ಮಳೆಗಾಲದಲ್ಲಿ ಕಟ್ಟಡಗಳಿಗೆ ವಿಮೆ ಮಾಡಿಸುವುದು ಬಹಳ ಮುಖ್ಯವಾಗುತ್ತದೆ. ಇದನ್ನು ಹೇಗೆ ಮಾಡಿಸುವುದು? ಇದರ ಲಾಭಗಳೇನು ಇತ್ಯಾದಿ ಎಲ್ಲಾ ವಿವರಗಳನ್ನೂ ತಿಳಿಯೋಣವೇ.....?
ಮಳೆಗಾಲ ಪ್ರಾರಂಭವಾಗಿದೆ. ಮಳೆಗಾಲ ಎಂದಕೂಡಲೇ ಶಾಲೆಗೆ ಹೋಗುವ ಮಕ್ಕಳಿಗೆ ಮಳೆಯಿಂದ ಪುಸ್ತಕಗಳು ಒದ್ದೆಯಾಗದಂತೆ ಚೀಲ, ಪಾದರಕ್ಷೆ, ರೈನ್ ಕೋಟ್, ಛತ್ರಿ ಮೊದಲಾದವುಗಳನ್ನು ಎಲ್ಲರೂ ಒದಗಿಸುತ್ತಿರುತ್ತಾರೆ. ಅತಿಯಾದ ಮಳೆ, ಬಿರುಗಾಳಿ, ಪ್ರವಾಹ, ಗುಡ್ಡ ಕುಸಿತ, ಭೂಕಂಪ ಮುಂತಾದ ಪ್ರಾಕೃತಿಕ ವಿಕೋಪಗಳಿಂದ ಕೆಲವೊಮ್ಮೆ ದುರಂತಗಳು ಉಂಟಾಗಲೂಬಹುದು.
ಆಗ ಕೆಲವರು ಪ್ರಾಣ ಕಳೆದುಕೊಳ್ಳಬೇಕಾಗಿ ಬರುವುದು ನಿಜಕ್ಕೂ ದೌರ್ಭಾಗ್ಯಕರ. ಅಂತಹ ಸನ್ನಿವೇಶಗಳಲ್ಲಿ ಮನೆ, ಅಂಗಡಿ ಮೊದಲಾದ ಕಟ್ಟಡಗಳ ಕುಸಿತದಿಂದ ಲಕ್ಷಾಂತರ, ಕೋಟ್ಯಂತರ ರೂಪಾಯಿಗಳ ನಷ್ಟ ಉಂಟಾಗುವುದೂ ಇದೆ. ಪ್ರಾಣ ಕಳೆದುಕೊಂಡವರ ಕುಟುಂಬದವರಿಗೆ ಸ್ವಲ್ಪ ಮಟ್ಟಿಗಾದರೂ ಹಣಕಾಸಿನ ಸಾಂತ್ವನ ನೀಡಲೆಂದು ಮೊದಲೇ ಅಪಘಾತದ ವಿಮೆ ಮಾಡಿಸಿರುವುದು ಅಪೇಕ್ಷಣೀಯ.
ಹಾಗೆಯೇ ಕಟ್ಟಡಗಳಿಗೆ ಹಾನಿ ಉಂಟಾದಾಗ ನಷ್ಟ ಸರಿದೂಗಿಸುವಂತೆ ಮುಂಜಾಗ್ರತಾ ಕ್ರಮವಾಗಿ ಕಟ್ಟಡಕ್ಕೆ ಮತ್ತು ಮನೆಯೊಳಗಿರುವ ವಸ್ತುಗಳಿಗೆ ಮೊದಲೇ ವಿಮೆ ಮಾಡಿಸಿಕೊಳ್ಳುವುದು ಕೂಡ ಅತ್ಯಗತ್ಯ.
ಕಡಿಮೆ ಪ್ರೀಮಿಯಂನ ವಿಮಾ ಯೋಜನೆ
ಪ್ರತೀ ಮಳೆಗಾಲದಲ್ಲೂ ಪ್ರಾಕೃತಿಕ ವಿಕೋಪಗಳಿಂದ ಬೇರೆ ಬೇರೆ ರೀತಿಯಲ್ಲಿ ಸಾವು ಸಂಭವಿಸುತ್ತಲೇ ಇರುತ್ತದೆ. ಹಾಗೆಯೇ ಕೆಲವೊಮ್ಮೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡಗಳು ಕುಸಿದು ಹಲವು ಬಡ ಕಾರ್ಮಿಕರ ಸಾವು ನೋವುಗಳುಂಟಾಗುವುದು ನಿಜಕ್ಕೂ ದೌರ್ಭಾಗ್ಯಕರ. ಬಾಡಿಗೆಗೆ ವಾಹನ ಮಾಡಿಕೊಂಡು ಮದುವೆಗೋ, ಪ್ರವಾಸಕ್ಕೋ ಹೋದ ಕೂಲಿ ಕೆಲಸದವರು ಅಪಘಾತಕ್ಕೆ ಒಳಗಾದ ಸುದ್ದಿಗಳೂ ಆಗಾಗ ಪ್ರಕಟವಾಗುತ್ತಿರುತ್ತವೆ. ದ್ವಿಚಕ್ರ, ತ್ರಿಚಕ್ರ ಪ್ರಯಾಣದಲ್ಲಿ ಅಥವಾ ಮರದಿಂದ ಬಿದ್ದು ಹೀಗೆ ಬೇರೆ ಬೇರೆ ರೀತಿಯಲ್ಲಿ ಧಾರುಣ ಅವಘಡಗಳು ಸಂಭವಿಸುತ್ತಿರುತ್ತವೆ. ಅಂತಹವರ ಕುಟುಂಬದವರಿಗೆ ಆತ್ಮೀಯರನ್ನು ಕಳೆದುಕೊಂಡರ ಸಂಕಟ, ನೋವುಗಳ ಜೊತೆಗೇ ಮುಂದೆ ದಿನ ದೂಡುವುದು ಹೇಗೆ? ಮಕ್ಕಳ ವಿದ್ಯಾಭ್ಯಾಸಕ್ಕೆ ಏನು ಮಾಡುವುದು ಎಂಬಿತ್ಯಾದಿ ಯೋಚನೆಗಳು ಚಿಂತೆಗಳಾಗಿ ಕಾಡುವುದು. ಇಂತಹ ಅನಿರೀಕ್ಷಿತ ದುರಂತಗಳಿಂದ ಉಂಟಾಗುವ ಹಣಕಾಸಿನ ತೀವ್ರ ಅಡಚಣೆಗಳನ್ನು ಸ್ವಲ್ಪ ಮಟ್ಟಿಗಾದರೂ ಶಮನಗೊಳಿಸು ದೃಷ್ಟಿಯಿಂದ ಪ್ರಾರಂಭಗೊಳಿಸಿರುವ, ಕಡಿಮೆ ಪ್ರೀಮಿಯಂನಲ್ಲಿ ಲಭ್ಯವಿರುವ ಕೆಲವು ವಿಮೆಯ ಯೋಜನೆಗಳಿವೆ. ಹಲವರಿಗೆ ಇವುಗಳ ಬಗ್ಗೆ ಅರಿವಿರುವುದಿಲ್ಲ.
ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ
2015ರಲ್ಲಿ ಪ್ರಾರಂಭವಾದ ಈ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯು, ಭಾರತ ಸರ್ಕಾರದ ಅಪಘಾತ ವಿಮಾ ಯೋಜನೆಗೆ ಪ್ರೀಮಿಯಂ ಇರುವುದು ವರ್ಷಕ್ಕೆ ಬರೀ ರೂ.20 ಅಷ್ಟೆ. ಅಪಘಾತದಿಂದ ವಿಮಾದಾರರು ಮರಣ ಹೊಂದಿದರೆ, ನಾಮ ನಿರ್ದೇಶಿತ ವ್ಯಕ್ತಿ (ನಾಮಿನೀ)ಗೆ ಅಥವಾ ಅಂಗವೈಕಲ್ಯ ಅನುಭವಿಸಿದರೆ ಸ್ವಯಂ ವಿಮಾದಾರರಿಗೆ ಮೊತ್ತ ಲಭಿಸುವುದು. ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವ 18-70 ವರ್ಷ ವಯಸ್ಸಿನೊಳಗಿನ ವ್ಯಕ್ತಿಗಳು ಈ ಯೋಜನೆಗೆ ಸೇರಬಹುದು. ಯಾವುದೇ ರೀತಿಯ ಅಪಘಾತದಲ್ಲಿ ವಿಮಾದಾರ ಸಾವನ್ನಪ್ಪಿದ್ದರೆ 2 ಲಕ್ಷ ರೂಪಾಯಿಗಳನ್ನು ನಾಮಿನೀಗೆ ನೀಡಲಾಗುತ್ತದೆ. ವಿಮಾದಾರ ಆತ್ಮಹತ್ಯೆ ಮಾಡಿಕೊಂಡರೆ ನಾಮಿನೀಗೆ ವಿಮಾ ಮೊತ್ತ ದೊರಕುವುದಿಲ್ಲ. ಶಾಶ್ವತ ಒಟ್ಟು ಅಂಗವೈಕಲ್ಯ ಉಂಟಾದರೆ 2 ಲಕ್ಷ ರೂಪಾಯಿ, ಶಾಶ್ವತ ಭಾಗಶಃ ಅಂಗವೈಕಲ್ಯ ಉಂಟಾದರೆ ವಿಮಾದಾರರಿಗೆ 1 ಲಕ್ಷ ರೂ.ಗಳೂ ದೊರಕುವುದು. ಈ ಯೋಜನೆಗೆ ನೋಂದಾಯಿಸಲು, ಬೇರೆ ಬೇರೆ ಭಾಷೆಗಳಲ್ಲಿ ಲಭ್ಯವಿರುವ ಫಾರ್ಮ್ ನ್ನು ಡೌನ್ ಲೋಡ್ ಮಾಡಿ ಅದನ್ನು ಯಾವುದೇ ಬ್ಯಾಂಕಿಗೆ ಸಲ್ಲಿಸಬಹುದು. ಕೆಲವು ಬ್ಯಾಂಕ್ ಗಳು ಕಿರು ಸಂದೇಶ ಹಾಗೂ ಅಂತರ್ಜಾಲ ಬ್ಯಾಂಕಿಂಗ್ ಆಧಾರಿತ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ.





