ಸಾಲು ಮರದ ತಿಮ್ಮಕ್ಕನಂತೆಯೇ ಮತ್ತೊಬ್ಬ ವೃಕ್ಷಮಾತೆ ಇದ್ದಾರೆ, ಅವರೇ ತುಳಸೀಗೌಡ. ಇವರ ಪರಿಸರ ಪ್ರೇಮ, ಸೇವಾ ಮನೋಭಾವದ ಬಗ್ಗೆ ವಿವರವಾಗಿ ತಿಳಿಯೋಣವೇ…..?

ತುಳಸಿಗೌಡ ಒಬ್ಬ ವಿಶಿಷ್ಟ ಪರಿಸರಪ್ರೇಮಿ. ಅಂಕೋಲಾ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿಗೌಡರ ಸಾಧನೆ ಅಪಾರ. ವೃಕ್ಷ ಮಾತೆ ಎಂದೆನಿಸಿಕೊಂಡಿರುವ ಈಕೆ ಹಲವಾರು ಸಾವಿರ ಮರಗಳನ್ನು ಬೆಳೆಸಿದ್ದಾರೆ. ಕಟ್ಟಿಗೆ ಸಂಗ್ರಹಿಸಿ ಮಾರಾಟ ಮಾಡಿ, ಜೀವನ ನಡೆಸುತ್ತಾ ಮತ್ತಿಘಟ್ಟ ಅರಣ್ಯ ನರ್ಸರಿಯಲ್ಲಿ ಸೇವೆ ಮಾಡಿ, ನಿವೃತ್ತರಾದರು. ನಂತರ ಹೊಸ ಪೀಳಿಗೆಗೆ ಮಾರ್ಗದರ್ಶನ ನೀಡುತ್ತಿದ್ದರು.

ಸರಳ ವ್ಯಕ್ತಿತ್ವ

ಕೊರಳಪೂರ್ತಿ ಕರಿಮಣಿ ಸರಗಳು, ಕುಪ್ಪಸವಿಲ್ಲದೆ ಎತ್ತಿ ಕಟ್ಟಿದ ಹೆರಳು, ಮಹಾ ಸರಳಜೀವಿ. ಬರಿಗಾಲಲ್ಲಿ ರಾಷ್ಟ್ರಪತಿ ಭವನವನ್ನು ತುಳಿದು ಪದ್ಮಶ್ರೀ ಪ್ರಶಸ್ತಿ ಪಡೆದ ತುಳಸವ್ವ ತುಳಸಿಗೌಡ, ಮಲೆನಾಡಿನ ಬುಡಕಟ್ಟು ಜನಾಂಗಾದ ಹಾಲಕ್ಕಿ ಒಕ್ಕಲಿಗರ ಕಡುಬಡ ಕುಟುಂಬದಲ್ಲಿ ಹುಟ್ಟಿದಳು. ಉತ್ತರ ಕನ್ನಡದ ಯಲ್ಲಾಪುರ ರಾಮನಗುಳಿಯ ಸಸ್ಯಪಾಲನ ಕ್ಷೇತ್ರದಲ್ಲಿ ಸಸಿ ಮರಗಳ ಜೊತೆಗೆ ಮಣ್ಣಿನ ಮಗಳಾಗಿ ದುಡಿದು, ಕೊನೆ ಉರಿಸಿನವರೆಗೂ ಗುಡಿಸಲಿನಲ್ಲಿ ಬದುಕಿದ ಪ್ರಕೃತಿ ಮಗಳೇ ತುಳಸವ್ವ ತುಳಸೀಗೌಡ, ತನ್ನ ಅಪರೂಪದ ಸಾಧನೆಗಳ ನಂತರ ಇಹಲೋಕ ತ್ಯಜಿಸಿದ್ದಾಳೆ.

ಹಲವು ದಶಕಗಳ ಅನನ್ಯ ಸೇವೆ

ಕಳೆದ ಆರು ದಶಕಗಳಿಂದ ನರ್ಸರಿಯಲ್ಲಿ ಕೆಲಸ ಮಾಡುತ್ತಾ, ಯಾವುದೇ ಪ್ರತಿಫಲದ ನಿರೀಕ್ಷೆ ಇಲ್ಲದೆ ದುಡಿಯುತ್ತಿದ್ದರು. ಅರಣ್ಯ ಇಲಾಖೆ ನಡೆಸಿದ ಅರಣ್ಯೀಕರಣ ಕಾರ್ಯಕ್ರಮದಲ್ಲಿ ಸಕ್ರಿಯವವಾಗಿ ಪಾಲ್ಗೊಂಡಿದ್ದರು. ಇವರ ಸೇವಾ ಮನೋಭಾವ ಗುರುತಿಸಿ ಇಲಾಖೆ ಆಕೆಯ ಸೇವೆಯನ್ನು ಕ್ರಮಬದ್ಧಗೊಳಿಸಿತ್ತು.

ಚಿಕ್ಕಂದಿನಲ್ಲೇ ಗೋವಿಂದೇ ಗೌಡ ಎಂಬುವರನ್ನು ಬಾಲ್ಯ ವಿವಾಹವಾಗಿದ್ದ ತುಳಸಿ, 17ನೇ ವಯಸ್ಸಿನಲ್ಲೇ ವಿಧವೆಯಾಗಿ, ಜೀವನವಿಡೀ ಕಷ್ಟಪಟ್ಟರು. ಪರಿಸರ ಪ್ರೇಮ ಅವರಿಗೆ ಹುಟ್ಟಿನಿಂದಲೇ ಬಂದಿತ್ತು.

ಅರಣ್ಯ ಇಲಾಖೆಗಾಗಿ ಸೇವೆ

ಅರಣ್ಯ ಇಲಾಖೆಗಾಗಿ ಬೀಜಗಳನ್ನು ಶೇಖರಣೆ ಮಾಡಿ, ಸಸಿ ಮಾಡಿ ಕೊಡುವುದು ಇವರ ಮುಖ್ಯ ಕೆಲಸ. ಇವರು ಬೆಳೆಸದ ಮರವೇ ಇಲ್ಲ ಎನ್ನಬಹುದು. ಇವರ ಮಗ ಸುಬ್ರಾಯಗೌಡ ಇವರ ಕೆಲಸದ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ.

ಸುತ್ತಮುತ್ತಲ ಗ್ರಾಮಸ್ಥರಿಗೆ ತುಳಸಜ್ಜಿ ಎಂದೇ ಇವರು ಜನಪ್ರಿಯ. ಕಾಡೆಲ್ಲ ಸುತ್ತಿ ಅಪರೂಪದ ಬೀಜ ಮತ್ತು ಗಿಡಗಳನ್ನು ಸಂಗ್ರಹಿಸುತ್ತಿದ್ದರು.

ಹಲವು ಊರುಗಳಲ್ಲೂ ಖ್ಯಾತರು

ಮುಂದೆ ಇದು ಹೆಚ್ಚುತ್ತಾ ಹೋಗಿ ಹೊನ್ನಾಳಿ, ಮಸ್ತಿಘಟ್ಟ, ಹೆಗ್ಗೂಡು, ಹೊಲೀಗೆ, ವಜ್ರಹಳ್ಳಿ, ಡೊಂಗ್ರಿ, ಕಲ್ಲೇಶ್ವರ, ಅಡಗೂರು, ಅಗಸೂರು, ಸಿರಗುಂಜಿ, ಎಲ್ಲೋಗಡ್ಡೆಗಳ ಖಾಲಿ ಭೂಮಿಯಲ್ಲಿ ಅರಣ್ಯ ಇಲಾಖೆ ಇವರಿಂದ 30 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಡಿಸಿ, ಇಂದು ದೊಡ್ಡ ಮರಗಳನ್ನಾಗಿಸಿದೆ.

ವರ್ಷಕ್ಕೆ ಸುಮಾರು 30 ಸಾವಿರ ಗಿಡಗಳ ನಾಟಿ ಮಾಡಿದ ಸಾಧನೆ ಇರದು. ಈ ರೀತಿ ಸಸ್ಯ ಸಂರಕ್ಷಣೆಯಲ್ಲಿ ಜೀವನವಿಡೀ ದೊಡ್ಡ ಉಪಾಸನೆಯನ್ನೇ ನಡೆಸಿದರು ಎಂದರೆ ಉತ್ಪ್ರೇಕ್ಷೆಯಲ್ಲ. ಮರಗಳ್ಳರು ಅವನ್ನು ಕಡಿದಾಗ, ಎಷ್ಟೋ ಸಲ ಮರವನ್ನು ಅಪ್ಪಿ ಅತ್ತಿದ್ದಾರೆ.

ಅರಣ್ಯ ಇಲಾಖೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಅವಳ ತಾಯಿ ಜೊತೆ ಈಕೆ ಗಿಡಗಳಿಗೆ ನೀರೆಯುತ್ತಿದ್ದಳು. ಗಿಡ ನೆಡುವುದು, ಕಳೆ ಕೀಳುವುದು ಇಂತಹ ಕೆಲಸ ಮಾಡುತ್ತಿದ್ದರು. ಸಸ್ಯಶಾಸ್ತ್ರದ ಮಹಾನ್‌ ಜ್ಞಾನಿ ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ತುಳಸವ್ವ ಅಮ್ಮನ ಜೊತೆಗೆ ನರ್ಸರಿಗೆ ಹೋಗುತ್ತಿದ್ದಳು. ಮರ ಗಿಡಗಳ ಜೊತೆಯಲ್ಲಿ ಬದುಕು ಕಳೆದು ಸಸಿಗಳ ಬಗ್ಗೆ ಅಪಾರ ಒಲವು ಮತ್ತು ಬೀಜಗಳ ಬಗ್ಗೆ ಜ್ಞಾನ ಪಡೆದುಕೊಂಡು, ಓದಿದವರನ್ನೂ ಮೀರಿಸುವ ಸಸ್ಯ ಜ್ಞಾನದ ಸಂಪತ್ತು ಅವಳಲ್ಲಿ ಇತ್ತು ಎಂದರೆ ಸುಳ್ಳಲ್ಲ.

ಮರಗಳ ಭಾಷಾ ಪರಿಣಿತೆ ಎಂದೇ ಹೇಳಿಸಿಕೊಳ್ಳುವ ತುಳಸ್ವ ಯಾವ ಗಿಡದ ಜಾತಿ, ಯಾವ ಬೀಜ ಹಾಕಿದರೆ ಯಾವಾಗ ಸಸಿ ಹೂ ಬಿಡುತ್ತದೆ ಎಂದು ಗುರುತಿಸುವ ಚಾತುರ್ಯ ಇತ್ತು.

ನಡೆದಾಡುವ ಎನ್ಸೈಕ್ಲೋಪೀಡಿಯಾ

ಆ.ನ. ಯಲ್ಲಪ್ಪ ರೆಡ್ಡಿ, ತುಳಸವ್ವರ ಜ್ಞಾನವನ್ನು ಗುರುತಿಸಿ ಅವರಿಗೆ ಅಭಿಮಾನಿಸಿದರು. ಅರಣ್ಯ ಇಲಾಖೆಯಲ್ಲಿ ನಡೆದಾಡುವ ಎನ್ ಸೈಕ್ಲೋಪೀಡಿಯಾ ಎಂದೇ ಕರೆಸಿಕೊಂಡ ತುಳಸಮ್ಮ ವನದೇವತೆ ಕೂಡ!  80ನೇ ವಯಸ್ಸಿನಲ್ಲೂ ಸಹ ಗುಡಿಸಲಿನ ಸುತ್ತಮುತ್ತ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದ ಉತ್ಸಾಹಿ ಪರಿಸರ ಪ್ರೇಮಿ.

ಅರಣ್ಯಗಳ ವಿಶ್ವಕೋಶ ಎಂದೇ ಪ್ರಸಿದ್ಧಿ ಪಡೆದಿದ್ದಾರೆ ತುಳಸಿಗೌಡ, ಇದು ನಿಜಕ್ಕೂ ಹೆಮ್ಮೆಯ ವಿಷಯ.

ಪ್ರಶಸ್ತಿ ಪದಕ

ಇವರು ಪಡೆದಂಥ ಪ್ರಶಸ್ತಿಗಳು ಅನೇಕ. ರಾಜ್ಯೋತ್ಸವ ಪ್ರಶಸ್ತಿಯಿಂದ ಹಿಡಿದು, ಕೇಂದ್ರ ಸರ್ಕಾರದ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿಯವರೆಗೂ ಇವರಿಗೆ ಸಿಕ್ಕಿದೆ. ಇವರ ಈ ಪರಿಸರ ಪ್ರೇಮಕ್ಕೆ ಕೇಂದ್ರ ಸರ್ಕಾರ ಈಕೆಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.  ವಾಣಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ