– ರಾಘವೇಂದ್ರ ಅಡಿಗ ಎಚ್ಚೆನ್.
ಭಾರತೀಯ ಸಂಗೀತ ಲೋಕದ ಅಮರ ಧ್ವನಿ, ಗಾನಕೋಗಿಲೆ ಆಶಾ ಭೋಸ್ಲೆ ಅವರು ಏಪ್ರಿಲ್ 12ರಂದು ಮುಂಬೈನಲ್ಲಿ 92ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಸಂಗೀತ ಜಗತ್ತನ್ನು ದುಃಖ ಸಾಗರದಲ್ಲಿ ಮುಳುಗಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಕೊನೆಯುಸಿರೆಳೆದರು.
ಇಂದು ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದ ಈ ಮಹಾನ್ ಗಾಯಕಿಗೆ ಅಂತಿಮ ವಿದಾಯ ಹೇಳಲು ಗಣ್ಯರು, ಅಭಿಮಾನಿಗಳು ಆಗಮಿಸಿದ್ದರು.
ಆಶಾ ಪರೇಖ್, ಸಚಿನ್ ತೆಂಡೂಲ್ಕರ್, ಎ.ಆರ್. ರೆಹಮಾನ್ ಸೇರಿದಂತೆ ಅನೇಕ ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.
1933ರ ಸೆಪ್ಟೆಂಬರ್ 8ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ ಆಶಾ ಭೋಸ್ಲೆ, ಸಂಗೀತದ ಮನೆತನದಲ್ಲೇ ಬೆಳೆದವರು. ತಂದೆ ಪಂಡಿತ್ ದೀನನಾಥ್ ಮಂಗೇಶ್ಕರ್ ಅವರ ಸಂಗೀತ ಪರಂಪರೆಯನ್ನು ಮುಂದುವರಿಸಿಕೊಂಡು, ಲತಾ ಮಂಗೇಶ್ಕರ್ ಸೇರಿದಂತೆ ಸಹೋದರ-ಸಹೋದರಿಯರೊಂದಿಗೆ ಭಾರತೀಯ ಸಂಗೀತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು.
ಏಳು ದಶಕಗಳಿಗೂ ಹೆಚ್ಚು ಕಾಲದ ತಮ್ಮ ವೃತ್ತಿಜೀವನದಲ್ಲಿ ಸಾವಿರಾರು ಹಾಡುಗಳಿಗೆ ಧ್ವನಿಯಾದ ಆಶಾ ಭೋಸ್ಲೆ, “ದಿಲ್ ಚೀಝ್ ಕ್ಯಾ ಹೈ”, “ಪಿಯಾ ತು ಅಬ್ ತೋ ಆಜಾ”, “ಚುರಾ ಲಿಯಾ ಹೈ ತುಮ್ನೆ” ಮೊದಲಾದ ಅನೇಕ ಅಮರ ಗೀತೆಗಳ ಮೂಲಕ ಪೀಳಿಗೆಗಳ ಮನಸ್ಸನ್ನು ಗೆದ್ದರು.
ಹಿಂದಿ ಮಾತ್ರವಲ್ಲ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿ ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ ಅವರು, ಭಾರತೀಯ ಸಂಗೀತ ಇತಿಹಾಸದಲ್ಲಿ ಅಳಿಸದ ಗುರುತು ಮೂಡಿಸಿದ್ದಾರೆ. ಅವರ ನಿಧನವನ್ನು ಅನೇಕರೂ “ಒಂದು ಯುಗದ ಅಂತ್ಯ” ಎಂದು ವರ್ಣಿಸಿದ್ದಾರೆ.





