– ರಾಘವೇಂದ್ರ ಅಡಿಗ ಎಚ್ಚೆನ್.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಸದ್ಯಕ್ಕೆ ಜಾಮೀನು ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಸುಪ್ರೀಂ ಕೋರ್ಟ್ ಈಗಾಗಲೇ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಮುಂದಿನ ವರ್ಷ ಮೇ ಒಳಗೆ ವಿಚಾರಣೆ ಪೂರ್ಣಗೊಳ್ಳದಿದ್ದರೆ ಮಾತ್ರ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದೆ.
ಈ ಬೆಳವಣಿಗೆಯ ನಡುವೆಯೇ ಪ್ರಕರಣಕ್ಕೆ ಮತ್ತೊಂದು ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಕೋರ್ಟ್ ಮತ್ತು ನ್ಯಾಯಾಧೀಶರ ಬದಲಾವಣೆ ಅಧಿಕೃತವಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಈ ಹೈಪ್ರೊಫೈಲ್ ಕೇಸ್ ಸಿಸಿಹೆಚ್-57ರಿಂದ ಸಿಸಿಹೆಚ್-59ನೇ ಕೋರ್ಟ್‌ಗೆ ವರ್ಗಾವಣೆಯಾಗುತ್ತಿದೆ.
ಸಿಟಿ ಸಿವಿಲ್ ಕೋರ್ಟ್ ಡೆಪ್ಯುಟಿ ರಿಜಿಸ್ಟ್ರಾರ್ ಈ ಕುರಿತು ಆದೇಶ ಹೊರಡಿಸಿದ್ದು, ಜೂನ್ 1ರಿಂದ ಹೊಸ ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಗಲಿದೆ. ನ್ಯಾಯಮೂರ್ತಿ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಪ್ರಕರಣದ ಮುಂದಿನ ವಿಚಾರಣೆ ನಡೆಸಲಿದ್ದಾರೆ.
ಇದೇ ವೇಳೆ, ಒಂದು ವರ್ಷದೊಳಗೆ ಎಲ್ಲಾ ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಖಡಕ್ ಸೂಚನೆ ನೀಡಿರುವ ಹಿನ್ನೆಲೆ, ಸ್ಥಳೀಯ ಕೋರ್ಟ್ ವಾರಕ್ಕೆ ಕನಿಷ್ಠ ಎರಡು ಬಾರಿ ಅಥವಾ ನಾಲ್ಕು ದಿನಗಳ ಕಾಲ ನಿರಂತರ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಜಾಮೀನು ತಿರಸ್ಕಾರ, ವೇಗದ ವಿಚಾರಣೆ ಹಾಗೂ ಕೋರ್ಟ್ ವರ್ಗಾವಣೆ—ಈ ಮೂರು ಬೆಳವಣಿಗೆಗಳು ದರ್ಶನ್ ಮತ್ತು ಕುಟುಂಬಕ್ಕೆ ದೊಡ್ಡ ಆತಂಕ ತಂದಿವೆ.





