ಕಥೆ ಪವಿತ್ರಾ ಬದ್ರಿನಾಥ್

ತಾನು ಬೆಳೆದು ಬಂದ ಪರಿಸರಕ್ಕೆ ಒಳಗಾಗಿ ಸ್ಪಂದನಾ ವಿಭಿನ್ನ ಮನೋಭಾವ ಬೆಳೆಸಿಕೊಂಡು, ತನ್ನಂಥ ನಾಲ್ವರು ಗೆಳತಿಯರೊಂದಿಗೆ ಅನ್ಯಾಯ ಕಂಡಾಗ ಸಿಡಿದು ನಿಲ್ಲುತ್ತಿದ್ದಳು. ಮುಂದೆ ನಡೆದದ್ದೇನು….?

ತನ್ನ ಒಂದು ನೋಟದಲ್ಲೇ ಮಿಂಚನ್ನು ಹರಿಸಿ, ಕಣ್ಣಿನಲ್ಲೇ ಕೊಲ್ಲುವಂಥ ಅಪ್ರತಿಮ ಮಾದಕ ಸೌಂದರ್ಯವನ್ನು ಹೊಂದಿದ್ದ ಸ್ಪಂದನಾ, ತನ್ನ ಆಪ್ತ ಗೆಳತಿಯಾದ ಸುರೇಖಾಳ ಜೊತೆ ರಾತ್ರಿ ಬಾರ್‌ ನಲ್ಲಿ ನೃತ್ಯ ಮಾಡುತ್ತಿದ್ದಳು.

ಸಿನಿಮಾ ನಾಯಕಿಯ ಹಾಗೆ ತೆಳ್ಳನೆಯ ಮೈಮಾಟ, ಅವಳ ಚೆಲುವು ಎಂಥವರನ್ನೂ ಮೋಡಿ ಮಾಡುವ ಹಾಗೆ ಇತ್ತು. ಅವಳ ವಸ್ತ್ರಗಳು ಫಳಫಳನೆ ಮಿಂಚುತ್ತಿತ್ತು. ಅವಳ ಅಂದಕ್ಕೆ ವೈಯಾರಕ್ಕೆ ಮನಸೋತಿದ್ದ ಪ್ರಸಾದ್‌ ಅವಳನ್ನೇ ಗುರಾಯಿಸುತ್ತಾ ಕಣ್ಣಲ್ಲೇ ತಿಂದು ಹಾಕುವವನಂತೆ ಮೇಲಿಂದ ಕೆಳಗೆ ನೋಡುತ್ತಿದ್ದ!

ಸ್ಪಂದನಾ ಅವನನ್ನು ಗಮನಿಸಿ, “ಹಾಯ್‌, ನನ್ನ ಹೆಸರು ಸ್ಪಂದನಾ, ನೀವು ಪ್ರಸಾದ್‌ ಅಲ್ವಾ…..?” ಎಂದು ಶೇಕ್‌ಹ್ಯಾಂಡ್ ಮಾಡಲು ಕೈ ಚಾಚಿದಳು.

ಪ್ರಸಾದ್‌ ಅವಳ ಕೈ ಹಿಡಿಯುತ್ತಿದ್ದಂತೆ ತಕ್ಷಣ ತಲೆಸುತ್ತಿ ಬಿದ್ದಳು. ಅವನಿಗೆ ಗಾಬರಿಯಾಗಿ ಅವಳ ಮೇಲೆ ನೀರು ಹಾಕುವ ನೆಪದಲ್ಲಿ ಅವಳ ತುಟಿ, ಸೊಂಟ ಗಟ್ಟಿಯಾಗಿ ಹಿಸುಕಿದ.

ಸ್ಪಂದನಾ ನಿಧಾನವಾಗಿ ಕಣ್ತೆರೆದು, “ಅಬ್ಬಾ ಥ್ಯಾಂಕ್ಸ್ ಪ್ರಸಾದ್‌, ನಿಮಗೆ ನನ್ನ ಮೇಲೆ ಎಷ್ಟೊಂದು ಕಾಳಜಿ! ನಿಮ್ಮಂತಹ ಒಳ್ಳೆಯ ಮನಸ್ಸಿರುವವರು ನನಗೆ ಬಾಯ್‌ಫ್ರೆಂಡ್‌ ಆಗಿದ್ದರೆ, ನಾನು ಎಲ್ಲೇ ಇದ್ದರೂ ಕ್ಷೇಮವಾಗಿ ಇರುತ್ತೇನೆ,” ಎಂದು ಅವನ ಗಡ್ಡ ಸವರುತ್ತಾ, ರೋಮಾಂಚನೀಯ ನೋಟದಲ್ಲಿ ಮುಗುಳ್ನಗುತ್ತಾ ಹೇಳಿದಳು.

ಪ್ರಸಾದ್‌ ಗೆ ಖುಷಿಯಾಗಿ, “ನಾನೇ ಆ ಅದೃಷ್ಟಶಾಲಿ ಆಗಬಹುದಲ್ಲಾ….” ಎಂದು ನೆಲದಲ್ಲಿದ್ದ ಅವಳನ್ನು ಮೇಲೆತ್ತುವ ನೆಪದಲ್ಲಿ ಅವಳ ಸೊಂಟ ಬಳಸಿ, ಕಣ್ಣಲ್ಲೇ ಮಾತನಾಡುತ್ತಾ ತನ್ನ ಬಾಹುಗಳಲ್ಲಿ ಬಂಧಿಸಿದ.

“ಹಾಗಾದ್ರೆ  ನಾಳೆ ರಾತ್ರಿ 9 ಗಂಟೆಗೆ ತೆಂಗುಪಾಳ್ಯದಲ್ಲಿ ಇರುವ ತೆಂಗಿನ ತೋಟಕ್ಕೆ ಬನ್ನಿ. ನಾನು ನಿಮಗಾಗಿ ಕಾಯುತ್ತಿರುವೆ,” ಎಂದು ಸ್ಪಂದನಾ ಅವನ ತಲೆಕೂದಲು ಸವರುತ್ತಾ ಹೇಳಿದಳು.

“ನಿಮ್ಮ ಫೋನ್‌ ನಂಬರ್‌ ಕೊಡಿ ಪ್ಲೀಸ್‌,” ಎಂದ ಪ್ರಸಾದ್‌.

“ಇಲ್ಲ ಹೀರೋ ನೀವು ಅಲ್ಲಿ ಬನ್ನಿ,” ಎಂದು ಅವನ ಕೈಗೆ ಮುತ್ತಿಕ್ಕಿ ಹೋದಳು ಸ್ಪಂದನಾ.

`ನಾಳೆ ಇವಳನ್ನು ನನಗೆ ಹೇಗೆ ಬೇಕೋ ಹಾಗೆ ಬಳಸಿಕೊಂಡು ಮಜಾ ಮಾಡ್ತೀನಿ,’ ಎಂದು ಪ್ರಸಾದ್‌ ಮನಸ್ಸಿನಲ್ಲೇ ಸಂಚು ಮಾಡಿದ.

ಪ್ರಸಾದ್‌, ಸ್ಪಂದನಾ ಹೇಳಿದ ಜಾಗಕ್ಕೆ ಸಮಯಕ್ಕೆ ಸರಿಯಾಗಿ ಹೋದ. ಅವನು ಸುತ್ತಲೂ ನೋಡುತ್ತಿದ್ದರೆ, ಅದೊಂದು ಭಯಾನಕವಾದ ಕಾಡಿನ ರೀತಿಯಲ್ಲಿ ಇತ್ತು. ಅಲ್ಲಿ ಜನ ಸಂಚಾರ ಇಲ್ಲವೇ ಇಲ್ಲ ಮತ್ತು ಯಾವ ಸಮಯದಲ್ಲಿ ಬೇಕಾದರೂ ಕಾಡುಪ್ರಾಣಿಗಳು ಆಕ್ರಮಿಸಿ ಪ್ರಾಣ ಹಾನಿ ಮಾಡುವಂತಹ ಭಯಾನಕವಾದ ಸ್ಥಳ ಅದಾಗಿತ್ತು.

ಅವನು ನಡುಗುತ್ತಾ, “ಸ್ಪಂದನಾ….ಸ್ಪಂದನಾ… ಎಲ್ಲಿದ್ದೀಯಾ ನಾನು ಪ್ರಸಾದ್‌ ಬಂದಿದ್ದೀನಿ, ಪ್ಲೀಸ್‌ ಬೇಗ ಬಾ ಹೀಗೆ ಆಟ ಆಡಿಸಬೇಡ,” ಎಂದು ಕೂಗಿದ.

ಆ ಕಡೆಯಿಂದ ಯಾವ ಪ್ರತಿಕ್ರಿಯೆಯೂ ಬರಲೇ ಇಲ್ಲ. ಅವನು ನಿಧಾನವಾಗಿ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಅವಳನ್ನು ಹುಡುಕುತ್ತಾ ಮುಂದೆ ಸಾಗಿದ. ಅಕಸ್ಮಾತ್‌ ಆಗಿ ಅವನ ಹಿಂದೆ ಮೂರು ಜನ ತಮ್ಮ ಮುಖವನ್ನು ಪೂರ್ತಿಯಾಗಿ ಮುಚ್ಚಿಕೊಂಡು ಅಲ್ಲಿಗೆ ಬಂದು ಅವನ ಕಣ್ಣುಗಳನ್ನು ಬಟ್ಟೆಯಿಂದ ಮುಚ್ಚಿ, ಕೈ ಕಾಲು, ಬಾಯಿ ಕಟ್ಟಿ ಹಾಕಿ, ಅವನ ಮೊಬೈಲ್ ಸ್ವಿಚ್‌ ಆಫ್‌ ಮಾಡಿ, ಅವನನ್ನು ಪಾಳುಬಿದ್ದ ಜಾಗಕ್ಕೆ ಎತ್ತಿಕೊಂಡು ಬಂದರು.

ಅವನ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ತೆಗೆದು, ಅವನನ್ನು ಕಂಬಕ್ಕೆ ಗಟ್ಟಿಯಾಗಿ ಕಟ್ಟಿ ಹಾಕಿದರು. ಸುತ್ತಲೂ ಬರೀ ಕತ್ತಲೆ ಇತ್ತು, ಏನೂ ಕಾಣುತ್ತಿರಲಿಲ್ಲ. ಅವನು ಭಯಭೀತನಾದ. ಅವನ ಎದುರಿಗೆ ಹೊಗೆ ತುಂಬಿದ ಬೆಳಕು ಕಾಣಿಸಿತು.

dhurandharo-se-ek-mulakat-story

“ಏನೋ ನಿನಗೆ ಹುಡುಗೀರ್‌ ಷೋಕಿನಾ….. ನಿನಗೆ ದಿನಕ್ಕೊಂದು ಚೆಲುವೆ ಬೇಕಾ….? ಎಷ್ಟು ಹೆಣ್ಣುಮಕ್ಕಳ ಬಾಳನ್ನು ಬಲಿ ತೆಗೆದುಕೊಡಿದ್ದೀಯಾ…?” ಎಂದು ಆಕ್ರೋಶದ ಧ್ವನಿ ಅವನನ್ನು ಮತ್ತಷ್ಟು ಬೆದರುವಂತೆ ಮಾಡಿತು.

ಸ್ಪಂದನಾ ಝಾನ್ಸಿ ರಾಣಿ ಲಕ್ಷ್ಮೀಬಾಯಿ ವೇಷದಲ್ಲಿ ಅವನ ಮುಂದೆ ಕಾಣಿಸಿಕೊಂಡು, “ನೀನೊಬ್ಬ ನೀಚ! ನೀನು ದೇಶಕ್ಕೆ ವಿಷಜಂತು! ನೀನು ಬದುಕಿರಲು ಸಾಧ್ಯವೇ ಇಲ್ಲ,” ಎಂದು ಅವನು ಪ್ರಜ್ಞೆ ಕಳೆದುಕೊಳ್ಳುವಂತೆ ನಾಲ್ವರು ಸೇರಿ ಅವನನ್ನು ಹಿಗ್ಗಾಮುಗ್ಗಾ  ಹೊಡೆದರು.

ನಂತರ ಆ ನಾಲ್ವರು ಸೇರಿ ಅವನನ್ನು ಕತ್ತಿಯಿಂದು ತುಂಡು ತುಂಡಾಗಿ ಕಡಿದು, ಬೆಂಕಿಯಲ್ಲಿ ಹಾಕಿ ಸುಟ್ಟು, ಅಳಿದುಳಿದ ಅಸ್ತಿಪಂಜರವನ್ನು ಭೂಮಿಯಲ್ಲಿ ಹೂತು ಅದರ ಹತ್ತಿರದಲ್ಲೇ ಭಾರತೀಯ ಧ್ವಜಾರೋಹಣ ಮಾಡಿ, ನಮಸ್ಕರಿಸಿದರು. ಅದಾಗಲೇ ಮಧ್ಯರಾತ್ರಿ 12 ಗಂಟೆ ದಾಟಿತ್ತು. ಈ ನಾಲ್ವರು ದೇಶಪ್ರೇಮಿ ಗೆಳತಿಯರಾಗಿದ್ದರು, “ಇಂದು ಒಬ್ಬ ದೇಶದ್ರೋಹಿಯನ್ನು ಸಾಯಿಸಿ ನಮ್ಮ ದೇಶಕ್ಕೆ ಮತ್ತೊಂದು ಕೊಡುಗೆ ಕೊಟ್ಟಿದ್ದೇವೆ,” ಎಂದು ಭಾರತ ಧ್ವಜಕ್ಕೆ ವಂದಿಸಿ, ರಾಷ್ಟ್ರಗೀತೆಯನ್ನು ಹೆಮ್ಮೆಯಿಂದ ಹಾಡಿದರು.

ಈ ರೀತಿ ಹಲವಾರು ಗಂಡಸರು ಮತ್ತು ಹುಡುಗರನ್ನು ಅದೇ ಜಾಗಕ್ಕೆ ಕರೆಸಿಕೊಂಡು, ನರಕಯಾತನೆ ನೀಡಿ ಚಾಣಾಕ್ಷತನದಿಂದ ಕೊಲೆಗಳ ಮೇಲೆ ಕೊಲೆ ಮಾಡುತ್ತಿದ್ದರು. ಹೀಗೆ ಕೊಲೆ ಮಾಡುತ್ತಾ ಅವರ ದೇಶಪ್ರೇಮ ಅಧಿಕವಾಗುತ್ತಾ ಹೋಯಿತು. ಸ್ಪಂದನಾ ಪ್ರಸಾದನನ್ನು ಕೊಲೆ ಮಾಡುವ ಮೊದಲು ತನಗಾದ ಅನ್ಯಾಯದ ಕುರಿತು ಗೆಳತಿಯರಿಗೆ ಹೇಳಿದಳು.

ಸ್ಪಂದನಾ ಮಧ್ಯಮ ವರ್ಗದ ಕುಟುಂಬದವಳು. ಅವಳ ತಾಯಿ ಜಾನಕಿ ನಮ್ಮ ಭರತಭೂಮಿಯ ವಿಶೇಷತೆಯ ವಿಚಾರಗಳನ್ನು ಕಥೆಗಳ ಮೂಲಕ ತಿಳಿಸಿ ಹೇಳುತ್ತಿದ್ದರು. ಅಮ್ಮ ಹೇಳಿದ ಕಥೆಗಳನ್ನು ಕೇಳುತ್ತಿದ್ದ ಸ್ಪಂದನಾ ತನ್ನನ್ನೇ ಕಥಾ ನಾಯಕಿಯಾಗಿ ಕಲ್ಪಿಸಿಕೊಂಡು, ಚಿಕ್ಕಂದಿನಿಂದಲೇ ನಮ್ಮ ದೇಶದ ಹಿರಿಮೆ, ಇತಿಹಾಸದಲ್ಲಿ ಬರುವ ರಾಣಿಯರ ಶೌರ್ಯ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪರಾಕ್ರಮ ಎಲ್ಲವೂ ಅವಳ ಮನಸ್ಸಿನಲ್ಲಿ ಬಹಳ ಗಾಢವಾಗಿ ಬೇರೂರಿತ್ತು. ನಮ್ಮ ಮಹಾನ್‌ ದೇಶಕ್ಕಾಗಿ ಏನಾದರೂ ದೊಡ್ಡ ಕೊಡುಗೆ ನೀಡಬೇಕೆಂಬ ಬಯಕೆ ಅವಳಿಗಿತ್ತು.

ಸ್ಪಂದನಾಳಿಗೆ ತಾಯಿ ದೇವರಾದರೆ, ತಂದೆ ರಘು ರಾಕ್ಷಸನಾಗಿದ್ದ. ಜಾನಕಿ ಗಂಡನಿಗೆ ಬಹಳ ಹೆದರಿಕೊಂಡು ಜೀವಿಸುತ್ತಿದ್ದಳು. ಅವನು ಗೆಳೆಯರನ್ನು ಸದಾಕಾಲ ಪಾರ್ಟಿ ಮಾಡಲು ತನ್ನ ಮನೆಗೆ ಕರೆತರುತ್ತಿದ್ದ. ಹೆಂಡತಿ ಕೈಯಿಂದ ಹಲವಾರು ತಿನಿಸುಗಳನ್ನು ಮಾಡಿಸಿ, ಕೆಲಸದವಳಂತೆ ಎಲ್ಲಾ ಕೆಲಸಗಳನ್ನು ಮಾಡಿಸಿಕೊಂಡು, ಅವರ ಮುಂದೆ ಬಹಳಷ್ಟು ಚುಚ್ಚು ಮಾತುಗಳಿಂದ ಅವಮಾನ ಮಾಡುತ್ತಿದ್ದ.

ಜಾನಕಿ ಎಲ್ಲಾ ನೋವುಗಳನ್ನು ಸಹಿಸಿಕೊಂಡು ಹತ್ತು ವರ್ಷ ಸಂಸಾರ ನಡೆಸಿದಳು. ಆದರೆ ಗಂಡನ ಕಿರುಕುಳ ಸ್ವಲ್ಪವೂ ಕಡಿಮೆ ಆಗಲಿಲ್ಲ. ಅವನು ಮಗಳನ್ನೂ ಹೊಡೆದು ಬಡಿದು ಹೆದರಿಸುತ್ತಿದ್ದ. ಹೆಣ್ಣು ಯಾವತ್ತಿಗೂ ಗಂಡಸಿನ ಕೈಕೆಳಗೆ ಸೇವಕಿಯಾಗಿ ಇರಬೇಕೆಂಬ ಭ್ರಮೆಯಲ್ಲಿದ್ದ.

ರಘು ಯಾವಾಗಲೂ ಹೆಂಡತಿಯನ್ನು ಹೊಡೆದು ಬಡಿದು ಮಾಡುತ್ತಿದ್ದುದನ್ನು ಚಿಕ್ಕಂದಿನಿಂದಲೂ ಕಣ್ಣಾರೆ ನೋಡುತ್ತಿದ್ದ ಸ್ಪಂದನಾಳಿಗೆ ಅಪ್ಪನ ಮೇಲೆ ಜಿಗುಪ್ಸೆ ಹುಟ್ಟತೊಡಗಿತು. ಅಪ್ಪನ ಬಳಿ ಹೋಗಬೇಕೆಂದರೆ ಮೊದಲಿನಿಂದಲೂ ಭಯಪಡುತ್ತಿದ್ದಳು. ಸ್ಪಂದನಾಳಿಗೆ ಚಿಕ್ಕಂದಿನಿಂದಲೂ ಅಪ್ಪನ ಕನಿಷ್ಠ ಪ್ರೀತಿಯನ್ನು ತೋರಿಸದೆ ಇದ್ದ ಕಾರಣ, ಅವನ ಮೇಲಿನ ರೋಷ, ದ್ವೇಷವಾಗಿ ಪರಿವರ್ತನೆಯಾಯಿತು.

ರಘು ಮನೆಯವರನ್ನು ನೋಡಿಕೊಳ್ಳದೆ, ಹೊರಗಡೆ ಹೋಗಿ ಗೆಳೆಯರೊಂದಿಗೆ ಜೂಜಾಡುತ್ತಿದ್ದ. ಮನೆಗೆ ಬಂದು ಸದಾಕಾಲ ಮದ್ಯಪಾನ ಮಾಡುತ್ತಿದ್ದನು. ಜಾನಕಿ ಹತ್ತಾರು ಮನೆಗಳಲ್ಲಿ ಕೆಲಸ ಮಾಡಿ ಸಂಸಾರವನ್ನು ಕಷ್ಟಪಟ್ಟು ಹೇಗೋ ತೂಗಿಸುತ್ತಿದ್ದಳು. ಮನೆಯಲ್ಲಿ ಇದ್ದು ಎಲ್ಲವನ್ನೂ ಗಮನಿಸುತ್ತಿದ್ದ ಸ್ಪಂದನಾಳಿಗೆ ತಂದೆಯ ಬಗ್ಗೆ ಸಂಪೂರ್ಣ ಗೌರವ ನಶಿಸಿ ಹೋಯಿತು.

ಎಂಟು ವರ್ಷದ ಸ್ಪಂದನಾ, ಒಂದೇ ಸಮನೆ ಬಹಳಷ್ಟು ಆಕ್ರೋಶಗಳನ್ನು ಮೈಗೂಡಿಸಿಕೊಂಡು ದ್ವೇಷದಿಂದ ಕುದಿಯುತ್ತಿದ್ದಳು. ಒಮ್ಮೆ ತಂದೆ ಕುಡಿದ ಅಮಲಿನಲ್ಲಿದ್ದಾಗ ಅದೇ ಬಾಟಲನ್ನು ಒಡೆದು ಬಹಳ ಜೋರಾಗಿ ಹೊಟ್ಟೆಗೆ ಚುಚ್ಚಿದಳು!

ಅವನು, “ಆ….. ಸ್ಪಂದನಾ ಯಾಕೆ ಹೀಗೆ ಮಾಡಿದೆ, ನನ್ನನ್ನು ಯಾಕೆ ಸಾಯಿಸ್ತಿದ್ದೀಯಾ….. ಬೇಡ ನನ್ನನ್ನು ಕೊಲ್ಲಬೇಡ….” ಎಂದು ನರಳುತ್ತಾ ಅಲ್ಲೇ ಪ್ರಾಣಬಿಟ್ಟ. ಮನೆಯಿಂದ ಹೊರಗೆ ಹೋಗಿದ್ದ ಜಾನಕಿ ಬಂದು ನೋಡುವಷ್ಟರಲ್ಲಿ ಗಂಡ ಸತ್ತು ಹೋಗಿದ್ದ. ಅಲ್ಲಿ ನೆಲವೆಲ್ಲಾ ರಕ್ತವಾಗಿತ್ತು. ಅವನ ದೇಹವೆಲ್ಲಾ ರಕ್ತಸಿಕ್ತವಾಗಿತ್ತು.

ಜಾನಕಿ ಅತಿಯಾದ ಗಾಬರಿಯಿಂದ ಏದುಸಿರು ಬಿಡುತ್ತಾ, “ಸ್ಪಂದನಾ, ಏನು ಮಾಡಿಬಿಟ್ಟೆ….? ನೀನು ಈ ರೀತಿ ಮಾಡಬಾರದಾಗಿತ್ತು. ನಿಮ್ಮಪ್ಪ ಸರಿಯಾಗಿರಲಿಲ್ಲ ನಿಜ. ಆದರೆ ನೀನು ಈಗ ನಿಮ್ಮ ಅಪ್ಪನನ್ನು ಕೊಲೆ ಮಾಡ್ಬಿಟ್ಟೆ. ಅವನಿಗಿಂತ ಕೆಟ್ಟವಳಾಗಿ ಬಿಟ್ಟೆ! ಅಯ್ಯೋ ನೀನೇ ನಿನ್ನ ಅಪ್ಪನನ್ನು ಸಾಯಿಸಿದೆ….” ಎಂದು ಎದೆ ಬಡಿದುಕೊಂಡು ಅಳತೊಡಗಿದಳು.

ಸ್ಪಂದನಾ ಅವಳ ಕಣ್ಣೀರು ಒರೆಸುತ್ತಾ, “ಅಮ್ಮಾ…. ಅಳಬೇಡ, ಇನ್ನು ನಿನಗೆ ಯಾವ ಕಷ್ಟ ಇಲ್ಲ. ನಿನಗೆ ಹಿಂಸೆ ಕೊಡುತ್ತಿದ್ದ ರಾಕ್ಷಸ ಸತ್ತುಹೋದ,” ಎಂದಳು. ಅವಳಿಗೆ ಗಂಡಸರೆಲ್ಲರೂ ಕೆಟ್ಟವರು ಎಂಬ ಭಾವನೆ ಬಲವಾಗತೊಡಗಿತು.

ಜಾನಕಿ ಸಹಾನುಭೂತಿಯಿಂದ ಮಗಳನ್ನು  ಅಪ್ಪಿಕೊಂಡು, “ಸ್ಪಂದನಾ, ನೀನು ಈ ವಿಷಯವನ್ನು ಯಾರ ಹತ್ತಿರವೂ ಹೇಳಬಾರದು,” ಎಂದು ತನ್ನ ತಲೆ ಮೇಲೆ ಕೈಯಿಟ್ಟು ಆಣೆ ಮಾಡಿಸಿಕೊಂಡಳು.

dhurandharo-se-ek-mulakat-story-2

ಅದೇ ದಿನ ಮಧ್ಯರಾತ್ರಿಯಲ್ಲಿ ಗಂಡನ ಹೆಣವನ್ನು ಅವಳೊಬ್ಬಳೇ ಅವರ ಮನೆಯ ಹಿತ್ತಲಲ್ಲಿ ಹೂತು ಹಾಕಿದಳು. ಅದರ ಮೇಲೆ ಒಂದು ಗಿಡ ನೆಟ್ಟಳು. ಸ್ವಲ್ಪ ದಿನಗಳು ಕಳೆದ ಮೇಲೆ ಅಕ್ಕಪಕ್ಕದವರಿಗೆ, ಬಂಧು ಬಳಗಕ್ಕೆ ಗಂಡ ಮನೆ ಬಿಟ್ಟು ಹೋದ ಎಂದು ಸುಳ್ಳು ಹೇಳಿದಳು. ಗಂಡನ ಸಾವಿನ ವಿಷಯ ಕೊನೆಗೂ ಯಾರಿಗೂ ಗೊತ್ತಾಗಲಿಲ್ಲ. ಹೆಣ ಹೂತಿದ್ದ ಸ್ಥಳದಲ್ಲಿ ನೆಟ್ಟಿದ್ದ ಗಿಡ ಬೆಳೆದು ದೊಡ್ಡದಾಗುತ್ತಾ ಹೋಯಿತು.

ಜಾನಕಿ ಮಗಳಿಗೆ ಓದಲು ಒಳ್ಳೊಳ್ಳೆ ಪುಸ್ತಕಗಳನ್ನು ಕೊಡಿಸಿದಳು. ಜೊತೆಗೆ ಅವಳಲ್ಲಿ ಸದ್ವಿಚಾರಗಳ ಜ್ಞಾನಭಂಡಾರವನ್ನು ತುಂಬತೊಡಗಿದಳು. ಸ್ಪಂದನಾ ಶಾಲೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸತೊಡಗಿದಳು. ಶಾಲೆಯಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಹಾಡು, ನೃತ್ಯ, ನಾಟಕ ಯಾವುದೇ ಆಗಿದ್ದರೂ ಅವುಗಳಲ್ಲಿ ಭಾಗವಹಿಸಿ, ಎಲ್ಲರ ಮೆಚ್ಚುಗೆ ಪಡೆಯತೊಡಗಿದಳು.

ಒಮ್ಮೆ ಶಾಲೆಯಲ್ಲಿ ಆಟೋ ಡ್ರೈವರ್‌ ಪುಟಾಣಿ ಮಕ್ಕಳನ್ನು ಆಟೋದಲ್ಲಿ ಕೂರಿಸುತ್ತಿದ್ದ. ಇಬ್ಬರು ಪುಟ್ಟ ಮಕ್ಕಳಿಗೆ ಅವನು ಎಲ್ಲೆಂದರಲ್ಲಿ ಕೈಹಾಕಿ ಹಿಸುಕಿದ. ಪುಟ್ಟ ಮಕ್ಕಳು ನೋವಾಗುತ್ತಿದೆ ಎಂದರೂ ಬಿಡಲಿಲ್ಲ. ಇದನ್ನು ನೋಡಿದ ಸ್ಪಂದನಾ, ಪ್ರಿನ್ಸಿಪಾಲ್‌ ರನ್ನು ಕರೆದುಕೊಂಡು ಬಂದು ಆ ದೃಶ್ಯವನ್ನು ತೋರಿಸಿದಳು.

ಪ್ರಿನ್ಸಿಪಾಲ್ ‌ಡ್ರೈವರ್‌ ಕೆನ್ನೆಗೆ ಎರಡು ಬಾರಿಸಿ ಅವನನ್ನು ಕೆಲಸದಿಂದ ತೆಗೆದು ಹಾಕಿದರು. ಅವನು ಇನ್ನೆಂದೂ ಯಾವ ಹೆಣ್ಣುಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುವುದಿಲ್ಲ ಎಂದು ಪ್ರಿನ್ಸಿಪಾಲ್ ‌ರ ಬಳಿ ಕ್ಷಮೆ ಕೇಳಿ, ಅಂದಿನಿಂದ ಆ ಶಾಲೆಯ ಕಡೆ ತಿರುಗಿಯೂ ನೋಡಲಿಲ್ಲ. ಇದನ್ನೆಲ್ಲಾ ನೋಡಿದ ಸ್ಪಂದನಾಗೆ ಗಂಡಸರೆಲ್ಲಾ ಕೆಟ್ಟವರು ಎಂಬ ಭಾವನೆ ಇನ್ನೂ ಅಧಿಕವಾಯಿತು.

“ನೋಡಿ ಮಕ್ಕಳೇ, ನಿಮಗೆ ಯಾರು ಏನೇ ತೊಂದರೆ ಕೊಟ್ಟರೂ ಹೆದರಿಕೊಳ್ಳಬಾರದು. ಧೈರ್ಯವಾಗಿ ಅವರಿಗೆ ವಿರುದ್ಧವಾಗಿ ಹೋರಾಡಬೇಕು. ನಿಮ್ಮ ತಾಯಿ ತಂದೆಗೆ ಅಥವಾ ಗುರುಗಳಿಗೆ ನಡೆದ ವಿಷಯವನ್ನು ಚಾಚೂ ತಪ್ಪದೆ ತಿಳಿಸಬೇಕು. ನೀವು ಹೆದರಿಕೊಂಡು ಹಾಗೇ ಸುಮ್ಮನೆ ನೋವು ನುಂಗುತ್ತಾ ಹೋದರೆ ಅಂಥ ದುಷ್ಟರ ಅಟ್ಟಹಾಸ ಇನ್ನೂ ಹೆಚ್ಚಾಗಿ ಎಲ್ಲರಿಗೂ ತೊಂದರೆ ಕೊಡುತ್ತಲೇ ಇರುತ್ತಾರೆ.

“ತಾವು ಮಾಡಿದ್ದೇ ಸರಿ ಎಂದುಕೊಂಡು ಅವರದ್ದೇ ಸಾಮ್ರಾಜ್ಯವನ್ನು ಕಟ್ಟಿಕೊಳ್ಳತೊಡಗುತ್ತಾರೆ. ಇಂದು ಸ್ಪಂದನಾ, ನನ್ನ ಬಳಿ ಬಂದು ವಿಷಯ ತಿಳಿಸಿದ್ದಕ್ಕೆ ಆ ದುಷ್ಟ ಆಟೋ ಡ್ರೈವರ್‌ ನನ್ನು ನಮ್ಮ ಶಾಲೆಯಿಂದ ಒದ್ದು ಓಡಿಸಿದ್ದೀನಿ. ಇಂಥ ಘಟನೆ ಮತ್ತೆ ಯಾವತ್ತೂ ಯಾರಿಗೂ ಆಗಬಾರದು. ಎಲ್ಲರೂ ಎಚ್ಚರಾಗಿರಬೇಕು, ಧೈರ್ಯವಾಗಿ ಮುನ್ನುಗ್ಗಬೇಕು,” ಎಂದು ಹೇಳಿದ ಪ್ರಿನ್ಸಿಪಾಲ್ ಸ್ಪಂದನಾಳನ್ನು ವೇದಿಕೆ ಮೇಲೆ ಕರೆದು, ಅವಳಿಗೆ ಮೆಡಲ್ ನೀಡಿ ಗೌರವಿಸಿದರು. ಶಾಲೆಯ ಉಳಿದ ಎಲ್ಲಾ ಮಕ್ಕಳು ಅಧಿಕವಾಗಿ ಚಪ್ಪಾಳೆ ಹೊಡೆದರು.

ಅಂದು ಮೂವರು ಹುಡುಗಿಯರು ಸ್ಪಂದನಾಳಿಗೆ ಆಪ್ತ ಗೆಳತಿಯರಾದರು. ಅವರು ಬೆಳೆದು ಮುಂದೇ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು.

ಒಮ್ಮೆ ಕಾಲೇಜ್‌ ಕ್ಯಾಂಪಸ್‌ ನಲ್ಲಿ ಉಷಾ ಒಬ್ಬಳೇ ಮರದ ಕೆಳಗೆ ಕುಳಿತು ಅಳುತ್ತಿದ್ದಳು. ಸ್ಪಂದನಾ ಮತ್ತು ಇಬ್ಬರು ಗೆಳತಿಯರಾದ ಆರಾಧ್ಯಾ ಮತ್ತು ಸುರಭಿ ಅವಳನ್ನು “ಯಾಕೆ….? ಏನಾಯಿತು….” ಎಂದು ಪ್ರಶ್ನಿಸಿದರು.

ಸ್ಪಂದನಾಳ ಒಳ್ಳೆಯ ಮನಸ್ಸು ತಿಳಿದಿದ್ದ ಉಷಾ, “ನಾನು ಪ್ರಸಾದ್‌ ನನ್ನು ಪ್ರೀತಿಸಿ ಮೋಸ ಹೋದೆ! ಅವನಿಗೆ ಹುಡುಗಿಯರು ಎಂದರೆ ಟಿಶ್ಯು ಪೇಪರ್‌ ತರಹ ಬಳಸಿ ಬಿಸಾಕುತ್ತಾನೆ, ಅವನಿಗೆ ಸರಿಯಾಗಿ ಪಾಠ ಕಲಿಸಬೇಕು!” ಎಂದು ಕೋಪದಿಂದ ಹೇಳಿ ಅಳತೊಡಗಿದಳು.

“ಉಷಾ…. ನೀನು ಚಿಂತಿಸಬೇಡ ನಿನಗಾಗಿ ನಾವಿದ್ದೇವೆ. ನಿನಗೆ ಮೋಸ ಮಾಡಿದವನಿಗೆ ಅಧೋಗತಿ ಕಾಣಿಸೋಣ,’ ಎಂದು ನಾಲ್ವರೂ ಶಪಥ ಮಾಡಿದರು. ಅವರು ಒಬ್ಬರಿಗಾಗಿ ಒಬ್ಬರು ಜೀವಿಸುತ್ತಾ, ಪ್ರಾಣ ಸ್ನೇಹಿತೆಯರಾದರು.

ಈ ನಾಲ್ವರು ಸ್ನೇಹಿತೆಯರೂ ಅತಿ ಬುದ್ಧಿವಂತಿಕೆಯಿಂದ ಹೆಣ್ಣುಮಕ್ಕಳಿಗೆ ಕಿರುಕುಳ ಕೊಡುತ್ತಿದ್ದವರನ್ನು ದೇಶಪ್ರೇಮದ ಸಲುವಾಗಿ ಗುಪ್ತವಾಗಿ ಕೊಲೆ ಮಾಡುತ್ತಿದ್ದರು. ದೇಶದಲ್ಲಿರುವ ಹೆಣ್ಣುಮಕ್ಕಳು ನಿಶ್ಚಿಂತೆಯಾಗಿ ಇರಬಹುದೆಂದು ನೆನೆಸಿ ಕಿರುಕುಳ ಕೊಡುತ್ತಿದ್ದ ಗಂಡಸರನ್ನು ಸಾಯಿಸಿ ಖುಷಿಪಡುತ್ತಿದ್ದರು.

ಕೊಲೆ ಮಾಡುವ ರಾತ್ರಿ ನಾಲ್ಕು ಮಂದಿ ಸ್ನೇಹಿತೆಯರೂ ಸೇರಿ ತಮ್ಮ ಮನೆಯವರಿಗೆ ಹಾಲಿನಲ್ಲಿ ನಿದ್ದೆ ಮಾತ್ರೆ ಹಾಕಿ, ಅವರೆಲ್ಲ ಗಾಢನಿದ್ದೆಗೆ ಜಾರಿದ ಮೇಲೆ ಅವರ ಕೆಲಸ ಶುರುವಾಗುತ್ತಿತ್ತು. ಮಗಳ ನಡವಳಿಕೆಯಲ್ಲಿ ಬದಲಾವಣೆ ಗಮನಿಸಿದ ಜಾನಕಿ, ಅಂದು ಪ್ರಸಾದ್‌ ನನ್ನು ಕೊಲೆ ಮಾಡುವ ದಿನ ನಿದ್ರೆ ಮಾತ್ರೆ ಹಾಕಿದ ಹಾಲನ್ನು ಕುಡಿದಿರಲಿಲ್ಲ. ಆಕೆ ವೇಷ ಬದಲಿಸಿಕೊಂಡು ಆಟೋದಲ್ಲಿ ಸ್ಪಂದನಾಳನ್ನು ಹಿಂಬಾಲಿಸಿದ್ದಳು.

ಸ್ಪಂದನಾ ಒಬ್ಬಳೇ ಕಾರಿನಲ್ಲಿ ಭಯಾನಕವಾದ ಜಾಗಕ್ಕೆ ಹೋಗುತ್ತಿರುವುದನ್ನು ನೋಡಿ ಬೆಚ್ಚಿಬಿದ್ದಳು. ಅವಳು ಹೋದ ಸ್ಥಳದಲ್ಲಿ ಯಾವ ಶಬ್ದವೂ ಇರಲಿಲ್ಲ ನಿಶ್ಶಬ್ದವಾಗಿತ್ತು. ಸುಮಾರು ಒಂದು ಗಂಟೆ ಬಳಿಕ ನಾಲ್ವರು ಹುಡುಗಿಯರು ವಿಚಿತ್ರರೀತಿಯಲ್ಲಿ ಬರುತ್ತಿರುವುದನ್ನು ನೋಡಿ ಜಾನಕಿಗೆ ಆಘಾತವಾಯಿತು.

ಝಾನ್ಸಿ ರಾಣಿ ಲಕ್ಷ್ಮೀಬಾಯಿ ವೇಷದಲ್ಲಿದ್ದ ಮಗಳನ್ನು ಗುರುತಿಸಿದರು. ಅವಳ ಬಟ್ಟೆಯೆಲ್ಲ ರಕ್ತಸಿಕ್ತವಾಗಿತ್ತು. ಜಾನಕಿ ತನ್ನ ವೇಷ ಬದಲಿಸಿ, ಅವರ ಬಳಿ ಹೋಗಿ, “ಸ್ಪಂದನಾ, ಏನಿದೆಲ್ಲಾ….? ನೀನು ಯಾರನ್ನು ಕೊಲೆ ಮಾಡಿದೆ? ಯಾಕೆ ಹೇಳು…. ಇವರೆಲ್ಲ ಯಾರು….. ಅಯ್ಯೋ ಎಂತಹ ಕೆಲಸ ಮಾಡಿದ್ದೀರಾ…..?” ಎಂದು ಅವಳ ಭುಜಹಿಡಿದು ಅಲುಗಿಸುತ್ತಾ ಕೇಳಿದಳು.

ಸ್ಪಂದನಾ ತಾಯಿಯ ಬಾಯಿಮುಚ್ಚಿ ಅವಳ ಕೈ ಕಟ್ಟಿ ಹಾಕಿ ಆಕೆಯನ್ನು ಕಾರಿನಲ್ಲಿ ಕೂರಿಸಿ, ಪ್ರಸಾದ್‌ ನನ್ನು ಕೊಂದು ಹೆಣವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಕಾಡಿನಲ್ಲಿ ಸುಟ್ಟು, ಭಸ್ಮವನ್ನು ಹೂತಿಟ್ಟ ವಿಷಯವನ್ನು ಜಾನಕಿಗೆ ವಿವರವಾಗಿ ತಿಳಿಸಿದರು.

ಅವರು ಹೇಳಿದ್ದನ್ನೆಲ್ಲಾ ಕೇಳಿಸಿಕೊಂಡ ಜಾನಕಿಗೆ ಆಘಾತವಾಯಿತು. ಅಷ್ಟು ಹೊತ್ತಿಗೆ ಪೊಲೀಸರು ಅಲ್ಲಿಗೆ ಬಂದರು. ಅವರನ್ನು ನೋಡಿ ಸ್ಪಂದನಾ ಮತ್ತು ಅವಳ ಗೆಳತಿಯರಿಗೆ ಏನೂ ಅರ್ಥ ಆಗಲಿಲ್ಲ. ನಾಲ್ಕು ಮಂದಿಗೆ ಬೇಡಿ ಹಾಕಿದರು.

“ನನ್ನನ್ನು ಕ್ಷಮಿಸಿ, ಪಾಪಿಗಳಿಗೆ ಶಿಕ್ಷೆ ನೀಡಲು ಕಾನೂನು ಇದೆ. ಅದನ್ನು ನೀವು ಕೈಗೆತ್ತಿಕೊಂಡದ್ದು ಅಪರಾಧ. ಈಗ ನೀವು ಅಪರಾಧಿಗಳಾಗಲು ಸಮಾಜ ಕಾರಣವಾದರೂ ಇಂಥ ದೌರ್ಜನ್ಯಗಳನ್ನು ಮಾಡದೆ ಉತ್ತಮ ವ್ಯಕ್ತಿಗಳಾಗಬೇಕು ಎಂದು ನಾನೇ ಪೊಲೀಸರಿಗೆ ಫೋನ್‌ ಮಾಡಿ ಬರಲು ಹೇಳಿದೆ,” ಎಂದು ಜಾನಕಿ ಅಳುತ್ತಾ ಹೇಳಿದಳು.

“ಅಮ್ಮಾ…. ನಿನ್ನನ್ನು ನಂಬಿದ್ದಕ್ಕೆ ಮೋಸ ಮಾಡಿದೆ! ನಾವೆಲ್ಲ ಭಾರತ ದೇಶದ ಹೆಣ್ಣುಮಕ್ಕಳಿಗೆ ಅನ್ಯಾಯವಾಗದಂತೆ ಉತ್ತಮ ಸಮಾಜ ಕಟ್ಟುವ ಸಂಕಲ್ಪ ಮಾಡಿದ್ದೆವು,” ಎಂದು ಸ್ಪಂದನಾ ಜೋರಾಗಿ ಕಿರುಚಿದಳು.

ನಾಲ್ಕು ಹುಡುಗಿಯರನ್ನು ಅರೆಸ್ಟ್ ಮಾಡಿದರು. ಜಾನಕಿ ಈ ಹೆಣ್ಣುಮಕ್ಕಳಿಗೆ ಬೆಂಬಲವಾಗಿ ನಿಂತು ವಕೀಲರ ಬಳಿ ಮಾತನಾಡಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿಸಲು ನ್ಯಾಯಬದ್ಧವಾದ ಹೋರಾಟ ಮಾಡಿದಳು. ಕೆಲವು ತಿಂಗಳುಗಳ ನಂತರ ಈ ಕೇಸ್‌ ತೀರ್ಪಿಗಾಗಿ ಕೋರ್ಟ್‌ ಗೆ ಹೋಯಿತು. ಈ ನಾಲ್ಕು ಮಂದಿ ಸಾಯಿಸಿದ ವ್ಯಕ್ತಿಗಳೆಲ್ಲರೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿದ ಅಪರಾಧಿಗಳು. ಅವರೆಲ್ಲರೂ ನ್ಯಾಯಕ್ಕೆ ವಿರುದ್ಧವಾಗಿ ಅನ್ಯಾಯದ ದಾರಿಯಲ್ಲಿದ್ದುಕೊಂಡು, ಯಾರಿಗೂ ತಿಳಿಯದಂತೆ ಅಪರಾಧ ಮಾಡುತ್ತಾ ಯಾರ ಕಣ್ಣಿಗೂ ಬೀಳದೆ ಕದ್ದುಮುಚ್ಚಿ ಓಡಾಡಿಕೊಂಡಿದ್ದರು. ಅಲ್ಲದೆ ಅವರೆಲ್ಲರೂ ಈಗಾಗಲೇ ಜೇಲಿನಲ್ಲಿ ಖೈದಿಗಳಾಗಿದ್ದು, ತಲೆಮರೆಸಿಕೊಂಡಿದ್ದರು. ಅವರನ್ನು ಪೊಲೀಸರು ಹುಡುಕುತ್ತಿದ್ದರು. ಹಾಗಾಗಿ ಈ ನಾಲ್ಕು ಮಂದಿ ಹೆಣ್ಣುಮಕ್ಕಳು ಸಮಾಜಕ್ಕೆ ಒಳಿತು ಮಾಡಿರುವುದರಿಂದ ಇವರನ್ನು ಬಿಡುಗಡೆ ಮಾಡಲಾಗುವುದು ಎಂದು ಕೋರ್ಟ್‌ ತೀರ್ಪು ನೀಡಿತು.

ಅಂತಹ ದುಷ್ಕರ್ಮಿಗಳು, ಪಾಪಿಗಳು ಭೂಮಿಗೆ ಭಾರವಾಗಿ ಜೀವಿಸಿದ್ದ ರಾಕ್ಷಸರಿಗೆ ನ್ಯಾಯಾಲಯ ನೀಡುವ ಶಿಕ್ಷೆಯನ್ನು ಈ ಹೆಣ್ಣುಮಕ್ಕಳು ತಾವೇ ನೀಡಿದ್ದರಿಂದ ಇವರಿಗೆ ಆರು ತಿಂಗಳ ಶಿಕ್ಷೆ ವಿಧಿಸಿ, ನಂತರ ಬಿಡುಗಡೆ ಆಗುವುದು ಎಂದು ತೀರ್ಪಾಯಿತು.

ಆರು ತಿಂಗಳ ನಂತರ ಜೈಲಿನಿಂದ ಬಿಡುಗಡೆಯಾದ ಈ ಹೆಣ್ಣುಮಕ್ಕಳ ದೇಶಪ್ರೇಮದ ಸಲುವಾಗಿ, ಅನ್ಯಾಯದ ವಿರುದ್ಧ ಹೋರಾಡಲು ಪೊಲೀಸರಿಗೆ ರಹಸ್ಯವಾಗಿ ಕೆಲಸ ಮಾಡಲು ನೇಮಿಸಿದರು. ಸ್ಪಂದನಾ ಮತ್ತು ಅವಳ ಗೆಳತಿಯರು ಒಗ್ಗಟ್ಟಿನಿಂದಿದ್ದು, ಮತ್ಯಾವ ಕೊಲೆ ಮಾಡದೆ, ಅಪರಾಧಿಗಳ ಅನ್ವೇಷಣೆ ಮಾಡುತ್ತಾ, ಆ ವಿವರವನ್ನು ಪೊಲೀಸರಿಗೆ ನೀಡುತ್ತಾ ಅತ್ಯುತ್ತಮ ರಹಸ್ಯಾತ್ಮಕ ಏಜೆಂಟ್‌ ಗಳಾಗಿ ಬಹಳ ಉತ್ಸಾಹದಿಂದ ಕೆಲಸ ನಿರ್ವಹಿಸಿ ಜಯಶಾಲಿಗಳಾದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ