ಸ್ಬಾತಂತ್ರ್ಯಪೂರ್ವದಲ್ಲಿ ಅವಿಭಜಿತ ದಕ್ಷಿಣಕನ್ನಡದ ಭಾಗವವಾಗಿ ಮದರಾಸಿನ ಪ್ರಾಂತ್ಯದಲ್ಲಿದ್ದ ಕಾರಸಗೋಡು, ರಾಜ್ಯಗಳ ಭಾಷಾವಾರು ವಿಭಜನೆಯ ಸಮಯದಲ್ಲಿ ಕನ್ನಡಿಗರೇ ಪ್ರಾಭಲ್ಯವಾಗಿದ್ದರೂ, ಕೇರಳದ ಪಾಲಾದಾಗ ಮನನೊಂದು ಉಗ್ರವಾದ ಪ್ರತಿಭಟನೆ ನಡೆಸಲು ಪ್ರೇರೇಪರಾಗಿ ಕನ್ನಡದ ಕಿಚ್ಚನ್ನು ಹತ್ತಿಸಿದವರೇ, ಶ್ರೀ ಕಯ್ಯಾರ ಕಿಞ್ಞಣ್ಣ ರೈ. ಅದೇ ಸಂದರ್ಭದಲ್ಲಿ ಬಹಳವಾಗಿ ನೊಂದಿದ್ದ ರೈಗಳು ದುಃಖದಿಂದ
ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ ಎಲ್ಲರೂ ಎದ್ದೆದ್ದು ಓಡಿ ಬನ್ನಿ
ಕನ್ನಡದ ಗಡಿಕಾಯೆ, ಗುಡಿಕಾಯೆ, ನುಡಿಕಾಯೆ ಕಾಯಲಾರೆನೆ ಸಾಯೆ ಓ ಬನ್ನಿ -ಬೆಂಕಿ ಬಿದ್ದಿದೆ ಮನೆಗೆ!
ಹಾರೆಗುದ್ಲಿ ಕೊಡಲಿ ನೊಗ ನೇಗಿಲೆತ್ತುತಲಿ ನೆಲದಿಂದ ಹೊಲದಿಂದ ಹೊರಟು ಬನ್ನಿ
ಕನ್ನಡದ ನಾಡಿಂದ, ಕಾಡಿಂದ, ಗೂಡಿಂದ ಕಡಲಿಂದ, ಸಿಡಿಲಿಂದ ಗುಡುಗಿಬನ್ನಿ ಬೆಂಕಿಬಿದ್ದಿದೆ ಮನೆಗೆ!
ಅಕ್ಕಂದಿರೆ ಅಣ್ಣಂದಿರೆ, ತಂಗಿಯರೆ ತಮ್ಮಂದಿರೆ ಬೆಂಕಿಯನ್ನಾರಿಸಲು ಬೇಗ ಬನ್ನಿ
ಕನ್ನಡದ ಒಲವೊಂದೆ ಛಲವೊಂದೆ, ನೆಲವೊಂದೆ ನಾಡ ನುಳಿಸುವೆನಂದರೆ ಓಡಿ ಬನ್ನಿ ಬೆಂಕಿ ಬಿದ್ದಿದೆ ಮನೆಗೆ!
ಎಂಬ ಪದ್ಯವನ್ನು ಬರೆದು ಅಂದಿನ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಿದರೂ ಆವರೆಲ್ಲರ ಹೋರಾಟ ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದ ಹಾಗಾಗಿದ್ದು ನಿಜಕ್ಕೂ ವಿಷಾಧನೀಯವೇ ಸರಿ.
ಹಿರಿಯ ಸಾಹಿತಿಯಾಗಿ, ಬಹುಭಾಷಾ ಕೋವಿದರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯ ನಾಯಕರಾಗಿ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಕರಾಗಿ, ಸ್ಥಳೀಯ ಜನಪ್ರತಿನಿಧಿಯಾಗಿ ಕನ್ನಡ ಮತ್ತು ಕಾಸರುಗೋಡನ್ನು ಕರ್ನಾಟಕ್ಕಕ್ಕೆ ಸೇರಿಸಲು ನಿರಂತರವಾಗಿ ದುಡಿದವರು, ಶತಾಯುಷಿ, ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈರವರು.
ಕಿಞ್ಞಣ್ಣ ರೈಯವರು 1915 ಜೂನ್ 8 ರಂದು ಶ್ರೀ ದುಗ್ಗಪ್ಪ ರೈ ಮತ್ತು ಶ್ರೀಮತಿ ದ್ಯೇಯಕ್ಕ ರೈ ದಂಪತಿಗಳ ಮಗನಾಗಿ ಅಂದಿನ ಕರ್ನಾಟಕದ ಕಾಸರಗೋಡಿನ ಪೆರಡಾಲ ಗ್ರಾಮದಲ್ಲಿ ಜನಿಸಿದರು. ಮಾತೃಭಾಷೆ ತುಳುವಾದರೂ, ಕಲಿತದ್ದೆಲ್ಲಾ ಕನ್ನಡದಲ್ಲೇ. ತಮ್ಮ ಹನ್ನೆರಡನೆಯ ವಯಸ್ಸಿನಲ್ಲೇ ಗೆಳೆಯರೊಡನೆ ಜೊತೆಗೂಡಿ ಕನ್ನಡದಲ್ಲಿ ಸುಶೀಲ ಎಂಬ ಕೈಬರಹ ಪತ್ರಿಕೆಯನ್ನು ಹೊರ ತಂದು ಅಂದು ಗಾಂಧಿಯವರ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿದ್ದ ಸ್ವಾತಂತ್ರ್ಯ ಚಳುವಳಿಯ ಲೇಖನಗಳನ್ನು ಪ್ರಕಟಿಸುತ್ತಾ ಜನಜಾಗೃತಿ ಗೊಳಿಸತೊಡಗಿದರು. ಹೀಗೇ ಯೌವನಾವಸ್ಥೆಗೆ ಬರುವಷ್ಟರಲ್ಲಿಯೇ ತಮಗೇ ಅರಿವಿಲ್ಲದಂತೆಯೇ ಮಹಾತ್ಮ ಗಾಂಧಿಯವರ ಹೋರಾಟದಿಂದ ಪ್ರೇರಿತರಾಗಿ ದೇಶದ ಸ್ವಾತಂತ್ರ್ಯದ ಚಳುವಳಿಯಲ್ಲಿ ಧುಮುಕಿ ತಮ್ಮ ಕ್ರಾಂತಿಕಾರಿ ಬರಹಗಳ ಮೂಲಕ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹತ್ತಿಸತೊಡಗಿದ್ದರು.
ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಯಲ್ಲಿಯೇ ಕನ್ನಡ ಮತ್ತು ಸಂಸ್ಕೃತದ ಪದವಿಯನ್ನು ಪಡೆದು ಮಂಗಳೂರಿಗೆ ತಮ್ಮ ವಾಸ್ತವ್ಯವನ್ನು ಬದಲಿಸಿ ಅಲ್ಲಿ ಆಂಗ್ಲಭಾಷೆಯನ್ನೂ ಕಲಿತು, ಪತ್ರಿಕೋದ್ಯಮವನ್ನು ವೃತ್ತಿಯಾಗಿಸಿಕೊಂಡು ಮಂಗಳೂರಿನಲ್ಲಿ ಆಗತಾನೇ ಪ್ರಾರಂಭವಾಗಿದ್ದ ಸ್ವದೇಶಾಭಿಮಾನಿ
ಪತ್ರಿಕೋದ್ಯಮದಲ್ಲಿ ಪ್ರಸಿದ್ದಿ, ಗೌರವ, ಗಳಿಕೆ, ಅನುಕೂಲ, ಸೌಲಭ್ಯ ಹೆಚ್ಚಿದ್ದರೂ, ಕಯ್ಯಾರರ ಮನಸ್ಸು ಮಂಗಳೂರಿನಲ್ಲಿ ಹೆಚ್ಚಿನ ದಿನಗಳು ಇರಲು ಬಹಸದೇ ತನ್ನ ಸ್ವಗ್ರಾಮದ ಕಡೆಗೆ ಸೆಳೆಯುತಿತ್ತು. ದೇಶಕ್ಕಾಗಿ ಹೋರಾಟ, ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದ ಪರಿಣಾಮ ಅಖಂಡ ಭಾರತದ ಅಭ್ಯುದಯಕ್ಕಾಗಿ ಛಲತೊಟ್ಟರು. ಹಳ್ಳಿ ರಾಷ್ಟ್ರದ ಅಡಿಪಾಯ ಎಂಬುದನ್ನು ಅರಿತ ಕೈಯಾರರು ತಮಗೆ ಸಿಗುತಿದ್ದ ಎಲ್ಲಾ ಸೌಲಭ್ಯಗಳನ್ನು ತ್ಯಜಿಸಿ ಕಾಸರಗೋಡಿನ ತಮ್ಮ ಹಳ್ಳಿಯಲ್ಲಿ ಬಂದು ನೆಲೆಸಿದರು.





