ಭಾರತೀಯ ಸಂಸ್ಕೃತಿಯ ಪ್ರತೀಕವಾದ ಭರತನಾಟ್ಯ ನೃತ್ಯ ಕಲೆಯಲ್ಲಿ ಪಾರಂಗತೆ ಎನಿಸಿರುವ ಪೂಜಿತಾ ಭಾಸ್ಕರ್ ದೇಶ ವಿದೇಶಗಳಲ್ಲಿ ತಮ್ಮ ನೃತ್ಯ ಪ್ರದರ್ಶನಗಳಿಂದಾಗಿ ಉನ್ನತ ಹೆಸರು ಗಳಿಸಿದ್ದಾರೆ. ಇವರ ಪ್ರತಿಭೆಯ ಸಂಪೂರ್ಣ ಪರಿಚಯ ಪಡೆಯೋಣವೇ......?
ವಿನುತಾ ಹಾಗೂ ಎಸ್. ಭಾಸ್ಕರ್ ರವರ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನನ. ತಂದೆ ಸಿದ್ಧೇಶ್ವರ ಆರ್ಟ್ಸ್ ಫ್ರೇಮ್ಸ್ ನ ಮಾಲೀಕರು. ಭರತನಾಟ್ಯ ಕಲಾವಿದೆಯಲ್ಲೊಬ್ಬ ನಿರೂಪಕಿ, ಕೊರಿಯೋಗ್ರಾಫರ್, ಶಿಕ್ಷಕಿಯರು ಇದ್ದಾರೆ. ಸತತ 20 ವರ್ಷಗಳಿಂದ ತರಬೇತಿ ಪಡೆದಿರುವ ಇವರು, ಉಪಾಧ್ಯೆ ಸ್ಕೂಲ್ ಆಫ್ ಡ್ಯಾನ್ಸ್ ನ ಶಿಷ್ಯೆ. ಗುರುಗಳಾದ ಪಾರ್ಶ್ವನಾಥ್ ಉಪಾಧ್ಯೆ, ಶೃತಿ ಗೋಪಾಲ್ ಮತ್ತು ಆದಿತ್ಯ ಪಿ.ವಿ.ರವರ ಪರಮಶಿಷ್ಯೆಯಾಗಿ ಅವರ ಮಾರ್ಗದರ್ಶನದಲ್ಲಿ ಸಾಗುತ್ತಿರುವವರು. ನಿಪುಣತೆ ಮತ್ತು ವಿಶಿಷ್ಟವಾದ ಮಾರ್ಗದರ್ಶನ ಪಡೆದಿರುವ ಇವರೇ ಈ ಲೇಖನದ ಹೀರೋಯಿನ್ ಪೂಜಿತಾ ಭಾಸ್ಕರ್.
ನೃತ್ಯ ಪಯಣ
5 ವರ್ಷದ ಮಗುವಿನಿಂದಲೂ ನೃತ್ಯ ಎಂದರೆ ಎಲ್ಲಿಲ್ಲದ ಆಸೆ. ಅಂದಿನಿಂದಲೇ ಅಭ್ಯಾಸ ಪ್ರಾರಂಭ. ಶಕುಂತಲಾ ಆರ್. ಪ್ರಭಾತ್ ಇವರ ಪ್ರಥಮ ಗುರವರ್ಯರು. ಸುಮಾರು 15 ವರ್ಷಗಳ ಕಾಲ, ಶಕುಂತಲಾರ `ಸಮುದ್ಯತ ನೃತ್ಯ ಶಾಲೆ'ಯಲ್ಲಿ ಅಭ್ಯಸಿಸಿ, 2017ರಲ್ಲಿ ರಂಗ ಪ್ರವೇಶ ಮಾಡಿದರು. ನಂತರ ಉಪಾಧ್ಯೆ ಸ್ಕೂಲ್ ಆಫ್ ಡ್ಯಾನ್ಸ್ ನಲ್ಲಿ ತರಬೇತು ಪಡೆಯುತ್ತಾ ಬಂದಿದ್ದಾರೆ. ಅಲ್ಲದೆ, ಈಗ್ಗೆ 2 ವರ್ಷಗಳಿಂದ ಕಥಕ್ ನೃತ್ಯವನ್ನು ಆರ್. ಪ್ರಭಾತ್ ರಿಂದ ಅಭ್ಯಾಸ ಮಾಡುತ್ತಿರುವರು.
ಮುಂದುವರಿದ ನೃತ್ಯ ಪಯಣದಲ್ಲಿ ಇನ್ನೂ ಹೆಚ್ಚಿನ ಶಿಕ್ಷಣ ಪಡೆಯುವ ಸಲುವಾಗಿ, ಪ್ರಖ್ಯಾತ ಕಲಾವಿದರಾದ ರಾಜಶ್ರೀ ವಾರಿಯರ್, ಶೀಲಾ ಉನ್ನಿಕೃಷ್ಣನ್, ಪಾರ್ಶ್ವನಾಥ್ ಉಪಾಧ್ಯೆ, ವೈಭವ್ ಅರೇಕರ್, ಮೀರಾ ನಾರಾಯಣ್ ನಡೆಸುವ ಹಲವಾರು ನೃತ್ಯ ತರಬೇತು ಶಿಬಿರಗಳಲ್ಲಿ ಭಾಗಿಯಾಗಿದ್ದಾರೆ.
ಶೈಕ್ಷಣಿಕ ಸಾಧನೆಗಳು
ಬೆಂಗಳೂರಿನ ಮೌಂಟ್ ಕಾರ್ಮೆಲ್ಸ್ ಕಾಲೇಜಿನಲ್ಲಿ ಬಿ.ಕಾಂ. ಪದವಿಯನ್ನು ಪಡೆದು, ನಂತರ ನೃತ್ಯಕಲೆಯಲ್ಲಿನ ಸೆಳೆತದಿಂದಾಗಿ ಹೆಚ್ಚುವರಿ ವಿದ್ಯಾಭ್ಯಾಸವನ್ನು, ಜೈನ್ ಯೂನಿವರ್ಸಿಟಿಯಿಂದ ಮಾಸ್ಟರ್ ಇನ್ ಪರ್ಫಾರ್ಮಿಂಗ್ ಆರ್ಟ್ಸ್ ಪದವಿಯನ್ನು (ಎಂ.ಪಿ.ಎ. ಭರತನಾಟ್ಯ) ಉನ್ನತ ಅಂಕಗಳೊಟ್ಟಿಗೆ ಪಡೆದರು. ಗುರುಗಳಾದ ಡಾ. ಸೌಂದರ್ಯಾ ಶ್ರೀವತ್ಸ, ಶೀಲಾ ಚಂದ್ರಶೇಖರ್, ಡಾ. ಶೋಭಾ ಶಶಿಕುಮಾರ್ ರಿಂದ ಮಾರ್ಗದರ್ಶನವನ್ನು ಪಡೆದರು.
ಕರ್ನಾಟಕ ಸೆಕೆಂಡರಿ ಎಜುಕೇಶನ್ ಬೋರ್ಡ್ ನಿಂದ ಪ್ರೀ ವಿದ್ವತ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದು, 2022ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕರ್ನಾಟಕ ಸರ್ಕಾರದಿಂದ ಭರತನಾಟ್ಯಂಗವಾಗಿ ಸ್ಕಾಲರ್ ಶಿಪ್ ಕೂಡ ದೊರೆತಿದೆ.
ನೀತಾ ಅಂಬಾನಿಯವರ ನೇತೃತ್ವ
ನೀತಾ ಮುಖೇಶ್ ಅಂಬಾನಿ ಕಲ್ಚರ್ ಸೆಂಟರ್ ನ ಉದ್ಘಾಟನಾ ಸಮಾರಂಭದಲ್ಲಿ, ಮಯೂರಿ ಉಪಾಧ್ಯಾಯರ ನೇತೃತ್ವದಲ್ಲಿ ಜರುಗಿದ ನೃತ್ಯಋತ್ಯದ ಸಂಯೋಜನೆಯಲ್ಲಿನ ಒಂದು ಭಾಗವಾಗಿದ್ದು, ನನ್ನ ಹೆಗ್ಗಳಿಕೆಯೇ ಹೌದು ಎನ್ನುತ್ತಾರೆ ಪೂಜಿತಾ.
ಈ ತಂಡದೊಟ್ಟಿಗೆ ಪ್ರದರ್ಶನ ನೀಡಿದ್ದು, ಬಹಳ ಹೆಮ್ಮೆಯ ಹಾಗೂ ಸಂತಸದ ಸಂಗತಿ. ಬೃಹತ್ ವೇದಿಕೆ, ಸಾವಿರಾರು ಜನರ ಸಮಕ್ಷಮತೆ, ವಿಶ್ವ ಪ್ರಸಿದ್ಧವಾದ ಹೆಸರು, ಇಂತಹ ಸಮಾರಂಭದಲ್ಲಿ ಭಾಗಿಯಾಗಿದ್ದೇ ಒಂದು ಹಿರಿಮೆ. ಅವರ ಜೀವನದ ಮರೆಯಲಾಗದ ಸಂತಸದ ಘಳಿಗೆ. ನೀತಾ ಅಂಬಾನಿಯವರ ನಿರ್ಮಾಣದ ಹಲವಾರು ಸೀಸನ್ ಗಳಲ್ಲಿ ಇಂಥ ಬೃಹತ್ ಕಾರ್ಯಕ್ರಮಗಳು ಜರುಗುತ್ತಿರುತ್ತವೆ.





