ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಹೋಲ್‌ಸೇಲ್ ದರದಲ್ಲಿ ಚಿನ್ನ ಖರೀದಿಸುವುದಾಗಿ ನಂಬಿಸಿ, ನಗರತ್ ಪೇಟೆಯ ಪ್ರಸಿದ್ಧ ಮೆಹ್ತಾ ಜ್ಯುವೆಲ್ಲರಿಯ ಮ್ಯಾನೇಜರ್ ಕೈಯಿಂದ 1.85 ಕೆಜಿ ಚಿನ್ನಾಭರಣಗಳನ್ನು (ಸುಮಾರು 3 ಕೋಟಿ ರೂ. ಮೌಲ್ಯ) ಫೋಟೋ ತೆಗೆಯುವ ನೆಪದಲ್ಲಿ ದೋಚಿ ಮೂವರು ಖದೀಮರು ಪರಾರಿಯಾಗಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಪರೇಶ್ ಸೋನಿ ಎಂಬಾತ ಮೆಹ್ತಾ ಜ್ಯುವೆಲ್ಲರಿ ಮಾಲೀಕರಿಗೆ ಕರೆ ಮಾಡಿ, ತನ್ನ ‘ಮಾಹಿ ಎಂಟರ್‌ಪ್ರೈಸಸ್’ ಸಂಸ್ಥೆಗೆ ಬೃಹತ್ ಪ್ರಮಾಣದಲ್ಲಿ ಚಿನ್ನಾಭರಣಗಳು ಬೇಕು ಎಂದು ನಂಬಿಸಿದ್ದ. ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿದ್ದ ಒಂದು ಕಚೇರಿಯ ಬಾಗಿಲಿಗೆ ನಕಲಿ ಬೋರ್ಡ್ ಹಾಕಿ ವ್ಯವಸ್ಥಿತ ಸಂಚು ರೂಪಿಸಿದ್ದಾರೆ.

ಜ್ಯುವೆಲ್ಲರಿ ಮ್ಯಾನೇಜರ್ 1.85 ಕೆಜಿ ಚಿನ್ನಾಭರಣಗಳನ್ನು ತೆಗೆದುಕೊಂಡು ಕಚೇರಿಗೆ ತೆರಳಿದ್ದರು. ಅಲ್ಲಿ ಪರೇಶ್ ಸೋನಿ ಮತ್ತು ಅವನ ಸಹಚರ ಚಂದ್ರಶೇಖರ್ ಅವರು ಆಭರಣಗಳ ವಿನ್ಯಾಸ ಪರಿಶೀಲಿಸುವ ನೆಪದಲ್ಲಿ ಪಕ್ಕದ ಕ್ಯಾಬಿನ್‌ಗೆ ಕರೆದೊಯ್ದು, ಫೋಟೋ ತೆಗೆಯುವ ನೆಪದಲ್ಲಿ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.

ಈ ಘಟನೆಯು ಬೆಂಗಳೂರಿನಲ್ಲಿ ಚಿನ್ನಾಭರಣ ವ್ಯಾಪಾರಿಗಳ ನಡುವೆ ತೀವ್ರ ಆತಂಕ ಸೃಷ್ಟಿಸಿದೆ. ವ್ಯಾಪಾರಿಗಳು ಅನ್ಯರೊಂದಿಗೆ ವ್ಯವಹಾರ ನಡೆಸುವಾಗ ಅತ್ಯಂತ ಜಾಗರೂಕರಾಗಿರಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.

ಪ್ರಸ್ತುತ ಪೊಲೀಸರು ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ಫುಟೇಜ್‌ಗಳನ್ನು ವಿಶ್ಲೇಷಿಸುತ್ತಿದ್ದಾರೆ ಮತ್ತು ನಗರದ ವಿವಿಧ ಭಾಗಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ವಂಚನೆಯಲ್ಲಿ ಬಳಸಲಾಗಿರುವ ನಕಲಿ ಬೋರ್ಡ್ ಮತ್ತು ಸಂಸ್ಥೆಯ ಹೆಸರಿನ ಮೂಲಕವೂ ತನಿಖೆ ಮುಂದುವರಿದಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ