25 ವರ್ಷಗಳು, ಹಲವು ಭಾಷೆಗಳು, ನಿಲ್ಲಿಸಲಾಗದ ಆ ಒಂದು ರಾಗಲಹರಿಗೆ ಧ್ವನಿಯಾಗಿದ್ದಾರೆ ರಂಜನಿ ಜೋಸ್. ಇವರ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಯೋಣವೇ…..?
ರಂಜನಿ ಜೋಸ್ ರಿಗೆ ಓಣಂ ಕೇವಲ ಪರಂಪರೆ ಯಾವ ಸಂಪ್ರದಾಯದ ಭಾಗ ಮಾತ್ರವಲ್ಲ, ಕೇರಳದಾದ್ಯಂತ ಓಣಂ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಕಲಾ ಪ್ರದರ್ಶನ ನೀಡುತ್ತಾ ಕಳೆಯುವವರಿಗೆ, ಈ ಹಬ್ಬ ಅತ್ಯಂತ ವೈಯಕ್ತಿಕವಾಗಿರುತ್ತದೆ. ಇದು ತಮ್ಮ ಮೂಲ ಬೇರುಗಳು, ಅಲ್ಲಿನ ಲಯಕ್ಕೆ ಮತ್ತು ಮನೆಯೊಂದಿಗಿನ ತಮ್ಮ ಭಾಂದವ್ಯವನ್ನು ಭದ್ರವಾಗಿ ಬೆಸೆಯುತ್ತದೆ.
“ಕಳೆದ 25 ವರ್ಷಗಳಲ್ಲಿ ನಾನು ಓಣಂ ಹಬ್ಬಕ್ಕೆ ಮನೆಗೆ ಹೋಗಿದ್ದೇ ಕಡಿಮೆ,” ಎನ್ನುತ್ತಾರ ಕಲಾವಿದೆ ರಂಜನಿ ಜೋಸ್.
“ಹೆಚ್ಚಿನ ಸಮಯದಲ್ಲಿ ನಾನು ಕೇರಳ ಸರ್ಕಾರದ ಆಚರಣೆಗಳ ಭಾಗವಾಗಿ ಪ್ರದರ್ಶನ ನೀಡಲು ಪ್ರಯಾಣಿಸುತ್ತಿರುತ್ತೇನೆ. ಮನೆಯಲ್ಲಿ ಸೀರೆ ತೊಟ್ಟು, ಮನೆಯಂಗಳದಲ್ಲಿ ಪುಷ್ಪಗಳಿಂದ ಪೂಕ್ಕೋಲಂ ಅಲಂಕರಿಸಿ, ಪೋಷಕರೊಂದಿಗೆ ಬಾಳೆ ಎಲೆ ಮೇಲೆ ಪಾಯಸ ಸವಿಯುವ ಕ್ಷಣಗಳು ಮಾತ್ರ ಅತ್ಯದ್ಭುತ!” ಎಂದು ತಮ್ಮ ನೆಚ್ಚಿನ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ ರಂಜನಿ.
ಈ ವರ್ಷ ಓಣಂ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಎರಡು ಕಾರಣಗಳಿವೆ. ರಂಜನಿ ಇದೀಗ ಭಾರತೀಯ ಸಂಗೀತ ಕ್ಷೇತ್ರದಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ. ತಾನು ಹದಿಹರೆಯದರಿದ್ದಾಗ ಆರಂಭವಾದ ಈ ಪ್ರಯಾಣ ಈಗ 200ಕ್ಕೂ ಹೆಚ್ಚು ಚಲನಚಿತ್ರಗಳು, 5 ಭಾಷೆಗಳು, ಅಂತಾರಾಷ್ಟ್ರೀಯ ಪ್ರವಾಸಗಳು ಹಾಗೂ ತಮ್ಮದೇ ಆದ `ಆರ್ ಜೆ ದಿ ಬ್ಯಾಂಡ್’ ಮೂಲಕ ಇಂಡೀ ಸಂಗೀತ ಕ್ಷೇತ್ರವನ್ನೇ ಪರಿವರ್ತಿಸಿದ್ದಾರೆ. ಅವರ ಧ್ವನಿ ವೃತ್ತಿ ಜೀವನದಷ್ಟೇ ಬಹುಮುಖವಾಗಿ ಎಲ್ಲೆಡೆ ಪಸರಿಸಿದೆ. ಶಾಸ್ತ್ರೀಯದಿಂದ ಹಿಡಿದು ರಾಕ್ ವರೆಗೆ, ಮಲೆಯಾಳಂ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಪ್ಲೇಬ್ಯಾಕ್ ಹಾಡುಗಳಿಂದ ಮೂಲ ಗೀತೆಗಳವರೆಗೆ ನಿರ್ಭೀತ ಸ್ವಾತಂತ್ರ್ಯದೊಂದಿಗೆ ಮುಂದೆ ಸಾಗಿದೆ.
ರಂಜನಿ ತಮ್ಮ ಹೊಸ ಆಲ್ಬಮ್, ಹೊಸ ಉದ್ದೇಶದ ಭಾವನೆ ಮತ್ತು ಸಂಗೀತದಿಂದ ತುಂಬಿದ ಹೃದಯದೊಂದಿಗೆ ಈ ಮೈಲಿಗಲ್ಲು ತಲುಪಿದ್ದು, ತಮ್ಮ ಹೃದಯಾಂತರಾಳದ ಒಂದಷ್ಟು ಮಾತುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ 25 ವರ್ಷಗಳನ್ನು ಪೂರೈಸುತ್ತಿರುವ ನಿಮಗೆ ಹೇಗನ್ನಿಸುತ್ತದೆ?
ಕೃತಜ್ಞತೆ, ವಿನಮ್ರತೆ ಹಾಗೂ ಕೆಲವೊಮ್ಮೆ ಆಶ್ಚರ್ಯ ಆಗುತ್ತದೆ! ಕೊರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ನನಗೆ ಒಂದಿಷ್ಟು ವಿರಾಮ ದೊರೆಯಿತು ಹಾಗೂ ಆಲೋಚಿಸಲು ಸಮಯವಿತ್ತು. ಅದೇ ಸಮಯದಲ್ಲಿ ನಾನು ಎಷ್ಟು ದೂರ ಬಂದಿದ್ದೇನೆ ಎಂಬ ಅರಿವು ಆಯಿತು. ಕೋವಿಡ್ ನಂತರ, ನಾನು ನೇರವಾಗಿ ಕೆಲಸ, ಪ್ರವಾಸ, ರೆಕಾರ್ಡಿಂಗ್, ವೇದಿಕೆ ಪ್ರದರ್ಶನಗಳಿಗೆ ಮರಳಿದೆ. `ನಾನು ಇನ್ನೂ ನನ್ನ ಇಷ್ಟವಾದ ಕೆಲಸ ಮಾಡುತ್ತಿದ್ದೇನೆ ಹಾಗೂ ನಾನು ನನ್ನ ಸಂಗೀತವನ್ನು ಎಂದಿಗಿಂತಲೂ ಹೆಚ್ಚು ಗಂಭೀರವಾಗಿ ತೆಗೆದುಕೊಂಡಿದ್ದೇನೆ,’ ಎಂದು ಅಗ ನನಗೆ ಸರಿಯಾಗಿ ತಿಳಿದಿತ್ತು.
ನಿಮ್ಮ ಇತ್ತೀಚಿನ ಪ್ರಾಜೆಕ್ಟ್ `ಮೆಟಾಮಾರ್ಫ್’ ಬಗ್ಗೆ ಹೇಳಿ.
ಮೆಟಾಮಾರ್ಫ್ ತುಂಬಾ ವೈಯಕ್ತಿಕವಾಗಿದೆ. ಇದು ನನ್ನ ಮೊದಲ ಸ್ವತಂತ್ರ ಆಲ್ಬಂ ಮತ್ತು ಎಲ್ಲಾ ಗೀತೆಗಳು ನನ್ನ ಸ್ವಂತ ರಚನೆಗಳೇ ಆಗಿವೆ ಮೊದಲ ಟ್ರ್ಯಾಕ್ `ಹ್ಯೂಸ್’ ಈಗಾಗಲೇ ಬಿಡುಗಡೆಯಾಗಿದೆ. ನಾನು ಯಾವಾಗಲೂ ಹಿನ್ನೆಲೆ ಗಾಯನನ್ನು ಮೀರಿ ನನ್ನನ್ನು ನಾನು ಅನ್ವೇಷಿಸಲು ಬಯಸುತ್ತೇನೆ. ಸಾಹಿತ್ಯ ಬರೆಯುವುದು ಒಂದು ರೀತಿಯ ಚಿಕಿತ್ಸೆಯಾಗಿದೆ. ನಾನು ಎಂದಿಗೂ ಗಟ್ಟಿಯಾಗಿ ಅಥವಾ ಜೋರಾಗಿ ಹೇಳದ ವಿಷಯಗಳನ್ನು ಈ ಮೂಲಕ ಹೇಳಬಲ್ಲೆ. ಆರ್ ಜೆ ದಿ ಬ್ಯಾಂಡ್ ಮತ್ತು ನಾನು, ನನ್ನ ನಿರ್ಮಾಪಕ ಚಾರ್ಲ್ಸ್ ನಜ್ರೆತ್ ಒಟ್ಟಿಗೆ ಸೇರಿ ಸತ್ಯವಾಗಿ ಪ್ರತಿನಿಧಿಸುವ ಮೂಲಗೀತೆಗಳ ಕುರಿತು ಕೆಲಸ ಮಾಡುತ್ತಿದ್ದೇವೆ. ನೀವು ಹಲವು ಭಾರತೀಯ ಭಾಷೆಗಳಲ್ಲಿ ಹಾಡುತ್ತೀರಿ. ಅವುಗಳನ್ನು ನೀವು ಹೇಗೆ ಅಳವಡಿಸಿಕೊಂಡಿದ್ದೀರಿ?
ನನಗೆ ಭಾಷೆಗಳೆಂದರೆ ತುಂಬಾ ಇಷ್ಟ! ನಾನು ಯಾವಾಗಲೂ ಬೇರೆ ಬೇರೆ ಭಾಷೆಗಳು ಭಾವನೆಗಳನ್ನು ಹೇಗೆ ಮೈಗೂಡಿಸಿಕೊಳ್ಳುವುದು ಎಂಬುದರ ಬಗ್ಗೆ ಕುತೂಹಲದಿಂದ ಇರುತ್ತೇನೆ. ಯಾವುದೇ ಮಾತೃಭಾಷಾ ಪ್ರಭಾವವಿಲ್ಲದೆ ನಾನು ಹಲವಾರು ಭಾಷೆಗಳನ್ನು ಮಾತನಾಡುತ್ತೇನೆ. ನಾನು ಬೇರೆ ಬೇರೆ ಭಾಷೆಗಳಲ್ಲೂ ಸಹ ಸಾಹಿತ್ಯವನ್ನು ಬರೆಯುತ್ತೇನೆ. ಭಾಷೆ ಎಂದಿಗೂ ನನಗೆ ಅಡ್ಡಿಯಾಗಿಲ್ಲ. ಅದು ಯಾವಾಗಲೂ ಒಂದು ಆಹ್ವಾನವಾಗಿರುತ್ತದೆ.
ಇಂದು ಹೆಚ್ಚು ಮಹಿಳೆಯರು ಸ್ವತಂತ್ರ ಸಿಂಗಲ್ಸ್ ಬಿಡುಗಡೆ ಮಾಡುತ್ತಿದ್ದಾರೆ.

ನೀವು ಈ ಬದಲಾವಣೆಯನ್ನು ಹೇಗೆ ನೋಡುತ್ತೀರಿ?
ಇದು ತುಂಬಾ ಪ್ರೋತ್ಸಾಹದಾಯಕವಾಗಿದೆ. ಬಹಳ ಸಮಯದಿಂದ ಮೂಲ ರಚನೆ ಅಥವಾ ಸಂಯೋಜನೆಯನ್ನು ಪುರುಷರ ಕ್ಷೇತ್ರವೆಂದು ಪರಿಗಣಿಸಲಾಗುತ್ತಿತ್ತು. ಈಗ ಅದು ಬದಲಾಗುತ್ತಿದೆ. ಗೌರಿ ಲಕ್ಷ್ಮಿ, ಸಯನೋರಾ ಮತ್ತು ನನ್ನಂಥ ಸಂಗೀತಗಾರರು ಸ್ವಲ್ಪ ಸಮಯದಿಂದ ಸ್ವತಂತ್ರ ಗೀತೆಗಳನ್ನು ಹೊರತರುತ್ತಿದ್ದೇವೆ. ಒಂದು ಬಾರಿ ನಾನು ಎ.ಆರ್. ರೆಹಮಾನ್ ಸರ್ ರನ್ನು ಸಂದರ್ಶನ ಮಾಡಿದಾಗ, ಅವರು ನನಗೆ `ರಂಜನಿ, ಸ್ವತಂತ್ರ ಗೀತೆಗಳನ್ನು ಮಾಡುತ್ತಲೇ ಇರಿ,’ ಎಂದು ನನಗೆ ಸಲಹೆ ನೀಡಿದ್ದರು. ಆ ಸಲಹೆ ನನ್ನ ಮನಸ್ಸಿನಲ್ಲಿ ಬೇರೂರಿಬಿಟ್ಟಿದೆ. ಇಂದು ನಾವು ಯೂ ಟ್ಯೂಬ್ ಸೇರಿದಂತೆ ಹಲವಾರು ಪ್ಲಾಟ್ ಫಾರ್ಮ್ ಗಳನ್ನು ಹೊಂದಿದ್ದೇವೆ. ಇದು ನಮಗೆ ನಮ್ಮ ಕ್ಷೇತ್ರ ಗುರುತಿಸಿಕೊಳ್ಳಲು ಅವನು ಮಾಡಿಕೊಡುತ್ತದೆ.
ನೀವು 1999ರಲ್ಲಿ ನಿಮ್ಮ ಪ್ಲೇಬ್ಯಾಕ್ ಪ್ರಯಾಣವನ್ನು ಪ್ರಾರಂಭಿಸಿದ್ದೀರಿ. ಅದನ್ನು ನೀವು ಹೇಗೆ ನೆನಪಿಸಿಕೊಳ್ಳುತ್ತೀರಿ?
ನಾನು 12ನೇ ತರಗತಿಯಲ್ಲಿ ಇದ್ದೆ. ಬರ್ಗಿ ಇಗ್ನೇಷಿಯಸ್ ಸರ್ ಸಂಯೋಜಿಸಿದ `ಮೇಲರಿಯಾಥೆ ಮಾಲಕ್ಕಕ್ಕುಟಿಕ್’ನಲ್ಲಿ ಮೊದಲು ಚಲನಚಿತ್ರ ಗೀತೆ ರಾಕಾರ್ಡ್ ಮಾಡಿದೆ, ಇದನ್ನು ತ್ರಿಶೂರ್ ನ ಚೇತನಾ ಸ್ಟುಡಿಯೋಸ್ ನಲ್ಲಿ ರೆಕಾರ್ಡ್ ಮಾಡಲಾಗಿತ್ತು. ಮೂಲತಃ ನನಗೆ ನಟನೆಯ ಪಾತ್ರವನ್ನು ಕೊಟ್ಟಿದ್ದರು. ಆದರೆ ಅದು ಹಾಡು ಅವಕಾಶವಾಗಿ ಬದಲಾಯಿತು. ಕ್ಯಾಸೆಟ್ ಬಿಡುಗಡೆಯಾದ ನನ್ನ ಫೋಟೋ, ಚೇಚಿಯವರ ಪಕ್ಕದಲ್ಲಿತ್ತು. ಅದು ನನ್ನ ದೊಡ್ಡ ಆನಂದದ, ಅದ್ಭುತದ ಕ್ಷಣವಾಗಿತ್ತು. ಅದಾದ ನಂತರ, ನಾನು ಹಲವಾರು ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಿಗೆ ಹಾಡಿದ್ದೇನೆ.
ನೀವು ಇಳಯರಾಜ, ಎಸ್.ಪಿ.ಬಿ ಮತ್ತು ಶಂಕರ್ ಮಹಾದೇವನ್ ರಂತಹ ಲೆಜೆಂಡ್ಸ್ ಗಳೊಂದಿಗೆ ಕೆಲಸ ಮಾಡಿದ್ದೀರಿ. ಆ ಅನುಭವಗಳು ಹೇಗಿದ್ದವು?
ನಾನು ಮೊದಲ ಬಾರಿಗೆ ಇಳಯರಾಜ ಸರ್ ರನ್ನು ಭೇಟಿಯಾದಾಗ, ಧ್ವನಿ ಪರೀಕ್ಷೆಗಾಗಿ `ಅಖಲಾಂಡೇಶ್ವರಿ’ ಹಾಡನ್ನು ಹಾಡಬೇಕಾಯಿತು. ಅವರು ಮುಗುಳ್ನಗುತ್ತಾ, `ಒಳ್ಳೆಯ ಧ್ವನಿ. ಚೆನ್ನಾಗಿ ಹಾಡಿದ್ದೀಯ,’ ಎಂದರು. ನಂತರ ಜೇಸುದಾಸ್ ಸರ್ ಹಾಡಿನ ಪುನರಾವರ್ತಿತ ಆವೃತ್ತಿಯಾದ `ಪೊನ್ಮುಡಿ ಪುಝೋರಂ’ ಹಾಡನ್ನು ಹಾಡಿದೆ, ನಾನು ವಿದ್ಯಾಸಾಗರ್ ಸರ್, ಮನು ರಮೇಶ್, ಶರತ್ ಸರ್ ರೊಂದಿಗೆ ಕೆಲಸ ಮಾಡಿದ್ದೇನೆ. ಅವರು ನನಗೆ ತನ್ನ ಕುಟುಂಬದವರಂತೆ ಭಾಸವಾಗಿದ್ದಾರೆ. ಎಸ್.ಪಿ.ಬಿ ಸರ್ ಜೊತೆ ಹಾಡಬೇಕೆಂಬ ನನ್ನ ಕನಸು ಕೂಡಾ ನನಸಾಯಿತು.
ನೀವು ಇತ್ತೀಚೆಗೆ ಡಬ್ಬಿಂಗ್ ಕೆಲಸವನ್ನೂ ಮಾಡಿದ್ದೀರಿ.
ಹೌದು, ನಾನು ಬಂಡಿಷ್ ಬ್ಯಾನ್ಡಿಟ್ಸ್, ರೆಡ್ ಲೈಟ್‌ರಾಯಲ್ ಬ್ಲೂ ಮತ್ತು ಎಕ್ಸ್ ಪ್ಯಾಟ್ಸ್ ಗಳಿಗೆ ಡಬ್ಬಿಂಗ್ ಮಾಡಿದ್ದೇನೆ. ಅದು ಯಾವಾಗಲೂ ಮಲೆಯಾಳಂನಲ್ಲಿ ಇರುವುದಿಲ್ಲ. ಕೆಲವೊಮ್ಮೆ ಇಂಗ್ಲಿಷ್ ಮತ್ತು ಇತರ ಭಾಷೆಗಳಲ್ಲಿಯೂ…. ಆದರೆ ಅದು ನನಗೆ ಸುಲಭವಾಗಿ ಸಿಕ್ಕಿತು. ಡಬ್ಬಿಂಗ್ ಕೂಡ ಭಾವನೆಗಳೊಂದಿಗೆ ಹಾಡು ಅಭಿನಯದಂತಿರುತ್ತದೆ.
ನೀವು ನಟನೆಯನ್ನೂ ಮಾಡಿದ್ದೀರಿ….?
ಹೌದು, ನಟನೆಯು ಸಹಜವಾಗಿಯೇ ಬಂದಿದ್ದು, ರೆಡ್ ಚಿಲೀಸ್ ನಲ್ಲಿ ಮೋಹನ್ ಲಾಲ್ ಸರ್, ದ್ರೋಣದಲ್ಲಿ ಮಮ್ಮೂಟ್ಟಿ ಸರ್ ಮತ್ತು ತಿಲಕನ್ ಸರ್ ರಂತಹ ಅನುಭವಿಗಳೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ನಾನು ಅದರ ಬಗ್ಗೆ ಯೋಚಿಸಿಯೂ ಇರಲಿಲ್ಲ. ಅದು ಸಹಜವಾಗಿಯೇ ನನಗೆ ಒಲಿದು ಬಂದದ್ದು.
ನಿಮ್ಮ ಪ್ರವಾಸದ ಅನುಭವ ಹೇಗಿತ್ತು?
ನಾನು ಪ್ರದರ್ಶನಗಳಿಗಾಗಿ ಭಾರತ, ಗಲ್ಫ್, ಯೂರೋಪ್ ಮತ್ತು ಅಮೆರಿಕಾದ್ಯಂತ ಪ್ರಯಾಣಿಸಿದ್ದೇನೆ. ಇತ್ತೀಚೆಗೆ ನಾನು ಬ್ಯಾಂಕಾಕ್ ನಲ್ಲಿ ಪ್ರದರ್ಶನ ನೀಡಲು ಇಚ್ಛಿಸಿದ್ದೇನೆ. ಪ್ರವಾಸ ಆಯಾಸವಾಗಬಹುದು. ಆದರೆ ನೇರವಾಗಿ ಪ್ರೇಕ್ಷಕರನ್ನು ರಂಜಿಸಿದಾಗ ನಮಗೆ ದೊರೆಯುವ ಪ್ರೋತ್ಸಾಹಕ್ಕೆ ಯಾವುದನ್ನೂ ಹೋಲಿಸಲು ಆಗುವುದಿಲ್ಲ.
ನಿಮ್ಮ ನೆಚ್ಚಿನ ಓಣಂ ನೆನಪು ಯಾವುದು?
ಓಣಂ ಹಬ್ಬ ನನ್ನ ಪಾಲಿಗೆ ಕೇರಳದೊಂದಿಗೆ ಗಾಢವಾದ ನಂಟು ಹೊಂದಿದೆ. ಆ ಸಂದರ್ಭದಲ್ಲಿ ನಾನು ಮನೆಯಲ್ಲಿ ವಿರಳವಾಗಿರುತ್ತಿದ್ದರೂ, ಅದು ಸದಾ ನನಗೆ ವಿಶೇಷವಾಗಿರುತ್ತದೆ. ನನ್ನ ಅತ್ಯುತ್ತಮ ನೆನಪುಗಳೆಂದರೆ, ನನ್ನ ತಾಯಿ ತಂದೆಯವರೊಂದಿಗೆ ಮನೆಯಲ್ಲಿ, ಸೀರೆ ಉಟ್ಟು, ಪೂಕ್ಕೋಲಂ ಸಿದ್ಧಪಡಿಸಿ, ಪಾಯಸ ಮತ್ತು ಪಪ್ಪಡಂ ಸವಿದದ್ದು! ನನಗೆ ಅತ್ಯಂತ ಇಷ್ಟವಾದ ವ್ಯಂಜನಗಳೆಂದರೆ ಕೂಟ್ಟುಕರಿ ಮತ್ತು ಪೈನಾಪ್ ಪಚ್ಚಡಿ.
ಭಾರತೀಯ ಸಂಗೀತದ ಭವಿಷ್ಯವನ್ನು ನೀವು ಎಲ್ಲಿ ನೋಡುತ್ತೀರಿ?
ಸ್ವತಂತ್ರ ಸಂಗೀತವೇ ಭವಿಷ್ಯ. ಒಂದು ಕಾಲದಲ್ಲಿ ಸಿನಿಮಾ ಹಾಡುಗಳು ಪ್ರಾಬಲ್ಯ ಹೊಂದಿದ್ದ. ಆದರೆ ಈಗ ಎಲ್ಲರಿಗೂ ಪ್ಲೇಬ್ಯಾಕ್ ನಲ್ಲಿ ಅವಕಾಶ ಸಿಗುವುದಿಲ್ಲ. ಇಂಡೀ ಸಂಗೀತ ಕಲಾವಿದರು ತಮ್ಮದೇ ಆದ ಧ್ವನಿಯನ್ನು ಪಡೆಯಲು ಸಹಾಯ ಮಾಡುತ್ತದೆ. ಜಾಬ್ ಕುರಿಯನ್, ಅಕಮ್ ಬ್ಯಾಂಡ್ ಮುಂತಾದವರನ್ನು ನೋಡಿ ಅವರು ತಾವು ಸೃಷ್ಟಿಸಿದ ಸಂಗೀತದೊಂದಿಗೆ ಯಶಸ್ವಿಯಾಗುತ್ತಿದ್ದಾರೆ. ನಾನು ಈ ಬದಲಾವಣೆಯ ಭಾಗವಾಗಿರುವುದಕ್ಕೆ ಸಂತೋಷಪಡುತ್ತೇನೆ. ಉತ್ತಮ ಸಂಗೀತ ಬರಲಿ, ಅದು ತಲುಪಬೇಕಾದ ಹೃದಯಗಳನ್ನು ತಲುಪಲಿ.
ಸಂಗೀತ ಇಲ್ಲದಿದ್ದರೆ, ರಂಜನಿ ಜೋಸ್ ಏನು ಮಾಡುತ್ತಿದ್ದರು?
ನಿಜ ಹೇಳಬೇಕು ಅಂದ್ರೆ ಖಂಡಿತವಾಗಿಯೂ ನನಗೆ ಗೊತ್ತಿಲ್ಲ, ನಾನು ಹುಟ್ಟುವ ಮೊದಲೇ, ಹಾಡುವ ಮಗಳು ಬೇಕು ಎಂಬುದು ನನ್ನ ತಂದೆಯ ಕನಸಾಗಿತ್ತು. ನಾನು ಅವರ ಕನಸನ್ನು ಜೀವಿಸುತ್ತಿದ್ದೇನೆ. ಸಂಗೀತ ನಾನು ಮಾಡುವ ಕೆಲಸವಲ್ಲ, ಅದು ನನ್ನ ಅಸ್ತಿತ್ವ!
ರಂಜನಿ ಜೋಸ್ ರ ಕಥೆ ಕೇವಲ ಕಾಲಾವಧಿಯ ಕುರಿತು ಅಲ್ಲ, ಅದು ಬೆಳವಣಿಗೆ, ಧೈರ್ಯ ಮತ್ತು ನಿರಂತರವಾಗಿ ವಿಕಸನಗೊಳ್ಳುವ ಶಕ್ತಿಯ ಕಥೆ. ತನ್ನ ನಿಯಮಗಳನ್ನು ಬದಲಾಯಿಸುತ್ತಿರುವ ಈ ಉದ್ಯಮದಲ್ಲಿ, ಅವರು ತನ್ನದೇ ಆದ ನಿಯಮಗಳನ್ನು ಬರೆಯುತ್ತಿದ್ದಾರೆ. ಕೆಲವೊಮ್ಮೆ ಸಂಸ್ಕೃತದಲ್ಲಿ ಕೆಲವೊಮ್ಮೆ ರಾಕ್ ಶೈಲಿಯಲ್ಲಿ. ಆದರೆ ಸದಾ ಅಂತರ್ಗತವಾಗಿ ಬರೆದಿದ್ದಾರೆ. ಈ ಓಣಂ, ಕೇರಳ ಹೂಗಳು ಮತ್ತು ಸುವಾಸನೆಯಲ್ಲಿ ಅರಳುತ್ತಿರುವಾಗ, ರಂಜನಿಯ ಧ್ವನಿ ಸ್ಥಿರ ಮತ್ತು ಬಲವಾದದ್ದು ಎಂಬುದನ್ನು ಮತ್ತೆ ಮತ್ತೆ ನಿರೂಪಿಸುತ್ತದೆ. ನಿಜವಾದ ಹಬ್ಬವೆಂದರೆ ನೀವು ಯಾರೆಂದು ತಿಳಿದುಕೊಳ್ಳುವುದು ಎಂಬುದನ್ನು ನೆನಪಿಸುತ್ತದೆ.
– ಅಂಜನಾ ಜಾರ್ಜ್





