ಮೈಸೂರಿನ ಪಬ್‌ ವೊಂದರಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಇಬ್ಬರು ಸಜೀವದಹನವಾಗಿದ್ದು,  11 ಜನರು ಗಾಯಗೊಂಡಿದ್ದಾರೆ. ಮೃತರನ್ನು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದ ಸಾಹಿನ್ (26) ಮತ್ತು ನೇಪಾಳದ ಪ್ರಕಾಶ್ (24) ಎಂದು ಪೊಲೀಸರು ಹೇಳಿದ್ದಾರೆ.

ಮೈಸೂರಿನ ದಟ್ಟಗಳ್ಳಿಯ ರಿಂಗ್ ರಸ್ತೆ ಬಳಿಯಿರುವ ಫಾಕ್ಸ್​ ಡೆನ್​ ಲಿಕ್ಕರ್​ ಗ್ಯಾರೇಜ್​ ಬಾರ್​ ಅಂಡ್​ ರೆಸ್ಟೋರೆಂಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಇಬ್ಬರು ಸುಟ್ಟು ಕರಕಲಾಗಿದ್ದು 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಡೀ ಪಬ್ ಸಂಪೂರ್ಣ ಸುಟ್ಟು ಕರಕಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಅಗ್ನಿ ಅವಘಡ ಸಂದರ್ಭದಲ್ಲಿ ಪಬ್ ನಲ್ಲಿ 25ಕ್ಕೂ ಹೆಚ್ಚು ಜನರಿದ್ದರು. ಸದ್ಯ 15 ಜನರನ್ನು ರಕ್ಷಿಸಲಾಗಿದ್ದು 11 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸುಯೋಗ ಹಾಗೂ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಫಾಕ್ಸ್ ಡೆನ್’ ಪಬ್‌ಗೆ ಭೇಟಿ ನೀಡಿದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹರ್ಷನ್ ಪ್ರಿಯಂವದ ಅವರು, ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಮಧ್ಯಾಹ್ನ ಸುಮಾರು 3.15 ಕ್ಕೆ ಅಗ್ನಿಶಾಮಕ ದಳಕ್ಕೆ ಘಟನೆಯ ಬಗ್ಗೆ ಕರೆ ಬಂದಿತ್ತು. ಅಗ್ನಿಶಾಮಕ ದಳದ ಅಧಿಕಾರಿಗಳು ಏಣಿಯನ್ನು ಬಳಸಿ 15 ಜನರನ್ನು ರಕ್ಷಿಸಿದ್ದಾರೆ. ಬೆಂಕಿ ನಂದಿಸಿದ ನಂತರ, ಪಬ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಶವಗಳು ಪತ್ತೆಯಾಗಿವೆ.

ಅಲ್ಲಿ ಮರ ಮತ್ತು ಪೀಠೋಪಕರಣಗಳಂತಹ ಸುಲಭವಾಗಿ ಉರಿಯುವ ವಸ್ತುಗಳು ಇದ್ದವು. ಇದರಿಂದಾಗಿ ಬೆಂಕಿ ವೇಗವಾಗಿ ಹರಡಿದೆ  ಎಂದು ಪ್ರಿಯಂವದ ಹೇಳಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ