ಸಂತೆಯಲ್ಲಿ ಎಷ್ಟು ಹೊತ್ತಾದರೂ ಚೌಕಾಶಿ ಮಾಡದೆ ರತ್ನಾ ತರಕಾರಿ ಕೊಳ್ಳುತ್ತಿರಲಿಲ್ಲ. ಒಂದಲ್ಲ ಅಂತ 4 ಅಂಗಡಿ ತಿರುಗಿ, 40 ಸಲ ಪ್ರಶ್ನೆ ಕೇಳುತ್ತಿದ್ದಳು. ಇದರಿಂದ ರೋಸಿಹೋದ ಅವಳ ಗಂಡ, ``ಬೇಗ ಏನೋ ಒಂದು ತೆಗೆದುಕೊಂಡು ಬರಬಾರದೇ? ಈಗಾಗಲೇ ಸಂಜೆ 7 ಗಂಟೆ ಆಗೋಯ್ತು. ನಾವು ಯಾವಾಗ ಮನೆಗೆ ಹೋಗೋದು? ಅಲ್ಲಿಂದ ನಾನು ಯಾವಾಗ ಕ್ಲಬ್ಬಿಗೆ ಹೋಗೋದು.....?''
ಅದಕ್ಕೆ ರತ್ನಾ ಸಾವಧಾನವಾಗಿ, ``ಅಯ್ಯೋ.... ಸಾಕು ಸುಮ್ಮನಿರಿ! ಹಾಗೆಲ್ಲ ಅವಸರಪಟ್ಟು ನಿಮ್ಮಂಥ ಗಂಡನನ್ನು ಆರಿಸಿಕೊಂಡಿದ್ದಕ್ಕೇ ಈಗ ನಾನು ಇಷ್ಟೊಂದು ಅವಸ್ಥೆ ಪಡುತ್ತಿರುವುದು!'' ಎಂದು ಬಿಡುವುದೇ?
ಸಂಜೆ ವಾಕಿಂಗ್ ಹೊರಟ ನವ ದಂಪತಿಗಳು ಪೇಟೆ ಬೀದಿ ಹಾದು ಹೋಗುತ್ತಿದ್ದರು. ಅಲ್ಲಿದ್ದ ಅನೇಕ ಚಿನ್ನದ ಒಡವೆಗಳನ್ನು ಗಮನಿಸಿ ಪತ್ನಿ ಕೇಳಿದಳು, ``ಆಗಿನಿಂದ ನೀವು ಇದನ್ನೆಲ್ಲ ನೋಡ್ತಿದ್ದೀರಿ ತಾನೇ? ನನ್ನ ಕುತ್ತಿಗೆಗೆ ಎದ್ದು ಕಾಣುವಂಥದ್ದು ಏನಾದರೂ ಕೊಡಿಸಬಾರದೇ?'' ಎಂದು ಸಿಡಕಿದಳು.
ಅದಕ್ಕೆ ಪತಿರಾಯ ತಕ್ಷಣವೇ ಹತ್ತಿರದ ಮೆಡಿಕಲ್ ಸ್ಟೋರ್ ಗೆ ಹೋಗಿ, ಪತ್ನಿಯ ಕುತ್ತಿಗೆಗೆ ಚೆನ್ನಾಗಿ ಒಪ್ಪುವಂಥ, ಎದ್ದುಕಾಣುವಂಥ ಹೊಚ್ಚ ಹೊಸ `ನೆಕ್ ಬೆಲ್ಟ್' ಖರೀದಿಸಿ ತಂದುಕೊಡುವುದೇ?
ಇದೇ ನವದಂಪತಿಗಳು ಅದರ ಮುಂದಿನ ವರ್ಷ ಹೆರಿಗೆ ಆಸ್ಪತ್ರೆಗೆ ಬರುವಂತಾಯಿತು. ನವಮಾಸ ತುಂಬಿದ್ದ ಆಕೆಯನ್ನು ಲೇಬರ್ ವಾರ್ಡಿಗೆ ಅಡ್ಮಿಟ್ ಮಾಡಿಸಿ, ಗಂಡ ಅಲ್ಲಿದ್ದ ನರ್ಸ್ ಗೆ ಹೇಳಿದ, ``ನೋಡಿ ಸಿಸ್ಟರ್, ಮಗು ಹುಟ್ಟಿದ ತಕ್ಷಣ ಬಂದು ತಿಳಿಸಿ. ನಾನು ಹೊರಗಿನ ಕಾರಿಡಾರ್ ನಲ್ಲೇ ಇರ್ತೀನಿ,'' ಎಂದು ಮೊದಲ ಮಗುವಿಗಾಗಿ ಕಾತುರದಿಂದ ಕಾಯುತ್ತಾ ಶತಪಥ ಹೆಜ್ಜೆ ಹಾಕುತ್ತಿದ್ದ.
ಲೇಬರ್ ರೂಂ ಒಳಗೆ ಹೋಗಿ ಬಾಗಿಲು ಹಾಕಿಕೊಂಡ ನರ್ಸ್, ತಕ್ಷಣ ಬಾಗಿಲನ್ನು ತುಸು ತೆರೆದು ಇವನತ್ತ ಕೆಕ್ಕರಿಸಿಕೊಂಡು ನೋಡುತ್ತಾ, ``ನೋಡ್ರಿ, ತಕ್ಷಣ ಹೊರಗೆ ಬಂದು ಹೇಳಕ್ಕಾಗಲ್ಲ. ಇಲ್ಲಿಂದಾನೇ ಬಾಗಿಲಲ್ಲಿ ನಿಂತು ಹೇಳಬೇಕು. ಏನಾದರೂ ಶಾರ್ಟ್ ಆಗಿ ಬೇಗ ಕ್ಲೂ ಕೊಡಿ,'' ಎಂದಳು.
ಆತ ಅದಕ್ಕೆ, ``ಗಂಡು ಮಗು ಹುಟ್ಟಿದರೆ ಟೊಮೇಟೊ, ಹೆಣ್ಣು ಮಗು ಹುಟ್ಟಿದರೆ ಈರುಳ್ಳಿ ಅಂತ ಹೇಳಿ. ನೀವು ಹೊರಗೆ ನನ್ನ ಬಳಿ ನಡೆದುಕೊಂಡು ಬರುವುದೇನೂ ಬೇಡ,'' ಎಂದ.
ಆಕೆ ``ಹಾಗೇ ಆಗಲಿ,'' ಎಂದಳು.
2 ಗಂಟೆ ಕಾಲ ಆದ ಬಳಿಕ ಗಂಡುಹೆಣ್ಣು ಅವಳಿ ಮಕ್ಕಳು ಹುಟ್ಟಿದಾಗ, ಇದರ ಕುರಿತಾಗಿ ಹೇಗೆ ಹೇಳಲಿ ಎಂದು ತಲೆ ಕೆಡಿಸಿಕೊಂಡ ನರ್ಸ್, ಬಾಗಿಲು ತೆರೆದವಳೇ ಅಲ್ಲಿಂದಲೇ ಜೋರಾಗಿ, ``ಸಾರ್.... ಸಲಾಡ್!'' ಎಂದುಬಿಡುವುದೇ?
ಪತ್ನಿ : ನಾನು ಯಾವ ಕೆಲಸವನ್ನೇ ಶುರು ಮಾಡಿದರೂ ಅದರಲ್ಲಿ ಪೂರ್ತಿ ಮುಳುಗಿ ಹೋಗ್ತೀನಿ!
ಪತಿ : ಛೇ....ಛೇ! ಮದುವೆಯಾಗಿ ಇಷ್ಟು ವರ್ಷಗಳಾಯಿತು, ಒಂದು ದಿನವಾದರೂ ನೀನು ಬಾವಿ ತೋಡುವ ಕೆಲಸ ಮಾಡಲಿಲ್ಲವಲ್ಲ....?
ಉಮೇಶ್ : ನನ್ನಂಥ ಹೊಸದಾಗಿ ಮದುವೆ ಆದರು ನಿಮ್ಮಂಥ ಬ್ಯಾಚುಲರ್ಸ್ ಗೆ ಖಂಡಿತಾ ಒಂದು ಒಳ್ಳೆಯ ಸಲಹೆ ಕೊಡಬಹುದು.





