– ರಾಘವೇಂದ್ರ ಅಡಿಗ ಎಚ್ಚೆನ್.
ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್, ವಿವಾದಿತ ‘ಬಾಸ್’ ಚಿತ್ರದ ವಿರುದ್ಧ ಮತ್ತೆ ಕಾನೂನು ಹೋರಾಟ ಆರಂಭಿಸಿದ್ದು, ಚಿತ್ರದ ಬಿಡುಗಡೆಗೆ ತಡೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ವಿ. ಲವ ನಿರ್ದೇಶನದಲ್ಲಿ, ತನಿಷ್ ಶಿವಣ್ಣ ನಟನೆಯ ‘ಬಾಸ್’ ಚಿತ್ರದ ಟೀಸರ್ ಬಿಡುಗಡೆಯಾದ ದಿನದಿಂದಲೇ ಸಿನಿಮಾ ವಿವಾದದ ಕೇಂದ್ರಬಿಂದುವಾಗಿದೆ. ಟೀಸರ್‌ನಲ್ಲಿ ‘ನೈಜ ಘಟನೆಗಳ ಆಧಾರಿತ ಕಥೆ’ ಎಂಬ ಉಲ್ಲೇಖ ಮಾಡಲಾಗಿದ್ದು, ಚಿತ್ರಕಥೆ ದರ್ಶನ್‌ಗೆ ಸಂಬಂಧಿಸಿದ ಬಹುಚರ್ಚಿತ ಪ್ರಕರಣದ ಸುತ್ತಲೇ ಸಾಗುತ್ತದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ದರ್ಶನ್ ಈ ಹಿಂದೆ ಸೆಷನ್ಸ್ ಕೋರ್ಟ್‌ನಲ್ಲಿ ಚಿತ್ರದ ಪ್ರದರ್ಶನಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು. ಇದರಿಂದ ಚಿತ್ರತಂಡಕ್ಕೆ ತಾತ್ಕಾಲಿಕ ನೆಮ್ಮದಿ ಸಿಕ್ಕಿತ್ತು.
ಆದರೆ ಇದೀಗ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ ಹೈಕೋರ್ಟ್ ಮೊರೆ ಹೋಗಿದ್ದು, ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಮೇಲ್ಮನವಿ ಸಲ್ಲಿಸಿದ್ದಾರೆ. ಜೂನ್ 17ರಂದು ಅರ್ಜಿಯ ವಿಚಾರಣೆ ನಡೆಯಲಿದ್ದು, ನ್ಯಾಯಾಲಯದ ತೀರ್ಪು ಚಿತ್ರದ ಭವಿಷ್ಯ ನಿರ್ಧರಿಸಲಿದೆ.
ಜೂನ್ 19ರಂದು ‘ಬಾಸ್’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಬೇಕಿದ್ದು, ಚಿತ್ರತಂಡ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದೆ. ಸೆನ್ಸಾರ್ ಮಂಡಳಿಯು ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಿದೆ. ಆದರೂ ನ್ಯಾಯಾಲಯದ ಆದೇಶವೇ ಈಗ ಚಿತ್ರದ ಬಿಡುಗಡೆಗೆ ನಿರ್ಣಾಯಕವಾಗಲಿದೆ.
ಚಿತ್ರತಂಡವು ‘ಬಾಸ್’ ಸಿನಿಮಾ ದರ್ಶನ್ ಜೀವನಾಧಾರಿತ ಚಿತ್ರವಲ್ಲ ಎಂದು ಸ್ಪಷ್ಟಪಡಿಸುತ್ತಿದ್ದರೂ, ಟೀಸರ್‌ನಲ್ಲಿನ ಕೆಲವು ದೃಶ್ಯಗಳು ಮತ್ತು ಪಾತ್ರಗಳ ವಿನ್ಯಾಸ ಹಲವು ಅನುಮಾನಗಳಿಗೆ ಕಾರಣವಾಗಿದೆ.





