ಶಾಖದ ಈ ಉರಿಬಿಸಿಲಿನ ದಿನಗಳಿಗೆ ಏನಾದರೂ ಒಂದಿಷ್ಟು ಸೊಗಸಾದ ಕೂಲ್ ಡ್ರಿಂಕ್ಸ್, ಡಿಫರೆಂಟ್ ಆದ ಸ್ನಾಕ್ಸ್ ಇದ್ದರೆ ಎಂಥ ಮಜಾ ಅಲ್ಲವೇ….?
ಅರಳಿನ ಪಕೋಡ
ಸಾಮಗ್ರಿ : 2 ಕಪ್ ಅರಳು (ರೆಡಿಮೇಡ್ ಲಭ್ಯ), ಅರ್ಧರ್ಧ ಕಪ್ ಕಡಲೆಹಿಟ್ಟು ಆರಾರೂಟ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಚಾಟ್ ಮಸಾಲ, ವೈಟ್ ಪೆಪ್ಪರ್, ಬ್ಲ್ಯಾಕ್ ಸಾಲ್ಟ್, ಸೋಂಪು, ಇಂಗು, ಅಮ್ಚೂರ್ ಪುಡಿ, ಸಣ್ಣಗೆ ಹೆಚ್ಚಿದ ಹಸಿ ಮೆಣಸು, ಶುಂಠಿ, ಕೊ.ಸೊಪ್ಪು, ಪುದೀನಾ, ಕರಿಬೇವು, ಕರಿಯಲು ರೀಫೈಂಡ್ ಎಣ್ಣೆ.
ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಒಂದು ಬೇಸನ್ನಿಗೆ ಹಾಕಿಕೊಂಡು, ಅಗತ್ಯವಿರುವಷ್ಟು ನೀರು ಚಿಮುಕಿಸುತ್ತಾ, ಮಾಮೂಲಿ ಪಕೋಡಾ ಮಿಶ್ರಣದ ಹದಕ್ಕೆ ಕಲಸಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ಮಿಶ್ರಣ ತೆಗೆದುಕೊಂಡು, ಅದನ್ನು ಎಣ್ಣೆಗೆ ಬಿಡುತ್ತಾ, ಹೊಂಬಣ್ಣಕ್ಕೆ ತಿರುಗುವಂತೆ ಗರಿಗರಿಯಾಗಿ ಕರಿಯಿರಿ. ಬಿಸಿ ಇರುವಾಗಲೇ ಇದನ್ನು ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

ಆ್ಯಪಲ್ ಹನೀ ಹಾಟ್ ಡ್ರಿಂಕ್
ಸಾಮಗ್ರಿ : ಮಧ್ಯಮ ಗಾತ್ರದ 2 ಮಾಗಿದ ಸೇಬು, 2 ಲವಂಗ, 1 ಸಣ್ಣ ತುಂಡು ದಾಲ್ಚಿನ್ನಿ, 3 ಕಪ್ ನೀರು, 2 ಸಣ್ಣ ಚಮಚ ಗ್ರೀನ್ ಟೀ ಲೀಫ್, ರುಚಿಗೆ ತಕ್ಕಷ್ಟು ಸಕ್ಕರೆ, ಜೇನುತುಪ್ಪ, ನಿಂಬೆರಸ, ತುಸು ಪುದೀನಾ.
ವಿಧಾನ : ಸೇಬಿನ ಸಿಪ್ಪೆ ಹೆರೆದು ನೀಟಾಗಿ ತುರಿದಿಡಿ. ಒಂದು ಸ್ಟೀಲ್ ಬಟ್ಟಲಿಗೆ 3 ಕಪ್ ನೀರು ಬೆರೆಸಿ ಬಿಸಿ ಮಾಡಿ. ಅದಕ್ಕೆ ಲವಂಗ, ಚಕ್ಕೆ, ತುರಿದ ಸೇಬು ಸೇರಿಸಿ ಹದನಾಗಿ ಬೇಯಿಸಿ. ನಂತರ ಕೆಳಗಿಳಿಸಿ ಸೋಸಿಕೊಂಡು ಸೇಬು ಬೇರ್ಪಡಿಸಿ, ಬೇರೆ ಅಡುಗೆಗೆ ಬಳಸಿರಿ. ಈ ರಸಕ್ಕೆ ಗ್ರೀನ್ ಲೀಫ್ ಟೀ ಬೆರೆಸಿ ಕುದಿಸಬೇಕು. ಜೊತೆಗೆ ಸಕ್ಕರೆಯನ್ನೂ ಸೇರಿಸಿ. ಇದನ್ನು ಬೇರೆ ಬೇರೆ ಕಪ್ ಗಳಿಗೆ ಬಸಿದು, ಅಗತ್ಯವಿದ್ದಷ್ಟು ಜೇನುತುಪ್ಪ ಬೆರೆಸಿರಿ. ಚಿತ್ರದಲ್ಲಿರುವಂತೆ ನಿಂಬೆ ಹೋಳಿನಿಂದ ಅಲಂಕರಿಸಿ, ಮೇಲೆ ತುಸು ಪುದೀನಾ ಉದುರಿಸಿ ಬಿಸಿಯಾಗಿ ಅಥವಾ 1 ಗಂಟೆ ಕಾಲ ಫ್ರಿಜ್ ನಲ್ಲಿರಿಸಿ, ನಂತರ ಕೂಲ್ ಕೂಲ್ ಆಗಿ ಸೇವಿಸಿ!
ಬಿರು ಬೇಸಿಗೆಯ ಈ ದಿನಗಳಿಗೆ ಇಂಥ ಸೊಗಸಾದ ಕೂಲ್ ಡ್ರಿಂಕ್ಸ್ ಇದ್ದರೆ ಎಷ್ಟು ಚೆನ್ನ ಅಲ್ಲವೇ?

ನೆಲ್ಲಿಯ ಹರ್ಬಲ್ ಡ್ರಿಂಕ್ಸ್
ಸಾಮಗ್ರಿ : 250 ಗ್ರಾಂ ನೆಲ್ಲಿಕಾಯಿಯ ತುರಿ, ರುಚಿಗೆ ತಕ್ಕಷ್ಟು ಬ್ಲ್ಯಾಕ್ ಸಾಲ್ಟ್, ವೈಟ್ ಪೆಪ್ಪರ್, ಜೀರಿಗೆ ಪುಡಿ, ಜೇನುತುಪ್ಪ, ಬ್ರೌನ್ ಶುಗರ್ (ಬೆಲ್ಲದ ಪುಡಿ), ತುಸು ಫ್ರಿಜ್ ನೀರು, ಪುಡಿ ಐಸ್, ಪುದೀನಾ.
ವಿಧಾನ : ನೀಟಾಗಿ ತುರಿದ ನೆಲ್ಲಿಯನ್ನು ಚಿಟಕಿ ಉಪ್ಪಿನೊಂದಿಗೆ ನೀರು ಬೆರೆಸದೆ ಮಿಕ್ಸಿಗೆ ಹಾಕಿ, ನುಣ್ಣಗೆ ಮಾಡಿಕೊಳ್ಳಿ. ಇದನ್ನು ಬಟ್ಟಲಿಗೆ ಹಾಕಿಕೊಂಡು, ಜೇನುತುಪ್ಪ, ಸಕ್ಕರೆ ಬೆರೆಸಿ (ಅರ್ಧ ಕಪ್ ನೀರಿನೊಂದಿಗೆ) 1-2 ಕುದಿ ಬರಿಸಿ. ಕೆಳಗಿಳಿಸಿ ಚೆನ್ನಾಗಿ ಕೂಲ್ ಆದ ನಂತರ, ಇದನ್ನು 2-3 ಗ್ಲಾಸುಗಳಿಗೆ ಸಮನಾಗಿ ಸುರಿಯಿರಿ. ಇದರ ಮೇಲೆ ಒಂದಿಷ್ಟು ಜಜ್ಜಿದ ಪುದೀನಾ, ಉಳಿದೆಲ್ಲ ಸಾಮಗ್ರಿ ಸಮನಾಗಿ ಹರಡಿ ಚೆನ್ನಾಗಿ ಕದಡಿಕೊಳ್ಳಿ. ಚಿತ್ರದಲ್ಲಿರುವಂತೆ ಅಲಂಕರಿಸಿ ತಣ್ಣಗೆ ಸವಿಯಲು ಕೊಡಿ.

ಫ್ರೆಶ್ ಫ್ರೂಟ್ ಸಲಾಡ್ ವಿತ್ ಹನೀ
ಸಾಮಗ್ರಿ : 3-4 ಕಪ್ ತುಂಡರಿಸಿದ ತಾಜಾ ಹಣ್ಣಿನ ಹೋಳು (ಸ್ಟ್ರಾಬೆರಿ, ಕಿವೀ ಫ್ರೂಟ್, ಬಾಳೆಹಣ್ಣು, ಸೇಬು, ದ್ರಾಕ್ಷಿ, ಸೀಡ್ಲೆಸ್ ದಾಳಿಂಬೆ ಹರಳು, ಕಿತ್ತಳೆ ತೊಳೆ), ರುಚಿಗೆ ತಕ್ಕಷ್ಟು ಹಂಗ್ ಕರ್ಡ್ (ತೇಲಾಂಶರಹಿತ ಗಟ್ಟಿ ಕೆನೆ ಮೊಸರು), ನಿಂಬೆರಸ, ಜೇನುತುಪ್ಪ, ಚಾಕಲೇಟ್ ಸಾಸ್, ಬ್ಲ್ಯಾಕ್ ಸಾಲ್ಟ್, ವೈಟ್ ಪೆಪ್ಪರ್, ದಾಲ್ಚಿನ್ನಿ ಪುಡಿ.
ವಿಧಾನ : ಒಂದು ಬಟ್ಟಲಲ್ಲಿ ಹೆಚ್ಚಿದ ಹಣ್ಣು ಹರಡಿ, ಅದರ ಮೇಲೆ ನಿಂಬೆಹಣ್ಣು ಹಿಂಡಿಕೊಳ್ಳಿ. ಹಂಗ್ ಕರ್ಡ್ ಗೆ ಉಳಿದೆಲ್ಲ ಸಾಮಗ್ರಿ ಹಾಕಿ ಚೆನ್ನಾಗಿ ಗೊಟಾಯಿಸಿ, ಹಣ್ಣಿನ ಮೇಲೆ ಹರಡಿರಿ. ಚಾಕಲೇಟ್ ಸಾಸ್ ನಿಂದ ಅಲಂಕರಿಸಿ, 1-2 ತಾಸು ಫ್ರಿಜ್ ನಲ್ಲಿರಿಸಿ ಸವಿಯಲು ಕೊಡಿ.
ಈ ಸಮ್ಮರ್ ನ ಧಗೆಯ ದೂರ ಮಾಡಲು ಫ್ರೆಶ್ ಫ್ರೂಟ್ ಸಲಾಡ್, ಹನೀ ಡೋಕ್ಲಾಗಳನ್ನು ಟ್ರೈ ಮಾಡಿ ನೋಡಿ!

ಹನೀ ಚಿಲೀ ಡೋಕ್ಲಾ
ಮೂಲ ಸಾಮಗ್ರಿ : 1 ಕಪ್ ಕಡಲೆಹಿಟ್ಟು, ಅರ್ಧ ಕಪ್ ಸಣ್ಣ ರವೆ, ಹುಳಿ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ-ಹಸಿಮೆಣಸಿನ ಪೇಸ್ಟ್, ಅರಿಶಿನ, ಜೇನುತುಪ್ಪ, ನಿಂಬೆರಸ, ಬೇಕಿಂಗ್ ಸೋಡ, ಅರ್ಧ ಸೌಟು ರೀಫೈಂಡ್ ಎಣ್ಣೆ.
ಒಗ್ಗರಣೆಗಾಗಿ ಸಾಮಗ್ರಿ : ಅಗತ್ಯವಿದ್ದಷ್ಟು ಸಾಸುವೆ, ಜೀರಿಗೆ, ಕರಿಬೇವು, ದಪ್ಪಗೆ ಹೆಚ್ಚಿದ ಹಸಿ ಮೆಣಸು, ಜೇನುತುಪ್ಪ, ನಿಂಬೆರಸ, ಕಾಯಿತುರಿ.
ವಿಧಾನ : ಕಡಲೆಹಿಟ್ಟಿಗೆ ಬೇಕಿಂಗ್ ಸೋಡ ಹಾಗೂ ಉಳಿದೆಲ್ಲ ಸಾಮಗ್ರಿಗಳೊಂದಿಗೆ ಬೆಚ್ಚಗಿನ ನೀರು ಬೆರೆಸಿ ಇಡ್ಲಿ ಹಿಟ್ಟಿನ ಮಿಶ್ರಣದಂತೆ ಕಲಸಿಡಿ. ಇಡ್ಲಿ ಸ್ಟಾಂಡ್ ಗೆ ತುಸು ಎಣ್ಣೆ ಸವರಿ, ಇದರಿಂದ ಪುಟ್ಟ ಪುಟ್ಟ ಇಡ್ಲಿ ತಯಾರಿಸಿ. ಕೆಳಗಿಳಿಸಿ ಆರಿದ ನಂತರ, ಅವನ್ನು ಹೀಗೆ ಚೌಕಾಕಾರವಾಗಿ ಕತ್ತರಿಸಿ. ಎಣ್ಣೆ ಬಿಸಿ ಮಾಡಿ ಒಗ್ಗರಣೆ ಸಾಮಗ್ರಿ ಬೆರೆಸಿ ಚಟಪಟಾಯಿಸಿ. ಇದನ್ನು ತುಂಡುಗಳ ಮೇಲೆ ಹರಡಿ, ಜೇನುತುಪ್ಪ, ನಿಂಬೆರಸ ಸಿಂಪಡಿಸಿ. ಚಿತ್ರದಲ್ಲಿರುವಂತೆ ಅಲಂಕರಿಸಿ, ಬಿಸಿಯಾಗಿ ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.
ಎಂದಿನ ಬದನೆಕಾಯಿ ಪಲ್ಯ, ಗೊಜ್ಜು ಬೇಸರಾದಾಗ, ಈ ರೀತಿ ಎಣ್ಣೆಗಾಯಿ ಮಾಡಿ ಸವಿಯಬಾರದೇಕೆ….?

ಗ್ರಾಂಡ್ ಬದನೆ ಎಣ್ಣೆಗಾಯಿ
ಸಾಮಗ್ರಿ : 10-12 ಸಣ್ಣ ಗುಂಡುಬದನೆ, 4-5 ಹುಳಿ ಟೊಮೇಟೊ, 2-3 ಈರುಳ್ಳಿ, 1-2 ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಅರಿಶಿನ, ಜೀರಿಗೆ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2-3 ಪಲಾವ್ ಎಲೆ, ಲವಂಗ, ಚಕ್ಕೆ, ಮೊಗ್ಗು, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ಅರ್ಧ ಸೌಟು ರೀಫೈಂಡ್ ಎಣ್ಣೆ.
ವಿಧಾನ : ಬದನೆ ಶುಚಿಗೊಳಿಸಿ, ಒರೆಸಿ, ಉದ್ದಕ್ಕೆ 2 ಭಾಗವಾಗಿ ಸೀಳಿರಿ. ತೊಟ್ಟು ಬಿಟ್ಟುಕೊಳ್ಳಬಾರದು. ಮಿಕ್ಸಿಗೆ 1-2 ಟೊಮೇಟೊ, ಹಸಿ ಮೆಣಸು ಹಾಕಿ ರುಬ್ಬಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಲವಂಗದೆಲೆ, ಚಕ್ಕೆ, ಲವಂಗ, ಮೊಗ್ಗು ಹಾಕಿ ಚಟಪಟಾಯಿಸಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಕೆದಕಬೇಕು. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಬೇಕು. ಆಮೇಲೆ ಹೆಚ್ಚಿದ ಟೊಮೇಟೊ ಹಾಕಿ ಬಾಡಿಸಿ. ಬದನೆಗೆ ರುಬ್ಬಿದ ಪೇಸ್ಟ್ ತುಂಬಿಸಿ, ಬಾಣಲೆಗೆ ಹಾಕಿ ಮಂದ ಉರಿಯಲ್ಲಿ ಹದನಾಗಿ ಬಾಡಿಸಿ. ಗ್ರೇವಿ ಗಟ್ಟಿ ಎನಿಸಿದರೆ ಅರ್ಧ ಕಪ್ ನೀರು ಬೆರೆಸಿ ಚೆನ್ನಾಗಿ ಕುದಿಸಿರಿ. ನಂತರ ಇದನ್ನು ಬಿಸಿ ಇರುವಾಗಲೇ ಚಪಾತಿ/ ಪೂರಿ ಜೊತೆ ಸವಿಯಲು ಕೊಡಿ.

ವೆಜ್ಜಿ ಸೋಯಾಬೀನ್
ಸಾಮಗ್ರಿ : 1 ಕಪ್ ಸೋಯಾಬೀನ್ ಚಂಕ್ಸ್ (1 ಗಂಟೆ ಕಾಲ ಬಿಸಿ ನೀರಲ್ಲಿ ನೆನೆಹಾಕಿಡಿ), 3 ಬಗೆಯ 1-1 ಕ್ಯಾಪ್ಸಿಕಂ, 2 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಟೊಮೇಟೊ ಪೇಸ್ಟ್, ಶುಂಠಿ/ಬೆಳ್ಳುಳ್ಳಿ/ಹಸಿ ಮೆಣಸಿನ ಪೇಸ್ಟ್, ಅರ್ಧ ಪ್ಯಾಕೆಟ್ ಚಿಲೀ ಪನೀರ್ ಮಸಾಲ, ಅರ್ಧ ಕಪ್ ಗಟ್ಟಿ ಹಾಲು, ಅರ್ಧ ಸೌಟು ಎಣ್ಣೆ.
ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ 3 ಬಗೆ ಪೇಸ್ಟ್ ಹಾಕಿ ಕೈಯಾಡಿಸಿ. ನಂತರ ಟೊಮೇಟೊ ಪೇಸ್ಟ್ ಹಾಕಿ ಬಾಡಿಸಿ. ಆಮೇಲೆ ನೆನೆದ ಸೋಯಾ ಚಂಕ್ಸ್, ಹೆಚ್ಚಿದ ಕ್ಯಾಪ್ಸಿಕಂ ಹಾಕಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕೆದಕಿರಿ. ನಂತರ ಉಪ್ಪು, ಖಾರ, ಉಳಿದೆಲ್ಲ ಮಸಾಲೆ ಹಾಕಿ ಕೆದಕಬೇಕು. ನಂತರ ಹಾಲು ಬೆರೆಸಿ ಗ್ರೇವಿಯನ್ನು ಬೇಕಾದ ಹದಕ್ಕೆ ತಂದು ಕುದಿಸಿ ಕೆಳಗಿಳಿಸಿ. ಇದರ ಮೇಲೆ ಹೆಚ್ಚಿದ ಕೊ.ಸೊಪ್ಪು, ಈರುಳ್ಳಿ ತೆನೆ ಉದುರಿಸಿ, ಬಿಸಿ ಬಿಸಿಯಾಗಿ ಅನ್ನ, ಚಪಾತಿ ಜೊತೆ ಸವಿಯಿರಿ.
ಚಪಾತಿ, ಪೂರಿ ಇತ್ಯಾದಿಗಳಿಗೆ ಏನಾದರೂ ಹೊಸ ಸೈಡ್ಸ್ ಬೇಕಲ್ಲ…..? ಇಲ್ಲಿದೆ, ಟ್ರೈ ಮಾಡಿ ನೋಡಿ!

ಹೀರೇಕಾಯಿ ತೊವ್ವೆ
ಸಾಮಗ್ರಿ : ಅರ್ಧ ಕಪ್ ಮೊಳಕೆ ಬಂದ ಹೆಸರುಕಾಳು, 500 ಗ್ರಾಂ ಹೀರೇಕಾಯಿ, 2-3 ಈರುಳ್ಳಿ, 1 ಆಲೂ, 3-4 ಹಸಿ ಮೆಣಸು, 2-3 ಹುಳಿ ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ತೆಂಗಿನತುರಿ, ಒಗ್ಗರಣೆ ಸಾಮಗ್ರಿ, ಅರ್ಧ ಸೌಟು ಎಣ್ಣೆ.
ವಿಧಾನ : ಮೊದಲು ಎಲ್ಲಾ ತರಕಾರಿ ನೀಟಾಗಿ ಶುಚಿಗೊಳಿಸಿ ಹೆಚ್ಚಿಡಿ. ಚಿಕ್ಕ ಕುಕ್ಕರ್ ನಲ್ಲಿ ಮೊಳಕೆ ಕಾಳಿನೊಂದಿಗೆ ಆಲೂ, ಹೀರೇಕಾಯಿ ಹೋಳು ಹಾಕಿ 1 ಸೀಟಿ ಕೂಗುವಂತೆ ಬೇಯಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಮೊದಲು ಒಗ್ಗರಣೆ ಕೊಡಿ. ನಂತರ ಹೆಚ್ಚಿದ ಹಸಿ ಮೆಣಸು, ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಹೆಚ್ಚಿದ ಟೊಮೇಟೊ ಹಾಕಿ ಬಾಡಿಸಿ. ನಂತರ ಉಪ್ಪು, ಖಾರ ಇತ್ಯಾದಿ ಎಲ್ಲಾ ಸೇರಿಸಿ ಕೈಯಾಡಿಸಿ. ಕೊನೆಯಲ್ಲಿ ಬೆಂದ ಕಾಳು, ಕಾಯಿ ಹಾಕಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕೆದಕಿ ಕೆಳಗಿಳಿಸಿ. ಅಗತ್ಯ ಎನಿಸಿದರೆ ನಿಂಬೆಹಣ್ಣು ಹಿಂಡಿಕೊಳ್ಳಿ. ಅನ್ನ, ಚಪಾತಿಗೆ ಸೊಗಸಾಗಿ ಹೊಂದುತ್ತದೆ.





