ಮೇ 10, 2026. ಹೈದರಾಬಾದ್‌ನ ಸೆಕಂದರಾಬಾದ್ ಪರೇಡ್ ಗ್ರೌಂಡ್ಸ್. ಲಕ್ಷಾಂತರ ಜನ ನೆರೆದ BJP ಸಮಾವೇಶ. ಮೈಕ್ ಮುಂದೆ ನಿಂತ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ತಮ್ಮ ದೇಶದ ಜನತೆಗೆ ಕೈ ಎತ್ತಿ ಬೇಡಿಕೊಂಡರು…  “ದಯಮಾಡಿ ಪೆಟ್ರೋಲ್, ಡಿಸೇಲ್ ಬಳಕೆ ತಗ್ಗಿಸಿ. ಇದು ಭಾರಿ ಇಂಧನ ಬಿಕ್ಕಟ್ಟು.”

ಮಾಧ್ಯಮಗಳು ಸೆರೆಹಿಡಿದ ಆ ಕ್ಷಣ ನನ್ನ ಎದೆ ಕಲಕಿತು.

ಒಬ್ಬ ವಕೀಲನಾಗಿ ಮತ್ತು ಹಿರಿಯ ಪತ್ರಕರ್ತನಾದ ಅಡ್ವೊಕೇಟ್ ವೀರೇಂದ್ರಬಾಬು ನಂಜೇಗೌಡ ಆದ ನಾನು ಗಮನಿಸಿದಂತೆ…  ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೊಂದು ಅಭೂತಪೂರ್ವ ಕ್ಷಣ. .

ಈ ಲೇಖನ ರಾಜಕೀಯ ಮಾತಿನ ಮಂಟಪಕ್ಕಾಗಿ ಅಲ್ಲ. ಇದು ಒಬ್ಬ ಸಂವಿಧಾನ ಪ್ರೇಮಿ, ಕಾನೂನು ತಜ್ಞ, ಮತ್ತು ಈ ದೇಶದ ನಾಗರಿಕನಾಗಿ ನಾನು ಅನುಭವಿಸಿದ ಆಕ್ರೋಶ, ನೋವು ಮತ್ತು ಭರವಸೆಯ ಅಭಿವ್ಯಕ್ತಿ.

ಪ್ರತಿ ನಿಮಿಷಕ್ಕೆ ₹3 ಕೋಟಿ… ಇದು ನಿಮ್ಮ ಹಣ

ನಿನ್ನೆ ನೀವು ಪೆಟ್ರೋಲ್ ಹಾಕಿದ್ದೀರಾ? ₹500 ಕೊಟ್ಟಿದ್ದೀರಾ? ಅದರಲ್ಲಿ ₹350 ನೇರವಾಗಿ ಅರಬ್ ದೇಶದ ಅರಮನೆ ಕಟ್ಟಲು ಹೋಗಿದೆ. ನಿಮ್ಮ ಮಕ್ಕಳ ಶಿಕ್ಷಣಕ್ಕೆ, ನಿಮ್ಮ ಮನೆ ಕಟ್ಟಲು, ನಿಮ್ಮ ವೃದ್ಧಾಪ್ಯಕ್ಕೆ ಉಪಯೋಗವಾಗಬೇಕಿದ್ದ ಹಣ ವಿದೇಶಕ್ಕೆ ಹರಿದು ಹೋಗುತ್ತಿದೆ.

ಭಾರತ ಪ್ರತಿದಿನ 48 ಲಕ್ಷ ಬ್ಯಾರಲ್ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತದೆ. ಇದು ನಮ್ಮ ಒಟ್ಟು ತೈಲ ಬೇಡಿಕೆಯ 89%. ಒಂದು ಬ್ಯಾರಲ್‌ಗೆ ಇಂದು $110 ಬೆಲೆ. ಒಂದು ಡಾಲರ್‌ಗೆ ₹84. ಈ ಲೆಕ್ಕ ಹಾಕಿ…  ಒಂದು ದಿನ ₹4,435 ಕೋಟಿ ವಿದೇಶಕ್ಕೆ ಹೋಗುತ್ತದೆ. ಒಂದು ತಿಂಗಳಿಗೆ ₹1,33,000 ಕೋಟಿ. ಒಂದು ವರ್ಷಕ್ಕೆ ₹16 ಲಕ್ಷ ಕೋಟಿ. ಪ್ರತಿ ನಿಮಿಷಕ್ಕೆ ₹3 ಕೋಟಿ ಈ ದೇಶ ಬಿಟ್ಟು ಹೋಗುತ್ತಿದೆ. ನೀವು ಈ ಒಂದು ಸಾಲು ಓದಲು ತೆಗೆದುಕೊಂಡ ಸಮಯದಲ್ಲಿ ₹3 ಕೋಟಿ ಭಾರತ ಬಿಟ್ಟಿದೆ.

ಇದರ ಮೇಲೆ IOC, BPCL, HPCL ಎಂಬ ರಾಷ್ಟ್ರೀಯ ತೈಲ ಕಂಪನಿಗಳು ತಿಂಗಳಿಗೆ ₹30,000 ಕೋಟಿ ನಷ್ಟ ಭರಿಸುತ್ತಿವೆ. ಪ್ರತಿ ಲೀಟರ್ ಪೆಟ್ರೋಲ್‌ಗೆ ₹18-20 ನಷ್ಟ, ಡಿಸೇಲ್‌ಗೆ ₹35-100 ನಷ್ಟ ಸ್ವತಃ ಹೊರುತ್ತಿವೆ. 2022ರ ಏಪ್ರಿಲ್‌ನಿಂದ ಇಲ್ಲಿಯವರೆಗೆ ಪೆಟ್ರೋಲ್ ಬೆಲೆ ಘನೀಭೂತವಾಗಿ ಉಳಿದಿದೆ… ಇದು ಮುಂದಿನ ದಿನಗಳಲ್ಲಿ ₹25-28 ಏರಿಕೆ ಆಗಬಹುದು. ಅಂದು ಅಚ್ಚರಿ ಪಡಬೇಡಿ.

1200-675-26325922-160-26325922-1774436615261

ಇದು ನಮ್ಮ ವಿಳಂಬ ನೀತಿ, ನಮ್ಮ ಅಸಡ್ಡೆ, ನಮ್ಮ ಆರಾಮದ ನಿದ್ದೆ…  ಇವೆಲ್ಲದರ ಒಟ್ಟು ಫಲ.

50 ವರ್ಷದ ನಿದ್ದೆ…  ಒಂದು ಕಹಿ ಸತ್ಯ

  1. Arab Oil Embargo. ಅರಬ್ ದೇಶಗಳು ತೈಲ ಪೂರೈಕೆ ನಿಲ್ಲಿಸಿದಾಗ ಭಾರತ ಮೊದಲ ಬಾರಿ ತೈಲ ಆಘಾತ ಅನುಭವಿಸಿತು. ಆ ಬಿಕ್ಕಟ್ಟು ನಮಗೆ ಒಂದು ಸ್ಪಷ್ಟ ಸಂದೇಶ ಕೊಟ್ಟಿತ್ತು… ವಿದೇಶಿ ತೈಲ ಅವಲಂಬನೆ ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಅಪಾಯ. ಆ ದಿನ ಭಾರತ ಏನು ಮಾಡಿತು?

ಏನೂ ಮಾಡಲಿಲ್ಲ.

50 ವರ್ಷ ಕಳೆದಿದೆ. 2026ರಲ್ಲೂ ನಾವು ಅದೇ ಅರಬ್ ತೈಲ ಕುಡಿಯುತ್ತಿದ್ದೇವೆ. ಅದೇ ದೌರ್ಬಲ್ಯ. ಅದೇ ಅವಲಂಬನೆ. ಇಂದು ವಿಶ್ವದ ಒಟ್ಟು ತೈಲ ಪ್ರಮಾಣದ 20% ಹಾದುಹೋಗುವ ಹಾರ್ಮಜ್ ಜಲಸಂಧಿ ಪಶ್ಚಿಮ ಏಷ್ಯಾ ಯುದ್ಧದ ನೆರಳಿನಲ್ಲಿದೆ. ಅದು ಮುಚ್ಚಿದರೆ ಭಾರತಕ್ಕೆ ತೈಲ ಬರಲ್ಲ.

50 ವರ್ಷದಲ್ಲಿ ನಾವು ಏನು ಕಲಿತೆವು ಎಂಬ ಪ್ರಶ್ನೆ ಇಂದು ಪ್ರತಿಯೊಬ್ಬ ಭಾರತೀಯನ ಆತ್ಮಸಾಕ್ಷಿಯ ಮುಂದಿದೆ.

ಬೇರೆ ದೇಶಗಳು ನಿದ್ದೆ ಮಾಡಲಿಲ್ಲ

ನಾರ್ವೆ….  ತಾನೇ ತೈಲ ಉತ್ಪಾದಿಸುವ ದೇಶ. ಆದರೆ 2023ರಲ್ಲಿ ಅಲ್ಲಿ ಮಾರಾಟವಾದ ಹೊಸ ವಾಹನಗಳ 90% ಎಲೆಕ್ಟ್ರಿಕ್. ತೈಲ ಇದ್ದರೂ ಬಿಟ್ಟರು. ಭವಿಷ್ಯ ಕಂಡರು.

ಚೀನಾ…  2023ರಲ್ಲೇ 6 million ಎಲೆಕ್ಟ್ರಿಕ್ ವಾಹನ ಮಾರಾಟ. ಲಿಥಿಯಂ ಬ್ಯಾಟರಿ ತಯಾರಿಕೆಯಲ್ಲಿ ವಿಶ್ವ ನಾಯಕ. “Made in China 2025” ನೀತಿ ಅಡಿಯಲ್ಲಿ ಸಾವಿರಾರು ಕೋಟಿ ಹೂಡಿಕೆ ಮಾಡಿ ಶಕ್ತಿ ಕ್ರಾಂತಿ ಮಾಡಿದರು. ಇಂದು ಅವರು ತೈಲ ದೇಶಗಳ ಮೇಲೆ ಅಂಟಿಕೊಳ್ಳುವ ಬದಲು ಸ್ವಾವಲಂಬಿಯಾಗಿ ನಿಂತಿದ್ದಾರೆ.

ಇಸ್ರೇಲ್… ಮರುಭೂಮಿ ದೇಶ. ಒಂದು ಹನಿ ತೈಲ ಇಲ್ಲ. ಆದರೆ ಸೌರ ಶಕ್ತಿಯಲ್ಲಿ ಸ್ವಾವಲಂಬಿ. ಜರ್ಮನಿ…  ರಷ್ಯಾ ತೈಲ ಅವಲಂಬನೆ ಯುದ್ಧದ ಕಾರಣ ಮುರಿದು ನವೀಕರಿಸಬಹುದಾದ ಇಂಧನದತ್ತ ದೃಢವಾಗಿ ನಡೆಯಿತು.

ಭಾರತ…  300 ಮಿಲಿಯನ್ ಮನೆಗಳು, ವರ್ಷದಲ್ಲಿ 300 ಬಿಸಿಲಿನ ದಿನಗಳು, ಪ್ರಪಂಚದ ಅತಿ ಹೆಚ್ಚು ಯುವ ಜನಸಂಖ್ಯೆ…  ಆದರೆ ಸೌರ ಬಳಕೆ? ಕನಿಷ್ಠ. EV ಅಳವಡಿಕೆ? ಅತ್ಯಲ್ಪ.

ಹಾಂಕಾಂಗ್‌ನಲ್ಲಿ ಪೆಟ್ರೋಲ್ ₹295 ಲೀಟರ್, ಸಿಂಗಾಪುರದಲ್ಲಿ ₹240, ಯೂರೋಪ್‌ನಲ್ಲಿ ₹210. ಭಾರತದಲ್ಲಿ ₹106…  ಇದು ಸರ್ಕಾರ ಮತ್ತು ತೈಲ ಕಂಪನಿಗಳ ರಕ್ತ ಕಾರಿ ನಿಲ್ಲಿಸಿದ ಬೆಲೆ. ಆದರೆ ಈ ರಕ್ಷಣೆ ಅನಂತಕಾಲ ನಡೆಯಲಾರದು. ಆ ಮಿತಿ ಮುಟ್ಟುತ್ತಿದೆ.

ಸರ್ಕಾರ ಮಾಡಬೇಕಿದ್ದ ಕಠಿಣ ಕ್ರಮಗಳು — ಮಾತಲ್ಲ, ಕಾನೂನು ಬೇಕು

NITI Aayog 2019ರಲ್ಲೇ 150cc ವರೆಗಿನ ಪೆಟ್ರೋಲ್ ಎರಡು ಚಕ್ರದ ವಾಹನ ಮಾರಾಟ ನಿಲ್ಲಿಸಬೇಕು, 2030ಕ್ಕೆ ಪೆಟ್ರೋಲ್ ಕಾರು ನಿಷೇಧ ಮಾಡಬೇಕು ಎಂದು ಶಿಫಾರಸು ಮಾಡಿತ್ತು. ದೆಹಲಿ ಈಗ 2028ಕ್ಕೆ ಹೊಸ ಪೆಟ್ರೋಲ್ ಎರಡು ಚಕ್ರ ವಾಹನ ನೋಂದಣಿ ನಿಷೇಧ ಘೋಷಿಸಿದೆ. ಇದನ್ನು ಇಡೀ ದೇಶಕ್ಕೆ ಯಾಕೆ ಅನ್ವಯಿಸಲಿಲ್ಲ?

Automobile lobby ಒತ್ತಡ. ಚುನಾವಣಾ ಲೆಕ್ಕಾಚಾರ. ರಾಜಕೀಯ ಹೇಡಿತನ.

ಪ್ರತಿ ಸರ್ಕಾರಿ ವಾಹನ 2027ಕ್ಕೆ EV ಆಗಬೇಕಿತ್ತು. 15 ವರ್ಷ ಹಳೆ ವಾಹನಗಳಿಗೆ ಪೆಟ್ರೋಲ್ ನಿರಾಕರಿಸುವ ನೀತಿ ದೇಶ ವ್ಯಾಪ್ತಿಯಲ್ಲಿ ತಕ್ಷಣ ಜಾರಿ ಆಗಬೇಕಿತ್ತು. ಹೊಸ ಕಟ್ಟಡಗಳಿಗೆ Building Permission ನೀಡುವಾಗ Rooftop Solar ಕಡ್ಡಾಯ ಷರತ್ತು ಇಡಬೇಕಿತ್ತು. EV ಗೆ Toll Free, ಪಾರ್ಕಿಂಗ್ Free, Fast Lane …ಈ ಪ್ರೋತ್ಸಾಹ Norway ಮಾದರಿಯಲ್ಲಿ ಜಾರಿ ಆಗಬೇಕಿತ್ತು. ರಾಷ್ಟ್ರೀಯ ಇಂಧನ ಭದ್ರತಾ ಕಾನೂನು…  Energy Security Act… ಸಂಸತ್ತಿನಲ್ಲಿ ಅಂಗೀಕಾರ ಆಗಬೇಕಿತ್ತು.

ಸಂವಿಧಾನದ ಅನುಚ್ಛೇದ 51(ಎ) ಪ್ರತಿ ಭಾರತೀಯ ನಾಗರಿಕನ ಮೂಲಭೂತ ಕರ್ತವ್ಯ ಹೇಳುತ್ತದೆ…  ದೇಶದ ಸಂಪತ್ತನ್ನು ರಕ್ಷಿಸಬೇಕು. Essential Commodities Act ತೈಲ ಬಿಕ್ಕಟ್ಟಿನಲ್ಲಿ ರಾಷ್ಟ್ರೀಯ ಶಾಸನ ಅಧಿಕಾರ ನೀಡುತ್ತದೆ. Entry 54, List I ಅಡಿ ಕೇಂದ್ರಕ್ಕೆ ಖನಿಜ ಸಂಪನ್ಮೂಲ ನಿಯಂತ್ರಣ ಅಧಿಕಾರ ಇದೆ. ಆದರೆ ಇಚ್ಛಾಶಕ್ತಿ ಇಲ್ಲ. ಇದೇ ಸಮಸ್ಯೆ.

ಸಮಾಧಾನ ಎಷ್ಟು ಸರಳ ಗೊತ್ತೇ?

ಒಬ್ಬ ಕರ್ನಾಟಕದ ಮಧ್ಯಮ ವರ್ಗದ ಕುಟುಂಬ ಇಂದು ವರ್ಷಕ್ಕೆ ₹50,000 ರಿಂದ ₹60,000 ಪೆಟ್ರೋಲ್‌ಗೆ ಖರ್ಚು ಮಾಡುತ್ತದೆ. ₹15,000 ರಿಂದ ₹20,000 ವಿದ್ಯುತ್ ಬಿಲ್ ತೆರುತ್ತದೆ. ಒಟ್ಟು ₹75,000 ಇಂಧನಕ್ಕೆ ಹೋಗುತ್ತದೆ.

EV ಸ್ಕೂಟರ್ ₹1,07,000. ಸಾಮಾನ್ಯ Activa ಗಿಂತ ₹25,000 ಮಾತ್ರ ಹೆಚ್ಚು. ಆದರೆ 40 km ಗೆ ಪೆಟ್ರೋಲ್ ₹100, EV ₹8. ತಿಂಗಳಿಗೆ ₹2,000 ರಿಂದ ₹2,500 ಉಳಿತಾಯ. 5 ವರ್ಷದಲ್ಲಿ ₹1 ಲಕ್ಷ ರಿಂದ ₹1.5 ಲಕ್ಷ ಉಳಿತಾಯ. ಮನೆಯ ಸಾಮಾನ್ಯ ಪ್ಲಗ್‌ನಲ್ಲಿ ರಾತ್ರಿ ಚಾರ್ಜ್ ಮಾಡಿ. ಒಂದು Full charge ₹20 ರಿಂದ ₹60 ಮಾತ್ರ. EV ಸ್ಕೂಟರ್‌ಗೆ GST ಕೇವಲ 5%, ಪೆಟ್ರೋಲ್ ಸ್ಕೂಟರ್‌ಗೆ 18%. ₹10,000 ಕೇಂದ್ರ ಸಬ್ಸಿಡಿ ಬೇರೆ ಇದೆ.

PM Surya Ghar Yojana ಅಡಿಯಲ್ಲಿ Rooftop Solar ಗೆ 40% ಸಬ್ಸಿಡಿ ಇದೆ. ತಿಂಗಳಿಗೆ 300 units ವಿದ್ಯುತ್ ಉಚಿತ. 25 ವರ್ಷ ಬೆಳಕು. ವಿದ್ಯುತ್ ಬಿಲ್ ಶೂನ್ಯ. EV ಮತ್ತು Solar ಎರಡೂ ತಂದರೆ 5 ವರ್ಷದಲ್ಲಿ ₹2.5 ಲಕ್ಷ ರಿಂದ ₹3 ಲಕ್ಷ ಉಳಿಯುತ್ತದೆ. ಮಕ್ಕಳ ಶಿಕ್ಷಣಕ್ಕೆ. ಮನೆ ಕಟ್ಟಲು. ನಿಮ್ಮ ಕನಸಿಗೆ.

ವಿದೇಶಿ ಪ್ರೀತಿ…  ಬ್ರಿಟಿಷ್ ಆಳ್ವಿಕೆ ಬಿಟ್ಟು ಹೋದ ವಿಷ

ಒಬ್ಬ ವಕೀಲನಾಗಿ ಮತ್ತು ಹಿರಿಯ ಪತ್ರಕರ್ತನಾದ ಅಡ್ವೊಕೇಟ್ ವೀರೇಂದ್ರಬಾಬು ನಂಜೇಗೌಡ ಆದ ನಾನು ಗಮನಿಸಿದಂತೆ…  ಭಾರತದ ಶ್ರೀಮಂತ ಮತ್ತು ವಿದ್ಯಾವಂತ ವರ್ಗ ಒಂದು ವಿಶಿಷ್ಟ ಮನಸ್ಥಿತಿಯ ಬಂಧಿಗಳಾಗಿದ್ದಾರೆ. “Foreign” ಎಂದರೆ Superior, “Desi” ಎಂದರೆ ಇನ್ಫೆರಿಯರ್…  ಈ ಭಾವನೆ 200 ವರ್ಷದ ಬ್ರಿಟಿಷ್ ಗುಲಾಮಗಿರಿ ನಮ್ಮ ತಲೆಯಲ್ಲಿ ಬಿಟ್ಟು ಹೋದ ವಿಷ.

iPhone ಇದ್ದರೆ ಶ್ರೀಮಂತ, Made in India ಫೋನ್ ಇದ್ದರೆ ಸಾಧಾರಣ ಎಂಬ ಗ್ರಹಿಕೆ. BMW ತಂದರೆ ದೊಡ್ಡ ಮನುಷ್ಯ, Tata EV ತಂದರೆ “ಉಳಿತಾಯ ಮಾಡುವ ಮನುಷ್ಯ” ಎಂಬ ಲೇಬಲ್. Scotch ಕುಡಿದರೆ Sophisticated, ದೇಶಿ ಅಮ್ರುತ್ Whisky ಕುಡಿದರೆ ಹಳ್ಳಿಗ ಎಂಬ ತೀರ್ಮಾನ. ಸ್ವಾತಂತ್ರ್ಯ ಬಂದ 78 ವರ್ಷ ಆದರೂ ಈ ಮಾನಸಿಕ ಗುಲಾಮಗಿರಿ ಇನ್ನೂ ನಮ್ಮನ್ನು ಆಳುತ್ತಿದೆ.

FY 2025-26ರಲ್ಲಿ ಭಾರತ ಚಿನ್ನ ಆಮದಿಗೆ ಮಾತ್ರ $71.98 ಬಿಲಿಯನ್… ಅಂದರೆ ₹6 ಲಕ್ಷ ಕೋಟಿ…  ವಿದೇಶಕ್ಕೆ ಕಳಿಸಿದೆ. ಒಟ್ಟು ಆಮದು $970 ಬಿಲಿಯನ್, ರಫ್ತು $860 ಬಿಲಿಯನ್. Trade deficit $119 ಬಿಲಿಯನ್. ಮೇಲೆ Luxury ವಾಚ್, Designer Dress, Foreign Liquor, Europe tour… ಇವೆಲ್ಲ ಪ್ರತ್ಯೇಕ. ಒಬ್ಬ ಗ್ರಾಹಕ Online ನಲ್ಲಿ ₹30 ಲಕ್ಷ ವಾಚ್ ಕೊಳ್ಳುತ್ತಾರೆ. ಮತ್ತೊಂದೆಡೆ “ಭಾರತ ಮಹಾನ್” ಎಂದು ಭಾಷಣ ಮಾಡುತ್ತಾರೆ. ಇದು ನಮ್ಮ ವಿರೋಧಾಭಾಸ.

Norway ಯ ಶ್ರೀಮಂತರು Tesla ತರುತ್ತಾರೆ… BMW ಅಲ್ಲ. China ದ ಉದ್ಯಮಿಗಳು BYD ತರುತ್ತಾರೆ… Mercedes ಅಲ್ಲ. Japan ದ ಪ್ರೊಫೆಸರ್ Toyota ತರುತ್ತಾರೆ… Audi ಅಲ್ಲ. ಭಾರತದ ಶ್ರೀಮಂತ ಮಾತ್ರ Tata ಬಿಟ್ಟು BMW ತರುತ್ತಾರೆ. ದೇಶದ ಹಣ ವಿದೇಶಕ್ಕೆ ಹೋಗಲು ತಾವೇ ದಾರಿ ಮಾಡಿಕೊಡುತ್ತಾರೆ.

ವಿದ್ಯಾವಂತ ವ್ಯಕ್ತಿ ಮಾಡುವ ಆಯ್ಕೆ ಸಮಾಜ ಅನುಸರಿಸುತ್ತದೆ. ಒಬ್ಬ Engineer ಅಥವಾ Doctor Tata Nexon EV ತಂದರೆ ಅವರ ಪರಿಚಯದ 10 ಮಂದಿ ಯೋಚಿಸುತ್ತಾರೆ. ಒಬ್ಬ Advocate ತನ್ನ Office ಗೆ EV ಬಂದರೆ ಅವರ Court ಪರಿಸರದ ನೂರು ಮಂದಿ ನೋಡುತ್ತಾರೆ. ಒಬ್ಬ Professor ಮನೆಗೆ Solar ಅಳವಡಿಸಿದರೆ Colony ಯ 20 ಮಂದಿ ಕೇಳುತ್ತಾರೆ. ವಿದ್ಯಾವಂತರು Trend Setter ಆಗುತ್ತಾರೆ… ಆದ್ದರಿಂದ ಅವರ ಆಯ್ಕೆ ಸಮಾಜದ ಆಯ್ಕೆ ಆಗುತ್ತದೆ.

ಇದು ರಾಜಕೀಯ ಸಮಸ್ಯೆ ಅಲ್ಲ… ಇದು ನಮ್ಮ ಸಮಸ್ಯೆ

ಇಲ್ಲಿ ನಾನು ಯಾವ ಪಕ್ಷವನ್ನೂ ಬೆಂಬಲಿಸುತ್ತಿಲ್ಲ, ವಿರೋಧಿಸುತ್ತಿಲ್ಲ. BJP ಇದ್ದಾಗಲೂ ತೈಲ ಅವಲಂಬನೆ ಕಡಿಮೆಯಾಗಲಿಲ್ಲ. Congress ಕಾಲದಲ್ಲೂ ಆಗಲಿಲ್ಲ. ಇದು ಯಾವ ಒಂದು ಸರ್ಕಾರದ ತಪ್ಪಲ್ಲ… ಇದು ಏಳು ದಶಕಗಳ ಸಾಮೂಹಿಕ ನಿಷ್ಕ್ರಿಯತೆ.

ನನ್ನ ಅಭಿಪ್ರಾಯದಲ್ಲಿ…  ಭಾರತ ಇಂದು ಎದುರಿಸುತ್ತಿರುವ ಇಂಧನ ಬಿಕ್ಕಟ್ಟು ಕೇವಲ ಆರ್ಥಿಕ ಸಮಸ್ಯೆ ಅಲ್ಲ. ಇದು ರಾಷ್ಟ್ರೀಯ ಸಾರ್ವಭೌಮತ್ವದ ಪ್ರಶ್ನೆ. ಹಾರ್ಮಜ್ ಜಲಸಂಧಿ ಮುಚ್ಚಿದರೆ ಭಾರತದ ಚಕ್ರಗಳು ನಿಲ್ಲುತ್ತವೆ… ಇದು ರಾಷ್ಟ್ರೀಯ ಭದ್ರತೆಯ ಸಂಕಟ. ರೂಪಾಯಿ ಮೌಲ್ಯ ಕುಸಿಯುತ್ತದೆ… ಇದು ನಿಮ್ಮ ಬ್ಯಾಂಕ್ ಖಾತೆಯ ಮೌಲ್ಯ ಕಡಿಮೆ ಆಗುವ ನೋವು. ವಿದೇಶಿ ವಿನಿಮಯ ಸಂಗ್ರಹ ಕರಗುತ್ತದೆ… ಇದು ಮುಂದಿನ ತಲೆಮಾರಿನ ಭಾರಕ.

ಸಂವಿಧಾನ ಅನುಚ್ಛೇದ 51(ಎ) ನಾಗರಿಕ ಕರ್ತವ್ಯ ಹೇಳುತ್ತದೆ. ಆ ಕರ್ತವ್ಯ ಇಂದು ನಮ್ಮ ಮುಂದಿದೆ. ವಿದೇಶಿ ವಿನಿಮಯ ರಕ್ಷಣೆ ಕೇವಲ ಸರ್ಕಾರದ ಕೆಲಸ ಅಲ್ಲ…  ಅದು ನಮ್ಮ ಸಾಂವಿಧಾನಿಕ ಜವಾಬ್ದಾರಿ.

lexthw5myqckp6lzvecf

ದೇಶಭಕ್ತಿ ಎಂದರೆ ಏನು?

ದೇಶಭಕ್ತಿ ಎಂದರೆ ಜೈ ಹಿಂದ್ ಎನ್ನುವುದಲ್ಲ. ದೇಶಭಕ್ತಿ ಎಂದರೆ ಪ್ರತಿ ನಿಮಿಷ ₹3 ಕೋಟಿ ವಿದೇಶಕ್ಕೆ ಹೋಗದಂತೆ ನಮ್ಮ ಕೈಯಲ್ಲಿ ಏನಾದರೂ ಮಾಡುವುದು.

ಗಾಂಧೀಜಿ ಬ್ರಿಟಿಷರ ಕಾಲದಲ್ಲಿ ವಿದೇಶಿ ಬಟ್ಟೆ ಸುಟ್ಟರು… ಇದು ಸ್ವದೇಶಿ ಚಳುವಳಿ. ಇಂದು ವಿದೇಶಿ ತೈಲ ಅವಲಂಬನೆ ಬಿಡುವ ಸ್ವದೇಶಿ ಚಳುವಳಿ ಬೇಕಿದೆ. EV ಸ್ಕೂಟರ್ ಖರೀದಿಸಿ ತೈಲ ಆಮದು ಕಡಿಮೆ ಮಾಡುವುದು ದೇಶಭಕ್ತಿ. Rooftop Solar ಅಳವಡಿಸಿ ವಿದೇಶಿ ಇಂಧನ ಅವಲಂಬನೆ ಕಡಿಮೆ ಮಾಡುವುದು ದೇಶಭಕ್ತಿ. Made in India ಉತ್ಪನ್ನ ಕೊಳ್ಳುವುದು ದೇಶಭಕ್ತಿ. ಅನಗತ್ಯ ವಿದೇಶ ಪ್ರಯಾಣ, ವಿದೇಶಿ Liquor, ಅನಗತ್ಯ Luxury Import… ಇವು ತ್ಯಜಿಸುವುದು ದೇಶಭಕ್ತಿ.

ಒಬ್ಬ ಮನುಷ್ಯ ₹3 ಕೋಟಿ ನಿಲ್ಲಿಸಲಾರ. ಆದರೆ 140 ಕೋಟಿ ಜನ ಒಟ್ಟಾಗಿ ನಿಂತರೆ — ಯಾವ ಯುದ್ಧವೂ, ಯಾವ ಜಲಸಂಧಿ ನಿಷೇಧವೂ ನಮ್ಮನ್ನು ಬಗ್ಗಿಸಲಾರದು.

ಭವಿಷ್ಯ ನಮ್ಮ ಕೈಯಲ್ಲಿದೆ

ಮುಂದಿನ ಬಾರಿ ವಾಹನ ಖರೀದಿ ಮಾಡುವಾಗ EV ಯೋಚಿಸಿ. ಮನೆ ಮೇಲ್ಛಾವಣಿ ಖಾಲಿ ಇದ್ದರೆ PM Surya Ghar ಗೆ ಅರ್ಜಿ ಹಾಕಿ. ದಿನದಲ್ಲಿ ಒಂದು ಪ್ರಯಾಣ ಸಾರ್ವಜನಿಕ ಸಾರಿಗೆಯಲ್ಲಿ ಮಾಡಿ. Made in India ಉತ್ಪನ್ನ ಆಯ್ಕೆ ಮಾಡಿ. ಈ ಲೇಖನ ಕನಿಷ್ಠ 5 ಜನರಿಗೆ Share ಮಾಡಿ… ಒಬ್ಬ ವ್ಯಕ್ತಿ ಬದಲಾದರೆ 10 ಮಂದಿ ಬದಲಾಗುತ್ತಾರೆ, 10 ಮಂದಿ ಬದಲಾದರೆ ಒಂದು ನಾಡು ಬದಲಾಗುತ್ತದೆ.

ಪ್ರಧಾನಿ “ಪ್ಲೀಜ್” ಎಂದು ಕೈ ಎತ್ತಿ ಬೇಡಿಕೊಳ್ಳಬೇಕಾದ ಅಗತ್ಯ ಇನ್ನು ಬರಬಾರದು. ಆ ದಿನ ಬರಬೇಕಾದರೆ ನಾವು ಇಂದು ಎಚ್ಚರಗೊಳ್ಳಬೇಕು. ಇಂದು ನಿರ್ಧಾರ ಮಾಡಬೇಕು. ಇಂದು ಕ್ರಿಯೆಗೆ ಇಳಿಯಬೇಕು.

ಭಾರತ ಒಂದು ಸಾಧ್ಯತೆಯ ದೇಶ. 300 ದಿನ ಬಿಸಿಲು ಇರುವ ದೇಶ Solar ಶಕ್ತಿಯಲ್ಲಿ ವಿಶ್ವ ನಾಯಕ ಆಗಬೇಕು. 140 ಕೋಟಿ ಜನ ಇರುವ ದೇಶ EV ತಯಾರಿಕೆಯಲ್ಲಿ China ಗೆ ಸವಾಲು ಹಾಕಬೇಕು. 1973ರಲ್ಲಿ ಕಲಿಯದ ಪಾಠ 2026ರಲ್ಲಿ ಕಲಿಯೋಣ. ಇಚ್ಛಾಶಕ್ತಿ ಇದ್ದರೆ 10 ವರ್ಷದಲ್ಲಿ ಭಾರತ ತೈಲ ಸ್ವಾತಂತ್ರ್ಯ ಸಾಧಿಸಬಲ್ಲದು.

ಜೈ ಭಾರತ. ಜೈ ಕನ್ನಡ.

ಅಡ್ವೊಕೇಟ್ ವೀರೇಂದ್ರಬಾಬು ನಂಜೇಗೌಡ, MBA., LLB.,

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ