– ರಾಘವೇಂದ್ರ ಅಡಿಗ ಎಚ್ಚೆನ್.
ಸ್ಟಾರ್ ಸುವರ್ಣನಲ್ಲಿ ಪ್ರಸಾರವಾಗುತ್ತಿರುವ ವಸುದೇವ ಕುಟುಂಬ ಧಾರಾವಾಹಿಯಲ್ಲಿ ದೊಡ್ಡ ವಿವಾದ ಸ್ಫೋಟಗೊಂಡಿದೆ. ನಟ-ನಟಿಯರು ಹಾಗೂ ತಂತ್ರಜ್ಞರು ನಿರ್ಮಾಪಕರ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದು, ಪೊಲೀಸ್ ದೂರು ದಾಖಲಿಸಲು ಸಿದ್ಧರಾಗಿದ್ದಾರೆ.
ಮಾಜಿ ಬಿಗ್‌ಬಾಸ್ ಸ್ಪರ್ಧಿ ಹಂಸ ಮತ್ತು ನಟಿ ಚೈತ್ರಾ ನೇತೃತ್ವದಲ್ಲಿ ಯೂನಿಟ್ ಸದಸ್ಯರು ಇಂದು ನಾಗರಬಾವಿಯ ‘ತತ್ಸವಿ ಹೋಟೆಲ್’ ಬಳಿ ನಿರ್ಮಾಪಕರನ್ನು ಭೇಟಿಯಾಗಿ ಪಾವತಿಗೆ ಒತ್ತಾಯಿಸಿದರು. ಆದರೆ ನಿರ್ಮಾಪಕ ಕೋರಮಂಗಲ ಅನಿಲ್ ಹಾಗೂ ಅವರ ಪತ್ನಿ ಸ್ಥಳದಿಂದಲೇ ಪರಾರಿಯಾಗಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ಸಂಭಾವನೆ ನೀಡದೇ ಇರುವುದರಿಂದ ಕಲಾವಿದರು ಆಕ್ರೋಶಗೊಂಡಿದ್ದಾರೆ. ಹಂಸ ಅವರಿಗೆ ₹3 ಲಕ್ಷಕ್ಕೂ ಹೆಚ್ಚು, ಚೈತ್ರಾ ಅವರಿಗೆ ದೊಡ್ಡ ಮೊತ್ತದ ಹಣ ಬಾಕಿಯಿದೆ ಎನ್ನಲಾಗಿದೆ.

ಇದೇ ವೇಳೆ, ಯೂನಿಟ್ ಸದಸ್ಯರಿಗೆ ಸರಿಯಾದ ಆಹಾರವೂ ನೀಡಿಲ್ಲ, ಕೆಲಸದ ಪರಿಸ್ಥಿತಿಯೂ ದುರ್ಬಲವಾಗಿತ್ತು ಎಂಬ ಆರೋಪಗಳು ಕೇಳಿಬಂದಿವೆ. ಹಣ ಕೇಳಿದ ಕಲಾವಿದರನ್ನು ಬದಲಾಯಿಸುವಂತಹ ಕ್ರಮವೂ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಂಸ ಮಾಧ್ಯಮಗಳ ಮುಂದೆ ಕಿಡಿಕಾರುತ್ತಾ, “ಇವರಿಂದ ನಾವು ಬೇರೆ ಅವಕಾಶಗಳನ್ನೂ ಕಳೆದುಕೊಂಡಿದ್ದೇವೆ. ಇದು ಅನ್ಯಾಯ. ನಾವು ನ್ಯಾಯಕ್ಕಾಗಿ ಪೊಲೀಸ್ ದೂರು ಕೊಡುತ್ತೇವೆ” ಎಂದು ತಿಳಿಸಿದ್ದಾರೆ.
ಸದ್ಯ ಈ ಪ್ರಕರಣ ಕನ್ನಡ ಮನರಂಜನಾ ವಲಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದು, ನಿರ್ಮಾಣ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬರುತ್ತಿದೆ.
ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು

ಕೆಲವು ತಿಂಗಳುಗಳಿಂದ ಸಂಭಾವನೆ ನೀಡದೇ ಇದ್ದುದಲ್ಲದೆ, ಆಹಾರ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನೂ ಸರಿಯಾಗಿ ಒದಗಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಧಾರಾವಾಹಿಯ ಕಲಾವಿದರು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ನಟಿ ಚೈತ್ರಾ ತಮ್ಮ ದೂರಿನಲ್ಲಿ ಸ್ಪಷ್ಟವಾಗಿ ಹೇಳಿರುವಂತೆ, ‘ಕೋರಮಂಗಲ ಟಾಕೀಸ್’ ನಿರ್ಮಾಣ ಸಂಸ್ಥೆಯೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ 30 ದಿನಗಳೊಳಗೆ ಸಂಭಾವನೆ ಪಾವತಿಸಬೇಕಾಗಿತ್ತು. ಆದರೆ ಡಿಸೆಂಬರ್ ತಿಂಗಳ ಎರಡು ದಿನಗಳ ಪಾವತಿ ಹೊರತುಪಡಿಸಿ, ಜನವರಿ, ಫೆಬ್ರವರಿ ಮತ್ತು ಮಾರ್ಚ್ 7, 2026ರವರೆಗೆ ಯಾವುದೇ ಹಣ ಸಿಕ್ಕಿಲ್ಲ. ತಂತ್ರಜ್ಞರಿಗೂ ಇದೇ ಪರಿಸ್ಥಿತಿ ಎದುರಾಗಿದೆ.
ನಿರ್ಮಾಪಕರನ್ನು ಕರೆ ಹಾಗೂ ಸಂದೇಶಗಳ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆ ಸಿಗಲಿಲ್ಲ. ಪಾವತಿ ದಿನಾಂಕದ ಬಗ್ಗೆ ಸಹ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಆರೋಪಿಸಲಾಗಿದೆ.
ಇದರಿಂದ ಬೇಸತ್ತ ಕಲಾವಿದರು ನಾಗರಬಾವಿಯ ‘ತತ್ಸವಿ ಹೋಟೆಲ್’ ಬಳಿ ಹೋಗಿ ವಿಚಾರಿಸಿದಾಗ, ಸರಿಯಾದ ಉತ್ತರ ನೀಡದೇ ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಇದಷ್ಟೇ ಅಲ್ಲದೆ, ಕಲಾವಿದರ ವಿರುದ್ಧವೇ ಜ್ಞಾನಭಾರತಿ ಪೊಲೀಸ್ ಠಾಣೆನಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ





