– ರಾಘವೇಂದ್ರ ಅಡಿಗ ಎಚ್ಚೆನ್.
ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಿ, ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇವಿಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಕಡಗವನ್ನು ಕಾಣಿಕೆಯಾಗಿ ಅರ್ಪಿಸುವ ಮೂಲಕ ಭಕ್ತಿಭಾವ ಮೆರೆದರು.
ಮಧ್ಯಾಹ್ನ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಜಯ್, ಅಲ್ಲಿಂದ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ತೆರಳಿದರು. ದೇವಸ್ಥಾನಕ್ಕೆ ಆಗಮಿಸಿದ ಬಳಿಕ ಸಂಪ್ರದಾಯಬದ್ಧವಾಗಿ ಶರ್ಟ್ ಹಾಗೂ ಬನಿಯನ್ ತೆಗೆದು, ಕೇವಲ ಲುಂಗಿ ಮತ್ತು ಶಲ್ಯ ಧರಿಸಿ ದೇವಿಯ ದರ್ಶನ ಪಡೆದರು. ಸಂಕಲ್ಪ ಪೂಜೆ ನೆರವೇರಿಸಿದ ಅವರು ಸುಮಾರು 20 ನಿಮಿಷಗಳ ಕಾಲ ದೇವಸ್ಥಾನದಲ್ಲಿ ಕಾಲ ಕಳೆದರು.
ವಿಜಯ್ ಅವರು ದೇವಿಗೆ 1.6 ಕೆಜಿ ತೂಕದ ಬೆಳ್ಳಿ ಕಡಗವನ್ನು ಸಮರ್ಪಿಸಿರುವುದಾಗಿ ಕೊಲ್ಲೂರು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ ಮಾಹಿತಿ ನೀಡಿದ್ದಾರೆ. ದೇಶದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನವು ತಮಿಳುನಾಡು ಹಾಗೂ ಕೇರಳದ ಲಕ್ಷಾಂತರ ಭಕ್ತರ ಆರಾಧ್ಯ ಕ್ಷೇತ್ರವಾಗಿದ್ದು, ರಾಜಕೀಯ ಹಾಗೂ ಸಿನಿರಂಗದ ಅನೇಕ ಗಣ್ಯರು ಇಲ್ಲಿ ದರ್ಶನ ಪಡೆಯುವುದು ವಿಶೇಷವಾಗಿದೆ.
ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಮತ್ತು ಮಾಜಿ ಸಿಎಂ ಜಯಲಲಿತಾ ಕೂಡ ಹಲವು ಬಾರಿ ಮೂಕಾಂಬಿಕೆ ದೇಗುಲಕ್ಕೆ ಭೇಟಿ ನೀಡಿದ್ದರು. ಎಂಜಿಆರ್ ಅವರು ದೇವಿಗೆ ಒಂದು ಕೆಜಿ ತೂಕದ ಚಿನ್ನದ ಖಡ್ಗವನ್ನು ಸಮರ್ಪಿಸಿದ್ದರೆ, ಜಯಲಲಿತಾ ವಿಶೇಷ ಪೂಜೆಗಳ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದ್ದರು.
ಮುಖ್ಯಮಂತ್ರಿ ಸ್ಥಾನಕ್ಕೇರಿದ ಕೇವಲ ಒಂದು ತಿಂಗಳಲ್ಲೇ ಜೋಸೆಫ್ ವಿಜಯ್ ಅವರ ದಿಢೀರ್ ಕೊಲ್ಲೂರು ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಚುನಾವಣೆಗೆ ಮುನ್ನ ವಿಜಯ್ ಅವರ ಪೋಷಕರು ಮೂಕಾಂಬಿಕೆ ದೇವಿಯ ಸನ್ನಿಧಿಯಲ್ಲಿ ಹರಕೆ ಹೊತ್ತಿದ್ದು, ಅದು ಈಡೇರಿದ ಹಿನ್ನೆಲೆಯಲ್ಲಿ ವಿಜಯ್ ದೇವಿಯ ದರ್ಶನಕ್ಕೆ ಆಗಮಿಸಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.
ಸಿಎಂ ವಿಜಯ್ ಅವರ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಭದ್ರತಾ ಕಾರಣಗಳಿಂದ ಮಧ್ಯಾಹ್ನದಿಂದ ಸಂಜೆವರೆಗೆ ಸಾಮಾನ್ಯ ಭಕ್ತರ ದರ್ಶನಕ್ಕೂ ನಿರ್ಬಂಧ ಹೇರಲಾಗಿತ್ತು. ವಿಜಯ್ ಪೂಜೆ ಮುಗಿಸಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಚೆನ್ನೈಗೆ ಮರಳಿದರು.





