ಹೆಂಗಸರು ಎಂದರೆ ಗಂಡಸರ ಸೊತ್ತಲ್ಲ
ಹಿಂದೊಂದು ಕಾಲವಿತ್ತು, ವಿಶ್ವದ ಎಲ್ಲಾ ದೇಶಗಳಲ್ಲೂ ಕಡಿಮೆ ಮಕ್ಕಳು ಹಡೆಯಿರಿ ಎಂದು ಇನ್ಸೆಂಟಿವ್ ನೀಡಿ `ನಾವಿಬ್ಬರು ನಮಗಿಬ್ಬರು,' ಯಾ `ನಾವಿಬ್ಬರು ನಮಗೊಬ್ಬರು' ಎಂದೋ ಘೋಷಣೆ ಕೂಗಲಾಗುತ್ತಿತ್ತು, ಆದರೆ ಇದೀಗ ಪರಿಸ್ಥಿತಿ ಉಲ್ಟಾ ಆಗಿದೆ! ಪ್ರತಿಯೊಂದು ದೇಶ ಕುಗ್ಗಿ ಹೋಗುತ್ತಿರುವ ತನ್ನ ಪ್ರಜಾಸಂಖ್ಯೆ ಹೆಚ್ಚಿಸಿಕೊಳ್ಳಲು, ಹೆಚ್ಚುತ್ತಿರುವ ವೃದ್ಧರನ್ನು ಕಂಡು ಚಿಂತೆಗೊಳಗಾಗಿದೆ. ಮುಂದಿನ 50 ವರ್ಷಗಳಲ್ಲಿ ಈ ಸ್ಥಿತಿ ಇನ್ನಷ್ಟು ಭಯಾನಕ ಆಗಲಿದೆ.
ಭಾರತದಲ್ಲಿ 1960ರಲ್ಲಿ ಪ್ರತಿ ಹೆಣ್ಣೂ 5-6 ಮಕ್ಕಳನ್ನು ಹೆರುತ್ತಿದ್ದಳು. ಇಂದು 1-2ಕ್ಕೆ ಅದು ಸೀಮಿತಾಗಿದೆ, ಅಂದ್ರೆ ಜನಸಂಖ್ಯೆ ಬಿಲ್ ಕುಲ್ ತಗ್ಗುತ್ತಿದೆ. ಒನ್ ಚೈಲ್ಡ್ ಪಾಲಿಸಿಗೆ ಮೊದಲು ಚೀನಾದಲ್ಲಿ ಪ್ರತಿ ಹೆಣ್ಣೂ 5-6 ಮಕ್ಕಳನ್ನು ಹೆರುತ್ತಿದ್ದಳು. ಇಂದು ಇಬ್ಬರು ಹೆಂಗಸರ ಗುಂಪಲ್ಲಿ ಒಂದೇ ಮಗು ಕಾಣಿಸುತ್ತದೆ. ಚೀನಾದ ಪಾಪ್ಯುಲೇಶನ್ ಕಂಟ್ರೋಲ್ ಪಾಲಿಸಿಯ 50 ವರ್ಷಗಳ ನಂತರ ಬಲು ಭಯಾನಕ ರಿಸಲ್ಟ್ ಕಂಡುಬರುತ್ತಿದೆ.
ಇಂದು ಆಧುನಿಕ ಹೆಣ್ಣು ಹೆಚ್ಚು ಮಕ್ಕಳ ಹೆರುವ ಬದಲು ತನ್ನ ಕೆರಿಯರ್ ನಲ್ಲಿ ಆಸಕ್ತಳಾಗಿದ್ದಾಳೆ. ಇದು ನಮ್ಮಲ್ಲಿ ಮಾತ್ರವಲ್ಲದೆ ಪಾಕ್, ಬಾಂಗ್ಲಾ, ಸೋಮಾಲಿಯಾಗಳಲ್ಲೂ ಹೆಂಗಸರು ಹೆಚ್ಚು ಮಕ್ಕಳ ಬದಲು ತಮ್ಮ ಉನ್ನತ ವ್ಯಾಸಂಗ, ಉತ್ತಮ ಲೈಫ್ ಸ್ಟೈಲ್ ಕಡೆ ಗಮನ ಹರಿಸುತ್ತಿದ್ದಾರೆ. ಎಕಾನಮಿ ಎಂಥ ಟರ್ನ್ ನೀಡಿದೆ ಅಂದ್ರೆ, ಇಂದು ಸ್ವಂತ ಮನೆ ಅತ್ಯಗತ್ಯ, ಲೈಟ್ ಗೂಡ್ಸ್, ಬೇಕೇಬೇಕು, ಕಾರು, ಐಷಾರಾಮದ ಜೀವನ ಬೇಕೇ ಹೊರತು ಮಕ್ಕಳು ಅಲ್ಲ!
ಇದೀಗ ಮಕ್ಕಳ ಖರ್ಚು ಬಲು ಹೆಚ್ಚಾಗುತ್ತಿದೆ. ಅವರ ದುಬಾರಿ ಸ್ಕೂಲಿಂಗ್ ಫೀಸ್, ಬೇಬಿ ನ್ಯಾಪಿಯಿಂದ ಬೇಬಿ ಕೇರ್ ವರೆಗೂ, ಕ್ರೀಚ್ ಸರ್ವೀಸ್ ಅಂತೂ ನಂಬುವ ಹಾಗೇ ಇಲ್ಲ. ಮಗು ಆದ ನಂತರ ತಾಯಿಯ 23 ವರ್ಷದ ಕೆರಿಯರ್ ಮುಳುಗಿದಂತೆಯೇ. ಆಗ ಆಕೆ ತನ್ನ ಸಹೋದ್ಯೋಗಿಗಳಿಗಿಂತ ಹಿಂದೆ ಉಳಿಯುತ್ತಾಳೆ. ತನ್ನ ತುಂಬು ಯೌವನದ ದಿನಗಳನ್ನು ಈ ತಾಯ್ತನಕ್ಕಾಗಿ ವ್ಯಯಿಸದೆ, ತನ್ನ ಬೆಟರ್ ಕೆರಿಯರ್‌ಎಂಜಾಯ್ ಮೆಂಟ್ ಕಡೆ ಹೆಚ್ಚು ಗಮನಹರಿಸುತ್ತಾಳೆ.
ವಿಶ್ವದ ಎಲ್ಲೆಡೆ ನಾಗರಿಕತೆ ಬೆಳೆದಂತೆ, ಬೇಕೆಂದೇ ಹೆಣ್ಣನ್ನು ಮಕ್ಕಳು ಹೆರುವ ಯಂತ್ರ ಮಾಡಿಟ್ಟು, ಅವಳು ಸದಾ ಅದರಲ್ಲಿ ಚಿಂತಿಸುತ್ತಿರುವಂತೆ ಗಂಡಿನ ಜೊತೆ ಪೈಪೋಟಿಗೆ ಬಾರದಂತೆ ಮಾಡಲಾಯಿತು. ಹೆಚ್ಚು ಮಕ್ಕಳು ಹುಟ್ಟಿದಂತೆ, ಗಂಡಸರ ಲೈಂಗಿಕ ಸುಖಕ್ಕಾಗಿ ಮಾರುಕಟ್ಟೆಯಲ್ಲಿ ಹೆಣ್ಣುಗಳ ಸಂಖ್ಯೆಯೂ ಹೆಚ್ಚುತ್ತದೆ. ಧರ್ಮಗುರು, ರಾಜರಿಗಾಗಿ ಸಾವಿಗಂಜದೆ ಹೋರಾಡಲು ಗಂಡು ಮಕ್ಕಳಿದ್ದಾರೆ. ಪ್ರಾಚೀನ ಕಾಲದಿಂದಲೂ ಧರ್ಮ ಹೆಣ್ಣನ್ನು ಹೀಗೆ ಕಂಟ್ರೋಲ್ ಮಾಡುತ್ತಾ ಸಮಾಜದ ಕಾಲಕಸ ಆಗಿಸಿದೆ. ಮಕ್ಕಳ ನೆಪದಲ್ಲಿ ಹೆಣ್ಣನ್ನು ಗುಲಾಮಳಾಗಿಸಿದೆ.
ಆಧುನಿಕ ವಿಜ್ಞಾನ, ತಂತ್ರಜ್ಞಾನ, ಅದರಿಂದ ಸಿಗುವ ಶಿಕ್ಷಣ, ಸಮಾನತೆಯ ಭಾವನೆಗಳು, ಹೆಣ್ಣಿಗೆ ಸ್ವಾತಂತ್ರ್ಯ, ಗೌರವಾದರಗಳನ್ನು ತಂದುಕೊಟ್ಟಿವೆ. ಹೆಂಗಸರು ಎಂದೂ ಗಂಡಸರ ಸೊತ್ತಲ್ಲ, ಮಕ್ಕಳನ್ನು ಹೊತ್ತು ಹೆತ್ತು ಸಾಕಿ ಸಲಹುವ ಆಯಾ ಅಲ್ಲ, ಸೆಕ್ಸ್ ಸುಖಕ್ಕಾಗಿ ಮಾತ್ರ ಇವರು ತೊಗಲು ಬೊಂಬೆಯಲ್ಲ, ಮನೆವಾರ್ತೆ ನೋಡಿಕೊಂಡು ಅಡುಗೆ ಮಾಡುತ್ತಾ ಬಿದ್ದಿರುವ ಆಳಲ್ಲ. ಅವಳು ಗಂಡಿಗೆ ಸರಿಸಮಾನಳು!





