ವಿಲ್ (ಉಯಿಲು) ನೋಂದಾಯಿಸದಿರುವುದು ಅದರ ನೈಜತೆಯ ಮೇಲೆ ಅನುಮಾನ ಮೂಡಿಸುವ ಸಂದರ್ಭ ಎಂದು ಪರಿಗಣಿಸಲು ಆಗುವುದಿಲ್ಲ. ವಿಲ್ ನೋಂದಣಿ ಮಾಡದಿದ್ದರೂ ಅದು ಮಾನ್ಯ ದಾಖಲೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಭಾರತೀಯ ಕಾನೂನು ವಿಲ್ಗಳನ್ನು ನೋಂದಾಯಿಸುವುದನ್ನು ಕಡ್ಡಾಯಗೊಳಿಸುವುದಿಲ್ಲ ಎಂದೂ ಸಹ ಸುಪ್ರೀಂಕೋರ್ಟ್ ಆದೇಶಿಸಿದೆ.
ನಲವತ್ತು ವರ್ಷಗಳ ಹೋರಾಟದ ಬಳಿಕ ಈ ತೀರ್ಪು ಹೊರಬಿದ್ದಿದೆ. ಆದರೆ, ಪ್ರಕರಣದಲ್ಲಿ ವಾದಿ-ಪ್ರತಿವಾದಿ ಇಬ್ಬರೂ ಮೃತಪಟ್ಟಿದ್ದು ಅವರ ಉತ್ತರಾಧಿಕಾರಿಗಳು ಈಗ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಅನುಭವಿಸುವಂತಾಗಿದೆ.
ನ್ಯಾಯಮೂರ್ತಿಗಳಾದ ವಿಜಯ್ ಬಿಷ್ಣೋಯ್ ಹಾಗೂ ಉಜ್ವಲ್ ಭೂಯಾನ್ ಅವರಿದ್ದ ಪೀಠ ವ್ಯಕ್ತಿಯೊಬ್ಬ ತನ್ನ ಸಹೋದರಿಯ ಪರ ಬರೆದ ಉಯಿಲಿನ ಸಿಂಧುತ್ವವವನ್ನು ಎತ್ತಿಹಿಡಿದಿದೆ.
ಇಶ್ವರ್ದಿಯೋ ನರೇನ್ ಸಿಂಗ್ ವರ್ಸಸ್ ಕಾಮತಾದೇವಿ (1953) ಪ್ರಕರಣದ ತೀರ್ಪು ಉಲ್ಲೇಖಿಸಿರುವ ಸುಪ್ರೀಂಕೋರ್ಟ್ ಕಾನೂನಿನಲ್ಲಿ ಯಾವುದೇ ಉಯಿಲು (ವಿಲ್) ಕಡ್ಡಾಯವಿಲ್ಲ ಮತ್ತು ಹೆಚ್ಚಿನ ಪ್ರಕರಣಗಳಲ್ಲಿ ಉಯಿಲುಗಳನ್ನು ನೋಂದಾಯಿಸುವುದೇ ಇಲ್ಲ. ನೋಂದಣಿಯಾಗದ ಕಾರಣವನ್ನೇ ಮುಂದಿಟ್ಟುಕೊಂಡು ಅದರ ನೈಜತೆಯ ವಿರುದ್ಧ ಯಾವುದೇ ತೀರ್ಮಾನ ಕೈಗೊಳ್ಳುವುದು ಅನಗತ್ಯ ಎಂದು ಸ್ಪಷ್ಟಪಡಿಸಿದೆ.
ಮಾನ್ಯವಾದ ವಿಲ್ಗೆ ನೋಂದಣಿ ಕಾನೂನುಬದ್ಧ ಅವಶ್ಯಕತೆಯಲ್ಲ. ಉಯಿಲಿನ ಸುತ್ತಲಿನ ಅನುಮಾನಾಸ್ಪದ ಸಂದರ್ಭಗಳು ಸೂಕ್ಷ್ಮವಾಗಿ ಪರಿಶೀಲಿಸಬೇಕಾದ ಅಗತ್ಯವಿದ್ದರೂ, ನೋಂದಣಿ ಮಾಡದಿರುವುದು ಅಂತಹ ಅನುಮಾನಾಸ್ಪದ ಸನ್ನಿವೇಶಗಳಲ್ಲಿ ಒಂದಾಗಲು ಸಾಧ್ಯವಿಲ್ಲ. ಕಂದಾಯ ದಾಖಲೆಗಳಲ್ಲಿ ಮಾಡಲಾದ ಪರಿವರ್ತನೆಯ ಆಸ್ತಿ ಹಕ್ಕನ್ನು ನೀಡುವುದಿಲ್ಲ. ಕಂದಾಯ ದಾಖಲೆಗಳಲ್ಲಿನ ಉಲ್ಲೇಖ ಹಣಕಾಸಿನ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗುತ್ತದೆ. ಸ್ವಾಭಾವಿಕ ಉತ್ತರಾಧಿಕಾರಿಗಳನ್ನು ವಿಲ್ನಿಂದ ಹೊರಗಿಡುವುದು ಅದನ್ನು ಸ್ವಯಂಚಾಲಿತವಾಗಿ ಅನುಮಾನಾಸ್ಪದವಾಗಿಸುವುದಿಲ್ಲ. ಏಕೆಂದರೆ ವಿಲ್ನ ಉದ್ದೇಶವೇ ಸಾಮಾನ್ಯ ಉತ್ತರಾಧಿಕಾರವನ್ನು ಬದಲಾಯಿಸುವುದಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.
ಈ ಪ್ರಕರಣದಲ್ಲಿ ವಿಲ್ನ್ನು ಪ್ರಮಾಣೀಕರಿಸುವ ಸಾಕ್ಷಿಯ ಸಾಕ್ಷ್ಯದ ಮೂಲಕ ಸರಿಯಾಗಿ ಸಾಬೀತುಪಡಿಸಲಾಗಿದೆ. ವಿಲ್ ಬರೆದಿರುವವರು ಅದನ್ನು ಸ್ವಯಂಪ್ರೇರಣೆಯಿಂದ ಮಾಡಿದ್ದಾರೆ ಹಾಗೂ ವಿಲ್ ಬರೆಯುವಾಗ ಅವರ ಮನಸ್ಥಿತಿ ಉತ್ತಮವಾಗಿಯೇ ಇತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮೇಲ್ಮನವಿದಾರರು ನಕಲಿ ದಾಖಲೆ ಸೃಷ್ಟಿಸಿದ್ದಾರೆಂದು ಆರೋಪಿಸಿದ್ದರೂ, ತಮ್ಮ ಹಕ್ಕನ್ನು ಸಾಬೀತುಪಡಿಸಲು ಪುರಾವೆಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ. ಹಿಂದಿನ ನ್ಯಾಯಾಲಯಗಳ ಆದೇಶಗಳಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂಬ ಅಭಿಪ್ರಾಯಪಟ್ಟು ಮೇಲ್ಮನವಿಯನ್ನು ವಜಾಗೊಳಿಸಿದೆ.
ಪ್ರಕರಣವೇನು? ಮುಂಬಯಿ ಮೂಲದ ಬಿ.ಶೀನಾ ನೈರಿ ಎಂಬುವವರು ಪ್ರತಿಷ್ಠಿತ ಕಂಪನಿಗಳಲ್ಲಿ ಲೆಕ್ಕ ಪರಿಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮುಂಬಿಯಿಯಲ್ಲಿ ಫ್ಲಾಟ್ ಹಾಗೂ ಉಡುಪಿ ಸಮೀಪದ ಬ್ರಹ್ಮಾವರ ಮತ್ತು ಚಂತರ್ ಗ್ರಾಮದಲ್ಲಿ ಕೃಷಿ ಭೂಮಿ ಹಾಗೂ ಪಿತ್ರಾರ್ಜಿತ ಆಸ್ತಿ ಹೊಂದಿದ್ದರು. ಅವರಿಗೆ ಅಕ್ಕನ್ನಿ ನೈರಿ, ಲಕ್ಷ್ಮೀ ನೈರ್ತಿ ಎಂಬ ಸಹೋದರಿಯರು ಹಾಗೂ ಜನ್ನನಾಥ ನೈರಿ, ಬಿ.ಲಕ್ಷ್ಮಣ ನೈರಿ ಎಂಬ ಸಹೋದರರು ಇದ್ದರು. ಹಿರಿಯ ಸಹೋದರಿ ಅಕ್ಕನ್ನಿ ನೈರಿ ಅವರು ಅಕಾಲಿಕ ಮರಣ ಹೊಂದಿದ್ದರಿಂದ ಶಿನಾ ನೈರಿ ಅವರ ಇಬ್ಬರು ಹೆಣ್ಣುಮಕ್ಕಳನ್ನು ತಾವೇ ಸಾಕಿ ಮದುವೆ ಮಾಡಿದರು.
ಶೀನಾ ನೈರಿ ಅವರು ಪಾರ್ವತಿ ನೈರ್ತಿ ಅವರನ್ನು ವಿವಾಹವಾಗಿದ್ದರು. ಶೀನಾ 1983ರ ಮೇ 15ರಂದು ತಮ್ಮ ಆಸ್ತಿಯನ್ನು ಸಹೋದರಿ ಲಕ್ಷ್ಮೀ ನೈರ್ತಿ ಹೆಸರಿಗೆ ವಿಲ್ ಮಾಡಿದ್ದರು, ತಮ್ಮ 69ನೇ ವಯಸ್ಸಿಗೆ ನಿಧನರಾದರು. ಪತಿ ನಿಧನರಾದ ನಂತರ ಪಾರ್ವತಿ ನೈರ್ತಿ, ಉಡುಪಿ ತಹಸೀಲ್ದಾರ್ ಮುಂದೆ ಅರ್ಜಿ ಸಲ್ಲಿಸಿ ತನ್ನ ಪತಿಯ ಆಸ್ತಿಯೆಲ್ಲಾ ತನಗೇ ಸೇರಬೇಕು ಎಂದು ಕೋರಿದ್ದರು. ತಹಸೀಲ್ದಾರ್ ಕರ್ನಾಟಕ ಭೂ ಕಂದಾಯ ಕಾಯಿದೆ 1964ರಡಿ ನೋಟಿಸ್ ನೀಡಿ ನಂತರ 1984ರಲ್ಲಿ ಆಸ್ತಿಯ ಕಂದಾಯ ದಾಖಲೆಗಳನ್ನು ಪತ್ನಿ ಹೆಸರಿಗೆ ಮಾಡುವಂತೆ ಆದೇಶಿಸಿದ್ದರು.
1990ರಲ್ಲಿ ಲಕ್ಷ್ಮೀ ನೈರ್ತಿ ಉಡುಪಿ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ವಿಲ್ ಪ್ರಕಾರ ಎಲ್ಲಾ ಆಸ್ತಿ ತನಗೆ ಸೇರಿದ್ದೆಂದು ಘೋಷಿಸುವಂತೆ ಕೋರಿದ್ದರು. ಆದರೆ ಪಾರ್ವತಿ ನೈರ್ತಿ ಅವರು ಆ ವಿಲ್ ನಕಲಿಯಾಗಿದ್ದು, ಅದನ್ನು ಸೃಷ್ಟಿಸಲಾಗಿದೆ. ತಮ್ಮ ಪತಿ ಯಾವುದೇ ವಿಲ್ ಮಾಡಿರಲಿಲ್ಲ ಎಂದು ಆಕ್ಷೇಪಸಿದ್ದರು. 2008ರಲ್ಲಿ ವಿಚಾರಣಾ ಕೋರ್ಟ್, ವಿಲ್ ಆಧಾರದಲ್ಲಿ ಲಕ್ಷ್ಮೀ ನೈರ್ತಿ ಅವರೇ ಆಸ್ತಿ ಹಕ್ಕುದಾರರು ಎಂದು ತೀರ್ಪು ನೀಡಿತ್ತು. ನಂತರ ಪಾರ್ವತಿ ಹಾಗೂ ಅವರ ಮಕ್ಕಳು ಉಡುಪಿ ಸೆಷನ್ಸ್ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಲಯ 2012 ಆ.6ರಂದು ಅವರ ಅರ್ಜಿಯನ್ನು ವಜಾಗೊಳಿಸಿ ಸಿವಿಲ್ ಕೋರ್ಟ್ ಆದೇಶವನ್ನು ಎತ್ತಿಹಿಡಿದಿತ್ತು. ಹಾಗಾಗಿ, ಪಾರ್ವತಿ ಮತ್ತವರ ಮಕ್ಕಳು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಕೂಡಾ 2012ರ ನ.15ರಂದು ಮೇಲ್ಮನವಿ ವಜಾಗೊಳಿಸಿ ವಿಲ್ ಪ್ರಕಾರ ಆಸ್ತಿ ಲಕ್ಷ್ಮೀ ನೈರ್ತಿ ಅವರಿಗೆ ಸೇರಿದ್ದೆಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಪಾರ್ವತಿ ಸುಪ್ರೀಂಕೋರ್ಟ್ನಲ್ಲಿ 2014ರಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು.





