ಕೇಶವ್ ರಾವ್ ಭಾರದ್ವಾಜ್ಮತ್ತು ನಿರ್ಮಲಾ ದಂಪತಿಗಳದು ತುಂಬು ಸಂಸಾರ. ಇವರ ಹಿರಿ ಮಗ ಸೊಸೆ ರಾಜೇಶ್ಜಾನಕಿ ಎಲ್ಲರ ಮೇಲೆ ದರ್ಪ ತೋರಿಸುತ್ತಾ ಮೆರೆಯುತ್ತಿದ್ದರು. ಕಿರಿಮಗ ನಿತೀಶ್ಗೆ ಕಾಲು ಊನವಾಗಿದ್ದರಿಂದ ಮನೆಯವರೆಲ್ಲರ ತಿರಸ್ಕಾರ ಎದುರಿಸಬೇಕಿತ್ತು. ಅವನ ಪತ್ನಿ ಮಾಯಾ ಮನೆಯವರೆಲ್ಲರಿಗೂ ಬಿಟ್ಟಿ ಆಳಾಗಿ ದುಡಿಯುವುದೇ ಆಗಿಹೋಯಿತು. ಬಿ.. ಪದವೀಧರನಾದ ನಿತೀಶ್ಗೆ ಮುಂದೆ ಅಮೆರಿಕಾದಲ್ಲಿ ಕೆಲಸ ಸಿಗಲು, ಹೆಂಡತಿ ಮಕ್ಕಳ ಜೊತೆ ಅಲ್ಲೇ ನೆಲೆಸುವಂತಾಯಿತು. ಬಾಲ್ಯದಿಂದಲೂ ಮನೆಯವರ ಅನಾದರಕ್ಕೆ ತುತ್ತಾಗಿ, ಮೊದಲಿನಿಂದಲೂ ಅವರೊಂದಿಗೆ ಆತ್ಮೀಯತೆ ಇಲ್ಲದ ಆರ್ಯನ್ಭಾರತದ ತನ್ನ ಊರಿಗೆ ಹೋಗಲು ಬಯಸುತ್ತಿರಲಿಲ್ಲ. ಡಾಕ್ಟರ್ಆಗಿ ಎಲಿಜಬಲ್ ಬ್ಯಾಚುಲರ್ಆಗಿದ್ದ ಅವನಿಗೆ ಹೆಣ್ಣು ಕೊಡಲು ಎಲ್ಲರೂ ಕಾಯುತ್ತಿದ್ದರು. ಅಜ್ಜ ಅಜ್ಜಿಯರಿಗಾಗಿಯೇ ಊರ ಜಾತ್ರೆಗಾಗಿ ಭಾರತಕ್ಕೆ ಬಂದಿದ್ದ ಆರ್ಯನ್‌, ಅಲ್ಲಿ ಅಸ್ಮಿತಾಳ ಸರಳ ವ್ಯಕ್ತಿತ್ವಕ್ಕೆ ಮಾರುಹೋದ.

ಮುಂದೆ……?

ಅಮೆರಿಕಾದಿಂದ ಜಾತ್ರೆಗೆಂದು ಊರಿಗೆ ಬಂದಿದ್ದ ಆರ್ಯನ್‌, ತನಗಾಗಿ ಸೋದರತ್ತೆಯರ ಹೆಣ್ಣುಮಕ್ಕಳು ಹಾಗೂ ದೊಡ್ಡಮ್ಮನ ತಮ್ಮನ ಮಗಳು ಕಾದು ನಿಂತಿದ್ದರೂ, ಅವನು ಅವರಾರಿಗೂ ಮರುಳಾಗದೆ ಸರಳ ಸುಂದರ ಹುಡುಗಿ ಅಸ್ಮಿತಾಳನ್ನೇ ಇಷ್ಟಪಡುವಂತೆ ಆದದ್ದು ಹೇಗೆ…..?

ಜಾತ್ರೆಗೆ ಮೂರು ದಿನಗಳ ಮೊದಲೇ ನೆಂಟರು ಬಂದಿದ್ದರು. ಜಾನಕಿಯ ತಮ್ಮನ ಪರಿವಾರ ಬಂದಿತ್ತು. ಅವರ ಕೊನೆಯ ಮಗಳನ್ನು ತಮ್ಮ ಸೊಸೆಯಾಗಿ ಮಾಡಿಕೊಳ್ಳಬೇಕೆಂದು ಜಾನಕಿಗೆ ಆಸೆ ಇತ್ತು.

“ಅಕ್ಕಾ… ಆರ್ಯನ್‌ ಒಪ್ಪಿದರೆ ನನ್ನದೇನೂ ಅಭ್ಯಂತರವಿಲ್ಲ,” ಎಂದು ಮೊದಲೇ ಹೇಳಿಬಿಟ್ಟಿದ್ದರಿಂದ ಜಾನಕಿಯ ಉಮೇದು ಮತ್ತಷ್ಟು ಹೆಚ್ಚಿತ್ತು.

ಹುಡುಗಿ ನೋಡಲು ಚೆನ್ನಾಗಿದ್ದಳು. ಜಾನಕಿ ಅವಳ ಕೈ ಹಿಡಿದು ಕರೆತಂದು, “ಆರ್ಯನ್‌, ಇವಳು ನನ್ನ ತಮ್ಮನ ಮಗಳು ಚೈತ್ರಾ. ಮೆಡಿಕಲ್ ಕೊನೆಯ ವರ್ಷ ಓದುತ್ತಿದ್ದಾಳೆ. ಅವಳಿಗೆ ಮುಂದೆ ಅಮೆರಿಕಾದಲ್ಲಿ ಕಲಿಯುವ ಆಸೆ ಇದೆ. ನನ್ನ ತಮ್ಮ ಎಂ.ಎಲ್.ಎ ಆಗಿದ್ದಾನೆ!” ಎಂದು ಹೇಳಿದರು ದೊಡ್ಡಮ್ಮ.

ಅವಳು ಸಹ ಅವನೊಂದಿಗೆ ಸಂಕೋಚವಿಲ್ಲದೆ ಮಾತನಾಡ ತೊಡಗಿದಳು. ನೀವಿಬ್ಬರು ಮಾತನಾಡ್ತಿರಿ ಎಂದು ಹೇಳಿ ಒಳ ಹೋದಳು ಜಾನಕಿ. ಅವಳೊಂದಿಗೆ ಏನು ಮಾತನಾಡಬೇಕೆಂದು ತಿಳಿಯದೆ ಆರ್ಯನ್‌ ಚಡಪಡಿಸಿದ. ಅವಳೇನಾದರೂ ಮೆಡಿಕಲ್ ವಿಷಯದ ಬಗ್ಗೆ ಮಾತನಾಡಿದ್ದರೆ, ಅವನು ಗಂಟೆ ಗಟ್ಟಲೇ ನಿರರ್ಗಳವಾಗಿ ಮಾತನಾಡಿರುತ್ತಿದ್ದ. ಆದರೆ ಅವಳು ಕಾಲೇಜಿನ ಹುಡುಗಿಯರು, ಬಾಯ್‌ ಫ್ರೆಂಡ್‌, ಸೋಶಿಯಲ್ ಮೀಡಿಯಾ ಇದರ ಬಗ್ಗೆ ಮಾತನಾಡುತ್ತಿದ್ದಳು. ಅದರಿಂದ ಅವನಿಗೆ ಉತ್ತರಿಸಲು ಆಗಿರಲಿಲ್ಲ. ಅಲ್ಲಿಯೇ ಕುಳಿತು ಹೂ ಕಟ್ಟುತ್ತಿದ್ದ ಅಸ್ಮಿತಾಳ ಮೇಲೆ ಅವನ ಕಣ್ಣು ನೆಟ್ಟಿತ್ತು. ಅವಳು ಕುಳಿತಿದ್ದ ಭಂಗಿ ಅಳೆದೆಯ ಮೇಲೆ ಹಾವಿನಂತೆ ಬಿದ್ದುಕೊಂಡಿದ್ದ ಜಡೆ ಅವನನ್ನು ಮತ್ತಷ್ಟು ಆಕರ್ಷಿಸಿತ್ತು. ಹೇಗಾದ್ರೂ ಅವಳನ್ನು ಮಾತಾಡಿಸಬೇಕು ಎಂದುಕೊಂಡರೂ ಆಗಿರಲೇ ಇಲ್ಲ. ಅವಳು ತನ್ನ ಕೆಲಸ ಮುಗಿಸಿ ಅದೆಲ್ಲಿಗೆ ಹೋಗಿಬಿಡುತ್ತಿದ್ದಳೋ ಕಾಣುತ್ತಲೇ ಇರಲಿಲ್ಲ.

ಅವಳು ಉಡುತ್ತಿದ್ದ ಸಾಧಾರಣ ಸೀರೆಯಲ್ಲಿಯೂ ಅವನ ಕಣ್ಣಿಗೆ ಅವಳು ಬಹಳ ಸುಂದರವಾಗಿ ಕಾಣುತ್ತಿದ್ದಳು. ಜಾತ್ರೆಗಾಗಿ ಮನೆಯಲ್ಲಿ ಬಹಳ ಜನ ಸೇರಿದ್ದರು. ಆರ್ಯನ್‌ ಎಲ್ಲೇ ಇದ್ದರೂ ಅಜ್ಜಿಯೇ ಹುಡುಕಿಕೊಂಡು ಬಂದು ಅವನನ್ನು ಕೇಳಿ ಅವನಿಗೆ ಬೇಕಾದ್ದನ್ನು ಮಾಡಿಕೊಡುತ್ತಿದ್ದರು. ದೊಡ್ಡಮ್ಮ, ಅತ್ತೆಯರ ಉಪಚಾರ ಜೋರಾಗಿಯೇ ನಡೆದಿತ್ತು. ಚೈತ್ರಾ ಮತ್ತು ಸಮನ್ವಿತಾ ಅವನ ಹಿಂದೆಯೇ ಇದ್ದರೂ. ಬೇಕೆಂದೇ ಮೈ ಮೇಲೆ ಬಿದ್ದು ಮಾತನಾಡಿಸುವ ಅವರ ಓವರ್‌ ಆ್ಯಕ್ಟಿಂಗ್‌ ಸ್ವಭಾವ ಅವನಿಗೆ ಇಷ್ಟವೇ ಆಗುತ್ತಿರಲಿಲ್ಲ. ಅಮೆರಿಕಾದಲ್ಲಿ ಇದೆಲ್ಲಾ ಸಾಧಾರಣ ವಿಷಯ. ಡೇಟಿಂಗ್‌ ಎಲ್ಲಾ ಕಾಮನ್‌. ಆದರೆ ಇಲ್ಲಿಯೂ ಇದೇ ಸಂಸ್ಕೃತಿ ಬೆಳೆಯುತ್ತಿದೆಯಲ್ಲ ಎಂದು ಅವನಿಗೆ ಬೇಸರವೇ ಆಗಿತ್ತು. ಜೊತೆಗೆ ಇಲ್ಲಿ ಅವನಿಗೆ ಯಾರೂ ಸ್ನೇಹಿತರು ಇರಲಿಲ್ಲ, ಅದು ಅವನಿಗೂ ಇನ್ನೂ ಬೇಸರವಾಗಿತ್ತು. ಇವರ ಯಾರ ಮನೆಯಲ್ಲಿಯೂ ಗಂಡು ಮಕ್ಕಳಿಲ್ಲವಲ್ಲ ಎಂದು ಹಲುಬಿದ್ದೆ ಬಂತು.

ಅಸ್ಮಿತಾಳ ಹೂ ಕಟ್ಟಿ ಮುಗಿದಿತ್ತೇನೋ ಎಲ್ಲವನ್ನೂ ಎತ್ತಿಟ್ಟು ತನ್ನ ಜಡೆ ಹಿಂದಕ್ಕೆಸೆದುಕೊಂಡು, ಸೀರೆ ಕೊಡವಿಕೊಂಡು ಮೇಲೆದ್ದಳು. ದಾರ ಉಂಡೆಯನ್ನು ಅಲ್ಲಿದ್ದ ಡ್ರಾಯರ್‌ ನಲ್ಲಿ ಇಡಲು ಅವನು ಕುಳಿತಿದ್ದ ಟೇಬಲ್ ಬಳಿ ಬಂದಳು.

`ತಾನು ಈಗ ಮಾತನಾಡದಿದ್ದರೆ ಹೋಗಿ ಬಿಡುತ್ತಾಳೆ,’ ಎನಿಸಿತವನಿಗೆ. ಅದಕ್ಕಾಗಿಯೇ “ರೀ ಮಿಸ್‌….” ಎಂದ.

“ಅಸ್ಮಿತಾ….”

“ಅಸ್ಮಿತಾ, ತಲೆ ನೋಯ್ತಿದೆ ಒಂದು ಕಪ್‌ ಕಾಫಿ ಸಿಗಬಹುದಾ ಪ್ಲೀಸ್‌…..” ಎಂದ.

“ಓ.ಕೆ….. ಅದಕ್ಯಾಕೆ ರಿಕ್ವೆಸ್ಟ್ ಮಾಡ್ತೀರಿ. ಈಗಲೇ ತರ್ತೀನಿ,” ಎಂದು ಒಳ ಹೋದಳು, ಐದೇ ನಿಮಿಷದಲ್ಲಿ ಕಾಫಿಯ ಟ್ರೇಯೊಂದಿಗೆ ಅಮೃತಾಂಜನ್‌ ಡಬ್ಬಿಯನ್ನು ತಂದು, ಅದನ್ನು ಅವನಿಗೆ ಕೊಡುತ್ತಾ, “ಅಜ್ಜಿ ಹೇಳಿದ್ರು ಇದನ್ನು ಹಚ್ಚಿಕೊಂಡು ಸ್ವಲ್ಪ ಹೊತ್ತು ಮಲಗಬೇಕಂತೆ!” ಎಂದಳು.

“ಆಯ್ತು ಥ್ಯಾಂಕ್ಸ್!” ನಿಂತೇ ಇದ್ದಳು, “ನಿಮಗೆ ಮತ್ತಿನ್ನೇನಾದರೂ ಬೇಕೆ….? ನಿಮಗೆ ಓದ ಬೇಕು ಎನಿಸಿದರೆ ನನ್ನ ಹತ್ತಿರ ಲೈಬ್ರೆರಿಯಿಂದ ತಂದಿರುವ ಬುಕ್ಸ ಇವೆ ತಂದುಕೊಡಲೇ….?” ಕೇಳಿದಳು.

“ಓಹ್‌…. ಪ್ಲೀಸ್‌ ಕೊಡಿ ಓದ್ತೀನಿ,” ಎಂದ.

“ಇರಿ… ತಂದು ಕೊಡ್ತೀನಿ….!” ಎಂದು ಹೊರಡಲು ಅನುವಾದವಳನ್ನು ತಡೆದು, “ಇರಿ, ನಾನು ನಿಮ್ಮೊಂದಿಗೆ ಬರ್ತೇನೆ. ಮತ್ತೆ ನೀವೇಕೆ ಕೆಳಗೆ ಇಳಿದು ಬರಬೇಕು….” ಎಂದ.

“ಮಹಡಿ ಕೋಣೆಯಲ್ಲಿ ಇಲ್ಲ. ಇಲ್ಲಿಯೇ ಹಿತ್ತಲಿನ ಹತ್ತಿರ ಇರುವ ಸ್ಟೋರ್‌ ರೂಮ್ ನಲ್ಲಿ ಇದೆ. ನೀವು ಇರಿ ನಾನು ತರ್ತೀನಿ…..!” ಎಂದವಳು ಅವನಿಗೆ ಕಾಯದೆ ಒಳ ಹೋದಳು.

ಅವನಿಗೆ ಅಳಿಗಾಗಿ ಕಾಯುವುದೇ ಅನಿವಾರ್ಯವಾಗಿತ್ತು. ಇಡೀ ಮನೆಯನ್ನು ಸುತ್ತಿದ್ದ. ಆದರೆ ಹಿತ್ತಿಲ ಕಡೆಯೇ ಹೋಗಿರಲಿಲ್ಲ. ಕೆಲವು ನಿಮಿಷಗಳಲ್ಲಿ ಅವಳು ಎರಡು ಪುಸ್ತಕ ಹಿಡಿದು ಬಂದಳು.“ತಗೊಳ್ಳಿ ಇವು ಬಹಳ ಒಳ್ಳೆಯ ಪುಸ್ತಕಗಳು!” ಎಂದು ಕೊಟ್ಟು ಹೋದಳು. ಅವಳು ಕೊಟ್ಟ ಪುಸ್ತಕಗಳೆರಡೂ ಬಹಳ ಚೆನ್ನಾಗಿದ್ದವು. ಲೀಸಾ ಸ್ಯಾಂಡರ್ಸ್‌ ಬರೆದಿದ್ದ `ಎವ್ವೆರಿ ಪೇಶಂಟ್‌ ಟೇಲ್ಸ್ ಎ ಸ್ಟೋರಿ’ ಮತ್ತು ಫ್ರಾಯ್ಡ್ ಬರೆದಿದ್ದ `ದ ಇಂಟರ್‌ ಪ್ರಿಟೇಶನ್‌ ಆಫ್‌ ಡ್ರೀಮ್ಸ್.’ ಆ ಪುಸ್ತಕಗಳನ್ನು ನೋಡಿಯೇ ಅವಳ ಅಭಿರುಚಿಯ ಬಗ್ಗೆ ತಿಳಿದುಕೊಂಡಿದ್ದ. ಅವುಗಳನ್ನು ಮತ್ತೆ ಮತ್ತೆ ಮುಟ್ಟಿ ನೋಡಿದಾಗ ಅವಳ ಸ್ವರ್ಶವಾದಂತೆ ಆಗಿತ್ತು.

`ನಾನೇನಾದರೂ ಈ ಹುಡುಗಿಯನ್ನು ಇಷ್ಟಪಡುತ್ತಿರುವೆನೇ,’ ಎನಿಸಿದಾಗ ಮನಸ್ಸು ಹೌದೆಂದು ಹೇಳಿತು. ಪುಸ್ತಕ ಹಿಡಿದು ಕಾಫಿ ಹೀರುತ್ತಾ ತನ್ನ ರೂಮಿಗೆ ಬಂದ. ಪುಸ್ತಕ ಓದುತ್ತಾ  ಹೊತ್ತು ಹೋಗಿದ್ದೆ ಗೊತ್ತಾಗಲಿಲ್ಲ. ಗಂಟೆ ಎರಡಾಗಿತ್ತು. ಚೈತ್ರಾ ಬಂದು ಕರೆದಾಗಲೇ ಅವನ ಅರವಿಗೆ ಬಂದದ್ದು.

“ಊಟಕ್ಕೆ ಬರಬೇಕಂತೆ, ಅತ್ತೆ ಹೇಳಿದ್ರು.”

“ಸರಿ ನೀವು ನಡೀರಿ. ನಾನು ಫ್ರೆಶಪ್‌ ಆಗಿ ಬರ್ತೀನಿ,” ಎಂದವಳನ್ನು ಸಾಗ ಹಾಕಿದ್ದ.

ವಾಷ್‌ ರೂಮ್ ಗೆ ಹೋಗಿ ಬಂದವನು ಬಾಲ್ಕನಿಯಲ್ಲಿ ಇಣುಕಿದ. ಸೊಂಟಕ್ಕೆ ಸೆರಗು ಸಿಕ್ಕಿಸಿ ಬಟ್ಟೆ ಒಗೆಯುತ್ತಿದ್ದ ಅಸ್ಮಿತಾ ಕಂಡಳು. ತನ್ನ ಸೀರೆಗಳನ್ನು ಒಗೆದುಕೊಳ್ಳುತ್ತಿದ್ದಳೇನೋ, ಅವುಗಳನ್ನು ಒಣಹಾಕಿ ಮುಖಕ್ಕೆ ನೀರೆರಚಿಕೊಂಡು, ಸೆರಗಿನಿಂದ ಮುಖ ಒರೆಸಿಕೊಂಡು ಒಳಗೆ ಹೋದಳು.

`ಪಾಪ ಆ ಹುಡುಗಿ ಅದೆಷ್ಟು ಕಷ್ಟಪಡುತ್ತಾಳೆ,’ ಎನಿಸಿತು. ಅವನಿಗೆ ಅರಿವಿಲ್ಲದೆಯೇ ಅವನ ಅನುಕಂಪ ಪ್ರೀತಿಯಲ್ಲಿ ಬೆಸೆದುಕೊಂಡಿತ್ತು.

ಆರ್ಯನ್‌ ಕೆಳಗಿಳಿದು ಬರುವಾಗ, ಆ ಕಡೆಯಿಂದ ಬರುತ್ತಿದ್ದ ಅಸ್ಮಿತಾ ಅವನಿಗೆ ಡಿಕ್ಕಿ ಹೊಡೆದಳು. ಅವನು ತಲೆ ಉಜ್ಜಿಕೊಳ್ಳುತ್ತಾ ಅವಳತ್ತ ನೋಡವ ಮೊದಲೇ ಅಲ್ಲಿಗೆ ಬಂದ ಜಾನಕಿ, “ನೋಡ್ಕೊಂಡು ಬರೋಕ್ಕಾಗೋಲ್ವೇ….? ಎಲ್ಲಿದೆ ಕಣ್ಣು….? ನೆತ್ತಿ ಮೇಲಿದೆ ಏನು…? ಈಗೇಕೆ ಈ ಕಡೆ ಬಂದೆ….? ಇನ್ನೂ ಯಾರದ್ದು ಊಟ ಆಗಿಲ್ಲ…..!” ಎಂದು ಕೋಪದಿಂದ ಹೇಳಿದಳು.

“ಅದಕ್ಕೆ ಬಡಿಸೋಣ ಅಂತ ಬರ್ತಿದ್ದೆ ಅತ್ತೆ….”

“ಏನೂ ಬೇಡ ಹೋಗು. ನಿಂದೇನ್‌ ಕೆಲಸವೋ ಅದನ್ನು ನೋಡ್ಕೋ ಹೋಗು!” ಎಂದು ಗದರಿದಳು.

ಸುಮ್ಮನೆ ತಲೆ ತಗ್ಗಿಸಿ ನಡೆದವಳನ್ನು ಹಿಂಬಾಲಿಸಿ ಬಂದ ಆರ್ಯನ್‌, “ಸಾರಿ ಅಸ್ಮಿತಾ… ಐ ಆ್ಯಮ್ ವೆರಿ ಸಾರಿ. ನನ್ನಿಂದಲೇ ತಪ್ಪಾಗಿದ್ದು. ನಿಮಗೆ ಜೋರಾಗಿ ಪೆಟ್ಟಾಗಿರಬೇಕು ಅಲ್ವಾ….? ಪ್ಲೀಸ್‌ ಬೇಜಾರ್‌ ಮಾಡ್ಕೋಬೇಡಿ…..!” ಎಂದ.

“ಇರಲಿ ಬಿಡಿ. ಮಾತಿನ ನೋವಿಗಿಂತ ಈ ನೋವು ಏನೇನೂ ದೊಡ್ಡದಲ್ಲ. ನಾನೇ ನೋಡ್ಕೊಂಡು ಬರಬೇಕಿತ್ತು.” ಎಂದು ಕಣ್ಣಿಂದ ಕೆಳಗಿಳಿಯುತ್ತಿದ್ದ ಕಂಬನಿಯನ್ನು ಒರೆಸಿಕೊಳ್ಳುತ್ತಾ ಹೋಗಿಬಿಟ್ಟಳು.

ಆರ್ಯನ್‌ ಮನಸ್ಸಿಗೆ ಬಹಳ ಬೇಸರವಾಗಿತ್ತು. `ಛೇ… ನನ್ನಿಂದಾಗಿ ಪಾಪ ಇವಳು ಬೈಸಿಕೊಳ್ಳಬೇಕಾಯಿತು,’ ಎಂದು ಕೊರಗಿದ.

ಗಂಡಸರ ಊಟವಾದ ಮೇಲೆ ಹೆಂಗಸರು ಊಟಕ್ಕೆ ಕುಳಿತರು. ಎಲ್ಲರ ಊಟ ಮುಗಿಯುವಾಗ ನಿರ್ಮಲಾರಿಗೆ ಅಸ್ಮಿತಾಳ ನೆನಪಾಗಿತ್ತು.

“ಜಾನಕಿ, ಅಸ್ಮಿತಾ ಎಲ್ಲಿ…? ಪಾಪ ಅವಳನ್ನು ಊಟಕ್ಕೆ ಕರೆಯೋದಿಲ್ಲಾ. ನಮ್ಮೊಟ್ಟಿಗೆ ಕುಳಿತು ಮಾಡಿರ್ತಿದ್ಲು,” ಎನ್ನುತ್ತಾ, “ಅಸ್ಮಿತಾ ಬಾಮ್ಮಾ…..” ಎಂದು ಕರೆದರು.

“ಏನಜ್ಜಿ…..” ಎನ್ನುತ್ತಾ ಒಳ ಬಂದಳು ಅಸ್ಮಿತಾ.

“ನೋಡು ಇವರೆಲ್ಲರದ್ದು ಊಟ ಮುಗಿತು. ನಾನು ಊಟ ಮಾಡೋದು ನಿಧಾನ. ಬಾ, ನೀನೂ ನನ್ನ ಜೊತೆ ಕೂತ್ಕೋ…..” ಎಂದು ಕರೆದು, ಅಡುಗೆಯವಳಿಗೆ ಎಲೆ ಹಾಕಿ ಊಟ ಬಡಿಸಲು ಹೇಳಿದರು.

ಇದನ್ನು ನೋಡಿ ಜಾನಕಿಗೆ ಕೋಪ ಬಂದಿತ್ತು. “ಚೈತ್ರಾ ಬಾ, ಹೋಗೋಣ,” ಎಂದು ಅವಳನ್ನು ಕರೆದುಕೊಂಡು ಒಳಗೆ ಹೋದಳು.

“ಬೆಳಗ್ಗೇನೂ ಸರಿಯಾಗಿ ತಿಂಡಿ ತಿಂದಿಲ್ಲ. ಹೊತ್ತಿಗೆ ಸರಿಯಾಗಿ ಬಂದು ಊಟ,ತಿಂಡಿ ಮಾಡೋದಲ್ಲವೇ ಮಗು…. ಇದು ಸಹಾ ನಿನ್ನ ಮನೇನೆ. ಯಾವುದಕ್ಕೂ ಸಂಕೋಚ ಪಡಬೇಡ!” ಎಂದು ಅಜ್ಜಿ ಕಕ್ಕುಲತೆಯಿಂದ ಹೇಳುತ್ತಾ, ಅವಳಿಗೆ ಉಪಚಾರ ಮಾಡಿದ್ದು ಆರ್ಯನ್‌ ಗೆ ಸಂತೋಷವಾಗಿತ್ತು.

“ಅಜ್ಜಿ, ನೀವು ನಿಧಾನವಾಗಿ ಊಟ ಮಾಡಿ. ನಾನು ಪಾಯಸ ಬಡಿಸ್ತೀನಿ. ಅಸ್ಮಿತಾ ಇದೊಂದು ಬಟ್ಟಲು ಪಾಯಸ ತಗೋಳಿ. ನನ್ನಿಂದಾಗಿ ನಿಮ್ಮ ತಲೆಗೆ ಪೆಟ್ಟು ಬೀಳೋ ಹಾಗಾಯ್ತು!” ಎನ್ನುತ್ತಾ ಅವಳು ಕೈ ಅಡ್ಡ ಹಿಡಿದರೂ ಕೇಳದೇ ಪಾಯಸದ ಬಟ್ಟಲನ್ನು ಅವಳ ಎಲೆಯ ಮೇಲೆ ಇಟ್ಟುಬಿಟ್ಟ.

ಸುಣ್ಣದ ಡಬ್ಬಿ ತೆಗೆದುಕೊಳ್ಳಲು ಒಳ ಬಂದ ಜಾನಕಿ, “ನೀನೇನು ಮಾಡ್ತಿದ್ದೀಯಾ ಆರ್ಯನ್‌…..? ಬಾ ಹೋಗೋಣ ಅಲ್ಲಿ ಎಲ್ಲರೂ ನಿನಗಾಗಿ ಕಾಯ್ತಿದ್ದಾರೆ ಬಾ….” ಎಂದಳು.

“ಅಜ್ಜಿಗೆ ಮಜ್ಜಿಗೆ ಬಡಿಸಿ ಬರ್ತೀನಿ. ನೀವು ಹೋಗಿ ದೊಡ್ಡಮ್ಮ….” ಎಂದ.

ಅಸ್ಮಿತಾಳನ್ನು ಕೋಪದಿಂದ ನೋಡುತ್ತಾ, ದಾಪುಗಾಲು ಇಟ್ಟು ಹೊರಗೆ ಹೋದ ಜಾನಕಿ, ಚೈತ್ರಾಳನ್ನು ಹತ್ತಿರ ಕರೆದು, “ಚೈತ್ರಾ… ನೀನು ಹೇಗಾದ್ರೂ ಮಾಡಿ ಅವನು ನಿನ್ನನ್ನೇ ಮದುವೆ ಆಗೋ ಹಾಗೆ ಮಾಡ್ಕೋ. ಇಲ್ಲಾಂದ್ರೆ ಫಾರಿನ್‌ ನಲ್ಲಿ ಓದೋ ನಿನ್ನ ಆಸೆ ಪೂರ್ತಿ ಆಗೋಲ್ಲ. ಅದಾಗ್ಲೆ ನಿನ್ನ ಮಮ್ಮಿ, ಪಪ್ಪಾ ಆ ಟೂರು, ಈ ಟೂರು ಅಂತಾ ಜಾಲಿಯಾಗಿ ಸುತ್ಕೊಂಡು ಅರ್ಧ ಆಸ್ತಿ ಖಾಲಿ ಮಾಡಿದ್ದಾರೆ. ನಿಮ್ಮ ಅಪ್ಪನಿಗೆ ನಾಳೆ ನಿನ್ನ ಮದುವೆ ಮಾಡಬೇಕು ಅನ್ನೋ ಚಿಂತೆನೇ ಇಲ್ಲಾ. ಅದಕ್ಕೆ ಸರಿಯಾಗಿ ನಿಮ್ಮಮ್ಮ ತಾಳ ಹಾಕ್ತಾಳೆ. ನೀನಾದ್ರೂ ಸ್ವಲ್ಪ ಬುದ್ಧಿವಂತಳಾಗು,” ಎಂದು ತುಸು ಕೋಪದಿಂದಲೇ ಹೇಳಿದಳು.

“ಆಯ್ತು ಅತ್ತೆ, ಅವನಿಗೆ ಈಗಿನ ಟ್ರೆಂಡ್‌ ಏನೇನೂ ಗೊತ್ತಿಲ್ಲ. ಯಾವುದ್ಯಾವುದೋ ಮೆಡಿಸಿನ್‌, ಡಿಸೀಸ್‌ ಅಂತಾ ತಲೆ ಕೊರೀತಾನೆ…. ನಾನು ಏನ್‌ ತಾನೇ ಮಾತಾಡ್ಲಿ…..?”

“ನೋಡು ಮದುವೆ ಆದ ಮೇಲೆ ಅವನನ್ನು ನಿನ್ನಂತೆ ಕುಣಿಸುವಿಯಂತೆ. ಈಗ ಮಾತ್ರ ನೀನು ಅವನ ಹಿಂದೇನೇ ಇರು. ಅಕಸ್ಮಾತ್‌ ಅವನಿಗೆ ಆ ಅಸ್ಮಿತಾ ಏನಾದ್ರೂ ಇಷ್ಟ ಆಗ್ಬಿಟ್ರೆ ಏನ್‌ಮಾಡೋದು…..?”

“ಅಯ್ಯೋ ಅತ್ತೇ…. ಆರ್ಯನ್‌ ಇಲ್ಲದಿದ್ರೆ ಬೇಡ. ನನ್ನೊಂದು ಮುಗುಳ್ನಗುಗೆ ಪ್ರಾಣ ಬಿಡುವಂತಹ ಹುಡುಗರು ಇದ್ದಾರೆ,”

“ಇರಬಹುದು. ಆದರೆ ಇಷ್ಟು ಒಳ್ಳೇ ಹುಡುಗ, ಅದರಲ್ಲೂ ಫಾರಿನ್‌ ನಲ್ಲಿ ಡಾಕ್ಟರ್‌ ಆಗಿರೋನು ನಿನಗೆ ಸಿಗೋಲ್ಲ ತಿಳ್ಕೋ…. ಸುಮ್ಮನೆ ಹೇಳಿದಷ್ಟು ಮಾಡು,” ಎಂದು ಅಲ್ಲಿಂದ ಹೊರ ಹೋದಳು ಜಾನಕಿ.

`ಅವನನ್ನು ಒಲಿಸಿಕೊಳ್ಳೋ ಅಂಥದ್ದು ನನಗೇನಾಗಿದೆ….? ಆದ್ರೂ ಅತ್ತೆ ಹೇಳಿದ್ದು ರೈಟು…. ಆರ್ಯನ್‌ ಸ್ಮಾರ್ಟ್‌ ಹ್ಯಾಂಡ್‌ ಸಮ್ ಹುಡುಗ, ಅದರಲ್ಲೂ ಡಾಕ್ಟರ್‌ ಬೇರೆ…. ನೋಡೋಣ,’ ಎಂದುಕೊಂಡು ಕಿಚನ್‌ ಗೆ ಹೋಗಿ ಕೈ ತೊಳೆದುಕೊಂಡಳು.

ಅಲ್ಲೇ ಇದ್ದ ಅಸ್ಮಿತಾಳನ್ನು ನೋಡಿ, “ಏಯ್‌…. ಕುಡಿಯೋಕೆ ಸ್ವಲ್ಪ ನೀರು ಕೊಡು,” ಎಂದಳು.

ಅಲ್ಲಿಯೇ ಇದ್ದ ಆರ್ಯನ್‌, “ಏನ್ರಿ ಚೈತ್ರಾ… ನಿಮ್ಮ  ಕೈಗೆ ಮೆಹಂದಿ ಹಚ್ಚಿಕೊಂಡಿದ್ದೀರಾ ಹೇಗೆ….?” ಎಂದ.

“ಯಾಕೆ ನಿಮಗೆ ಇಷ್ಟನಾ….?” ಬಹಳ ಖುಷಿಯಾಗಿ ಕೇಳಿದಳು.

“ನನಗೆ ಅದೆಲ್ಲಾ ಏನು ಗೊತ್ತಿಲ್ಲ. ನಿಮ್ಮ ಕೈ ಫ್ರೀ ಇರುವಾಗ ನೀವೇ ನೀರು ತಗೊಂಡು ಕುಡಿಯಬಹುದಲ್ವಾ ಅದಕ್ಕೆ ಕೇಳ್ದೆ ಅಷ್ಟೆ…..” ಎಂದು ನಕ್ಕ.

riston-ka-bandhan-story2

ಅವಳ ಎದುರಿನಲ್ಲಿ ತನಗೆ ಅಪಮಾನ ಆಯಿತೆಂದು ನೆನೆಸಿ ಏನೂ ಹೇಳದೇ ಕಾಲು ಅಪ್ಪಳಿಸುತ್ತಾ ಅಲ್ಲಿಂದ ಹೊರಟುಹೋದಳು.

ಊರಲ್ಲಿ ಎಲ್ಲೆಲ್ಲೂ ಜಾತ್ರೆಯ ಸಂಭ್ರಮವೋ ಸಂಭ್ರಮ. ಪ್ರತಿ ಮನೆ ಮನೆಗಳಲ್ಲಿಯೂ ನೆಂಟರಿಷ್ಟರ ಆಗಮನವಾಗಿತ್ತು. ಅಂದು ಮೊದಲನೇ ದಿನ ಆರ್ಯನ್‌ ಅಜ್ಜಿ ತಾತಾನ ಮನೆಯದ್ದೇ ಪೂಜೆ ಇತ್ತು. ಆದ್ದರಿಂದ ನಿರ್ಮಲಾ ಮೊಮ್ಮಗನ ಬಳಿ ಬಂದು, “ಆರ್ಯನ್‌ ಇವತ್ತು ನಾನು ಎಣ್ಣೆ ಹಚ್ತೀನಿ ಬಾ…..” ಎಂದರು.

ಅದು ಕಿರಿಕಿರಿ ಎನಿಸಿದರೂ ಅಜ್ಜಿಗೆ ಬೇಸರ ಆಗಬಾರದೆಂದು ಅವರ ಮುಂದೆ ಕುಳಿತ. ಅವರು ಅವನ ನೆತ್ತಿಗೆ ಎಣ್ಣೆ ಹಾಕಿ ತಟ್ಟತೊಡಗಿದರು.

“ಅಜ್ಜಿ, ಇದೇನಿದು…..? ಹಾಗೆ ತಟ್ಟುತ್ತಿದ್ದೀರಿ. ಈ ಜಿಡ್ಡು ಹೋಗೋದು ಹೇಗೆ? ನನಗೆ ಇದೆಲ್ಲಾ ಅಭ್ಯಾಸ ಇಲ್ಲ….” ಎಂದ.

ಅಜ್ಜಿ ಮುಂದೆ ಅವನು ಕಣ್ಣು ಮುಚ್ಚಿಕೊಂಡು ಕುಳಿತಿದ್ದ ಪರಿ ನೋಡಿ, ಅಸ್ಮಿತಾಳಿಗೆ ನಗು ತಡೆಯಲಾಗಲಿಲ್ಲ.

“ಅಜ್ಜಿ…. ಇವರಿಗೆ ಸೀಗೆ ಪುಡಿ ಬಳಸಿಯೇ ಗೊತ್ತಿಲ್ಲ ಪಾಪ…. ನೀವು ಇಷ್ಟೊಂದು ಎಣ್ಣೆ ಹಾಕ್ತಿದ್ದೀರಿ, ಹೇಗೆ ತೊಳೆದುಕೊಳ್ತಾರೋ ಏನೋ….” ನೀರು ತುಂಬುತ್ತಿದ್ದ ಅಸ್ಮಿತಾ ಹೇಳಿದಳು.

ಅವಳು ತನ್ನನ್ನು ಕೆಣಕುತ್ತಿದ್ದಾಳೆ ಎನಿಸಿ, “ಪರವಾಗಿಲ್ಲ ಹಚ್ಚಿ ಅಜ್ಜಿ….. ಸೀಗೆಪುಡಿ ಹೇಗೆ ಉಪಯೋಗಿಸೋದು ಅಂತ ನನಗೂ ಬರುತ್ತೆ….” ಎಂದು ಅಜ್ಜಿಯಿಂದ ಎಣ್ಣೆ ಒತ್ತಿಸಿಕೊಂಡು ಅವಳತ್ತ ಓರೆಗಣ್ಣಿನಿಂದ ನೋಡುತ್ತಾ ಒಳಗೆ ಹೋದ.

“ಇದೇನೋ ಆರ್ಯನ್‌…. ಈ ಪಾಟಿ ಎಣ್ಣೆ ಒತ್ತಿಸಿಕೊಂಡಿದ್ದೀಯ….ಜಿಡ್ಡು ಹೋಗುತ್ತಾ….?” ಎಂದು ಜಾನಕಿ ದೊಡ್ಡಮ್ಮ ಕೇಳಿದರು.

“ಹೋಗುತ್ತೆ ದೊಡ್ಡಮ್ಮ…. ಸೀಗೆಪುಡಿಯಿಂದ ತೊಳ್ಕೋತೀನಿ. ಮೊದಲು ನನಗೆ ಒಂದು ಸ್ಟ್ರಾಂಗ್‌ ಕಾಫಿ ಕೊಡಿ, ನಾನು ರೂಮಿನಲ್ಲಿ ಇರ್ತ್ತೀನಿ…..” ಎಂದ.

“ಆರ್ಯನ್‌ ನೀನು ರೂಮಲ್ಲಿ ಸ್ನಾನ ಮಾಡಬೇಡ. ಇಲ್ಲಿ ಕೆಳಗಿನ ಬಚ್ಚಲು ಮನೇಲಿ ಮಾಡು. ಹಂಡೆ ತುಂಬಾ ಬಿಸಿ ನೀರು ಹಿತ ಅನಿಸುತ್ತೆ. ಬೇಕಿದ್ರೆ ಸಣ್ಣಪ್ಪ ಉಜ್ಜಿ ಕೊಡ್ತಾನೆ…..” ಎಂದರು ಅಜ್ಜಿ.

ಸರಿ ಎನ್ನುತ್ತಾ ಅಲ್ಲಿದ್ದ ಬಾವಿ ಕಟ್ಟೆ ಮೇಲೆ ಬಂದು ಕುಳಿತ. ಅವನಿಗೆ ಕಾಫಿ ತಂದುಕೊಟ್ಟ ಸಣ್ಣಪ್ಪ, “ಅಣ್ಣಾ…. ಮೈ ಉಜ್ಜಬೇಕು ಅಂದ್ರೆ ಹೇಳಿ….” ಎಂದ.

ಸ್ನಾನ ಮಾಡಲು ಕುಳಿತ ಅವನಿಗೆ ಅಲ್ಲಿದ್ದ 3-4 ಡಬ್ಬಗಳಲ್ಲಿ ಸೀಗೆ ಪುಡಿ ಯಾವುದು, ಎಂದು ತಿಳಿಯದೆ ಅವನ್ನು ಹಾಗೆ ನೋಡುತ್ತಿದ್ದ.

ಅಷ್ಟರಲ್ಲಿ ಅಲ್ಲಿಗೆ ಬಂದ ಅಸ್ಮಿತಾ, “ಇದನ್ನು ತಗೊಂಡು ಉಪಯೋಗಿಸಿ, ಜಿಡ್ಡೆಲ್ಲಾ ಹೊರಟು ಹೋಗುತ್ತೆ, ” ಎಂದಳು ಅವನತ್ತ ನೋಡದೆ ಕಟ್ಟೆಯ ಮೇಲೆ ಇಟ್ಟು ಅಲ್ಲಿಂದ ಹೋದಳು.

ಸ್ನಾನ ಮಾಡಿ ಬಂದವನಿಗೆ ಮೈಯೆಲ್ಲಾ ಹಗುರವಾದಂಥ ಅನುಭವವಾಗಿತ್ತು. ದೊಡ್ಡಪ್ಪ ಕೊಟ್ಟ ಶೇರ್ವಾನಿ ಧರಿಸಿ ಎಲ್ಲರೊಂದಿಗೆ ದೇವಸ್ಥಾನಕ್ಕೆ ಹೊರಟ.

ತಾತಾ, ದೊಡ್ಡಪ್ಪ ತಮ್ಮ ಮುಂದೆ ಸಿಕ್ಕ ಊರ ಹಿರಿಯರಿಗೆಲ್ಲ ಅಭಿಮಾನದಿಂದ ನಮ್ಮ ಮಗ, ಮೊಮ್ಮಗ. ಅಮೆರಿಕಾದಿಂದ ಬಂದಿದ್ದಾನೆ, ಡಾಕ್ಟರ್‌ ಆಗಿದ್ದಾನೆ, ಎಂದು ಪರಿಚಯ ಮಾಡಿಕೊಡುತ್ತಿದ್ದರು. ಇಬ್ಬರು ಅತ್ತೆಯರಿಗೂ ಅವನ ಬಗ್ಗೆ ಅಭಿಮಾನ. ಹೇಗಾದರೂ ತಮ್ಮ ಮಗಳನ್ನು ಒಪ್ಪಿಕೊಳ್ಳಲಿ ಎನ್ನುವಾಸೆ. ಎಲ್ಲರೂ ಅವನನ್ನು ಓಲೈಸುವವರೇ. ಶಾಸ್ತ್ರಿಗಳು ಅವನ ಹೆಸರಲ್ಲಿ ಅಭಿಷೇಕ, ಪೂಜೆ ಮಾಡಿದರು. ಅಸ್ಮಿತಾಳನ್ನು `ಇಲ್ಲಿ ಬಾಮ್ಮಾ…..’ ಎಂದು ಶಾಸ್ತ್ರಿಗಳು ಕರೆದರು.

“ಏನ್‌ ಮಾಲೆನಾ….” ಎಂದು ಅಲ್ಲಿಗೆ ಬಂದವಳನ್ನು ನೋಡಿದ. ದೇವಸ್ಥಾನಕ್ಕೆ ಬಂದಾಗಿನಿಂದ ಅವಳಿಗಾಗಿ ಅರಸುತ್ತಿದ್ದ ಅವನ ಕಂಗಳಿಗೆ ತಂಪೆನಿಸಿತು.

ರೇಷ್ಮೆ ಸೀರೆಯುಟ್ಟು ಜಡೆ ಹೆಣೆದು ಹೂ ಮುಡಿದ್ದಿದ್ದಳು ಅವನ ಕಣ್ಣಿಗೆ ಬಹಳ ಸುಂದರವಾಗಿ ಕಂಡಿದ್ದಳು. ಕಿವಿಯಲ್ಲಿದ್ದ ಪುಟ್ಟ ಜುಮುಕಿ ಅವಳ ತಲೆ ಆಡಿಸುವಾಗೆಲ್ಲ ಅಲ್ಲಾಡುತ್ತಾ ಅವಳ ಕೆನ್ನೆಗೆ ಮುತ್ತಿಡುತ್ತಿತ್ತು. ಲಂಗ ದಾವಣಿ ತೊಟ್ಟು, ಭಾರಿ ಒಡವೆ ಧರಿಸಿದ್ದ ಅತ್ತೆಯ ಮಕ್ಕಳಿಬ್ಬರು, ಅವರನ್ನೂ ಮೀರಿಸುವಂತೆ ಅಲಂಕರಿಸಿಕೊಂಡಿದ್ದ ದೊಡ್ಡಮ್ಮನ ತಮ್ಮನ ಮಗಳು ಚೈತ್ರಾ ಇವರೆಲ್ಲರಿಗಿಂತ ಅಸ್ಮಿತಾ, ಅವನ ಕಣ್ಣಿಗೆ ಬಹಳ ಮುದ್ದಾಗಿ ಕಂಡಿದ್ದಳು. ಅವಳತ್ತಲೇ ನೋಡುತ್ತಾ ಮೈಮರೆತ ಮೊಮ್ಮಗನನ್ನು ನಿರ್ಮಲಾ ಎಚ್ಚರಿಸಿದರು.

“ಆರ್ಯನ್‌, ದೇವರಲ್ಲಿ ಭಕ್ತಿಯಿಂದ ಬೇಡಿಕೊ. ನೀನು ಇಲ್ಲಿಗೇ ಬಂದು ನಮ್ಮ ಜನರ ಸೇವೆ ಮಾಡಬೇಕು ಎನ್ನುವುದು ನನ್ನಾಸೆ. ನನ್ನ ಮಾತು ನಡೆಸಿಕೊಡ್ತೀಯಾ ಕಂದ!”

“ಖಂಡಿತ ಅಜ್ಜಿ. ನನಗೂ ಆ ಆಸೆ ಇದೆ. ಇನ್ನೊಂದು ವರ್ಷಕ್ಕೆ ನನ್ನ ಕೋರ್ಸ್‌ ಮುಗಿದ ಮೇಲೆ ಖಂಡಿತಾ ಭಾರತಕ್ಕೆ ಮರಳಿ ಬರ್ತೇನೆ….!”

“ನೂರ್ಕಾಲ ಸುಖವಾಗಿ ಬಾಳು ನನ್ನಪ್ಪ. ಈ ಮಾತು ಕೇಳಿ ಜೀವನ ಪಾವನ ಆಯ್ತು ಅನ್ನಿಸ್ತಿದೆ!” ಎನ್ನುತ್ತಾ ಅವನ ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದರು.

ಪೂಜೆ ಮುಗಿಸಿ ಪ್ರಸಾದ ಸ್ವೀಕರಿಸಿ ಎಲ್ಲರೂ ಹೊರಟರು. ಆರ್ಯನ್‌ ತಾನು ಸ್ವಲ್ಪ ಹೊತ್ತು ಇದ್ದು ಬರ್ತೀನಿ ಎಂದಾಗ ಸರಿ ಎಂದಿದ್ದರು. ಪ್ರದಕ್ಷಿಣೆ ಮುಗಿಸಿ ಅಲ್ಲಿದ್ದ ಕಟ್ಟೆಯಲ್ಲಿ ಕುಳಿತು, ಪ್ರಸಾದ ತಿನ್ನುತ್ತಿದ್ದವಳ ಬಳಿಗೆ ಬಂದ ಆರ್ಯನ್‌.

“ನಾನು ಇಲ್ಲಿ ಕೂರಲೇ….?” ಎಂದು ಕೇಳಿದ.

“ಧಾರಾಳವಾಗಿ ಕೂತ್ಕೊಳಿ. ಇದು ದೇವಸ್ಥಾನ, ಇಲ್ಲಿ ಯಾರು ಬೇಕಾದರೂ ಬರಬಹುದು…. ಕೂರಬಹುದು….” ಎಂದಳು.

“ಅಸ್ಮಿತಾ ನಿಮ್ಮನ್ನು ಒಂದು ಮಾತು ಕೇಳಲೇ….?”

“ಪೀಠಿಕೆ ಏಕೆ…. ಅದೇನು ಕೇಳಿ…?”

“ನಾನು ಬಂದಾಗಿನಿಂದ ನೋಡ್ತಿದ್ದೀನಿ. ಇಲ್ಲಿ ನಿಮ್ಮನ್ನು ಯಾರೂ ಇಷ್ಟಪಡುವುದಿಲ್ಲ. ಆದರೂ ನೀವು ಇಲ್ಲೇ ಏಕೆ ಇದ್ದೀರಿ…? ನೀವು ಸಂಪಾದಿಸುತ್ತಿದ್ದೀರಿ ಹಾಗಿದ್ದೂ…..?”

“ಮಿಸ್ಟರ್‌ ಆರ್ಯನ್‌, ನಮ್ಮ ಸಮಾಜ ನೀವಂದುಕೊಂಡಷ್ಟು ಇನ್ನೂ ಬದಲಾಗಿಲ್ಲ. ನಾನು ಈಗ ಯಾರೂ ಇಲ್ಲದ ಅನಾಥೆ, ಸಂಪಾದನೆ ಮಾಡ್ತೀನಿ ನಿಜ. ಆದರೆ ಒಬ್ಬಳೇ ಇರುವಷ್ಟು ಸ್ವತಂತ್ರವಿಲ್ಲ. ಪಿಜಿಗಳು, ಹಾಸ್ಟೆಲ್ ‌ನನಗೆ ಸರಿ ಬರುವುದಿಲ್ಲ. ಅವರೆಲ್ಲರೂ ನನ್ನನ್ನು ಹೇಗೆ ನೋಡಿದರೂ ಪರವಾಗಿಲ್ಲ. ನಾನು ಅಜ್ಜ ಅಜ್ಜಿಗಾಗಿ ಇಲ್ಲಿದ್ದೇನೆ. ಅವರು ನನ್ನ ಹಿತಚಿಂತಕರು. ದೊಡ್ಡಮ್ಮನಿಗೆ ನಾನು ಇಷ್ಟವಿಲ್ಲ ಅಷ್ಟೆ. ಬೇರೇನೂ ತೊಂದರೆ ಇಲ್ಲ….” ಎನ್ನುತ್ತಾ ಅವನ ಮುಂದೆ ಪ್ರಸಾದ ಹಿಡಿದಳು.

ಅಳಿಂದ ಪ್ರಸಾದ ತೆಗೆದುಕೊಂಡು ಬಾಯಲ್ಲಿ ಹಾಕಿಕೊಂಡು, “ಅಸ್ಮಿತಾ, ನಾನು ನಿಮ್ಮನ್ನು ತುಂಬಾ ಇಷ್ಟಪಡ್ತೀನಿ. ಮದುವೆ ಆದರೆ ನಿಮ್ಮನ್ನೇ ಆಗಬೇಕು ಎಂದಿಕೊಂಡಿದ್ದೇನೆ. ನಿಮಗೆ ನನ್ನನ್ನು ಕಂಡರೆ ಇಷ್ಟವೇ…? ನೀವು ಈಗಲೇ ಹೇಳಬೇಕು ಎಂದೇನಿಲ್ಲ. ಯೋಚಿಸಿ ಹೇಳಿ, ನೀವು ಮನಸಾರೆ ನನ್ನನ್ನು ಒಪ್ಪುವುದಾದರೆ ಮಾತ್ರ. ನಿಮಗಿಷ್ಟವಿಲ್ಲದಿದ್ದರೂ ಸ್ಪಷ್ಟವಾಗಿ ಹೇಳಿಬಿಡಿ, ಸ್ನೇಹಿತರಾಗಿರಲು ನನ್ನದೇನೂ ಅಡ್ಡಿಯಿಲ್ಲ.” ಒಂದೇ ಉಸುರಿಗೆ ಹೇಳಿದ.

ಅವನು ಒಮ್ಮೆಲೇ ಹೀಗೇ ಪ್ರಪೋಸ್‌ ಮಾಡಿಬಿಡಬಹುದೆಂಬ ಕಲ್ಪನೆಯೂ ಇಲ್ಲದವಳಿಗೆ ಹೀಗೆ ಸಡನ್ನಾಗಿ ಕೇಳಿದರೆ ಏನೆಂದು ಹೇಳಬೇಕು ಎಂದು ತೋಚದೆ, “ಆರ್ಯನ್‌, ನಿಮ್ಮಂತಹ ವಿದ್ಯಾವಂತ, ಗುಣವಂತ ಅದೂ ಅಮೆರಿಕಾದಲ್ಲಿ ಡಾಕ್ಟರ್‌ ಆಗಿರುವ ಹುಡುಗ ಸಿಗುವುದಾದರೆ ಯಾರು ತಾನೇ ಬೇಡವೆನ್ನುತ್ತಾರೆ ಹೇಳಿ….? ಅದರೆ ನಮ್ಮಿಬ್ಬರ ನಡುವೆ ಭೂಮ್ಯಾಕಾಶದ ಅಂತರವಿದೆ. ಪ್ರತಿಯೊಬ್ಬ ತಾಯಿ ತಂದೆಗೂ ತಮ್ಮ ಮಗನ ಮದುವೆಯ ಬಗ್ಗೆ ಅನೇಕ ಕನಸು, ಕಲ್ಪನೆಗಳಿರುತ್ತವೆ.

“ನಿಮ್ಮ ಉದ್ದಕ್ಕೂ ಸುರಿದು ಕನ್ಯಾದಾನ ಮಾಡಲು ಕನ್ಯಾಪಿತೃಗಳು ಸಾಲಾಗಿ ನಿಂತಿರುವಾಗ ನನ್ನಂತಹ ಅನಾಥ ಹುಡುಗಿಯನ್ನು ಮದುವೆ ಆಗುತ್ತೇನೆ, ಇಷ್ಟಪಟ್ಟಿದ್ದೇನೆ ಎನ್ನುವುದು ಕ್ಷಣಿಕ ಅಷ್ಟೆ. ವಾಸ್ತವದಲ್ಲಿ ಇದು ಆಕರ್ಷಣೆಯೂ ಆಗಿರಬಹುದು. ನಂತರ ನಿಮಗೆ ನನ್ನ ಬಗ್ಗೆ ಬೇಸರ, ತಿರಸ್ಕಾರ ಮೂಡಲು ಸಾಧ್ಯ.

“ಅದಲ್ಲದೆ, ನಿಮಗೆ ನನ್ನ ಬಗ್ಗೆ ಏನೇನು ಗೊತ್ತಿಲ್ಲ. ಆದ್ದರಿಂದ ಈ ವಿಷಯ ಇಲ್ಲಿಗೇ ಬಿಟ್ಟುಬಿಡಿ. ಮನೆಯಲ್ಲಿ ತಿಳಿದರೆ, ದೊಡ್ಡ ಅನಾಹುತವೇ ಆಗುತ್ತೆ. ನಾನು ಮನೆಬಿಟ್ಟು ಹೋಗಬೇಕಾಗಲೂಬಹುದು. ನಮ್ಮಿಬ್ಬರ ನಡುವೆ ಫ್ರೆಂಡ್‌ ಶಿಪ್‌ ಮಾತ್ರ ಸಾಕು….”

“ಅಸ್ಮಿತಾ, ಒಂದು ನಿಮಿಷ. ನೀವು ಹೇಳಿದ್ದೆಲ್ಲ ಸರಿ, ಆದರೆ ದಯವಿಟ್ಟು ನನ್ನ ಪ್ರೇಮವನ್ನು ಮಾತ್ರ ಆಕರ್ಷಣೆ ಎನ್ನಬೇಡಿ. ನಾನು ಬಹಳ ಸಿಂಪಲ್. ನಾನು ಹ್ಞೂಂ ಎಂದರೆ ಸಾಕು ಎನ್ನುವ ಹುಡುಗಿಯರು ಅಮೆರಿಕಾದಲ್ಲೂ ಇದ್ದಾರೆ. ಅದೇನೋ ನಾನು ಇಲ್ಲಿಗೆ ಬಂದಾಗಿನಿಂದ ಮೊದಲ ನೋಟದಲ್ಲಿಯೇ ನೀವು ನನಗೆ ತುಂಬಾ ಇಷ್ಟವಾಗಿಬಿಟ್ರಿ. ನಿಮ್ಮ ಸೌಮ್ಯ ಸ್ವಭಾವ, ತಾಳ್ಮೆ, ನಿಮ್ಮಲ್ಲಿ ಹುದುಗಿರುವ ಕೊಂಚ ತುಂಟತನ, ಸರಳವಾದ ಸೌಂದರ್ಯ ಮನಸ್ಸಿಗೆ ಇಷ್ಟವಾಗಿದೆ. ಹಾಗಾಗಿ ನನ್ನ ಬಾಳ ಸಂಗಾತಿಯಾಗಲು ನೀವೇ ಸರಿ ಎನಿಸ್ತಿದೆ!” ಎಂದು ಹೇಳಿದವನು ಅವಳತ್ತ ತಿರುಗಿಯೂ ನೋಡದೆ ಹೊರಟೇಬಿಟ್ಟ.

ಇದು ಅಸ್ಮಿತಾಳಿಗೆ ಬಹಳ ಬೇಸರವಾಗಿತ್ತು. ಆರ್ಯನ್‌ ನನ್ನು ಕಂಡಾಗಿನಿಂದ ಅವಳ ಮನದಲ್ಲಿಯೂ ಯಾವುದೋ ನವಿರಾದ ಭಾವನೆ ಮೂಡಿತ್ತಾದರೂ ಅದನ್ನವಳು ಒಳಗೇ ಅದುಮಿಟ್ಟಿದ್ದಳು. ಆದರೆ ಅವನು ಹೀಗೆ ತನ್ನ ಮುಂದೆ ಈ ಪ್ರಸ್ತಾಪ ಇಡುವನೆಂಬ ಅರಿವು ಅವಳಿಗಿರಲಿಲ್ಲ. ಇದು ಒಂದು ರೀತಿಯಲ್ಲಿ ಶಾಕ್‌ ನೀಡಿದಂತಾಗಿತ್ತು. ಮನಸ್ಸು ಡೋಲಾಯಮಾನವಾಗಿತ್ತು.

`ಆರ್ಯನ್‌ ತಾಯಿ ತಂದೆ ಒಪ್ಪಬೇಕಲ್ಲ. ಜಾನಕಿ ದೊಡ್ಡಮ್ಮ ಸಿಡಿದೇಳುವುದಂತೂ ನಿಜ. ಏನು ಮಾಡಲಿ? ಆರ್ಯನ್‌ ನನ್ನನ್ನು ನಿಜವಾಗಿ ಪ್ರೀತಿಸುತ್ತಾರೆ ಅನಿಸುತ್ತೆ. ಮೊದಲ ನೋಟದಲ್ಲಿಯೇ ಪ್ರೀತಿ ಹುಟ್ಟಬಹುದೇ….? ಅವರ ಬಗ್ಗೆ ನನ್ನಲ್ಲೂ ಪ್ರೀತಿ ಮೂಡಿದೆಯೇ….? ಇರಬಹುದು,’ ಎನಿಸಿತ್ತು. ಮನೆಯಲ್ಲಿ ಕೆಲಸ ಇರುವುದು ನೆನಪಾಗಿ ಅಲ್ಲಿಂದ ಎದ್ದು ಮನೆ ಕಡೆ ನಡೆದಳು.

ಹುಡುಗಿಯರೊಂದಿಗೆ ಸೇರಿ ಹರಟುತ್ತಾ ತಿಂಡಿ ತಿನ್ನುತ್ತಾ ಕುಳಿತಿದ್ದವನನ್ನು ನೋಡಿ ಅವಳ ಮನಸ್ಸು ಮುದುಡಿತ್ತು. ಸಪ್ಪೆ ಮುಖದಲ್ಲಿ ಒಳಗೆ ಹೋದವಳನ್ನು ನೋಡಿ ಮನದಲ್ಲಿಯೇ ನಕ್ಕಿದ್ದ. ಇಷ್ಟವಿದ್ದರೂ ಹೇಳಲಾಗದ ಪರಿಸ್ಥಿತಿಯಲ್ಲಿದ್ದ ಅವಳ ಮನಸ್ಸನ್ನು ಅವನು ಅರಿಯದವನಾಗಿರಲಿಲ್ಲ.

`ನಾನಾಗಿಯೇ ಪ್ರಪೋಸ್‌ ಮಾಡಿದರೆ ಒಪ್ಪಿಕೊಳ್ಳಬಹುದೆಂಬ ಅವನ ವಿಶ್ವಾಸವನ್ನು ಸುಳ್ಳು ಮಾಡಿದಳಲ್ಲ ಎಂಬ ಕೋಪ ಅವನಿಗೆ ಬಂದಿತ್ತು. ಏನಾದರಾಗಲಿ ಅವಳಾಗಿಯೇ ತನ್ನ ಒಪ್ಪಿಗೆ ನನಗೇ ಹೇಳಲಿ,’ ಎಂದುಕೊಂಡನು ತನ್ನ ಮನಸ್ಸಿನ ಆಸೆಯನ್ನು ಅಜ್ಜಿ ತಾತನಿಗೆ ತಿಳಿಸಿದ್ದ.

ನಿರ್ಮಲಾರಿಗಂತೂ ಬಹಳ ಖುಷಿಯಾಗಿತ್ತು. ತಮ್ಮ ಆಯ್ಕೆಯೇ ಮೊಮ್ಮಗನ ಆಯ್ಕೆಯಾಯಿತೆಂದು ಸಂತೋಷವಾಗಿತ್ತು. ಅವರ ಮನೆತನದ ಗುರುಗಳು, ಪುರೋಹಿತರೂ ಆಗಿದ್ದ ಶ್ರೀಕಂಠ ಶಾಸ್ತ್ರಿಗಳು ಜಾತಕ ಬಹಳ ಪ್ರಶಸ್ತವಾಗಿದೆ ಎಂದಾಗಿನಿಂದ ಅವರ ಮನದಲ್ಲಿ ಇದೇ ವಿಚಾರ ಮಂಥನವಿತ್ತು. ಗಂಡನೂ ತಮ್ಮ ಮಾತಿಗೆ ಒಪ್ಪಿದ್ದು ಮತ್ತಷ್ಟು ಬಲ ಬಂದಂತಾಗಿತ್ತು.

ಜಾನಕಿ ಹಾಗೂ ರಾಜೇಶನ ಬಗ್ಗೆ ಅನುಮಾನವಿದ್ದರೂ ನಿತೀಶ್‌ಹಾಗೂ ಮಾಯಾ ಒಪ್ಪಿಗೆ ಕೊಟ್ಟದ್ದು ಅವರ ಆಸೆಗೆ ಇಂಬು ಕೊಟ್ಟಂತಾಗಿತ್ತು.

“…. ಬಹಳ ಒಳ್ಳೆ ಹುಡುಗಿ ಕಂದಾ, ನಿಮ್ಮಿಬ್ಬರ ಜೋಡಿ ಹೇಳಿ ಮಾಡಿಸಿದಂತಿದೆ.” ಎಂದರು ತಾತಾ.

“ನಮ್ಮಿಬ್ಬರಿಗೂ ಸಂತೋಷವಾಗಿದೆ ಆರ್ಯನ್‌. ಹುಡುಗಿ ತುಂಬಾ ಜಾಣೆ, ಆದರೆ ತುಂಬಾ ಸ್ವಾಭಿಮಾನಿ. ಎಲ್ಲಾ ಅವರ ಅಮ್ಮನಂತೆಯೇ. ಜಾನಕಿಯ ತಿರಸ್ಕಾರದ ಮಾತುಗಳಿಗೆ ಬೇರೆ ಯಾರಾದರೂ ಆಗಿದ್ದಿದ್ರೆ, `ನಾನು ಸಂಪಾದಿಸ್ತೀನಿ, ನಿಮ್ಮ ಹಂಗು ನನಗೇಕೆ ಬೇಡ….’ ಎಂದು ಜಾನಕಿ ಮುಖದ ಮೇಲೆ ಹೇಳಿ ಹೋಗಿರುತ್ತಿದ್ದಳು.

“ಆದರೆ ಅವಳು ಹಾಗೇನೂ ಮಾಡದೇ ಇಲ್ಲಿನ ಎಲ್ಲಾ ಕೆಲಸವನ್ನೂ ಮಾಡಿಕೊಂಡು ತನ್ನಿಂದ ಬೇರೆಯವರಿಗೆ ತೊಂದರೆ ಆಗದಂತೆ ಇದ್ದಾಳೆ. ನೀನೇ ನೋಡಿದ್ದೀಯಲ್ಲ. ನಾನು ನಿನ್ನನ್ನೂ ಬಲವಂತಾಗಿ ಕರೆಸಿದ್ದು ಇದೇ ಕಾರಣಕ್ಕೆ!” ಎಂದರು ಅಜ್ಜಿ.

“ಅಜ್ಜಿ, ನೀವು ತುಂಬಾ ಜಾಣರಿದ್ದೀರಿ. ನಾನು ಅವಳನ್ನು ಒಪ್ಪದೇ ಹೋಗಿದ್ದರೆ…?”

“ಕಂದಾ, ನೀನು ಯಾರನ್ನೇ ಇಷ್ಟಪಟ್ಟಿದ್ದರೂ ನಾನು ಕೂಡ ಸಂತೋಷದಿಂದ ಒಪ್ಪಿಕೊಂಡಿರುತ್ತಿದ್ದೆ. ನಿನ್ನ ಇಷ್ಟವೇ ನಮ್ಮಿಷ್ಟ. ಆರ್ಯನ್‌ ಖಂಡಿತಾ ಒಪ್ಪಿಕೊಳ್ಳುತ್ತಾನೆ ಎಂದು ನಿತೀಶ್‌ ನನಗೆ ಹೇಳಿದ್ದ,” ಎಂದರು.

“ಓ ನೀವು ಮೊದಲೇ ಎಲ್ಲಾ ಪ್ಲಾನ್‌ ಮಾಡಿಕೊಂಡಿದ್ದೀರಿ ಅನ್ನಿ. ಡ್ಯಾಡ್‌ ಮಾಮ್ ಸಹ ಏನೂ ಹೇಳಿರಲಿಲ್ಲ. ಹೋಗ್ಲಿ ಅಸ್ಮಿತಾಗಾದ್ರೂ ಗೊತ್ತಿದೆಯಾ…?”

“ಏಯ್‌ ಇಲ್ವೋ… ನಮ್ಮನ್ನು ಬಿಟ್ಟು ಇನ್ಯಾರಿಗೂ ಗೊತ್ತಿಲ್ಲ. ನೋಡು ಅವಳನ್ನು ಒಲಿಸಿಕೊಳ್ಳುವ ಕೆಲಸ ನಿನಗೇ ಬಿಟ್ಟಿದ್ದೀವಿ!”

“ಈಗ ಅತ್ತೆಯರ ದಂಡು, ದೊಡ್ಡಮ್ಮನ ತಮ್ಮನ ಪರಿವಾರ ಬಂದು ಇಳಿದಿದೆಯಲ್ಲ. ಎಲ್ಲಾ ನನಗೆ ಎಗೇನೆಸ್ಟ್ ಆಗಿ ನಿಂತರೆ ಏನು ಮಾಡ್ಲಿ….?”

“ಏನೂ ಮಾಡ್ಬೇಡ ಧೈರ್ಯವಾಗಿ ನಿನ್ನ ಒಪ್ಪಿಗೆ ಎಲ್ಲರ ಮುಂದೆ ಹೇಳಿಬಿಡು!”

“ಹಾಗಂತೀರಾ….?”

“ಇಲ್ಲಾ ಕಾಯ್ತಾ ಇರು…. ಕೊನೆಗೆ ಅವರಲ್ಲಿಯೇ ಯಾರನ್ನಾದ್ರೂ ಗಂಟು ಹಾಕಿಕೊಳ್ಳಬೇಕಾದೀತು…..!”

“ಸರಿ ಅಜ್ಜಿ, ಅವಳಾಗಿಯೇ ನಿಮ್ಮ ಹತ್ರ ಬಂದು ತನ್ನ ಒಪ್ಪಿಗೆ ತಿಳಿಸೋ ಹಾಗೇ ಮಾಡ್ತೀನಿ…..”

“ಆಯ್ತು ನೋಡೋಣ. ಪ್ರಯತ್ನಿಸು…..” ಎಂದು ಹೇಳಿದರು.

ಅಂದು ದೇವಸ್ಥಾನದ ಎದುರು ಹಾಕಿದ್ದ ದೊಡ್ಡ ವೇದಿಕೆಯಲ್ಲಿ ಜಾತ್ರೆಯ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿದ್ದವು. ಮನೆಯವರೆಲ್ಲರೂ ಅಲ್ಲಿಗೆ ಹೋಗುವವರಿದ್ದರು. ಸಂಜೆಯೇ ತನ್ನೆಲ್ಲಾ ಕೆಲಸ ಮುಗಿಸಿದ ಅಸ್ಮಿತಾ ಅಜ್ಜಿಗೆ ಹಾಗೂ ಜಾನಕಿಗೆ ಹೇಳಿ ಹೋಗಿದ್ದಳು. ಅವಳು ಹೋಗುವುದನ್ನು ನೋಡಿದ ಆರ್ಯನ್‌ ಮನಸ್ಸು ತೂಗಾಡಿತ್ತು. ಇವಳು ಅಲಂಕಾರ ಮಾಡಿಕೊಂಡು ಎಲ್ಲಿಗೆ ಹೋಗ್ತಿದ್ದಾಳೆ ಎಂದುಕೊಂಡು ಬಾಲ್ಕನಿಯಿಂದಲೇ ನೋಡಿದ.

ಅದಾಗಲೇ ಮನೆಯ ಮುಂದೆ ಕೆಲವು ಹುಡುಗಿಯರು ಜಮಾಯಿಸಿದ್ದರು. `ಓ…. ಎಲ್ಲರೂ ಇವಳ ಸ್ಟೂಡೆಂಟ್ಸ್ ಇರಬೇಕು. ಪರವಾಗಿಲ್ಲ ಶಿಷ್ಯ ವೃಂದ ದೊಡ್ಡದೇ ಇದೆ,’ ಎಂದುಕೊಂಡ.

ತನ್ನ ಕೂದಲನ್ನು ಜಡೆ ಹೆಣೆಯದೆ ಹಾಗೇ ಬಿಟ್ಟಿದ್ದಳು. ಉಟ್ಟಿದ್ದ ಸೀರೆ ಅವಳಿಗೆ ಚೆನ್ನಾಗಿ ಒಪ್ಪುತ್ತಿತ್ತು. ನಕ್ಕಾಗ ಅವಳ ಕೆನ್ನೆಯಲ್ಲಿ ಮೂಡುತ್ತಿದ್ದ ಆಳವಾದ ಗುಳಿಗೆ ಬಂದ ದಿನವೇ ಅವನ ಮನಸ್ಸು ಸೋತಿತ್ತು. `ಇಂತಹ ಸುಂದರಿಗೆ ಹುಡುಗರು ಸೋಲದೆ ಇರುತ್ತಾರೆಯೇ? ಇವಳಿಗೇನಾದರೂ ಬಾಯ್‌ ಫ್ರೆಂಡ್‌ ಇದ್ದರೆ……?’ ಇಲ್ಲವೆಂದಿತು ಮನಸ್ಸು. `ಅವಳು ತನ್ನನ್ನು ಒಪ್ಪಿಕೊಳ್ಳದಿದ್ದರೇ….. ಯಾಕೆ ಒಪ್ಪೊಲ್ಲ….? ಒಪ್ಪೇ ಒಪ್ತಾಳೆ. ಇಲ್ಲಾಂದ್ರೆ ನಾನೇ ಇನ್ನೊಂದು ಸಾರಿ ಕೇಳೇ ಬಿಡೋದು ಅಷ್ಟೆ. ಅಜ್ಜಿ ಹತ್ರ ಬೇರೆ ಚಾಲೆಂಜ್‌ ಮಾಡಿದ್ದೀನಿ,’ ಎಂದುಕೊಂಡನು, `ಮನೆಯಲ್ಲಿ ಇರುವುದಕ್ಕಿಂತ ಹೊರಗೆ ಹೋಗುವುದೇ ಸರಿ,’ ಎಂದು ಮನೆಯವರೊಂದಿಗೆ ತಾನೂ ಹೋಗಲು ರೆಡಿಯಾದ.

ಜೀನ್ಸ್ ಮೇಲೆ ನೀಲಿ ಬಣ್ಣದ ಕುರ್ತಾ ಧರಿಸಿ ತಯಾರಾಗಿ ಬಂದವನನ್ನು ನೋಡಿದ ಅತ್ತೆಯಂದಿರಿಗೆ, `ಛೇ…. ಆಗ ನಾವು ಮಾಯಾಳನ್ನು ಚೆನ್ನಾಗಿ ನೋಡಿಕೊಂಡಿದ್ದಿದ್ದರೆ…. ಇಂದು ಹಕ್ಕಿನಿಂದ ಕೇಳಿ ಇವನನ್ನು ಅಳಿಯನಾಗಿಸಿಕೊಳ್ಳಬಹುದಿತ್ತು. ಇವನ ಕಣ್ಣು ಆ ಹುಡುಗಿ ಮೇಲೇ ಇದೆ… ಅವಳನ್ನೇ ಮದುವೆ ಆಗ್ತೀನಿ ಎಂದರೆ ಏನು ಮಾಡೋದು….? ಬಲವಂತದಿಂದ ತಾಳಿ ಕಟ್ಟಿಸೋದಕ್ಕೆ ಆಗೋಲ್ಲ. ಈ ಅಮ್ಮ ಅಪ್ಪ ಅಂತೂ ತುಂಬಾನೇ ಬದಲಾಗಿದ್ದಾರೆ. ಏನಾಗುತ್ತೋ ನೋಡೋಣ…’ ಎಂದು ನಿಟ್ಟುಸಿರುಬಿಟ್ಟು ಸುಮ್ಮನಾಗಿದ್ದರು.

ಮೂವರು ಹುಡಗಿಯರು ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಅಲಂಕರಿಸಿಕೊಂಡು ತಯಾರಾಗಿದ್ದರು. ಅವರನ್ನೆಲ್ಲಾ ನೋಡಿದ ಆರ್ಯನ್, “ವಾವ್ ‌ಬ್ಯೂಟಿಫುಲ್,” ಎಂದು ಉದ್ಗಾರ ಮಾಡಿದ. ಎಲ್ಲರ ಮುಖದಲ್ಲಿ ಸಂತಸ ಉಕ್ಕಿದರೆ ಚೈತ್ರಾ ನಾಚಿಕೊಂಡಿದ್ದಳು.

“ಎಲ್ಲಾ ರೆಡಿ ಇದ್ದೇವೆ ಹೋಗೋಣ್ವಾ….?” ಜಾನಕಿ ಕೇಳಿದಾಗ ಎಲ್ಲರೂ ಹೊರಟರು.

“ಅಜ್ಜಿ ತಾತಾ ಬರೋಲ್ವಾ ದೊಡ್ಡಪ್ಪ…..” ಕೇಳಿದ ಆರ್ಯನ್‌.

“ಅತ್ತೆ ಮಾವ ಆಗಲೇ ಹೋದ್ರು. ಆ ಮಹಾರಾಣಿ ಇವತ್ತು ಹಾಡ್ತಾಳಂತೆ ಅದಕ್ಕೇ ಇವರಿಗೆ ಸಂಭ್ರಮ. ಅವಳು ಸಂಗೀತದಲ್ಲಿ ಪಾರಂಗತಳೇನೋ ಅನ್ನೋ ಹಾಗೆ ಮಾಡ್ತಾರೆ. ನಮ್ಮ ಚೈತ್ರಾ ಕೂಡ ಡ್ಯಾನ್ಸ್ ಕಲಿತಿದ್ದಾಳೆ. ಆದರೆ ಅವಳು ಹಾಗೆಲ್ಲಾ ಯಾರ ಮುಂದೇನೂ ಪ್ರದರ್ಶನ ಮಾಡೋಲ್ಲ…..!” ಎಂದು ಜಾನಕಿ ಹೇಳಿದಳು.

“ನಮ್ಮ ಸಮನ್ವಿತಾ ಸ್ಟಾರ್‌ ಮೇಕರ್‌ ನಲ್ಲಿ ಹಾಡ್ತಾಳೆ. ನೂರಾರು ಜನ ಅವಳ ಫ್ಯಾನ್‌ ಆಗಿದ್ದಾರೆ….” ಅನಿತಾ ಹೇಳಿದಳು.

“ನಮ್ಮ ನಮಿತಾ ಯಾರ ಮುಂದೆನೂ ಹೇಳ್ಕೊಳೋಲ್ಲ. ಎಷ್ಟು ಚೆನ್ನಾಗಿ ವೀಣೆ ನುಡಿಸ್ತಾಳೆ ಗೊತ್ತಾ….?” ಎಂದು ಅದಿತಿ ಕೂಡ ಹೇಳಿದಳು.

`ಎಲ್ಲದಕ್ಕೂ ಪ್ರತಿಭೆ ಬೇಕು,’ ಎಂದುಕೊಂಡ ಆರ್ಯನ್‌, `ಪರವಾಗಿಲ್ಲ ಹುಡುಗಿ ಟ್ಯಾಲೆಂಟೆಡ್‌ ಆಗಿದ್ದಾಳೆ. ಸರಿ ನೋಡೋಣ,’ ಎಂದು ಖುಷಿಯಾಗಿ ಹೊರಟಿದ್ದ.

ದೇವಸ್ಥಾನದ ಬಳಿ ಸುಮಾರು ದೊಡ್ಡದಾಗಿಯೇ ಪೆಂಡಾಲ್ ಹಾಕಿದ್ದರು. ಊರ ಗಣ್ಯರು ಹಾಗೂ ಕೆಲವು ಪ್ರಮುಖರು ವೇದಿಕೆಯನ್ನು ಅಲಂಕರಿಸಿದ್ದರು.

“ನಮ್ಮ ಊರಿನ ಪ್ರತಿಭಾವಂತ ಉಪನ್ಯಾಸಕಿಯಾದ ಕುಮಾರಿ ಅಸ್ಮಿತಾರಿಂದ ಪ್ರಾರ್ಥನಾ ಗೀತೆ,” ಎಂದು ಅನೌನ್ಸ್ ಮೆಂಟ್ ಆಯಿತು.

ಅದನ್ನು ಕೇಳಿದಾಗ ಆರ್ಯನ್‌ ಮನಸ್ಸಿನಿಂದ ಪುಳುಕಿತಗೊಂಡ. ಅವಳು ಶಾರದೆಯ ಕುರಿತು ಹಾಡಿದ ಗೀತೆ ಬಹಳ ಸೊಗಸಾಗಿತ್ತು. ಅವಳು ಹಾಡಿ ಮುಗಿಸಿದ ಕೂಡಲೇ ಕಿವಿಗಡಚಿಕ್ಕುವ ಕರತಾಡನ ಕೇಳಿಬಂದಿತು. ನಂತರ ಅವಳ ವಿದ್ಯಾರ್ಥಿನಿಯರಿಂದ ವೃಂದಗಾನವಿತ್ತು. ತಾತಾ ಮತ್ತು ದೊಡ್ಡಪ್ಪ ಆರ್ಯನ್‌ ನನ್ನು ಕೆಲವು ಯುವಕರಿಗೆ ಪರಿಚಯ ಮಾಡಿಸಿದರು. ಅವರಲ್ಲಿ ಶಾನುಭೋಗರ ಮಗ ಅರವಿಂದ್‌ ಅಸ್ಮಿತಾಳೊಂದಿಗೆ ನಗುನಗುತ್ತ ಮಾತಾಡುತ್ತಿದ್ದುದನ್ನು ನೋಡಿ ಆರ್ಯನ್‌ ಮನಸ್ಸು ಕಸಿವಿಸಿಗೊಂಡಿತ್ತು.

ಕಾರ್ಯಕ್ರಮ ಮುಗಿಸಿ ಎಲ್ಲರೂ ಮನೆಗೆ ಬಂದಿದ್ದರು. ಅಜ್ಜಿ ಅಸ್ಮಿತಾಳಿಗೆ ದೃಷ್ಟಿ ನಿವಾಳಿಸಿ, ಅವಳ ಕೈ ಹಿಡಿದು ಎಲ್ಲರೂ ಕುಳಿತಿದ್ದಲ್ಲಿಗೆ ಅವಳನ್ನು ಕರೆತಂದರು, “ನಾನು ನಿಮಗೆಲ್ಲ ಒಂದು ಸಿಹಿ ಸುದ್ದಿ ತಿಳಿಸಬೇಕು. ಇವಳನ್ನು ನನ್ನ ಮೊಮ್ಮಗನಿಗಾಗಿ ಆರಿಸಿದ್ದೇನೆ,” ಎಂದರು.

ಇದ್ನು ಕೇಳಿ ಎಲ್ಲರಿಗೂ ಅರ್ಥವಾಗಿ ಹೋಗಿತ್ತು. `ಈ ಸೌಭಾಗ್ಯಕ್ಕಾ ನಾವೆಲ್ಲಾ ಕೆಲಸವಿಲ್ಲದೆ ಇಲ್ಲಿಗೆ ಬಂದಿದ್ದು ದಂಡ ಆಯ್ತು,’ ಎಂದುಕೊಂಡಿದ್ದರು.

“ಆರ್ಯನ್‌ ಹುಡುಗಿ ನಿನಗೆ ಇಷ್ಟವಾಗಿದ್ದಾಳಾ…..?” ಅಜ್ಜಿ ಕೇಳಿದರು.

“ನಿಮ್ಮ ಆಯ್ಕೆ ನನಗೆ ಇಷ್ಟ ಆಯ್ತು ಅಜ್ಜಿ. ಇವರಿಗೆ ನಾನು ಇಷ್ಟ ಆಗಿದೀನಾ ಇಲ್ವಾ ಅಂತ ಕೇಳ್ಬಿಡಿ….!” ಎಂದು ತುಂಟ ನಗು ಬೀರಿದ.

“ಏನಮ್ಮಾ ಅಸ್ಮಿತಾ…. ನಮ್ಮ ಹುಡುಗ ನಿನಗಿಷ್ಟ ಆಯ್ತಾ…..” ಎಂದಾಗ, `ಹೌದು’ ಎಂಬಂತೆ ಅವಳು ತಲೆ ಆಡಿಸಿದಳು.

ಲಾಡು ಡಬ್ಬ ಹಿಡಿದು ಬಂದ ಜಾನಕಿ, “ಮನೇಲೇ ಬೆಣ್ಣೆ ಇಟ್ಕೊಂಡು ತುಪ್ಪಕ್ಕಾಗಿ ಊರೆಲ್ಲ ಅಲೆದ ಹಾಗಾಯ್ತು….” ಎನ್ನುತ್ತಾ ಎಲ್ಲರಿಗೂ ಲಾಡು ಹಂಚಿದಳು.

`ಓಹೋ ಪರವಾಗಿಲ್ಲ ದೊಡ್ಡಮ್ಮ ಎಷ್ಟು ಬೇಗ ಬಣ್ಣ ಬದಲಾಯಿಸಿದ್ರು…..’ ಎಂದುಕೊಂಡ ಆರ್ಯನ್‌, “ದೊಡ್ಡಮ್ಮ ನಾನು ನನ್ನ ಕೋರ್ಸ್‌ ಮುಗಿಸಿ ಬಂದು ಇಲ್ಲಿಯೇ ಆಸ್ಪತ್ರೆ ತೆರೆಯುತ್ತೇನೆ. ಅದರ ಜವಾಬ್ದಾರಿ ದೊಡ್ಡಪ್ಪನಿಗೆ ವಹಿಸಬೇಕು ಅಂತಿದ್ದಾರೆ ಡ್ಯಾಡ್‌!” ಎಂದ.

“ಹೌದು ಕಣೋ ರಾಜೇಶ್‌. ಈ ಮನೆಗೆ ನೀನೇ ಹಿರಿಯ ಮಗ ಅಲ್ವೇ, ಅದಕ್ಕೆ ನಿನಗೆ ಆ ಜವಾಬ್ದಾರಿ ವಹಿಸಿದ್ದಾನೆ,” ಎಂದರು ತಾತಾ.

“ಆರ್ಯನ್‌ ನಿಜವಾಗ್ಲೂ ಹೇಳ್ತಿದ್ದೀಯಾ….?”

“ಹೌದು ದೊಡ್ಡಮ್ಮ……”

“ನಿಜಾಗ್ಲೂ ನನಗೆ ತುಂಬಾ ಸಂತೋಷ ಆಯ್ತು ಕಣೋ,” ಎಂದ ಜಾನಕಿ ಅಸ್ಮಿತಾಳತ್ತ ನೋಡಿ ಮುಗುಳ್ನಗೆ ಬೀರುತ್ತಾ, “ಈಗ ನಾನು ನಿನ್ನ ನಿಜವಾದ ಅತ್ತೆ ಗೊತ್ತಾಯ್ತಾ….” ಎಂದಾಗ ಅಸ್ಮಿತಾ ನಾಚಿ ತಲೆ ತಗ್ಗಿಸಿದಳು.

ಪ್ರೀತಿಯಿಂದ ತನ್ನತ್ತ ನೋಡಿದ ಆರ್ಯನ್‌ ನನ್ನು ನೋಡಿ ಅವಳ ಕೆನ್ನೆ ಕೆಂಪಾಗಿತ್ತು. ಸಂಬಂಧವೇ ಬೇಡವೆಂದುಕೊಂಡಿದ್ದ ಆರ್ಯನ್‌ ನನ್ನು ಅನುರಾಗದ ಸಂಬಂಧ ಒಲವಿನಿಂದ ಬೆಸೆದಿತ್ತು. ಮತ್ತೆ ಆ ದೊಡ್ಡ ಮನೆಯಲ್ಲಿ ನಗುವಿನ ಸಂಭ್ರಮದ ಅಲೆ ಹರಡಿತ್ತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ