60-80ರ ದಶಕದ ಬೆಂಗಳೂರಿಗರಿಗೆ ಟಿ ಆರ್ ಶಾಮಣ್ಣ ಅವರ ಹೆಸರು ಕೇಳಿದ ತಕ್ಷಣವೇ ಮೈ ಮನಗಳು ಪುಲಕಿತಗೊಳ್ಳುತ್ತವೆ. ರಾಜಕಾರಣಿಗಳು ಹೀಗೂ ಇರಬಹುದೇ ಎನ್ನುವಷ್ಟರ ಮಟ್ಟಿಗಿನ ಸರಳತೆ ಮತ್ತು ಸರಳ ಜೀವನಕ್ಕೆ ಹೆಸರುವಾಸಿಯಾಗಿದ್ದ ಕಾರಣ ಅವರನ್ನು ಕರ್ನಾಟಕದ ಗಾಂಧಿ ಎಂದು ಗೌರವಿಸಲಾಗಿತ್ತು. ಅವರ ನೆನಪಿನಾರ್ಥವಾಗಿ ಬೆಂಗಳೂರಿನಲ್ಲಿ ಟಿ ಆರ್ ಶಾಮಣ್ಣ ನಗರ ಮತ್ತು ಟಿ ಆರ್ ಶಾಮಣ್ಣ ಉದ್ಯಾನವನವು ಇದ್ದು ಅವರ ಬಗ್ಗೆ ಹೆಚ್ಚಿನ ವಿವರಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಅದು 70ರ ದಶಕ. ಆಗೆಲ್ಲಾ ಇಂದಿನಂತೆ ಮೋಟಾರ್ ಚಾಲಿತ ದ್ವಿಚಕ್ರವಾಹನಗಳು ಇಲ್ಲದಿದ್ದ ಸಂದರ್ಭದಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಲು ಸೈಕಲ್ ಒಂದೇ ಸಾಧನವಾಗಿತ್ತು. ಈಗ ಹೇಗೆ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುವ ಸವಾರರಿಗೆ ಟ್ರಾಫಿಕ್ ಪೋಲೀಸರು ಅಟಕಾಯಿಸಿಕೊಳ್ಳುತ್ತಿದ್ದರೋ ಹಾಗೆ ಅಂದಿನ ಕಾಲದಲ್ಲಿ ಪೌರಾಡಳಿತದವರು ಸೈಕಲ್ ಸವಾರರಿಗೆ ಅಟಕಾಯಿಸಿಕೊಳ್ತಿದ್ರು. ಬೆಂಗಳೂರು ನಗರದಲ್ಲಿ ಸೈಕಲ್ ಚಲಾಯಿಸುವ ಸವಾರರು, ವಾರ್ಷಿಕ 15 ರುಪಾಯಿಯ ಶುಲ್ಕವನ್ನು ಕೊಟ್ಟು ಒಂದು ಬಿಲ್ಲೆ(ಬ್ಯಾಡ್ಜ್) ಯನ್ನು ಸೈಕಲ್ಲಿನ ಹ್ಯಾಂಡೆಲ್ ಮೇಲೆ ಹಾಕಿಸಿಕೊಳ್ಳಬೇಕಿತ್ತು ಇಲ್ಲವೇ, ಆಗೊಮ್ಮೆ ಈಗೊಮ್ಮೆ ಸೈಕಲ್ ಚಲಾಯಿಸುವವರು, ನಗರಾದ್ಯಂತ ಇದ್ದ ಟೋಲ್ ಗೇಟಿನ ಬಳಿ ದಿನವೊಂದಕ್ಕೆ 15 ಪೈಸೆ ಕೊಟ್ಟು ಸೈಕಲ್ಲಿಗೆ ಒಂದು ಚೀಟಿ ಅಂಟಿಸಿಕೊಂಡು ಬರಬೇಕಿತ್ತು. ಆ ರೀತಿಯ ಪರವಾನಗಿ ಇಲ್ಲದೇ ಇದ್ದ ಸೈಕಲ್ಲುಗಳನ್ನು ಅಂದಿನ ಪೋಲೀಸರು ಹಿಡಿದು ದಂಡ ಹಾಕುತ್ತಿದ್ದ ಪರಿಣಾಮ, ಹಳ್ಳಿಯಿಂದ ಪೇಟೆಗೆ ಬರುವ ಅನೇಕ ಸೈಕಲ್ ಸವಾರರು, ಪೋಲಿಸರ ಕಣ್ಣು ತಪ್ಪಿಸಿ, ಸಂದಿ ಗೊಂದಿಗಳಲ್ಲಿ ಸೈಕಲ್ ತುಳಿದುಕೊಂಡು ಹೋಗಬೇಕಾದಂತಹ ಪರಿಸ್ಥಿತಿ ಇತ್ತು. ಅದೇ ರೀತಿಯಾಗಿ ರಾತ್ರಿಯಲ್ಲಿ ಡೈನಮೋ ಲೈಟ್ ಇಲ್ಲವೇ ಕಂದಿಲು ಇಲ್ಲದಿದ್ದ ಸೈಕಲ್ಲುಗಳನ್ನು ಸಹಾ ಪೋಲೀಸರು ಹಿಡಿಯುತ್ತಿದ್ದರು. ಆಗ ಸೈಕಲ್ ಮೇಲೆ ಇಬ್ಬರು ಕುಳಿತುಕೊಂಡು ಹೋದರೂ ಸಹಾ ಪೋಲೀಸರು ಹಿಡಿದು ದಂಡ ಕಟ್ಟಿಸಿಕೊಳ್ಳುತ್ತಿದ್ದರು.

ಸೈಕಲ್ ಒಂದು ಜನಸಾಮಾನ್ಯರ ಅವಿಭಾಜ್ಯ ಅಂಗವಾಗಿದ್ದು ಅದನ್ನು ಬಳಸುವ ಹೆಚ್ಚಿನವರರು ಬಡವರು ಇಲ್ಲವೇ ಬಡ ಮಧ್ಯಮವರ್ಗದವರೇ ಆಗಿದ್ದ ಕಾರಣ ಅಂದಿನ ಕಾಲದಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಹಣಕಟ್ಟಿ ಪರವಾನಗಿ ಪಡೆದುಕೊಳ್ಳಲಾಗದು. ಹಾಗಾಗಿ ಇಂತಹ ಅನಿಷ್ಟ ಪದ್ದತಿಯನ್ನು ರದ್ದುಗೊಳಿಸಬೇಕೆಂದು ಬಡವರ ಪರ ಹೋರಾಟಮಾಡಿ, ಜನರಿಗೆ ಸೈಕಲ್ ಪರವಾನಗಿಯಿಂದ ಮುಕ್ತಿಗೊಳಿಸಿದರೇ ಶ್ರೀ ಟಿ ಆರ್ ಶಾಮಣ್ಣನವರು.
ಶಾಮಣ್ಣನವರು ಮೂಲತಃ ಮಾಗಡಿಯವರಾಗಿದ್ದು, ತಿರುಮಲೆ ರಂಗನಾಥ ಶಾಮಣ್ಣ ಎಂಬುದು ಅವರ ಪೂರ್ಣ ಹೆಸರಾಗಿದ್ದು. 13 ಮಾರ್ಚ್ 1912ರಲ್ಲಿ ಮಾಗಡಿಯಲ್ಲಿ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಜನಿಸುತ್ತಾರೆ. ತಮ್ಮ ಬಾಲ್ಯದ ಶಿಕ್ಷಣವನ್ನೆಲ್ಲಾ ಹುಟ್ಟೂರಿನಲ್ಲಿಯೇ ಮುಗಿಸಿ, ಹೆಚ್ಚಿನ ವ್ಯಾಸಂಗಕ್ಕಾಗಿ ಬೆಂಗಳೂರಿನ ಬಸವನಗುಡಿಯ ಪ್ರಾಂತ್ಯದಲ್ಲಿ ನೆಲೆಸುತ್ತಾರೆ. ಡಿಪ್ಲೊಮಾ ಇನ್ ಕಾಮರ್ಸ್ ಜೊತೆಗೆ ಚಾರ್ಟರ್ಡ್ ಅಕೌಂಟೆನ್ಸಿ ಮುಗಿಸಿದ್ದರೂ, 1938 ರಲ್ಲಿ ತಮ್ಮ ಬದುಕನ್ನು ಶ್ರೀ ರಂಗನಾಥ್ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಎಂಬ ಟೈಪಿಂಗ್ ಇನಿಸ್ಟಿಟ್ಯೂಟ್ ಸಂಸ್ಥಾಪಕ ಪ್ರಾಂಶುಪಾಲರಾಗಿ ಕಟ್ಟಿಕೊಳ್ಳುವುದಲ್ಲದೇ ಅ ಸಂಸ್ಥೆಯ ಮೂಲಕ ಸಾವಿರಾರು ಉದಯೋನ್ಮುಖ ಉದ್ಯೋಗಿಗಳಿಗೆ ಟೈಪಿಂಗ್ ಮತ್ತು ಸ್ಟೆನೋಗ್ರಫಿ ಕೌಶಲ್ಯಗಳನ್ನು ಕಲಿಸಿಕೊಟ್ಟು ಅವರ ಬದುಕನ್ನೂ ರೂಪಿಸಿಕೊಳ್ಳಲು ಸಹಾಯ ಮಾಡುತ್ತಾರೆ.





