ಸ್ಯಾಂಡಲ್ವುಡ್ ನಟಿ ಶರ್ಮಿಳಾ ಮಾಂಡ್ರೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸ್ಯಾಂಡಲ್ವುಡ್ ನಟಿ ಶರ್ಮಿಳಾ ಮಾಂಡ್ರೆ, ತಮಿಳು, ತೆಲುಗು ಸೇರಿದಂತೆ ನಾನಾ ಭಾಷಾ ಚಿತ್ರಗಳಲ್ಲಿ ನಟಿಸಿದ್ದು, ಇದೀಗ ತಮಿಳುನಾಡಿನ ಸೊಸೆಯಾಗಲಿದ್ದಾರೆ.
ಶರ್ಮಿಳಾ ಅವರ ನಿಶ್ಚಿತಾರ್ಥ ಜೂನ್ 25 ರಂದು ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಸುದ್ದಿಯನ್ನು ಖಚಿತಪಡಿಸಿರುವ ನಟಿಯ ಕುಟುಂಬ, ಈ ನಿಶ್ಚಿತಾರ್ಥ ಅತ್ಯಂತ ಸರಳ ಮತ್ತು ಆಪ್ತರ ಸಮ್ಮುಖದಲ್ಲಿ ನಡೆಯಲಿದೆ ಎಂದಿದ್ದಾರೆ.
ಶರ್ಮಿಳಾ ಮಾಂಡ್ರೆ ಅವರು ತಮಿಳು ಚಿತ್ರರಂಗದ ನಿರ್ಮಾಪಕ ಸುಧನ್ ಸುಂಧರಮ್ ಅವರ ಕೈ ಹಿಡಿಯಲಿದ್ದಾರೆ. ಸುಧನ್ ಅವರು ನಿರ್ಮಾಣ ಸಂಸ್ಥೆಯಾದ ಪ್ಯಾಷನ್ ಸ್ಟುಡಿಯೋಸ್‌ನ ಮಾಲೀಕರಾಗಿದ್ದು, ಸಿನಿಮಾ ನಿರ್ಮಾಣ ಮತ್ತು ವಿತರಣೆಯಲ್ಲಿ ಸಕ್ರಿಯರಾಗಿದ್ದಾರೆ.
ಸುಧನ್ ಅವರು 2024ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ತಮಿಳು ಚಿತ್ರ ‘ಮಹಾರಾಜ’ ನಿರ್ಮಾಪಕರಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡ ‘ತಾಕ್ ಕಿಳವಿ’ ಚಿತ್ರಕ್ಕೂ ಅವರು ಸಹ-ನಿರ್ಮಾಪಕರಾಗಿದ್ದಾರೆ. ಇದರ ಜೊತೆಗೆ ‘ಬೆಂಜ್’, ‘ಇರೈವನ್’ ಮುಂತಾದ ಹಲವು ತಮಿಳು ಚಿತ್ರಗಳನ್ನು ಅವರು ನಿರ್ಮಿಸಿದ್ದಾರೆ. ಕರಾಟೆ ಕೋವಿಯಂಡ್ ಹೆಸರಿನ ಪ್ರಸಿದ್ಧ ಕುಟುಂಬಕ್ಕೆ ಸೇರಿದವರು.
‘ಸಜನಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಶರ್ಮಿಳಾ ಮಾಂಡ್ರೆ, ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ‘ಗುಲಾಮ’, ‘ಜಾನಿ ಮೇರಾ ನಾಮ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ಅವರು ತಮಿಳು ಚಿತ್ರ ‘ಅದೃಷ್ಟಶಾಲಿ’ ಮತ್ತು ಕನ್ನಡ ಚಿತ್ರ ‘ದಸರಾ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಶರ್ಮಿಳಾ ಮಾಂಡ್ರೆ, ತಮಿಳಿನಲ್ಲಿ ನಾಲ್ಕು ಚಿತ್ರಗಳು, ಕನ್ನಡದ ‘ದಸರಾ’ ಮತ್ತು ತಮಿಳಿನ ‘ಕಾದಲ್ ಕೊಂಜಂ ತೂಕಲಾ’ ಎಂಬ ಚಿತ್ರಗಳನ್ನು ಸಹ ನಿರ್ಮಾಣ ಮಾಡುತ್ತಿದ್ದಾರೆ.
ಜೂನ್ 25ರಂದು ನಡೆಯಲಿರುವ ನಿಶ್ಚಿತಾರ್ಥವು ಕೇವಲ ಕುಟುಂಬಸ್ಥರಿಗಷ್ಟೇ ಸೀಮಿತವಾಗಿದ್ದು, ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಮದುವೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ವಿವಾಹ ಸಹ ಇದೇ ವರ್ಷ ನೆರವೇರಲಿದೆ ಎನ್ನಲಾಗಿದೆ.





