– ರಾಘವೇಂದ್ರ ಅಡಿಗ ಎಚ್ಚೆನ್.
ಭಾರತೀಯ ಚಿತ್ರರಂಗದ ಸಂಗೀತ ಲೋಕದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಮಾಸ್ಟ್ರೋ ಇಳಯರಾಜಾ, ತಮ್ಮ ಸಂಗೀತಕ್ಕಿಂತಲೂ ಹೆಚ್ಚು ಕಳೆದ ಒಂದು ದಶಕದಿಂದ ಹಕ್ಕುಸ್ವಾಮ್ಯ ಮತ್ತು ರಾಯಲ್ಟಿ ಹೋರಾಟದ ಕಾರಣ ಸುದ್ದಿಯಲ್ಲಿದ್ದಾರೆ. ಐದು ದಶಕಗಳ ವೃತ್ತಿಜೀವನದಲ್ಲಿ 1,500ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿ, 8,000ಕ್ಕೂ ಅಧಿಕ ಹಾಡುಗಳನ್ನು ರಚಿಸಿರುವ ಇಳಯರಾಜಾ, ಭಾರತೀಯ ಸಂಗೀತ ಕ್ಷೇತ್ರದಲ್ಲಿ ರಾಯಲ್ಟಿ ಹಕ್ಕಿಗಾಗಿ ಕಾನೂನು ಹೋರಾಟ ಆರಂಭಿಸಿದ ಮೊದಲ ಪ್ರಮುಖ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.
ಬ್ರಿಟನ್ನ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾದಿಂದ ‘ಮಾಸ್ಟ್ರೋ’ ಗೌರವ ಪಡೆದ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಇಳಯರಾಜಾ ಅವರ ಸಂಗೀತ ಜಗತ್ತಿನಾದ್ಯಂತ ಕೋಟ್ಯಂತರ ರೂಪಾಯಿ ಆದಾಯ ತಂದುಕೊಟ್ಟಿದೆ. ಆದರೆ ಆ ಆದಾಯದ ಬಹುಪಾಲು ನಿರ್ಮಾಪಕರು ಹಾಗೂ ಆಡಿಯೋ ಕಂಪನಿಗಳ ಪಾಲಾಗಿದ್ದು, ಸಂಗೀತ ಸೃಷ್ಟಿಕರ್ತನಾದ ತಮಗೆ ಸಮರ್ಪಕ ರಾಯಲ್ಟಿ ಸಿಗಲಿಲ್ಲ ಎಂಬ ಅಸಮಾಧಾನ ಅವರಲ್ಲಿತ್ತು.
ಈ ಹಿನ್ನೆಲೆಯಲ್ಲಿ 2014ರಲ್ಲಿ ಹಲವು ಆಡಿಯೋ ಸಂಸ್ಥೆಗಳ ವಿರುದ್ಧ ಇಳಯರಾಜಾ ಕಾನೂನು ಸಮರ ಆರಂಭಿಸಿದರು. ಮದ್ರಾಸ್ ಹೈಕೋರ್ಟ್ನಲ್ಲಿ ದಾವೆ ಹೂಡಿ, ತಮ್ಮ ಸಂಗೀತವನ್ನು ಅನುಮತಿಯಿಲ್ಲದೆ ಬಳಸುವುದನ್ನು ಪ್ರಶ್ನಿಸಿದರು. ಒಪ್ಪಂದದ ಅವಧಿ ಮುಗಿದ ಬಳಿಕವೂ ಹಾಡುಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿದ ಆರೋಪದ ಮೇಲೆ ‘ಎಜಿ ಮ್ಯೂಸಿಕ್’ ಸೇರಿದಂತೆ ಹಲವು ಸಂಸ್ಥೆಗಳ ವಿರುದ್ಧ ರಾಯಲ್ಟಿ ಬೇಡಿಕೆ ಇಟ್ಟರು.
2017ರಲ್ಲಿ ಈ ಹೋರಾಟ ಮತ್ತಷ್ಟು ಚರ್ಚೆಗೆ ಗ್ರಾಸವಾಯಿತು. ತಮ್ಮ ಆಪ್ತ ಸ್ನೇಹಿತರಾದ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್.ಪಿ. ಚರಣ್ ಹಾಗೂ ಚಿತ್ರಾ ನಡೆಸುತ್ತಿದ್ದ ವಿದೇಶಿ ಸಂಗೀತ ಕಾರ್ಯಕ್ರಮಗಳಲ್ಲಿ ತಮ್ಮ ಹಾಡುಗಳನ್ನು ಅನುಮತಿಯಿಲ್ಲದೆ ಹಾಡಬಾರದು ಎಂದು ನೋಟಿಸ್ ಕಳುಹಿಸಿದ್ದರು. ಈ ಬೆಳವಣಿಗೆ ದೊಡ್ಡ ವಿವಾದಕ್ಕೆ ಕಾರಣವಾದರೂ, ಅದು ಗಾಯಕರ ವಿರುದ್ಧವಲ್ಲ, ವಾಣಿಜ್ಯ ಲಾಭ ಪಡೆಯುತ್ತಿದ್ದ ಕಾರ್ಯಕ್ರಮ ಆಯೋಜಕರ ವಿರುದ್ಧದ ಹೋರಾಟ ಎಂದು ನಂತರ ಸ್ಪಷ್ಟವಾಯಿತು.
ಇತ್ತೀಚಿನ ವರ್ಷಗಳಲ್ಲಿ ‘ಕೂಲಿ’ ಚಿತ್ರದ ಟೀಸರ್ನಲ್ಲಿ ತಮ್ಮ ಸಂಗೀತ ಬಳಕೆ ಹಾಗೂ ಮಲಯಾಳಂನ ಸೂಪರ್ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದಲ್ಲಿ ಹಾಡುಗಳ ಬಳಕೆ ವಿಚಾರದಲ್ಲೂ ಇಳಯರಾಜಾ ಹಕ್ಕುಸ್ವಾಮ್ಯ ಪ್ರಶ್ನೆ ಎತ್ತಿದ್ದರು. ಕೆಲವು ಪ್ರಕರಣಗಳಲ್ಲಿ ರಾಜೀ ಮೂಲಕ ಪರಿಹಾರ ಸಿಕ್ಕಿದ್ದರೆ, ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದ ತೀರ್ಪುಗಳು ಅವರ ವಿರುದ್ಧವೂ ಬಂದಿವೆ.
ಆದರೂ ಸಂಗೀತ ಸೃಷ್ಟಿಕರ್ತರ ಹಕ್ಕುಗಳಿಗಾಗಿ ಇಳಯರಾಜಾ ನಡೆಸಿದ ಹೋರಾಟ ಭಾರತೀಯ ಚಿತ್ರರಂಗದಲ್ಲಿ ಮಹತ್ವದ ಚರ್ಚೆಗೆ ಕಾರಣವಾಗಿದ್ದು, ಸಂಗೀತಗಾರರ ರಾಯಲ್ಟಿ ಹಕ್ಕಿನ ಬಗ್ಗೆ ಹೊಸ ಜಾಗೃತಿ ಮೂಡಿಸಿದೆ.





