– ರಾಘವೇಂದ್ರ ಅಡಿಗ ಎಚ್ಚೆನ್.
ಮಂಜು ಕವಿ ನಿರ್ದೇಶನ ಮಾಡುತ್ತಿರುವ ’ತಿಕ್ಲು ರಾಮ’ ಸಿನಿಮಾದ ಚಿತ್ರೀಕರಣವು ಈಗಾಗಲೇ ಶೇಕಡ 40ರಷ್ಟು ಮುಗಿದಿದೆ. ಕಥೆ ಬರೆದಿರುವ ರಾಜ್‌ವೀರ್ ಶೀರ್ಷಿಕೆ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಈ ಹಿಂದೆ ‘ಮಾರಕಾಸ್ತ್ರ’ ಚಿತ್ರವನ್ನು ನಿರ್ಮಿಸಿರುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟರಾಜ್ ಈಗ ರಾಜ್‌ವೀರ್ ಹೆಸರಿನಲ್ಲಿ ನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ವಿಶೇಷ. ರಾಮನವಮಿ ದಿನದಂದು ಹೊಸ ಪೋಸ್ಟರ್‌ನ್ನು ಹೊರಬಿಡಲಾಗಿತ್ತು. ಆದರೆ, ಸಿನಿಮಾದ ಶೀರ್ಷಿಕೆ ಸರಿಯಿಲ್ಲವೆಂದು ಹಿಂದೂಪರ ಸಂಘಟನೆಯ ಕಾರ್ಯಕರ್ತ ಗಿರೀಶ್ ಕಾಮಾಕ್ಷಿಪಾಳ್ಯ ಪೋಲೀಸ್ ಠಾಣೆಗೆ ದೂರು ನೀಡಿ, ಸಿನಿಮಾದ ಹೆಸರನ್ನು ಬದಲಾವಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ರಾಜ್‌ವೀರ್, ‘ರಾಮ ಮತ್ತು ಹನುಮನ ಹೆಸರಿಗೆ ಧಕ್ಕೆ ಬಾರದಂತೆ, ಅವಹೇಳನ ಮಾಡದಂತೆ ಇಲ್ಲಿಯವರೆಗೂ ಯಾವುದೇ ಕೆಲಸವನ್ನು ಮಾಡಿಲ್ಲ, ಮಾಡುವುದು ಇಲ್ಲ. ಟೈಟಲ್ ಬಗ್ಗೆ ಲೋಪದೋಷಗಳು ಕಂಡುಬಂದಲ್ಲಿ, ಅದನ್ನು ಸರಿಪಡಿಸಿಕೊಳ್ಳುವುದಾಗಿ ನಿರ್ಮಾಪಕಿ ಶೃತಿ ಜಿ.ಬಿ ಮತ್ತು ನಿರ್ದೇಶಕ ಮಂಜುಕವಿ ಸ್ಪಷ್ಟನೆ ನೀಡಿರುತ್ತಾರೆ. ಒಂದು ವೇಳೆ ರಾಮ, ಹನುಮನ ಅವಹೇಳನ ದೃಶ್ಯಗಳು ಇದ್ದಲ್ಲಿ ಅದನ್ನು ತೆಗೆದು ಹಾಕಲಾಗುವುದು’ ಎಂದು ಹೇಳಿದ್ದಾರೆ. ಈ ಚಿತ್ರದಲ್ಲಿ ಸುಚೇಂದ್ರ ಪಸ್ರಾದ್, ಜಹಾಂಗೀರ್, ಚೈತ್ರರಾಮ್, ಗಿರೀಶ್ ಮುಂತಾದವರು ಅಭಿನಯಿಸುತ್ತಿದ್ದು, ವಿನು ಮನಸು ಹಿನ್ನೆಲೆ ಸಂಗೀತ, ರಾಜ್ ಕಡೂರು-ಭರತ್ ಛಾಯಾಗ್ರಹಣವಿದೆ.





