ಮಹಿಳಾ ಡ್ರೈವರ್ ಗಳೆಂದರೆ ಈ ಪುರುಷಪ್ರಧಾನ ಸಮಾಜ ಸದಾ ಮೂಗು ಸಿಂಡರಿಸುತ್ತದೆ. ಆದರೆ ಈಗ ಕಾಲ ಎಷ್ಟೋ ಬದಲಾಗಿದೆ, ಇಂಥ ಮೂಢನಂಬಿಕೆಗಳಿಂದ ಜನ ಹೊರಬಂದು ಮಹಿಳಾ ಪ್ರಗತಿ ಬಗ್ಗೆ ಗಮನಿಸಬೇಕಿದೆ…..
ಆಫೀಸ್ ನಲ್ಲಿ ಕುಳಿತಿದ್ದ ನಾಲ್ವರು ಗಂಡಸರು, ಹೆಂಗಸರು ಗಾಡಿ ಓಡಿಸುವುದರ ಕುರಿತು ಕೆಟ್ಟದಾಗಿ ಟೀಕೆ ಮಾಡುತ್ತಾ ಆಡಿಕೊಳ್ಳುತ್ತಿದ್ದರು. ಸುಂದರ್ ಹೇಳುತ್ತಿದ್ದ, “ಈ ಹೆಂಗಸರು ಎಷ್ಟೋ ಸಲ ಇಂಡಿಕೇಟರ್ ಹಾಕದೆಯೇ ದಾರಿ ಮಧ್ಯೆ ಲೇನ್‌ಬದಲಾಯಿಸಿ ಬಿಡ್ತಾರೆ!”
ಇದಕ್ಕೆ ಉತ್ತರವಾಗಿ ಉಮೇಶ್, “ನಿಜ ನಿಜ….. ಆದರೆ ಈ ಹೆಂಗಸರು ತಮಗೆ ಸರಿಯಾಗಿ ಗಾಡಿ ಓಡಿಸಲು ಬರೋದಿಲ್ಲ ಅಂತ ಒಪ್ಪಿಕೊಂಡರೆ ತಾನೇ? ಪಾರ್ಕಿಂಗ್ ಕುರಿತಾಗಿ ಸ್ವಲ್ಪ ಸೆನ್ಸ್ ಇರೋಲ್ಲ ಇವರಿಗೆ. ಗಾಡಿಯನ್ನು ಎಲ್ಲಿ ಅಂದ್ರೆ ಅಲ್ಲಿ ಹೇಗೋ ಪಾರ್ಕ್‌ಮಾಡಿಬಿಟ್ಟರೆ ಆಯ್ತು.”
ಇದಕ್ಕೆ ಸತೀಶ್ ವ್ಯಂಗ್ಯವಾಗಿ ಇವರಿಗೆ ಜೊತೆ ನೀಡುತ್ತಾ, “ನಾನು ಡ್ರೈವ್ ಮಾಡುತ್ತಾ ಸಡನ್ನಾಗಿ ಬ್ರೇಕ್ ಹಾಕಿದಾಗೆಲ್ಲ…. ಗ್ಯಾರಂಟಿ ನನ್ನ ಮುಂದೆ ಒಬ್ಬ ಹೆಂಗಸು ಗಾಡಿ ಓಡಿಸುತ್ತಿರುತ್ತಾಳೆ, ಇದು ಅವಳದೇ ತಪ್ಪು ಎನ್ನಬಹುದು.”
ಆಗ ಮಹೇಶ್ ಸುಮ್ಮನಿರದೆ, “ಆದ್ದರಿಂದಲೇ ನಾನು ಈ ಹೆಂಗಸರು ಗಾಡಿ ಓಡಿಸುವುದನ್ನು ನೋಡಿ ಬಲು ಅಲರ್ಟ್‌ಆಗ್ತೀನಪ್ಪ…. ಅವರದೇನು ಗ್ಯಾರಂಟಿ ಹೇಳು…. ಎಲ್ಲಿಂದಲೋ ಬಂದು ಗುದ್ದಿದರೆ ಸಾಯೋರು ನಾವು ತಾನೇ?” ಇದಕ್ಕೆ ಎಲ್ಲರೂ ಸೂರು ಹಾರುವಂತೆ ನಗತೊಡಗಿದರು.
ಸರಿತಾ ಹೇಳುತ್ತಾಳೆ, ತಲೆಗೆ ಹೆಲ್ಮೆಟ್, ಕೈಗೆ ಗ್ಲವ್ಸ್ ಧರಿಸಿ ತಾನು ಬುಲೆಟ್ ಸ್ಟಾರ್ಟ್ ಮಾಡುವುದನ್ನು ನೋಡಿದರೆ, ಜನ ಬೇಕೆಂದೇ ಮುಖ ಕಿವುಚುತ್ತಾರೆ. ಪ್ರತಿದಿನ ಈಕೆ ಗಾಡಿ ಓಡಿಸುವಾಗ ಜನ ಬೇಕೆಂದೇ ಹುಬ್ಬೇರಿಸುತ್ತಾರೆ. ಒಂದು ದಿನ ಇವಳು ತನ್ನ ಗೆಳತಿ ನಿತಾ ಜೊತೆ ಗಾಡಿಯಲ್ಲಿ ಹೊರಟಿದ್ದಾಗ, ಎದುರಿಗೆ ಟ್ರಾಫಿಕ್ ಸಿಗ್ನಲ್ ಕಂಡು ನಿಲ್ಲಿಸಿದಳಂತೆ. ಆಗ ಪಕ್ಕದಲ್ಲಿ ಮಾರುತಿ ವ್ಯಾನ್ ನಲ್ಲಿ ಕುಳಿತಿದ್ದ ಗಂಡಸರು ಇವಳ ಕಡೆ ತಿರುಗಿ, “ಓಹೋ…. ಡಬ್ಬಲ್ ರೈಡಿಂಗ್ ಬೇರೆ ಬರುತ್ತೋ….” ಎಂದು ವ್ಯಂಗ್ಯವಾಗಿ ಆಡಿಕೊಂಡರಂತೆ.
ಬೈಕ್ ನಡೆಸುತ್ತಿರುವವಳು ಹೆಣ್ಣು, ಹಿಂದೆ ಕುಳಿತಿರುವವಳೂ ಹೆಣ್ಣು ಎಂದು ತಿಳಿದಾಗ ಜನರಿಗೆ ಹೀಗಾಡಲು ನಾಲಿಗೆ ಉದ್ದವಾಗುತ್ತದೆ. ನಂತರ ಇತರೇ ಗಾಡಿಯ ಗಂಡಸರು ಇವರತ್ತ ವಿಚಿತ್ರವಾಗಿ ದಿಟ್ಟಿಸಿದರಂತೆ. ಟೂ ವೀಲರ್ ಮೇಲೆ ಹೆಣ್ಣನ್ನು ಕಂಡರೆ ಜನ ಸುಮ್ಮನಿರು ಬದಲು ತಿರಸ್ಕಾರ ವ್ಯಕ್ತಪಡಿಸುತ್ತಾರೆ. ಒಬ್ಬ ಯುವಕ ಬೇಕೆಂದೇ ಅಡ್ಡ ಬಂದು ಇವರಿಗೆ ಡಿಕ್ಕಿ ಹೊಡೆಯಲು ಯತ್ನಿಸುತ್ತಿದ್ದ.
ಬದಲಾಗದ ಮನೋಭಾವ ಈ ಪುರುಷಪ್ರಧಾನ ಸಮಾಜಕ್ಕೆ ಅರ್ಥವಾಗದ ಒಂದು ವಿಷಯ ಎಂದರೆ, ಗಾಡಿಯಲ್ಲಿ ಹಿಂಬದಿ ಕೂರಬೇಕಾದ ಹೆಣ್ಣು, ಅದು ಹೇಗೆ ಮುಂದೆ ಕುಳಿತು ಇಷ್ಟು ಚೆನ್ನಾಗಿ ಡ್ರೈವಿಂಗ್ ಮ್ಯಾನೇಜ್ ಮಾಡಬಲ್ಲಳು ಅಂತ….? ಹಿಂದೆಲ್ಲ ದೇಶವಿಡೀ ಹೆಣ್ಣು ಮನೆ, ಮಕ್ಕಳನ್ನು ಸುಧಾರಿಸುತ್ತಾ ಹಿಂದುಳಿಯುತ್ತಿದ್ದರೆ, ಗಂಡಸು ಸ್ಟೇರಿಂಗ್ ಹಿಡಿದು ಗಾಡಿ ಓಡಿಸುತ್ತಾ, ತನ್ನ ಸಮಾನರಿಲ್ಲ ಎಂದು ಮೆರೆಯುತ್ತಿದ್ದ. ಆದರೆ ಈಗ ಕಾಲ ಬದಲಾಗಿದೆ! ಹೆಂಗಸರು ಡ್ರೈವಿಂಗ್ ಮಾಡುವುದನ್ನು ನೋಡಿದರೆ ಗಂಡಸರಿಗೆ, ಇವರಿಗೇಕೆ ಇಷ್ಟು ಸ್ವಾತಂತ್ರ್ಯ ಎಂದು ಸಿಡುಕುವಂತಾಗುತ್ತದೆ. ಹೀಗಾಗಿ ಗಾಡಿ ಚಲಾಯಿಸು ಹೆಣ್ಣನ್ನು ಕಂಡು ಈ ಗಂಡಸರು ಏನಾದರೊಂದು ಕಟಕಿ ಮಾತು, ವ್ಯಂಗ್ಯ ಆಡದೇ ಇರಲು ಸಾಧ್ಯವೇ ಇಲ್ಲ.
ಯಾರಾದರೂ ಹೆಂಗಸು ಜೋಪಾನವಾಗಿ, ನಿಧಾನವಾಗಿ ಗಾಡಿ ಓಡಿಸುತ್ತಿದ್ದರೆ, ಅಯ್ಯೋ ಪಾಪ, ಬೋರ್ಡ್, ರಸ್ತೆ ಮಧ್ಯೆ ಭಯ ಅನ್ಸುತ್ತೆ, ಅಂತಾರೆ. ಆತ್ಮವಿಶ್ವಾಸದಿಂದ ವೇಗವಾಗಿ ಓಡಿಸಿದರೆ, ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಾ ನಿಂತುಬಿಡುತ್ತಾರೆ, ವಿಶ್ವದ 8ನೇ ಅದ್ಭುತ ಕಂಡಂತೆ! ಆಕೆ ಪಾರ್ಕಿಂಗ್ ಸ್ಲಾಟ್ ನಲ್ಲಿ ನಿಲ್ಲಿಸುತ್ತಿದ್ದರೆ, ಗಂಡಸರು ತಾವೇ ಅದನ್ನು ಮಾಡುವುದಾಗಿ ಧಾವಿಸುತ್ತಾರೆ. ಹೆಣ್ಣು ಹೆಂಗಸರು, ಪಾರ್ಕಿಂಗ್ ಏನು ಮಹಾ ಗೊತ್ತಾದೀತು ಅಂತ ವ್ಯಂಗ್ಯ. ಟ್ರಾಫಿಕ್ ಜಾಮ್ ನಲ್ಲಿ ಆಕೆ ಸಿಕ್ಕಿಬಿದ್ದರೆ, ಇಂಥದ್ದೆಲ್ಲ ನಿಮಗೆ ಯಾಕೆ ಬೇಕು? ಅಡುಗೆ ಮನೆಯಲ್ಲಿ ಸೌಟು ಹಿಡಿಯಿರಿ ಅಂತಾರೆ. ಹೆಣ್ಣು ಸಹ ಗಂಡಿನಂತೆಯೇ ಸಮರ್ಥವಾಗಿ ಡ್ರೈವಿಂಗ್ ನಡೆಸಬಲ್ಲಳು, ಪಾರ್ಕಿಂಗ್ ಮಾಡಬಲ್ಲಳೆಂದು ಅವರೇಕೆ? ಭಾವಿಸುವುದಿಲ್ಲ? ಇದರಲ್ಲಿ ಆಶ್ಚರ್ಯ ಪಡುವಂಥದ್ದು ಏನಿದೆ?
ಆಟೋ ಟ್ಯಾಕ್ಸಿ ನಡೆಸುವವರು ಗಂಡಸರಾದರೆ ಸರಿ, ಅದೇ ಹೆಣ್ಣಾಗಿದ್ದರೆ….. ಓಹೋ ಈಕೆ ಇದನ್ನು ಬೇರೆ ಮಾಡಬಲ್ಲಳೇ ಅಂತ ವ್ಯಂಗ್ಯ. ಕೊರಿಯರ್ ನವರು ಮಹಿಳೆ ಆಗಿದ್ದರೆ ಸಹಜವಾಗಿ ಹುಬ್ಬೇರುತ್ತದೆ! ಭಾರತ ಸೇರಿದಂತೆ ದಕ್ಷಿಣ ಏಷ್ಯಾ ಖಂಡವಿಡೀ ಇಂಥ ಡ್ರೈವಿಂಗ್ ಕ್ಷೇತ್ರದಲ್ಲಿ ಹೆಣ್ಣಿನ ಪಾಲು ಬಲು ಕಡಿಮೆ. ಮಿಡಲ್ ಈಸ್ಟ್ ಗೆ ಹೋಲಿಸಿದಾಗ ತುಸು ಮೇಲು, ಅಲ್ಲಿ ಕಾನೂನಿನ ದೃಷ್ಟಿಯಿಂದಲೇ ಹೆಣ್ಣು ಡ್ರೈವಿಂಗ್ ಕಲಿಯದಂತೆ ವಂಚಿಸಲಾಗಿದೆ!

ಮಿಥ್ಯೆ ಮುರಿಯುತ್ತಿರುವ ಹೆಂಗಸರು
ಹೆಂಗಸರ ಡ್ರೈವಿಂಗ್ ಕುರಿತಾಗಿ ಚರ್ಚೆ ನಡೆದಾಗೆಲ್ಲಾ, ಅವರು ಬಲು ಕೆಟ್ಟದಾಗಿ ಡ್ರೈವ್ ಮಾಡುತ್ತಾರೆ ಎಂದೇ ಹೇಳಲಾಗುತ್ತದೆ. ಹೆಣ್ಣು ಗಾಡಿ ಓಡಿಸಿದರೆ ಹೊರಗಿನವರು ಹೀಗಳೆಯುವುದಿರಲಿ, ಮನೆಯವರೂ ಆಡಿಕೊಳ್ಳುತ್ತಾರೆ. ಸರಿಯಾಗಿ ಗಾಡಿ ಓಡಿಸದವರು ಸಹ, ಅದು ತಮ್ಮ ಹಕ್ಕು ಎಂಬಂತೆ ಹೆಣ್ಣಿನ ಡ್ರೈವಿಂಗ್ ಬಗ್ಗೆ ಕಮೆಂಟ್ ಮಾಡುತ್ತಾರೆ. ಈಸ್ಟ್ರೋಜನ್ ಹಾರ್ಮೋನ್ ಹೆಣ್ತನದ ಹೆಗ್ಗುರುತು. ಇದು ಅವಳ ಹೆರಿಗೆಯಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ಇದು ಅವಳ ಬುದ್ಧಿಯಿಂದ ಹೃದಯದವರೆಗೂ ಎಲ್ಲವನ್ನೂ ನಿಯಂತ್ರಿಸುತ್ತದೆ. ಈ ಹಾರ್ಮೋನ್ ಅವಳಿಗೆ ಹೊಸ ಹೊಸತನ್ನು ಗಂಡಸರಿಗಿಂತ ಉತ್ತಮವಾಗಿ ಕಲಿಯುವಂತೆ ಮಾಡಬಲ್ಲದು. ಹೀಗಾಗಿ ಅವಳ ಡ್ರೈವಿಂಗ್ ನಲ್ಲಿ ದೋಷ ಹುಡುಕುವುದು ಸರಿಯಲ್ಲ. ಒಂದು ಆಧುನಿಕ ಸರ್ವೇ ಪ್ರಕಾರ, ಹೆಂಗಸರು ಗಂಡಸರಿಗಿಂತ ಬೆಟರ್ ಡ್ರೈವಿಂಗ್ ಮಾಡಬಲ್ಲರು ಎಂಬುದು ಸಾಬೀತಾಗಿದೆ!
ಹೆಣ್ಣು ಅಬಲೆಯಲ್ಲ….. ಸಬಲೆ!
ಆ ಸರ್ವೆಯಲ್ಲಿ 1835ರ ಹರೆಯದ 41 ಮಂದಿ ಗಂಡಸರನ್ನು ಹೆಂಗಸರ ಜೊತೆ ಅವರ ಡ್ರೈವಿಂಗ್ ಗೆ ಹೋಲಿಸಿ ನೋಡಿದಾಗ, ಅದರಲ್ಲಿ ಕಲಿಯುವ, ಗಮನ ಕೇಂದ್ರೀಕರಿಸುವ, ಯೋಜನೆ ರೂಪಿಸುವ, ಕಾರ್ ಕಂಟ್ರೋಲಿಂಗ್ ಸ್ಕಿಲ್ ಗೆ ಸಂಬಂಧಿಸಿದ ಸವಾಲುಗಳನ್ನು ಕೇಳಲಾಯಿತು. ಒಂದರಿಂದ ಮತ್ತೊಂದು ಸ್ಥಿತಿಯತ್ತ ಗಮನ ಬದಲಿಸುವ ಕಲೆಯಲ್ಲಿ ಹೆಂಗಸರು ಗಂಡಸರಿಗಿಂತ ಹೆಚ್ಚು ಜೀನಿಯಸ್ ಎನಿಸಿದ್ದಾರೆ. ಇದೇ ಸ್ಕಿಲ್ಸ್ ಕಾರಣ ಇವರು ಡ್ರೈವಿಂಗ್ ನಲ್ಲಿ ಎಷ್ಟೋ ಬೆಟರ್ ಎನಿಸುತ್ತಾರೆ.
ಮನೋತಜ್ಞರ ಪ್ರಕಾರ, ಹೆಂಗಸರು ತಮ್ಮ ಪ್ರತಿ ಜವಾಬ್ದಾರಿಯ ತರಹವೇ ಡ್ರೈವಿಂಗ್ ರೂಲ್ಸ್, ಟ್ರಾಫಿಕ್ ರೂಲ್ಸ್ ನ್ನು ಸಹ ಉತ್ತಮವಾಗಿ ಫಾಲೋ ಮಾಡುತ್ತಾರೆ. ಅದೇ ಗಂಡಸರಾದರೆ, ಡ್ರೈವಿಂಗ್ ಜೊತೆಗೆ ಬೇರೆ ಇನ್ನಾವುದೋ ಕೆಲಸ ಶುರು ಹಚ್ಚಿಕೊಂಡಿರುತ್ತಾರೆ. ಅಂದ್ರೆ ಮೊಬೈಲ್ ನಲ್ಲಿ ಮಾತು, ಸ್ಟೀರಿಯೊ ಸಿಸ್ಟಂನಲ್ಲಿ ಕೈಯಾಡಿಸುವುದು ಇತ್ಯಾದಿ. ಆದರೆ ಹೆಂಗಸರು ಮಾತ್ರ ತಮ್ಮ ಇಡೀ ಗಮನವನ್ನು ಡ್ರೈವಿಂಗ್ ನತ್ತಲೇ ಕೇಂದ್ರೀಕರಿಸುತ್ತಾರೆ.
ಶಾಕಿಂಗ್ ಟ್ರೂಥ್ ರಲ್ಲಿ ವರದಿ ಪ್ರಕಾರ, 5 ಕೋಟಿ ಮಂದಿ ರಸ್ತೆ ಅಪಘಾತಕ್ಕೆ ಈಡಾಗುತ್ತಾರೆ. ಇದರಲ್ಲಿ 10 ಲಕ್ಷ ಮಂದಿ ಸಾವನ್ನಪ್ಪುತ್ತಾರೆ. ನಾರ್ವೆಯಲ್ಲಿ ಅತಿ ಕಡಿಮೆ ರಸ್ತೆ ಅಪಘಾತ ಆಗುತ್ತದೆ. ನಾರ್ವೆ ದೇಶದಲ್ಲಿನ `ಟ್ರಾನ್ಸ್ ಪೋರ್ಟ್ ಎಕನಾಮಿಕ್ಸ್’ ಸಂಸ್ಥೆ ಸುಮಾರು 1100 ಮಂದಿ ಡ್ರೈವರ್ ಗಳನ್ನು ವಿಚಾರಿಸಿ ಸರ್ವೆ ನಡೆಸಿತು. ಇದರ ಪ್ರಕಾರ, ಡ್ರೈವಿಂಗ್ ಮಾಡುವಾಗ, ಹೆಂಗಸರಿಗೆ ಹೋಲಿಸಿದಾಗ ಗಂಡಸರು ಡ್ರೈವಿಂಗ್ ಮಾಡುವಾಗ ಗಮನ ಬೇರೆಡೆ ಹರಿಸುತ್ತಾರೆ ಎಂಬುದು ಖಾತ್ರಿಯಾಯಿತು.
ಮತ್ತೊಂದು ಸರ್ವೆ ಅಲ್ಲಿನ ಪ್ರಸಿದ್ಧ ಹೈಡ್ ಪಾರ್ಕ್ ಸರ್ಕಲ್ ನಲ್ಲಿ ನಡೆಯಿತು. ಅದು ಆ ದೇಶದ ಅತಿ ದಟ್ಟ ಟ್ರಾಫಿಕ್ ವುಳ್ಳ ಸರ್ಕಲ್ ಎನಿಸಿದೆ. ಅಲ್ಲಿನ ಸರ್ವೆ ಪ್ರಕಾರ, ಹೆಂಗಸರು ಗಂಡಸರಿಗಿಂತ ಡ್ರೈವಿಂಗ್ ನಲ್ಲಿ ಎಷ್ಟೋ ಪಾಲು ಬೆಟರ್! ಗಾಡಿಯ ಸ್ಪೀಡ್, ಇಂಡಿಕೇಟರ್ ಬಳಸುವಿಕೆ, ಸ್ಟೇರಿಂಗ್ ಕಂಟ್ರೋಲ್, ಗಾಡಿ ನಡೆಸುವಾಗ ಮೊಬೈಲ್ ಸಂಭಾಷಣೆ ಇತ್ಯಾದಿ ಅಂಶಗಳಿಗೆ ಮಹತ್ವ ನೀಡಲಾಗಿತ್ತು.
ಈ ಸರ್ವೆ ಪ್ರಕಾರ 30 ಅಂಕಗಳಿಗೆ 23.6 ಹಾಗೂ ಗಂಡಸರಿಗೆ ಕೇವಲ 19.8 ಅಂಕಗಳು ದೊರಕಿದ್ದವು.
ಗಂಡಸರ ಅಪಾಯಕಾರಿ ಡ್ರೈವಿಂಗ್
ಈ ಸರ್ವೇ ಪ್ರಕಾರ, ಹೆಚ್ಚು ಮಂದಿ ಹೆಂಗಸರಿಗೆ ಟ್ರಕ್ ಚಲಾಯಿಸುವ ಕೆಲಸ ಸಿಕ್ಕಿದರೆ, ಆಗ ರಸ್ತೆಗಳು ಎಷ್ಟೋ ಸುರಕ್ಷಿತವಂತೆ! ಲಂಡನ್ನಿನ ಒಬ್ಬ ನುರಿತ ಯೂನಿವರ್ಸಿಟಿ ಡ್ರೈವರ್ ಈ ಕುರಿತು ಹೇಳಿದ್ದೆಂದರೆ, ಹೆಚ್ಚಿನ ಪ್ರಕರಣಗಳಲ್ಲಿ ಗಂಡಸರು ಬಲು ಅಪಾಯಕಾರಿ ಡ್ರೈವಿಂಗ್ ಮಾಡ್ತಾರಂತೆ! ಇದರಿಂದ ರಸ್ತೆ ಬದಿ ನಡೆಯುವ ಸಾಮಾನ್ಯರ ಜೀವಕ್ಕೆ ಅಪಾಯ ತಪ್ಪಿದ್ದಲ್ಲ. ಆ್ಯಲ್ ಡ್ರೆಡ್ ಎಂಬ ಈತನ ಪ್ರಕಾರ, ಬ್ರಿಟಿಷ್ ಡೇಟಾದಿಂದ 2005-2015ರವರೆಗಿನ ಅಲ್ಲಿನ ಆ್ಯಕ್ಸಿಡೆಂಟ್ಸ್ ಗಮನಿಸಿದರೆ, ಅದರಲ್ಲಿ ಹೆಚ್ಚಿನ ಹೊಣೆ ಗಂಡಸರದೇ ಆಗಿತ್ತು.
ಈ ಸರ್ವೆ ಪ್ರಕಾರ 6 ಬಗೆಯ ವಾಹನಗಳಲ್ಲಿ 5 ಬಗೆಯ ವಾಹನ ನಡೆಸುತ್ತಿದ್ದ ಗಂಡಸರು, ಫುಟ್ ಪಾತ್ ನಲ್ಲಿ ನಡೆಯುತ್ತಿದ್ದ ಅಮಾಯಕರನ್ನು ಅಪಾಯಕ್ಕೆ ಎಳೆದಿದ್ದರು. ಕಾರು, ವ್ಯಾನು ನಡೆಸುತ್ತಿದ್ದ ಗಂಡಸರಲ್ಲಿ, ಹೆಂಗಸರಿಗೆ ಹೋಲಿಸಿದಾಗ 2 ಪಟ್ಟು ಅಪಾಯ ಹೆಚ್ಚಾಗಿತ್ತಂತೆ! ಅದೇ ತರಹ ಟ್ರಕ್ ನಡೆಸುವ ಗಂಡಸರು 4 ಪಟ್ಟು ಅಪಾಯಕಾರಿ ಎನಿಸಿದ್ದರು.
ಆ್ಯಲ್ ಡ್ರೆಡ್ ಪ್ರಕಾರ, ರಸ್ತೆ ಅಪಘಾತಗಳ ಮೂರನೇ ಎರಡರಷ್ಟು ಭಾಗದ ಸಾವಿಗೆ ಕಾರುಟ್ಯಾಕ್ಸಿಗಳ ಅತಿ ವೇಗವೇ ಕಾರಣ. ಆದರೆ ಸಂಶೋಧನೆಗಳಿಂದ ತಿಳಿದು ಬಂದದ್ದೆಂದರೆ, ಇತರ ವಾಹನಗಳೂ ಅಷ್ಟೇ ಅಪಾಯಕಾರಿ. ಈತನ ಸಲಹೆ ಪ್ರಕಾರ, ನಿಯಮಾವಳಿಗಳನ್ನು ನಿರ್ಧರಿಸುವವರು, ವಾಹನ ಚಲಾಯಿಸುವ ಗಂಡಸು ಹೆಂಗಸರ ಅನುಪಾತ ಗಮನದಲ್ಲಿಟ್ಟುಕೊಂಡೇ ಟ್ರಾಫಿಕ್ ನೀತಿ ರೂಪಿಸಬೇಕು. ಇದರಿಂದ ಎಷ್ಟೊ ದುರಂತಗಳು ತಪ್ಪುತ್ತವೆ.
ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೆಂಗಸರು ಡೀಸೆಂಟಾದ, ಲೂಸ್ ಫಿಟಿಂಗ್ಸ್ ನ ಡ್ರೆಸ್ ಧರಿಸಿರಬೇಕು. ಒಂದು ವರದಿಯ ಪ್ರಕಾರ, ಚೆನ್ನೈನ ಕೆ.ಕೆ. ನಗರದ RTO ಆಫೀಸ್ ನಲ್ಲಿ ಡ್ರೈವಿಂಗ್ ಟೆಸ್ಟ್ ನಲ್ಲಿ ಹೆಂಗಸರನ್ನು ಏಕೆ ತಡೆಹಿಡಿದರು ಎಂದರೆ, ಅವರು ಜೀನ್ಸ್ ಕೇಪ್ರಿ ಇತ್ಯಾದಿ ಧರಿಸಿ ಬಂದಿದ್ದರು. ಆದರೆ ಇಡೀ ದೇಶದ ಡ್ರೈವಿಂಗ್ ಟೆಸ್ಟ್ ಮಾನದಂಡದ ಪ್ರಕಾರ, ಇಂಥ ಡ್ರೆಸ್ ಕೋಡ್ ಇರಲೇಬೇಕೆಂಬ ನಿಯಮವಿಲ್ಲ. ಮೋಟರ್ ವೆಹಿಕಲ್ ಆ್ಯಕ್ಟ್ ಪ್ರಕಾರ, ಹೆಂಗಸರು ಡ್ರೈವಿಂಗ್ ನಲ್ಲಿ ಇಂಥದ್ದೇ ಡ್ರೆಸ್ ಧರಿಸಿರಬೇಕೆಂಬ ನಿಯಮವಿಲ್ಲ. ಜೀನ್ಸ್ ಕೇಪ್ರಿ ಧರಿಸಿ ಗಾಡಿ ಓಡಿಸಿದರೆ ಏನು ನಷ್ಟವೋ, ವಿವರಿಸುವವರೇ ಇಲ್ಲ!
ಸ್ತ್ರೀತಜ್ಞರಿಂದ ಚೆಕ್ ಅಪ್ ಡ್ರೈವಿಂಗ್
ಲೈಸೆನ್ಸ್ ಪಡೆಯಲು ಹೆಣ್ಣುಮಕ್ಕಳು ಹಲವು ಟೆಸ್ಟ್ ಗಳನ್ನು ಎದುರಿಸಬೇಕು. ಪ್ರತಿ ದೇಶದಲ್ಲೂ ಇದನ್ನು ಪಡೆಯಲು ಬೇರೆ ಬೇರೆ ಕಾನೂನುಗಳಿವೆ. ರಿಟನ್ ಟೆಸ್ಟ್, ಓರಲ್ ಟೆಸ್ಟ್, ಡ್ರೈವಿಂಗ್ ಎಬಿಲಿಟಿ, ಆದರೆ ಕೆಲವು ದೇಶಗಳಲ್ಲಿ ಹೆಣ್ಣುಮಕ್ಕಳು ಗೈನಕಾಲಜಿಸ್ಟ್ ರಿಂದ ಚೆಕ್ ಅಪ್ ಪಡೆಯಬೇಕಂತೆ! ಹೌದು, ಇದಂತೂ ನಿಜ. ಯೂರೋಪಿನ ಲುಥಿಯಾನಾ ಮುಂತಾದ ದೇಶಗಳಲ್ಲಿ ಈ ಕ್ರಮವಿದ್ದು, ಅದರಲ್ಲಿ ಓ.ಕೆ ಆದರೆ ಮಾತ್ರ ಲೈಸೆನ್ಸ್ ಸಿಗಲು ಸಾಧ್ಯ! 2002ರವರೆಗೂ ಈ ವಿಚಿತ್ರ ಕಾನೂನು ಅಲ್ಲೆಲ್ಲ ಜಾರಿಯಲ್ಲಿದ್ದು, ಹೆಂಗಸರು ಯಾವುದೇ ರೋಗಗ್ರಸ್ತರಾಗಿರಬಾರದು ಎಂಬುದೇ ಇದರ ಉದ್ದೇಶ. ರೋಗಿಷ್ಟ ಹೆಂಗಸರು ಸರಿಯಾಗಿ ಗಾಡಿ ನಡೆಸಲಾರರು, ಗಂಡಸರು ಮಾತ್ರ ನಡೆಸುತ್ತಾರೋ?
ಎಲ್ಲಕ್ಕೂ ಮುಖ್ಯ ಸುರಕ್ಷತೆ
ಹೊರಗೆ ಹೋಗುವ ಹೆಂಗಸರಿಗೆ ಎಲ್ಲಕ್ಕೂ ಮುಖ್ಯ ಸುರಕ್ಷತೆ. 2011ರ ಜನಗಣತಿ ಪ್ರಕಾರ, ಗಂಡಸರಿಗೆ ಹೋಲಿಸಿದಾಗ, ಬೆಂಗಳೂರಿನಲ್ಲಿ 43% ಹೆಂಗಸರು ಕೆಲಸಕ್ಕೆ ಹೋದರೆ, ಚೆನ್ನೈನಲ್ಲಿ 34% ಹೋಗುತ್ತಾರೆ. ವಿಶ್ವದೆಲ್ಲೆಡೆಯ ಅಧ್ಯಯನದಿಂದ ಸಾರ್ವಜನಿಕ ವಾಹನಗಳನ್ನು ಅವಲಂಬಿಸುವವರಲ್ಲಿ ಗಂಡಸರಿಗಿಂತ ಹೆಂಗಸರೇ ಜಾಸ್ತಿ! ಅದರಲ್ಲೂ ಮಧ್ಯಮ, ಕೆಳ ಮಧ್ಯಮದವರೇ ಹೆಚ್ಚು. ಒಂದು ವರದಿಯ ಪ್ರಕಾರ, ತಮ್ಮ ಸ್ಥಳೀಯ ಸಾರ್ವಜನಿಕ ವಾಹನಗಳ ಲಭ್ಯತೆಯ ಆಧಾರದ ಮೇಲೆ, ಹೆಂಗಸರು ಹೊರಗಿನ ಕೆಲಸಗಳಿಗೆ ಹೋಗುತ್ತಿದ್ದರು, ಅಭಾವ ಹೆಚ್ಚಾದಾಗ ಕೆಲಸ ಬಿಡುತ್ತಿದ್ದರು.
ಅನಾದಿ ಕಾಲದಿಂದಲೂ ಗಂಡಸು ಹೆಂಗಸರಿಗೆ ಈ ವಿಷಯದಲ್ಲಿ ಅಂತರ ಇದ್ದೇ ಇದೆ. ಸಶಕ್ತರಾದ ಗಂಡಸರು ಹೆಚ್ಚು ಕಷ್ಟಕರ ಕೆಲಸಗಳನ್ನು ನಿಭಾಯಿಸಬಲ್ಲರು. ಆದರೆ ಇಂದಿನ ಆಧುನಿಕ ದಿನಗಳಲ್ಲಿ ಹೆಣ್ಣು ಪ್ರತಿ ಕ್ಷೇತ್ರದಲ್ಲೂ ಗಂಡಿಗೆ ಸರಿಸಮಾನವಾಗಿ ದುಡಿಯುತ್ತಿದ್ದಾಳೆ. ಆದರೆ ಕೆಲವರ ಪ್ರಕಾರ, ಸಂಕಟದ ಸಂದರ್ಭದಲ್ಲಿ ಹೆಂಗಸರು ಬೇಗ ಗಾಬರಿಗೊಳ್ಳುತ್ತಾರೆ. ಹಾಗೇಂತ ಎಲ್ಲ ಗಂಡಸರೂ ಎಂಟೆಡೆ ಭಂಟರೇನೂ ಅಲ್ಲ. ಮುಖ್ಯವಾಗಿ ಗಾಡಿ ಡ್ರೈವಿಂಗ್ ವಿಷಯದಲ್ಲಿ ಅವರು ಬಲು ಆಕ್ರಾಮಕರು, ಹೆಂಗಸರು ಬೆಟರ್ ಡ್ರೈವರ್ಸ್! `ರಿಸರ್ವ್ ಆಫ್ ಜನರಲ್ ಇಂಜರಿ ಪ್ರಿವೆನ್ಶನ್ಸ್ ‘ನ ವೈದ್ಯಕೀಯ ವರದಿಯಲ್ಲಿ ಇದು ಪ್ರಕಟಗೊಂಡಿದೆ.
ಪರಿವರ್ತನೆಯ ಸಮಯ
ದೈನಂದಿನ ಅಗತ್ಯ, ಹೊರಗಿನ ಸಂಪಾದನೆ, ಸದವಕಾಶಗಳಿಗಾಗಿ ಹೆಂಗಸರೂ ಡ್ರೈವಿಂಗ್ ಕಲಿಯುವಂತಾಯಿತು. ಇದೀಗ ಅದು ಹೆಣ್ಣಿನ ಸಂಪಾದನೆಗೆ ಮುಖ್ಯ ಮಾರ್ಗ. ದೇಶವಿಡೀ ಹಲವು ಸಾಮಾಜಿಕ ಉದ್ಯಮಗಳಲ್ಲಿ ಪ್ರಯಾಣಿಕರ ಜೊತೆಗೆ ಕಮರ್ಷಿಯಲ್ ವಾಹನಗಳ ಮಾಲೀಕರು, ಚಾಲಕರು ಇಬ್ಬರ ಮೇಲೂ ಗಮನ ಇರಿಸಲಾಗುತ್ತಿದೆ. ಕಡಿಮೆ ಆದಾಯ ಗಳಿಸುವ ಹೆಂಗಸರೇ ಇಲ್ಲಿ ಮುಖ್ಯ, ಹೀಗಾಗಿ ಇವರಿಗೆ ಡ್ರೈವಿಂಗ್ ನ ಪ್ರೋತ್ಸಾಹ ಅತ್ಯಗತ್ಯ.
ದೆಹಲಿಯಲ್ಲಿ ಇದಕ್ಕಾಗಿಯೇ ಒಬ್ಬ ಮಹಿಳೆ, ಇ-ಕಾಮರ್ಸ್ ಲಾಜಿಸ್ಟಿಕ್ಸ್ ಕಂಪನಿ ಸ್ಥಾಪಿಸಿ, ಹೆಂಗಸರಿಗೆ ವಾಹನ ಚಾಲನೆ ಕಲಿಸಿ, ಡೆಲಿವರಿ ಏಜೆಂಟ್ ಆಗಿಸುವಲ್ಲಿ ಸಮರ್ಥಳಾಗಿದ್ದಾಳೆ. ಮೊದಲ 6 ತಿಂಗಳಲ್ಲೇ 500ಕ್ಕೂ ಹೆಚ್ಚು ಹೆಂಗಸರು ಹೀಗೆ ತರಬೇತಿ ಪಡೆದಿದ್ದು, ನಂತರ ದೇಶವಿಡೀ ಕ್ರಮೇಣ ಇಂಥ 250 ಸಂಸ್ಥೆಗಳು ಹರಡಿಕೊಂಡವು.
`ಮೂವಿಂಗ್ ವುಮನ್ ಸೋಶಿಯಲ್ ಇನಿಶಿಯೇಟಿವ್ ಫೌಂಡೇಶನ್’ ಸಂಸ್ಥೆ ಹೈದರಾಬಾದ್ ನಲ್ಲಿ 1500ಕ್ಕೂ ಹೆಚ್ಚು ಮಂದಿ ಹೆಂಗಸರಿಗೆ 2 ವೀಲರ್ ನಡೆಸಲು ಕಲಿಸಿ, ರಾಜ್ಯವಿಡೀ ಶಾಖೆಗಳನ್ನು ಪಡೆಯುತ್ತಿದೆ. ಎಲ್ಲಾ ಮಹಾನಗರ, ಉಪನಗರಗಳಲ್ಲೂ ಇಂಥ ಡ್ರೈವಿಂಗ್ ಸಂಸ್ಥೆಗಳೂ ದಿನೇ ದಿನೇ ಹೆಚ್ಚುತ್ತಿವೆ.
ಮೂಲ ಉದ್ದೇಶ ಗುರಿ
ಹೆಂಗಸರು ಇದರ ಹಿಂದಿನ ಮೂಲ ಉದ್ದೇಶ ಅರಿತು ಜಾಗರೂಕರಾಗಿ ಒಂಟಿಯಾಗಿ ಸುರಕ್ಷಿತ ಪ್ರಯಾಣ ಮಾಡುವುದು ಎಷ್ಟು ಮುಖ್ಯ ಎಂದು ಗುರುತಿಸಬೇಕು. ಇದರಿಂದ ಅವರು ತಮ್ಮ ಜೀವನದ ಇತರ ಎಷ್ಟೋ ಮೈಲಿಗಲ್ಲುಗಳಲ್ಲಿ ಯಶಸ್ವಿ ಎನಿಸುತ್ತಾರೆ. ಇಲ್ಲಿ ಹೆಂಗಸರು ಡ್ರೈವಿಂಗ್ ಕಲಿಯುವುದೊಂದೇ ಅಲ್ಲ, ಎಲೆಕ್ಟ್ರಿಕಲ್ ವಾಹನಗಳನ್ನೂ ಸಲೀಸಾಗಿ ನಡೆಸಿ, ಹೆಚ್ಚಿನ ಸಂಪಾದನೆಗೆ ತೊಡಗಿಕೊಳ್ಳಬೇಕು ಎಂಬುದು.
ವಿಶ್ವದೆಲ್ಲೆಡೆ ಹೆಂಗಸರು ತಮ್ಮ ಓಡಾಟದ ಸಲುವಾಗಿ ಎಷ್ಟೋ ಅಡಚಣೆಗಳನ್ನು ಎದುರಿಸುತ್ತಾರೆ. ಉನ್ನತ ಶಿಕ್ಷಣ, ಉತ್ತಮ ಕೆಲಸಗಳನ್ನು ಈ ಕಾರಣಕ್ಕಾಗಿ ಕಳೆದುಕೊಳ್ಳುತ್ತಾರೆ. ಹಾಗಾಗಿ ಪರಸ್ಥಳಗಳ ಕಡೆ ಹೋಗುವುದೇ ಬೇಡ ಅಂತಾರೆ. ಇದರಿಂದ ಇವರ ಸಂಪಾದನೆ ಬಲು ಸೀಮಿತ ಎನಿಸುತ್ತದೆ.
`ಶೆಲ್ ಫೌಂಡೇಶನ್’ನ ಶಿಪ್ರಾ ನಾಯರ್ ಹೇಳುತ್ತಾರೆ, ನಮ್ಮ ಉದ್ದೇಶ ಹೆಂಗಸರ ಮೊಬಿಲಿಟಿ ಹೆಚ್ಚಿಸುವುದೇ ಆಗಿದೆ, ಆಗ ಅವರಿಗೆ ಸಮಾನ ಅವಕಾಶ ಸಿಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಡ್ರೈವರ್ಸ್ ಗೆ ತರಬೇತಿ ನೀಡಿದರೆ, ಅವರ ಆರ್ಥಿಕ ಸ್ಥಿತಿ ಎಷ್ಟೋ ಸುಧಾರಿಸುತ್ತದೆ. ನಮ್ಮ ದೇಶದ ಮೊದಲ ಡ್ರೈವಿಂಗ್ ಸಂಸ್ಥೆ ತೆಲಂಗಾಣ ರಾಜ್ಯದಿಂದ ಮೊದಲಾಯಿತು, ಇಡೀ ದೇಶದ ದೃಷ್ಟಿಯಲ್ಲಿ ಇಂದಿಗೂ ಸಹ ಒಟ್ಟಾರೆ ಕೇವಲ ಶೇ.10ರಷ್ಟು ಡ್ರೈವಿಂಗ್ ಲೈಸೆನ್ಸ್ ಮಾತ್ರವೇ ಹೆಂಗಸರದಾಗಿದೆ.
ಹೆಣ್ಣು ಶಕ್ತಿಯ ಸ್ವರೂಪ
ಯಾವುದೇ ಕ್ಷೇತ್ರದಲ್ಲೂ ಗಂಡು ಹೆಣ್ಣು ಸರಿಸಮಾನವಾಗಿ ಕೆಲಸ ಮಾಡಬಲ್ಲರು. ಆದರೆ ನೋಡುವ ದೃಷ್ಟಿ ಬದಲಾಗದಿದ್ದರೆ, ಹೆಂಗಸರಿಗೆ ಅವರ ಪೂರ್ಣ ಹಕ್ಕು ಸಿಗುವುದಿಲ್ಲ. ಪುರುಷಪ್ರಧಾನ ಸಮಾಜದಲ್ಲಿ ಇಂದಿಗೂ ಮನೆಯಿಂದ ಹೊರಡುವ ಮೊದಲು, ಮನೆಯ ಗಂಡಸರ ಅನುಮತಿ ಕೇಳಬೇಕಾಗುತ್ತದೆ. ಇದುವೇ ಗಂಡು ಹೆಣ್ಣಿನ ನಡುವಿನ ದೊಡ್ಡ ಅಂತರ. ಯಾವಾಗ ಎಲ್ಲಾ ಗಂಡಸರೂ ಈ ಅಂತರ ಹಿಮ್ಮೆಟ್ಟಿಸುತ್ತಾರೋ, ಅಂದಿನಿಂದ ಮಾತ್ರವೇ ಹೆಣ್ಣಿನ ಸ್ಥಿತಿಯಲ್ಲಿ ಬದಲಾವಣೆ, ಸುಧಾರಣೆ ಸಾಧ್ಯ.
ಗ್ರಾಮೀಣ ಪರಿಸರದಲ್ಲಿ ಟೆಕ್ನಾಲಜಿ
ತೀರಾ ಕುಗ್ರಾಮ, ಕಗ್ಗಹಳ್ಳಿಗಳಲ್ಲಿ ಹೆಣ್ಣುಮಕ್ಕಳಿಗೆ ತಮಗೆಂಥ ಹಕ್ಕುಗಳಿವೆ ಅಂತಲೂ ಗೊತ್ತಿಲ್ಲ. ನಗರ ಪ್ರದೇಶಗಳ ಹೆಂಗಸರು ಆಧುನಿಕ ಟೆಕ್ನಾಲಜಿ ಬಳಸಿಕೊಳ್ಳುತ್ತಾ ಮುನ್ನಡೆಯುತ್ತಿದ್ದಾರೆ. ಆದರೆ ಗ್ರಾಮೀಣ ಪರಿಸರದಲ್ಲಿ ಇದು ಆಗುತ್ತಿಲ್ಲ. ಹೀಗಾಗಿ ಸರ್ಕಾರ ಈ ನಿಟ್ಟಿನಲ್ಲಿ ಗ್ರಾಮೀಣ ಪರಿಸರದ ಹೆಣ್ಣುಮಕ್ಕಳ ಪ್ರಗತಿಯ ಕುರಿತಾಗಿ ಹೆಚ್ಚಿನ ಕ್ರಮ ವಹಿಸಬೇಕಿದೆ.
ದೇಶದ ಜನಸಂಖ್ಯೆಯ ಅರ್ಧಕ್ಕೂ ಹೆಚ್ಚಿನ ಪಾಲು ಹೆಂಗಸರೇ ಆಗಿರುವುದರಿಂದ, ಅವರಿಗೆ ಉತ್ತಮ ಶಿಕ್ಷಣ, ಆರೋಗ್ಯ, ನೌಕರಿ, ಹೊರಗಿನ ಓಡಾಟದಲ್ಲಿ ಸುರಕ್ಷತೆ ಇತ್ಯಾದಿಗಳನ್ನು ಕ್ರಮಬದ್ಧನೈಗಿ ಕೊಡಿಸಬೇಕು. ಅಲ್ಲಿಯನರೆಗೂ ನಾರಿ ಶಕ್ತಿಯ ಉತ್ಥಾನ ಸಾಧ್ಯವಿಲ್ಲ, ಹಣ್ಣಿನ ಪ್ರಗತಿ ಆಗುವವರೆಗೂ ದೇಶದ ಪ್ರಗತಿ ಆಗದು!
– ಪ್ರತಿನಿಧಿ
ಹೆಂಗಸರೇಕೆ ಬೆಟರ್ ಡ್ರೈವರ್ಸ್?
ರಸ್ತೆ ಅಪಘಾತಗಳಲ್ಲಿ ಸಿಂಹಪಾಲು, ಡ್ರಿಂಕ್ & ಡ್ರೈವ್ ನ ಕುಖ್ಯಾತಿಯಿಂದಲೇ ಆಗಿದೆ. ಹೆಂಗಸರು ಈ ದುರಭ್ಯಾಸದಿಂದ ದೂರ ಇರುವುದರಿಂದ, ಅಪಘಾತಗಳನ್ನು ಎಷ್ಟೋ ತಡೆಯಬಹುದು. ದೆಹಲಿಯ ಈ ಅಂಕಿಅಂಶಗಳು ಟ್ರಾಫಿಕ್ ನ ಕುರಿತಾಗಿ ಹೆಚ್ಚು ಹೇಳುತ್ತದೆ :
ಒಟ್ಟು ಲೈಸೆನ್ಸ್ : ದೆಹಲಿಯಲ್ಲಿ 2017ರಲ್ಲಿ ಒಟ್ಟು 26 ಲಕ್ಷ ಲೈಸೆನ್ಸ್ ಸ್ಯಾಂಕ್ಷನ್ ಆಗಿತ್ತು, ಇದರಲ್ಲಿ ಕೇವಲ 600 ಮಾತ್ರ ಹೆಂಗಸರಿಗೆ ಸಿಕ್ಕಿದೆ!
ಟ್ರಾಫಿಕ್ ನಿಯಮಗಳ ಉಲ್ಲಂಘನೆ : 1,67,867 ಡ್ರೈವರ್ ಗಳ ವಿರುದ್ಧ ಟ್ರಾಫಿಕ್ ನಿಯಮಗಳ ಉಲ್ಲಂಘನೆ ಆಗಿದೆ ಎಂದು ದಾಖಲಿಸಲಾಗಿತ್ತು. ಅದರಲ್ಲಿ ಹೆಂಗಸರು ಕೇವಲ 44 ಮಂದಿ ಮಾತ್ರ ಇದ್ದರು.
ಓವರ್ ಸ್ಪೀಡ್ : ಕೇವಲ 5-14 ಹೆಂಗಸರು ಮಾತ್ರ ಓವರ್ ಸ್ಪೀಡ್ ಕಾರಣ ದಂಡಕ್ಕೆ ಸಿಕ್ಕಿಬಿದ್ದರು. ಆದರೆ ಇದೇ ಕಾರಣಕ್ಕೆ 1,39,471 ಗಂಡಸರು ದಂಡ, ಶಿಕ್ಷೆಗೆ ಗುರಿಯಾದರು. ನಶೆಯ ಕಾರಣ ಗಾಡಿ ನಡೆಸುತ್ತಿದ್ದರು ಎಂದು ಯಾವ ಹೆಂಗಸರಿಗೂ ದಂಡ ಆಗಿರಲಿಲ್ಲ.





