾಡಿದ್ದ. ಮೇ ಕೊನೆಯ ವಾರದಲ್ಲಿ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟವಾಯಿತು. ಪ್ರದ್ಯೋತನ ಮಗ ರಜತ ಉತ್ತಮ ಶ್ರೇಣಿಯಲ್ಲಿ ಕ್ವಾಲಿಫೈ ಆದ ಮತ್ತು ಮೆಡಿಕಲ್ ಸೀಟ್ ಪಡೆದುಕೊಂಡ. ಅದೂ ವಿದ್ಯಾರ್ಥಿ ವೇತನದೊಂದಿಗೆ.
ಪ್ರದ್ಯೋತ ತನ್ನ ಮಗನನ್ನು ಎಂ.ಬಿ.ಬಿ.ಎಸ್ ಗೆ ಸೇರಿಸಿ, ಬಹಳ ಸಂತಸಪಟ್ಟ. ಅವನ ಹೆಂಡತಿಗೂ ಹರ್ಷವಾಗಿತ್ತು. ತಾಯಿತಂದೆ ವಿಷಯ ತಿಳಿಸಲು ಪ್ರದ್ಯೋತ ತನ್ನ ಹುಟ್ಟು ಊರಿಗೆ ಹೋದ. ತನ್ನ ಅಪ್ಪ ಅಮ್ಮರಿಗೆ ತನ್ನ ಮಗ ರಜತ್ ಎಂಬಿಬಿಎಸ್ ಸೇರಿದ್ದನ್ನು ಹೇಳಿ ಅಪ್ಪನ ಕಾಲಿಗೆ ನಮಸ್ಕರಿಸಿದ. ಅಪ್ಪ ವಿಷಯ ಕೇಳಿಸಿಕೊಳ್ಳುತ್ತಿದ್ದಂತೆಯೇ ಸಂತೋಷದಿಂದ ಎದೆ ಹಿಡಿದುಕೊಂಡು, ಬಹಳ ಹರ್ಷಿತರಾಗಿ ಕ್ಷಣ ಮೌನಿಯಾದರು. ಅಪ್ಪ ಬಹಳ ಸಂತೋಷಗೊಂಡಿದ್ದಾರೆಂದು ಪ್ರದ್ಯೋತ ಒಂದು ಕ್ಷಣ ಹಾಗೇ ನಿಂತ. ಅಪ್ಪ ಅಲುಗಾಡಲಿಲ್ಲ, ಮಾತನಾಡಲಿಲ್ಲ. ಕಣ್ಣಲ್ಲಿ ಆನಂದಬಾಷ್ಪ ಉದುರಿದವು. ಕುಳಿತಿದ್ದ ಅಪ್ಪನ ದೇಹ ಹಾಗೇ ಗೋಡೆಗೊರಗಿತು. “ಅಪ್ಪಾ….. ಅಪ್ಪಾ…..” ಅಪ್ಪನ ದೇಹನ್ನಿಡಿದು ಅಲುಗಾಡಿಸಿದ. ದೇಹದಲ್ಲಿ ಸ್ವಾಧೀನವಿಲ್ಲದ್ದು ಅವನ ಅರಿವಿಗೆ ಬಂತು. ಕೂಡಲೇ ತಂದೆಯನ್ನು ಮಲಗಿಸಿ, ಡಾಕ್ಟರ್ ನ್ನು ಕರೆತರಲು ಹಳ್ಳಿಯ ಆಸ್ಪತ್ರೆಯೆಡೆಗೆ ಓಡಿದ. ಆಸ್ಪತ್ರೆಯಲ್ಲಿ ಜನಸಂದಣಿ ಇಲ್ಲದ್ದರಿಂದ ಕೂಡಲೇ ಡಾಕ್ಟರ್ ತಮ್ಮ ಕಿಟ್ ಹಿಡಿದು ಪ್ರದ್ಯೋತನ ಮನೆಯ ಕಡೆ ಜೋರು ಹೆಜ್ಜೆ ಹಾಕಿದರು.
ಡಾಕ್ಟರ್, ಮಲಗಿದ ಸ್ಥಿತಿಯಲ್ಲಿದ್ದ ಪ್ರದ್ಯೋತನ ತಂದೆಯ ದೇಹವನ್ನು ಮುಟ್ಟಿ ಅಲುಗಿಸಿದರು. ಅವರಿಗೆ ತಣ್ಣನೆಯ ಅನುಭವವಾಯಿತು. ನಾಡಿ ಹಿಡಿದು ನೋಡಿದರು. ನಾಡಿ ತುಂಬಾ ಕ್ಷೀಣಿಸಿತ್ತು. ಡಾಕ್ಟರ್ ಮುಖದಲ್ಲಿ ಆತಂಕ ಮೂಡಿತು. ಕಣ್ಣು ರೆಪ್ಪೆ ಬಿಡಿಸಿ ನೋಡಿದರು. ರೆಪ್ಪೆಯನ್ನು ಬಲವಂತವಾಗಿ ತೆರೆದು ನೋಡಿದರು. ಡಾಕ್ಟರ್ ಗೆ, ರಿಗರ್ ಮೋರ್ಟಿಸ್ ಸೆಟ್ ಆಗಬಹುದೆನಿಸಿತು. ರೋಗಿಯ ದೇಹದ ಅಂಗಗಳು ಗಟ್ಟಿಯಾಗುವಿಕೆಯ ಅನುಭವಕ್ಕೆ ಬಂತು. ಹೃದಯ ಬಡಿತ ಇನ್ನೇನು ನಿಲ್ಲುವುದರಲ್ಲಿತ್ತು. ಡಾಕ್ಟರ್, ರೋಗಿಯ ಹೃದಯ ಬಡಿತವನ್ನು ಮರಳಿಸಲು ಪ್ರಯತ್ನಪಟ್ಟರು. ಹೃದಯಕ್ಕೆ ರಕ್ತ ಹರಿಯುವಂತೆ ಮಾಡಲಿ ಸಿಆರ್‌ಪಿ (ಕಾರ್ಡಿಯೋಪಲ್ಮನರಿ ಪುನರುಜ್ಜೀವನ) ಪ್ರಾರಂಭಿಸಿದರು. ಸಿಪಿಆರ್ ನ್ನು ಪ್ರಾರಂಭಿಸಿ ಹೃದಯ ಬಡಿತವಿದೆ ಎಂದು ಖಚಿತಪಡಿಸಿಕೊಂಡರು. ಪ್ರದ್ಯೋತನ ತಂದೆಯ ಎದೆಯ ಮಧ್ಯಭಾಗದ ಮೇಲೆ ಒಂದು ಕೈಯ ಮೇಲೆ ಇನ್ನೊಂದು ಕೈಯಿಟ್ಟು ಸಾಕಷ್ಟು ಕ್ಷಿಪ್ರ ವಲಯದಲ್ಲಿ ಗಟ್ಟಿಯಾಗಿ ಮತ್ತು ವೇಗವಾಗಿ ತಳ್ಳಿದರು. ಒಂದು ನಿಮಿಷಕ್ಕೆ ಸುಮಾರು 100-120 ಸಂಕುಚನವನ್ನು ನೀಡಿದರು. ಹೀಗೆ ಹತ್ತು ನಿಮಿಷದವರೆಗೆ ಮಾಡಿದರು. ಸ್ವಲ್ಪ ಉಸಿರಾಟ ಕಂಡು ಬಂತು. ಡಾಕ್ಟರ್ ತಮ್ಮ ಪ್ರಯತ್ನವನ್ನು ಮುಂದುವರಿಸಿದರು.
ನಂತರ ತಮ್ಮ ಕಾರು ತರುವಂತೆ ಆಸ್ಪತ್ರೆಯ ಸ್ಟಾಫ್ ಗೆ ಹೇಳಿ ಕಳುಹಿಸಿದರು. ತಕ್ಷಣ ಹತ್ತಿರದ ಪಟ್ಟಣಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. 24 ಗಂಟೆಗಳ ಸತತ ಪ್ರಯತ್ನದಿಂದ ಪ್ರದ್ಯೋತನ ತಂದೆಯನ್ನು ಬದುಕುಳಿಸಿದರು. ಡಾಕ್ಟರ್ ಗೆ ವಂದಿಸಿದ ಪ್ರದ್ಯೋತ. ತಂದೆ ಔಟ್ ಆಪ್ ಡೇಂಜರ್ ಎಂದಾದ ಮೇಲೆ ಡಿಸ್ಚಾರ್ಜ್ ಮಾಡಿಸಿ ಹಳ್ಳಿಯಲ್ಲಿದ್ದ ಡಾಕ್ಟರ್ ಗೆ ಹೇಳಿ ಮನೆಗೆ ಹಿಂತಿರುಗಿದ. ದಾರಿಯಲ್ಲಿ ಮತ್ತೆ ಯೋಚನೆಗೆ ಜಾರಿದ. ತಾನು ಡಾಕ್ಟರ್ ಆಗಿದ್ದರೆ ತನ್ನ ಅಪ್ಪನನ್ನು ಇನ್ನೂ ಉತ್ತಮವಾಗಿ ನೋಡಿಕೊಳ್ಳಬಹುದಿತ್ತು. ದೇವರ ದಯೆ ತನ್ನ ಹಳ್ಳಿಯ ಡಾಕ್ಟರ್ ತಮ್ಮ ಶಕ್ತಿಮೀರಿ ಪ್ರಯತ್ನಿಸಿ, ಅಪ್ಪನನ್ನು ಬದುಕುಳಿಸಿದರು. ಏನೇ ಆಗಲಿ ತನ್ನ ಮಗ ಇನ್ನು ಐದೂವರೆ ವರ್ಷಗಳಲ್ಲಿ ಡಾಕ್ಟರ್ ಆಗುತ್ತಾನೆ. ಅವನಿಂದ ಎಲ್ಲವನ್ನೂ ತಿಳಿದುಕೊಂಡರಾಯಿತು ಎಂದು ಸಮಾಧವೆನಿಸಿಕೊಂಡ. ಆದರೂ ಮನಸ್ಸಿನಲ್ಲಿ ತಾನು ಡಾಕ್ಟರ್ ಆಗಬೇಕಿತ್ತು ಎಂಬ ಕೊರಗಿತ್ತು. ಅದು ಭೂತವಾಗಿ ಮನಸ್ಸನ್ನು ಕೊರೆಯಲು ಪ್ರಾರಂಭಿಸಿತು. ಶಿಕ್ಷಣಕ್ಕೆ ನಿವೃತ್ತಿ ವಯಸ್ಸು ಇಲ್ಲ. ಇಂಥ ನಂಬಿಕೆಯೇ ಮಲೇಷಿಯಾದ 70 ವರ್ಷದ ತೋ ಹಾಂಗ್ ಕೆಂಗ್ ಗೆ ನಿವೃತ್ತಿಯ ನಂತರ ತನ್ನ ಗುರಿಯನ್ನು ಸಾಧಿಸಲು ಪ್ರೇರೇಪಿಸಿತು. ಫಿಲಿಪೈನ್ಸ್ ನ ಸೆಬುನಲ್ಲಿರುವ ಸೌತ್ ವೆಸ್ಟರ್ನ್ ಯೂನಿವರ್ಸಿಟಿ ಫಿನ್ಮಾದಿಂದ ಆತ ಈಗ ಅತ್ಯಂತ ಹಳೆಯ ವೈದಕೀಯ ಪದವೀಧರರಾಗಿ ಗುರುತಿಸಲ್ಪಟ್ಟಿದ್ದಾರೆ. ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ನ್ಯೂಸ್ ಓದಿದ್ದನ್ನು ನೆನಪಿಸಿಕೊಂಡ. ತನಗಿನ್ನೂ 70 ಆಗಿಲ್ಲ. ಮಗನ ಎಂ.ಬಿ.ಬಿ.ಎಸ್ ಮುಗಿದ ಮೇಲೆ, ರಿಟೈರ್ ಆದ ಮೇಲೆ ಯೋಚಿಸಿದರಾಯಿತೆಂದು ಮನಸ್ಸಿಗೆ ಸಮಾಧನ ಮಾಡಿಕೊಂಡ.
ಮಗ ರಜತ ಹಗಲೂ ರಾತ್ರಿ ಕಷ್ಟಪಟ್ಟು ಓದತೊಡಗಿದ. ಮೆಡಿಕಲ್ ಕೋರ್ಸ್ ನಲ್ಲೇ ಕಠಿಣವಾದ ಸಬ್ಜೆಕ್ಟ್ ಎಂದರೆ ಮೊದಲನೇ ವರ್ಷದಲ್ಲಿ ಓದಿ ಅರಗಿಸಿಕೊಳ್ಳಬೇಕಾದ ವಿಷಯವೆಂದರೆ ಅನಾಟಮಿ. ಬಿಡದೆ ಹಗಲೂ ರಾತ್ರಿ ಓದಿದ. ಮೊದಲನೇ ವರ್ಷದ ಪರೀಕ್ಷೆ ಮುಗಿದಾಗ, ರಜೆ ಎಂದು ಸುಮ್ಮನೆ ಕೂರಲಿಲ್ಲ. ರಜೆಯಲ್ಲೂ ಸೀನಿಯರ್ ಗಳಿಂದ ಎರಡನೇ ವರ್ಷದ ಸಬ್ಜೆಕ್ಟ್ ಗಳನ್ನು ಪಡೆದುಕೊಂಡು ಓದಲಾರಂಭಿಸಿದ. ಕಾಲೇಜು ಪ್ರಾರಂಭವಾಗಲು ಒಂದು ವಾರವಿತ್ತು. ರಜತನ ಮೊದಲನೇ ವರ್ಷ ಫಲಿತಾಂಶ ಪ್ರಕಟವಾಯಿತು. ರಜತನಿಗೆ ಆಶ್ಚರ್ಯ ಕಾದಿತ್ತು. ತಾನು ಕಠಿಣ ಎಂದುಕೊಂಡಿದ್ದ ಅನಾಟಮಿಯಲ್ಲಿ ಗೋಲ್ಡ್ ಮೆಡಲ್ ದೊರಕಿತ್ತು. ರಜತ ಮತ್ತು ಪ್ರದ್ಯೋತರ ಸಂತಸಕ್ಕೆ ಪಾರವೇ ಇಲ್ಲದಾಯಿತು. ಪ್ರದ್ಯೋತನ ಹೆಂಡತಿ, ಮಗ ಮತ್ತು ಗಂಡನ ಸಂತಸದಲ್ಲಿ ಸದಾ ಭಾಗಿ. ಅನಾಟಮಿಯಲ್ಲಿ ದೊರೆತ ಗೋಲ್ಡ್ ಮೆಡಲ್ ರಜತನ ಓದಿಗೆ ಬೂಸ್ಟ್ ನೀಡಿತ್ತು. ಇನ್ನೂ ಹೆಚ್ಚು ಹೆಚ್ಚು ಓದಲು ತೊಡಗಿಸಿಕೊಂಡ. ಪರಿಶ್ರಮಕ್ಕೆ ತಕ್ಕಂತೆ ಫಲ ಪಡೆದುಕೊಂಡ.
ಆತಂಕದಲ್ಲಿ ಆರಂಭವಾದ ಓದು ನಾಗಾಲೋಟದಲ್ಲಿ ಸಾಗಿತು. ಐದೂವರೆ ವರ್ಷ ಕಳೆದದ್ದೇ ಗೊತ್ತಾಗಲಿಲ್ಲ. ರಜತ ಡಾಕ್ಟರ್ ಆಗಿ ಹೊರಬಂದ. ಮೆರಿಟ್ ನಲ್ಲಿ ಪಾಸಾಗಿದ್ದರಿಂದ ಮತ್ತು ಪಿ.ಜೆ. ಎಂಟ್ರೆನ್ಸ್ ಪರೀಕ್ಷೆಯಲ್ಲಿ ಅವನಿಗೆ ಶ್ರೇಷ್ಠ ಶ್ರೇಣಿ ಪಡೆದು ಜನರಲ್ ಮೆಡಿಸಿನ್ ನಲ್ಲಿ ಎಂ.ಡಿ. ಸೀಟು ದೊರೆಯಿತು, ಅದೂ ದೆಹಲಿಯ ಏಮ್ಸ್ ನಲ್ಲಿ. ಮುಂದೆ ಮೂರು ವರ್ಷದಲ್ಲಿ ಎಂ.ಡಿ. ಮುಗಿಸಿ ಬಂದ ರಜತ್ ಸ್ಪೆಷಲಿಸ್ಟ್ ಆದ. ಅವನಪ್ಪ ಪ್ರದ್ಯೋತನೇ ಅವನನ್ನು ಪ್ರೀತಿ ಮತ್ತು ಸಂತೋಷದಿಂದ ಡಾಕ್ಟರ್ ಎಂದು ಕರೆದ. ಮಗ ಬೆಂಗಳೂರಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿದ. ಬದುಕಿನಲ್ಲಿ ಎಲ್ಲಾ ತಾವೆಣಿಸಿದಂತೆ ಆಯಿತೆಂದು ಸಂತಸ ಪಡುತ್ತಿರುವಾಗ ಪ್ರದ್ಯೋತನ ತಂದೆಗೆ ಮೊಮ್ಮಗ ದೊಡ್ಡ ಡಾಕ್ಟರ್ ಆದ ವಿಷಯ ತಿಳಿದು ಹೃದಯಾಘಾತಕ್ಕೊಳಗಾದರು. ಎರಡನೇ ಬಾರಿ ಹೃದಯಾಘಾತದಿಂದ ಬದುಕುಳಿಯಲಿಲ್ಲ.
ಪ್ರದ್ಯೋತನ ಕುಟುಂಬದವರು ಅಂತಿಮ ಕರ್ಮಗಳನ್ನು ಮಾಡಿ ಮುಗಿಸಿದರು. ಎಲ್ಲಾ ಕೆಲಸಗಳನ್ನು ಮುಗಿಸಿ ಬೆಂಗಳೂರಿಗೆ ಬಂದಾಗ ಮತ್ತೆ ಪ್ರದ್ಯೋತನಿಗೆ ಶಾಕ್ ಕಾದಿತ್ತು. ಸರ್ವೀಸ್ ನ ಕೊನೆಯ ಪ್ರಮೋಷನ್ ವರ್ಗಾವಣೆಯಾಗಿ ದಾವಣಗೆರೆಗೆ ವರ್ಗವಾಗಿತ್ತು. ವಿಧಿ ಇಲ್ಲದೆ ಒಪ್ಪಿಕೊಂಡು ದಾವಣಗೆರೆಗೆ ಹೊರಟ. ರಜತ ಮತ್ತು ಅವನಮ್ಮ ಬೆಂಗಳೂರಿನಲ್ಲಾದರೆ, ಪ್ರದ್ಯೋತ ದಾವಣಗೆರೆಯಲ್ಲಿ ಸಿಂಗಲ್ ಬೆಡ್ ರೂಮ್ ಮನೆಯನ್ನು ಬಾಡಿಗೆಗೆ ಹಿಡಿದು ಕೆಲಸ ಮಾಡಾರಂಭಿಸಿದ.
ಬೆಂಗಳೂರಿನಲ್ಲಿ ಬಹಳ ವರ್ಷ ಜೀವನ ಮಾಡಿದ್ದ ಪ್ರದ್ಯೋತನಿಗೆ ದಾವಣಗೆರೆಯಲ್ಲಿ ಒಂಟಿತನ ಕಾಡಿತು. ಸ್ವಲ್ಪ ದಿನ ಕಳೆದ ಮೇಲೆ ದಾವಣಗೆರೆ ಬೆಣ್ಣೆ ದೋಸೆ ಸ್ವಾದ ಆಹ್ಲಾದಕರ ಎನಿಸಿ ಅದಕ್ಕೆ ಮನಸೋತ ಪ್ರದ್ಯೋತ. ಒಂಟಿತನ ಮತ್ತೆ ಚಿಂತಿತನನ್ನಾಗಿ ಮಾಡಿತು.
`ಕೆಲಸವಿಲ್ಲದ ನಿಷ್ಕ್ರಿಯ ಮನಸ್ಸು ದೆವ್ವದ ಕಾರ್ಯಾಗಾರ’ ಎಂಬ ಪದಗುಚ್ಛದಂತೆ ಪ್ರದ್ಯೋತನ ಮನಸ್ಸು ಋಣಾತ್ಮಕ ಯೋಚನೆಯಿಂದ ಹೊರಬರಲು ಚಿಂತಿಸಿತು. ಈ ಗಾದೆಯು ವ್ಯಕ್ತಿಗಳು ತಮ್ಮ ಮನಸ್ಸನ್ನು ಅನಪೇಕ್ಷಿತ ಪ್ರದೇಶಕ್ಕೆ ಅಲೆದಾಡುವುದನ್ನು ತಡೆಯಲು ಸಕ್ರಿಯವಾಗಿರಲು ಮತ್ತು ಅರ್ಥಪೂರ್ಣ ಅನ್ವೇಷಣೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಕಾರ್ಯನಿರತ ಮನಸ್ಸು ಯಾವಾಗಲೂ ಚಟುವಟಿಕೆಯುಳ್ಳ ಮನುಷ್ಯರನ್ನು ಕ್ರಿಯಾಶೀಲರನ್ನಾಗಿಸುತ್ತದೆ. ಅದಕ್ಕೆಂದೇ ಪ್ರದ್ಯೋತ ಈ ವಯಸ್ಸಿನಲ್ಲಿ ತನ್ನ ಮಹದಾಸೆಯ ಎಂ.ಬಿ.ಬಿ.ಎಸ್ ಮಾಡಲು ನಿರ್ಧರಿಸಿದ. ಮೊದ ಮೊದಲು ಮಗ ರಜತ್ ಮತ್ತು ಹೆಂಡತಿ, “ಈ ವಯಸ್ಸಿನಲ್ಲಿ ನೀವು ಓದುವ ಅವಶ್ಯಕತೆ ಏನಿದೆ? ನೀವು ಕಾಲೇಜಿನಲ್ಲಿ ಮೊಮ್ಮಗನ ವಯಸ್ಸಿನ ಹುಡುಗರ ಜೊತೆ ಇರಬೇಕಾಗುತ್ತೆ. ಅವರ ಜೊತೆ ನಿಂತು ಅನಾಟಮಿಯಲ್ಲಿ ಪ್ರಾಕ್ಟಿಕಲ್ಸ್, ಬಾಡಿ ಡಿಸೆಕ್ಟ್ ಮಾಡಬೇಕಾಗುತ್ತೆ. ಯೋಚಿಸಿ ನೋಡಿ ಪ್ರೊಫೆಸರ್ ಗಳು ಒಮ್ಮೊಮ್ಮೆ ಒರಟಾಗಿ ನಡೆದುಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹೇಗೆ ನಿಭಾಯಿಸುತ್ತೀರಿ? ಇಂಟರ್ನ್ ಮಾರ್ಕ್ಸ್ ಇರುತ್ತೆ. ದಿನ ಇವ್ಯಾಲುಯೇಶನ್ ಇರುತ್ತೆ,” ಮಗ ಬಿಡಿಸಿ ಹೇಳಿದ.
ಇವೆಲ್ಲದಕ್ಕೂ ಉತ್ತರ ಕಂಡುಕೊಳ್ಳುವುದಾಗಿ ಪ್ರದ್ಯೋತ ಹೇಳಿದ. ಅವನಿಗೆ ಇದ್ದದ್ದು ಏಕಲವ್ಯನ ಏಕಾಗ್ರತೆ. ಸಣ್ಣವನಾಗಿದ್ದಾಗ ಮಾಡಲಾಗದನ್ನು ಈಗ ಮಾಡುವ ಆಸೆ.
“ವಿದ್ಯಾರ್ಥಿ ಎಂದ ಮೇಲೆ ವಯಸ್ಸು ಅಡ್ಡಿಬರುವುದಿಲ್ಲ, ಬೇರೆ ಕ್ಷೇತ್ರಗಳಲ್ಲಿ ಉದಾಹರಣೆಗೆ, ನಟನೆ, ಸಂಗೀತ, ಗಾಯನ, ನೃತ್ಯ ಪ್ರಕಾರಗಳಲ್ಲಿ ಇಳಿವಯಸ್ಸಿನಲ್ಲಿಯೂ ತೊಡಗಿಸಿಕೊಂಡವರಿಲ್ಲವೇ? ರಜತ, ನೀನು ವಯಸ್ಸಾಯಿತೆಂದು ನಿವೃತ್ತಿ ಹೊಂದುವೆಯಾ?” ಮಗನನ್ನು ಪ್ರಶ್ನಿಸಿದ.
ಮೇಲಾಗಿ ಇನ್ನು ಮುಂದೆ ತನಗೆ ಅಂತಹ ಗುರುತರವಾದ ಕೆಲಸಗಳೇನೂ ಇಲ್ಲ ಎನ್ನುವುದೇ ಬಲಿಷ್ಠವಾದ ಕಾರಣವಾಯಿತು. ವಾದ ವಿವಾದಗಳ ನಂತರ ರಜತ ಮತ್ತು ಹೆಂಡತಿ ಒಪ್ಪಲೇಬೇಕಾಯಿತು. ಮಗ ಮತ್ತು ಹೆಂಡತಿ ಪ್ರದ್ಯೋತನ ನಿರ್ಧಾರವನ್ನು ಒಪ್ಪಿದ ಮೇಲೆ ಅವನು ನಿರಾಳನಾದ. ನೀಟ್ ಎಂಟರನ್ಸ್ ನಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಲಾರಂಭಿಸಿದ. ಹೇಗೆ ತಯಾರಾಗಬೇಕೆಂದು ಗೈಡ್ ಮಾಡಲು ಮಗನಿಗೆ ಹೇಳಿ, ಅವನ ಹಳೆಯ ಒಂದಷ್ಟು ಪುಸ್ತಕಗಳನ್ನು ಹೊತ್ತು ದಾವಣಗೆರೆ ಸೇರಿದ. ನಿಜವಾಗಿಯೂ ಪ್ರದ್ಯೋತ ಪುಸ್ತಕದ ಹುಳುವಾದ. ಅವನ ತಯಾರಿ ಸೀರಿಯಸ್ಸಾಗಿ ನಡೆಯಿತು. ನಿವೃತ್ತಿಗೆ ಸರಿಯಾಗಿ ನೀಟ್ ಪರೀಕ್ಷೆ ಬರೆಯಲು ನಿರ್ಧರಿಸಿ ಓದಲಾರಂಭಿಸಿದ. ವೀರೇಶಿ ಖಾನಾವಳಿಯಲ್ಲಿ ರಾತ್ರಿ ಊಟಕ್ಕೆ ಬರುತ್ತಿದ್ದ ಡಾಕ್ಟರ್ ಪರಮಶಿವರನ್ನು ಪರಿಚಯ ಮಾಡಿಕೊಂಡು ಒಂದು ವರ್ಷದ ನಂತರ ತನ್ನ ಅಭಿಲಾಷೆ ಮತ್ತು ತಯಾರಿಯನ್ನು ತಿಳಿಸಿ ಗೈಡ್ ಮಾಡಲು ಕೇಳಿಕೊಂಡು ಪ್ರದ್ಯೋತ. ಡಾಕ್ಟರ್ ಪರಮಶಿವರಿಗೆ ಆಶ್ಚರ್ಯವಾಯಿತು. ಆದರೆ ಪ್ರದ್ಯೋತನ ಅಚಲವಾದ ನಿರ್ಧಾರವನ್ನು ನೋಡಿ ಅವರು ಪ್ರೋತ್ಸಾಹಿಸಿದರು. ನಿರೀಕ್ಷಿತ ನಿವೃತ್ತಿಯ ದಿನ ಬಂತು. ಅದು ಏಪ್ರಿಲ್ ಮೂವತ್ತಾಗಿತ್ತು. ಅಂದು ಸಡಗರದಿಂದ ಆಫೀಸ್ ಗೆ ಹೋಗಿ ಎಲ್ಲರಿಗೂ ವಿದಾಯ ಹೇಳಿ ಅವರಿಂದ ಬೀಳ್ಕೊಂಡು ಮನೆ ಸೇರಿದ.
ಮುಂದಿನ ಎರಡು ದಿನಗಳಲ್ಲಿ ದಾವಣಗೆರೆಯ ಮನೆ ಖಾಲಿ ಮಾಡಿ ಬೆಂಗಳೂರಿಗೆ ಬಂದ ಪ್ರದ್ಯೋತ ಸ್ವಚ್ಛಂದ ಹಕ್ಕಿಯಂತೆ ನಲಿದ. ಮಾರನೇ ದಿನೀ ನೀಟ್ ಪರೀಕ್ಷೆಗೆ ಫೀಸ್ ಕಟ್ಟಿ ಇನ್ನೂ ಕಾತುರತೆಯಿಂದ ಓದಲು ಶುರು ಮಾಡಿದ. ಮಗ ಮತ್ತು ಹೆಂಡತಿಗೆ ಪ್ರದ್ಯೋತನ ನಡತೆಯಿಂದ ನಗು ಬರುತ್ತಿತ್ತು. ಆದರೆ ಆ ನಗುವನ್ನು ತೋರಿಸಿಕೊಳ್ಳಲಿಲ್ಲ.
ಓದು ಮತ್ತು ನಡವಳಿಕೆಯಲ್ಲಿ ಪ್ರದ್ಯೋತ ಕಾಲೇಜು ಹುಡುಗನಂತೆ ಉತ್ಸಾಹ ತೋರಿದ.
ದಿನ ಕಳೆದಂತೆ ಪ್ರದ್ಯೋತ ಬಹಳ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಬೀಗಿದ. ದಿನವೊಂದಕ್ಕೆ ಹನ್ನೆರಡು ತಾಸು ಓದಿದ. ತಯಾರಿಯಂತೂ ಅಮೋಘವಾಗಿ ನಡೆಯಿತು. ಮೇ 21 ಮತ್ತು 22 ರಂದು ನೀಟ್ ಪರೀಕ್ಷೆ ನಡೆಯಿತು, ಪ್ರದ್ಯೋತ ಅದ್ಭುತವಾಗಿ ಬರೆದ. ಆದರೂ ಆಗಿನ್ನೂ ಕಾಲೇಜಿಕೆ ಸೇರಿದ ಹುಡುಗರ ಕಾತುರ ತುಂಬಿತ್ತು ಅವನಲ್ಲಿ. ನೀಟ್ ಪರೀಕ್ಷೆ ಮುಗಿದ ಒಂದು ತಿಂಗಳನಲ್ಲಿ ಫಲಿತಾಂಶ ಪ್ರಕಟವಾಯಿತು. ಪ್ರದ್ಯೋತ 695 ಅಂಕ ಗಳಿಸಿ ಕ್ವಾಲಿಫೈ ಆದ. ಮಗ ರಜತ ತನ್ನ ತಂದೆಯ ಸ್ಕೋರ್‌ನೋಡಿ ಚಕಿತನಾದ. ರಜತ್ ಗಿಂತ 8 ಮಾರ್ಕ್ಸ್ ಕಡಿಮೆ ಪಡೆದಿದ್ದ. ಯಾವ ಮೆಡಿಕಲ್ ಕಾಲೇಜಿನಲ್ಲಾದರೂ ಸೀಟ್ ದೊರೆಯುವ ಅವಕಾಶವಿತ್ತು. ಆದರೆ ಪ್ರದ್ಯೋತ ಏಮ್ಸ್ ಗೆ ಪ್ರಯತ್ನಿಸಲಿಲ್ಲ. ತನ್ನ ಬದಲಿಗೆ ಯುವಕನೊಬ್ಬನಿಗೆ ಏಮ್ಸ್ ನಲ್ಲಿ ಸೀಟು ದೊರಕಲಿ ಎಂದು ತಾನು ಬೆಂಗಳೂರಿನ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆದ. ಕೊನೆಯ ಪಕ್ಷ ಒಬ್ಬ ಯುವಕ ಸಂತಸಗೊಳ್ಳುತ್ತಾನಲ್ಲ ಎಂದು ತನ್ನ ನಿರ್ಧಾರಕ್ಕೆ ಸಂತಸಪಟ್ಟ.
ಮುಂದೆ ವಿದ್ಯಾರ್ಥಿ ಜೀವನ ಐದೂವರೆ ವರ್ಷಗಳಲ್ಲಿ ಓದಿನಲ್ಲಿ ಎಂದೂ ಹಿಂದೆ ಬೀಳಲಿಲ್ಲ. ಮೊದ ಮೊದಲು ಪ್ರದ್ಯೋತನಿಗೆ ಮುಜುಗರವಾಗುತ್ತಿತ್ತು. ಕಾರಣ, ಕೆಲವು ಹುಡುಗರು ಅಂಕಲ್ ಎಂದು ಮತ್ತು ಕೆಲವರು ಸಾರ್ ಎಂದು ಕರೆಯುತ್ತಿದ್ದರು. ಇದೊಂದನ್ನು ಬಿಟ್ಟರೆ ಅವನ ಓದು ಎಲ್ಲಾ ಸರಾಗವಾಗಿ ನಡೆಯಿತು. ಕಾಲೇಜಿನ ಪಾಠವಲ್ಲದೆ, ಮನೆಯಲ್ಲಿ ಮಗ ರಜತನಿಂದ ಪಾಠ ಮತ್ತು ಚರ್ಚೆಗಳು ನಡೆದವು.
ಈ ಮಧ್ಯೆ ಮಗ ರಜತನನ್ನು ಮದುವೆ ಆಗಲೆಂದು ಅವನ ತಾಯಿ ತಂದೆ ಒತ್ತಾಯಿಸಿದರು. ರಜತ ಮಾತ್ರ ಅಪ್ಪನ ಎಂ.ಬಿ.ಬಿ.ಎಸ್‌ಮುಗಿಯಲಿ ಎಂದು ಹಠ ಹಿಡಿದ. ಸರಿ ಎಂದು ಅಪ್ಪ ಓದು ಮುಗಿಯುವುದನ್ನೇ ಕಾದ. ಫೈನಲ್ ಇಯರ್ ನ ಪರೀಕ್ಷೆ ಮುಗಿದ ದಿವಸ ಪ್ರದ್ಯೋತ ತನ್ನ ಕ್ಲಾಸ್ ಮೇಟ್ ರಜನಿಯನ್ನು ಮನೆಗೆ ಕರೆತಂದ. ರಜನಿಯನ್ನು ತನ್ನ ಹೆಂಡತಿ ಮತ್ತು ಮಗನಿಗೆ ಪರಿಚಯಿಸಿದ. ಸಂಜೆ ಲಘು ಉಪಾಹಾರ ಮತ್ತು ಟೀ ಕುಡಿದು ಪರೀಕ್ಷೆ ಮುಗಿಸಿದ್ದನ್ನು ಆಚರಿಸಿದರು. ಮಗ ರಜನಿಗೆ ರಜನಿಯನ್ನು ಅವರ ಮನೆಗೆ ಬಿಟ್ಟುಬರಲು ಹೇಳಿದ ಪ್ರದ್ಯೋತ. ಅಪ್ಪನ ಅಣತಿಯಂತೆ ರಜನಿಯನ್ನು ಅವಳ ಮನೆಗೆ ಬಿಟ್ಟುಬರಲು ಹೋದ.
ಪ್ರದ್ಯೋತ ತನ್ನ ಹೆಂಡತಿಯತ್ತ ಕಣ್ಣು ಮಿಟುಕಿಸುತ್ತಾ, “ಹೇಗಿದೆ ನಮ್ಮ ಮಗನ ಜೋಡಿ ಚೆನ್ನಾಗಿದೆಯಾ…? ನನ್ನ ಕ್ಲಾಸ್ ಮೇಟ್ ನಿನಗೆ ಒಪ್ಪಿಗೆಯಾ….?” ಎಂದು ಕೇಳಿದ.





