– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ಲೇಖಕ ಹಾಗೂ ಪತ್ರಕರ್ತ ಎನ್.ಎಸ್. ಶಂಕರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ‘ಉಲ್ಟಾ ಪಲ್ಟಾ’ ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳಿಗೆ ನಿರ್ದೇಶನ ನೀಡಿದ್ದ ಅವರು, ಕನ್ನಡ ಸಿನಿಮಾ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದರು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶಂಕರ್, ಮಲಗಿದ್ದಾಗಲೇ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಅವರ ನಿಧನದ ಸುದ್ದಿ ಕನ್ನಡ ಚಿತ್ರರಂಗ ಹಾಗೂ ಮಾಧ್ಯಮ ಲೋಕದಲ್ಲಿ ತೀವ್ರ ಶೋಕ ಮೂಡಿಸಿದೆ.
ಚಿತ್ರರಂಗಕ್ಕೆ ಕಾಲಿಡುವ ಮೊದಲು ಪತ್ರಕರ್ತರಾಗಿ ವೃತ್ತಿಜೀವನ ಆರಂಭಿಸಿದ್ದ ಅವರು ‘ಪ್ರಜಾವಾಣಿ’, ‘ಮುಂಗಾರು’ ಮತ್ತು ‘ಲಂಕೇಶ್ ಪತ್ರಿಕೆ’ ಸೇರಿದಂತೆ ಹಲವು ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ನಂತರ ನಿರ್ದೇಶಕರಾಗಿ ಗುರುತಿಸಿಕೊಂಡು ‘ಉಲ್ಟಾ ಪಲ್ಟಾ’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿ ಯಶಸ್ಸು ಕಂಡಿದ್ದರು.
ಉತ್ತಮ ಬರಹಗಾರರೂ ಆಗಿದ್ದ ಎನ್.ಎಸ್. ಶಂಕರ್ ಅನೇಕ ಪುಸ್ತಕಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ಮಹತ್ವದ ಕೊಡುಗೆ ನೀಡಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಶಂಕರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರಕಲಿ ಎಂದು ಸಂತಾಪ ಸೂಚಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬ ಮೂಲದ ಎನ್.ಎಸ್. ಶಂಕರ್ ಬಾಲ್ಯವನ್ನು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಕಳೆದಿದ್ದರು. ಮೈಸೂರಿನಲ್ಲಿ ಶಾಲಾ ಶಿಕ್ಷಣ ಹಾಗೂ ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣ ಪೂರ್ಣಗೊಳಿಸಿದ ಅವರು ಪತ್ರಿಕೋದ್ಯಮದಿಂದ ಚಿತ್ರರಂಗದವರೆಗೆ ಯಶಸ್ವಿ ಪಯಣ ಕಟ್ಟಿಕೊಂಡಿದ್ದರು.





