ನೀಳ್ಗಥೆ - ಸುಜಲಾ ಘೋರ್ಪಡೆ
ಕೇಶವ್ ರಾವ್ ಭಾರದ್ವಾಜ್ ಮತ್ತು ನಿರ್ಮಲಾ ದಂಪತಿಗಳದು ತುಂಬು ಸಂಸಾರ. ಕಿರಿಮಗ ನಿತೀಶ್ ಗೆ ಕಾಲು ಊನವಾಗಿದ್ದರಿಂದ ಮನೆಯವರೆಲ್ಲರ ತಿರಸ್ಕಾರ ಎದುರಿಸಬೇಕಿತ್ತು. ಬಿ.ಇ. ಪದವೀಧರನಾದ ನಿತೀಶ್ ಗೆ ಮುಂದೆ ಅಮೆರಿಕಾದಲ್ಲಿ ಕೆಲಸ ಸಿಗಲು, ಹೆಂಡತಿ ಮಕ್ಕಳ ಜೊತೆ ಅಲ್ಲೇ ನೆಲೆಸುವಂತಾಯಿತು. ಮನೆಯವರೊಂದಿಗೆ ಮೊದಲಿನಿಂದಲೂ ಆತ್ಮೀಯತೆ ಇಲ್ಲದ ಆರ್ಯನ್ ಭಾರತದ ತನ್ನ ಊರಿಗೆ ಹೋಗಲು ಬಯಸುತ್ತಿರಲಿಲ್ಲ. ಡಾಕ್ಟರ್ ಆಗಿ ಎಲಿಜಬಲ್ ಬ್ಯಾಚುಲರ್ ಆಗಿದ್ದ ಅವನಿಗೆ ಹೆಣ್ಣು ಕೊಡಲು ಎಲ್ಲರೂ ಕಾಯುತ್ತಿದ್ದರು. ಮುಂದೆ ಅವನ ಆಯ್ಕೆ ಏನಾಯಿತು......?
ಆರ್ಯನ್ ಇಂಡಿಯಾಗೇ ಬಂದದ್ದು ತಾಯಿ ತಂದೆಯ ಬಲವಂತಕ್ಕೆ ಮಣಿದು.
``ಅಜ್ಜಾ ಅಜ್ಜಿ ನಿನ್ನನ್ನು ನೋಡಲು ತುಂಬಾ ಆಸೆ ಪಡ್ತಾರೆ. ಒಂದೇ ಒಂದು ಬಾರಿ ಹೋಗಿ ಬಾ ಪುಟ್ಟ. ನೀನೇನು ಅಲ್ಲಿ ತುಂಬಾ ದಿನ ಇರೋದೇನೂ ಬೇಡ ಮುಂಬೈನಲ್ಲಿ ಇದ್ದುಬಿಡು. ಪ್ರಸನ್ನನ ಮನೇಲಿ ಸಾಕೇತ್ ಜೊತೆಗೆ ಇರುವಂತೆ ನೋಡು, ನಾವು ಪ್ರತಿ ವರ್ಷ ಹೋಗ್ತೀವಿ. ಅನ್ವಿತಾ ಸಹ ನಮ್ಮ ಜೊತೆಗೆ ಬರ್ತಾಳೆ ಆದ್ರೆ ನೀನು ಮಾತ್ರ ಹೋಗೆ ಇಲ್ಲಾ.... ಈ ಸಾರಿಯ ಜಾತ್ರೇಲಿ ದೇವಸ್ಥಾನದಲ್ಲಿ ನಿನ್ನ ಹೆಸರಿನಲ್ಲಿಯೇ ಪೂಜೆ ಇರಿಸಿಕೊಂಡಿದ್ದಾರಂತೆ. ನೀನು ಹೋಗೋಲ್ಲ ಅಂದ್ರೆ ಏನು ಚೆನ್ನಾಗಿರುತ್ತೆ ಹೇಳು.....
``ಮೊದಲೇ ನಿನ್ನ ದೊಡ್ಡಪ್ಪ ದೊಡ್ಡಮ್ಮನಿಗೆ ನಮ್ಮ ಮೇಲೇ ಕೋಪ ಇದೆ. ಸೀಮೆಗಿಲ್ಲದ ನಿನ್ ಮಗ. ಅವನು ನಮಗೂ ಮಗನೇ ತಾನೇ, ಮೂರು ಜನ ಹೆಣ್ಣುಮಕ್ಕಳ ನಡುವೆ ಇರುವವನು ಅವನು ಒಬ್ಬನೇ ಕುಲದೀಪಕ ಕಣೇ ಕಳಿಸು ಅಂದಿದ್ದಾರೆ. ನಿನ್ನ ಅತ್ತೆಯವರೂ ಸಹ ಹೇಳಿದ್ದಾರೆ!''
``ಮಾಮ್ ಪ್ಲೀಸ್ ಸ್ಟಾಪ್ ದಿಸ್ ಮ್ಯಾಟರ್, ನಾನು ಹ್ಞೂಂ ಅಂದಾಯ್ತಲ್ಲ. ಇನ್ನು ಎಷ್ಟು ಅಂತಾ ಅದೇ ಮಾತು ರಿಪೀಟ್ ಮಾಡ್ತಾ ಇರ್ತೀರಿ... ನಾನು ಮೊದಲು ಪಚ್ಚಿ ಮಾಮಾನ್ ಮನೆಗೆ ಹೋಗಿ ಅಲ್ಲಿಂದ ಊರಿಗೆ ಹೋಗ್ತೀನಿ ಆಯ್ತಾ...?''
``ಆಯ್ತು ಮೈ ಡಿಯರ್. ನಿನ್ನ ಆಸೆಗೆ ನಾವು ಎಂದಾದರೂ ಅಡ್ಡಿಪಡಿಸಿದ್ದು ಉಂಟಾ....?''
ನಿತೀಶ್ ಭಾರದ್ವಾಜ್ ಕುಟುಂಬ ಅಮೆರಿಕಾದ ಟೆಕ್ಸಾಸ್ ನಲ್ಲಿ ಸುಮಾರು ಹದಿನೈದು ವರ್ಷಗಳಿಂದ ನೆಲೆಸಿತ್ತು. ಪತ್ನಿ ಮಾಯಾ, ಆರ್ಯನ್ ಮತ್ತು ಅನೂಷಾ, ಇಬ್ಬರು ಮಕ್ಕಳು.
ಆರ್ಯನ್ ಇಂಡಿಯಾಗೆ ಹೋಗದಿರಲು ಕಾರಣ ಇತ್ತು. ಅವನೆಂದೂ ಅಂದಿನ ತನ್ನ ಚಿಕ್ಕಂದಿನ ಆ ದಿನಗಳನ್ನು ಮರೆಯಲಾರ. ಕೇಶವ್ ರಾವ್ ಭಾರದ್ವಾಜ್ ಹಾಗೂ ನಿರ್ಮಲಾ ದಂಪತಿಗೆ ನಾಲ್ವರು ಮಕ್ಕಳು. ದೊಡ್ಡ ಮಗ ರಾಜೇಶ್, ಚಿಕ್ಕವನು ನಿತೀಶ್. ಅನಿತಾ, ಅದಿತಿ ಇಬ್ಬರು ಹೆಣ್ಣುಮಕ್ಕಳು. ಇಬ್ಬರನ್ನೂ ಒಳ್ಳೇ ಸಿರಿವಂತರ ಮನೆತನಕ್ಕೆ ಕೊಟ್ಟು ಮದುವೆ ಮಾಡಿದ್ದರು. ನವಿಲೂರಿನ ಜೋಡಿದಾರ್ ಕುಟುಂಬಕ್ಕೆ ಅನಿತಾ ಸೊಸೆಯಾಗಿ ಹೋಗಿದ್ದಳು. ದಾವಣಗೆರೆಯ ಕ್ಲಾತ್ ಮರ್ಚೆಂಟ್ ಎಂದೇ ಹೆಸರಾಗಿದ್ದ ವ್ಯಾಪಾರಸ್ಥರ ಮನೆಗೆ ಅದಿತಿ ಸೊಸೆಯಾಗಿದ್ದಳು. ಇಬ್ಬರೂ ಹೆಣ್ಣುಮಕ್ಕಳಿಗೂ ಚೆನ್ನಾಗಿ ಖರ್ಚು ಮಾಡಿ ಮದುವೆ ಮಾಡಿದ್ದರು. ಹಿರಿಯ ಮಗನಿಗೂ ಸಹ ಮಂಡ್ಯದ ಸಿರಿವಂತರ ಮಗಳು ಜಾನಕಿಯೊಂದಿಗೆ ಮದುವೆ ಮಾಡಿದ್ದರು. ನಿತೀಶ್ ಓದಿನಲ್ಲಿ ಚುರುಕಾಗಿ ಎಂಜಿನಿಯರಿಂಗ್ ಮುಗಿಸಿದ್ದ. ಒಂದು ಕಾಲು ಕುಂಟಾಗಿದ್ದ ಕಾರಣ ಅವನು ಮಾತ್ರ ಎಲ್ಲರ ತಿರಸ್ಕಾರಕ್ಕೆ ಒಳಗಾಗಿಯೇ ಬೆಳೆಯಬೇಕಾಗಿತ್ತು.





