ವೆನೆಜುವೆಲಾ (Venezuela) ಕರಾವಳಿಯ ಸಮೀಪ ಸಂಭವಿಸಿದ ಪ್ರಬಲ ಅವಳಿ ಭೂಕಂಪಗಳು ದೇಶವನ್ನೇ ಬೆಚ್ಚಿಬೀಳಿಸಿವೆ.
ಕೇವಲ 1 ನಿಮಿಷದ ಅಂತರದಲ್ಲಿ 7.2 ಮತ್ತು 7.5 ತೀವ್ರತೆಯ ಭೂಕಂಪಗಳು ಸಂಭವಿಸಿದ ಪರಿಣಾಮ ಅನೇಕ ಕಟ್ಟಡಗಳು ಕುಸಿದಿವೆ. ಈ ದುರಂತರದಲ್ಲಿ 164 ಮಂದಿ ಸಾವನ್ನಪ್ಪಿದ್ದು, 900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಹಂಗಾಮಿ ಅಧ್ಯಕ್ಷ ರೊಡ್ರಿಗಸ್ (Rodriguez) ನೀಡಿರುವ ಮಾಹಿತಿ ಪ್ರಕಾರ, ಈವರೆಗೆ ಅವಳಿ ಭೂಕಂಪದಲ್ಲಿ ಕನಿಷ್ಠ 164 ಜನ ಸಾವನ್ನಪ್ಪಿದ್ದು, ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. 970 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬೃಹತ್ ಪ್ರಮಾಣದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದಿದ್ದಾರೆ.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ ಮಾಹಿತಿ ಪ್ರಕಾರ, ಮೊದಲ ಭೂಕಂಪದ ಕೇಂದ್ರಬಿಂದುವು ಕೆರಿಬಿಯನ್ ಕರಾವಳಿಯಲ್ಲಿ ಪತ್ತೆಯಾಗಿದೆ. ಮೊರೊನ್ ಪಟ್ಟಣದ ಪಶ್ಚಿಮಕ್ಕೆ, ಕರಾಕಾಸ್‌ನಿಂದ ಪಶ್ಚಿಮಕ್ಕೆ ಸುಮಾರು 168 ಕಿಲೋಮೀಟರ್ ದೂರದಲ್ಲಿ, 13 ಕಿಲೋಮೀಟರ್ ಆಳದಲ್ಲಿದೆ ದಾಖಲಾಗಿದೆ. ಅದರ ಬೆನ್ನಲ್ಲೇ ಇನ್ನೊಂದು 7.5 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಕೇಂದ್ರಬಿಂದು ಮೊರೊನ್‌ನಿಂದ ನೈಋತ್ಯಕ್ಕೆ ಸುಮಾರು 16 ಕಿಲೋಮೀಟರ್ ದೂರದಲ್ಲಿ, 10 ಕಿಮೀ ಆಳದಲ್ಲಿ ಪತ್ತೆಯಾಗಿದೆ.
ರಾಜಧಾನಿ ಕರಾಕಾಸ್ ಸೇರಿದಂತೆ ಹಲವು ನಗರಗಳಲ್ಲಿ ಕಟ್ಟಡಗಳು ತೀವ್ರವಾಗಿ ಅಲುಗಾಡಿದ ಪರಿಣಾಮ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಧಾವಿಸಿದರು. ಕೆಲ ಪ್ರದೇಶಗಳಲ್ಲಿ ಕಟ್ಟಡಗಳ ಗೋಡೆಗಳು ಕುಸಿದು ಬಿದ್ದಿದ್ದು, ರಸ್ತೆಗಳಲ್ಲಿ ಅವಶೇಷಗಳ ರಾಶಿ ಕಂಡುಬಂದಿದೆ. ಭೂಕಂಪದ ತೀವ್ರತೆಗೆ ಮುಗಿಲೆತ್ತರದ ಕಟ್ಟಡಗಳು ವಾಲಿಕೊಂಡಿವೆ. ಹಲವೆಡೆ ವಿದ್ಯುತ್ ಕಂಬಗಳು ಉರುಳಿದ್ದು, ಸಂಚಾರ ಹಾಗೂ ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ವಿದ್ಯುತ್ ಸಂಪರ್ಕ ಸ್ಥಗಿತ : ಭೂಕಂಪದ ನಂತರ ಕರಾಕಾಸ್‌ನ (Caracas) ಕೆಲವು ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಮತ್ತು ವಿದ್ಯುತ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ. ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗದೇ ಅನೇಕರು ಆತಂಕಕ್ಕೆ ಒಳಗಾಗಿದ್ದಾರೆ. ಭೂಕಂಪದಿಂದ ಭಯಭೀತರಾದ ಜನರು ಗಂಟೆಗಟ್ಟಲೆ ರಸ್ತೆಗಳಲ್ಲಿ ಆಶ್ರಯ ಪಡೆದಿರುವ ದೃಶ್ಯಗಳು ಕಂಡುಬಂದಿವೆ. ಭೀಕರ ಭೂಕಂಪದ ಹಿನ್ನೆಲೆ ವೆನೆಜುವೆಲಾದ ಮುಖ್ಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.





