ಉತ್ತರ ಪ್ರದೇಶದ ರಾಜಧಾನಿ ಲಖನೌದ ಅಲಿಗಂಜ್ ಪೊಲೀಸ್ ಠಾಣೆ ಪ್ರದೇಶದ ಪುರಾಣಿ ಪ್ರದೇಶದ ಕೋಚಿಂಗ್ ಸೆಂಟರ್ ನಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 18 ವಿದ್ಯಾರ್ಥಿಗಳು ಸಜೀವ ದಹನವಾಗಿದ್ದು ಐವರ ಸ್ಥಿತಿ ಗಂಭೀರವಾಗಿದೆ. ಮೃತಪಟ್ಟ ವಿದ್ಯಾರ್ಥಿಗಳೆಲ್ಲರೂ ಸುಮಾರು 20 ರಿಂದ 24 ವರ್ಷ ವಯಸ್ಸಿನವರು ಎನ್ನಲಾಗಿದೆ.

ಅಲಿಗಂಜ್​ ಪ್ರದೇಶದ ಉಷಾ ಮೆಹ್ತಾ ಮಾರ್ಗದಲ್ಲಿದ್ದ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ದುರಂತ ಸಂಭವಿಸಿದ್ದು, ಮೊದಲ ಮಹಡಿಯಲ್ಲಿದ್ದ ಗೇಮಿಂಗ್​ ಸಾಫ್ಟ್​ವೇರ್​ ಅಭಿವೃದ್ಧಿ, ಅನಿಮೇಷನ್​ ತರಬೇತಿ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಇಡೀ ಕಟ್ಟಡಕ್ಕೆ ಹರಡಿದೆ. ಇಡೀ ಪ್ರದೇಶವು ದಟ್ಟ ಹೊಗೆಯಿಂದ ತುಂಬಿತ್ತು. ಪ್ರಾಣವನ್ನು ಉಳಿಸಿಕೊಳ್ಳಲು ಹಲವರು ಕಟ್ಟಡದಿಂದ ಜಿಗಿದಿದ್ದರೆ, ಮತ್ತೆ ಕೆಲವರು ಉಸಿರುಕಟ್ಟಿ ಮೃತಪಟ್ಟಿದ್ದಾರೆ.

ಅಗ್ನಿಶಾಮಕ ದಳ, ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್​, ನಾಗರಿಕ ರಕ್ಷಣಾ ಪಡೆ ಸಿಬ್ಬಂದಿ ಬಹಳ ಪ್ರಯಾಸಪಟ್ಟು ಬೆಂಕಿಯನ್ನು ತಹಬದಿಗೆ ತಂದಿದ್ದಾರೆ. ಸ್ಥಳೀಯ ನಿವಾಸಿಗಳು ಬೆಂಕಿಯಲ್ಲಿ ಸಿಲುಕಿದವರನ್ನು ಸ್ಥಳಾಂತರಿಸುವಲ್ಲಿ ಆಡಳಿತಕ್ಕೆ ಸಹಾಯ ಮಾಡಿದರು. ಸ್ಥಳೀಯ ಆಡಳಿತ ಗಾಯಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದರು.

ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, “ರಕ್ಷಣಾ ಕಾರ್ಯಾಚರಣೆ ಸಮಯದಲ್ಲಿ ದೊಡ್ಡ ಸವಾಲು ಎದುರಾಗಿತ್ತು. ಒಳಗೆ ಸಿಲುಕಿರುವವರನ್ನು ತಲುಪಲು ಅಗ್ನಿಶಾಮಕ ದಳದವರು ಪರ್ಯಾಯ ಮಾರ್ಗಗಳನ್ನು ರಚಿಸಿ ಕಟ್ಟಡದ ಕೆಲವು ಭಾಗಗಳನ್ನು ಕೆಡವಬೇಕಾಯಿತು” ಎಂದು ಹೇಳಿದ್ದಾರೆ.

ಬೆಂಕಿ ಹರಡಿದ ನಂತರ ಈ ಕಟ್ಟಡದಲ್ಲಿ ಜನರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿತ್ತು. ಬೆಂಕಿ ಹೊತ್ತಿಕೊಂಡ ಕಟ್ಟಡದಲ್ಲಿ ತುರ್ತು ನಿರ್ಗಮನ ದ್ವಾರಗಳಿಲ್ಲ ಎಂದು ಪ್ರಾಥಮಿಕ ತನಿಖೆಗಳು ಬಹಿರಂಗಪಡಿಸಿವೆ.

ಮುಗಿಲು ಮುಟ್ಟಿದ ಆಕ್ರಂದನ: ಬೆಂಕಿಯ ಕೆನ್ನಾಲಗೆಗೆ ಸಿಲುಕಿದ್ದ ತಮ್ಮ ಮಕ್ಕಳ ಚೀರಾಟ ಕೇಳಿ, ಪೋಷಕರು ಪ್ರಾಣದ ಹಂಗು ತೊರೆದು ಒಳ ಹೋಗಲು ಯತ್ನಿಸಿದರು. ಆದರೆ, ಪೊಲೀಸರು ಇದಕ್ಕೆ ಅನುಮತಿಸದ ಕಾರಣ ಅಲ್ಲೇ ಕಣ್ಣೀರು ಹಾಕುತ್ತಾ, ಗೋಳಾಡುತ್ತಿದ್ದ ದೃಷ್ಯ ಕರಳು ಹಿಂಡುವಂತಿತ್ತು.

ಬೆಂಕಿ ಅವಘಡದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಹಿತಿ ನೀಡಿದ್ದು, ಸ್ಥಳಕ್ಕೆ ತಕ್ಷಣ ತಲುಪಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಚುರುಕುಗೊಳಿಸಬೇಕು. ಗಾಯಾಳುಗಳಿಗೆ ತಕ್ಷಣ ಮತ್ತು ಸರಿಯಾದ ಚಿಕಿತ್ಸೆ ನೀಡಬೇಕು. ಎಲ್ಲಾ ಹಂತಗಳಲ್ಲಿ ಜಾಗರೂಕತೆ ಕಾಯ್ದುಕೊಳ್ಳಲು, ಪರಿಹಾರ ಕಾರ್ಯಾಚರಣೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು, ಪರಿಸ್ಥಿತಿಯ ಮೇಲೆ ನಿಗಾ ಇಡಲು ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ