“ಅಮ್ಮ, ನೋಡು, ಈ ದೊಡ್ಡ ಚಾಕೋಲೇಟ್ ನನಗೆ ಗಿಫ್ಟಾಗಿ ಸಿಕ್ತು”
“ಪುಟ್ಟಿ , ನಿನಗೆ ಯಾರು ಕೊಟ್ಟಿದ್ದು ಇಷ್ಟು ದೊಡ್ಡ ಚಾಕೋಲೇಟ್ನ”
” ಅಲ್ಲಿ ಹೊಸಾ ಮನೆ ಕಟ್ತಾ ಇದ್ದಾರಲ್ಲ! ಅಲ್ಲಿ, ಆ ಮನೆ ಅಂಕಲ್ ಕೊಟ್ಟಿದ್ದು. ಅಮ್ಮ.. ನೀನು ವಾಪಸ್ ಕೊಡು ಅಂತ ಹೇಳಬೇಡ, ನನಗೆ ಈ ಚಾಕ್ಲೇಟ್ ತುಂಬಾ ಇಷ್ಟ”
“ಹಾಗಲ್ಲ ಪುಟ್ಟಿ, ಯಾರ್ಯಾರ್ ಹತ್ರನೋ ಗಿಫ್ಟ್ ತಗೋಬಾರ್ದು ಅಂತ ನಿಂಗೆ ಎಷ್ಟು ಸಲ ಹೇಳಿಲ್ಲ?”….
“ನಿನಗೆ ಇಷ್ಟವಾದ ಚಾಕ್ಲೇಟ್ ನಾನು ಪ್ರತಿ ಭಾನುವಾರ ತಂದುಕೊಡಲ್ವಾ,? ಬಾ, ನಾನೂ ಬರ್ತೀನಿ ನಿನ್ನ ಜೊತೆ, ಆ
ಅಂಕಲ್ಗೆ ಇದರ ಬೆಲೆ ಕೊಟ್ಟು ಬರೋಣ. ಇನ್ನು ಯಾವತ್ತೂ ಯಾವ ಅಂಕಲ್, ಆಂಟಿ… ನಿನಗೆ ಏನೂ ಗಿಫ್ಟ್ ಕೊಡಬಾರದು! ನೀನು ತೆಗೆದುಕೊಳ್ಳಲೂಬಾರದು ! ಅರ್ಥವಾಯಿತ? ನನಗೆ ಕೋಪ ಬರುತ್ತೆ. ಬೇಜಾರಾಗುತ್ತೆ, ಅಮ್ಮನ ಕೋಪ, ಬೇಜಾರು ನಿನಗೆ ಪರವಾಗಿಲ್ಲವಾ?”

“ಇಲ್ಲ… ಇಲ್ಲ… ಅಮ್ಮ, ಬೇಡ… ನೀನು ಕೋಪ ಬೇಜಾರು ಮಾಡ್ಕೋಬೇಡ, ನಾನು ಇನ್ನು ಮೇಲೆ ನನಗೆ ಎಷ್ಟೇ ಇಷ್ಟವಾದರೂ ಯಾರ ಹತ್ರನೂ ಗಿಫ್ಟು ತೆಗೆದುಕೊಳ್ಳಲ್ಲ..ಸಾರಿ… ಈ…ಈ.. ಚಾಕ್ಲೇಟ್ ಕೂಡ ನನಗೆ ಬೇಡ”
“ಸರಿ ನಡಿ, ಈಗಲೇ ಅದರ ಹಣ ಕೊಟ್ಟು ಬರೋಣ, ಅವರಿಗೆ ನಾನು ಹೇಳ್ತೀನಿ, ಹೀಗೆಲ್ಲ ಗಿಫ್ಟ್ ಕೊಡಬೇಡಿ ಅಂತ”
“ಬೇಡ ಅಮ್ಮ, ಅಂಕಲ್ ಬೇಜಾರ್ ಮಾಡ್ಕೊಂಡ್ರೆ? ನಾನು ಇನ್ನು ಮೇಲೆ ಯಾರ್ ಹತ್ರನೂ ಗಿಫ್ಟ್ ಇಸ್ಕೊಳಲ್ಲ, ಪ್ಲೀಸ್, ಅಮ್ಮ.”
“ಅದೆಲ್ಲಾ ಏನೂ ನಡೆಯಲ್ಲ, ನಡಿ ತೋರ್ಸು …ಯಾರು ಆ ಅಂಕಲ್ ಅಂತ”.
ಸಂಜೆ ಶಾಲೆಯಿಂದ ಬಂದ ಹತ್ತು ವರ್ಷದ ಮಗಳು ಪಲ್ಲವಿಯನ್ನು ಎಳೆದುಕೊಂಡು ಆರತಿ ಚಾಕೋಲೇಟ್ ಕೊಟ್ಟ ಅಂಕಲ್ನನ್ನು ಹುಡುಕಿಕೊಂಡು ಹೊರಟಳು.
ಆರತಿ ಮಗಳೊಟ್ಟಿಗೆ ವಾಸಿಸುತ್ತಿದ್ದ ಮನೆಯಿಂದ ಸ್ವಲ್ಪ ದೂರದಲ್ಲಿ ಒಂದು ದೊಡ್ಡ ಮನೆ ಕಟ್ಟುತ್ತಿದ್ದರು.ಆ ಜಾಗದ ಬಳಿ ಮಗಳು ಕರೆದುಕೊಂಡು ಹೋದಾಗ ಅಲ್ಲಿ ಯಾರೂ ಇರಲಿಲ್ಲ. ಮಗಳನ್ನು ಮನೆಗೆ ವಾಪಸ್ ಕರೆದುಕೊಂಡು ಬಂದ ಆರತಿ ಕೋಪದಿಂದ ಆ ಚಾಕೋಲೇಟನ್ನು ಕಸದ ಬುಟ್ಟಿಗೆ ಎಸೆದು, ಮತ್ತೆ ಆ ಚಾಕೋಲೇಟ್ ಮುಟ್ಟಕೂಡದಂತೆ ಮಗಳಿಗೆ ತಾಕೀತು ಮಾಡಿ, ಮಗಳನ್ನು ರಮಿಸಿ ,ತಿಂಡಿ… ಹಾಲು ಕೊಟ್ಟು, ಮಗಳಿಗೆ ಹೋಂವರ್ಕ್ ಮಾಡಲು ತಿಳಿಸಿ, ರಾತ್ರಿಯಡುಗೆ ಮಾಡಲು ಅಡಿಗೆ ಮನೆ ಕಡೆ ಹೊರಟಳು. ಪ್ರತಿದಿನದಂತೆ ಮಗಳು ಸಂಜೆ ಹಾಲು ತಿಂಡಿ ಮುಗಿಸಿದ ನಂತರ ಹತ್ತಿರದಲ್ಲೇ ಇದ್ದ ಪಾರ್ಕಗೆ ಮಗಳನ್ನು ಆಟವಾಡಲು ಕರೆದುಕೊಂಡು ಹೋಗುತ್ತಿದ್ದಳು. ಕೋಪದಿಂದ ಆ ದಿನ ಎಲ್ಲೂ ಕರೆದುಕೊಂಡು ಹೋಗಲಿಲ್ಲ. ಮಗಳಿಗೆ ಊಟ ಮಾಡಿಸಿ ತಾನೂ ಉಂಡು ಮಲಗಿದಳು. ಆರತಿಯ ಗಂಡ ಅಶೋಕ ದೂರ ದೇಶದಲ್ಲಿ ಒಬ್ಬನೇ ಇದ್ದು ಕೆಲಸ ಮಾಡುತ್ತಿದ್ದ, ಮಡದಿ ಮಗಳನ್ನು ತನ್ನ ಜೊತೆ ಕರೆದೊಯ್ಯಲಾಗದ ಕಾರಣ ಇಬ್ಬರನ್ನೂ ನಗರದ ಸುಸಜ್ಜಿತ ಮನೆಯೊಂದರಲ್ಲಿ ಇರಿಸಿ, ತಾನು ವರ್ಷ… ಎರಡು ವರ್ಷಕ್ಕೆ ಒಮ್ಮೆ ಬಂದು ಹೋಗುತ್ತಿದ್ದ, ಆತನ ಕೆಲಸದ ವ್ಯಾಪ್ತಿ ಹಾಗಿತ್ತು. ಒಂಟಿ ಜೀವನ ಆರತಿಗೆ ಅನಿವಾರ್ಯವಾಗಿತ್ತು . ಆಕೆಯ ಹಾಗೂ ಗಂಡನ ತಂದೆ ತಾಯಿಗಳಿಬ್ಬರೂ ಬೇಗನೆ ತೀರಿ ಹೋಗಿದ್ದರು.

ಮಲಗಿದ್ದಷ್ಟೇ. ಆರತಿಗೆ ನಿದ್ರೆ ಹತ್ತಿರ ಸುಳಿಯಲಿಲ್ಲ. ನೆನಪುಗಳು ಧಾಳಿಯಿಡತೊಡಗಿದ್ದವು. ಆರತಿ… ತಂದೆ ತಾಯಿಗಳಿಗೆ ಒಬ್ಬಳೇ ಮಗಳು, ಆರ್ಥಿಕವಾಗಿ ಸದೃಢವಲ್ಲದ ಸಂಸಾರ. ಹತ್ತಿರದಲ್ಲೇ ಇದ್ದ ಶಾಲೆಗೆ ಗೆಳತಿಯರೊಟ್ಟಿಗೆ ಹೋಗಿ ಬರುತ್ತಿದ್ದಳು. ಗೆಳತಿ ಸಂಗೀತ ಆಪ್ತಳು. ಹೆಸರಿಗೆ ತಕ್ಕಂತೆ ಸಂಗೀತ ತುಂಬಾ ಚೆನ್ನಾಗಿ ಹಾಡುತ್ತಿದ್ದಳು. ಶಾಸ್ತ್ರೀಯವಾಗಿ ಸಂಗೀತ ಕಲಿಯದಿದ್ದರೂ, ಸುಶ್ರಾವ್ಯವಾದ ಕಂಠದಿಂದ ಕೇಳಿದ ಹಾಡುಗಳನ್ನು ಮನನ ಮಾಡಿಕೊಂಡು, ಇಂಪಾಗಿ ಹಾಡುತ್ತಿದ್ದಳು. ಒಮ್ಮೆ ಅವಳ ಹಾಡನ್ನು ಕೇಳಿದವರು ಮತ್ತೊಮ್ಮೆ ಕೇಳಲು ಬಯಸುತ್ತಿದ್ದರು. ಹಾಡಿನ ಸ್ಪರ್ಧೆ ಎಲ್ಲೇ ಇದ್ದರೂ ಅವಳಿಗೆ ಬಹುಮಾನ ಗ್ಯಾರೆಂಟಿ. ಆರತಿ ವಾಸಿಸುತ್ತಿದ್ದ ವಠಾರದಲ್ಲೇ ಸಂಗೀತಾಳ ತಂದೆ ತಾಯಿಯರೂ ಇದ್ದರು. ಸಂಗೀತಳಿಗೆ ಇಬ್ಬರು ಅಕ್ಕಂದಿರು, ಒಬ್ಬ ಅಣ್ಣ, ಒಬ್ಬ ತಮ್ಮ,ಬಡತನದ ದೊಡ್ಡ ಸಂಸಾರ. ಹಬ್ಬ ಹರಿ ದಿನಗಳಲ್ಲಿ. ವಠಾರದ ಎಲ್ಲರ ಮನೆಯಲ್ಲೂ ಇವಳ ಹಾಡೇ. ಹಾಡು ಕೇಳಿ ಅವರ ಮನೆಗಳಲ್ಲಿ ಮಾಡಿದ ತಿಂಡಿಯನ್ನು ಕೊಟ್ಟು ಕಳುಹಿಸುತ್ತಿದ್ದರು. ಚಿಕ್ಕ ಹುಡುಗಿ ತಿಂಡಿಯ ಆಸೆಗಾಗಿ ಎಲ್ಲರ ಮನೆಯಲ್ಲೂ ಹಾಡುತ್ತಿದ್ದಳು.. ಬಾಲ್ಯ… ಮುಗ್ದತೆ… ಆಸೆ …ಬಡತನ…ತಾನು ಹಾಡು ಹೇಳಿದರೆ ಏನಾದರೂ ಸಿಗುತ್ತದೆ ಎಂಬ ಆಸೆಯಲ್ಲಿ ಕೇಳಿದವರ ಮುಂದೆಲ್ಲಾ ಹಾಡುತ್ತಿದ್ದಳು.
13… 14ರ ಹೆಣ್ತನ ಅರಳುವ ಸಮಯ, ಸಂಗೀತಳೂ ಹೊರತಲ್ಲ. ಬಡತನದಲ್ಲೂ ಸುಂದರವಾಗಿ ಅರಳಿದ ಕುಸುಮ, ಬಾಲ್ಯವಿನ್ನೂ ಪೂರ್ಣವಾಗಿ ಕಳಚದ ಅಪಕ್ವ ಮನ, ಶರೀರ. ಯಾವುದೋ ಮನೆಯೊಂದರ ಮುಂದೆ ತರುಣನೊಬ್ಬ ಕೇಳಿದನೆಂದು ಕುಳಿತುಕೊಂಡು ಏನಾದರೂ ತಿನ್ನಲು ಸಿಗುತ್ತದೆ ಎಂಬ ಆಸೆಯಿಂದ ಹಾಡು ಹೇಳಿದ ಮುಗ್ಧ ಕಿಶೋರಿಯನ್ನು ತನ್ನ ದೈಹಿಕ ವಾಂಛೆಗೆ ಬಳಸಿಕೊಂಡದ್ದು ತಿಳಿಯದ ಅವಳಿಗೆ ,ಅರಿವಾದದ್ದು ತಾನು ಐದು ತಿಂಗಳ ಬಸಿರನ್ನು ಹೊತ್ತಾಗಲೇ! ಇವಳ ಸ್ಥಿತಿಯನ್ನು ಗಮನಿಸಲೂ ಪುರುಸೊತ್ತಿಲ್ಲದ ಸಂಸಾರದ ಜಂಜಾಟದಲ್ಲಿ ಒದ್ದಾಡುತ್ತಿದ್ದ ತಂದೆ ತಾಯಿಗಳಿಗೆ ಅರಿವಾದಾಗ, ಕಾಲ ಮೀರಿತ್ತು. ಯಾರದೋ ಕೈ ಕಾಲು ಹಿಡಿದು ಗುಟ್ಟಾಗಿ ಆಸ್ಪತ್ರೆಗೆ ಅಲೆದು, ಬಸಿರನ್ನು ಇಳಿಸುವ ಕಾರ್ಯದಲ್ಲಿ ಆ ಮುಗ್ಧ ಜೀವವೇ ಮುರುಟಿ ಹೋಗಿತ್ತು. ಮರಳಿ ಬಾರದ ಲೋಕಕ್ಕೆ ಸಂಗೀತ ಪಯಣಿಸಿಯಾಗಿತ್ತು. ಬಾಲ್ಯ, ಯೌವ್ವನ, ಕನಸು, ಭವಿಷ್ಯ….. ಎಲ್ಲವನ್ನೂ ಮಣ್ಣುಗೂಡಿಸಿತ್ತು. ಮುಂದೆ ಸಂಗೀತಳ ತಂದೆ ತಾಯಿಯರ ಸಂಸಾರ ಬೇರೆ ಊರಿಗೆ ಹೊರಟು ಹೋಗಿತ್ತು.
ಕಾಲ ಎಷ್ಟೇ ಬದಲಾಗುತ್ತಿರಲಿ, ಪುಟ್ಟ ಮಕ್ಕಳಿಗೆ ತಿಂಡಿಗಳೆಂದರೆ ಯಾವತ್ತೂ ಆಸೆಯೇ! ಅದರಲ್ಲೂ ಮನೆಯವರಲ್ಲದೆ ಬೇರೆಯವರು ಏನೇ ಕೊಟ್ಟರೂ ಅದೊಂದು ಹೆಮ್ಮೆಯ ವಿಷಯವಾಗಿ ತಿಳಿದುಕೊಳ್ಳುವ ಮುಗ್ಧ ಮನಸ್ಸು. ಆರತಿಯನ್ನು ಭಯಪಡಿಸಿದ್ದು ಇದೇ ವಿಷಯ! ಗಂಡನೂ ಸದ್ಯ ತನ್ನ ಜೊತೆಗಿಲ್ಲ , ಮಗಳನ್ನು ಬೆಳೆಸುವುದು ಎಷ್ಟು ಕಷ್ಟ! ಜೋರಾಗಿ ಹೇಳಿದರೆ ಬೇಸರ ಮಾಡಿಕೊಳ್ಳುತ್ತಾಳೆ, ಅಳುತ್ತಾಳೆ… ಹೆದರಲೂಬಹುದು…ಹೇಳದಿದ್ದರೆ … ಮುಂದೆ ಯಾವ ಕಷ್ಟಕ್ಕೆ ಸಿಲುಕುತ್ತಾಳೋ? ಸಕ್ಕರೆಯಂತಹ ಮಾತುಗಳು, ಸಣ್ಣ ಪುಟ್ಟ ಆಮಿಷಗಳು, ಮಕ್ಕಳ ಮನಸ್ಸನ್ನು ಸಹಜವಾಗಿ ಗೆದ್ದು ಬಿಡುತ್ತವೆ. ಒಳ್ಳೆಯ ಸ್ಪರ್ಶ …ಕೆಟ್ಟ ಸ್ಪರ್ಶ… ಇವುಗಳ ಅರಿವಿರುವುದಿಲ್ಲ… ಇಂತಹವುಗಳನ್ನು ಮಕ್ಕಳಿಗೆ ತಿಳಿ ಹೇಳುವುದು ಹೇಗೆ?
ಏನಾದರೂ ಆಗಲಿ ಮಗಳನ್ನು ಮಡಿಲಲ್ಲಿ ಕುಳ್ಳಿರಿಸಿಕೊಂಡು ನಿಧಾನವಾಗಿ ಒಳಿತು ಕೆಡಕುಗಳ ಬಗ್ಗೆ ತಿಳಿಸಿ ಹೇಳುತ್ತೇನೆ … ಸಣ್ಣ ಸಣ್ಣ ಕಥೆಗಳ ಮೂಲಕ ನಗುನಗುತ್ತಾ… ಅವಳನ್ನು ನಗಿಸುತ್ತಾ… ಮಗಳಿಗೆ ಯಾರು ಏನೇ ಕೊಟ್ಟರೂ ತೆಗೆದುಕೊಳ್ಳಬಾರದೆಂದು… ಯಾರೂ ತನ್ನನ್ನು ಮುಟ್ಟಿ ಮಾತನಾಡಿಸಬಾರದೆಂದು… ಏನೇ ಬೇಕಿದ್ದರೂ ಅಮ್ಮನನ್ನು ಮಾತ್ರವೇ ಕೇಳಬೇಕೆಂದು… ಅಮ್ಮ ಬೇಸರ ಮಾಡಿಕೊಂಡರೆ … ಕೋಪ ಮಾಡಿಕೊಂಡರೆ ಮಗಳು ಇಷ್ಟಪಡುವುದಿಲ್ಲ… ಅದನ್ನೇ ಮುಖ್ಯವಾಗಿ ಇಟ್ಟುಕೊಂಡು… ಅವಳಿಗೆ ತಿಳಿ ಹೇಳುತ್ತೇನೆ… ನಿರ್ಧರಿಸಿದ ಆರತಿಯ ಮನ ಹಗುರಾಗಿ ಮೆಲ್ಲಗೆ ನಿದ್ರೆಯಾವರಿಸಿತು.
ಮೈಥಿಲಿ ಗೋಪಿನಾಥ್. ***************





