–  
ರಾಘವೇಂದ್ರ ಅಡಿಗ ಎಚ್ಚೆನ್.

ಭಾರತೀಯ ಸಿನಿರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಟಾಕ್ಸಿಕ್ ಕುರಿತು ನಟ ಯಶ್ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಮಾರ್ಚ್ 19ರಂದು ಬಿಡುಗಡೆಯಾಗಬೇಕಿದ್ದ ಈ ಸಿನಿಮಾ, ಪರಿಸ್ಥಿತಿಗಳ ಹಿನ್ನೆಲೆ ಮುಂದೂಡಲ್ಪಟ್ಟು ಇದೀಗ ಜೂನ್ 04ರಂದು ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ.
ಲಾಸ್ ಏಂಜಲ್ಸ್‌ನಲ್ಲಿ ನಡೆದ ಸಿನಿಮಾಕಾನ್ 2026 ಕಾರ್ಯಕ್ರಮದಲ್ಲಿ ‘ರಾಮಾಯಣ’ ಚಿತ್ರದ ಪ್ರಚಾರದ ವೇಳೆ ಮಾತನಾಡಿದ ಯಶ್, ‘ಟಾಕ್ಸಿಕ್’ ಸಿನಿಮಾದ ವಿಶೇಷತೆಗಳನ್ನೂ ವಿವರಿಸಿದರು.
ಹಾಲಿವುಡ್ ಮಾಧ್ಯಮಗಳಾದ ಫ್ಯಾಂಡಾಂಗೊ ಮತ್ತು ರೋಟನ್ ಟೊಮೇಟೋಸ್ ಜೊತೆ ಮಾತನಾಡಿದ ಅವರು, “ಟಾಕ್ಸಿಕ್ ಬಹಳ ಮಹತ್ವಾಕಾಂಕ್ಷೆಯ ಸಿನಿಮಾ. ಮೊದಲ ಬಾರಿಗೆ ನಾವು ಭಾರತೀಯ ಭಾಷೆಗಳ ಜೊತೆಗೆ ಇಂಗ್ಲಿಷ್‌ನಲ್ಲೂ ಚಿತ್ರೀಕರಣ ಮಾಡಿದ್ದೇವೆ” ಎಂದು ತಿಳಿಸಿದ್ದಾರೆ.
ಕಥೆಯ ಬಗ್ಗೆ ವಿವರಿಸಿದ ಯಶ್, “ಮೇಲ್ನೋಟಕ್ಕೆ ಇದು ಗ್ಯಾಂಗ್ಸ್ಟರ್ ಸಿನಿಮಾ ಅನಿಸಬಹುದು. ಆದರೆ ಅದರ ಅಂತರಾಳದಲ್ಲಿ ಸೈಕಾಲಜಿಕಲ್ ಥ್ರಿಲ್ಲರ್ ಅಂಶಗಳು ಹಾಗೂ ಮಾನವೀಯ ಭಾವನೆಗಳೂ ಅಡಗಿವೆ. ಇದು ಬಹುಪದರಗಳ ಕಥೆಯಾಗಿದೆ” ಎಂದರು.
ಇನ್ನಷ್ಟು ವಿವರಿಸಿದ ಅವರು, “ಡಾರ್ಕ್ ಪಾತ್ರವನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸಿರುವ ಸಿನಿಮಾ ಇದು. ನನ್ನ ನಿರ್ದೇಶಕಿ ಗೀತು ಮೋಹನ್ದಾಸ್ ಗ್ಯಾಂಗ್ಸ್ಟರ್ ಕಥೆಯನ್ನು ಹೊಸ ದೃಷ್ಟಿಕೋನದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ನಟಿಸುವುದನ್ನು ನಾನು ಬಹಳ ಎಂಜಾಯ್ ಮಾಡಿದ್ದೇನೆ. ಇದು ಕಣ್ಣಿಗೆ ಹಬ್ಬವಾಗುವುದಷ್ಟೇ ಅಲ್ಲ, ಪ್ರೇಕ್ಷಕರ ಮನಸ್ಸಿನ ಮೇಲೂ ಗಾಢ ಪರಿಣಾಮ ಬೀರುತ್ತದೆ” ಎಂದು ಹೇಳಿದ್ದಾರೆ.
ಟೀಸರ್‌ಗಳಲ್ಲಿ ಹಿಂಸಾಚಾರ ಮತ್ತು ಲೈಂಗಿಕ ಅಂಶಗಳು ಹೆಚ್ಚು ಕಂಡರೂ, ಅವು ಕೇವಲ ಮೇಲ್ನೋಟದ ಅಂಶಗಳು ಮಾತ್ರ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ. ಸಿನಿಮಾದ ಅಂತರಾಳದಲ್ಲಿ ಮಾನವೀಯ ಮೌಲ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂಬುದು ಗಮನಾರ್ಹ.
ಒಟ್ಟಿನಲ್ಲಿ, ಟಾಕ್ಸಿಕ್ ಸಿನಿಮಾ ಜೂನ್ 04ರಂದು ಬಿಡುಗಡೆಯಾಗಿ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲು ಸಿದ್ಧವಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ