ಮೇ 10, 2026. ಹೈದರಾಬಾದ್‌ನ ಸೆಕಂದರಾಬಾದ್ ಪರೇಡ್ ಗ್ರೌಂಡ್ಸ್. ಲಕ್ಷಾಂತರ ಜನ ನೆರೆದ BJP ಸಮಾವೇಶ. ಮೈಕ್ ಮುಂದೆ ನಿಂತ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ತಮ್ಮ ದೇಶದ ಜನತೆಗೆ ಕೈ ಎತ್ತಿ ಬೇಡಿಕೊಂಡರು... "ದಯಮಾಡಿ ಪೆಟ್ರೋಲ್, ಡಿಸೇಲ್ ಬಳಕೆ ತಗ್ಗಿಸಿ. ಇದು ಭಾರಿ ಇಂಧನ ಬಿಕ್ಕಟ್ಟು."
ಮಾಧ್ಯಮಗಳು ಸೆರೆಹಿಡಿದ ಆ ಕ್ಷಣ ನನ್ನ ಎದೆ ಕಲಕಿತು.
ಒಬ್ಬ ವಕೀಲನಾಗಿ ಮತ್ತು ಹಿರಿಯ ಪತ್ರಕರ್ತನಾದ ಅಡ್ವೊಕೇಟ್ ವೀರೇಂದ್ರಬಾಬು ನಂಜೇಗೌಡ ಆದ ನಾನು ಗಮನಿಸಿದಂತೆ... ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೊಂದು ಅಭೂತಪೂರ್ವ ಕ್ಷಣ. .
ಈ ಲೇಖನ ರಾಜಕೀಯ ಮಾತಿನ ಮಂಟಪಕ್ಕಾಗಿ ಅಲ್ಲ. ಇದು ಒಬ್ಬ ಸಂವಿಧಾನ ಪ್ರೇಮಿ, ಕಾನೂನು ತಜ್ಞ, ಮತ್ತು ಈ ದೇಶದ ನಾಗರಿಕನಾಗಿ ನಾನು ಅನುಭವಿಸಿದ ಆಕ್ರೋಶ, ನೋವು ಮತ್ತು ಭರವಸೆಯ ಅಭಿವ್ಯಕ್ತಿ.
ಪ್ರತಿ ನಿಮಿಷಕ್ಕೆ ₹3 ಕೋಟಿ... ಇದು ನಿಮ್ಮ ಹಣ
ನಿನ್ನೆ ನೀವು ಪೆಟ್ರೋಲ್ ಹಾಕಿದ್ದೀರಾ? ₹500 ಕೊಟ್ಟಿದ್ದೀರಾ? ಅದರಲ್ಲಿ ₹350 ನೇರವಾಗಿ ಅರಬ್ ದೇಶದ ಅರಮನೆ ಕಟ್ಟಲು ಹೋಗಿದೆ. ನಿಮ್ಮ ಮಕ್ಕಳ ಶಿಕ್ಷಣಕ್ಕೆ, ನಿಮ್ಮ ಮನೆ ಕಟ್ಟಲು, ನಿಮ್ಮ ವೃದ್ಧಾಪ್ಯಕ್ಕೆ ಉಪಯೋಗವಾಗಬೇಕಿದ್ದ ಹಣ ವಿದೇಶಕ್ಕೆ ಹರಿದು ಹೋಗುತ್ತಿದೆ.
ಭಾರತ ಪ್ರತಿದಿನ 48 ಲಕ್ಷ ಬ್ಯಾರಲ್ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತದೆ. ಇದು ನಮ್ಮ ಒಟ್ಟು ತೈಲ ಬೇಡಿಕೆಯ 89%. ಒಂದು ಬ್ಯಾರಲ್‌ಗೆ ಇಂದು $110 ಬೆಲೆ. ಒಂದು ಡಾಲರ್‌ಗೆ ₹84. ಈ ಲೆಕ್ಕ ಹಾಕಿ... ಒಂದು ದಿನ ₹4,435 ಕೋಟಿ ವಿದೇಶಕ್ಕೆ ಹೋಗುತ್ತದೆ. ಒಂದು ತಿಂಗಳಿಗೆ ₹1,33,000 ಕೋಟಿ. ಒಂದು ವರ್ಷಕ್ಕೆ ₹16 ಲಕ್ಷ ಕೋಟಿ. ಪ್ರತಿ ನಿಮಿಷಕ್ಕೆ ₹3 ಕೋಟಿ ಈ ದೇಶ ಬಿಟ್ಟು ಹೋಗುತ್ತಿದೆ. ನೀವು ಈ ಒಂದು ಸಾಲು ಓದಲು ತೆಗೆದುಕೊಂಡ ಸಮಯದಲ್ಲಿ ₹3 ಕೋಟಿ ಭಾರತ ಬಿಟ್ಟಿದೆ.
ಇದರ ಮೇಲೆ IOC, BPCL, HPCL ಎಂಬ ರಾಷ್ಟ್ರೀಯ ತೈಲ ಕಂಪನಿಗಳು ತಿಂಗಳಿಗೆ ₹30,000 ಕೋಟಿ ನಷ್ಟ ಭರಿಸುತ್ತಿವೆ. ಪ್ರತಿ ಲೀಟರ್ ಪೆಟ್ರೋಲ್‌ಗೆ ₹18-20 ನಷ್ಟ, ಡಿಸೇಲ್‌ಗೆ ₹35-100 ನಷ್ಟ ಸ್ವತಃ ಹೊರುತ್ತಿವೆ. 2022ರ ಏಪ್ರಿಲ್‌ನಿಂದ ಇಲ್ಲಿಯವರೆಗೆ ಪೆಟ್ರೋಲ್ ಬೆಲೆ ಘನೀಭೂತವಾಗಿ ಉಳಿದಿದೆ... ಇದು ಮುಂದಿನ ದಿನಗಳಲ್ಲಿ ₹25-28 ಏರಿಕೆ ಆಗಬಹುದು. ಅಂದು ಅಚ್ಚರಿ ಪಡಬೇಡಿ.

ಇದು ನಮ್ಮ ವಿಳಂಬ ನೀತಿ, ನಮ್ಮ ಅಸಡ್ಡೆ, ನಮ್ಮ ಆರಾಮದ ನಿದ್ದೆ... ಇವೆಲ್ಲದರ ಒಟ್ಟು ಫಲ.
50 ವರ್ಷದ ನಿದ್ದೆ... ಒಂದು ಕಹಿ ಸತ್ಯ
- Arab Oil Embargo. ಅರಬ್ ದೇಶಗಳು ತೈಲ ಪೂರೈಕೆ ನಿಲ್ಲಿಸಿದಾಗ ಭಾರತ ಮೊದಲ ಬಾರಿ ತೈಲ ಆಘಾತ ಅನುಭವಿಸಿತು. ಆ ಬಿಕ್ಕಟ್ಟು ನಮಗೆ ಒಂದು ಸ್ಪಷ್ಟ ಸಂದೇಶ ಕೊಟ್ಟಿತ್ತು... ವಿದೇಶಿ ತೈಲ ಅವಲಂಬನೆ ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಅಪಾಯ. ಆ ದಿನ ಭಾರತ ಏನು ಮಾಡಿತು?
ಏನೂ ಮಾಡಲಿಲ್ಲ.





