ಚಿತ್ರ: ಮ್ಯಾಂಗೋ ಪಚ್ಚ
ನಿರ್ದೇಶನ: ವಿವೇಕ್
ನಿರ್ಮಾಣ: ಪ್ರಿಯಾ ಸುದೀಪ್, ಕೆ.ಆರ್.ಜಿ. ಸ್ಟುಡಿಯೋಸ್
ತಾರಾಂಗಣ:  ಸಂಚಿತ್ಸಂಜೀವ್, ಕಾಜಲ್ಕುಂದರ್, ಜೈ , ಭಾವನಾ ರಾಮಣ್ಣ, ಹರಿಣಿ, ಮಯೂರ್ ಪಟೇಲ್, ಮ್ಯಾಕ್ಸ್ ಮಂಜು ಮೊದಲಾದವರು
ರೇಟಿಂಗ್: 3/5
ರಾಘವೇಂದ್ರ ಅಡಿಗ ಎಚ್ಚೆನ್.

ಸ್ಯಾಂಡಲ್‌ವುಡ್‌ನಲ್ಲಿ ಅಭಿನಯ ಚಕ್ರವರ್ತಿಯಾಗಿ ಕಿಚ್ಚ ಸುದೀಪ್ ಅವರು ಹೊಸ ಹವಾ ಸೃಷ್ಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿರುವ “ಮ್ಯಾಂಗೋ ಪಚ್ಚ” ಸಿನಿಮಾ ಭರ್ಜರಿಯಾಗಿ ತೆರೆಕಂಡಿದೆ. ಕಿಚ್ಚ ಸುದೀಪ್ ಅವರ ಅಕ್ಕನ ಮಗ ಅಂದರೆ ಸೋದರಳಿಯ ಸಂಚಿತ್ ಸಂಜೀವ್ ನಟಿಸಿರುವ ಚೊಚ್ಚಲ ಚಿತ್ರ ಇದಾಗಿದೆ. ಸಿನಿಮಾದಲ್ಲಿ ಅನುಭವಿ ಕಲಾವಿದರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಾಯಕಿ ಕಾಜಲ್ ಕುಂದರ್ ನಟಿಸಿದ್ದಾರೆ. ವಿಜಯ್ ರಾಘವೇಂದ್ರ ಅಳಿಯ ಜೈ ಇಲ್ಲಿ ಸಂಚಿತ್‌ನ ಸಹೋದರನ ಪಾತ್ರ ಮಾಡಿದ್ದಾರೆ. ನಟಿ ಹರಿಣಿ, ಮಯೂರ್ ಪಟೇಲ್, ಮ್ಯಾಕ್ಸ್ ಮಂಜು ಸೇರಿದಂತೆ ಇನ್ನು ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ನವ ನಿರ್ದೇಶಕ ವಿವೇಕ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದು ಇವರ ಮೊದಲ ಚಿತ್ರವೇ ಆಗಿದೆ.

20 ವರ್ಷಗಳ ಹಿಂದಿನ ಮೈಸೂರು ಭಾಗದ ಕಥಾಹಂದರವನ್ನು ಹೊಂದಿರುವ ಸಿನಿಮಾ ಇದಾಗಿದೆ. ಮ್ಯಾಂಗೋ ಪಚ್ಚ ಚಿತ್ರದಲ್ಲಿ ಮೈಸೂರು ಹುಡುಗನ ಕಥೆ ಇದೆ. ಮ್ಯಾಂಗೋ ಪಚ್ಚ ಆಗಿಯೇ ಬದಲಾಗುವ ಪ್ರಶಾಂತ್‌ನ ಕಥೆ ಇಲ್ಲಿದೆ. ಮೈಸೂರಿನಲ್ಲಿ ಗಾಂಜಾ ದಂಧೆ ಹೇಗೆ ನಡೆಯುತ್ತಿತ್ತು ಎಂಬುದು ಇದರಲ್ಲಿದೆ. ಕಿಚ್ಚನ ನಿರೂಪಣೆಯಲ್ಲಿ ಪಚ್ಚನ ಪರಿಚಯ ಕೂಡ ಆಗುತ್ತದೆ. ತಾಯಿ ಪ್ರೀತಿಸುವ ಹುಡುಗಿ, ಸ್ನೇಹಿತರು ಮತ್ತು ಒಂದು ಡಿವಿಡಿ ಅಂಗಡಿ – ಇದು ಪಚ್ಚನ ಪ್ರಪಂಚ. ಆದರೆ ವರ್ಷ ಉರುಳಿದಂತೆ ಅವನ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ, ಗಾಂಜಾ ಅಮಲು ಅವನ ಜೀವನದುದ್ದಕ್ಕೂ ಹೇಗೆ ಆವರಿಸುತ್ತದೆ? ಅಂತಿಮವಾಗಿ ಈ ಸುಳಿಯಿಂದ ಅವನು ಪಾರಾಗುತ್ತಾನಾ? ಆದರೆ ಹೇಗೆ ಎಂದು ತಿಳಿಯಲು ನೀವು ಸಿನಿಮಾ ಮಂದಿರದಲ್ಲಿ ಮ್ಯಾಂಗೋ ಪಚ್ಚ ಸಿನಿಮಾ ವೀಕ್ಷಿಸಬೇಕು.

pachha

ಅಭಿನಯದ ವಿಷಯದಲ್ಲಿ ಸಂಚಿತ್ ಸಂಜೀವ್ ಮೆಚ್ಚುಗೆ ಗಳಿಸುವುದು ಖಚಿತ. ಮೊದಲ ಚಿತ್ರದಲ್ಲಿ ಭರವಸೆ ಹುಟ್ಟಿಸುವಲ್ಲಿ ಅವರು ಯಶಸ್ವಿಯಾಗುತ್ತಾರೆ. ಪಚ್ಚನ ಪಾತ್ರದ ಸುತ್ತಲೇ ಕಥೆ ಸುತ್ತುತ್ತದೆಯಾದರೂ ಅವರ ಅಭಿನಯ ಎಲ್ಲಿಯೂ ಬೋರ್ ಹೊಡೆಯುವುದಿಲ್ಲ. ನಾಯಕಿ ಕಾಜಲ್ ಕುಂದರ್ ಅವರಿಗೆ ಸಿಕ್ಕಿದ ಅತ್ಯಲ್ಪ ಅವಕಾಶದಲ್ಲಿ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತಾರೆ. ಉಳಿದಂತೆ ವಿಜಯ್ ರಾಘವೇಂದ್ರನ ಸೋದರ ಜೈ ಅವರ ಪಾತ್ರ ಗಮನ ಸೆಳೆಯುತ್ತದೆ. ಭಾವನಾ ರಾಮಣ್ಣ ಪೊಲೀಸ್ ಆಫೀಸರ್ ಪಾತ್ರ ಮತ್ತು ಉಳಿದ ಎಲ್ಲಾ ಪಾತ್ರಗಳು ಕಥೆಗೆ ಪೂರಕವಾಗಿವೆ.

ನಗರದಲ್ಲಿ ಗಾಂಜಾ, ಅಫೀಮುಗಳಂತಹ ಅಮಲು ಪದಾರ್ಥಗಳು ಯುವಕರ ಕೈಗೆ ಸಿಕ್ಕು ಅವರು ಹಾಳಾಗುವುದು ಮತ್ತು ಈ ಅಮಲಿನ ಸುಳಿ ಬೆಳೆಯಲು ಆಡಳಿತ ವರ್ಗಗಳ ಬೆಂಬಲವನ್ನು ತಡೆಹಿಡಿಯಲು ಪೊಲೀಸ್ ಪಡೆಗಳ ಹೋರಾಟದಂತಹ ಕಥೆಗಳು ಕನ್ನಡದಲ್ಲಿ ಈಗಾಗಲೇ ಬಂದಿವೆ. ಇತ್ತೀಚೆಗೆ ಬಂದ ದುನಿಯಾ ವಿಜಯ್ ಅವರ ‘ಭೀಮ’ ಇದಕ್ಕೆ ತಾಜಾ ಉದಾಹರಣೆ. ಮ್ಯಾಂಗೋ ಪಚ್ಚ ಸಹ ಭೀಮ ಚಿತ್ರದ ವಿಸ್ತರಣೆಯಾಗಿ ಕಂಡರೆ ಅಚ್ಚರಿ ಇಲ್ಲ. ಚಿತ್ರದ ಪ್ರಾರಂಭದಿಂದ ಕೊನೆವರೆಗೆ ಈ ಅಮಲು ಪದಾರ್ಥದ ವಿತರಣೆ ಹಾಗೂ ಅದರ ವಿರುದ್ಧದ ಹೋರಾಟವನ್ನು ತೋರಿಸಲಾಗಿದ್ದು, ಇದರ ಹೊರತಾಗಿ ಬೇರೆಲ್ಲಾ ವಿಷಯಗಳನ್ನು ಗೌಣವಾಗಿಸಲಾಗಿದೆ. ನಾಯಕಿ ಇದ್ದರೂ ಅವರಿಬ್ಬರ ನಡುವಿನ ಪ್ರೀತಿ ಹಾಗೂ ತಾಯಿ ಇದ್ದರೂ ತಾಯಿ-ಮಗನ ಸಂಬಂಧವನ್ನು ಇನ್ನಷ್ಟು ಉತ್ತಮವಾಗಿ ವಿಸ್ತರಿಸಿ ತೋರಿಸುವ ಅವಕಾಶ ನಿರ್ದೇಶಕರಿಗಿತ್ತು. ಒಟ್ಟಾರೆ ಸಿನಿಮಾ ಒಂದೂವರೆ ತಾಸಿನಲ್ಲಿ ಮುಕ್ತಾಯವಾಗುವುದರಿಂದ ಅಷ್ಟರ ಮಟ್ಟಿಗೆ ಚಿತ್ರಕಥೆ ಸರಾಗವಾಗಿ ಸಾಗುತ್ತದೆ ಮತ್ತು ಯಾವುದೇ ಅನಗತ್ಯ ಎಳೆತ ಇರುವುದಿಲ್ಲ.
pachha 1

ತಾಂತ್ರಿಕ ವಿಷಯಕ್ಕೆ ಬಂದರೆ ಶೇಖರ್ ಚಂದ್ರ ಮತ್ತು ಸ್ವಾಮಿ ಅವರ ಕ್ಯಾಮರಾ ವರ್ಕ್ ಕೂಡ ಚೆನ್ನಾಗಿದೆ. ಸುದೀಪ್ ಮಗಳು ಸಾನ್ವಿ ಸುದೀಪ್ ಚರಣ್ ರಾಜ್ ಸಂಗೀತಕ್ಕೆ ಹಾಡಿದ್ದಾರೆ. ‘ಅರಗಿಣಿ’ ಅನ್ನುವ ಮಧುರ ಹಾಡಿಗೆ ಧ್ವನಿ ನೀಡಿದ್ದಾರೆ. ಆದರೆ ಆ ಹಾಡು ಕೇಳುವಾಗಷ್ಟೇ ಸೀಮಿತವಾಗಿದೆಯೇ ಹೊರತು ಗುನುಗಿಸಿಕೊಳ್ಳುವಂತಿಲ್ಲ. ಚಿತ್ರದಲ್ಲಿ ‘ಖಡಕ್ ಮಾಲ್’ ಮತ್ತು ‘ಹಸ್ರವ್ವ’ ಅನ್ನುವ ಇನ್ನೆರಡು ಹಾಡುಗಳೂ ಇದ್ದು, ಅವೆರಡೂ ರ್ಯಾಪ್ ಶೈಲಿಯಲ್ಲಿದೆ. ಅದು ಕಥೆಯ ಹಿನ್ನೆಲೆಯಲ್ಲಿ ಬರುವುದರಿಂದ ಅಷ್ಟೇನೂ ವಿಶೇಷವಾಗಿ ಗಮನ ಸೆಳೆಯುವಂತಿಲ್ಲ. ಒಟ್ಟಾರೆ ಹೊಸ ನಿರ್ದೇಶಕ, ಹೊಸ ನಾಯಕ ಹಾಗೂ ನಟನ ಅಭಿನಯವಿರುವ ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕೆನ್ನುವವರು ಒಮ್ಮೆ ಈ ಚಿತ್ರವನ್ನು ವೀಕ್ಷಿಸಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ