ಮಳೆಗಾಲದಲ್ಲಿ ಕಟ್ಟಡಗಳಿಗೆ ವಿಮೆ ಮಾಡಿಸುವುದು ಬಹಳ ಮುಖ್ಯವಾಗುತ್ತದೆ. ಇದನ್ನು ಹೇಗೆ ಮಾಡಿಸುವುದು? ಇದರ ಲಾಭಗಳೇನು ಇತ್ಯಾದಿ ಎಲ್ಲಾ ವಿವರಗಳನ್ನೂ ತಿಳಿಯೋಣವೇ…..?

ಮಳೆಗಾಲ ಪ್ರಾರಂಭವಾಗಿದೆ. ಮಳೆಗಾಲ ಎಂದಕೂಡಲೇ ಶಾಲೆಗೆ ಹೋಗುವ ಮಕ್ಕಳಿಗೆ ಮಳೆಯಿಂದ ಪುಸ್ತಕಗಳು ಒದ್ದೆಯಾಗದಂತೆ ಚೀಲ, ಪಾದರಕ್ಷೆ, ರೈನ್‌ ಕೋಟ್‌, ಛತ್ರಿ ಮೊದಲಾದವುಗಳನ್ನು ಎಲ್ಲರೂ ಒದಗಿಸುತ್ತಿರುತ್ತಾರೆ. ಅತಿಯಾದ ಮಳೆ, ಬಿರುಗಾಳಿ, ಪ್ರವಾಹ, ಗುಡ್ಡ ಕುಸಿತ, ಭೂಕಂಪ ಮುಂತಾದ ಪ್ರಾಕೃತಿಕ ವಿಕೋಪಗಳಿಂದ ಕೆಲವೊಮ್ಮೆ ದುರಂತಗಳು ಉಂಟಾಗಲೂಬಹುದು.

ಆಗ ಕೆಲವರು ಪ್ರಾಣ ಕಳೆದುಕೊಳ್ಳಬೇಕಾಗಿ ಬರುವುದು ನಿಜಕ್ಕೂ ದೌರ್ಭಾಗ್ಯಕರ. ಅಂತಹ ಸನ್ನಿವೇಶಗಳಲ್ಲಿ ಮನೆ, ಅಂಗಡಿ ಮೊದಲಾದ ಕಟ್ಟಡಗಳ ಕುಸಿತದಿಂದ ಲಕ್ಷಾಂತರ, ಕೋಟ್ಯಂತರ ರೂಪಾಯಿಗಳ ನಷ್ಟ ಉಂಟಾಗುವುದೂ ಇದೆ. ಪ್ರಾಣ ಕಳೆದುಕೊಂಡವರ ಕುಟುಂಬದವರಿಗೆ ಸ್ವಲ್ಪ ಮಟ್ಟಿಗಾದರೂ ಹಣಕಾಸಿನ ಸಾಂತ್ವನ ನೀಡಲೆಂದು ಮೊದಲೇ ಅಪಘಾತದ ವಿಮೆ ಮಾಡಿಸಿರುವುದು ಅಪೇಕ್ಷಣೀಯ.

ಹಾಗೆಯೇ ಕಟ್ಟಡಗಳಿಗೆ ಹಾನಿ ಉಂಟಾದಾಗ ನಷ್ಟ ಸರಿದೂಗಿಸುವಂತೆ ಮುಂಜಾಗ್ರತಾ ಕ್ರಮವಾಗಿ ಕಟ್ಟಡಕ್ಕೆ ಮತ್ತು ಮನೆಯೊಳಗಿರುವ ವಸ್ತುಗಳಿಗೆ ಮೊದಲೇ ವಿಮೆ ಮಾಡಿಸಿಕೊಳ್ಳುವುದು ಕೂಡ ಅತ್ಯಗತ್ಯ.

ಕಡಿಮೆ ಪ್ರೀಮಿಯಂನ ವಿಮಾ ಯೋಜನೆ

ಪ್ರತೀ ಮಳೆಗಾಲದಲ್ಲೂ ಪ್ರಾಕೃತಿಕ ವಿಕೋಪಗಳಿಂದ ಬೇರೆ ಬೇರೆ ರೀತಿಯಲ್ಲಿ ಸಾವು ಸಂಭವಿಸುತ್ತಲೇ ಇರುತ್ತದೆ. ಹಾಗೆಯೇ ಕೆಲವೊಮ್ಮೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡಗಳು ಕುಸಿದು ಹಲವು ಬಡ ಕಾರ್ಮಿಕರ ಸಾವು ನೋವುಗಳುಂಟಾಗುವುದು ನಿಜಕ್ಕೂ ದೌರ್ಭಾಗ್ಯಕರ. ಬಾಡಿಗೆಗೆ ವಾಹನ ಮಾಡಿಕೊಂಡು ಮದುವೆಗೋ, ಪ್ರವಾಸಕ್ಕೋ ಹೋದ ಕೂಲಿ ಕೆಲಸದವರು ಅಪಘಾತಕ್ಕೆ ಒಳಗಾದ ಸುದ್ದಿಗಳೂ ಆಗಾಗ ಪ್ರಕಟವಾಗುತ್ತಿರುತ್ತವೆ. ದ್ವಿಚಕ್ರ, ತ್ರಿಚಕ್ರ ಪ್ರಯಾಣದಲ್ಲಿ ಅಥವಾ ಮರದಿಂದ ಬಿದ್ದು ಹೀಗೆ ಬೇರೆ ಬೇರೆ ರೀತಿಯಲ್ಲಿ ಧಾರುಣ ಅವಘಡಗಳು ಸಂಭವಿಸುತ್ತಿರುತ್ತವೆ. ಅಂತಹವರ ಕುಟುಂಬದವರಿಗೆ ಆತ್ಮೀಯರನ್ನು ಕಳೆದುಕೊಂಡರ ಸಂಕಟ, ನೋವುಗಳ ಜೊತೆಗೇ ಮುಂದೆ ದಿನ ದೂಡುವುದು ಹೇಗೆ? ಮಕ್ಕಳ ವಿದ್ಯಾಭ್ಯಾಸಕ್ಕೆ ಏನು ಮಾಡುವುದು ಎಂಬಿತ್ಯಾದಿ ಯೋಚನೆಗಳು ಚಿಂತೆಗಳಾಗಿ ಕಾಡುವುದು. ಇಂತಹ ಅನಿರೀಕ್ಷಿತ ದುರಂತಗಳಿಂದ ಉಂಟಾಗುವ ಹಣಕಾಸಿನ ತೀವ್ರ ಅಡಚಣೆಗಳನ್ನು ಸ್ವಲ್ಪ ಮಟ್ಟಿಗಾದರೂ ಶಮನಗೊಳಿಸು ದೃಷ್ಟಿಯಿಂದ ಪ್ರಾರಂಭಗೊಳಿಸಿರುವ, ಕಡಿಮೆ ಪ್ರೀಮಿಯಂನಲ್ಲಿ ಲಭ್ಯವಿರುವ ಕೆಲವು ವಿಮೆಯ ಯೋಜನೆಗಳಿವೆ. ಹಲವರಿಗೆ ಇವುಗಳ ಬಗ್ಗೆ ಅರಿವಿರುವುದಿಲ್ಲ.

ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ

2015ರಲ್ಲಿ ಪ್ರಾರಂಭವಾದ ಈ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯು, ಭಾರತ ಸರ್ಕಾರದ ಅಪಘಾತ ವಿಮಾ ಯೋಜನೆಗೆ ಪ್ರೀಮಿಯಂ ಇರುವುದು ವರ್ಷಕ್ಕೆ ಬರೀ ರೂ.20 ಅಷ್ಟೆ. ಅಪಘಾತದಿಂದ ವಿಮಾದಾರರು ಮರಣ ಹೊಂದಿದರೆ, ನಾಮ ನಿರ್ದೇಶಿತ ವ್ಯಕ್ತಿ (ನಾಮಿನೀ)ಗೆ ಅಥವಾ ಅಂಗವೈಕಲ್ಯ ಅನುಭವಿಸಿದರೆ ಸ್ವಯಂ ವಿಮಾದಾರರಿಗೆ ಮೊತ್ತ ಲಭಿಸುವುದು. ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವ 18-70 ವರ್ಷ ವಯಸ್ಸಿನೊಳಗಿನ ವ್ಯಕ್ತಿಗಳು ಈ ಯೋಜನೆಗೆ ಸೇರಬಹುದು. ಯಾವುದೇ ರೀತಿಯ ಅಪಘಾತದಲ್ಲಿ ವಿಮಾದಾರ ಸಾವನ್ನಪ್ಪಿದ್ದರೆ 2 ಲಕ್ಷ ರೂಪಾಯಿಗಳನ್ನು ನಾಮಿನೀಗೆ ನೀಡಲಾಗುತ್ತದೆ. ವಿಮಾದಾರ ಆತ್ಮಹತ್ಯೆ ಮಾಡಿಕೊಂಡರೆ ನಾಮಿನೀಗೆ ವಿಮಾ ಮೊತ್ತ ದೊರಕುವುದಿಲ್ಲ. ಶಾಶ್ವತ ಒಟ್ಟು ಅಂಗವೈಕಲ್ಯ ಉಂಟಾದರೆ 2 ಲಕ್ಷ ರೂಪಾಯಿ, ಶಾಶ್ವತ ಭಾಗಶಃ ಅಂಗವೈಕಲ್ಯ ಉಂಟಾದರೆ ವಿಮಾದಾರರಿಗೆ 1 ಲಕ್ಷ ರೂ.ಗಳೂ ದೊರಕುವುದು. ಈ ಯೋಜನೆಗೆ ನೋಂದಾಯಿಸಲು, ಬೇರೆ ಬೇರೆ ಭಾಷೆಗಳಲ್ಲಿ ಲಭ್ಯವಿರುವ ಫಾರ್ಮ್ ನ್ನು ಡೌನ್‌ ಲೋಡ್ ಮಾಡಿ ಅದನ್ನು ಯಾವುದೇ ಬ್ಯಾಂಕಿಗೆ ಸಲ್ಲಿಸಬಹುದು. ಕೆಲವು ಬ್ಯಾಂಕ್‌ ಗಳು ಕಿರು ಸಂದೇಶ ಹಾಗೂ ಅಂತರ್ಜಾಲ ಬ್ಯಾಂಕಿಂಗ್ ಆಧಾರಿತ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ.

ಸಮಾಜದ ಎಲ್ಲಾ ವರ್ಗಗಳವರೂ ಈ ಯೋಜನೆಗೆ ಸೇರಬಹುದಾಗಿದ್ದು, ಪ್ರಾದೇಶಿಕ ಭಾಷೆಯಲ್ಲೂ ಲಭ್ಯವಿರುವ ಅರ್ಜಿಯಲ್ಲಿ ಹೆಸರು, ಸಂಪರ್ಕ ವಿವರಗಳು, ಆಧಾರ್‌ ಸಂಖ್ಯೆ, ನಾಮ ನಿರ್ದೇಶಿತ ವ್ಯಕ್ತಿಯ ವಿವರ ಮುಂತಾದವುಗಳನ್ನು ಸರಿಯಾಗಿ ಭರ್ತಿ ಮಾಡಬೇಕು. ವಾರ್ಷಿಕ ಪ್ರೀಮಿಯಂಗಳನ್ನು ಕಟ್ಟುವ ತಿಂಗಳಿನಲ್ಲಿ ಉಳಿತಾಯ ಖಾತೆಯಲ್ಲಿ ಶಿಲ್ಕು ಇರುವುದು ಅಗತ್ಯ. ದುರಾದೃಷ್ಟಶಾತ್‌ ಅಪಘಾತ ಸಂಭವಿಸಿದರೆ, ತಕ್ಷಣ ಸಂಬಂಧಪಟ್ಟ ಬ್ಯಾಂಕಿಗೆ ತಿಳಿಸಿ, 30 ದಿನಗಳೊಳಗೆ ಭರ್ತಿ ಮಾಡಿದ ಕ್ಲೇಮ್ ಫಾರ್ಮ್ ನ್ನು ಬ್ಯಾಂಕ್‌ ಶಾಖೆಗೆ ಸಲ್ಲಿಸಬೇಕು. ಎಫ್‌.ಐ.ಆರ್‌ (ಆರಕ್ಷಕ ಠಾಣೆಯ ಪ್ರಥಮ ಮಾಹಿತಿ ವರದಿ), ಮರಣೋತ್ತರ ಪರೀಕ್ಷೆ  ವರದಿ, ಮರಣ ಪ್ರಮಾಣಪತ್ರ ಅಥವಾ ಸಿವಿಲ್ ‌ಸರ್ಜನ್‌ ನೀಡಿದ ಅಂಗವೈಕ್ಯಲ್ಯ ಪ್ರಮಾಣ ಪತ್ರಗಳನ್ನು  ಒದಗಿಸಬೇಕು. ಡಿಸ್ಚಾರ್ಜ್‌ ಪ್ರಮಾಣಪತ್ರವನ್ನು ಸಹ ಸೇರಿಸಬೇಕು. ಬ್ಯಾಂಕ್‌ ಗಳು ಕ್ಲೇಮ್ ಪ್ರಕ್ರಿಯೆಯನ್ನು ಸಾಮಾನ್ಯವಾಗಿ 30 ದಿನಗಳಲ್ಲಿ ಪೂರ್ಣಗೊಳಿಸಿ ವಿಮೆಯ ಮೊತ್ತವನ್ನು ನಾಮಿನಿ ಅಥವಾ ವಿಮೆದಾರರ ಖಾತೆಗೆ ಜಮಾ ಮಾಡುತ್ತವೆ.

ಪಿ.ಎಂ.ಜೆ.ಜೆ.ಬಿ.ವೈ 2015ರಲ್ಲಿ ಪ್ರಾರಂಭವಾದ ಈ `ಪ್ರಧಾನಮಂತ್ರಿ ಜೀವನ್‌ ಜ್ಯೋತಿ ಭೀಮಾ ಯೋಜನೆ’ಯಲ್ಲಿ ನಾಮ ನಿರ್ದೇಶಿತ ವ್ಯಕ್ತಿ (ನಾಮಿನೀ)ಗೆ ವಿಮಾ ಮೊತ್ತ ಲಭಿಸುವುದು. ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಮತ್ತು ಖಾಸಗಿ ಲಯದ ವಿಮಾ ಕಂಪನಿಗಳ ಮೂಲಕ ನಿಗದಿತ ವಾಣಿಜ್ಯ ಬ್ಯಾಂಕುಗಳಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ಈ ಯೋಜನೆಗೆ ಸೇರಬಹುದಾಗಿದೆ. ವಾರ್ಷಿಕ ಕೇವಲ 436 ರೂ.ಗಳ ಪ್ರೀಮಿಯಂ ಇರುವ ಈ ವಿಮಾ ಯೋಜನೆಯು 18-50 ವರ್ಷಗಳ ವಯೋಮಾನದ ವ್ಯಕ್ತಿಗಳಿಗೆ ಅನ್ವಯವಾಗುವುದು. 50 ವರ್ಷ ಪೂರೈಸುವ ಮೊದಲು ಯೋಜನೆಗೆ ಸೇರಿದವರು ವಾರ್ಷಿಕ ಪ್ರೀಮಿಯಂ ಕಟ್ಟುತ್ತಾ 55 ವರ್ಷಗಳ ವಯಸ್ಸಿನವರೆಗೂ ವಿಮಾ ಸೌಲಭ್ಯವನ್ನು ಹೊಂದಬಹುದಾಗಿದೆ.

ವಿಮಾದಾರ ಯಾವುದೇ ಕಾರಣದಿಂದ ಮರಣ ಹೊಂದಿದಲ್ಲಿ ನಾಮಿನೀಗೆ ರೂ. 2 ಲಕ್ಷ ದೊರಕುವುದು. ಯೋಜನೆಯಲ್ಲಿ ಸೇರ್ಪಡೆಗೊಳ್ಳುವ ಹೊಸ ಸದಸ್ಯರಿಗೆ, ಯೋಜನೆಗೆ ದಾಖಲಾದ ದಿನಾಂಕದಿಂದ ಮೊದಲ 30 ದಿನಗಳಲ್ಲಿ ಸಂಭವಿಸುವ ಸಾವಿಗೆ (ಅಪಘಾತದ ಕಾರಣ ಹೊರತುಪಡಿಸಿ) ವಿಮಾ ರಕ್ಷಣೆಯು ಲಭ್ಯವಿರುವುದಿಲ್ಲ. ಈ ಯೋಜನೆಗೆ ಕಟ್ಟಿದ ವಾರ್ಷಿಕ ಪ್ರೀಮಿಯಂಗೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80 ಸಿ ಆಡಿಯಲ್ಲಿ ವಿನಾಯಿತಿ ಇದೆ. ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಬ್ಯಾಂಕ್‌ ಗಳಲ್ಲಿ ಖಾತೆಗಳನ್ನು ಹೊಂದಿದ್ದರೂ ಸಹ, ಅವನು/ಅವಳು ಒಂದು ಬ್ಯಾಂಕ್‌ ಖಾತೆಯ ಮೂಲಕ ಮಾತ್ರ ಯೋಜನೆಗೆ ಸೇರಲು ಅರ್ಹರಾಗಿರುತ್ತಾರೆ. ಅಂತಹ ಪ್ರಕರಣ ಪತ್ತೆಯಾದರೆ, ಕಟ್ಟಿದ ಪ್ರೀಮಿಯಂಗಳನ್ನು ಪಾಲಿಸಿದಾರರ ಖಾತೆಗೆ ಮರುಪಾವತಿ ಮಾಡಲಾಗುತ್ತದೆ. ಹೆಚ್ಚುವರಿಯಾಗಿ, ಅಂತಹ ಪಾಲಿಸಿಗಳಿಗೆ ಯಾವುದೇ ವ್ಯಾಪ್ತಿಯನ್ನು ಒದಗಿಸಲಾಗುವುದಿಲ್ಲ. ಯಾವುದೇ ಹಂತದಲ್ಲಿ ವ್ಯಕ್ತಿ ಯೋಜನೆಯಿಂದ ನಿರ್ಗಮಿಸಿದ್ದರೂ ವಾರ್ಷಿಕ ಪ್ರೀಮಿಯಂ ಪಾವತಿಸುವ ಮೂಲಕ ಯೋಜನೆಗೆ ಮತ್ತೆ ಸೇರಬಹುದು. ಯಾರಾದರೂ ವಿಮಾದಾರರು ತಮ್ಮ ಸ್ವಯಂ ನವೀಕರವಣನ್ನು ರದ್ದುಗೊಳಿಸಲು ಬಯಸಿದರೆ ವರ್ಷಾಂತ್ಯದ ಮೊದಲು ಹಾಗೆ ಮಾಡಬೇಕು.

ಬಹಳಷ್ಟು ಕಡಿಮೆ ಮೊತ್ತದ ವಾರ್ಷಿಕ ಪ್ರೀಮಿಯಂ ಇರುವ ಇಂತಹ ಇನ್ನೂ ಕೆಲವಮ್ಮೆ ವಿಮೆಯ ಸೌಲಭ್ಯಗಳು ಬೇರೆ ಬೇರೆ ಬ್ಯಾಂಕುಗಳಲ್ಲಿರುತ್ತವೆ. ದುರಂತದ ಸಂದರ್ಭಗಳಲ್ಲಿ 1, 2, 5, 10, 20 ಲಕ್ಷ ಹೀಗೆ ಬೇರೆ ಬೇರೆ ವಿಮೆಯ ಮೊತ್ತ ಸಿಗುವುದು. ಜನಸಾಮಾನ್ಯರು ಈ ರೀತಿಯ ಅಪಘಾತ ವಿಮೆ, ಜೀವ ವಿಮೆಗಳಿಗೆ ನೊಂದಾಯಿಸಿಕೊಂಡು, ಪ್ರತೀ ವರ್ಷ ಪ್ರೀಮಿಯಂಗಳನ್ನು ಕಟ್ಟುತ್ತಾ ಬರುವುದು ಅವರನ್ನು ಅವಲಂಬಿಸಿರುವ ಕುಟುಂಬದವರ ಹಿತದೃಷ್ಟಿಯಿಂದ ಖಂಡಿತಾ ಅಗತ್ಯ.

ಕಟ್ಟಡ ವಿಮೆ ಮಾಡಿಸುವುದು ಅತ್ಯಗತ್ಯ

ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪಗಳಿಂದ ಮನೆ, ಕಟ್ಟಡಗಳಿಗೆ ಹಾನಿ ಉಂಟಾಗುವಂತೆ. ಮನೆ ಅಥವಾ ಕಟ್ಟಡ ಕಟ್ಟುವಾಗಲೂ ಕೆಲವೊಮ್ಮೆ ಆ ಕಟ್ಟಡ ಅಥವಾ ಪಕ್ಕದ ಕಟ್ಟಡ ಕುಸಿದು ಬಿದ್ದು ದುರಂತಗಳು ಉಂಟಾಗುವುದೂ ಇದೆ. ಹಾಗಾಗಿ ನಿಮ್ಮ ನಿಮ್ಮ ಕಟ್ಟಡಗಳಿಗೆ ಹಾಗೂ ಒಳಗಿರುವ ವಸ್ತುಗಳ ಸುರಕ್ಷತೆಗಾಗಿ ವಿಮೆ ಮಾಡಿಸಿಲ್ಲದಿದ್ದರೆ ಸಂಬಂಧಪಟ್ಟ ವಿಮಾ ಕಂಪನಿಗಳನ್ನು ಸಂಪರ್ಕಿಸಿ ಇಂದೇ ವಿಮೆಯನ್ನು ಮಾಡಿಸಿಕೊಳ್ಳಿ.

ಆರೋಗ್ಯ ವಿಮೆ, ವಾಹನ ವಿಮೆ, ಜೀವ ವಿಮೆ ಇವೇ ಮುಂತಾದವುಗಳು ಎಷ್ಟು ಮುಖ್ಯವೋ ಕಟ್ಟಡ ವಿಮೆಯೂ ಅಷ್ಟೇ ಮುಖ್ಯ. ಇದಕ್ಕೆ ವಿಮಾ ಕಂತು ಬಹಳವೇನೂ ಇರುವುದಿಲ್ಲ. ಹಾಗಾಗಿ ತಡವೇಕೆ?

ಎಂತಹ ಸಂದರ್ಭಗಳಲ್ಲಿ ಕಟ್ಟಡ ಮತ್ತು ಮನೆಯ ಸಾಮಾನುಗಳಿಗೆ ಹಾನಿ ಉಂಟಾದಾಗ ವಿಮೆ ದೊರಕುವುದು?

ಅಗ್ನಿ ಅನಾಹುತ, ಕಾಡಿನ ಬೆಂಕಿ, ಜ್ವಾಲಾಮುಖಿ, ಸ್ಛೋಟ ಮೊದಲಾದವುಗಳು.

ಸಿಡಿಲು ಮತ್ತು ಮಳೆ, ಗುಡ್ಡ ಕುಸಿತ, ಬಂಡೆ ಕುಸಿತ, ಪ್ರವಾಹ, ಮುಳುಗಡೆ ಇತ್ಯಾದಿಗಳು.

ನೀರಿನ ಟ್ಯಾಂಕ್‌ ಅಥವಾ ಪೈಪುಗಳು ಒಡೆಯುವುದು.

ಹಿಮಪಾತ, ಚಂಡಮಾರುತ, ಬಿರುಗಾಳಿ ಮೊದಲಾದವುಗಳು.

ಕ್ಷಿಪಣಿ ಪರೀಕ್ಷೆ, ವಿಮಾನದಿಂದ ಹಾನಿ, ದಂಗೆ ಇತ್ಯಾದಿಗಳು.

ಭೂಕಂಪ, ದರೊಡೆ ಮತ್ತು ಕಳ್ಳತನ.

ಭಯೋತ್ಪಾದನೆಯಿಂದ.

ಯಾರದ್ದಾದರೂ ಆಕ್ರಮಣದಿಂದ ಅಥವಾ ಯುದ್ಧದಿಂದ ಉಂಟಾಗಬಹುದಾದ ಸಂಭಾವ್ಯ ಹಾನಿಗೆ ಕೂಡ ವಿಮೆ ಮಾಡಿಸಬಹುದಾಗಿದೆ. ಆದರೆ ಅದಕ್ಕೆ ಹೆಚ್ಚಿನ ವಿಮಾ ಕಂತು ನೀಡಬೇಕಾಗುವುದು ಯಾವುದಕ್ಕೆ ವಿಮೆ ಲಭ್ಯವಿಲ್ಲ?

ಸ್ವಯಂಕೃತವಾಗಿ ಹಾನಿ ಉಂಟಾದರೆ ವಿಮೆ ಲಭ್ಯವಿಲ್ಲ.

ಕಟ್ಟಡದ ಮೌಲ್ಯಕ್ಕೆ ವಿಮೆಯನ್ನು ಮಾಡಿಸಬಹುದಾಗಿದೆ. ಆದರೆ ಅದರಲ್ಲಿ ಜಾಗದ ದರವನ್ನು ಪರಿಗಣಿಸಲಾಗುವುದಿಲ್ಲ.

ವಿಮಾ ಕಂತಿನ ಬಗ್ಗೆ ವಿಮೆಯನ್ನು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿಗೆ ಅಂದರೆ ಇಪ್ಪತ್ತು ವರ್ಷಗಳವರೆಗೂ ಪಡೆದುಕೊಳ್ಳಬಹುದಾಗಿದೆ.

ಹೆಚ್ಚಿನ ಅವಧಿಗೆ ವಿಮೆ ಪಡೆದಾಗ ಕಟ್ಟಬೇಕಾದ ವಿಮಾ ಕಂತಿನಲ್ಲಿ ರಿಯಾಯಿತಿ ಸಿಗುವುದು.

ಕಟ್ಟಡ ಬಹಳ ಹಳೆಯದಾಗಿದ್ದರೆ, ಕಟ್ಟಡ ಕಟ್ಟಿ ಎಷ್ಟು ವರ್ಷ ಆಗಿದೆ ಎಂಬುದನ್ನು ಗಮನಿಸಿ ವಿಮೆಯ ಕಂತನ್ನು ನಿಗದಿಪಡಿಸಲಾಗುವುದು.

ಕಟ್ಟಡ ಎಲ್ಲಿದೆ ಎಂದು ಅಂಚೆ ಇಲಾಖೆಯ ಪಿನ್‌ ಕೋಡ್‌ ಸಂಖ್ಯೆಯನ್ನು ಗಮನಿಸಿ. ವಿಮಾ ಕಂಪನಿಯವರು ಚಂಡ ಮಾರುತ, ಪ್ರವಾಹ, ಭೂಕಂಪ ಮುಂತಾದ ಪ್ರಾಕೃತಿಕ ವಿಕೋಪಗಳು ಉಂಟಾಗುವ ಸಂಭಾವ್ಯತೆಗಳು ಹೆಚ್ಚಿರುವ ಸ್ಥಳಗಳಲ್ಲಿ ವಿಮೆ ಕಂತಿನ ಮೊತ್ತವನ್ನು ತುಸು ಹೆಚ್ಚಿಸುವರು.

ಹಾಗೆಯೇ ಅಲಾರಂ ವ್ಯವಸ್ಥೆ ಇರುವ, ಹೊಗೆಯನ್ನು ಗುರುತಿಸುವ ಸಾಧನಗಳಿರುವ ಹಾಗೂ ಬೆಂಕಿ ನಂದಿಸಲು ವ್ಯವಸ್ಥೆ ಇರುವಂತಹ ಅಪಾರ್ಟ್‌ ಮೆಂಟ್‌ ಗಳಲ್ಲಿರುವ ಮನೆಗಳಿಗೆ ವಿಮಾ ಕಂತಿನಲ್ಲಿ ರಿಯಾಯಿತಿ ಲಭಿಸುವುದು.

ವಿಮೆ ಮಾಡಿಸಲು ಬೇಕಾದ ದಾಖಲೆಗಳು

ವಿಮೆ ಮಾಡಿಸಲು ಹೆಚ್ಚೇನೂ ದಾಖಲೆಗಳು ಬೇಕಾಗಿಲ್ಲ.

ಮನೆ ಅಥವಾ ಕಟ್ಟಡ ವಿಮಾದಾರನ ಹೆಸರಿನಲ್ಲೇ ಇರಬೇಕು.

ವಿಮಾದಾರನ ಗುರುತು ಹಾಗೂ ವಿಳಾಸದ ಪುರಾವೆ ಇದ್ದರೆ ಸಾಕು.

ಕಟ್ಟಡ ಕಟ್ಟಲು ಸಂಬಂಧಪಟ್ಟ ಇಲಾಖೆ ನೀಡಿದ ಅನುಮತಿ, ನಕ್ಷೆ ಇವೆಲ್ಲ ಯಾವುದೂ ಬೇಕಾಗಿಲ್ಲ.

ಕಟ್ಟಡದ ಮೌಲ್ಯಮಾಪನವೇನೂ ಬೇಕಾಗಿಲ್ಲ. ವಿಮಾದಾರ ಮತ್ತು ವಿಮಾ ಕಂಪನಿಯವರ ಒಪ್ಪಿತ ಮೌಲ್ಯಕ್ಕೆ ವಿಮೆ ಮಾಡಿಸಬಹುದಾಗಿದೆ.

ಕಟ್ಟಡಕ್ಕೆ 2 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತಕ್ಕೆ ವಿಮೆ ಮಾಡಿಸುವುದಾದರೆ ಮಾತ್ರ ಕಟ್ಟಡ ಮೌಲ್ಯಮಾಪಕರದೆ ಮೌಲ್ಯಮಾಪನದ ವಿವರ ಬೇಕಾಗುವುದು.

ಕಟ್ಟಡಕ್ಕೆ ಹಾನಿ…. ಕ್ಲೇಮ್ ಹೇಗೆ?

ಅಗ್ನಿಯಿಂದ ಅನಾಹುತವಾಗಿದ್ದರೆ ವಿಮಾದಾರನು ಕೂಡಲೇ ಅಂದರೆ ಹದಿನೈದು ದಿನಗಳ ಒಳಗೆ ವಿವರಗಳನ್ನು ಮತ್ತು ಅದರಿಂದ ಉಂಟಾದ ಅಂದಾಜು ನಷ್ಟವನ್ನು ಲಿಖಿತ ಅರ್ಜಿ ಸಲ್ಲಿಸುವ ಮೂಲಕ ವಿಮಾ ಕಂಪನಿಯ ಗಮನಕ್ಕೆ ತರಬೇಕು.

ಭೂಕಂಪ, ಪ್ರವಾಹ ಮೊದಲಾದ ವಿಕೋಪಗಳಿಂದ ಹಾನಿ ಉಂಟಾಗಿದೆ ಎಂದು ವಿಮಾದಾರನು ಪರಿಹಾರಕ್ಕಾಗಿ ಕ್ಲೇಮ್ ಅರ್ಜಿ ಸಲ್ಲಿಸಿದಾಗ, ಸಂಶಯವಿದ್ದಲ್ಲಿ ವಿಮಾ ಕಂಪನಿಯವರು ಸಂಬಂಧಪಟ್ಟ ಸರ್ಕಾರಿ ಇಲಾಖೆಗಳನ್ನು ಸಂಪರ್ಕಿಸಿ ದೃಢೀಕರಣ ಪಡೆದುಕೊಳ್ಳುತ್ತಾರೆ.

ಯಾವ ಯಾವ ವಿಮಾ ಕಂಪನಿಗಳಿವೆ?

ಎಸ್‌ಬಿಐ ಜನರಲ್ ಇನ್ಶುರೆನ್ಸ್ ಕಂಪನಿ, ಎಚ್‌ಡಿಎಫ್‌ಸಿ ಎರ್ಗೊ ಜನರಲ್ ಇನ್ಶುರೆನ್ಸ್, ದಿ ನ್ಯೂ ಇಂಡಿಯಾ ಅಶ್ಯುರೆನ್ಸ್, ಬಜಾಜ್‌ ಜನರಲ್ ಇನ್ಶುರೆನ್ಸ್ ಮೊದಲಾದ ವಿಮಾ ಕಂಪನಿಗಳು ಕಟ್ಟಡ ವಿಮೆಯನ್ನು ಮಾಡಲು ಪರವಾನಗಿ ಹೊಂದಿರುವ ಸಂಸ್ಥೆಗಳಾಗಿವೆ.

ವಾಹನಗಳನ್ನು ಖರೀದಿಸುವಾಗ ವಿಮೆಯನ್ನು ಮಾಡಿಸುವುದು ಕಡ್ಡಾಯವಿರುವಂತೆ ಕಟ್ಟಡಗಳಿಗೆ ವಿಮೆ ಮಾಡಿಸುವುದು ಕಡ್ಡಾಯವಲ್ಲವಾದರೂ, ಕಟ್ಟಡದ ಮಾಲೀಕರ ಹಿತದೃಷ್ಟಿಯಿಂದ ಇದು ಅಪೇಕ್ಷಣೀಯ ಅಷ್ಟೆ. ಆದರೆ, ಕಟ್ಟಡಕ್ಕೆ ಬ್ಯಾಂಕಿನಿಂದ ಅಥವಾ ಬೇರೆ ಯಾವುದಾದರೂ ಹಣಕಾಸು ಸಂಸ್ಥೆಯಿಂದ ಸಾಲವನ್ನು ಪಡೆದುಕೊಳ್ಳುವುದಾದರೆ, ಆಗ ಕಟ್ಟಡದ ವಿಮೆಯನ್ನು ಮಾಡಿಸುವುದು ಕಡ್ಡಾಯ. ಅಷ್ಟೇ ಅಲ್ಲ, ಅದನ್ನು ಕಾಲಕಾಲಕ್ಕೆ ನವೀಕರಿಸಿ ಚಾಲ್ತಿಯಲ್ಲಿಡುವುದು ಕೂಡ ಅಗತ್ಯ.

ಬಿ.ಎನ್‌. ಭರತ್ಬಾಳಿಕೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ