ಕರ್ನಾಟಕ ರಾಜ್ಯವು ಪ್ರಕೃತಿ ಸೌಂದರ್ಯಗಳಿಗೆ ಮತ್ತು ಶಿಲ್ಪಕಲೆಗಳಿಗೆ ಪ್ರಸಿದ್ಧವಾದ ತಾಣವಾಗಿದ್ದು ಇಲ್ಲಿನ ರಮಣೀಯ ಪ್ರಕೃತಿತಾಣಗಳು ದೇಶವಿದೇಶದ ಪ್ರವಾಸಿಗರನ್ನು ಚಾರಣಿಗರನ್ನು ಕೈಬೀಸಿ ಕರೆಯುತ್ತಲಿರುತ್ತದೆ. ತುಮಕೂರು ಜಿಲ್ಲೆಗೆ ಸೇರಿರುವ ಮಧುಗಿರಿಯ ಏಕಶಿಲಾ ಬೆಟ್ಟವೂ ಸಹಾ ಅಂತಹದದ್ದೇ ಒಂದು ಸುಂದರ ರಮಣೀಯವಾದ ಪ್ರದೇಶವಾಗಿದ್ದು, ವಾರಾಂತ್ಯದಲ್ಲಿ ಆ ಬೆಟ್ಟವನ್ನು ನೋಡಲು/ಏರಲು ಸಹಸ್ರಾರು ಚಾರಣಿಗರು ಬರುವಂತಹ ಪ್ರದೇಶವಾಗಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ 102 ಕಿ.ಮೀ. ಮತ್ತು ಜಿಲ್ಲಾ ಕೇಂದ್ರ ತುಮಕೂರಿನಿಂದ 43 ಕಿ.ಮೀ. ಕೊರಟಗೆರೆಯಿಂದ 18, ಕಿ.ಮಿ. ಮತ್ತು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಿಗುವ ಸಿರಾದಿಂದ ಬಡವನಹಳ್ಳಿ ಮಾರ್ಗವಾಗಿ 39 ಕಿ ಮೀ ದೂರದಲ್ಲಿರುವ ಮಧುಗಿರಿಯ ಏಕಶಿಲಾ ಬೆಟ್ಟ ಏಷ್ಯಾದ ಎರಡನೇ ಅತಿದೊಡ್ಡ ಏಕಶಿಲಾಬೆಟ್ಟವಾಗಿದೆ. ಇದು ಪಾವಗಡದಿಂದ ಬಳ್ಳಾರಿಯವರೆಗೆ ಹರಡಿರುವ ಪರ್ವತ ಶ್ರೇಣಿಯ ಭಾಗವಾಗಿದೆ. ಈ ಏಕಶಿಲಾ ಬೆಟ್ಟವು ಸಮುದ್ರ ಮಟ್ಟದಿಂದ 3,930 ಅಡಿ (1,200 ಮೀ)ಗಳಷ್ಟು ಎತ್ತರವಿದ್ದು ಸುಮಾರು 121 ಎಕರೆಗಳಷ್ಟು ವಿಸ್ತಾರವಾಗಿದೆ. ಇಲ್ಲಿ 17ನೇ ಶತಮಾನದಲ್ಲಿ ನಿರ್ಮಾಣವಾದ ಕೋಟೆ ಇದ್ದು, ಚಾರಣಿಗರಿಗೆ ಅತ್ಯಂತ ಪ್ರೀತಿ ಪಾತ್ರ ಸ್ಥಳವಾಗಿದೆ. ಈ ಬೆಟ್ಟದ ಸುತ್ತಲಿನ ಪ್ರದೇಶವು ಪ್ರಸ್ತುತ ಗಣಿಗಾರಿಕೆಯ ತಾಣವಾಗಿರುವುದು ದುರಾದೃಷ್ಟದ ಸಂಗತಿಯಾಗಿದೆ.

ಈ ಏಕಶಿಲಾ ಬೆಟ್ಟವನ್ನು ದಕ್ಷಿಣ ದಿಕ್ಕಿನಿಂದ ನೋಡಿದಾಗ ಮದಿಸಿದ ಕರಿಯಂತೆ ಕಾಣುವುದರಿಂದ ಈ ಬೆಟ್ಟಕ್ಕೆ ಮೂಲತಃ ಮದ್ದಗಿರಿ ಎಂದೇ ಕರೆಯಲಾಗುತ್ತಿತ್ತು. ಮತ್ತು 20ನೇ ಶತಮಾನದ ಆದಿಭಾಗದವರೆಗೂ ಅದೇ ಹೆಸರು ಬಳಕೆಯಲ್ಲಿತ್ತು. ಸಾಧಾರಣವಾಗಿ ಜೇನುಹುಳುಗಳು ಜನ ಸಾಮಾನ್ಯರಿಂದ ಮತ್ತು ಶತ್ರುಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಯಾರೂ ಸಹಾ ತಲುಪದಂತಹ ದುರ್ಗಮ ಪ್ರದೇಶದಲ್ಲಿ ಜೇನುಗೂಡುಗಳನ್ನು ಕಟ್ಟುವುದರಿಂದ ಈ ಬೆಟ್ಟದ ತುಂಬೆಲ್ಲಾ ಅಸಂಖ್ಯಾತವಾದ ಜೇನುಗೂಡುಗಳಿಂದ ಶೋಭಿಸುತ್ತಿದ್ದವು. 1926ರ ಆಸುಪಾಸಿನಲ್ಲಿ ಅಲ್ಲಿನ ಉಪವಿಭಾಗಾಧಿಕಾರಿಗಳಾಗಿದ್ದ ಕನ್ನಡದ ಹಿರಿಯ ಸಾಹಿತಿಗಳು ಮತ್ತು ಜ್ಞಾನಪೀಠ ಪುರಸ್ಕೃತರಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರು ಜೇನುಗೂಡುಗಳಿಂದ ತುಂಬಿದ್ದ ಈ ಮದ್ದಗಿರಿಯ ಜೇನುಗೂಡಿಗೆ ಅನ್ವರ್ಥವಾಗುವಂತೆ ಮಧುಗಿರಿ ಆಗಬೇಕೆಂಬ ಅಭಿಲಾಷೆ ಹೊತ್ತು, ಸ್ಥಳೀಯರನ್ನು ಮಾತನಾಡಿಸಿ ಅವರ ಮನವೊಲಿಸಿ, ಊರಿನಲ್ಲಿದ್ದ ಗಿರಿಯ ನೆನಪೂ ಉಳಿಯಬೇಕು, ಹೆಸರು ಚೆನ್ನಾಗಿರಬೇಕು ಮತ್ತು ಬೆಟ್ಟದಲ್ಲಿ ದೊರೆಯುತ್ತಿದ್ದ ಜೇನಿನ ನೆನಪು ಸಾರ್ಥಕವಾಗುವಂತೆ (ಮಧು-ಜೇನು, ಗಿರಿ-ಬೆಟ್ಟ) ಎಂದು 1926ರಲ್ಲಿ ಮುದ್ದಗಿರಿಗೆ ಮಧುಗಿರಿ ಎಂದು ಮರುನಾಮಕರಣ ಮಾಡಿದರು. ಆದೇ ರೀತಿ ಈ ಪ್ರದೇಶವು ರುಚಿಯಾದ ಸೀತಾಫಲ ಮತ್ತು ದಾಳಿಂಬೆ ಬೆಳೆಗೂ ಖ್ಯಾತವಾಗಿದ್ದು ಅಲ್ಲಿನ ದಾಳಿಂಬೆಗಳು ಮಧುಗಿರಿಯ ಮಧು ಎಂದೇ ಪ್ರಖ್ಯಾತವಾಗಿರುವುದು ಗಮನಾರ್ಹವಾಗಿದೆ.

ಮಧುಗಿರಿ ಏಕಶಿಲಾ ಬೆಟ್ಟ ಮತ್ತು ಅಂತಹ ಕಡಿದಾದ ಇಳಿಜಾರು ಬೆಟ್ಟದಲ್ಲಿರುವ ಕೋಟೆಯನ್ನು ಕ್ರಿ.ಶ 1670 ರ ಸುಮಾರಿಗೆ 17 ನೇ ಶತಮಾನದಲ್ಲಿ ರಾಜ ಹೀರಾಗೌಡರು ನಿರ್ಮಾಣಮಾಡಿದ ನಂತರ ಇಲ್ಲಿ ಅನೇಕ ಅತಿರಥ ಮಹಾರಾಜರು, ಪಾಳೆಗಾರರು, ಸಾಮಂತ ರಾಜರುಗಳು, ಪರ್ಶಿಯನ್ ನವಾಬರು, ಮರಾಠರು, ಬ್ರಿಟಿಷರು ಆಳ್ವಿಕೆ ಮಾಡಿ, ಸಾಕಷ್ಟು ರಾಜರುಗಳು ರಾಜಧಾನಿ ಮಾಡಿಕೊಂಡು, ಅಭಿವೃದ್ಧಿ ಪಡಿಸಿಸಿರುವುದಲ್ಲದೇ, ಈ ಕೋಟೆ ಕೊತ್ತಲಗಳನ್ನು ಕಟ್ಟಿ ಸರ್ಪಗಾವಲು ಸೃಷ್ಟಿಸಿ ಇತಿಹಾಸ ನಿರ್ಮಿಸಿ ಹೋಗಿದ್ದಾರೆ. ಮೂಲತಃ ಮಣ್ಣಿನಲ್ಲಿ ಕಟ್ಟಿರುವ ಕೋಟೆಯ ನಿರ್ಮಾಣದ ಹಿಂದಿರುವ ಕಥೆಯು ಅತ್ಯಂತ ಕುತೂಹಲಕಾರಿಯಾಗಿದೆ. ಈ ಬೆಟ್ಟದ ಸುತ್ತಮುತ್ತಲಿನ ಪ್ರದೇಶದ ದನಕರುಗಳು ಮತ್ತು ಕುರಿಗಳು ತಮ್ಮ ಮೇವಿಗಾಗಿ ಇದೇ ಬೆಟ್ಟವನ್ನು ಆಶ್ರಯಿಸಿ ಕೆಲವೊಮ್ಮೆ ದಾರಿತಪ್ಪಿ ಕಾಣೆಯಾಗಿ, ತಡರಾತ್ರಿಯಲ್ಲಿ ಸಮಯದಲ್ಲಿ ಬರುತ್ತಿದ್ದವು. ಹಾಗೆ ದಾರಿತಪ್ಪಿದ ಪ್ರಾಣಿಗಳಿಗೆ ಅಲ್ಲಿ ನೀರು ಸಹಾ ದೊರಕದಿದ್ದದ್ದನ್ನು ಗಮನಿಸಿದ ರಾಜರು ಅಲ್ಲೊಂದು ಕೋಟೆ ನಿರ್ಮಿಸುವ ನಿರ್ಧಾರಕ್ಕೆ ಬಂದು ಆ ಕಾರ್ಯವನ್ನು ಪೂರ್ಣಗೊಳಿಸಿ ಅಲ್ಲಿಯೇ ನೆಲೆಸಲು ಪ್ರಾರಂಭಿಸಿದರು ಎಂದು ಇತಿಹಾಸಕಾರರು ಹೇಳುತ್ತಾರೆ.





