ನೀಳ್ಗಥೆ – ಶೇಖರಗೌಡ ವೀ.ಸ.
ಅನ್ಯ ಧರ್ಮೀಯದವರಾದರೂ ಜಾನಿ ಶಮೀಮಾ ಒಲವಿನಿಂದ ಒಂದಾಗಿದ್ದರು. ಇವರ ಪವಿತ್ರ ಪ್ರೇಮಕ್ಕೆ ಒದಗಿದ ಅಗ್ನಿಪರೀಕ್ಷೆ ಏನು…… ಅದು ಇವರು ಬಯಸಿದ ಫಲವನ್ನು ನೀಡಿತೇ……?
ಇರುಳಲ್ಲಿ ಬೆತ್ತಲಾಗಿದ್ದ ಮೂಡಣ ಬೆಳಗಿನ ಜಾವ ಮತ್ತೆ ಸರಸರನೇ ಬಣ್ಣದ ಸೀರೆಯುಟ್ಟು ನಸುನಾಚತೊಡಗಿದಂತೆ ಕೆಂಪೇರತೊಡಗಿತ್ತು. ಪೂರ್ವದಲ್ಲಿ ಆಗಷ್ಟೇ ಕೆಂಪೊಡೆಯತೊಡಗಿತ್ತು. ಜಗ ಬೆಳಗಲು ಹೊಂಬಣ್ಣದ ಉದಯ ರವಿ ಕ್ಷಿತಿಜದ ಗರ್ಭದಿಂದ ಹೊರಬರಲು ತವಕಿಸತೊಡಗಿದ್ದ. ಪಕ್ಷಿಗಳ ಕಲರವ ಆಗಷ್ಟೇ ಅನುರಣಿಸತೊಡಗಿತ್ತು. ತುತ್ತಿನ ಚೀಲ ತುಂಬಿಸಲು ಹಕ್ಕಿಗಳು ಚಿಲಿಪಿಲಿಗುಡುತ್ತಾ ಗಮ್ಯದ ಕಡೆಗೆ ಸಾಗಿದ್ದವು.
ಜಾನಿ ಬೆಳಗಿನ ವಾಯುವಿಹಾರದ ಉಲ್ಲಾಸಭರಿತ ಚುರುಕಾದ ನಡಿಗೆಯೊಂದಿಗೆ ಹೆಜ್ಜೆ ಹಾಕುತ್ತಿದ್ದರೂ ಅವನ ಮನಸ್ಸು ಏನನ್ನೋ ಮೆಲುಕ ಹಾಕತೊಡಗಿತ್ತು. ಒಲವಿನ ಗೆಳತಿಯ ಸುಮಧುರ ಮಾತುಗಳು ಕಿವಿಯಲ್ಲಿ ಗುಂಯ್ ಗುಡತೊಡಗಿದ್ದವು. ಅರಿವಿಲ್ಲದಂತೆ ವಾಯುವಿಹಾರದ ಪಥವನ್ನು ಬದಲಿಸಿ, ಮುಖ್ಯ ರಸ್ತೆಯಿಂದ ಕಾಲು ದಾರಿಯಂತಿದ್ದ ಚಿಕ್ಕ ರಸ್ತೆಯಲ್ಲಿ ಹೆಜ್ಜೆ ಹಾಕತೊಡಗಿದ. ನಿರ್ಜನ ಪ್ರದೇಶವೆಂದರೂ ಸರಿ. ಜಾನಿಯ ಮನಸ್ಸು ಕನವರಿಸಲು ಮುಂದಾಯಿತು. `ಈ ಮನಸ್ಸು ಅದೆಷ್ಟು ಮೊಂಡು ಎಂದರೆ, ಸದಾ ನಿನ್ನ ನೆನಪಿನ ಅಲೆಯೊಳಗೆ ಸುಳಿಯಾಗಿ ಸುತ್ತತ್ತಲೇ ಇರುತ್ತದೆ. ನಿನ್ನ ಹುಣ್ಣಿಮೆಯಂಥ ನಗು ನನ್ನೆದೆಯೊಳಗೆ ಬಣ್ಣ ಬಣ್ಣದ ಕನಸುಗಳನ್ನು ಬಿತ್ತುತ್ತಿದೆ,’ ಎಂದೆನ್ನುತ್ತಿದ್ದ ಜಾನಿ ಒಲವಿನ ಗೆಳೆತಿಯ ಜೊತೆಗೆ ಹೆಜ್ಜೆ ಹಾಕುತ್ತಿದ್ದ.
`ಉದಯ ರವಿಯ ಹೊಂಬಣ್ಣದ ಕಿರಣಗಳು ಮುತ್ತಿಟ್ಟಾಗ ತಾನೇ ಹೂ ಅರಳುವುದು…. ನಾನೂ ನಿನ್ನ ಬೆಚ್ಚನೆಯ ಪ್ರೀತಿಯಲ್ಲಿ ಅರಳಿ ಘಮಘಮಿಸುವೆ,’ ಎಂದು ಪಿಸುಗುಡುವ ಪ್ರೀತಿಯ ಗೆಳತಿಯ ಮಾತುಗಳು ಅವನೆದೆಯಲ್ಲಿ ಕಚಗುಳಿ ಇಡತೊಡಗಿದ್ದವು. ಅದಕ್ಕೆ ಅವನು, `ನೀನು ನನ್ನ ಬದುಕಿನ ಸುಂದರ ಕವಿತೆ,’ ಎನ್ನುತ್ತಿದ್ದ ಮಾತುಗಳು ಅವನ ಹೃನ್ಮನಗಳಲ್ಲಿ ಸಂತಸದ ತಂಗಾಳಿ ತೀಡಿದವು.
`ಈ ನನ್ನ ಕಂಗಳು ಹಗಲಿರುಳು ನಿನಗಾಗಿ ಅರಸುತಿವೆ. ಕಣ್ಣ ದೀಪಗಳು ಬೆಳುತ್ತಿರುವುದು ನಿನಗಾಗಿ,’ ಎಂದು ಅವಳು ಉಸುರಿದರೆ, `ಚಂದ್ರನೊಂದಿಗೆ ಮಾತಾಡಿ ತನು ಕಾಂತಿ ತುಂಬಿದವಳು ನೀನು. ಇಳೆಯ ಬೇಡಿಕೊಂಡು ಹಸಿರುಟ್ಟು ಬಂದವಳು ನೀನು,’ ಎಂದು ಆಗಾಗ ಅವಳ ಬಿಸಿ ಅಪ್ಪುಗೆಯಲ್ಲಿ ಅವನು ಪಿಸುಗುಡುತ್ತಿದ್ದ.
`ಬೀಸೋ ಗಾಳಿ ಸುದ್ದಿ ತಂದೈತಿ ನನ್ನೊಳಗಿನ ಪ್ರೀತಿಗೆ. ಉಸಿರು ನೀಡಿ ಜೀವ ಕೊಡುವವನು ನೀನು,’ ಎನ್ನುವ ಅವಳ ಮೆಲುನುಡಿಗೆ ಜಾನಿಯ ಎದೆ ಅರಳುತ್ತಿತ್ತು.
`ನಿನ್ನೊಲುಮೆಯ ನಗುವೊಂದೇ ಸಾಕೆನೆಗೆ…. ಕಲ್ಲುಮುಳ್ಳುಗಳೂ ಮಲ್ಲಿಗೆಯಂತಾಗುವವು,’ ಎಂದು ಪಿಸುಗುಡುತ್ತಿದ್ದ ಅವನು ಆಗೊಮ್ಮೆ, ಈಗೊಮ್ಮೆ ಅವಳ ನಡುಬಳಸಿ. ಪ್ರೀತಿಯ ಮಾತುಗಳ ಗುಂಗಿನಲ್ಲಿ ಜಾನಿ ಮುಖ್ಯ ರಸ್ತೆಯಿಂದ ಆಗಲೇ ತುಸು ದೂರವೇ ಬಂದಿದ್ದ. ಆಗಲೇ ದಿನಕರ ಆ ದಿನದ ಕರ್ತವ್ಯಕ್ಕೆ ಹಾಜರಾಗಿ ತನ್ನ ಸ್ಥಾನವನ್ನು ಅಲಂಕರಿಸ ತೊಡಗಿದ್ದ. ಬೆಳಕು ಎಲ್ಲೆಡೆ ಪಸರಿಸತೊಡಗಿತ್ತು. ಅಷ್ಟರಲ್ಲಿ ಸರಪರ ಎನ್ನುವ ಶಬ್ದ. ಇದ್ದಕ್ಕಿದ್ದಂತೆ ಆಗ ಯಾರೋ ಆರು ಜನ ಯುವಕರು ಜಾನಿಯನ್ನು ಸುತ್ತುವರಿದಿದ್ದರು. ಎಲ್ಲರೂ ಇಪ್ಪತ್ತೈದರ ಆಸುಪಾಸಿನ ಬಿಸಿ ರಕ್ತದ ತರುಣರೇ. ಎಲ್ಲರ ಕೈಯಲ್ಲಿ ಚಾಕು, ಚೂರಿ ಠಳಾಯಿಸತೊಡಗಿದ್ದವು. ಜಾನಿ ಅಧೀರನಾಗಿ, ತುಂಬಾ ಹೆದರಿಕೊಂಡುಬಿಟ್ಟ. ಅವನ ಜಂಘಾಬಲವೇ ಉಡುಗಿ ಹೋಯಿತು. ಓಡಿಹೋಗಿ ತಪ್ಪಿಸಿಕೊಳ್ಳದಂತೆ ಶಸ್ತ್ರಧಾರಿಗಳಿಂದ ಸುತ್ತುವರಿಯಲ್ಪಟ್ಟಿದ್ದ. ಅವನೆದೊಳಗೆ ಡವಡವ, ಪುಕಪುಕ.
“ಏಯ್ ಹುಡುಗಾ….! ಅಲ್ಲೇ ನಿಲ್ಲು. ಮುಂದಕ್ಕೆ ಹೆಜ್ಜೆ ಇಟ್ಟರೆ ಖಲಾಸ್ ಆಗ್ತೀ…..” ಒಬ್ಬ ಜೋರಾದ ದನಿಯಲ್ಲಿ ಗದರಿಸಿದ. ಜಾನಿ ಧೈರ್ಯವನ್ನು ಆಹ್ವಾನಿಸಿಕೊಂಡು ಸುತ್ತಲಿದ್ದವರ ಮುಖ ದಿಟ್ಟಿಸತೊಡಗಿದ. ಎಲ್ಲರೂ ಈಗಿನ ಲೇಟೆಸ್ಟ್ ಟ್ರೆಂಡಿನಂತೆ ದಾಡಿ ಬೆಳೆಸಿಕೊಂಡಿದ್ದರು.
`ಇವರು ಯಾವ ಜಾತಿಯವರು, ಯಾವ ಧರ್ಮದವರು ಎಂದು ಜಡ್ಜ್ ಮಾಡಲು ಸಾಧ್ಯವೇ ಇಲ್ಲವಲ್ಲ…? `ಖಲಾಶ್ ಗಿಲಾಸ್’ ಅಂತೀದ್ದಾರಲ್ಲ…. ಇವರು ಯಾರಿರಬಹುದು….’ ಎಂದು ಯೋಚಿಸಿದ.
“ಫ್ರೆಂಡ್ಸ್, ಯಾಕ್ರೆಪಾ… ಏನಾತು….? ನನ್ನಿಂದೇನಾದ್ರೂ ಅಪಚಾರವಾಗಿದೆಯಾ….?” ಧೈರ್ಯವಹಿಸಿ ತೊದಲುತ್ತಾ ತೊದಲುತ್ತಾ ಕೇಳಿದ.
“ಮತ್ತೇನಾಗಬೇಕೋ ಪಾಪಿ….? ಮಾಡಬಾರದ್ದೆಲ್ಲ ಮಾಡಿ, ಏನೂ ಆಗಿಲ್ಲ ಎಂಬಂತೆ ನಾಟಕ್ ಮಾಡ್ತಿಯೇನೋ ಖದೀಮಾ….?” ಇನ್ನೊಬ್ಬ ಹೈ ಟೋನ್ ನಲ್ಲಿ ಮಾತಾಡಿದ.
“ನಾನು ಮಾಡಿರುವುದಾದರೂ ಏನು….? ತುಸು ಬಿಡಿಸಿ ಹೇಳಿರಲ್ಲ…..?” ಜಾನಿ ಗೋಗರೆದ.
“ಪಾಪ….! ಮೊಲೆ ಕುಡಿಯುವ ಕೂಸು. ಅದೆಂಗೆ ಅರ್ಥವಾದೀತು….? ಲೇ, ನಮ್ಮೂರಿಗೇ ಬಂದು ನಮ್ ಹುಡುಗೀನ ಬುಟ್ಟಿಗೆ ಹಾಕ್ಕೊಂಡು ಬಿಟ್ಟೀಯಲ್ಲ…. ಅದೆಷ್ಟು ಧೈರ್ಯವೇ ನಿನ್ನೆದೆ ಗುಡಿಗೊಳಗೆ…..?” ಮತ್ತೊಬ್ಬ ಕೈಯಲ್ಲಿದ್ದ ಹರಿತವಾದ ಚಾಕುವನ್ನು ಝಳಪಿಸುತ್ತಾ, ಸಿಂಹ ಗರ್ಜನೆ ಮಾಡುತ್ತಾ ಅಬ್ಬರಿಸಿದ. `ಓಹೋ….! ಹಾಗಾದರೆ ಇವರು ನಿಜವಾದ ದಾಡಿವಾಲಾಗಳೇ…..?’ ಜಾನಿ ಮನದೊಳಗೆ ಲೆಕ್ಕಾಚಾರ ಹಾಕತೊಡಗಿದ.
“ಮನದೊಳಗೆ ಮತ್ತೇನು ಮಸಲತ್ತು ಮಾಡ್ತಿರುವಿ….” ಮತ್ತೊಬ್ಬ ಬೊಬ್ಬಿರಿದ.
“ಹ್ಹಿ…. ಹ್ಹಿ…..! ನಾನು ಯಾರನ್ನೂ ಬುಟ್ಟಿಗೆ ಹಾಕಿಕೊಂಡಿಲ್ಲ. ನಾನು, ಶಮೀಮಾ ಪರಸ್ಪರ ಅರ್ಥ ಮಾಡಿಕೊಂಡು ಮನಸಾರೆ ಪ್ರೀತಿಸ್ತಿದ್ದೇವೆ ಅಷ್ಟೆ. ಇದರಲ್ಲಿ ತಪ್ಪೇನಿದೆ….? ನಮಗೆ ಪ್ರೀತಿಸುವ ಹಕ್ಕಿಲ್ಲವೇ…..?”
“ಅವಳು ನಿನ್ನನ್ನು ಪ್ರೀತಿಸ್ತಾಳೋ ಇಲ್ವೋ ಗೊತ್ತಿಲ್ಲ. ಆದರೆ ನಿನ್ನನ್ನು ಪ್ರೀತಿಸುವಂತೆ ನೀನು ಅವಳ ಮೇಲೆ ಒತ್ತಡ ಹೇರಿರುವಿ, ನಿನಗೆ ಪ್ರೀತಿ ಮಾಡೋದಿಕ್ಕೆ ನಮ್ಮ ಧರ್ಮದ ಹುಡುಗೀನೇ ಬೇಕಾ….?” ಮತ್ತೊಬ್ಬ ಗುಡುಗಿದ.
“ಏನು…. ಏನಂದ್ರಿ….? ಶಮೀಮಾ ನನ್ನನ್ನು ಪ್ರೀತಿಸ್ತಿಲ್ಲ ಅಂತ ನಿಮಗೇನಾದರೂ ಹೇಳಿದ್ಲಾ…..? ನನ್ನದು ಅವಳ ಮೇಲಿನ ಪ್ರೀತಿ ಒತ್ತಡದ ಪ್ರೀತಿ ಎಂದು ಹೇಳಿದ್ಲಾ…..? ಹಾಗೊಮ್ಮೆ ಅವಳು ಆ ರೀತಿ ಹೇಳಿದ್ರೆ, ಈ ನಿಮ್ಮ ಆರು ಜನರಲ್ಲಿ ಯಾರಾದರೂ ಅವಳನ್ನು ಪ್ರೀತಿಸುತ್ತಿದ್ದರೆ, ಒಂದು ವೇಳೆ ಅವಳು ನಿಮ್ಮ ಪ್ರೀತಿಯನ್ನು ಒಪ್ಪಿಕೊಂಡಿರುವುದು ನಿಜವೇ ಆಗಿದ್ದರೆ, ನಾನು ನನ್ನ ಪ್ರೀತಿಯನ್ನು ತ್ಯಾಗ ಮಾಡಲು ಸಿದ್ಧನಿದ್ದೇನೆ. ಪ್ರೀತಿಯೇ ಜೀವನ ಎಂದು ಪ್ರೀತಿಸಿದವರು ನಾವು.
“ಗೆಳತಿ ಶಮೀಮಾ ನನಗೆ ಪರಿಚಯವಾದಾಗಿನಿಂದ ಅವಳೇ ನನ್ನ ಜೀವ ಎಂದುಕೊಂಡಿದೀನಿ. ಅವಳ ಪ್ರೀತಿಯ ಆಸರೆ ಇಲ್ಲದೇ ನಾನು ಬದುಕುವುದಾದರೂ ಹೇಗೆ…? ಬದುಕಿ ಬಾಳಿ ಸಾಧಿಸುವುದಾದರೂ ಏನದೆ? ಹೇಗಿದ್ದರೂ ನಾನು ಅನಾಥ! ಪರದೇಶಿ! ಹಿಂದೆ ಮುಂದೆ ನನ್ನವರೆನ್ನುವವರು ನನಗ್ಯಾರೂ ಇಲ್ಲ. ಯಾರದೋ ಅನೈತಿಕ ಸಂಬಂಧದ ಕುರುಹು ನಾನು. ಕರುಣೆ, ಕಕ್ಕುಲಾತಿ ಇಲ್ಲದೇ ನನ್ನನ್ನು ಒಂದು ಚರ್ಚ್ ನ ಹತ್ತಿರ ಎಸೆದು ಹೋಗಿದ್ದರು.
“ಪಾಪದ ಹಸಿ ಮಾಂಸದ ಮುದ್ದೆಯಂತೆ ಬಿದ್ದುಕೊಂಡಿದ್ದ ನನ್ನನ್ನು ಚರ್ಚಿನ ಪಾದ್ರಿಯೊಬ್ಬರು ಸಾಕಿದ್ದರಿಂದ ನಾನು ಜಾನಿ ಆಗಿ, ಕ್ರಿಶ್ಚಿಯನ್ನಾಗಿ ಬೆಳೆದೆ. ಅದೊಂದು ವೇಳೆ ಯಾವುದಾದರೂ ಮಠಾಧೀಶರು ನನ್ನನ್ನು ಸಾಕಿ ಸಲಹಿದ್ದರೆ ಒಬ್ಬ ಹಿಂದೂ ಆಗಿರುತ್ತಿದ್ದೆನೇನೋ….? ಅದೇ ಮುಸ್ಲಿಮನೊಬ್ಬ ನನ್ನನ್ನು ಬೆಳೆಸಿದ್ದರೆ ನಾನೂ ಒಬ್ಬ ಮುಸಲ್ಮಾನನಾಗಿರುತ್ತಿದ್ದೆನೇನೋ….? ನನ್ನ ಹುಟ್ಟಿನ ಮೂಲ ಧರ್ಮ ನನಗೇ ಗೊತ್ತಿಲ್ಲ. ನನ್ನ ಜನ್ಮಕ್ಕೆ ಕಾರಣರಾದವರ ಧರ್ಮ ಯಾವುದೆಂದು ತಿಳಿಯದು. ಹಾಗಾಗಿ ನಾನು ಧರ್ಮಾತೀತನೇ….
“ನಾನೊಂದು ವೇಳೆ ಮುಸಲ್ಮಾನನಾಗಿದ್ದರೆ ಶಮೀಮಾಳನ್ನು ವರಿಸಲು ನನಗೆ ನಿಮ್ಮಿಂದ ಕ್ಲೀನ್ ಚಿಟ್ ಸಿಗುತ್ತಿತ್ತೇನೋ….? ಏಕೆಂದರೆ ನಾನು ಒಂದು ದೊಡ್ಡ ಬ್ಯಾಂಕ್ ಅಧಿಕಾರಿ. ಉನ್ನತ ಹುದ್ದೆಗೇರುವ ಭವಿಷ್ಯ ನನಗಿದೆ. ಆಗ ನಿಮ್ಮ ದೃಷ್ಟಿಯಲ್ಲಿ ನಾನು ಒಬ್ಬ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗುತ್ತಿದ್ದೆ. ಆ ಸೃಷ್ಟಿಕರ್ತ ನಾನು ಹುಟ್ಟಿದಾರಭ್ಯ ಪ್ರತಿಯೊಂದು ಹಂತದಲ್ಲಿ ನನ್ನನ್ನು ಪರೀಕ್ಷಿಸುತ್ತಲೇ ಇದ್ದಾನೆ. ಎಲ್ಲದರಲ್ಲೂ ತಾರತಮ್ಯ.
“ಹೆಜ್ಜೆ ಹೆಜ್ಜೆಗೂ ಬರೀ ಪರೀಕ್ಷೆಗಳು ನಡೆಯುತ್ತಿವೆ. ಮುಂದಿನ ಕೆಲವೇ ನಿಮಿಷಗಳಲ್ಲಿ ನಿಮ್ಮಿಂದ ನನ್ನ ಈ ಬೌತಿಕ ದೇಹಕ್ಕೆ ಅಂತ್ಯ ಸಿಗಲಿದೆ! ಎಲ್ಲವೂ ನಾನು ಪಡೆದುಕೊಂಡು ಬಂದಿದ್ದು ಅಷ್ಟೇ. ಇರಲಿ, ನನ್ನಂಥವನು ಬದುಕಿದ್ದರೆಷ್ಟು, ಸತ್ತರೆಷ್ಟು…..?
“ನನ್ನ ಸಾವಿನಿಂದ ಜಗತ್ತಿಗೇನು ನಷ್ಟವಿಲ್ಲ, ನನ್ನ ಬ್ಯಾಂಕಿನ ಒಂದಿಷ್ಟು ಗ್ರಾಹಕ ಬಂಧುಗಳಿಗೆ ನನ್ನಿಂದ ಸಹಾಯಾಗುತ್ತಿತ್ತೇನೋ…? ನಿಸ್ವಾರ್ಥ, ಪ್ರಾಮಾಣಿಕ ಸೇವೆ ಅವರಿಗೆ ಲಭ್ಯವಾಗುತ್ತಿತ್ತು ಅಷ್ಟೇ. ನಾನಿಲ್ಲದಿದ್ದರೆ ಇನ್ನೊಬ್ಬ ನನ್ನ ಸ್ಥಾನವನ್ನು ತುಂಬುತ್ತಾನೆ. ನನ್ನಂತೆ ಅವನೂ ತನ್ನ ಪರಿಧಿಯಲ್ಲಿ ಕೆಲಸ ನಿರ್ವಹಿಸುತ್ತಾನೆ.
“ಹಾಗಿದ್ದರೆ ನಿಮಗೇನು ಮಾಡಬೇಕೆನಿಸುತ್ತೋ ಹಾಗೆ ಮಾಡಿರಿ. ಕೈಯಲ್ಲಿ ಇಷ್ಟೆಲ್ಲಾ ಆಯುಧಗಳನ್ನು ಝಳಪಿಸುತ್ತಿರುವ ನಿಮ್ಮ ಉದ್ದೇಶ ನನ್ನನ್ನು ಕೊಲ್ಲುವುದು ತಾನೇ….? ಹಾಗೊಂದು ವೇಳೆ ನಿಮ್ಮಲ್ಲಿ ಯಾರಾದರೂ ಪಿಸ್ತೂಲ್ ತಂದಿದ್ದರೆ ಅದರಿಂದಲೇ ಸುಟ್ಟುಬಿಡಿರಿ. ನನ್ನದೇನೂ ಅಭ್ಯಂತರವಿಲ್ಲ. ತಕ್ಷಣ ನನ್ನ ಪ್ರಾಣಪಕ್ಷಿ ಆಕಾಶದಲ್ಲಿ ಲೀನವಾಗಿಬಿಡುತ್ತದೆ. ಹಾಗೇನಾದರೂ ಚಿತ್ರಹಿಂಸೆ ಮಾಡಿಯೇ ನನ್ನನ್ನು ಕೊಲ್ಲಬೇಕೆಂಬುದು ನಿಮ್ಮ ಅಭಿಲಾಷೆಯಾಗಿದ್ದರೆ ಹಾಗೆಯೇ ಮಾಡಿರಿ. ನಾನೇನು ಬೇಡವೆನ್ನುವುದಿಲ್ಲ.
“ನಿಮ್ಮ ಕೈಯಿಂದಲೇ ನನಗೆ ಮರಣ ಇರುವುದಾದರೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕೂ ಮುಂಚೆ ನನ್ನ ಪ್ರಶ್ನೆಗಳಿಗೆ ಉತ್ತರಿಸಿದರೆ ನಾನು ನಿಶ್ಚಿಂತೆಯಿಂದ ಮರಣವನ್ನಪ್ಪುವೆ…..” ಎಂದು ದೀರ್ಘವಾಗಿ ಉಸಿರೆಳೆದುಕೊಂಡ.
ಆರೂ ಜನ ಹುಡುಗರೂ ಪರಸ್ಪರ ಮುಖ ಮುಖ ನೋಡಿಕೊಂಡರು.
“ನಮ್ಮಲ್ಲಿ ಯಾರಾದರೂ ಅವಳನ್ನು ಪ್ರೀತಿಸ್ತೀವೋ ಬಿಡ್ತೀವೋ ಅದು ನಿನಗೇಕೆ….? ನೀನು ಮಾತ್ರ ಅವಳನ್ನು ಪ್ರೀತಿಸಬಾರದು ಅಷ್ಟೇ….! ಅನ್ಯ ಧರ್ಮೀಯರು ನಮ್ಮ ಧರ್ಮದ ಹುಡುಗಿಯನ್ನು ಪ್ರೀತಿಸುವುದನ್ನು ನಮ್ಮ ಧರ್ಮ ಒಪ್ಪಿಕೊಳ್ಳುವುದೂ ಇಲ್ಲ, ಸಹಿಸುವುದೂ ಇಲ್ಲ. ನೀವೆಲ್ಲ ಈ ದೇಶದ ಧರ್ಮಿಯರೇ ಅಲ್ಲ. ಕೇವಲ ವ್ಯಾಪಾರಕ್ಕೆಂದು ಬಂದವರು ನೀವು.
“ಈ ದೇಶದ ಜನತೆಯ ಮನಸ್ಸುಗಳನ್ನು ಒಡೆದು, ತಾರತಮ್ಯ ಬೆಳೆಸಿ, ಸದೆಬಡಿದು ಸುಮಾರು ಎರಡು ನೂರು ವರ್ಷಗಳವರೆಗೆ ಭಾರತ ದೇಶವನ್ನಾಳಿದವರು. ಜೊತೆಗೆ ಈ ದೇಶದ ಸಂಪತ್ತನ್ನು ಕೊಳ್ಳೆಹೊಡೆದು ತಮ್ಮ ದೇಶಕ್ಕೆ ಹೊತ್ತೊಯ್ದವರು. ಅಂಥವರ ಸಂತತಿ ನೀನು!” ಎಂದು ಒಬ್ಬ ಬುಸುಗುಟ್ಟಿದ.

ಜಾನಿ ಒಂದು ಕ್ಷಣ ಯೋಚನೆಯಲ್ಲಿ ಮುಳುಗಿ ಹೇಳತೊಡಗಿದ, “ಹಾಗಾದರೆ ನೀವು ಈ ದೇಶದ ಮೂಲ ನಿವಾಸಿಗಳೇ….? ಅಲ್ಲವಲ್ಲ….? ಮೊಹಮ್ಮದ್ ಘೋರಿ, ಘಜನಿ ಮೊಹಮ್ಮದ್, ಬಾಬರ್ ಮುಂತಾದ ನಿಮ್ಮ ಧರ್ಮೀಯರು ಈ ದೇಶದ ನಿವಾಸಿಗಳು ಅಲ್ಲವೇ ಅಲ್ಲ.
“ಭಾರತೀಯ ರಾಜರ ಒಳಜಗಳಗಳ ದುರ್ಲಾಭ ಪಡೆದು ಈ ದೇಶವನ್ನು ಆಳಲಿಲ್ಲವೇ…..? ನಾನಾಗಲೀ, ನೀವಾಗಲಿ, ನನ್ನ ಪೂರ್ವಜರಾಗಲೀ ಮೂಲತಃ ಕ್ರಿಶ್ಚಿಯನ್ನರೂ ಅಲ್ಲ, ಮುಸ್ಲಿಮರೂ ಅಲ್ಲ.
“ಈ ದೇಶದ ಮುಂದುವರಿದ ಜಾತಿಯವರ ದಬ್ಬಾಳಿಕೆ, ದೌರ್ಜನ್ಯಕ್ಕೆ ಬೇಸತ್ತು, ಇಲ್ಲವೇ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ನಾವು ಅನ್ಯಧರ್ಮಿಯರಾಗಿದ್ದೇವೆ ಅಷ್ಟೆ. ಯಾರೂ ತಮ್ಮ ಮೂಲ ಧರ್ಮಬಿಟ್ಟು ಬೇರೊಂದು ಧರ್ಮಕ್ಕೆ ಮತಾಂತರಗೊಳ್ಳುವುದು ಅಷ್ಟು ಸುಲಭದ ಮಾತಲ್ಲ.
“ಮತಾಂತರವಾದಾಗ ಮೂಲ ಧರ್ಮದ ಕಿಚ್ಚು ಎದೆಯೊಳಗೆ ಧಗಧಗಿಸುತ್ತಲೇ ಇರುತ್ತದೆ. ನಮ್ಮ ಪೂರ್ವಜರು ಮತಾಂತರಗೊಂಡಾಗ, ಅದೆಷ್ಟು ಮಾನಸಿಕ, ದೈಹಿಕ ವೇದನೆ ಅನುಭವಿಸಿದವರೋ ಏನೋ….?
“ಸ್ವಇಚ್ಛೆಯಿಂದ ಮತಾಂತರಗೊಂಡವರು ತುಂಬಾ ಕಡಿಮೆಯೇ ಇರಬೇಕು. ಒತ್ತಡ, ದೌರ್ಜನ್ಯಕ್ಕೆ ಮಣಿದು ಮತಾಂತರಗೊಂಡವರು ಬಹಳಷ್ಟು ಜನ. ನೋಂದ ಅವರೆದೆಗಳು ಒಳಗೊಳಗೇ ಅದೆಷ್ಟು ದಹಿಸಿದ್ದವೋ…? ಕೆಲವೊಂದು ಕಡೆಗೆ ವರ್ಣ ಸಂಕರಗಳೂ ಆಗಿರಬಹುದು.
“ಭಾರತ ಮೂಲದ ಸುಂದರ ಹೆಣ್ಣುಗಳನ್ನು ಅನಿವಾಸಿಗಳು ಅನುಭವಿಸಿ ಬಿಸಾಡಿದಾಗ ಅಥವಾ ಅವರನ್ನು ತಮ್ಮ ಜೊತೆಗೇ ಇಟ್ಟುಕೊಂಡಾಗ ವರ್ಣ ಸಂಕರಗಳಾಗಿರಬಹುದು. ತಮ್ಮ ಧರ್ಮವೇ ಶ್ರೇಷ್ಠ ಎನ್ನುವವನು ಕನಿಷ್ಠ ಮಾನವ ಅಷ್ಟೇ! ಅವರವರ ಧರ್ಮ ಅವರಿಗೆ ಶ್ರೇಷ್ಠವೇ…!” ಎನನ್ನಿಸಿತೋ ಏನೋ ಜಾನಿ ಆ ಕ್ಷಣ ತನ್ನ ಮಾತನ್ನು ಅಲ್ಲಿಗೆ ನಿಲ್ಲಿಸಿದ.
“ಹೌದಲ್ಲವೇ…..?” ಎಂದ ಅವರೊಲ್ಲಬ್ಬ ತಕ್ಷಣ ತನ್ನ ನಾಲಿಗೆಯನ್ನು ಕಚ್ಚಿಕೊಂಡ. ಎಲ್ಲರೂ ತಮ್ಮ ತಮ್ಮೊಳಗೇ ಮುಖ ಮುಖ ನೋಡಿಕೊಳ್ಳತೊಡಗಿದರು.
“ಹೌದು…. ಶಮೀಮಾ ನಿಮಗೇನಾಗಬೇಕು? ನಿಮ್ಮನ್ನೆಲ್ಲಾ ಯಾರು ಕಳುಹಿಸಿದ್ದಾರೆ….? ಅಥವಾ ಶಮೀಮಾಳೇ ನನ್ನನ್ನು ಫಿನಿಶ್ ಮಾಡಲು ಕಳುಹಿಸಿದ್ದಾಳೇನು….?” ಮತ್ತೆ ಬಡಬಡಿಸಿದ ಜಾನಿ.
“ಶಮೀಮಾ ನಮಗೆ ತಂಗಿಯಾಗಬೇಕು. ನಮ್ಮ ಧರ್ಮದ ಮುಖಂಡರು, ನಮ್ಮ ಹಿರಿಯರು ನಿನ್ನನ್ನು ಮಟ್ಟಹಾಕಲು ನಮ್ಮನ್ನು ಕಳುಹಿಸಿದ್ದಾರೆ. ಶಮೀಮಾಗೆ ಇದು ಗೊತ್ತೇ ಇಲ್ಲ. ಇದೆಲ್ಲಾ ಗಪ್ ಚಿಪ್ಪಾಗಿ ನಡೆಯುವಂಥದು….” ಒಬ್ಬ ಮೆಲ್ಲಗೆ ಉಸುರಿದ.
“ಹೌದಾ….? ಅದು ಸರಿ ನೀವೇನು ಓದಿಕೊಂಡಿರುವಿರಿ….?” ಎಂದು ಕೇಳಿದ ಜಾನಿ.
ಒಬ್ಬ ಬಿಎ ಎಂದ, ಇನ್ನೊಬ್ಬ ಪಿಯು, ಮತ್ತೊಬ್ಬ ಎಂಎ, ಮಗದೊಬ್ಬ ಎಸ್ಸೆಸ್ಸೆಲ್ಸಿ, ಐದನೆಯವ ಬಿಇ, ಆರನೆಯವನೂ ಬಿಕಾಂ ಎಂದರು.
“ನೀವೆಲ್ಲರೂ ಬಹುತೇಕ ವಿದ್ಯಾವಂತರೇ…! ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸುವ ಯೋಚನಾ ಶಕ್ತಿ ನಿಮಗಿದೆ ಎಂದು ನಾನು ಭಾವಿಸುವೆ,” ಎಂದ ಜಾನಿ ಗಂಭೀರವಾಗಿ.
ತುಸು ಹೊತ್ತು ಎಲ್ಲರೂ ಮೌನವಾದರು. ಜಾನಿ ಅವರ ಮುಖಚರ್ಯೆಗಳಲ್ಲಿನ ತಾಕಲಾಟಗಳನ್ನು ಓದತೊಡಗಿದವನ ಮನಸ್ಸು ಹಿಂದಕ್ಕೋಡಿತು.
ಬೆಳಗಾವಿ ಜಿಲ್ಲೆಯ ಕ್ರಿಶ್ಚಿಯನ್ ಅನಾಥಾಶ್ರಮವೊಂದರಲ್ಲಿ ಬೆಳೆದ ಜಾನಿ, ತನ್ನ ಪದವಿ ಮುಗಿಸಿ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಆಫೀಸರ್ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮುಂದೆ ಮೌಖಿಕ ಪರೀಕ್ಷೆಯಲ್ಲೂ ಉತ್ತೀರ್ಣನಾಗಿ ಆಫೀಸರ್ ಹುದ್ದೆಯನ್ನು ಅಲಂಕರಿಸಿ, ತನ್ನ ಯಶೋಗಾಥೆಯನ್ನು ಮುಂದುವರಿಸಿದ್ದ.
ಎರಡು ವರ್ಷಗಳ ಪ್ರೊಬೇಶನರಿ ಸಮಯದಲ್ಲಿ ವಿಜಯಪುರ, ರಾಯಚೂರು, ಮೈಸೂರು, ಧಾರವಾಡ ಸುತ್ತಿ ಬಂದ. ನಂತರ ಪೋಸ್ಟಿಂಗ್ ಆದದ್ದು ಮಂಗಳೂರಿನ ದೊಡ್ಡ ಶಾಖೆಗೆ. ಅದೂ ಸಾಲ ಮಂಜೂರಾತಿಯ ವಿಭಾಗಕ್ಕೆ. ಆಗ ಅವನಿಗೆ ಅಲ್ಲಿನ ಇತರ ಸಹೋದ್ಯೋಗಿಗಳ ಜೊತೆಗೆ ಪರಿಚಯವಾದದ್ದು ಶಮೀಮಾ. ಅವಳೂ ಆಗಷ್ಟೇ ಕ್ಲೆರಿಕ್ ಹುದ್ದೆಯನ್ನು ಅಲಂಕರಿಸಿದ್ದಳು. ಮಂಗಳೂರಿನವಳೇ ಆದ ಅವಳು ಹಣ್ಣುಗಳ ಸಗಟು ವ್ಯಾಪಾರಿಯ ಮಗಳು. ಹಾಲು ಬಣ್ಣದ ಚೆಲುವೆ ಶಮೀಮಾ, ಮೊದಲ ದಿನವೇ ಜಾನಿಗೆ ಬೆಳದಿಂಗಳ ಬಾಲೆಯಂತೆ ಕಂಡಳು. ಅವಳು ಇತರ ಹುಡುಗಿಯರಂತೆ ವಾಚಾಳಿ ಆಗಿರದೇ ಮಿತಭಾಷಿ. ಬುರ್ಕಾ ಗಿರ್ಕಾ ಧರಿಸಿದವಳೇ ಅಲ್ಲ. ಲೆಗ್ಗಿಂಗ್ಸ್, ಸೀರೆ, ಜೀನ್ಸ್ ಗಳಲ್ಲಿ ಮಿಂಚುತ್ತಿದ್ದಳು. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನುವ ಸ್ನಿಗ್ಧ ಚೆಲುವು ಅವಳದು.
ಜಾನಿ ಕ್ರಿಶ್ಚಿಯನ್ ಧರ್ಮದವನಾದರೂ, ಅವನ ನಡೆ ತೀರಾ ವಿಭಿನ್ನ ಎನ್ನಬಹುದು. ಸೌಮ್ಯ ಸ್ವಭಾವದ, ಆರಡಿ ಎತ್ತರದ ಸ್ಛುರದ್ರೂಪಿ ಹುಡುಗ ಜಾನಿ. ತನ್ನ ಸ್ಪಷ್ಟ ಕನ್ನಡ ಮಾತಿನಿಂದ ಎಲ್ಲರ ಮನ ಸೆಳೆಯುತ್ತಿದ್ದ. ಕೆಲವೇ ದಿನಗಳಲ್ಲಿ ಜಾನಿ ಮತ್ತು ಶಮೀಮಾ ಸ್ನೇಹಿತರಾಗಿಬಿಟ್ಟರು. ಅವಳಿಗೆ ಜಾನಿ ಎಂದರೆ ತುಂಬಾ ಅಚ್ಚುಮೆಚ್ಚಿನವನಾದ. ಮೊದಲ ಮಳೆ ಇಳೆಯೊಳಗೆ ಇಳಿಯುವಂತೆ ಜಾನಿ, ಶಮೀಮಾಳ ಎದೆಯೊಳಗೆ ಇಳಿಯತೊಡಗಿದ. ಜಾನಿಗೂ ಶಮೀಮಾ ಮೋಡಿ ಮಾಡತೊಡಗಿದಳು. ನಿಧಾನವಾಗಿ ಅವಳು ಅವನ ಎದೆಯಂಗಳದ ಅರಮನೆಯಲ್ಲಿ ರಾರಾಜಿಸತೊಡಗಿದಳು.
ಅದೊಂದು ದಿನ ಶಮೀಮಾ, “ಜಾನಿ, ಮುಜೆ ತುಮ್ಸೆ ಮೊಹಬತ್ ಹೋಗಯಿ. ನಿನ್ನಲ್ಲಿ ನನಗೆ ಅಪಾರ ಪ್ರೀತಿಯಾಗಿದೆ. ಐ ಲವ್ ಯೂ ಜಾನಿ,” ಎಂದು ಬಿಚ್ಚು ಮನಸ್ಸಿನಿಂದ ನುಡಿದು ಜಾನಿಯ ಎದೆಯಲ್ಲಿ ಪುಳಕ, ಕಲರವ ಮೂಡಿಸಿದ್ದಳು.
“ಶಮೀಮಾ, ನನಗೂ ನಿನ್ನ ಮೇಲೆ ಲವ್ವಾಗಿರುವುದು ನಿಜವೇ. ಆದರೆ ನೀನೋ ಭಾರಿ ಶ್ರೀಮಂತರ ಮಗಳು. ನಾನೊಬ್ಬ ಅನಾಥ!” ಎಂದವನು ತನ್ನ ಬಗ್ಗೆ ಎಲ್ಲಾ ಮಾಹಿತಿ ನೀಡಿದ.
“ಜಾನಿ, ನೀನೇ ಒಂದು ದೊಡ್ಡ ಆಸ್ತಿಯಂತಿರುವಿ. ನನಗಷ್ಟೇ ಸಾಕು. ನೀನು ನನ್ನವನು. ನಾನು ನಿನ್ನವಳಾಗುತ್ತಿರುವಾಗ ನೀನು ಹೇಗೆ ಅನಾಥನಾಗುವಿ….?” ಎಂದಿದ್ದಳು.
“ಮತ್ತೆ ನನ್ನ ಧರ್ಮ ಬೇರೆ, ನಿನ್ನ ಧರ್ಮ ಬೇರೆ ಅಲ್ಲವೇ….? ನಿನ್ನ ಕುಟುಂಬದವರು ಒಪ್ಪಬೇಕಲ್ಲ….? ಧರ್ಮೀಯ ಗಲಭೆಗಳಾದರೂ ಆಗಬಹುದು. ನಿನ್ನ ಧರ್ಮದವರು ನನ್ನ ಮೇಲೆ ಅಟ್ಯಾಕ್ ಮಾಡಿದರೂ ಮಾಡಬಹುದು. ಅಥವಾ….?” ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ ಜಾನಿ.
“ಜಾನಿ, ಹಾಗೆಲ್ಲ ಮಾತನಾಡಬೇಡ. ಹಾಗೇನೂ ಆಗುವುದಿಲ್ಲ. ಪ್ಲೀಸ್ ಬಿ ಕಾಮ್…. ನನಗೆ ನೀನು ಇಷ್ಟವಾಗಿರುವಿ ಡಟ್ಸ್ ಆಲ್. ಮೊದಲು ವ್ಯಕ್ತಿ, ನಂತರ ಧರ್ಮ. ಮಾನವೀಯತೆ ಮೆರೆಯದ ಧರ್ಮ ನನಗೆ ಬೇಕಿಲ್ಲ. ಏನೇ ಅಡೆತಡೆ ಬಂದರೂ ಫೇಸ್ ಮಾಡಲು ನಾನು ರೆಡಿ. ನೀನು ಹ್ಞೂಂ ಅಂದೆಯಲ್ಲ, ಅಷ್ಟೇ ಸಾಕು ನನಗೆ,” ಶಮೀಮಾ ಜಾನಿಯ ಅನುಮಾನ ಪರಿಹರಿಸಿದ್ದಳು. “ಶಮೀ, ನನಗೀಗ ಜಗತ್ತು ತುಂಬಾ ಸುಂದರವಾಗಿ ಕಾಣುತ್ತಿದೆ. ಕನಸಲ್ಲೂ ನೀನೇ, ಮನಸಲ್ಲೂ ನೀನೇ ಎಂಬಂತಾಗಿದೆ. ಸೃಷ್ಟಿಕರ್ತ ನಿಜವಾಗಿಯೂ ಗ್ರೇಟ್, ದಯಾಮಯಿ. ನಿನ್ನ ಪ್ರೀತಿ, ಸ್ನೇಹ, ಆತ್ಮೀಯತೆ, ಗೆಳೆತನ, ನನ್ನ ಮನಸ್ಸಿನಲ್ಲಿ ಕೊರೆಯುತ್ತಿದ್ದ ಅನಾಥತನ, ಒಂಟಿತನವನ್ನು ಹೋಗಲಾಡಿಸಿಬಿಟ್ಟಿತು. ನಾನು ನಿಜವಾಗಿಯೂ ತುಂಬಾ ಅದೃಷ್ಟವಂತ,” ಜಾನಿಯ ಸಂಭ್ರಮಕ್ಕೆ ಕೊನೆ ಇರಲಿಲ್ಲ.
ಮುಂದಿನ ದಿನಗಳಲ್ಲಿ ಪ್ರೇಮಿಗಳ ಪ್ರೇಮಾಲಾಪನೆಗೆ ಕೊನೆ ಇರಲಿಲ್ಲ. `ಅಂದಚೆಂದಕ್ಕಾಗಿ ನಭೋಮಂಡಲದಲ್ಲಿ ಚಂದಿರ ನಕ್ಷತ್ರಗಳನ್ನು ಸಿಂಗರಿಸುತ್ತಾ ಕತ್ತಲನ್ನು ಬೆಳಕಾಗಿಸುವಂತೆ ನೀನು ನನ್ನ ಬಾಳಿನಲ್ಲಿ ಬೆಳಕನ್ನು ತಂದಳು,’ ಎಂದು ಜಾನಿ ಪಿಸುಗುಡುತ್ತಿದ್ದರೆ, `ನನ್ನೆದೆಯ ಭಾವನೆಗಳಿಗೆ ಮೆರುಗುಕೊಟ್ಟು ನನ್ನೆದೆಯನ್ನು ತಂಪಾಗಿಸಿರುವ ಪೂರ್ಣ ಚಂದಿರ ನೀನೇ,’ ಎಂದು ಶಮೀಮಾ ಉಲಿಯುತ್ತಿದ್ದಳು.
ಇಬ್ಬರೂ ಜೊತೆ ಜೊತೆಯಾಗಿ ಅಲ್ಲಿ, ಇಲ್ಲಿ ಸುತ್ತಾಡುತ್ತಿದ್ದರೂ ಸಭ್ಯತೆ ಮೀರದ ಪ್ರೀತಿ ಅವರದಾಗಿತ್ತು. ಬಹಳವೆಂದರೆ ಆಗೊಮ್ಮೆ ಈಗೊಮ್ಮೆ ಪರಸ್ಪರ ತಬ್ಬಿಕೊಳ್ಳುವುದರಲ್ಲಷ್ಟೇ ಅವರ ಪ್ರೀತಿಯ ನಿವೇದನೆ ಕೊನೆಗೊಳ್ಳುತ್ತಿತ್ತು. ಪ್ರಾಂಜಲ ಪ್ರೀತಿಗೆ ಪಾವಿತ್ರ್ಯತೆ ಮೊದಲ ಆದ್ಯತೆಯಾಗಿತ್ತು.
“ಏಯ್ ಬಲಿ ಕಾ ಬಕರಾ, ಏನು ಯೋಚಿಸುತ್ತಿರುವಿ…..?” ಎಂದು ಆ ಹುಡುಗರಲ್ಲಿ ಒಬ್ಬ ಜೋರಾಗಿ ಕೂಗಿದಾಗ ಜಾನಿ ವಾಸ್ತವಕ್ಕೆ ಬಂದ. ಧಡಿಯನಂತಿದ್ದ ಆ ಹುಡುಗ ಕೈಯಲ್ಲಿದ್ದ ಚಾಕುವನ್ನು ಸವರುತ್ತಾ ಜಾನಿಯತ್ತ ನೋಡುತ್ತಿದ್ದ.
“ಅಂಥದ್ದೇನಿಲ್ಲ ಫ್ರೆಂಡ್ಸ್. ಪ್ರೀತಿಸಲು ನಿನಗೆ ನಮ್ಮ ಧರ್ಮದ ಹುಡುಗೀನೇ ಬೇಕಿತ್ತಾ ಎಂದು ಪ್ರಶ್ನಿಸಿದಿರಲ್ಲ, ಸೃಷ್ಟಿಕರ್ತನ ಕೈಚಳಕದಲ್ಲಿ ಈ ಜಗತ್ತು ಉದ್ಭವವಾದಾಗ, ಬೇರೆಲ್ಲ ಪ್ರಾಣಿ ಸಂಕುಲಗಳ ಜೊತೆಗೆ ಮನುಷ್ಯನೂ ಒಬ್ಬನಾಗಿದ್ದ. ಆಗ ಆ ಮನುಷ್ಯ ಯಾವ ಧರ್ಮದವನಾಗಿದ್ದ….?
“ಆಗ ಇದ್ದುದು ಮಾನವ ಧರ್ಮ ಒಂದೇ. ಮಾನವ ಸಂತತಿ ಬೆಳೆದಂತೆಲ್ಲಾ ಈ ನರಮಾನವ ತನ್ನ ಸ್ವಾರ್ಥ, ಅನುಕೂಲಕ್ಕೋಸ್ಕರ ಮನುಷ್ಯ, ಮನುಷ್ಯರ ಮುಗ್ಧ ಮನಸ್ಸುಗಳಲ್ಲಿ ಭೇದಭಾವಗಳನ್ನು ಬಿತ್ತುತ್ತಾ ಹೋದ. ಗುಂಪಿಗೆ ಒಡೆಯನಾದವನು ತನ್ನ ಪ್ರಾಬಲ್ಯ, ಜಬರು ಉಳಿಸಿಕೊಳ್ಳಲು ತನಗೆ ಬೇಡಾದವರನ್ನು ಕೊನೆಗೊಳಿಸಲು ತನ್ನವರಲ್ಲಿ ದ್ವೇಷ, ಅಸೂಯೆ ಹುಟ್ಟುಹಾಕತೊಡಗಿದ. ಒಡೆದು ಆಳುವ ನೀತಿಯನ್ನು ಕಲಿತ.
“ಕೆಲವರು ಕೆಲವರ ವರ್ತನೆ, ದಬ್ಬಾಳಿಕೆ, ದೌರ್ಜನ್ಯ ಎದುರಿಸಲು ಸಮರ್ಥರಾಗದೇ ಬೇರೊಂದು ಕಡೆಗೆ ವಲಸೆ ಹೋಗಿ ತಮ್ಮ ಬದುಕನ್ನು ಕಟ್ಟಿಕೊಳ್ಳತೊಡಗಿದರು. ಉದಾತ್ತ ಸ್ವಭಾವದ ಮಹಿಮರು ಸಮಾನ ಮನಸ್ಕ ಗುಂಪಿಗೆ ಧರ್ಮದ ಹೆಸರಿನ ಒಂದು ನಾಮಕರಣವನ್ನೂ ಮಾಡಿರಬೇಕು. ವಿಶಾಲವಾದ ಈ ಭೂಮಂಡಲದ ಬೇರೆ ಬೇರೆ ಕಡೆಗೆ ವಲಸೆ ಹೋದವರು ತಮ್ಮದೇ ಧರ್ಮವನ್ನು ಕಟ್ಟಿಕೊಂಡಿರಬೇಕು. ತಮಗೆ ಅನುಕೂಲವಾಗುವಂಥ ರೂಪುರೇಷೆಗಳನ್ನು, ರೀತಿನೀತಿಗಳನ್ನು ನಿರ್ಧರಿಸಿಕೊಂಡು ತಮ್ಮ ತಮ್ಮ ಧರ್ಮಗಳನ್ನು ಹುಟ್ಟುಹಾಕಿರಬೇಕು.
“ಒಂದೇ ಧರ್ಮದಲ್ಲಿ ಇರುವ ಎಲ್ಲರಲ್ಲೂ ಒಮ್ಮತವಿರಲಿಲ್ಲವೇನೋ? ಅದಕ್ಕಾಗಿ ಒಂದೇ ಧರ್ಮದೊಳಗೆ ನೂರೆಂಟು ಜಾತಿಗಳನ್ನು ಹುಟ್ಟು ಹಾಕಿದ್ದಲ್ಲದೇ, ಜಾತಿ, ಜಾತಿಗಳಲ್ಲೇ ತಾರತಮ್ಯ ಹುಟ್ಟಿಸಿ, ಮೇಲು ಜಾತಿ, ಕೀಳು ಜಾತಿ ಎಂದು ಮನುಷ್ಯ, ಮನುಷ್ಯರಲ್ಲೇ ವಿವಾದ ಸೃಷ್ಟಿಸಿಕೊಂಡು ಹೊಡೆದಾಡುತ್ತಿದ್ದಾರೆ, ನರಳುತ್ತಿದ್ದಾರೆ, ನಲುಗುತ್ತಿದ್ದಾರೆ. ಜಾತಿಯ ಭೂತ ಈಗಂತೂ ಮುಗಿಲೆತ್ತರಕ್ಕೆ ಬೆಳೆದು ನಿಂತಿದೆ.
“ಜಗತ್ತಿನಲ್ಲಿ ನಮ್ಮ ಧರ್ಮವೇ ಶ್ರೇಷ್ಠ, ಜಗತ್ತಿನ ಮನುಷ್ಯ ಪ್ರಾಣಿಗಳೆಲ್ಲ ನಮ್ಮ ಧರ್ಮದಲ್ಲೇ ಸೇರಿಕೊಳ್ಳಬೇಕು ಎಂಬ ಕುತ್ಸಿತ ಭಾವದ ಸ್ವಾರ್ಥ ಮನಸ್ಸಿನ, ಧರ್ಮದ ಅಮೇಲಿರಿರುವ ಧರ್ಮಗುರುಗಳು ಮತ್ತು ನಮ್ಮನ್ನಾಳುವ ಜನನಾಯಕರು ಅಮಾಯಕ ಜನರ ಮನಸ್ಸುಗಳಲ್ಲಿ ಭೇದಭಾವ ಸೃಷ್ಟಿಸುವುದು ಸಾಮಾನ್ಯವಾಗಿಬಿಟ್ಟಿದೆ. ಈಗ ನೀವು ಯಾರದೋ ಪ್ರಚೋದನೆ ನೀಡುವಂಥ ಮಾತಿನ ಮೋಡಿಗೆ ಒಳಗಾಗಿ ನನ್ನನ್ನು ಮುಗಿಸಲು ಬಂದಿರುವಿರಿ.
“ಧರ್ಮ ಗುರುಗಳಾಗಲೀ, ಜನನಾಯಕರಾಗಲೀ ಅಥವಾ ಧರ್ಮಾಂಧಾರಾದ ಹೊಗಳುಭಟರು ನಿಮ್ಮ ಬ್ರೇನ್ ವಾಶ್ ಮಾಡಿರಬಹುದೇನೋ? ಜಾತಿಗಳನ್ನು ನಿರ್ಮೂಲನ ಮಾಡಲು, ವಿಶ್ವಮಾನವ ಧರ್ಮವನ್ನು ಸ್ಥಾಪಿಸಬೇಕೆಂಬ ಉದ್ದೇಶದಿಂದ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಕ್ರಾಂತಿಯನ್ನೇ ಮಾಡಿದರು. ಅಂತರ್ಜಾತೀಯ ವಿವಾಹ ಪ್ರೋತ್ಸಾಹಿಸಿದರು.
“ಮನುಷ್ಯ, ಮನುಷ್ಯರನ್ನು ಹೊಡೆದು ಕೊಲ್ಲುವ ಧರ್ಮದಲ್ಲಿ ಬಸಣ್ಣನವರಿಗೆ ನಂಬಿಕೆ ಇರಲಿಲ್ಲ. ಮಾನವ ಧರ್ಮ ಒಂದೇ ಎಂಬ ಅಭಿಮತ ಅವರದಾಗಿತ್ತು. ಈ ಒಂದು ವಚನದಲ್ಲಿ ಧರ್ಮದ ಬಗ್ಗೆ ಬಸಣ್ಣನವರು ತುಂಬಾ ಅರ್ಥಪೂರ್ಣವಾಗಿ ಹೇಳಿದ್ದಾರೆ.
“ದಯವಿಲ್ಲದ ಧರ್ಮಾವಾವುದಯ್ಯಾ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲಿ
ದಯವೇ ಧರ್ಮದ ಮೂಲವಯ್ಯಾ, ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.
“ಮಾನವೀಯತೆ ಮೆರೆಯದ ಧರ್ಮವಾದರೂ ಏಕೆ ಬೇಕು? ಮೊದಲು ಮಾನವೀಯತೆ, ನಂತರ ಧರ್ಮ ಅಲ್ಲವೇ? ದಯವಿಲ್ಲದ ಧರ್ಮಕ್ಕೆ ಅರ್ಥ ಉಂಟೇ? ಹೇಗೂ ನಾನು ಮಸಣದ ಹಾದಿಯಲ್ಲಿ ಪಯಣಿಸುತ್ತಿದ್ದೇನೆ. ಹಾಗೇ ಇನ್ನೊಂದೆರಡು ಮಾತುಗಳನ್ನು ಹೇಳಲು ಅವಕಾಶ ಕೊಟ್ಟುಬಿಡಿರಿ,” ಜಾನಿಯ ಧ್ವನಿಯಲ್ಲಿ ದೈನ್ಯತೆ ಇತ್ತು.
“ಉರಿಯುತ್ತಿರುವ ದೀಪ ಆರುವ ಮುನ್ನ ಭುಗ್ಗೆಂದು ಉರಿಯುವುದಿಲ್ಲವೇ….? ಹಾಗೆ ಸಾವಿನ ಬಾಗಿಲಲ್ಲಿ ಇಣುಕುತ್ತಿರುವ ನಿನ್ನ ಕಥೆಯೂ ಅಷ್ಟೇ. ಅದೇನು ಬೊಗಳಬೇಕೆಂದಿರುವಿಯೋ, ಬೊಗಳಿಬಿಡು,” ಎಂದು ಕಿಸಕ್ಕನೇ ನಗುತ್ತಾ ಒಬ್ಬ ಏರಿದ ಧ್ವನಿಯಲ್ಲಿ ಅರಚಿದ.
“ನಿಮ್ಮಂಥ ಅಮಾಯಕ ಮುಗ್ಧ ಜನರ ಮನಸ್ಸಿನಲ್ಲಿ ಧರ್ಮಾಂಧತೆಯನ್ನು ಬಿತ್ತುವ ಕೆಲವು ನಾಯಕರ ಮನೆಗಳಲ್ಲೂ ಅನ್ಯ ಜಾತೀಯ, ಅನ್ಯ ಧರ್ಮದ ತಾಯಂದಿರು, ಹೆಣ್ಣುಮಕ್ಕಳು, ಸೊಸೆಯಂದಿರಿದ್ದಾರೆ. ಹಣವಿದ್ದವರಿಗೆ ಯಾವ ಕಟ್ಟಳೆಗಳೂ ಇಲ್ಲ. ಕಾನೂನು ಅವರ ಪರವಾಗಿಯೇ ಇರುತ್ತದೆ. ಹಣ ಬಲದಿಂದ ಎಲ್ಲವನ್ನೂ ಮೆಟ್ಟಿ ನಿಲ್ಲುತ್ತಾರೆ. ಎಲ್ಲವನ್ನೂ ಕಂಡುಕೊಳ್ಳುತ್ತಾರೆ. ಜನ ನಾಯಕರಾಗಲೀ, ಅವರ ಮಕ್ಕಳಾಗಲೀ, ಧರ್ಮ ಗುರುಗಳಾಗಲೀ ರಸ್ತೆಗಿಳಿದು ಧರ್ಮದ ಹೋರಾಟ ಮಾಡಿರುವ ಉದಾಹರಣೆಗಳಿವೆಯೇ….? ಅದೇನಿದ್ದರೂ ನಿಮ್ಮಂಥವರನ್ನು ಪ್ರಚೋದಿಸಿ ರಸ್ತೆಗಿಳಿಸುತ್ತಾರೆ.
“ಭಾವನಾತ್ಮಕವಾಗಿ ನಿಮ್ಮ ಮನಸ್ಸಿನಲ್ಲಿ ಏನೇನೋ ತುಂಬಿಬಿಡುತ್ತಾರೆ. ಅವರು ಹೇಳಿದ್ದೆಲ್ಲಾ ಸತ್ಯ ಅಂತ ನೀವು ಹಿಂದೆ ಮುಂದೆ ಯೋಚಿಸದೇ ನಂಬಿಬಿಡುತ್ತೀರಿ. ಹೋರಾಟದ ಸಮಯದಲ್ಲಿ ವಿಷಯ ಅತಿರೇಕಕ್ಕೆ ಹೋದಾಗ ಇಲ್ಲವೇ ಕೈಮೀರಿ ಹೋದಾಗ ಗೋಲಿಬಾರ್ ಏನಾದರೂ ಆದರೆ ಅಥವಾ ಅಹಿತಕರ ಘಟನೆ ಜರುಗಿದಾಗ ವೀರ ಮರಣನ್ನಪ್ಪುವ ಹೋರಾಟಗಾರರ ಯಾದಿಯಲ್ಲಿ ಜನನಾಯಕರ ಮಕ್ಕಳ ಹೆಸರನ್ನು ಕಂಡಿದ್ದು ಇದೆಯಾ….? ಊಹ್ಞೂಂ….!
“ನಿಮ್ಮಂಥ ಅಮಾಯಕರೇ ಅವರ ದಾಳಕ್ಕೆ ಬಲಿಯಾಗುವರು. ನೀವೆಲ್ಲ ಹರಕೆಯ ಕುರಿಗಳಿದ್ದಂತೆ. ಅವರ ಅಧಿಕಾರದ ಲಾಲಸೆಯ ಬೆಂಕಿಯಲ್ಲಿ ಬಿದ್ದು ಬೇಯುವರು ನಿಮ್ಮಂಥ ಅಮಾಯಕರು ಅಷ್ಟೇ. ನಿಮ್ಮ ಮನಸ್ಸಿನಲ್ಲಿ ಸಾಮಾಜಿಕ ಅಸಹಿಷ್ಟುತೆಯನ್ನು ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಆ ಭಗವಂತ ನಿಮಗೂ ವಿಚಾರ ಮಾಡುವ ಶಕ್ತಿ ಕೊಟ್ಟಿದ್ದಾನೆ. ಸರಿಯಾದ ದಿಸೆಯಲ್ಲಿ ವಿಚಾರ ಮಾಡುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕಾಗಿ ನನ್ನ ಕಳಕಳಿಯ ವಿನಂತಿ. ಕೊನೆಗೊಂದು ರಿಕ್ವೆಸ್ಟ್… ಪ್ಲೀಸ್……”
“ಅದೇನೆಂದು ಒದರು…..”
“ಪ್ರಾಣ ಕಳೆದುಕೊಳ್ಳುವ ಮುಂಚೆ ನಾನು ಶಮೀಮಾಳ ಜೊತೆ ಒಂದು ಸಾರಿ ಮಾತನಾಡಬಹುದೇ……? ದಯವಿಟ್ಟು ಒಪ್ಪಿಕೊಳ್ಳಿ…..” ಜಾನಿ ಗೋಗರೆದ.
ಹುಡುಗುರು ಮತ್ತೆ ಮುಖ ಮುಖ ನೋಡಿಕೊಂಡು, ಒಂದು ಕ್ಷಣ ನೋಟದಲ್ಲೇ ಮಾತಾಡಿಕೊಂಡರು.
“ಸರಿ, ಸರಿ. ಅದೇನು ಮಾತಾಡುತ್ತಿಯೋ ಮಾತಾಡಿಕೋ. ಸ್ಪೀಕರ್ ಆನ್ ಮಾಡಿಕೊಂಡು ಮಾತಾಡು,” ಒರಟು ಧ್ವನಿಯಲ್ಲಿ ಒಬ್ಬ ಮಾತನಾಡಿದ. ಜಾನಿ ತಡಬಡಾಯಿಸಿ ತಕ್ಷಣ ಶಮೀಮಾಳಿಗೆ ಫೋನಾಯಿಸಿದ. ಅತ್ತ ಕಡೆ ಫೋನ್ ರಿಂಗಾಗಲೇ ಇಲ್ಲ. ಬರೀ `ಟುಂಯ್…. ಟುಂಯ್….’ ಎನ್ನುವ ಶಬ್ದವಷ್ಟೇ ಕೇಳಿಬಂತು. ಕಟ್ ಮಾಡಿ ಮತ್ತೊಮ್ಮೆ ಡಯಲ್ ಮಾಡಿದ. ಆಗಲೂ ಅದೇ ಶಬ್ದ ಬಂದಿತು. ಜಾನಿ ಮೊಗದಲ್ಲಿ ಸಣ್ಣದಾಗಿ ಬೆವರು ಜಿನುಗತೊಡಗಿತು.
“ಯಾಕೋ ಶಮೀಗೆ ಫೋನ್ ಕರೆ ಹೋಗುತ್ತಿಲ್ಲ. ದಯವಿಟ್ಟು ನಿಮ್ಮ ಫೋನ್ ನಿಂದ ಒಂದು ಸಾರಿ ಟ್ರೈ ಮಾಡಿ ಪ್ಲೀಸ್…..” ಗೋಗರೆದ, ಹಲ್ಲುಗಿಂಜಿದ ಜಾನಿ.
ಅವರಲ್ಲೊಬ್ಬ ಶಮೀಮಾಳ ಫೋನ್ ಗೆ ಟ್ರೈ ಮಾಡಲು ಮುಂದಾದ. ಮತ್ತದೇ ನಿರಾಶಾದಾಯಕ `ಟುಂಯ್… ಟುಂಯ್….’ ಶಬ್ದವೇ ಬರತೊಡಗಿತು.
`ಅಯ್ಯೋ ದೇವರೇ, ಕೊನೆಗಾಲದಲ್ಲಿ ನನ್ನ ಜೀವದ ಪ್ರೀತಿಯ ಹುಡುಗಿಯ ಜೊತೆಗೆ ಮಾತನಾಡುವುದಕ್ಕೂ ನೀನು ಅವಕಾಶ ಕಲ್ಪಿಸಿಕೊಡುತ್ತಿಲ್ಲವಲ್ಲ….? ನಾನೇನಂಥ ಅಪರಾಧ ಮಾಡಿರುವೆ…? ನಿನಗೆ ಕರುಣೆ ಎಂಬುದೇ ಇಲ್ಲವೇ…..?’ ಮನಸ್ಸಿನೊಳಗೇ ರೋದಿಸತೊಡಗಿದ ಜಾನಿ.
“ಏಯ್ ಹುಡುಗಾ, ನಿನ್ನಾಸೆ ನೆರವೇರುತ್ತಿಲ್ಲ. ನಿನ್ನ ದುರ್ದೈವ ಅಷ್ಟೇ. ನಾವೇನೂ ಮಾಡುವುದಕ್ಕೆ ಆಗುವುದಿಲ್ಲ. ವೆರಿ ಅನ್ ಲಕ್ಕೀ ಚಾಪ್!”
“ಹಾಗಾದರೆ ನಿಮಗೆ ತಿಳಿದಂತೆ ನನ್ನ ಕೊಚ್ಚಿ ಹಾಕಬಹುದು,” ಎಂದೆನ್ನುತ್ತಾ ಜಾನಿ ಕಣ್ಮುಚ್ಚಿಕೊಂಡು ಭಗವಂತನ ಸ್ಮರಣೆಯಲ್ಲಿ ನಿರತನಾದ. ಮುಖದಲ್ಲಿ ಪ್ರಸನ್ನತೆ ಇತ್ತು, ದುಃಖವಿರಲಿಲ್ಲ.
ಬಂದವರಲ್ಲಿ ತುಸು ಹೊತ್ತು ಗುಸು ಗುಸು ಚರ್ಚೆಯಾಯಿತು. ತಮ್ಮೊಳಗೆ ಏನೇನೋ ಮಾತನಾಡಿಕೊಂಡರು.
ನಂತರ, “ಏಯ್ ಅಯೋಗ್ಯ…. ನಮ್ಮ ದೇವರು ದಯಾಮಯಿ. ನಿನಗೆ ಪ್ರಾಣಭಿಕ್ಷೆ ನೀಡಬೇಕೆಂದು ಪ್ರೇರಣೆಯಾಗಿದೆ. ಬದುಕಿಕೋ ಬಡಜೀವವೇ. ಹ್ಞಾಂ…. ಒಂದು ಮಾತು. ಮತ್ತೆ ನಮ್ಮ ಹುಡುಗಿಯ ತಂಟೆಗೆ ಬರಬೇಡ. ಶಮೀಮಾಳನ್ನು ಮರೆತುಬಿಡು. ಹೋಗು, ಹೋಗೋ….” ಧಡಿಯ ಅರಚಿದ.
“ಹ್ಞಾಂ…..! ಹೌದಾ…..? ಏನಂದಿರಿ….? ನಾನು ಶಮೀಮಾಳನ್ನು ಮರೆತುಬಿಡಬೇಕೇ….? ಅವಳೀಗಾಗಯೇ ನನ್ನ ಹೃದಯ ಮಂದಿರವನ್ನು ಅಲಂಕರಿಸಿರುವ ದೇವತೆ! ಅವಳನ್ನು ಮರೆತು ಜೀವಿಸುವುದು ಹೇಗೆ ಸಾಧ್ಯ? ಅವಳು ಭೌತಿಕವಾಗಿ ನನ್ನೊಂದಿಗೆ ಇರದಿದ್ದರೂ ಮಾನಸಿಕವಾಗಿ ಸದಾ ನನ್ನೊಂದಿಗೇ ಇರುತ್ತಾಳೆ. ಅವಳ ನೆನಪಲ್ಲೇ ನಾನು ಜೀವಿಸುವೆ.
“ಹ್ಞಾಂ…..! ನಿಮ್ಮಲ್ಲಿ ಒಂದು ಆನೆಸ್ಟ್ ರಿಕ್ವೆಸ್ಟ್. ಅವಳಿಗೆ ಯಾವ ತೊಂದರೆಯನ್ನೂ ಕೊಡಬೇಡಿ. ಅವಳು ನನ್ನವಳಾಗದಿದ್ದರೂ ಪರವಾಗಿಲ್ಲ, ಅವಳು ಸುಖವಾಗಿರಬೇಕು. ಅವಳು ಮೆಚ್ಚಿದ ನಿಮ್ಮ ಧರ್ಮದ ಹುಡುಗನ ಜೊತೆಗೆ ಮದುವೆ ಮಾಡಿಬಿಡಿರಿ. ಅವಳ ಬಾಳು ಹಸನಾಗಬೇಕು. ಶಮೀಮಾ ನಿನಗೆ, ಶುಭವಾಗಲಿ. ಈ ನತದೃಷ್ಟ ಪ್ರೇಮಿಯನ್ನು ಮರೆತುಬಿಡು. ಬೈ…. ಬೈ…..” ಜಾನಿ ನಿಂತಲ್ಲೇ ಕುಸಿದು ಕುಳಿತ.
“ಸರಿ, ನಿನ್ನಿಷ್ಟ. ನಿನಗೂ ಶುಭವಾಗಲಿ. ಬೈ ಬೈ….” ಎಂದೆನ್ನುತ್ತಾ ಹುಡುಗರ ದಂಡು ಅಲ್ಲಿಂದ ನಿರ್ಗಮಿಸಿತು.
ಹುಡುಗರು ಹೋಗುವುದನ್ನೇ ನೋಡುತ್ತಾ ಕುಳಿತ ಜಾನಿ. ಅವರು ಅವನಿಂದ ದೂರ ದೂರ ಸರಿಯುತ್ತಿದ್ದಂತೆ, `ಭಗವಂತ, ನೀನಾಡಿಸಿದಂತೆ ನಾನಾಡುವೆ,’ ಎಂದಂದುಕೊಳ್ಳುತ್ತಾ, ಜಾನಿ ಮೆಲ್ಲಗೇ ಎದ್ದು ನಿಂತ. ಮೆಲ್ಲಗೇ ಹೆಜ್ಜೆ ಹಾಕಿದ. ಹೆಜ್ಜೆಗಳ ವೇಗ ತಗ್ಗಿತ್ತು.
“ವೆಲ್ ಕಮ್ ಫ್ರೆಂಡ್, ವೆಲ್ ಕಮ್. ನಿಮ್ಮ ಅರ್ಥಪೂರ್ಣ ಮಾತುಗಳಿಂದ ನಾವು ಪ್ರಭಾವಿತರಾಗಿದ್ದೇವೆ,” ಒಬ್ಬ ಸ್ವಾಗತದ ಧ್ವನಿಯಲ್ಲಿ ಸ್ವಾಗತ ಕೋರುತ್ತಿದ್ದಂತೆ ಉಳಿದವರು ರಾಗಬದ್ಧವಾಗಿ ಚಪ್ಪಾಳೆ ತಟ್ಟತೊಡಗಿದರು. ಕಾರಿನ ಮುಂದಿನಿಂದ ಹಳದಿ ಸೀರೆಯುಟ್ಟ ನೀರೆಯೊಬ್ಬಳು ನವಿಲಿನ ನಡಿಗೆಯಲ್ಲಿ ಬಂದು ಅವರ ಮಧ್ಯದಲ್ಲಿ ನಿಂತುಕೊಂಡಳು.
“ಅರೇ, ಇವಳು ಶಮೀಮಾ….! ಹೌದು, ಶಮೀಮಾಳೇ….! ಇವಳ್ಯಾಕೆ ಇಲ್ಲಿಗೆ ಬಂದಿದ್ದಾಳೆ…..?” ಆತಂಕದಿಂದ ಜಾನಿ ಕಾರಿನ ಸಮೀಪ ಬಂದ. ಹುಡುಗರು ಲಯಬದ್ಧವಾಗಿ ಚಪ್ಪಾಳೆ ತಟ್ಟುತ್ತಿದ್ದರು.
`ನನ್ನ ಶಮೀಮಾಳ ಕಣ್ಣೆದುರಿಗೇ ನನ್ನ ಕತ್ತನ್ನು ಸೀಳುವ ಇರಾದೆ ಇವರಿಗಿದೆಯೇನೋ…?’ ಅನುಮಾನದ ಹುಳು ಜಾನಿಯ ಮನದಲ್ಲಿ ಗಿರಕಿ ಹೊಡೆಯತೊಡಗಿತು.
“ಬನ್ನಿ ಸಾರ್ ಬನ್ನಿ…… ನಿಮ್ಮ ಮಾತುಗಳನ್ನು ಕೇಳಿಸಿಕೊಂಡು ನಮಗೆ ಖುಷಿಯಾಗಿದೆ. ಆಗಲೇ ನಾವೆಲ್ಲರೂ ನಿಮಗೆ ತಲೆಗೊಂದರಂತೆ ಏನೇನೋ ಕೆಟ್ಟ ಕೆಟ್ಟ ಮಾತುಗಳಿಂದ ಬಯ್ದುಬಿಟ್ಟೆ. ಆದರೆ ನೀವೇನೂ ಬೇಸರಿಸಿಕೊಳ್ಳಲಿಲ್ಲ. ತುಂಬಿದ ಕೊಡ ನೀವು. ದಯವಿಟ್ಟು ನಮ್ಮೆಲ್ಲರನ್ನೂ ಕ್ಷಮಿಸಿಬಿಡಿ. ನಮ್ಮ ಶಮೀಮಾಗೆ ಯೋಗ್ಯ ಹುಡುಗ ನೀವೇ. ನಮ್ಮ ಶಮೀಮಾ ನಿಮ್ಮವಳೇ. ನಿಮ್ಮ ಭಾವೀ ಜೀವನಕ್ಕೆ ಶುಭವಾಗಲಿ,” ಎಂದು ಅವರಲ್ಲೊಬ್ಬ ಹೇಳಿದ.
ಜಾನಿಯ ಹೃದಯದ ಬಡಿತ ಜೋರಾಗಿಬಿಟ್ಟಿತು. ಪಿಳಿ ಪಿಳಿ ಕಣ್ಣುಬಿಡುತ್ತಾ ಅವರನ್ನೊಮ್ಮೆ, ಶಮೀಮಾಳನ್ನೊಮ್ಮೆ ನೋಡುತ್ತಾ ನಿಂತುಬಿಟ್ಟ. ಅವನ ಬಾಯಿಯಿಂದ ಮಾತುಗಳೇ ಹೊರಡಲಿಲ್ಲ.
“ಜಾನಿ, ನೀನು ಇವರೊಂದಿಗೆ ಮಾತಾಡಿದ್ದೆಲ್ಲ ಇವರ ಮೊಬೈಲ್ ನಲ್ಲಿ ರೆಕಾರ್ಡ್ ಆಗಿತ್ತು. ಎಲ್ಲವನ್ನೂ ಕೇಳಿಸಿಕೊಂಡೆ. `ನನ್ನ ಶಮೀಮಾ ಭೌತಿಕವಾಗಿ ನನ್ನೊಂದಿಗೆ ಇರದಿದ್ದರೂ, ಮಾನಸಿಕವಾಗಿ ನನ್ನೊಂದಿಗೆ ಇರುತ್ತಾಳೆ. ಅವಳ ನೆನಪಲ್ಲೇ ಜೀವಿಸುವೆ. ಅವಳು ಸುಖವಾಗಿರಬೇಕು,’ ಎಂದ ನಿನ್ನ ಮಾತಿನಿಂದ ನನ್ನ ಎದೆ ತುಂಬಿ ಬರುತ್ತಿದೆ. ನನಗೀಗ ನನ್ನವರ ಆಶೀರ್ವಾದ ಸಿಕ್ಕಿದೆ. ನಮ್ಮ ಪ್ರೀತಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ನಾನೆಂದಿಗೂ ನಿನ್ನವಳೇ, ನೀನೆಂದೆಂದಿಗೂ ನನ್ನವನೇ….” ಎನ್ನುತ್ತಾ ಶಮೀಮಾ ಓಡಿಬಂದು ಜಾನಿಯನ್ನು ಆಲಂಗಿಸಿಕೊಂಡಳು. ಒಂದು ಕ್ಷಣ ಇದು ಕನಸೋ, ನನಸೋ ಎಂಬ ಧ್ವಂಧ್ವದಲ್ಲಿ ಮುಳುಗಿದ ಜಾನಿ, “ಹೌದಾ ಶಮೀ…? ಭಗವಂತ ನಿಜವಾಗಿಯೂ ದಯಾಮಯಿ. ಆನಂದದ ಅತಿರೇಕದಲ್ಲಿ ಮಾತುಗಳೇ ಹೊರಡದಂತಾಗಿದೆ…..” ಎನ್ನುತ್ತಾ ಜಾನಿ ಅವಳನ್ನು ಬಳಸಿದ.
“ನೂರ್ಕಾಲ ನೀವು ಹೀಗೇ ಎರಡು ದೇಹ, ಒಂದು ಜೀವ ಎಂಬಂತೆ ಇರಿ. ಶುಭವಾಗಲಿ,” ಹುಡುಗರ ಸಂಭ್ರಮದ ಜೊತೆಗೆ ಚಪ್ಪಾಳೆಯ ಇಂಪು ಅನುರಣಿಸತೊಡಗಿತು.
ಜಾನಿ ಮತ್ತು ಶಮೀಮಾ ಸಂತಸದ ಸಂಭ್ರಮ ಪರಾಕಾಷ್ಠೆಯಲ್ಲಿ ಮಿಂದು ಮೀಯತೊಡಗಿದರು.





