ನೀಳ್ಗಥೆ –  ಸುಜಲಾ ಘೋರ್ಪಡೆ

ಕೇಶವ್ ರಾವ್ ಭಾರದ್ವಾಜ್ಮತ್ತು ನಿರ್ಮಲಾ ದಂಪತಿಗಳದು ತುಂಬು ಸಂಸಾರ. ಕಿರಿಮಗ ನಿತೀಶ್ಗೆ ಕಾಲು ಊನವಾಗಿದ್ದರಿಂದ ಮನೆಯವರೆಲ್ಲರ ತಿರಸ್ಕಾರ ಎದುರಿಸಬೇಕಿತ್ತು. ಬಿ.. ಪದವೀಧರನಾದ ನಿತೀಶ್ಗೆ ಮುಂದೆ ಅಮೆರಿಕಾದಲ್ಲಿ ಕೆಲಸ ಸಿಗಲು, ಹೆಂಡತಿ ಮಕ್ಕಳ ಜೊತೆ ಅಲ್ಲೇ ನೆಲೆಸುವಂತಾಯಿತು. ಮನೆಯವರೊಂದಿಗೆ ಮೊದಲಿನಿಂದಲೂ ಆತ್ಮೀಯತೆ ಇಲ್ಲದ ಆರ್ಯನ್ಭಾರತದ ತನ್ನ ಊರಿಗೆ ಹೋಗಲು ಬಯಸುತ್ತಿರಲಿಲ್ಲ. ಡಾಕ್ಟರ್ಆಗಿ ಎಲಿಜಬಲ್ ಬ್ಯಾಚುಲರ್ಆಗಿದ್ದ ಅವನಿಗೆ ಹೆಣ್ಣು ಕೊಡಲು ಎಲ್ಲರೂ ಕಾಯುತ್ತಿದ್ದರು. ಮುಂದೆ ಅವನ ಆಯ್ಕೆ ಏನಾಯಿತು……?

ಆರ್ಯನ್‌ ಇಂಡಿಯಾಗೇ ಬಂದದ್ದು ತಾಯಿ ತಂದೆಯ ಬಲವಂತಕ್ಕೆ ಮಣಿದು.

“ಅಜ್ಜಾ ಅಜ್ಜಿ ನಿನ್ನನ್ನು ನೋಡಲು ತುಂಬಾ ಆಸೆ ಪಡ್ತಾರೆ. ಒಂದೇ ಒಂದು ಬಾರಿ ಹೋಗಿ ಬಾ ಪುಟ್ಟ. ನೀನೇನು ಅಲ್ಲಿ ತುಂಬಾ ದಿನ ಇರೋದೇನೂ ಬೇಡ ಮುಂಬೈನಲ್ಲಿ ಇದ್ದುಬಿಡು. ಪ್ರಸನ್ನನ ಮನೇಲಿ ಸಾಕೇತ್‌ ಜೊತೆಗೆ ಇರುವಂತೆ ನೋಡು, ನಾವು ಪ್ರತಿ ವರ್ಷ ಹೋಗ್ತೀವಿ. ಅನ್ವಿತಾ ಸಹ ನಮ್ಮ ಜೊತೆಗೆ ಬರ್ತಾಳೆ ಆದ್ರೆ ನೀನು ಮಾತ್ರ ಹೋಗೆ ಇಲ್ಲಾ…. ಈ ಸಾರಿಯ ಜಾತ್ರೇಲಿ ದೇವಸ್ಥಾನದಲ್ಲಿ ನಿನ್ನ ಹೆಸರಿನಲ್ಲಿಯೇ ಪೂಜೆ ಇರಿಸಿಕೊಂಡಿದ್ದಾರಂತೆ. ನೀನು ಹೋಗೋಲ್ಲ ಅಂದ್ರೆ ಏನು ಚೆನ್ನಾಗಿರುತ್ತೆ ಹೇಳು…..

“ಮೊದಲೇ ನಿನ್ನ ದೊಡ್ಡಪ್ಪ ದೊಡ್ಡಮ್ಮನಿಗೆ ನಮ್ಮ ಮೇಲೇ ಕೋಪ ಇದೆ. ಸೀಮೆಗಿಲ್ಲದ ನಿನ್‌ ಮಗ. ಅವನು ನಮಗೂ ಮಗನೇ ತಾನೇ, ಮೂರು ಜನ ಹೆಣ್ಣುಮಕ್ಕಳ ನಡುವೆ ಇರುವವನು ಅವನು ಒಬ್ಬನೇ ಕುಲದೀಪಕ ಕಣೇ ಕಳಿಸು ಅಂದಿದ್ದಾರೆ. ನಿನ್ನ ಅತ್ತೆಯವರೂ ಸಹ ಹೇಳಿದ್ದಾರೆ!”

“ಮಾಮ್ ಪ್ಲೀಸ್‌ ಸ್ಟಾಪ್‌ ದಿಸ್‌ ಮ್ಯಾಟರ್‌, ನಾನು ಹ್ಞೂಂ ಅಂದಾಯ್ತಲ್ಲ. ಇನ್ನು ಎಷ್ಟು ಅಂತಾ ಅದೇ ಮಾತು ರಿಪೀಟ್‌ ಮಾಡ್ತಾ ಇರ್ತೀರಿ… ನಾನು ಮೊದಲು ಪಚ್ಚಿ ಮಾಮಾನ್‌ ಮನೆಗೆ ಹೋಗಿ ಅಲ್ಲಿಂದ ಊರಿಗೆ ಹೋಗ್ತೀನಿ ಆಯ್ತಾ…?”

“ಆಯ್ತು ಮೈ ಡಿಯರ್‌. ನಿನ್ನ ಆಸೆಗೆ ನಾವು ಎಂದಾದರೂ ಅಡ್ಡಿಪಡಿಸಿದ್ದು ಉಂಟಾ….?”

ನಿತೀಶ್‌ ಭಾರದ್ವಾಜ್‌ ಕುಟುಂಬ ಅಮೆರಿಕಾದ ಟೆಕ್ಸಾಸ್‌ ನಲ್ಲಿ ಸುಮಾರು ಹದಿನೈದು ವರ್ಷಗಳಿಂದ ನೆಲೆಸಿತ್ತು. ಪತ್ನಿ ಮಾಯಾ, ಆರ್ಯನ್‌ ಮತ್ತು ಅನೂಷಾ, ಇಬ್ಬರು ಮಕ್ಕಳು.

ಆರ್ಯನ್‌ ಇಂಡಿಯಾಗೆ ಹೋಗದಿರಲು ಕಾರಣ ಇತ್ತು. ಅವನೆಂದೂ ಅಂದಿನ ತನ್ನ ಚಿಕ್ಕಂದಿನ ಆ ದಿನಗಳನ್ನು ಮರೆಯಲಾರ. ಕೇಶವ್ ರಾವ್ ಭಾರದ್ವಾಜ್‌ ಹಾಗೂ ನಿರ್ಮಲಾ ದಂಪತಿಗೆ ನಾಲ್ವರು ಮಕ್ಕಳು. ದೊಡ್ಡ ಮಗ ರಾಜೇಶ್‌, ಚಿಕ್ಕವನು ನಿತೀಶ್‌.  ಅನಿತಾ, ಅದಿತಿ ಇಬ್ಬರು ಹೆಣ್ಣುಮಕ್ಕಳು. ಇಬ್ಬರನ್ನೂ ಒಳ್ಳೇ ಸಿರಿವಂತರ ಮನೆತನಕ್ಕೆ ಕೊಟ್ಟು ಮದುವೆ ಮಾಡಿದ್ದರು. ನವಿಲೂರಿನ ಜೋಡಿದಾರ್‌ ಕುಟುಂಬಕ್ಕೆ ಅನಿತಾ ಸೊಸೆಯಾಗಿ ಹೋಗಿದ್ದಳು. ದಾವಣಗೆರೆಯ ಕ್ಲಾತ್‌ ಮರ್ಚೆಂಟ್‌ ಎಂದೇ ಹೆಸರಾಗಿದ್ದ ವ್ಯಾಪಾರಸ್ಥರ ಮನೆಗೆ ಅದಿತಿ ಸೊಸೆಯಾಗಿದ್ದಳು. ಇಬ್ಬರೂ ಹೆಣ್ಣುಮಕ್ಕಳಿಗೂ ಚೆನ್ನಾಗಿ ಖರ್ಚು ಮಾಡಿ ಮದುವೆ ಮಾಡಿದ್ದರು. ಹಿರಿಯ ಮಗನಿಗೂ ಸಹ ಮಂಡ್ಯದ ಸಿರಿವಂತರ ಮಗಳು ಜಾನಕಿಯೊಂದಿಗೆ ಮದುವೆ ಮಾಡಿದ್ದರು. ನಿತೀಶ್‌ ಓದಿನಲ್ಲಿ ಚುರುಕಾಗಿ ಎಂಜಿನಿಯರಿಂಗ್‌ ಮುಗಿಸಿದ್ದ. ಒಂದು ಕಾಲು ಕುಂಟಾಗಿದ್ದ ಕಾರಣ ಅವನು ಮಾತ್ರ ಎಲ್ಲರ ತಿರಸ್ಕಾರಕ್ಕೆ ಒಳಗಾಗಿಯೇ ಬೆಳೆಯಬೇಕಾಗಿತ್ತು.

ರಾಜೇಶ್‌ ಡಿಗ್ರಿ ಮುಗಿಸಿ ಬಿಎಡ್‌ ಮಾಡಿದ್ದ. ಅವನಿಗೆ ಮಂಡ್ಯದ ಗೌರ್ಮೆಂಟ್‌ ಶಾಲೆಯಲ್ಲಿ ಕೆಲಸ ಸಿಕ್ಕಿತ್ತು. ಜೊತೆಗೆ ತಮ್ಮ ಹಳ್ಳಿಯಲ್ಲಿ ಪಂಚಾಯಿತಿ ಮೆಂಬರ್‌ ಸಹ ಆಗಿದ್ದ ಕೇಶವ್ ರಾಯರಿಗೂ ಕಿರಿ ಮಗನೆಂದರೆ ಅದೇಕೋ ಅಷ್ಟಕಷ್ಟೇ. ಅವನ ದುರಾದೃಷ್ಟಕ್ಕೆ ಎಂಜಿನಿಯರ್‌ ಆಗಿ ವರ್ಷ ಕಳೆದರೂ ಸರಿಯಾದ ಕೆಲಸ ಸಿಕ್ಕಿರಲಿಲ್ಲ. ಸಿಕ್ಕ ಕೆಲಸವನ್ನೂ ಅವನು ಒಪ್ಪಿಕೊಂಡಿರಲಿಲ್ಲ. ಇನ್ನು ಹೆಣ್ಣು ತರುವುದಾದರೂ ಎಲ್ಲಿಂದ? ಸದಾ ಮನೆಯಲ್ಲಿಯೇ ಇರುತ್ತಿದ್ದವನನ್ನು ಎಲ್ಲರೂ ಹಂಗಿಸುವವರೇ.

ಕೊನೆಗೆ ನಿರ್ಮಲಾ ತನ್ನ ಬಡ ತಮ್ಮನ ಮಗಳು ಮಾಯಾಳನ್ನು ಸೊಸೆ ಆಗಿಸಿಕೊಂಡಿದ್ದರು. ಮಾಯಾ ಮದುವೆಯಾದ ವರ್ಷದಲ್ಲಿಯೇ ಗಂಡು ಮಗುವಿನ ತಾಯಿಯಾಗಿದ್ದಳು. ಗಂಡು ಮಗು ಎಂದು ಯಾರೂ ಬೀಗದಿದ್ದರೂ ವರ್ಷದೊಳಗೆ ಮೂರು ತಲೆ ಆಯಿತೆಂದು ಮೂದಲಿಸಿದ್ದವರೇ ಹೆಚ್ಚು.

“ಮೂರು ಹೊತ್ತು ಗಂಡ ಹೆಂಡತಿ ಕೋಣೆಯೊಳಗೆ ಸೇರಿಕೊಂಡಿದ್ದರೆ ಇನ್ನೇನಾಗುತ್ತೆ. ನಾಲ್ಕು ಕಾಸಿನ ಸಂಪಾದನೆ ಇಲ್ಲ…. ಇನ್ನೇನು ವರ್ಷಕ್ಕೊಂದು ಮಗು ಹಡೆದು ಹಾಕ್ತಾಳೆ ಸೊಸೆ,” ಎಂದು ಗಂಡನ ಅಕ್ಕಂದಿರು ಹೇಳುವಾಗ ಮಾಯಾಳ ಮನಸ್ಸು ಮೌನವಾಗಿ ಒಳಗೊಳಗೇ ನೋವು ತಿನ್ನುತ್ತಿತ್ತು.

ಆರ್ಯನ್‌ ಐದು ವರ್ಷದವನಾಗಿದ್ದ. ಮಾಯಾಳಿಗೆ ದಿನವೆಲ್ಲ ದುಡಿಮೆಯೇ. ಜಾನಕಿಯಂತೂ ಮಾಯಾ ಇರುವುದೇ ತನ್ನ ಸೇವೆಗೆ ಎಂಬಂತೆ ಅಧಿಕಾರ ಚಲಾಯಿಸುವಾಗ ತಮ್ಮ ಸಿರಿವಂತ ಸೊಸೆಗೆ ಏನೂ ಹೇಳಲಾಗದೆ ಅವಳನ್ನೇ ಸಮಾಧಾನ ಮಾಡುತ್ತಿದ್ದರು.

ನಿತೀಶ್‌ ಮಾತ್ರ ಸಿಕ್ಕ ಕೆಲಸ ಒಪ್ಪಿಕೊಳ್ಳುತ್ತಲೇ ಇರಲಿಲ್ಲ. ಇನ್ಯಾವುದೋ ಕೋರ್ಸ್‌ ಎಂದು ಅಮ್ಮನಿಂದ ಹಣ ಪಡೆದು ಓದುವುದರಲ್ಲಿ ಮುಳುಗಿರುತ್ತಿದ್ದ. ಮಾಯಾ ಇತ್ತ ಪತಿಗೂ ಹೇಳಲಾಗದೆ, ಯಾರಿಗೂ ಎದುರುತ್ತರ ಕೊಡಲಾಗದೆ ತಾಯಿಯ ಬಳಿ ಹೇಳಿಕೊಂಡು ಅತ್ತು ಸುಮ್ಮನಾಗುತ್ತಿದ್ದಳು.

ಅಣ್ಣ ಪ್ರಸನ್ನನಿಗೆ ಒಳ್ಳೆಯ ಕೆಲಸ ದೊರೆತಾಗ, ಮಾಯಾಳ ತಂದೆ ಜಗದೀಶ್‌ ತಮ್ಮ ಬಳಿ ಇದ್ದ ಜಮೀನು ಮಾರಿ ತಮ್ಮಿಬ್ಬರು ಮಕ್ಕಳಿಗೆ ಹಾಗೂ ತನ್ನಕ್ಕ ನಿರ್ಮಲಾಳಿಗೂ ಹಣ ಕೊಟ್ಟಿದ್ದರು. ಪ್ರಸನ್ನ ತಾಯಿ ತಂದೆಯನ್ನು ಕರೆದುಕೊಂಡು ಮುಂಬೈಗೆ ಹೊರಟು ಹೋದಾಗ ಮಾಯಾಳಿಗೆ ತವರಿನ ಆಸೆಯೂ ತಪ್ಪಿ ಹೋಗಿತ್ತು. ತಂದೆ ಕೊಟ್ಟಿದ್ದ ಹಣವನ್ನು ಅತ್ತೆಯ ಬಳಿ ಇರಿಸಿದ್ದಳು.

ಪ್ರಸನ್ನ ಅಲ್ಲಿನ ಹುಡುಗಿಯನ್ನು ಪ್ರೀತಿಸಿ, ಮದುವೆಯಾದಾಗ ತಂಗಿಯನ್ನು ಕರೆಯಲು ಬಂದ ಅವನನ್ನು ಅವಮಾನ ಮಾಡಿ ಜಾತಿ ಕೆಟ್ಟವರ ಮನೆಗೆ ಸೊಸೆಯನ್ನು ಕಳಿಸುವುದಿಲ್ಲ ಎಂದು ಮಾವ ಕೇಶವ್ ರಾವ್ ಹೇಳಿದಾಗ, ಅಣ್ಣನ ಮದುವೆಗೂ ಹೋಗಲಾಗಲಿಲ್ಲ.

ನಿಸ್ಸಹಾಯಕ ಪತಿ, ದರ್ಪ ತೋರುವ ವಾರಗಿತ್ತಿ, ತಮ್ಮ ಸಿರಿವಂತಿಕೆ ಪ್ರದರ್ಶನ ಮಾಡಲೆಂದೇ ತವರಿಗೆ ಬರುತ್ತಿದ್ದ ನಾದಿನಿಯರ ನಡುವೆ ಮಾಯಾ ನಲುಗಿ ಹೋಗುತ್ತಿದ್ದಳು. ಅದರಲ್ಲಿಯೇ ಎರಡು ಬಾರಿ ಗರ್ಭಪಾತವಾದಾಗ ಬದುಕಿ ಉಳಿದದ್ದೇ ಹೆಚ್ಚು ಎನ್ನುವ ಪರಿಸ್ಥಿತಿ ಮಾಯಾಳದ್ದಾಗಿತ್ತು.

ನಿತೀಶ್‌ ಯು.ಎಸ್‌.ನಲ್ಲಿನ ಕಂಪನಿಯೊಂದಕ್ಕೆ ಇಂಟರ್‌ ವ್ಯೂ ಅಟೆಂಡ್‌ ಮಾಡಿದ್ದು, ಅದು ಬಹಳ ಚೆನ್ನಾಗಿ ಆಗಿತ್ತು. ಅವರು ಸಹ ವಾರದೊಳಗೆ ತಿಳಿಸುತ್ತೇವೆ ಎಂದಿದ್ದರು. ಒಳ್ಳೆಯ ಕಂಪನಿ, ಒಳ್ಳೆ ಕೆಲಸ, ತಿಂಗಳ ಮಟ್ಟಿಗೆ ಸಂಸಾರ ಇರಲು ವ್ಯವಸ್ಥೆ ಮಾಡುವ ಆಶ್ವಾಸನೆ ಸಹ ನೀಡಿದ್ದರು. ಹಾಗಾಗಿ ಆಸೆಯಿಂದ ಕಾಯುತ್ತಿದ್ದ ನಿತೀಶ್‌, ಈ ವಿಷಯ ಹೆಂಡತಿಗೂ ತಿಳಿಸಿರಲಿಲ್ಲ.

ಮದುವೆಯಾದ ಹತ್ತು ವರ್ಷದ ನಂತರ ಬಸುರಿಯಾದ ಜಾನಕಿಯನ್ನು ಎಲ್ಲರೂ ಓಲೈಸುವವರೇ. ಇದರಿಂದ ಮಾಯಾಳಿಗೆ ಕೈತುಂಬಾ ಕೆಲಸ. ಅವಳ ಸೀಮಂತದ ಶಾಸ್ತ್ರ ಬಹಳ ಅದ್ಧೂರಿಯಾಗಿ ನಡೆದಿತ್ತು. ಅಲ್ಲಿದ್ದ ತಿಂಡಿಗಳನ್ನು ನೋಡಿ, ಎಂಟು ವರ್ಷದ ಆರ್ಯನ್‌ ಗೆ ಬಹಳ ಆಸೆಯಾಗಿತ್ತು. ತಟ್ಟೆಯಲ್ಲಿದ್ದ ಬಾದೂಷಹನ್ನು ತೆಗೆದುಕೊಂಡು ತಿನ್ನತೊಡಗಿದವನನ್ನು ನೋಡಿ ಅವನನ್ನು ಎಳೆದು, “ಥೂ ದರಿದ್ರದವನೇ, ತಿನ್ನೋದಕ್ಕೆ ಹೊತ್ತು ಗೊತ್ತು ಇಲ್ಲವೇನೋ….?” ಎಂದು ಜಾನಕಿ ಕೋಪದಿಂದ ಒಂದೇಟು ಹಾಕಿದಳು.

ಆರ್ಯನ್‌ ಗೆ ಇದರಿಂದ ಬಹಳ ಅವಮಾನವಾಗಿತ್ತು. ಅದನ್ನು ಅಲ್ಲಿಯೇ ಬಿಸಾಡಿ ತಾಯಿಯ ಬಳಿಗೆ ಹೋಗಿ ಅಳತೊಡಗಿದ. ಎಲ್ಲವನ್ನೂ ಎತ್ತಿಡುತ್ತಿದ್ದ ನಿತೀಶ್‌ ಗೆ ಇದನ್ನು ನೋಡಿ ಬಹಳ ಕೋಪ ಬಂದಿತ್ತಾದರೂ, `ಛೇ… ಇನ್ನೆಷ್ಟು ದಿನ ನಾನು ಹೀಗೆ ಇಲ್ಲಿ ಎಲ್ಲರಿಂದ ಕೇಳಿಸಿಕೊಂಡು ಬಿದ್ದಿರುವುದು. ನನ್ನ ಹೆಂಡತಿ, ಮಗ ಅನುಭವಿಸುತ್ತಿರುವ ಅವಮಾನ ಇನ್ನೆಷ್ಟು ದಿನ,’ ಎಂದು ಕೊರಗಿದ.

`ಈ ವಾರ ಯು.ಎಸ್‌ ನಿಂದ ಕರೆ ಬರದಿದ್ದರೆ, ಏನು ಮಾಡೋದು….? ಇಲ್ಲ ಖಂಡಿತ ಇನ್ನು ಇಲ್ಲಿ ಓದು ಬೇಡ. ನನ್ನ ಸಂಸಾರದೊಂದಿಗೆ ಬೆಂಗಳೂರು ಸೇರಿಕೊಳ್ಳುವುದೇ ಸರಿ. ಅಲ್ಲಿ ಯಾವ ಕೆಲಸ ಸಿಕ್ಕರೂ ಸರಿ ಅದನ್ನು ಮಾಡಿಕೊಂಡು ಜೀವನ ಕಳೆಯೋದು. ನನ್ನವರು… ಸಂಬಂಧ ಎಂದುಕೊಂಡು ಅಮ್ಮನಿಗಾಗಿ ಎಲ್ಲರಿಂದಲೂ ಅನ್ನಿಸಿಕೊಂಡು ಆಡಿಸಿಕೊಂಡು ಪ್ರತೀಕ್ಷಣ ಅಪಮಾನ ಸಹಿಸಿಕೊಂಡು ಇಲ್ಲಿ ಆಳುಗಳಿಗಿಂತಲೂ ಕೀಳಾಗಿ ಬಾಳುವುದಕ್ಕಿಂತ ದೂರ ಇದ್ದುಕೊಂಡೇ ಸಂಬಂಧ ಉಳಿಸಿಕೊಳ್ಳುವುದು ಸರಿ,’ ಎಂದು ನಿರ್ಧಾರ ಮಾಡಿದ್ದ.

ಅಂದು ರಾತ್ರಿಯಿಡೀ ಅಳುತ್ತಿದ್ದ ಪತ್ನಿಯನ್ನು ಸಮಾಧಾನ ಪಡಿಸಲು ಅವನಿಂದ ಆಗಲಿಲ್ಲ. ದೇವರ ಅನುಗ್ರಹ ನಿತೀಶನ ಮೇಲಿತ್ತೋ ಅಥವಾ ಅವನ ಸಂಸಾರದ ಕಷ್ಟದ ದಿನಗಳು ಕಳೆದಿದ್ದವೇನೋ ಎಂಬಂತೆ ಮರುದಿನ ಬೆಳಗ್ಗೆ ರಿಜಿಸ್ಟರ್‌ ಪೋಸ್ಟ್ ಅವನ ಕೈ ಸೇರಿತ್ತು. ಅದರಲ್ಲಿ ಟಿಕೆಟ್ಸ್ ಹಾಗೂ ಅಪಾಯಿಟ್‌ ಮೆಂಟ್‌ ಆರ್ಡರ್‌, ಇನ್ನಿತರ ಕಾಗದ ಪತ್ರಗಳಿದ್ದವು.

ನಿತೀಶ್‌ ನಿಗಾದ ಸಂತೋಷ ಅಷ್ಟಿಷ್ಟಲ್ಲ. ಅವನ ಕಾಲುಗಳು ಭೂಮಿಯ ಮೇಲಿರಲಿಲ್ಲ. ಮೊದಲು ದೇವರಿಗೆ ನಮಸ್ಕಾರ ಮಾಡಿ, ಎಲ್ಲರೆದುರಿಗೆ ಪತ್ನಿಯನ್ನು ಕರೆದು, “ಮಾಯಾ, ನಮ್ಮ ಬಟ್ಟೆಬರೆ ಎಲ್ಲವನ್ನೂ ಗಂಟು ಮೂಟೆ ಕಟ್ಟು. ನಾವು ಇಲ್ಲಿಂದ ಹೊರಡಬೇಕು?” ಎಂದು ಉತ್ಸಾಹದಿಂದ ಹೇಳಿದ.

ಅಲ್ಲೇ ಕಾಫಿ ಕುಡಿಯುತ್ತಾ ಕುಳಿತಿದ್ದ ಜಾನಕಿ, “ಏನೋ ನಿತೀಶ್‌, ಎಲ್ಲಿಗೆ ಹೋಗಬೇಕು…..? ಇದ್ದಕ್ಕಿದ್ದಂತೆ ಹೊರಡೋ ಮಾತು ಯಾಕೆ….?” ಕೇಳಿದಳು. ರಾಜೇಶನೂ ಸಹ ಬೆರಗಿನಿಂದಲೇ ಅವನತ್ತ ನೋಡುತ್ತಿದ್ದ.

ನಿತೀಶ್‌ ತಂದೆಯ ಬಳಿ ಹೋಗಿ, “ಅಪ್ಪಾ, ನಿಮ್ಮ ಆಶೀರ್ವಾದದಿಂದ ಟೆಕ್ಸಾಸ್‌ ನ ಕಂಪನಿಯೊಂದರಲ್ಲಿ ನನಗೆ ಬಹಳ ಒಳ್ಳೆಯ ಕೆಲಸ ಸಿಕ್ಕಿದೆ. ನಾವು ಇಲ್ಲಿಂದ ಹೊರಡಬೇಕು,” ಎಂದ.

“ಸಂತೋಷ ನಿತೀಶ್‌…. ಅಂತೂ ನಿನ್ನನ್ನು ಎಂಜಿನಿಯರ್‌ ಮಾಡಿಸಿದ್ದು ಸಾರ್ಥಕ ಆಯ್ತು ಕಣೋ….!” ಎಂದು ಅವನನ್ನು ಹರಸಿದರು.

chhoti-se-asha-story

“ಅಲ್ಲವೋ ನಿತೀಶ್‌, ಹೆಂಡ್ತಿ ಮಗುವನ್ನು ಕರ್ಕೊಂಡು ಯಾಕೆ ಹೋಗ್ತೀಯಾ….? ಅವರು ಇಲ್ಲಿರಲಿ, ನೀನು ಅಲ್ಲಿ ಹೋಗಿ ಸೆಟಲ್ ಆದ ಮೇಲೆ ಕರೆದುಕೊಂಡು ಹೋಗ್ತೀಯಂತೆ…. ಅಲ್ಲಿಗೆ ಹೋಗಲು ಪಾಸ್‌ ಪೋರ್ಟ್‌ ಬೇಡವೇ….?” ಎಂದು ರಾಜೇಶ್‌ ತುಸು ಗಡುಸಾಗಿ ಕೇಳಿದ.

“ಅಣ್ಣಾ ಅದೆಲ್ಲಾ ರೆಡಿ ಇದೆ. ಪ್ರಸನ್ನನ ಮನೆಗೆ ಹೋಗಿದ್ದಾಗ, ಅವನೇ ಇವಳ ಮತ್ತು ಆರ್ಯನ್‌ ನ ಪಾಸ್‌ ಪೋರ್ಟ್ ಮಾಡಿಸಿದ್ದಾನೆ. ನಾವು ನಾಡಿದ್ದು ವೀಸಾಗೆ ಚೆನ್ನೈಗೆ ಹೋಗಬೇಕು. ಫ್ಯಾಮಿಲಿ ಪ್ಯಾಕೇಜ್‌ ಕೊಟ್ಟಿದ್ದಾರೆ. ಅವರಿಬ್ಬರನ್ನು ನನ್ನ ಜೊತೆಗೆ ಕರೆದುಕೊಂಡು ಹೋಗ್ತೀನಿ.”

“ಹ್ಞೂಂ…. ಅಂತೂ ಗಂಡ ಹೆಂಡತಿ ಸೇರಿ ಒಳಗೊಳಗೇ ಪ್ಲಾನ್‌ ಮಾಡಿಕೊಂಡಿದ್ದೀರಿ….!”

“ಹೌದಣ್ಣ…. ನನ್ನ ಹೆಂಡತಿ ಬಗ್ಗೆ ನಾನಲ್ಲದೆ, ಬೇರೆ ಯಾರು ಯೋಚನೆ ಮಾಡ್ತಾರೆ….” ಎಂದವನೇ, “ಮಾಯಾ ಏನ್ಮಾಡ್ತಿದ್ಯಾ…. ಬಾ ಇಲ್ಲಿ ಇಲ್ಲಿ,” ಎನ್ನುತ್ತಾ ತನ್ನ ರೂಮಿನತ್ತ ನಡೆದ.

ತಮ್ಮನನ್ನು ನೋಡಿ ರಾಜೇಶನಿಗೆ ಒಳಗೊಳಗೇ ಕಸಿವಿಸಿ ಆಗಿತ್ತು. ಎಲ್ಲರಿಗಿಂತ ಹೆಚ್ಚು ಸಂತೋಷ ಪಟ್ಟದ್ದು ನಿರ್ಮಲಾ ಮಾತ್ರ. ದೇವರ ಮುಂದೆ ತುಪ್ಪದ ದೀಪ ಬೆಳಗಿಸಿ, `ನನ್ನ ಮಕ್ಕಳನ್ನು ನೀನೇ ಕಾಪಾಡಬೇಕು ತಂದೆ,’ ಎಂದು ಬೇಡಿಕೊಂಡು ಮಗ, ಸೊಸೆ, ಮೊಮ್ಮಗನಿಗೆ ಸಕ್ಕರೆ ತಿನ್ನಿಸಿದರು.

“ತುಂಟಪ್ಪ…. ಅಲ್ಲಿ ಹೋದ ಮೇಲೆ ಜಾಣನಂತೆ ಇರಬೇಕು. ಅಮ್ಮನನ್ನ ಜೋಪಾನವಾಗಿ ನೋಡ್ಕೋ, ಅಜ್ಜಿಗೆ ಫೋನ್‌ ಮಾಡ್ತಾ ಇರು ಕಂದ. ನೀನು ಈ ಮನೆ ಕುಲದೀಪಕ. ದೇವರು ನಿನ್ನನ್ನು ಚೆನ್ನಾಗಿಟ್ಟಿರಲಿ….” ಎಂದು ಅವನನ್ನು ಮುದ್ದಿಸಿ ಕಣ್ಣೀರು ಒರೆಸಿಕೊಂಡರು.

ಅಜ್ಜಿಯ ಮಾತಿಗೆ ತಲೆ ಆಡಿಸಿದ ಆರ್ಯನ್‌ ಗೆ ಅದೆಷ್ಟು ಅರ್ಥವಾಗಿತ್ತೋ ಬಿಟ್ಟಿತ್ತೋ ಗೊತ್ತಿಲ್ಲ. ಆದ್ರೆ ಇಲ್ಲಿಂದ ಹೋಗುತ್ತಿದ್ದೇವೆ ಎಂಬ ಮಾತೇ ಅವನನ್ನು ಆಕಾಶದಲ್ಲಿ ತೇಲುವಂತೆ ಮಾಡಿತ್ತು.

ಮಗನನ್ನು ಕರೆದು ತಮ್ಮ ಪಾಲಿನ ಹಣ ಮತ್ತು ತಾವು ಸೇರಿಸಿ ಇಟ್ಟಿದ್ದ ಐದು ಲಕ್ಷ ರೂಪಾಯಿಯನ್ನು ಅವನ ಕೈಗೆ ಕೊಟ್ಟರು. ನಿತೀಶ್‌ ತಾಯಿಯನ್ನು ತಬ್ಬಿಕೊಂಡು ಅತ್ತೇಬಿಟ್ಟ.

“ದೇವರು ನಿಮ್ಮ ಭಾಗಕ್ಕೆ ಇದ್ದಾನೆ ಹೋಗಿ ಬನ್ನಿ!” ಎಂದು ಮನಸಾರೆ ಹರಸಿದರು.

“ಹಣಕ್ಕೆ ಏನು ವ್ಯವಸ್ಥೆ ಮಾಡಿಕೊಂಡಿದ್ದಿ. ನಾನು ಕೊಡೋಣ ಅಂದ್ರೆ….” ಎಂದು ರಾಗವೆಳೆದ ರಾಜೇಶ.

“ಮಾವ ಕೊಟ್ಟ ಹಣ ನನ್ನ ಬಳಿ ಇದೆ,” ಎಂದ.

ಹಣಕ್ಕಾಗಿ ತಮ್ಮ ಬಳಿ ಕೈ ಒಡ್ಡಲೇಬೇಕು. ಆಗ ಹಂಗಿಸಿ ಕೊಡಬೇಕು ಎಂದುಕೊಂಡಿದ್ದ ರಾಜೇಶ್‌ ಗೆ ಅವನು ತಮ್ಮ ಬಳಿ ಹಣ ಕೇಳದಿದ್ದದ್ದು ಮನಸ್ಸಿಗೆ ಸ್ವಲ್ಪ ಕಸಿವಿಸಿಯಾಗಿತ್ತು.

ಮಗ ತಮ್ಮ ಬಳಿ ಏನೂ ಕೇಳದೇ ಒಳಗೊಳಗೇ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದು ಕೇಶವ್ ರಾಯರ ಮನಸ್ಸಿಗೂ ಸ್ವಲ್ಪ ಕಿರಿ ಕಿರಿಯಾಗಿತ್ತು. ಅದಕ್ಕೆ, “ಸಾಲ ಗೀಲ ಮಾಡಿ ನಮ್ಮ ತಲೆ ಮೇಲೆ ಹಾಕಿ ಹೋಗಬೇಡಪ್ಪ. ತೀರಿಸಿದ್ರೂ ಅವರಿವರಿಂದ ಮಾತು ಕೇಳೋದು ಅಂದ್ರೆ ಅದಕ್ಕಿಂತ ಬೇರೆ ಅವಮಾನವಿಲ್ಲ,” ಎಂದು ತುಸು ನಿಷ್ಠೂರವಾಗಿ.

“ಅಪ್ಪಾ…. ಅಂತಹ ಪರಿಸ್ಥಿತಿ ನಾನು ಯಾವತ್ತೂ ತಂದಿಲ್ಲ. ಮುಂದೆ ತರೋದೂ ಇಲ್ಲ. ನೀವು ನಿಶ್ಚಿಂತರಾಗಿರಿ. ಹಣದ ವ್ಯವಸ್ಥೆ ಎಲ್ಲಾ ಆಗಿದೆ. ಮಾವ ತಮ್ಮ ಜಮೀನು ಮಾರಿದ್ದ ಹಣ ಅಂತ ಇವಳಿಗೆ ಐದು ಲಕ್ಷ ಕೊಟ್ಟಿದ್ರು!” ಎಂದ.

“ಓ ಹೌದಾ…. ಮತ್ತೆ ಏನೂ ಹೇಳಲೇ ಇಲ್ವಲ್ಲೋ……?”

“ಅಪ್ಪ ಕೋಟಿ ಲೆಕ್ಕದಲ್ಲಿ ವ್ಯವಹರಿಸುವ ನಿಮಗೂ ಮತ್ತು ಅಣ್ಣನಿಗೂ ತಾವು ಕೊಡುತ್ತಿರುವ ಅಲ್ಪ ಹಣದ ಬಗ್ಗೆ ಏನೂ ಹೇಳುವುದು ಎಂದು ಅವರು ಹೇಳಲಿಲ್ಲ ಅಷ್ಟೆ. ಪ್ರಸನ್ನ ಮುಂಬೈನಲ್ಲಿ ಎಲ್ಲಾ ವ್ಯವಸ್ಥೆ ಮಾಡಿದ್ದಾನೆ. ಮಾಯಾ ಅಪ್ಪ ಅಮ್ಮನ್ನ ನೋಡಿದ ಹಾಗಾಗುತ್ತೆ ಇಲ್ಲಿಗೆ ಬನ್ನಿ ಎಂದಿದ್ದಾನೆ. ಅದಕ್ಕೇ……!” ಎಂದಾಗ ಅವರೇನೂ ಮಾತನಾಡಲಿಲ್ಲ.

ಮರುದಿನವೇ ವೀಸಾಗಾಗಿ ನಿತೀಶ್‌, ಮಾಯಾ ಹಾಗೂ ಆರ್ಯನ್‌ ಚೆನ್ನೈಗೆ ಹೊರಟಿದ್ದರು. ವಾರದ ಮುಂಚೆಯೇ ಹೊರಡಬೇಕಿತ್ತು. ಅದಕ್ಕಾಗಿ ತಯಾರಿ ನಡೆಸಿದ್ದರು. ನಿತೀಶ್‌ ತನ್ನ ಸ್ನೇಹಿತರಿಗೆ ಹೇಳಿ ಬಂದಿದ್ದ.

ಬಟ್ಟೆ ಬರೆಗಳನ್ನು ಸೂಟ್‌ ಕೇಸ್‌ ನಲ್ಲಿ ಇಡುತ್ತಿದ್ದ ಮಾಯಾಳ ಬಳಿ ಬಂದ ಜಾನಕಿ, “ ಮಾಯಾ…. ನೀನು ಈಗಲೇ ಏಕೆ ಹೊರಡಬೇಕು? ನನ್ನ ಡೆಲಿವರಿ ಆದ ನಂತರ ಹೋಗಬಹುದಲ್ಲವೇ….? ಹುಟ್ಟಲಿರುವ ನನ್ನ ಮಗನನ್ನು ನೀನು ನೋಡೋಲ್ವೇ….?”

“ಅಕ್ಕಾ…. ಅದಕ್ಕೇನು ಖಂಡಿತಾ ನೋಡ್ತೀನಿ. ವಿಡಿಯೋ ಕಾಲ್ ಮಾಡಿದ್ರೆ ಆಯ್ತು. ನೀವು ನಿಮ್ಮ ತವರಿಗೆ ಹೋಗ್ತೀರಿ ತಾನೇ….? ಅಲ್ಲಿ ನಿಮ್ಮ ಕಾಲು ಕೆಳಗಿರಿಸದ ಹಾಗೆ ನೋಡ್ಕೊಳ್ಳೋ ಜನ ಇರಬೇಕಾದ್ರೆ ಇಲ್ಲಿ ನಾನಿದ್ದು ಏನು ಮಾಡ್ಲಿ ನೀವೇ ಹೇಳಿ…..?” ಎಂದಾಗ ಬೇರೆ ದಾರಿ ಇಲ್ಲದೆ ಸುಮ್ಮನಾಗಿದ್ದಳು ಜಾನಕಿ.

ಆದರೆ ತನ್ನ ಓರಗಿತ್ತಿ ಬಳಿ ಹೇಗೆ ಗುಟ್ಟು ಬಿಟ್ಟುಕೊಟ್ಟಾಳು? ಮಾಯಾ ಹೊರಟು ನಿಂತಿದ್ದು ಅವಳಿಗೆ ಅರ್ಧ ಬಲ ಕುಸಿದಂತಾಗಿತ್ತು. ಅತ್ತೆಗೆ ಯಾವ ಕೆಲಸ ಕೈಲಾಗುತ್ತಿರಲಿಲ್ಲ. ಮಾಯಾ ಅವರ ಎಲ್ಲಾ ಕೆಲಸ ಮಾಡುತ್ತಿದ್ದಳು. ಮುಲಾಜಿಲ್ಲದೆ ಅವಳಿಂದ ಪ್ರತಿಯೊಂದು ಕೆಲಸವನ್ನೂ ಮಾಡಿಸಿಕೊಳ್ಳುತ್ತಿದ್ದರು. ತವರಿನಲ್ಲಿ ಅತ್ತಿಗೆಯವರಿಂದ ತಮ್ಮ ಸೇವೆ ಮಾಡಿಸಿಕೊಂಡು ರಾಣಿಯ ಹಾಗಿರಬಹುದು ಎಂದು ಆಲೋಚಿಸಿದ್ದ ಜಾನಕಿಗೆ ತಾಯಿ ಹೇಳಿದ ಮಾತು ಆಕೆಯನ್ನು ಬೆರಗಾಗಿಸಿತ್ತು. ಅವರು ಜಾನಕಿಗೆ, “ಜಾನು, ನಾನು ಹೀಗೇ ಹೇಳ್ತೀನಿ ಅಂತ ಬೇಜಾರು ಮಾಡ್ಕೋಬೇಡ. ನೀನು ತವರಿಗೆ ಬಂದರೆ ನಿನ್ನ ಅತ್ತಿಗೆಯವರಿಗೆ ಇಷ್ಟ ಆಗೋಲ್ಲ. ಜಾನಕಿ ಇಲ್ಲಿಗೆ ಬಂದ್ರೆ ನಾನಂತೂ ಇಲ್ಲಿ ಇರೋಲ್ಲ ಬೇರೆ ಹೋಗ್ತೀವಿ ಅಂತ ಮಂಗಳಾ ಹೇಳಿದ್ದನ್ನು ಕೇಳಿ, ನಾವೂ ಈಗಲೇ ಬೇರೆಯಾಗೋದು ಒಳ್ಳೆಯದು ಅಂತಿದ್ದಾರೆ ನಿನ್ನ ಇಬ್ಬರು ಅತ್ತಿಗೆಯರು.

“ನಿನ್ನಿಂದಾಗಿ ಈ ತುಂಬು ಕುಟುಂಬ ಒಡೆಯೋದು ನನಗಿಷ್ಟವಿಲ್ಲ. ನೀನೇ ಏನಾದ್ರೂ ನೆಪ ಹೇಳಿ ಅಲ್ಲಿಯೇ ಡೆಲಿವರಿ ಮಾಡಿಸಿಕೋ. ಆಮೇಲೆ ಒಂದು ಹದಿನೈದು ದಿನದ ಮಟ್ಟಿಗೆ ಇಲ್ಲಿಗೆ ಬಾ, ನಾಮಕರಣ ಬೇಕಿದ್ರೆ ಅದ್ಧೂರಿಯಾಗಿ ಮಾಡಿಕೊಡ್ತೀವಿ,” ಎಂದಿದ್ದರು.

“ಅಮ್ಮಾ…. ಮತ್ತೇ ನನ್ನ ಬಾಣಂತನದ ಖರ್ಚು…..?”

“ಅಯ್ಯೋ ತಾಯಿ, ಅದಕ್ಯಾಕೆ ಯೋಚನೆ ಮಾಡ್ತಿ….. ಹಣ  ನಾನು ಕೊಡ್ತೀನಿ,” ಮಗಳ ಅತಿ ಆಸೆ ಗೊತ್ತಿದ್ದರು ಬೇಸರದಿಂದಲೇ ಹೇಳಿದರು.

ಕೆಲಸದ ನಾಗಿ, ಕಮಲಿ ಬಹಳ ಜಾಣೆಯರು. ಪ್ರತಿಯೊಂದು ಕೆಲಸಕ್ಕೂ ಬೇರೆ ಬೇರೆಯಾಗಿ ದುಡ್ಡು ಕೇಳ್ತಿದ್ದರು. ಹಾಗಾಗಿ ಹಣ ಉಳಿಸುವ ಅವಳ ಯೋಚನೆ ತಲೆಕೆಳಗಾಗಿತ್ತು.

ನಿತೀಶ್‌ ಕುಟುಂಬ ಹೊರಡುವ ದಿನ ಬೇಕೆಂದೇ ಅಣ್ಣ ಅತ್ತಿಗೆ ಚೆಕಪ್‌ ಗೆ ಹೋಗಬೇಕೆಂದು ನೆಪ ಹೇಳಿ ಆಸ್ಪತ್ರೆಗೆ ಹೊರಟುಹೋದಾಗ, ನಿರ್ಮಲಾರಿಗೆ ಬಹಳ ಬೇಸರವಾಗಿತ್ತು. `ತಮ್ಮ ಹೊರಟು ನಿಂತಿದ್ದಾನೆ. ಮತ್ತೆ ಯಾವಾಗ ನೋಡುವುದೋ ಅವನನ್ನು…. ಕಳಿಸಿ ಬರಲಾದರೂ ರಾಜೇಶ್‌ ಇರಬೇಕಿತ್ತು,’ ಎನಿಸಿದರೂ ಏನೂ ಹೇಳದೇ ತಾವೇ ನಿಂತು ಹೋಳಿಗೆ, ಪಾಯಸದ ಅಡುಗೆ ಮಾಡಿ, ಮಗ ಸೊಸೆಯನ್ನು ಕೂರಿಸಿ ಬಡಿಸಿದ್ದರು.

ಕೇಶವ್ ರಾಯರು ಮೊಮ್ಮಗ ಮತ್ತು ಸೊಸೆಗೆ ಆಶೀರ್ವಾದ ಮಾಡಿ ಐವತ್ತು ಸಾವಿರ ಅವಳ ಕೈಲಿಟ್ಟರು. ಮಗನಿಗೂ ಎರಡು ಲಕ್ಷ ಹಣ ಕೊಟ್ಟಾಗ ಅವನು ಅದನ್ನು ಕಣ್ಣಿಗೊತ್ತಿಕೊಂಡು ತಂದೆಯನ್ನು ತಬ್ಬಿಕೊಂಡು, “ಅಪ್ಪಾ… ನೀವು ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ನಾನು ಅಲ್ಲಿ ಸೆಟಲ್ ಆದ ಮೇಲೇ ನೀವೂ ಅಮ್ಮ ಅಲ್ಲಿಗೇ ಬನ್ನಿ….” ಎಂದ.

“ಆಯಿತಪ್ಪಾ…. ನೀವುಗಳು ಅಷ್ಟೇ ಒಬ್ಬರನ್ನೊಬ್ಬರು ಅರಿತುಕೊಂಡು ಚೆನ್ನಾಗಿರಿ. ಆರ್ಯನ್‌ ನನ್ನು ಚೆನ್ನಾಗಿ ನೋಡಿಕೊಳ್ಳಿ!” ಎಂದರು.

ನಿತೀಶ್‌ ಗೆಳೆಯ ಕಾರು ತಂದಿದ್ದ, ಅವರೆಲ್ಲರೂ ಹೊರಟು ನಿಂತಾಗ ಕೇಶವ್ ರಾಯರಿಗೆ ಮಗ, ಸೊಸೆ, ಮೊಮ್ಮಗನ ಅಗಲಿಕೆ ನೋವು ತಂದಿತ್ತು.

live-in-relationship-story2

ಹೀಗೆ ಅವರು ವಿದೇಶದಲ್ಲಿ ನೆಲೆಸಿದ್ದರು.“ಮೈ ಡಿಯರ್‌ ಸನ್‌ ಪ್ಯಾಕಿಂಗ್‌ ಎಲ್ಲ ಮುಗಿಯಿತೇ….?” ಕೇಳುತ್ತಾ ಒಳಗೆ ಬಂದ ನಿತೀಶ್‌ ಗೆ, “ಎಸ್‌ ಡ್ಯಾಡ್‌…. ಆಯ್ತು!” ಎಂದ ಆರ್ಯನ್‌.

“ನೋಡು ಪುಟ್ಟ, ನೀನು ನಿನ್ನ ಅಜ್ಜ ಅಜ್ಜಿಗಾಗಿ ಹೋಗುತ್ತಿರುವಿ. ಆದ್ದರಿಂದ ಅವರ ಮನಸ್ಸಿಗೆ ನೋವಾಗದಂತೆ ನಡೆದುಕೋ. ನಿನ್ನ ದೊಡ್ಡಪ್ಪ ದೊಡ್ಡಮ್ಮ ನಿನ್ನನ್ನು ತುಂಬಾ ಇಷ್ಟಪಡ್ತಾರೆ. ಅವರು ದೊಡ್ಡವರು. ಅವರೇನೇ ಮಾಡಿದ್ರೂ ಅದು ನಮ್ಮ ಒಳ್ಳೆಯದಕ್ಕೆ. ಹಿಂದಿನದ್ದೆಲ್ಲ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡ. ಅಲ್ಲಿ ನಿನ್ನನ್ನೂ ತುಂಬಾ ಇಷ್ಟಪಡುವ ನಿನ್ನ ತಂಗಿಯರು, ಅತ್ತೆಯರು ಎಲ್ಲಾ ಇದ್ದಾರೆ ನಿನಗೆ ನಾನು ಹೇಳುವುದೇನೂ ಇಲ್ಲ…..!”

“ಡ್ಯಾಡ್‌ ನಿಮ್ಮ ಮಗ ನಾನು. ನಿಮಗೆ ಎದುರಾಗಿ ಎಂದಾದರೂ ಹೋಗಿರುವೆನೇ….? ಹಾಗಿದ್ದ ಮೇಲೆ ಚಿಂತೆ ಮಾಡೋದು ಬೇಡ!”

“ನೀವು ಸುಮ್ಮನೆ ಇರಿ, ಅವನಿಗೆ ಎಲ್ಲಾ ಗೊತ್ತಿದೆ…..!” ಎಂದು ನಿತೀಶ್‌ ನನ್ನು ಸುಮ್ಮನಾಗಿಸಿದ್ದಳು ಮಾಯಾ.

ಮುಂಬೈಗೆ ಬಂದಿಳಿದ ಆರ್ಯನ್‌ ನನ್ನು ಎದುರುಗೊಳ್ಳಲು ಪ್ರಸನ್ನನ ಮಗ ಹೃತಿಕ್‌ ಹಾಗೂ ಮಗಳು ಸಾಕ್ಷಿ ಬಂದಿದ್ದರು.

ವಿಡಿಯೋದಲ್ಲಿ ಅವನನ್ನು ನೋಡಿದ್ದರೂ ಸಾಕ್ಷಿ ಅವನೊಂದಿಗೆ ಬರಿ ಹಾಯ್‌ ಬಾಯ್‌ ಅಷ್ಟೇ. ಈಗ ತನ್ನೆದುರಿಗೆ ನಿಂತಿದ್ದ ಯುವಕ ಆರ್ಯನ್‌ ನನ್ನು ನೋಡಿ ಅವಳಿಗೆ ಖುಷಿಯಾಗಿತ್ತು.

“ಹಾಯ್‌ ಸಾಕ್ಷಿ….” ಎಂದು ಬಳಿ ಬಂದವನು, “ಲುಕಿಂಗ್‌ ವೆರಿ ಪ್ರೆಟಿ ಡಾಲ್ ‌ಎಷ್ಟು ಮುದ್ದಾಗಿದ್ದೀಯೇ ನನ್ನ ಪುಟ್ಟ ತಂಗಿ…..!” ಎಂದು ಆತ್ಮೀಯತೆಯಿಂದ ಹೇಳಿದಾಗ ಅವಳ ಮೊಗದಲ್ಲಿ ನಾಚಿಕೆ ಕಂಡಿತ್ತು.

“ಹೃತಿಕ್‌, ಸಾಕ್ಷಿಗೆ ತುಂಬಾ ನಾಚಿಕೆಯಾಗ್ತಿದೆ ಅಂದ್ರೆ ಅವಳು ಮದುವೆಗೆ ರೆಡಿ ಕಣೋ….!” ಎಂದ.

“ನಿನ್ನ ಹತ್ರ ಮಾತೇ ಆಡೋಲ್ಲ ಹೋಗು…..” ಎಂದು ಹುಸಿ ಮುನಿಸು ತೋರುತ್ತಾ, “ಅಣ್ಣಾ ನಂಗೇನು ತಂದಿದ್ದಿ….? ಅತ್ತೆ ನನ್ನ ಫೇರಿಟ್‌ ಥಿಂಗ್ಸ್ ಕಳ್ಸಿದ್ದಾರೆ ತಾನೇ…..?” ಎಂದು ಕೇಳಿದಳು.

ಅವಳ ಮೂಗು ಹಿಂಡುತ್ತಾ, “ತಂದಿದ್ದೀನಮ್ಮ ಸುಂದರಿ…. ಮನೆಗೆ ಹೋಗೋಣ್ವಾ ಇಲ್ಲಾ ಇಲ್ಲಿಯೇ ಕೊಡಬೇಕೋ….?” ಎಂದು ತಮಾಷೆ ಮಾಡಿದ.

“ಏನೂ ಬೇಡ ಮನೇಲೇ ಕೊಡುವಿಯಂತೆ….!” ಎಂದಳು.

ತನ್ನನ್ನು ತಬ್ಬಿಕೊಂಡ ಹೃತಿಕ್‌ ನನ್ನು ಬಹಳ ಪ್ರೀತಿಯಿಂದ ಆಲಂಗಿಸಿಕೊಂಡಿದ್ದ ಆರ್ಯನ್‌. ಅಲ್ಲಿಂದ ಮನೆಗೆ ಬಂದ ಆರ್ಯನ್‌ ಗೆ ಭವ್ಯ ಸ್ವಾಗತ ದೊರಕಿತ್ತು.

ಪ್ರಾಜು ಮಾಮಿ, ಪಚ್ಚು ಮಾಮ ಅವನನ್ನು ಬಹಳ ಪ್ರೀತಿಯಿಂದ ಆಲಂಗಿಸಿಕೊಂಡು, ಅವನನ್ನು ಚೆನ್ನಾಗಿ ಉಪಚರಿಸಿದರು. ಎಲ್ಲರೊಂದಿಗೆ ಪಿಕ್ನಿಕ್‌, ಮುಂಬೈ ದರ್ಶನ ಎಂದು ಹೃತಿಕ್‌ ಮತ್ತು ಆರ್ಯನ್‌ ಓಡಾಡಿದ್ದರು. ಸಾಕ್ಷಿಗೆ ಸೆಮಿಸ್ಟರ್‌ ಪರೀಕ್ಷೆ ನಡೆಯುತ್ತಿದ್ದದ್ದರಿಂದ ಅವರೊಂದಿಗೆ ಅವಳು ಹೋಗಲಾಗಿರಲಿಲ್ಲ. ಐದು ದಿನಗಳು ಐದು ನಿಮಿಷಗಳಂತೆ ಕಳೆದುಹೋಗಿತ್ತು.

ಆರ್ಯನ್‌ ಊರಿಗೆ ಹೊರಡಬೇಕಾದ ದಿನ ಬಂದಿತು. ಮೆಡಿಕಲ್ ಓದುತ್ತಿದ್ದ ಹೃತಿಕ್‌ ಗೆ ರಜೆ ಸಿಗದ ಕಾರಣ ಪ್ರಸನ್ನನೇ ಅವನನ್ನು ಏರ್‌ ಪೋರ್ಟ್‌ ಗೆ ಡ್ರಾಪ್‌ ಮಾಡಿ ಬಂದ.

ಬೆಂಗಳೂರಿನಲ್ಲಿ ಇಳಿದು ಏರ್‌ ಪೋರ್ಟ್‌ ನಿಂದ ಹೊರಬಂದವನಿಗೆ ಇವನ ಹೆಸರಿನ ಬೋರ್ಡ್‌ ಹಿಡಿದು ನಿಂತಿದ್ದ ದೊಡ್ಡ ದಂಡನ್ನು ನೋಡಿ ಬಹಳ ಆಶ್ಚರ್ಯವಾಗಿತ್ತು. ಇಬ್ಬರು ಅತ್ತೆಯರ ಪರಿವಾರವೇ ಅಲ್ಲಿ ನೆರೆದಿತ್ತು. ದೊಡ್ಡತ್ತೆ ಅನಿತಾ, ಮಾವ ಅವರ ಇಬ್ಬರು ಹೆಣ್ಣುಮಕ್ಕಳಾದ ಸಂಚಿತಾ, ಸಮನ್ವಿತಾ. ಚಿಕ್ಕತ್ತೆ ಅದಿತಿ ಅವರ ಒಬ್ಬಳೇ ಮಗಳು ನಮಿತಾ ಎಲ್ಲರೂ ಇದ್ದರು. `ತನ್ನೊಬ್ಬನ ಸ್ವಾಗತಕ್ಕೆ ಇಷ್ಟು ಮಂದಿಯೇ?’ ಎಂದುಕೊಂಡ. ಅಂದು ತಾವು ಅಮೆರಿಕಾಗೆ ಹೊರಟು ನಿಂತಾಗ ಯಾರೊಬ್ಬರೂ ತಮ್ಮನ್ನು ಕಳುಹಿಸಲು ಏರ್‌ ಪೋರ್ಟ್‌ ಗೆ ಬಂದಿರಲಿಲ್ಲ. ಕಡೆಯ ಪಕ್ಷ ಒಂದು ಕಾಲ್ ‌ಸಹ ಮಾಡಿರಲಿಲ್ಲ, ಒಂದು ಕ್ಷಣ ನೆನಪಾಯಿತನಿಗೆ.

“ಅಲ್ಲೇನು ಎಂಜಿನಿಯರ್‌ ಕೆಲಸವೇ….? ಇಲ್ಲಾ ಹೋಟೆಲ್ ‌ನಲ್ಲಿ ಕೆಲಸವೇ….” ಎಂದಿದ್ದರು ದೊಡ್ಡ ಅತ್ತೆ.

“ಇಲ್ಲೇ ಒಂದು ಸರಿಯಾದ ಕೆಲಸ ಸಿಕ್ಕಿಲ್ಲ ಅಂದ ಮೇಲೆ ಅಲ್ಲೆಲ್ಲಿ ಸಿಗುತ್ತೆ, ಯಾವುದಾದರೂ ಹೋಟೆಲ್ ನಲ್ಲೋ ಇಲ್ಲಾ ಗ್ಯಾರೇಜ್ ನಲ್ಲೋ ಸಿಕ್ಕಿರಬೇಕು,” ಎಂದು ಚಿಕ್ಕತ್ತೆ ಅಪ್ಪನನ್ನು ಹಂಗಿಸಿ ನಕ್ಕಿದ್ದು ನೆನಪಾಯಿತು. ಯಾಕೋ ಅದೆಷ್ಟು ವರುಷಗಳು ಕಳೆದರೂ ಅವನಿಗೆ ಅವರ ಮಾತುಗಳನ್ನು ಮರೆಯಲು ಆಗಲೇ ಇರಲಿಲ್ಲ.

`ಟ್ಯಾಕ್ಸಿ ಮಾಡಿಕೊಂಡು ಸೀದಾ ಊರಿಗೆ ಹೋಗ್ತೀನಿ,’ ಎನ್ನಬೇಕು ಎಂದುಕೊಂಡವನಿಗೆ,  “ಅವರು ಹಂಗಿಸಿ ಅಂದಿದ್ದರಿಂದಲೇ ನಾವು ಇಲ್ಲಿ ಇಷ್ಟು ಚೆನ್ನಾಗಿರಲು ಸಾಧ್ಯವಾಗಿತ್ತು. ಸಂತರು ಹೇಳುತ್ತಾರೆ ನಿಂದಕರು ಯಾವಾಗಲೂ ನಮ್ಮ ಹಿಂದೆ ಮುಂದೆ ಇದ್ದು ಆಡಿಕೊಳ್ಳುತ್ತಿರಬೇಕು. ಆಗಲೇ ನಾವೂ ಸಹ ಹಠದಿಂದ ಕಷ್ಟಪಟ್ಟು ಮುಂದೆ ಬರಲು ಸಾಧ್ಯ!” ಎಂಬ ತಂದೆಯ ಮಾತು ನೆನಪಾಯಿತು.

`ಕಳೆದ ವರ್ಷ ದೊಡ್ಡ ಮಾವ ತಮ್ಮ ಮನೆಗೆ ಬಂದಿದ್ದಾಗ, ಅಲ್ಲಿನ ನಮ್ಮ ಸ್ಟೇಟಸ್‌, ಅಪ್ಪನ ಪೊಜಿಶನ್‌ ಎಲ್ಲವನ್ನೂ ನೋಡಿದ್ದರಿಂದಲೇ ತನಗೆ ಈ ಸ್ವಾಗತ ಸಿಕ್ಕಿರುವುದು,’ ಎಂದುಕೊಂಡ ಆರ್ಯನ್‌ ಸುಮ್ಮನಾದ.

“ಆರ್ಯನ್‌, ನೀನು ನಮ್ಮಿಬ್ಬರ ಮನೆಯಲ್ಲಿಯೂ ಇರಲೇಬೇಕು,” ಎಂದು ದೊಡ್ಡತ್ತೆ, ಚಿಕ್ಕತ್ತೆ ಹೇಳಿದರು.

“ಈಗ ಆಗಲ್ಲ ಅತ್ತೆ…. ಅಮೆರಿಕಾಕ್ಕೆ ಹಿಂದಿರುಗಬೇಕಾದ್ರೆ ಬಂದು ಇದ್ದು ಹೋಗ್ತೀನಿ,” ಎಂದ.

“ಹಾಯ್‌ ಆರ್ಯನ್‌, ನೀನು ಇಷ್ಟು ದಿನ ಯಾಕೆ ಇಂಡಿಯಾಗೆ ಬರಲೇ ಇಲ್ಲ.  ನೀನು ತುಂಬಾ ಬದಲಾಗಿದ್ದೀಯಾ ಅಂತ ಅಪ್ಪ ಹೇಳಿದ್ರು. ನೀನು ಬರುತ್ತೀಯಾ ಅಂತ ನಮಗ್ಯಾರಿಗೂ ಅನಿಸಿರಲಿಲ್ಲ. ಬಟ್‌ ತುಂಬಾ ಚೆನ್ನಾಗಿದ್ದೀಯಾ….!” ಎಂದಳು ದೊಡ್ಡತ್ತೆಯ ಹಿರಿ ಮಗಳು ಸಂಚಿತಾ ಇಂಗ್ಲಿಷ್‌ ನಲ್ಲಿ ಮಾತನಾಡಿದಳು.

“ಎಸ್‌ ಆರ್ಯನ್‌….ಯೂ ಆರ್‌ ಲುಕ್ಕಿಂಗ್‌ ವೆರಿ ಸ್ಮಾರ್ಟ್‌!” ಮತ್ತೊಬ್ಬ ಮಗಳು ಸಮನ್ವಿತಾ ದನಿಗೂಡಿಸಿದಳು.

“ನನಗೆ ಮದುವೆಯಾಗಿ ಫಾರಿನ್‌ ನಲ್ಲಿಯೇ ಸೆಟಲ್ ಆಗುವ ಆಸೆ ಇದೆ,” ಎಂದ ದೊಡ್ಡತ್ತೆ ಮಗಳ ಮಾತಿನಿಂದ ಅವನಿಗೆ ಅವಳ ಭಾವನೆಯ ಬಗ್ಗೆ ಅರ್ಥವಾಗಿತ್ತು. ಅವರೊಂದಿಗೆ ಬೆರೆಯದೇ ದೂರವೇ ಇದ್ದ ಚಿಕ್ಕತ್ತೆ ಮಗಳು ನಮಿತಾಳನ್ನು ತಾನೇ ಮಾತನಾಡಿಸಿದ. ಅವಳು ಸಂಕೋಚ ಬಿಟ್ಟು ಮಾತನಾಡಿದಳು. ದೊಡ್ಡತ್ತೆಯ ದೊಡ್ಡ ಮಗಳು ಸಂಚಿತಾಳ ಮದುವೆ ಆಗಿತ್ತು. ಅವಳನ್ನು ದೊಡ್ಡ ಕುಟುಂಬಕ್ಕೆ ಮದುವೆ ಮಾಡಿಕೊಟ್ಟಿದ್ದರು.

“ಆರ್ಯನ್‌, ನನ್ನ ಹಸ್ಬೆಂಡ್‌ ಹಾಸವದಲ್ಲಿದ್ದಾರೆ. ನಾನು ನಿನ್ನನ್ನು ನೋಡಲು ಬಂದೆ. ನೀನು ಖಂಡಿತಾ ಹಾಸನಕ್ಕೆ ಬರಲೇಬೇಕು. ನಮ್ಮವರು ನಿನಗೆ ಕಾಲ್ ಮಾಡ್ತಾರೆ,” ಎಂದು ಸಂಚಿತಾ ಹೇಳಿದಳು.

ಸಮನ್ವಿತಾ ಎಂಜಿನಿಯರಿಂಗ್‌ ಕೊನೆ ಸೆಮಿಸ್ಟರ್‌ ನಲ್ಲಿದ್ದಳು. ನಮಿತಾ ಎಂಬಿಎ ಮಾಡುತ್ತಿದ್ದಳು. ಅವರೆಲ್ಲರನ್ನೂ ಮಾತನಾಡಲು ಬಿಟ್ಟು, ಹಿರಿಯರು ಮುಂದಿನ ಕಾರಿನಲ್ಲಿ ಹೊರಟರು. ಕಾರು ದೊಡ್ಡ ಅತ್ತೆಯ ಮನೆ ಮುಂದೆ ನಿಂತಿತು. ಅದರ ಅಂದಚೆಂದ ಕಂಡು ಬೆರಗಾಗಿದ್ದ. ಅವರ ಅತಿಥಿ ಸತ್ಕಾರ ಸ್ವೀಕರಿಸಿ ತಂದೆ ಕೊಟ್ಟಿದ್ದ ಕವರ್‌ ಗಳನ್ನು ಇಬ್ಬರು ಅತ್ತೆಯರಿಗೆ ಕೊಡುತ್ತಾ, “ನಿಮಗಾಗಿ ತಂದಿರುವ ಗಿಫ್ಟ್ ನ್ನು ಊರಲ್ಲಿ ಕೊಡ್ತೀನಿ ಆಯ್ತಾ,” ಎಂದ.

“ಅದೆಲ್ಲ ಇರಲಿ ಬಿಡು. ಆಮೇಲೆ ಕೊಟ್ಟರಾಯ್ತು,” ಎಂದು ಮಾವ ಉಡಾಫೆಯಿಂದ ಹೇಳಿದ್ದು ಕೇಳಿ ಕೋಪ ಬಂದರೂ ತಾಳ್ಮೆಯಿಂದ, “ನಾನಾಗಿ ನಿಮಗೆ ಏನೂ ತಂದಿಲ್ಲ ಮಾವ, ಮಾಮ್ ಕೊಟ್ಟಿದ್ದಷ್ಟೆ. ಬಲವಂತ ಏನಿಲ್ಲ. ಇಷ್ಟ ಆದರೇ ತಗೊಳ್ಳಿ.” ಎಂದ.

“ನೀನು ಏನೇ ತಂದಿದ್ರೂ ತಗೋತೀವಿ ಬಿಡು ಆರ್ಯನ್‌. ಅಪ್ಪಾಜಿಗೆ ಅದೆಲ್ಲಾ ಗೊತ್ತಾಗೋಲ್ಲ,” ಎಂದಳು ಸಮನ್ವಿತಾ.

“ಆರ್ಯನ್‌ ನೀನು ನಮ್ಮದೇ ಕಾರು ತೆಗೆದುಕೊಂಡು ಹೋಗು,” ಎಂದು ಅವರೆಲ್ಲಾ ಎಷ್ಟೇ ಹೇಳಿದರೂ ಕೇಳದೇ ಟ್ಯಾಕ್ಸಿ ಮಾಡಿಕೊಂಡು ಹೋಗುವುದಾಗಿ ಹೇಳಿದ.

ಜಾತ್ರೆಯ ಸಮಯಕ್ಕೆ ತಾವು ಬರುವುದಾಗಿ ತಿಳಿಸಿ ಅವನನ್ನು ಬೀಳ್ಕೊಟ್ಟರು.

ಟ್ಯಾಕ್ಸಿ ಹಿಡಿದು ನೇರ ಊರಿಗೆ ಬಂದ ಆರ್ಯನ್‌. ಊರು ಅವನು ಕಂಡಂತೆ ಇರದೇ ಈಗ ಬಹಳಷ್ಟು ಬದಲಾಣೆ ಕಂಡು, ಈಗ ಅದೊಂದು ಪುಟ್ಟ ಸಿಟಿಯೇ ಆಗಿತ್ತು. ಹಳೆಯ ಹೆಂಚಿನ ಮನೆಗಳು ತಾರಸಿ ಮನೆಗಳಾಗಿದ್ದವು. ಪ್ರತಿ ಮನೆಯ ಮುಂದೆಯೂ ಹೂವಿನ ಗಿಡಗಳ ಕುಂಡಗಳ ಅಲಂಕಾರ ಮಾಡಿದ್ದರು. ತಮ್ಮ ಮನೆಯ ಬದಲಾವಣೆ ನೋಡಿ ಖುಷಿಯಾಗಿತ್ತು. ಮನೆಯ ಮುಂದೆ ಟ್ಯಾಕ್ಸಿ ನಿಲ್ಲುತ್ತಿದ್ದಂತೆ ಮನೆಯವರೆಲ್ಲರೂ ಹೊರಗೆ ಬಂದಿದ್ದರು.

ಅಜ್ಜಿಯನ್ನು ನೋಡುತ್ತಿದ್ದಂತೆ ಆರ್ಯನ್‌ ಕಣ್ಣುಗಳು ತುಂಬಿ ಬಂದವು. ನಮಸ್ಕಾರ ಮಾಡಿದ, ತಮಗಿಂತಲೂ ಎತ್ತರವಾಗಿ ಬೆಳೆದು ಒಳ್ಳೆ ರಾಜಕುಮಾರನಂತೆ ಕಾಣುತ್ತಿದ್ದ ಮೊಮ್ಮಗನನ್ನು ನೋಡಿ, ಕಣ್ಣು ಹರಿಸುತ್ತಾ, “ಪಾಪು, ಈಗಲಾದರೂ ಬಂದೆಯಲ್ಲ. ಎಲ್ಲಿ ನಿನ್ನನ್ನು ನೋಡದೆ ಸಾಯ್ತೀನೋ ಎನಿಸಿತ್ತು ಕಂದ,” ಎಂದು ಅಜ್ಜಿ ಮುಂದೆ ಬಂದು ಅವನ ಮೈದಡವಿ, ತಲೆ ನೇವರಿಸಿ ಅವನನ್ನು ತಬ್ಬಿಕೊಂಡು ಹಣೆಗೆ ಮುದ್ದಿಟ್ಟರು.

ತಾತನಿಗೆ ನಮಸ್ಕಾರ ಮಾಡಿದಾಗ, ಅವರೂ ಸಹ ಅವನನ್ನು ತಬ್ಬಿಕೊಂಡು ಮೈದಡವಿದರು. ದೊಡ್ಡಮ್ಮ ದೊಡ್ಡಮ್ಮರಿಗೂ ನಮಸ್ಕರಿಸಿ, ತಂಗಿಯರನ್ನು ಪ್ರೀತಿಯಿಂದ ಆಲಂಗಿಸಿಕೊಂಡ. ಉಜ್ವಲಾ, ಊರ್ಮಿಳಾ ಇಬ್ಬರಿಗೂ ಅಣ್ಣನನ್ನು ಕಂಡು ತುಂಬಾ ಖುಷಿಯಾಗಿತ್ತು.

“ಅಣ್ಣ ನನಗೆ ಚಾಕಲೇಟ್‌ ತಂದಿದ್ದಿ ತಾನೇ….”

“ನೀನು ಹೇಳಿದ ಮೇಲೆ ನಾನು ತರದೇ ಇರ್ತಿನಾ….? ತಂದಿದ್ದೀನಿ….” ಎನ್ನುತ್ತಾ ಅವರೊಂದಿಗೆ ಒಳಗೆ ಬಂದ.

ಮನೆಯಲ್ಲಿ ಬಹಳ ಬದಲಾವಣೆ ಆಗಿತ್ತು. ತಾನು ಚಿಕ್ಕವನಾಗಿದ್ದಾಗ ಆ ತೊಟ್ಟಿ ಮನೆ ಹಾಗೇ ಇದ್ದರೂ, ಪಕ್ಕದಲ್ಲಿನ ರೂಮ್ ಗಳು ಆಧುನಿಕಗೊಂಡಿದ್ದವು. ಮಹಡಿ ಮೇಲೆ ಮಕ್ಕಳಿಗೆಂದೇ ಕಟ್ಟಿಸಿದ ಕೋಣೆಗಳಂತೂ ಎಲ್ಲಾ ಸೌಕರ್ಯ, ಸೌಲಭ್ಯಗಳನ್ನು ಹೊಂದಿತ್ತು.

“ಅಣ್ಣಾ ಇಲ್ಲಿ ಬಾ, ನೋಡು ನಿನ್ನ ರೂಮ್. ನಾವಿಬ್ಬರೂ ಸೇರಿ ಎಷ್ಟು ಚೆನ್ನಾಗಿ ಅರೇಂಜ್‌ ಮಾಡಿದ್ದೇವೆ ಗೊತ್ತಾ…..?” ಎಂದು ಅವರಿಬ್ಬರೂ ಅವನನ್ನು ಎಳೆದುಕೊಂಡು ಮಹಡಿಯ ಮೇಲಿನ ರೂಮಿಗೆ ಕರೆದುಕೊಂಡು ಹೋದರು. ಆ ರೂಮ್ ನಿಜವಾಗಲೂ ಅವನ ಮನೆಯಲ್ಲಿನ ರೂಮಿನಂತೆಯೇ ಇತ್ತು.

“ವಾವ್‌… ವಾವ್ ‌ಸೇಮ್ ಟು ಸೇಮ್ ಮೈ ಡಿಯರ್‌ ಸಿಸ್ಟರ್ಸ್‌…. ಸೋ ಸ್ವೀಟ್‌ ಆಫ್‌ ಯೂ….!” ಎಂದು ತಂಗಿಯರನ್ನು ಆಲಂಗಿಸಿದ.

ಅಷ್ಟರಲ್ಲಿ ಕಾಫಿ ಹಿಡಿದು ಬಂದ ಹುಡುಗಿಯನ್ನು ನೋಡಿ ಅವನಿಗೆ ಅಚ್ಚರಿಯಾಗಿತ್ತು. `ಯಾರು ಈ ಹುಡುಗಿ….? ಲುಕಿಂಗ್‌ ವೆರಿ ಸಿಂಪಲ್ ಪ್ರೆಟಿ,’ ಎಂದುಕೊಂಡನು, “ಥ್ಯಾಂಕ್ಸ್…..” ಎಂದು ಕಾಫಿ ತೆಗೆದುಕೊಂಡ.

“ವೆಲ್ ‌ಕಂ ಸರ್‌…..” ಎಂದಳು ಹುಡುಗಿ. ಅವಳನ್ನು ಮತ್ತೆ ನೋಡಬೇಕು ಎನಿಸಿತು.

“ಅಣ್ಣಾ, ಅವಳು ಅಸ್ಮಿತಾ…. ನಮ್ಮ ತಾತನ ದೂರದ ತಂಗಿ ಮೊಮ್ಮಗಳು. ಅವಳು ಮಂಡ್ಯದ ಕಾಲೇಜಿನಲ್ಲಿ ಸೈನ್ಸ್ ಲೆಕ್ಚರರ್ ಆಗಿದ್ದಾಳೆ. ಪಾಪ ತುಂಬಾ ಬಡವರು. ಎರಡು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿ, ನಮ್ಮ ಮನೆಯಲ್ಲೇ ಇದ್ದಾಳೆ. ನಾವು ಅವಳಿಗೆ ಕೆಲಸ ಹೇಳದಿದ್ದರೂ ತಾನಾಗಿ ಮಾಡ್ತಾಳೆ….”

“ಅವಳಿಗೆ ಮನೆಯವರು ಯಾರೂ ಇಲ್ಲವೇ…?”

“ತಾಯಿ, ತಂದೆ ಇಲ್ಲ….. ಅವರ ಊರು ನಂಜನಗೂಡು. ಅಲ್ಲಿನ ನಮ್ಮ ತಾತನ ಜಮೀನನ್ನು ಅವರೇ ನೋಡಿಕೊಳ್ತಿದ್ರಂತೆ. ಈಗ ಎರಡು ತಿಂಗಳ ಹಿಂದೆ ಪಾಪಾ ಅವಳ ತಂದೆ ಸಹ ಹೋಗ್ಬಿಟ್ಟರು. ಅದರಿಂದ ತಾತಾ ಇವಳನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಮಮ್ಮಿ ಡ್ಯಾಡಿಗೆ ಅವಳ ಜವಾಬ್ದಾರಿ ಹೊರಬೇಕಲ್ಲಾ ಎಂದು ಬೇಜಾರು!” ಎಲ್ಲವನ್ನೂ ಹೇಳಿದ ಉಜ್ವಲಾಳ ಮುಗ್ಧ ಸ್ವಭಾವ ಅವನಿಗೇ ಬಹಳ ಇಷ್ಟವಾಗಿತ್ತು. ಹಾಗೆಯೇ ದೊಡ್ಡಪ್ಪ ದೊಡ್ಡಮ್ಮ ಇನ್ನೂ ಬದಲಾಗಿಲ್ಲ ಎಂಬ ಅರಿವು ಆಯಿತು. ಮರುದಿನ ತಾತನ ಪರ್ಮಿಷನ್‌ ಪಡೆದು ತಾನೊಬ್ಬನೇ ಊರು ಸುತ್ತಲು ಹೋದ ಅವನಿಗೆ ತಾನು ಆಗ ನೋಡಿದ್ದ ಯಾವ ಜಾಗಗಳ ಪರಿಚಯ ಸಿಗಲಿಲ್ಲ. ದೇವಸ್ಥಾನಕ್ಕೆ ಬಂದ ಅವನನ್ನು ಅರ್ಚಕ ಶ್ರೀನಿವಾಸ ಶಾಸ್ತ್ರಿಗಳು ತಾವಾಗಿಯೇ ಮಾತನಾಡಿಸಿದರು.

“ಏನಪ್ಪ  ನೀನು ನಮ್ಮ ನಿತೀಶನ ಮಗನೇನು…..?”

“ಹೌದು ಅರ್ಚಕರೇ….!”

“ಯಾವಾಗ ಬಂದ್ಯಪ್ಪ ಅಮೆರಿಕಾದಿಂದ….? ನಿಮ್ಮ ತಂದೆ ಚೆನ್ನಾಗಿದ್ದಾರೇನು….?”

“ಚೆನ್ನಾಗಿದ್ದಾರೆ, ನಾನು ಬಂದು ಒಂದು ವಾರವಾಯಿತು. ಜಾತ್ರೆಯ ತಯಾರಿ ಬಹಳ ಚೆನ್ನಾಗಿ ನಡೆಯುತ್ತಿದೆಯಲ್ಲಾ….” ಎಂದು ಕೇಳಿದ.

“ಹೌದು. ವರ್ಷ ವರ್ಷ ನಡೆಯೋ ಜಾತ್ರೆ. ನಿಮ್ಮ ತಾತಾ ನಿನ್ನ ಹೆಸರಲ್ಲಿ ರಥೋತ್ಸವ ಮಾಡಿಸ್ತಿದ್ದಾರೆ. ನಿನ್ನನ್ನು ನೋಡಿ ಬಹಳ ಸಂತೋಷವಾಯ್ತು. ನೀನು ಡಾಕ್ಟರ್‌ ಅಂತ ಕೇಳಿ ಇನ್ನೂ ಖುಷಿಯಾಯ್ತು ಕಣಪ್ಪ…. ನಿಮ್ಮ ತಂದೆ ಜೊತೆಯವನೇ ನಾನು. ಪಿಯುಸಿ ಮಾಡಿ ಶೃಂಗೇರಿಯಲ್ಲಿ ಎರಡು ವರ್ಷವಿದ್ದು ವೇದಾಧ್ಯಯನ ಮಾಡಿಕೊಂಡು ನಮ್ಮ ಕುಲಕಸುಬಾದ ಪೌರೋಹಿತ್ಯ ಮಾಡುತ್ತಿದ್ದೇನೆ,” ಎಂದರು.

ಅವರೊಂದಿಗೆ ದೇವಸ್ಥಾನದ ಇತಿಹಾಸದ ಬಗ್ಗೆ ಮಾತಾಡುತ್ತಾ, ತಿರುಗಿ ಮನೆಗೆ ಬಂದಾಗ ಮನೆಯಲ್ಲಿ ಬಹಳ ತಯಾರಿ ನಡೆದಿತ್ತು. ಅವನು ಬಂದದ್ದನ್ನು ನೋಡಿದ ರಾಜೇಶ್‌, “ಎಲ್ಲಯ್ಯ ಹೋಗಿದ್ದೆ…. ಬಾ…. ಊಟ ಮಾಡೋಣ. ನಿನಗಾಗಿ ಕಾಯ್ತಾ ಇದ್ವಿ…..” ಎಂದು ಅವನನ್ನು ಡೈನಿಂಗ್‌ ಹಾಲ್ ಗೆ ಕರೆದುಕೊಂಡು ಹೋದರು.

ಅಷ್ಟರಲ್ಲಾಗಲೇ ಚಿಕ್ಕತ್ತೆಯ ಪರಿವಾರ ಬಂದಿಳಿದಿತ್ತು. ಎಲ್ಲರೊಂದಿಗೆ ಕುಳಿತು ಊಟ ಮಾಡುವಾಗ ಬಡಿಸುತ್ತಿದ್ದ ಅಸ್ಮಿತಾಳನ್ನೇ ಅವನ ಕಣ್ಣುಗಳು ಹಿಂಬಾಲಿಸುತ್ತಿದ್ದವು. ಎಲ್ಲರನ್ನೂ ವಿಚಾರಿಸುತ್ತಾ ಕೇಳಿ ಕೇಳಿ ಬಡಿಸುತ್ತಿದ್ದ ಹುಡುಗಿಯಿಂದ ಅವನ ಕಣ್ಣು ಕೀಳಲಾಗಿರಲಿಲ್ಲ.

(ಮುಂದಿನ ಸಂಚಿಕೆಯಲ್ಲಿ ಮುಕ್ತಾಯ)

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ